ಬೈನರಿಯೊಂದರ ಬಿಕ್ಕಟ್ಟುಗಳು


"ಅನುವಾದಕರು ಸರಿಯಾಗಿಯೇ ಗುರುತಿಸಿರುವಂತೆ, ಕೃತಿಯ ಶೀರ್ಷಿಕೆ ಕೊಂಚ ಪ್ರಚೋದನಕಾರಿ ಆಗಿದ್ದರೂ, ಓದಿ ಮುಗಿಸುವಾಗ ಅದು ಉತ್ತರ-ದಕ್ಷಿಣ ಚರ್ಚೆ ಆಗಿ ಉಳಿದಿರುವುದಿಲ್ಲ. ಇದು ಡೇಟಾ ಆಧರಿತ ಚಿಂತನೆಗಳ ಶಕ್ತಿ ಮತ್ತು ದೌರ್ಬಲ್ಯ ಎರಡೂ ಹೌದು. ವಾದ ಮತ್ತು ಡೇಟಾ ಜಕ್ಸ್ಟಾಪೋಸ್ ಆಗುವಾಗ ವೈರುಧ್ಯಗಳು ಕಾಣಸಿಗುವುದು ಇಂತಹ ಟನೆಲ್ ವಿಷನ್ ಚಿಂತನೆಗಳ (ಪದಬಳಕೆ ಸ್ವಲ್ಪ ಒರಟಾಯಿತೆ?!) ಮಿತಿ" ಎನ್ನುತ್ತಾರೆ ರಾಜಾರಾಂ ತಲ್ಲೂರು. ಅವರು ಕೆ.ಪಿ ಸುರೇಶ ಅವರ ಅನುವಾದಿತ ‘ದಕ್ಷಿಣ v/s ಉತ್ತರ’ ಕೃತಿ ಕುರಿತು ಬರೆದ ವಿಮರ್ಶೆ.

South v/s North- India’s great divide (ಲೇ: ನೀಲಕಂಠನ್ ಎಸ್ ಆರ್) ಪುಸ್ತಕವನ್ನು ಗೆಳೆಯರಾದ ಸುರೇಶ ಕಂಜರ್ಪಣೆ ಅನುವಾದಿಸಿದ್ದಾರೆ. ಭಾರತಕ್ಕೆ ಸದ್ಯ ಎದುರಾಗಿರುವ ಸಮಸ್ಯೆಗಳಿಗೆ ಉತ್ತರ ವರ್ಸಸ್ ದಕ್ಷಿಣ ಎಂಬ ನೆರೇಟಿವ್ ಬಲವಾದ ಚರ್ಚೆಗಳನ್ನು ಎತ್ತಬಲ್ಲುದು ಎಂಬ ನಂಬಿಕೆಯೊಂದಿಗೆ ಹೊರಬಂದಿರುವ ಪುಸ್ತಕ ಇದು. ಸ್ವತಃ ಡೇಟಾ ಸೈಂಟಿಸ್ಟ್ ಆಗಿರುವ ನೀಲಕಂಠನ್, ಅಂಕಿ-ಅಂಶಗಳ ಮೂಲಕವೇ ಆರೋಗ್ಯ, ಶಿಕ್ಷಣ, ಆರ್ಥಿಕತೆ, ಜನಸಂಖ್ಯೆಗಳು ಹೇಗೆ ಅಸಮತೋಲನಕ್ಕೆ ಕಾರಣ ಆಗಬಲ್ಲವು ಎಂಬುದನ್ನು ವಿವರಿಸಿದ್ದಾರೆ. ಜೊತೆಗೆ, ಸಮಸ್ಯೆಗಳ ಪರಿಣಾಮದ ಸ್ವರೂಪ-ಪರಿಹಾರ ಸಾಧ್ಯತೆಗಳೂ ಇಲ್ಲಿ ಚರ್ಚೆಗೊಂಡಿವೆ. ಡೇಟಾಗಳ ಮೂಲಕ ಒಂದು ವ್ಯವಸ್ಥೆಯನ್ನು ನೋಡುವ ವಿಧಾನ ಬಹಳ ಚೆನ್ನಾಗಿ ಈ ಪುಸ್ತಕದಲ್ಲಿ ಬಿಂಬಿತವಾಗಿದೆ.

ಪುಸ್ತಕವನ್ನು ತಲುಪಿಸಿದ್ದಕ್ಕಾಗಿ ನಾನು ಪ್ರಕಾಶಕ ನಂದೀಶ್ ದೇವ್ ಅವರಿಗೆ ಕೃತಜ್ಞ. ಎರಡು ದಿನಗಳಲ್ಲಿ ಪುಸ್ತಕ ಓದಿ ಮುಗಿಸಿದೆ. ಕೆಲವೆಡೆ ರೂಢಿಯಲ್ಲಿರುವ ಇಂಗ್ಲೀಷ್ ಅರ್ಥಶಾಸ್ತ್ರೀಯ ಪದಗಳಿಗೆ ಕನ್ನಡ ಅನುವಾದ ನೀಡುವಾಗ ಜೊತೆಗೆ ಇಂಗ್ಲೀಷ್ ಪದವನ್ನೂ ಇರಿಸಿದ್ದರೆ ಓದು ಹೆಚ್ಚು ಸಲೀಸಾಗುತ್ತಿತ್ತು ಎಂಬ ಒಂದು ದೂರು ಬಿಟ್ಟರೆ, ಬಹಳ ಸುಲಲಿತವಾದ ಓದು ಸಾಧ್ಯವಾಯಿತು. ಪಠ್ಯಪುಸ್ತಕದಂತಹ ಈ ಪುಸ್ತಕದ ಓದು ಸಲೀಸುಗೊಳಿಸಿದ್ದರ ಕ್ರೆಡಿಟ್ ಸುರೇಶ ಕಂಜರ್ಪಣೆ ಅವರಿಗೆ ಸಿಗಬೇಕು. ಮುಂದಿನ 20-30 ವರ್ಷಗಳಲ್ಲಿ ಒಂದು ಒಕ್ಕೂಟವಾಗಿ ಭಾರತ ಎಲ್ಲಿರಲಿದೆ ಎಂಬ ಕುರಿತು ಆತಂಕ ಇರುವವರೆಲ್ಲ ಒಂದು ಹಂತದ ಕ್ಲಾರಿಟಿ ಪಡೆಯಲು ಓದಬೇಕಾದ ಪುಸ್ತಕ ಇದು.

ಪುಸ್ತಕ ಓದಿದ ಬಳಿಕ ನನಗೆ ಬಹಳ ತಮಾಷೆಯಾಗಿ ಅನ್ನಿಸಿದ್ದೇನೆಂದರೆ, ಬಡತನ ನಿವಾರಣೆ, ಅಭಿವೃದ್ಧಿ ಸಾಧನೆಗಳನ್ನು ತೋರಿಸುವುದಕ್ಕೆ ಸಿಕ್ಕಾಪಟ್ಟೆ ತಿಣುಕಾಡಿ, ತಮ್ಮ ಮೂಗಿನ ನೇರಕ್ಕೆ ಅಂಕಿಸಂಖ್ಯೆಗಳನ್ನು ತಿರುಚಿ ಇದೋ ನೋಡಿ ನಮ್ಮದು ಅದ್ಭುತ ಸಾಧನೆ ...ಶೀಘ್ರವೇ ನಾವು ಮೂರನೇ ದೊಡ್ಡ ಆರ್ಥಿಕತೆ ಆಗಲಿದ್ದೇವೆ ಎಂದು ತೋರಿಸುತ್ತಿರುವ ಸರ್ಕಾರವೊಂದಕ್ಕೆ ನಿಜಕ್ಕೂ ಮನಸ್ಸಿದ್ದರೆ, ತನ್ನ 16ನೇ ಹಣಕಾಸು ಆಯೋಗಕ್ಕೆ ರಾಜ್ಯಗಳ ನಡುವೆ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ತನ್ನ ಹಂಚಿಕೆ ಮಾನದಂಡಗಳನ್ನು ಸುಧಾರಿಸಿಕೊಳ್ಳುವುದಕ್ಕಾಗಿ ಪಾರದರ್ಶಕವಾದ ಹಾದಿಗಳನ್ನು ತೆರೆದುಕೊಡುವುದು ಸಾಧ್ಯವಿಲ್ಲವೇ? ಮನಸ್ಸಿದ್ದಲ್ಲಿ ಮಾರ್ಗ ಇದ್ದೇ ಇರಬೇಕಲ್ಲ!

ಅನುವಾದಕರು ಸರಿಯಾಗಿಯೇ ಗುರುತಿಸಿರುವಂತೆ, ಕೃತಿಯ ಶೀರ್ಷಿಕೆ ಕೊಂಚ ಪ್ರಚೋದನಕಾರಿ ಆಗಿದ್ದರೂ, ಓದಿ ಮುಗಿಸುವಾಗ ಅದು ಉತ್ತರ-ದಕ್ಷಿಣ ಚರ್ಚೆ ಆಗಿ ಉಳಿದಿರುವುದಿಲ್ಲ. ಇದು ಡೇಟಾ ಆಧರಿತ ಚಿಂತನೆಗಳ ಶಕ್ತಿ ಮತ್ತು ದೌರ್ಬಲ್ಯ ಎರಡೂ ಹೌದು. ವಾದ ಮತ್ತು ಡೇಟಾ ಜಕ್ಸ್ಟಾಪೋಸ್ ಆಗುವಾಗ ವೈರುಧ್ಯಗಳು ಕಾಣಸಿಗುವುದು ಇಂತಹ ಟನೆಲ್ ವಿಷನ್ ಚಿಂತನೆಗಳ (ಪದಬಳಕೆ ಸ್ವಲ್ಪ ಒರಟಾಯಿತೆ?!) ಮಿತಿ. ಅದಕ್ಕೆ ಮತ್ತು ಅದರಿಂದಾಚೆಗೆ ಚರ್ಚಿಸಬೇಕೆಂದು ನನಗನ್ನಿಸಿದ ಕೆಲವು ಸಂಗತಿಗಳ ಕುರಿತು ಪುಸ್ತಕದಿಂದಲೇ ಕೆಲವು ಉದಾಹರಣೆಗಳನ್ನು ನೀಡುವೆ. ನನ್ನ ಈ ಪಟ್ಟಿ ಮೇಲುನೋಟಕ್ಕೆ ಪುಸ್ತಕದ ಬಗ್ಗೆ “ಖ್ಯಾತೆ ಪಟ್ಟಿಯಂತೆ” ಕಾಣಿಸಬಹುದು. ಆದರೆ, ಪುಸ್ತಕ ಚೆನ್ನಾಗಿದೆ, ಓದಬಹುದು ಎಂದು ಹೇಳುವುದಕ್ಕಿಂತ ಅದು ಹೇಳುವ ವಿಚಾರಗಳ ಕುರಿತು ಚರ್ಚೆ ಆಗಲಿ ಎಂಬುದಷ್ಟೇ ಈ ಬರೆಹದ ಆಶಯ. ನಾನೇನೂ ಅರ್ಥಶಾಸ್ತ್ರ ಪಂಡಿತನಲ್ಲದಿರುವುದರಿಂದ, ಈ ಕುರಿತ ಚರ್ಚೆ ನನ್ನ ಕಲಿಕೆಗೂ ಹಾದಿ ತೆರೆದೀತೆಂಬ ಆಸೆ.

1. “ಕೃಷಿ ಲಾಭದಾಯಕವಲ್ಲ ಎಂಬುದು ಜಾಗತಿಕ ವಿದ್ಯಮಾನ. ಭಾರತದಲ್ಲಿ ದೊಡ್ಡ ಜನಸ್ತೋಮ ಸಣ್ಣ ಹಿಡುವಳಿಗಳಲ್ಲಿ ದುಡಿಯುತ್ತಿರುವುದು, ಕಡಿಮೆ ಇಳುವರಿ ಪಡೆಯುತ್ತಿರುವುದು ಸಮಸ್ಯೆಯನ್ನು ಸಂಕೀರ್ಣಗೊಳಿಸಿದೆ...” ಎನ್ನುತ್ತಲೇ, “ಕೃಷಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಹೆಚ್ಚು ಆರ್ಥಿಕ ಮೌಲ್ಯವಿರುವ ಆರ್ಥಿಕ ಚಟುವಟಿಕೆಗಳೆಡೆಗೆ ಜನರನ್ನು ಚಲಿಸುವಂತೆ ಮಾಡುವ ಮೂಲಕವಷ್ಟೇ ಈ ವಿಷವೃತ್ತವನ್ನು ತುಂಡರಿಸಬಹುದು...” ಎಂಬತ್ತ ಲೇಖಕರ ವಾದ ಚಲಿಸುತ್ತದೆ. ಅಕಾಡೆಮಿಕ್ ವಲಯದ ಈ ವಾದಸರಣಿಯೇ ಭಾರತದ ಇತ್ತೀಚೆಗಿನ (ರದ್ಧಾದ) ಕೃಷಿ ಕಾನೂನುಗಳ ಮೂಲದಲ್ಲಿದ್ದದ್ದು. ಅಸಮಾನ ವ್ಯವಸ್ಥೆಯೊಂದರಲ್ಲಿ ಜನರನ್ನು ಹೀಗೆ ಕೌಶಲಾಂತರಿಸುವುದು ಎಂದರೆ, ಅದು ಮತ್ತಷ್ಟು ಅಸಮತೋಲನಕ್ಕೆ ಹಾದಿ ಅಲ್ಲವೆ?

2. ಪ್ರಾತಿನಿಧಿಕ ಪ್ರಜಾಸತ್ತೆಯಲ್ಲಿ ಜನಪ್ರಾತಿನಿಧ್ಯ ಕಾಯಿದೆ ಮತ್ತು ಪಕ್ಷಾಂತರ ನಿಷೇಧ ಕಾಯಿದೆಗಳ ನಡುವಣ ವೈರುಧ್ಯದ ಬಗ್ಗೆ ಚರ್ಚಿಸುವಾಗ, ಈ ವೈರುಧ್ಯವು ಸೂಕ್ಷ್ಮವಾಗಿ ಗಮನಿಸಿದರೆ ಸಾಂವಿಧಾನಿಕ ಬಿಕ್ಕಟ್ಟಾಗಬಲ್ಲ ಸ್ವರೂಪದ್ದು ಎಂಬುದನ್ನು ಮರೆಯುವಂತಿಲ್ಲ. ಜನಪ್ರತಿನಿಧಿಗಳು “ಲಾ ಮೇಕರ್ಸ್” ಆಗುವ ಬದಲು ಸರ್ಕಾರದ ಸಂಪನ್ಮೂಲಗಳನ್ನು ತಾವು ಪ್ರತಿನಿಧಿಸುವ ಕ್ಷೇತ್ರಗಳಿಗೆ, ತಮ್ಮ ಪಕ್ಷದ (ಅಥವಾ ಸಿದ್ಧಾಂತದ) ಬೆಂಬಲಿಗರು/ಹಿತಾಸಕ್ತಿಗಳಿಗೆ “ವರ ನೀಡುವಂತೆ” ಹಂಚುವ ದೇವರಾಗಿಬಿಟ್ಟಿದ್ದಾರೆ ಎಂಬ ವಾಸ್ತವವನ್ನು ಪರಿಗಣಿಸದೆ ಈ ಪುಸ್ತಕದ ಚರ್ಚೆ ಮುಂದುವರಿಯುತ್ತದೆ. ಹಾಗಾಗಿ ಒಟ್ಟು ವ್ಯವಸ್ಥೆಯ ಶಿಥಿಲ ಭಾಗಗಳನ್ನು ಸಮಗ್ರವಾಗಿ ನೋಡಲು ಸಾಧ್ಯ ಆಗದಿರುವುದು ಈ ರೀತಿ ಡೇಟಾ ಆಧರಿತ ಚರ್ಚೆಯ ಇನ್ನೊಂದು ಮಿತಿ ಎಂಬುದು ನನ್ನ ಅಭಿಪ್ರಾಯ.

3. “ಪ್ರಾತಿನಿಧಿಕ ಪ್ರಜಾಸತ್ತೆಯ ಬದಲು ನೇರ ಪ್ರಜಾಸತ್ತೆಯನ್ನು ಬೆಂಬಲಿಸುವುದಾದರೆ, ಈ ತಜ್ಞತೆಯನ್ನು ಕ್ಷಣಿಕ ಆವೇಗದಿಂದ ಪ್ರತ್ಯೇಕಿಸಿ ರಕ್ಷಿಸಬೇಕಾಗಿದೆ. ನಿಜ ತಜ್ಞತೆ ಮತ್ತು ಕಾನೂನುಬದ್ಧ ಜನರ ಇಚ್ಛಾಶಕ್ತಿ-ಇವೆರಡನ್ನೂ ಬೆಸೆದು ನೀತಿ ನಿರೂಪಣೆಯ ವಾಹಕಗಳನ್ನಾಗಿ ಬಳಸುವುದು” ಲೇಖಕರು ಸಮಸ್ಯೆಗೆ ಸೂಚಿಸುತ್ತಿರುವ ಪರ್ಯಾಯ ಪರಿಹಾರ ಸಾಧ್ಯತೆ. ಅದಕ್ಕೆ ಅವರು ಬೆಲ್ಜಿಯನ್ ಮಾದರಿಯೊಂದನ್ನು ಬೊಟ್ಟು ಮಾಡುತ್ತಾರೆ. ಅಲ್ಲಿ, “ಶಾಸನಾತ್ಮಕ ಪ್ರಕ್ರಿಯೆಯ ಅಧಿಕಾರ ಒಂದು ಗುಂಪಿಗೆ ಮತ್ತು ಅದರ ಅಂಗೀಕಾರ ಇನ್ನೊಂದು ಸಂಸ್ಥೆಗೆ. ಹಾಗೆಯೇ ಮಸೂದೆಯ ರಚನೆಗೆ ತಜ್ಞರ ಸಮಿತಿಯೊಂದನ್ನು ಹೊಂದಬಹುದು. ಮಸೂದೆಯ ಮತದಾನ ಚುನಾಯಿತ ಶಾಸಕರೆ ಬಿಡುವ ಬದಲು ನೇರ ಮತದಾನಕ್ಕೆ ಅವಕಾಶ ಕೊಡಬಹುದು..” ಇದು ಲೇಖಕರ ಅಭಿಪ್ರಾಯ. ಆದರೆ, ಭಾರತದ ಶಾಸಕಾಂಗದ “ನೀತಿ ನಿರೂಪಣಾ ವ್ಯವಸ್ಥೆ” ಇದನ್ನೆಲ್ಲ ಈಗಾಗಲೇ ಹೊಂದಿಲ್ಲವೇ? ಕಾನೂನು ಕರಡು ಸಿದ್ಧಪಡಿಸುವಿಕೆ, ಅದರ ಸವಿವರ ಚರ್ಚೆಗಾಗಿ ಪಾರ್ಲಿಮೆಂಟರಿ ಸಮಿತಿಗಳು, ಲೋಕಸಭೆಯ ಬಳಿಕ ರಾಜ್ಯಸಭೆಯ ಅನುಮೋದನೆ, ರಾಷ್ಟ್ರಪತಿಗಳ ಅಂಕಿತ...ಎಲ್ಲವೂ ನಮ್ಮ ಸಂವಿಧಾನದಲ್ಲಿವೆ. ಆದರೆ ಅವನ್ನೆಲ್ಲ “ಕಳಪೆ ದರ್ಜೆಯ” ಜನರನ್ನು ಆ ಜಾಗಗಳಲ್ಲಿ ಕುಳ್ಳಿರಿಸುವ ಮೂಲಕ ನಾವೇ ಕೈಯಾರೆ ಹಂತಹಂತವಾಗಿ ನಾಶಪಡಿಸಿಕೊಂಡಿದ್ದೇವೆ. ಲೇಖಕರು ಹೇಳುವಂತೆ ಸಮಸ್ಯೆ ವ್ಯವಸ್ಥೆಯಲ್ಲಿಲ್ಲ; ಅದರ ಅನುಷ್ಠಾನದಲ್ಲಿದೆ ಎಂಬುದು ನನ್ನ ಅಭಿಮತ.

4. ಭೂಸುಧಾರಣೆಯಂತಹ ಮಹತ್ವದ “ಸಮಾನತೆಯೆಡೆಗಿನ ಹೆಜ್ಜೆಗಳು” ಉತ್ತರಕ್ಕೆ ಹೋಲಿಸಿದರೆ ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚು ಯಶಸ್ವಿಯಾಗಿ ನಡೆದದ್ದು, ಕ್ರೈಸ್ತ ಮಿಷನರಿಗಳ ಕಾರಣದಿಂದಾಗಿ ಶಿಕ್ಷಣದಲ್ಲಿ ಮೇಲುಗೈ, ಜಾತಿ-ವರ್ಣಗಳಂತಹ ಪದ್ಧತಿಗಳ ಕುರಿತ ಎಚ್ಚರ, ಚಾರಿತ್ರಿಕವಾಗಿ ಒದಗಿಬಂದ ಸಾಗರೋತ್ತರ ವಹಿವಾಟುಗಳು ತಂದ “ಎಕ್ಸ್‌ಪೋಷರ್”... ಇಂತಹ ಡೇಟಾಕ್ಕೆ ಎಟುಕದ ಸಾಮಾಜಿಕ-ಸಾಂಸ್ಕೃತಿಕ ಕಾರಣಗಳನ್ನು ಗುರುತಿಸುವಂತಾಗಿದ್ದರೆ ಪುಸ್ತಕ ಮುಂದಿಡುವ ತರ್ಕಗಳು ಇನ್ನಷ್ಟು ಸಮಗ್ರವಾಗುತ್ತಿದ್ದವು.

5. ಇದೆಲ್ಲದರ ಹೊರತಾಗಿ ಅತಿಯಾದ ಭ್ರಷ್ಟಾಚಾರ, ಸ್ವಾರ್ಥ, ಪಕ್ಷಪಾತ, ಕೋಮುವಾದ ಇತ್ಯಾದಿಗಳು ಒಂದು ’ಬರ್ಮುಡಾ ತ್ರಿಕೋನ” ರೂಪಿಸಿಕೊಂಡು, ಅದೆಷ್ಟೇ ಸಂಪನ್ಮೂಲಗಳನ್ನು, ಮಾನವ ಪ್ರಯತ್ನಗಳನ್ನು ಸುರಿದರೂ ಅವೆಲ್ಲ ಮಂಗಮಾಯವಾಗುವ ಮಹಾಜಾಲ ರೂಪುಗೊಂಡಿದೆ ಮತ್ತು ಅದು ಉತ್ತರ ದಕ್ಷಿಣವೆನ್ನದೇ ಇಡಿಯ ದೇಶವನ್ನು ಶಿಥಿಲಗೊಳಿಸುತ್ತಿದೆ. ನಾವೆಲ್ಲರೂ ಇದರ ಪಾಲುದಾರರೇ. ನಮ್ಮ ವ್ಯವಸ್ಥೆ ನಮ್ಮದೇ ಪ್ರತಿಬಿಂಬ. ಆರ್ಥಿಕ ಬಿಕ್ಕಟ್ಟಿನ ಕುರಿತು ಚರ್ಚಿಸುವಾಗ ಈ ಸಂಗತಿಗಳು ಪ್ರಸ್ತಾಪವಾಗದಿದ್ದರೆ, ಇಡಿಯ ಚರ್ಚೆ ಯಾವುದೋ ಒಂದು ಪ್ರಾಯೋಗಿಕವಲ್ಲದ “ಪ್ಲಟೋನಿಕ್ ಆದರ್ಶದ” ನೆಲೆಯಲ್ಲಿ ಹೋಗಿ ನಿಂತುಬಿಡುವುದಿಲ್ಲವೆ?

- ರಾಜಾರಾಂ ತಲ್ಲೂರು

 

 

 

MORE FEATURES

ಜೀವ, ಜೀವನ, ಮರುಸೃಷ್ಟಿ ನಡುವಣ ಹೋರಾಟವೇ ಜಲಪಾತ...

21-11-2024 ಬೆಂಗಳೂರು

"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...

ಅಂತಃಕರಣ ಕರೆವಾಗ ಎಂಥ ಕಾರಣವಿದ್ದರೂ ಕುಂತ ಜಾಗದಿಂದಲೇ ಧಾವಿಸು

21-11-2024 ಬೆಂಗಳೂರು

‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...

ನನ್ನ ದೃಷ್ಟಿಯಲ್ಲಿ ಬದುಕೆಂದರೆ ನ್ಯಾಯಾಲಯದ ಕಟಕಟೆಯಲ್ಲ..

21-11-2024 ಬೆಂಗಳೂರು

"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...