‘ತಿಂಥಿಣಿ ಮೋನಪ್ಪಯ್ಯ’ ಒಂದು ಅಧ್ಯಯನ, ಇದು ಲೇಖಕ ಎಂ.ಎಂ.ಪಡಶೆಟ್ಟಿ ಅವರ ಕೃತಿ. ಸಾಮಾಜಿಕ ಸಂತ ಎಂದೇ ಕರೆಸಿಕೊಳ್ಳುವ ತಿಂಥಿಣಿ ಮೌನೇಶ್ವರರ ಕುರಿತಾದ ಅಧ್ಯಯನಾತ್ಮಕ ಕೃತಿ. ತಿಂಥಿಣಿ ಮೌನೇಶ್ವರ ಎಂಬ ಹೆಸರಿನಲ್ಲಿ ಪ್ರಸಿದ್ಧಿಪಡೆದ ಇವರು ‘ಬಸವಣ್ಣ’ ಎಂಬ ಅಂಕಿತದಲ್ಲಿ ಹಲವಾರು ವಚನಗಳನ್ನು ಬರೆದಿದ್ದಾರೆ, ಹಂಪೆಯ ಬಸವಣ್ಣನನ್ನು (ಕ್ರಿ.ಶ. 1510-1570) ವಚನದಲ್ಲಿ ನೆನೆದಿದ್ದಾರೆ. ವಿಜಯಪುರ ಜಿಲ್ಲೆಯ ಗೋಲಗೇರಿ ಎಂಬಲ್ಲಿದ್ದ 16ನೇ ಶತಮಾನದ ಕುರುಬಗೊಲ್ಲಾಳ ನನ್ನು ಮತ್ತೊಂದು ವಚನದಲ್ಲಿ ಸ್ಮರಿಸಿದ್ದಾರೆ. ಇವರೊಂದು ವಚನದಲ್ಲಿ, ಬಿಜಾಪುರದ ಮೊದಲನೆಯ ಆದಿಲ್ಶಾಹನಿಗೆ (ಕ್ರಿ.ಶ. 1557-1580) ಪಟ್ಟಕಟ್ಟಿದ ಪ್ರಸಂಗವನ್ನು ಉಲ್ಲೇಖಿಸಿದ್ದಾರೆ.
ಕ್ರಿ.ಶ. 1612ರಲ್ಲಿ ಬಿಜಾಪುರದ ಸುಲ್ತಾನರ ಸುಬೇದಾರ್ ಆಗಿದ್ದ ಅಂಕುಶ ಖಾನನು ಬಾವಿಯೊಂದನ್ನು ಕಟ್ಟಿಸಲು ಯತ್ನಿಸುತ್ತಾನಷ್ಟೆ. ಆದರೆ ಅಲ್ಲಿ ಜಲ ಬರುವುದಿಲ್ಲ. ಆಗ ಮೌನೇಶ್ವರರು ಬಾವಿಗಿಳಿದು ಜಲ ತಂದುದರ ವಿವರಣೆ ಅವರ ವಚನವೊಂದರಲ್ಲಿ ಬರುತ್ತದೆ. ಇವೆಲ್ಲದರ ಆಧಾರದ ಮೇಲೆ ಇವರು 16ನೇ ಶತಮಾನದ ಮಧ್ಯಭಾಗದಿಂದ 17ನೇ ಶತಮಾನದ ಉತ್ತರಾರ್ಧದವರೆಗೆ ಇದ್ದರೆಂಬುದು ರುಜುವಾತು ಆಗುತ್ತದೆ! ಹಿಂದೂ-ಮುಸ್ಲಿಂ ಸಾಮರಸ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ತಿಂಥಿಣಿಯ ಮೌನೇಶ್ವರರು ತಮ್ಮ ಮಹಿಮೆಯಿಂದಲೇ ಎಲ್ಲರನ್ನೂ ಆಕರ್ಷಿಸಿದ್ದರು. ಇವರು ಲಕ್ಷ್ಮೇಶ್ವರ, ಉಳವಿ, ಕಲ್ಯಾಣ, ವಿಜಯಪುರ, ಶಾಹಪುರ ಮುಂತಾದೆಡೆ ತಿರುಗಾಡಿ, ಮಹಿಮೆಗಳನ್ನು ಮೆರೆದವರೆಂಬುದು ಇತಿಹಾಸ. ವರವಿ ಮತ್ತು ತಿಂಥಿಣಿ ಸ್ಥಳಗಳಲ್ಲಿ ಇವರ ಹೆಸರಿನ ದೇವಾಲಯಗಳಿವೆ. ಬಿಜಾಪುರದ ಸುತ್ತಮುತ್ತ ಅನೇಕ ಗುಡಿಗಳಿವೆ. ಇವು ಹಿಂದೂ-ಮುಸ್ಲಿಂ ಬೆರೆತ ಶೈಲಿಗಳಲ್ಲಿವೆ. ಇಂಥಹ ಮಹನೀಯಕರ ಕುರಿತಾದ ಸಂಶೋಧನಾತ್ಮಕ ಕೃತಿ ತಿಂಥಿಣಿ ಮೋನಪ್ಪಯ್ಯ.
©2024 Book Brahma Private Limited.