ಸರ್ ಐಯಾಮ್ ಅಲೋನ್

Author : ಡಾ. ಗುರುರಾಜ್ ಇಟಗಿ

Pages 112

₹ 130.00




Year of Publication: 2023
Published by: ಬಿ.ಎಸ್. ಮಧು ನ್ಯೂ ವೇವ್ ಬುಕ್ಸ್
Address: # 90/3, ಇಸ್ಟ್ ಫ್ಲೋರ್, ಬಸವನಗುಡಿ, ಬೆಂಗಳೂರು 560 004.\n

Synopsys

ಈ ಕೃತಿಯಲ್ಲಿ ಯಾವುದೇ ಭ್ರಾಮಕ ಜಗತ್ತಿನ ಕಲ್ಪನಾ ವಿಹಾರಗಳಿಲ್ಲ. ಎಲ್ಲವೂ ಮಕ್ಕಳ ಲೋಕದ ನೈಜ ವ್ಯಾಪಾರಗಳೇ ಆದ್ದರಿಂದ ಅಧ್ಯಯನ ಯೋಗ್ಯವಾದ ಕೃತಿಯೊಂದು ಮೂಡಿಬಂದಿದೆ. ಕೃತಿಕಾರರ ಮನಶ್ಯಾಸ್ತ್ರದ ಹಾಗೂ ಹದಿಹರೆಯದ ಮಕ್ಕಳ ಜತೆಗಿನ ಒಡನಾಟ ಎರಡೂ ಕೃತಿಯ ಸಾರ್ಥಕತೆಯನ್ನು ಹೆಚ್ಚಿಸಿವೆ. ಇತ್ಯಾತ್ಮಕ ಹಾಗೂ ನೇತ್ಯಾತ್ಮಕದ ಚಿಂತನೆಗಳಲ್ಲಿ ತೊಡಗಿಕೊಳ್ಳುವ ಸುಕುಮಾರ ಮನಸ್ಸುಗಳನ್ನು ಪ್ರೀತಿಯಿಂದ ಅರ್ಥಮಾಡಿಕೊಳ್ಳ ಬಯಸುವ ಪ್ರತೀ ಸಹೃದಯರೂ ಸ್ವಾಗತಿಸಬೇಕಾದ ಕೃತಿ ಇದು.

Reviews

ಕನ್ನಡದಲ್ಲಿ ಮನೋವಿಜ್ಞಾನದ ಕುರಿತಾದ ಪುಸ್ತಕಗಳು ಇತ್ತೀಚಿನ ದಶಕಗಳಲ್ಲಿ ಅಲ್ಲಲ್ಲಿ ಹೊರಬಂದಿವೆಯಾದರೂ ಸಂಖ್ಯೆಯಲ್ಲಿ ಕಡಿಮೆಯೆಂದೇ ಹೇಳಬಹುದು. ಮಕ್ಕಳ ಮನೋವ್ಯಾಪಾರಗಳ ಕುರಿತಾದ ಬರಹಗಳೂ ಪತ್ರಿಕೆಗಳಲ್ಲಿ ಪ್ರಕಟವಾದಷ್ಟು ಕೃತಿಗಳ ರೂಪದಲ್ಲಿ ಹೊರಬರುತ್ತಿರುವುದು ವಿರಳವೆಂದೇ ಹೇಳಬೇಕು. ಹೆಸರಾಂತ ಮನಃಶಾಸ್ತ್ರಜ್ಞರಾದ ಡಾ. ಸಿ ಆರ್ ಚಂದ್ರಶೇಖರ, ದಿ. ಡಾ. ಅಶೋಕ ಪೈ, ದಿ. ಮೀನಗುಂಡಿ, ಡಾ. ವಿನೋದ ಛಬ್ಬಿ.... ಹೀಗೆ ಬೆರಳೆಣಿಕೆಯಷ್ಟು ವೈದ್ಯರು ತಮ್ಮ ಮನೋವೈದ್ಯಕೀಯ ಅನುಭವಗಳನ್ನು ಕನ್ನಡ ಕೃತಿಗಳನ್ನಾಗಿಸಿ ಓದುಗರಿಗೆ ಉಪಯುಕ್ತ ಮಾಹಿತಿ ಒದಗಿಸಿದ್ದಾರೆ. ಅವರ ಲೇಖನಗಳು ಮನೋರೋಗಿಗಳ ಕಾಯಿಲೆಗಳು, ಚಿಹ್ನೆಗಳು, ಪರೀಕ್ಷಾ ವಿಧಾನ, ಚಿಕಿತ್ಸೆಯ ಸ್ವರೂಪ ಕೆಲವೊಮ್ಮೆ ಔಷಧೀಯ ವಿವರಗಳು ಹೀಗೆ ಹೆಚ್ಚು ಅಕಾಡೆಮಿಕ್ ಆಗಿದ್ದೂ ಮನುಷ್ಯ ಸ್ವಭಾವಗಳ ಜೊತೆಗಿನ ಒಡನಾಟವನ್ನು ಪ್ರಸ್ತಾಪಿಸುತ್ತಲೇ ಪ್ರಸ್ತುತವಾಗಿರುವುದರಿಂದ ಓದುಗ ವರ್ಗಕ್ಕೆ ಬಲು ಆಪ್ತ ಓದನ್ನು ಒದಗಿಸಿವೆ. ಆದರೆ ಇತ್ತೀಚಿನ ದಶಕಗಳಲ್ಲಿ ವಿದೇಶಗಳ ಜೊತೆ ಹೋಲಿಸಿದಾಗ ಅಲ್ಪವೆನಿಸಿದರೂ ಭಾರತೀಯ ಶೈಕ್ಷಣಿಕ ಸಂದರ್ಭದಲ್ಲಿ ಮನೋವಿಜ್ಞಾನವು ವೈದ್ಯಕೀಯ ಕ್ಷೇತ್ರದಿಂದಷ್ಟೇ ಅಲ್ಲದೆ ಸಮಾಜಶಾಸ್ತ್ರಗಳ ಜೊತೆಯಲ್ಲಿ ಒಂದು ಪ್ರಮುಖ ವಿಷಯವಾಗಿ ಬೋಧಿಸಲ್ಪಡುತ್ತಿದ್ದು ವೈದ್ಯಕೀಯೇತರ ವಿದ್ಯಾರ್ಥಿಗಳೂ ವಿಷಯವನ್ನು ವ್ಯಾಪಕವಾಗಿ ಅಭ್ಯಸಿಸುತ್ತಿದ್ದಾರೆ. ಪ್ಯಾರಾ ಮೆಡಿಕಲ್ ಕೋರ್ಸುಗಳಲ್ಲಿ ಸೈಕಾಲಜಿ ಒಂದು ಪ್ರಮುಖವಾದ ವಿಷಯವಾಗಿದೆ. ಕಲಾ ವಿಭಾಗಗಳಲ್ಲಿಯೂ ಈ ವಿಷಯದಲ್ಲಿ ಬಿ.ಎ, ಎಮ್.ಎ ಡಿಗ್ರಿಗಳು ದೊರೆಯುತ್ತಿದ್ದು ಕ್ಷೇತ್ರಕಾರ್ಯವನ್ನು ಹೆಚ್ಚಾಗಿ ಅವಲಂಬಿಸಿರುವ ಬಿ.ಎಸ್.ಡಬ್ಲು, ಎಮ್.ಎಸ್.ಡಬ್ಲು ಕೋರ್ಸುಗಳು ಮನೋವೈಜ್ಞಾನಿಕ ಎಲ್ಲಾ ಆಯಾಮಗಳನ್ನು ವಿವಿಧ ಬ್ರಾಂಚ್ಗಳಡಿಯಲ್ಲಿ ಅಭ್ಯಸಿಸುತ್ತಾರೆ. ಚೈಲ್ಡ್ ಸೈಕಾಲಜಿ ಅವುಗಳಲ್ಲಿ ಒಂದು ಪ್ರಮುಖ ಅಂಗ. ಮಕ್ಕಳಿಗೆ ವಿಶಿಷ್ಟವಾದ ಮನೋದೈಹಿಕ ಕಾಯಿಲೆಗಳು, ನಡುವಳಿಕೆಯಲ್ಲಿನ ಏರುಪೇರುಗಳು, ಪರೀಕ್ಷಾ ಭಯದಂತಹ ಸಾರ್ವತ್ರಿಕ ತೊಂದರೆಗಳು, ಹದಿಹರೆಯದವರ ಮಾನಸಿಕ ಗೊಂದಲಗಳು, ಅವುಗಳನ್ನು ಪರಿಹರಿಸುವಲ್ಲಿ ಪಾಲಕ, ಪೋಷಕ ಮತ್ತು ಶಿಕ್ಷಕರ ಪಾತ್ರಗಳ ಕುರಿತು ವಿಷದವಾಗಿ ಚರ್ಚಿಸುವ ಸಿಲೇಬಸ್ಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿ ಪ್ರಾಯೋಗಿಕ ಪರೀಕ್ಷೆಗಳ ಮೂಲಕ ಮನಃಶಾಸ್ತ್ರವನ್ನು ಬೆಳೆಸುತ್ತ ಇದರ ಅಧ್ಯಯನದ ಲಾಭ ಅನೇಕ ವಿದ್ಯಾರ್ಥಿಗಳಿಗೆ ದೊರೆಯುವಂತೆ ಮಾಡಲಾಗಿದೆ. ಪುಸ್ತಕದಿಂದ ದೊರೆತ ಅರಿವನ್ನು ಮಸ್ತಕದಲ್ಲಿ ಧರಿಸಿದ ಅನೇಕರು ವೈದ್ಯಕೀಯೇತರ ಮನೋವಿಜ್ಞಾನದ ಬಹು ಪ್ರಮುಖ ಅಂಗವಾದ "ಕೌನ್ಸೆಲಿಂಗ್" ವೃತ್ತಿಯನ್ನು ಕೈಗೊಂಡು ಔಷಧರಹಿತವಾದ ಮನೋಸ್ವಾಸ್ತ್ಯಕ್ಕೆ ಕಾರಣವಾಗುವ ಆಪ್ತ ಸಲಹೆ ನೀಡುತ್ತ ಮಹಿಳೆಯರ ಮಕ್ಕಳ ಮತ್ತು ಮನೋವ್ಯಾಧಿಗೆ ತುತ್ತಾಗಿರುವ ಅನೇಕರಿಗೆ ಬೆಳಕು ತೋರುತ್ತಿದ್ದಾರೆ. ಇದೊಂದು ಆಶಾದಾಯಕ ಹಾಗೂ ಉಪಯುಕ್ತ ಬೆಳವಣಿಗೆ. ಆಧುನಿಕ ಜೀವನ ಶೈಲಿಯು ತಂದೊಡ್ಡಿರುವ ಅನೇಕ "ಒತ್ತಡ ಸಂಬಂಧೀ" ಕಾಯಿಲೆಗಳು ಹಾಗೇ ಸ್ಪರ್ಧೆ, ತುರುಸಿನ ಸಾಧನೆ, ಆತಂಕ, ಖಿನ್ನತೆ, ಹತಾಶೆ, ಕೀಳರಿಮೆಗಳೇ ಮೊದಲಾದ ಅಸಂಖ್ಯ ಮನೋವ್ಯಾಧಿಗಳು ಆಪ್ತ ಸಲಹೆಯ ಮೂಲಕವೇ ಪರಿಹರಿಸಲ್ಪಡುತ್ತಿರುವುದೂ ಒಂದು ಸಮಾಧಾನದ ಸಂಗತಿಯೇ ಆಗಿದೆ. ಶಿಕ್ಷಣದ ಉದ್ದೇಶವೇ ಅರಿವಿನ ಲೋಕದ ವಿಸ್ತಾರ ತಾನೆ? ಬಾಲ್ಯ ಕಳೆದು ಹದಿಹರೆಯಕ್ಕೆ ಕಾಲಿಡುತ್ತಿರುವ ಮಕ್ಕಳಲ್ಲಿ ತಾಳ್ಮೆ ಕಡಿಮೆ. ಹತ್ತು ಹದಿನೈದು ವಯೋಮಾನದ ವಿದ್ಯಾರ್ಥಿಗಳಿಗೆ ಶುಷ್ಕವಾದ ತತ್ವ ಸಿದ್ಧಾಂತಗಳನ್ನು ವಿವರಿಸಿ ಅವರನ್ನು ಇನ್ನಷ್ಟು ಗಲಿಬಿಲಿಗೆ ದೂಡುವ ಬದಲು ಅವರದೇ ವಯಸ್ಸಿನವರ ಸಮಸ್ಯೆಗಳನ್ನು ಕಥೆಗಳ ರೂಪದಲ್ಲಿ ಹೇಳುತ್ತ ಸರಳ ಸಮಾಧಾನಗಳ ಮೂಲಕ ತಿಳಿಯಾಗಿಸುವ ಪ್ರಯತ್ನ ಅಪೇಕ್ಷಣೀಯವಾದುದು. ತನ್ನನ್ನು ಆ ಕಥೆಯ ಪಾತ್ರದ ಜತೆ ಸಮೀಕರಿಸಿಕೊಂಡು ಸ್ವಯಂ ಪರಿಹಾರ ಪ್ರವೃತ್ತರಾಗುವುದು ಇನ್ನು ಹೆಚ್ಚು ಪ್ರಯೋಜನಕಾರಿ ಪ್ರಯೋಗ. ಡಾ. ರಾಜ್ ಎಂಬ ಮನೋವೈದ್ಯನ ಪಾತ್ರವನ್ನು ಸೃಷ್ಟಿಸಿಕೊಂಡು ಪರಸಜ್ಜ ಎಂಬ ಪ್ರೀತಿ ಪಾತ್ರನಾದ ಅಜ್ಜನೋರ್ವನ ಮುಖೇನ ವಿಭಿನ್ನ ವ್ಯಕ್ತಿತ್ವಗಳ ಸಮಸ್ಯೆಗಳನ್ನು ಎತ್ತಿಕೊಂಡು ವಿಶ್ಲೇಷಿಸುತ್ತ ಪರಸಜ್ಜನ ಬಾಯಲ್ಲಿ ಕಥೆಯ ರೂಪದಲ್ಲಿ ಹೇಳಿಸುತ್ತಲೇ ಅದಕ್ಕೊಂದು ಪರಿಹಾರವನ್ನು ಸೂಚಿಸುತ್ತ ಪ್ರತಿ ಪ್ರಕರಣವೂ ಅಂತ್ಯವಾಗುತ್ತದೆ. ಪರೀಕ್ಷಾ ಭಯದಿಂದ ಕೀಳರಿಮೆಗೆ ತುತ್ತಾದ ಅನುಜ್ ಕಥೆಯಲ್ಲಿ ಬರುವ ಕಾರ್ತಿಕ್ ಎಂಬ ಪಾತ್ರದೊಂದಿಗೆ ತನ್ನ ಸಮಸ್ಯೆಗಳನ್ನು ಗುರುತಿಸಿಕೊಂಡು ಪರಸಜ್ಜನ ಸಹಾಯದಿಂದ ಪರಿಹರಿಸಿಕೊಳ್ಳುವುದು, ಹೇಗೆ ನಾವು ಹದಿಹರೆಯದ ಮನಸ್ಸುಗಳನ್ನು ಕಥೆ ಹೇಳುವುದರ ಮೂಲಕ ಸರಿದಾರಿಗೆ ತರಬಹುದು ಎಂಬುದನ್ನು ಸೂಚಿಸುತ್ತದೆ. ಶ್ರೀಕಂಠನೆಂಬ ವಿದ್ಯಾರ್ಥಿಯ ಪ್ರಕರಣದಲ್ಲಿ ಹೇಗೆ ಧಾರಾವಾಹಿಗಳ ಹುಚ್ಚಿನಿಂದ ಮಕ್ಕಳು ಮತ್ತು ಹಿರಿಯರ ನಡುವೆ ಕಂದಕವೇರ್ಪಟ್ಟು ಮಕ್ಕಳು ಸುತ್ತಲಿನ ಸಂಗತಿಗಳ ಕಡೆ ಆಕರ್ಷಿತರಾಗಿ ಹಾದಿ ತಪ್ಪುವ ಸಾಧ್ಯತೆಯನ್ನು ತೆರೆದು ತೋರಿಸುತ್ತದೆ. ಹದಿಹರೆಯದ ಮನಸ್ಸು ಏಕಾಗ್ರತೆಯನ್ನು ಪಡೆಯಲು ಹೇಗೆ ಪ್ರಯತ್ನಿಸಬಹುದು ಎಂಬುದನ್ನು "ಓದಿನಲ್ಲಿ ಹಿಂದುಳಿಯುವಿಕೆ"ಯಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಹಾಗೆಯೇ ನಕಾರಾತ್ಮಕ ವಿಚಾರಗಳನ್ನು ಹೇಗೆ ನಮ್ಮ ಮನಸ್ಸಿನಿಂದ ತೊಲಗಿಸಬಹುದು ಎಂಬುದನ್ನು ತುಂಬ ಸರಳವಾದ ವಿಧಾನದಿಂದ ಪ್ರಾಯೋಗಿಕ ವಾಗಿಸಿದ್ದಾರೆ. ಮನಸ್ಸನ್ನು ಕ್ರೀಯಾಶೀಲಗೊಳಿಸುವ ವಿಧಾನದಲ್ಲಿ ಮನುಷ್ಯ ಮತ್ತು ಪ್ರಕೃತಿಯ ಸಂಬಂಧಗಳು ಎಷ್ಟು ಅಮೂಲ್ಯ ಎಂಬುದನ್ನು ಪರಸಜ್ಜನ ಪಾತ್ರದ ಮೂಲಕ ಚಿತ್ರಿಸಲಾಗಿದೆ. ಹೇಗೆ ಬಿಡಿಸಬಹುದು ಎಂಬುದನ್ನು ಈ ಲೇಖನ ವಿವರಿಸುತ್ತದೆ. ಭಯದ ಕುರಿತಾಗಿ ಇರುವ ಲೇಖನದಲ್ಲಿ ಸಕಾರಾತ್ಮಕವಾಗಿ ಯೋಚಿಸುವುದನ್ನು ಕಲಿಸುವುದರ ಮೂಲಕ ಹೇಗೆ ಮಾನಸಿಕ ಭಯ ತೊಳಲಾಟಗಳಿಂದ ಹೊರಬರಲು ಸಾಧ್ಯ ಎಂಬುದನ್ನು ಸರಳವಾಗಿ ರೂಪಿಸಿದ್ದಾರೆ. ವಿಕಸಿಸುವ ಮನಸ್ಸುಗಳು ಸಿಲುಕಿಕೊಳ್ಳಬಹುದಾದ ಗೊಂದಲಗಳನ್ನು ಗುರುತಿಸಿ ಪರಿಹರಿಸಿಕೊಳ್ಳುವುದು ಈ ಕೃತಿಯ ಪ್ರಮುಖ ಉದ್ದೇಶವಾಗಿದ್ದು ಆ ಉದ್ದೇಶ ಸಾಧನೆಗಾಗಿ ಲೇಖಕರು ಪ್ರಾಮಾಣಿಕ ಪ್ರಯತ್ನ ಮಾಡಿದ್ದು ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಮನಸ್ಸಿನಲ್ಲಿ ತುಂಬಿರುವ ಸಮಸ್ಯೆಗಳಿಂದ ಹೇಗೆ ಪರಿಪಾಟದ ಕಾಯಿಲೆಗಳಿಗೆ ತುತ್ತಾಗಬಹುದು ಎನ್ನುವುದನ್ನು ಪರಿಣಾಮಕಾರಿಯಾಗಿ ವಿವರಿಸುವ ಲೇಖನ ಅದರೊಟ್ಟಿಗೆ ಅಂತಹ ಸಮಸ್ಯೆಗಳಿಂದ ಪೂರ್ಣವಾಗಿ ಹೇಗೆ ಹೊರಬರಬಹುದು ಎನ್ನುವುದನ್ನು ರೂಪಿಸಿದೆ. ಈಗಿನ ಯುವಜನತೆ ಬಹು ಮುಖ್ಯವಾಗಿ ಅನುಭವಿಸುತ್ತಿರುವ ಸಮಸ್ಯೆ ಅಸಮತೋಲಿತ ಭಾವನೆ ಮತ್ತು ಯೋಚನೆಗಳು. ಕಾರಣಗಳು ಹಲವಾರು. ಒಂದು ಕಡೆ ಅವರ ದೇಹದಲ್ಲಾಗುವ ಹಾರ್ಮೋನುಗಳ ವ್ಯತ್ಯಾಸಗಳು ಅದರಿಂದಾಗುವ ಭಾವಾತಿರೇಕಗಳು, ಇನ್ನೊಂದುಕಡೆ ಸಾಮಾಜಿಕ ಜಾಲತಾಣ, ಯುವಕೇಂದ್ರಿತವಾದ ಮನೊರಂಜನಾ ತಾಣಗಳು ಒಟ್ಟು ಗೊಂದಲಗಳ ನಡುವೆ ಸಿಕ್ಕ ಮನಸ್ಸುಗಳ ಸಿಕ್ಕುಗಳನ್ನು ಹೇಗೆ ಬಿಡಿಸಬಹುದು ಎಂಬುದನ್ನು ಈ ಲೇಖನ ವಿವರಿಸುತ್ತದೆ.