"ಮಕ್ಕಳ ಸಾಹಿತ್ಯದ ಸಿದ್ಧಮಾದರಿಯಿಂದ ಬದಲಾದ ಹೊಸಮಕ್ಕಳ ಕವಿತೆಗಳನ್ನು ಬರೆದು, ಮಕ್ಕಳ ಸಾಹಿತ್ಯದಲ್ಲೂ ತ್ರಿಪದಿ ರೂಪದ ರಚನೆಗಳನ್ನು ಪ್ರಯೋಗಿಸಿ ಮಕ್ಕಳ ಸಾಹಿತ್ಯದಲ್ಲಿ ಶಾಶ್ವತ ಗಟ್ಟಿಹೆಜ್ಜೆಗಳನ್ನಿರಿರಿಸಿರುವ ಚಂದ್ರಗೌಡ ಕುಲಕರ್ಣಿಯವರು ಸಣ್ಣಮಕ್ಕಳಿಗೆ ಪಾಠ ಮಾಡಿದವರಲ್ಲ," ಎನ್ನುತ್ತಾರೆ ಗುಂಡುರಾವ್ ದೇಸಾಯಿ. ಅವರು ಚಂದ್ರಗೌಡ ಕುಲಕರ್ಣಿ ಅವರ "ಚಿಲಿಪಿಲಿ ಶ್ರೀಗಂಧ" ಕೃತಿ ಕುರಿತು ಬರೆದಿರುವ ವಿಮರ್ಶೆ.
"ಸೊಂಯ್ ಸೊಂಯ್ ಸೊಳ್ಳೆ
ಮೈಯ ತುಂಬ ಗುಳ್ಳೆ
ರೊಜ್ಜು ರಾಡಿ ಹೊಲಸು
ಇದ್ದರೆ ನಿನಗೆ ಸೊಗಸು"
'ಎಷ್ಟ ಬರದ್ರು ನೋಟಬುಕ್ ಹಾಳಿ
ಎಂದೂ ಮಗದು ಹೋಗ್ ಬಾರದು
ತಿದ್ದಿ ತೀಡಿ ಹೆಂಗೆ ಬರದ್ರೂ
ಪೆನ್ಸಿಲ್ ಮಾತ್ರ ಸವಿಬಾರದು'
'ಬೇಸಿಗೆ ತಾಪ ಹೆಚ್ಚು ಎನ್ನುತ
ಯಾವ ಗಿಡ ಮರ ಗೊಣಗಿಲ್ಲ
ನಾಡಿನ ಜನರಿಗೆ ತಂಪು ಗಾಳಿಯ
ಸೂಸುತ್ತಿರುವವು ದಿನವೆಲ್ಲ'
'ಮಂಗಗಳಂತೆ ಮಕ್ಕಳಿಗೆಲ್ಲ
ಇದ್ದರೆ ಉದ್ದನೆಯ ಬಾಲ
ಗಿಡ ಗಿಡದಲ್ಲಿ ಕಟ್ಟಬೇಕಿತ್ತು
ಎಲ್ಲಾ ಪ್ರೈಮರಿ ಸ್ಕೂಲ'
'ಅಜ್ಜನ ಜೊತೆ ಆಡಲು ನನಗೆ
ತುಂಬಾ ಇಷ್ಟ ಅಮ್ಮ
ಕತ್ತಲೆ ರಾತ್ರಿ ಕೋಲಿನಿಂದ
ಓಡಿಸಿ ಬಿಡುವನು ಗುಮ್ಮ'
ಇವು ಹಿರಿಯ ಮಕ್ಕಳ ಸಾಹಿತಿಗಳಾದ ಚಂದ್ರಗೌಡ ಕುಲಕರ್ಣಿಯವರ ಮಕ್ಕಳ ಕವಿತೆಗಳ ಒಂದಷ್ಟು ಮಾದರಿಗಳು.
ಮಕ್ಕಳ ಸಾಹಿತ್ಯದ ಸಿದ್ಧಮಾದರಿಯಿಂದ ಬದಲಾದ ಹೊಸಮಕ್ಕಳ ಕವಿತೆಗಳನ್ನು ಬರೆದು, ಮಕ್ಕಳ ಸಾಹಿತ್ಯದಲ್ಲೂ ತ್ರಿಪದಿ ರೂಪದ ರಚನೆಗಳನ್ನು ಪ್ರಯೋಗಿಸಿ ಮಕ್ಕಳ ಸಾಹಿತ್ಯದಲ್ಲಿ ಶಾಶ್ವತ ಗಟ್ಟಿಹೆಜ್ಜೆಗಳನ್ನಿರಿರಿಸಿರುವ ಚಂದ್ರಗೌಡ ಕುಲಕರ್ಣಿಯವರು ಸಣ್ಣಮಕ್ಕಳಿಗೆ ಪಾಠ ಮಾಡಿದವರಲ್ಲ. ನಾಗರಾಜ ಶೆಟ್ಡಿ, ಸಿಎಂ.ಗೋವಿಂದರೆಡ್ಡಿ ಮೊದಲಾದವರಂತೆ ದೊಡ್ಡಮಕ್ಕಳಿಗೆ ಪಾಠ ಮಾಡಿರುವ ಚಂದ್ರಗೌಡ ಕುಲಕರ್ಣಿಯವರ ಇದುವರೆಗಿನ ಒಂಬತ್ತು ಮಕ್ಕಳ ಕವಿತೆಗಳ ಸಮಗ್ರ ಕವಿತೆಗಳ ಸಂಕಲನ 'ಕನ್ನಡ ನುಡಿ ಚಂದ ಚಿಲಿಪಿಲಿ ಶ್ರೀಗಂಧ' ಓದುವ ಮಕ್ಕಳಿಗೆ ಖುಷಿ ಕೊಟ್ಟರೆ ದೊಡ್ಡವರಿಗೆ ಖುಷಿಯ ಜೊತೆ ಅವರ ಒಟ್ಟಾರೆ ಸಾಹಿತ್ಯದ ಪಯಣ ಬೆರಗು ಮೂಡಿಸುತ್ತದೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಡದಳ್ಳಿ ಗ್ರಾಮದವರಾದ ಕುಲಕರ್ಣಿಯವರು, ಅಮರಗೋಳ, ಧಾರವಾಡ ಹಾಗೂ ನರಗುಂದದಲ್ಲಿ ಶಿಕ್ಷಣ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವೀಧರರು. ವಿಜಯಪುರ ಜಿಲ್ಲೆಯ ತಾಳಿಕೋಟೆಯ ಖಾಸ್ಗತೇಶ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
ಕಥೆ, ಕವನ, ಪ್ರಾಸಬಂಧ, ಪದಬಂಧ, ಪದಶೋಧ, ಪದಚಲ್ಲಾಟ, ಅಕ್ಷರ ಸುಡೋಕು, ಹುಡುಕಾಟ, ಒಗಟು, ಬೆಡಗು, ಭಾಷಾ ಚಮತ್ಕಾರ, ಮೋಜಿನ ಮಾಯಾ ಚೌಕ, ಧ್ವನಿ ಸುರಳಿ, ಬ್ಲಾಗ್, ಯೂಟ್ಯೂಬ್, ಇ ಪುಸ್ತಕ ಹೀಗೆ ಮಕ್ಕಳಿಗೆ ಮೋಜುಕೊಡಬಹುದಾದ ಎಲ್ಲೆಡೆ ತಮ್ಮ ಪ್ರಭಾವಲಯ ಸೃಷ್ಟಿಸಿರುವ ಕುಲಕರ್ಣಿಯವರು ಬೆಣ್ಣೆಹಳ್ಳ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಬಿ.ಎಂ.ಶ್ರೀ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಗೌರವ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಶ್ರೀಯುತರ ಸಮಗ್ರ ಕವಿತೆಗಳನ್ನು ಧಾರವಾಡದ ಮಕ್ಕಳ ಮಹರ್ಷಿ ಎಂದೆ ಪರಿಚಿತರಾಗಿರುವ ಚಿಲಿಪಿಲಿ ಪ್ರಕಾಶನದ ಶಂಕರ ಹಲಗತ್ತಿಯವರು ತಮ್ಮ ಪ್ರಕಾಶನದಿಂದ ಪ್ರಕಟಿಸಿದ್ದಾರೆ. ಆತ್ಮೀಯರಾದ ಡಾ.ನಿಂಗೂ ಸೊಲಗಿಯವರು ಸೊಗಸಾದ ಮುನ್ನಡಿ ಮೂಲಕ ಕೃತಿಯ ಮಹತ್ವವನ್ನು ಪರಿಚಯಿಸಿದ್ದಾರೆ.
'ಚಿಲಿಪಿಲಿ ಶ್ರೀಗಂಧದಲ್ಲಿ'ನ ಎಲ್ಲಾ ಕವಿತೆಗಳು ಏಕತಾನತೆಯಿಂದ ದೂರ ಸರಿದು ವೈವಿದ್ಯಮಯ ನೋಟ ದಕ್ಕಿಸಿಕೊಡುತ್ತವೆ. ಮಕ್ಕಳಲ್ಲಿ ಕುತೂಹಲ ಕೆರಳಿಸುವ, ಕಲ್ಪನೆ ಗರಿಗೆದರಿಸುವ, ಕನಸು ಕಾಣುವ, ಅದಕ್ಕೆ ಪ್ರಯತ್ನಿಸುವ, ತಮ್ಮದೆ ಭಾವಾಲೋಕದಲ್ಲಿ ಪಯಣಿಸುವ ಸಾಧ್ಯತೆಗಳನ್ನು ಮಕ್ಕಳ ಕವಿತೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಈ ಸಂಕಲನದಲ್ಲಿ ಕಥನ ಕವಿತೆಗಳಿವೆ, ಮೋಡಿ ಮಾಡುವ ಹಾಡುಗಳಿವೆ, ಶಿಶುಪ್ರಾಸ ಪದಗಳಿವೆ, ಗೇಯಕವಿತೆಗಳಿವೆ, ಓದುತ್ತ ಓದುತ್ತ ಅರಿವಿರದಂತೆ ಹಾಡಿಕೊಳ್ಳಬಹುದಾದ, ಗುನಗಬಹುದಾದ ಸಾಕಷ್ಟು ಕವಿತೆಗಳು ಈ ಕೃತಿಯಲ್ಲಿವೆ.
ವಿಷಯ ವಸ್ತುಗಳು ಕೂಡ ಸೊಳ್ಳೆಯಿಂದ ಆನೆಯವರೆಗೆ... ಪಂಪನಿಂದ ಕಲಾಂರ ವರೆಗೆ...ಗಣಪನಿಂದ ಚಂದ್ರಲೋಕದವರೆಗೆ, ನಿಸರ್ಗ, ಪ್ರಾಣಿ ಪಕ್ಷಿ, ಸಾಧಕರು-ಸಂತರು- ವಿಶೇಷ ವ್ಯಕ್ತಿಗಳು, ವಿಜ್ಞಾನ ತಂತ್ರಜ್ಞಾನ, ಕ್ರೀಡೆ, ನಾಡು ನುಡಿ, ಅಲಕ್ಷಿಸುವಂತಂಹ ವಸ್ತುವಿನಿಂದ ಮಹತ್ವದ ವಸ್ತು ವ್ಯಕ್ತಿಗಳವರೆಗೂ ಸೊಗಸಾದ ಮಕ್ಕಳ ಸಾಹಿತ್ಯ ರಚನೆ ಈ ಸಮಗ್ರ ಸಂಪುಟದಲ್ಲಿ ಕಾಣಬಹುದಾಗಿದೆ.
371 ಪುಟದ ಈ ಕವಿತೆಗಳ ಸಂಪುಟ ಮಹತ್ವದ ಮಕ್ಖಳ ಸಾಹಿತ್ಯದ ಸಂಪುಟ. ಅವರೆ ಆಟ ಆಡು ಕವಿತೆಯಲ್ಲಿ
'ಬಾರಿಸು ಬಾರಿಸು
ಎತ್ತಿ ಬಾರಿಸು
ಗೆರೆ ದಾಟಿ ಸಿಕ್ಸರ್ ಬಾರಿಸು'
ಎನ್ನುವ ಹಾಗೆ ಸಮಗ್ರ ಸಂಪುಟ ಬಂದಿದೆ ಎಂದರೆ ಅವರ ಅವರ ಕಾವ್ಯಶಕ್ತಿ ಕುಂದಿದೆ ಎಂತಲ್ಲ... ಈ ಕೃತಿಯ ನಂತರ ಏನೂ ಬರೆದದರು ಬೌಂಡ್ರಿಗಿಂತಲೂ ಸಿಕ್ಸರ್ ಬಾರಿಸುವಂತಾಗಲಿ, ನಮ್ಮಂತ ಕಿರಿಯರಿಗೆ ಮಕ್ಕಳ ಸಾಹಿತ್ಯದ ರಸದೌತಣ ಬಡಿಸಲಿ ಎನ್ನುವುದು ನನ್ನಯ ಕೋರಿಕೆಯಾಗಿದೆ.
- ಗುಂಡುರಾವ್ ದೇಸಾಯಿ
"‘ಕವಚ’ದಲ್ಲೂ ಇದೇ ಇರುವುದು. ಕರ್ಣನ ಸ್ವಗತವೇ ಅನೇಕ ಬಾರಿ ಮುಖಾಮುಖಿಯೂ ಆಗಿದೆ. ರಾಧಾಕೃಷ್ಣ ಕಲ್ಚಾರ...
"ಲಕ್ಷ್ಮಣ ರಾಯರ ಒಡನಾಡಿಗಳ ಲೇಖನ ಅವರ ಪ್ರಿಯ ಮಿತ್ರ ಹಾ.ಮಾ.ನಾಯಕರ ಲೇಖನದಿಂದಲೇ ಆರಂಭವಾಗುತ್ತದೆ. ಬರಹಗಾರರಾಗಿ, ಪ...
"ಲೇಖಕರೇ ಹೇಳಿರುವಂತೆ ಪ್ರೇಮ ಹಾಗೂ ಕಾಮ ನಡುವೆ ತೆಳುವಾದ ಗಡಿ ರೇಖೆಯಿರುವ, ಥಟ್ಟನೆ ಗುರುತಿಸಲಾಗದ ಎರಡು ಸ್ಥಿತಿಗಳ...
©2024 Book Brahma Private Limited.