ಸಾಧಾಣವಾಗಿ ನಮ್ಮ ಸಮಾಜದಲ್ಲಿ ಹೆಣ್ಣು ತನ್ನ ಕುಟುಂಬದ ಒಳಿತಿಗಾಗಿ ಒಂದಿಡೀ ಜೀವಮಾನವನ್ನು ಮುಡಿಪಾಗಿಡಲು ಹಿಂಜರಿಯುವುದಿಲ್ಲ. ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಹತ್ತಿಕ್ಕಿಕೊಂಡು ಕುಟುಂಬದ ಏಳಿಗೆಗಾಗಿ ಶ್ರಮಿಸುವ ಆಕೆ ಒಂಚೂರು ದಾರಿ ತಪ್ಪಿದರೂ ಪ್ರಲೋಭನೆಗೆ ಒಳಗಾದರೂ ಸಾಕು ನಡತೆಗೆಟ್ಟವಳು ಎನ್ನುವ ಸಮಾಜ ಗಂಡಸು ಅದೇ ತಪ್ಪನ್ನು ಮಾಡಿದಾಗ ಅವನ ಪೌರುಷವನ್ನು ಕೊಂಡಾಡುವ ಮನಸ್ಥಿತಿಗೆ ಏನು ಹೇಳೋಣ? ಎನ್ನುತ್ತಾರೆ ಬರಹಗಾರ ಅಮಿತ್ ಕಾಮತ್. ಲೇಖಕಿ ಉಷಾ ನರಸಿಂಹನ್ ಅವರ ಕೆಂಡದ ರೊಟ್ಟಿ ಕೃತಿಯ ಬಗ್ಗೆ ಅವರು ಬರೆದ ಟಿಪ್ಪಣಿ ಇಲ್ಲಿದೆ..
ಕೃತಿ: ಕೆಂಡದ ರೊಟ್ಟಿ
ಲೇಖಕರು: ಉಷಾ ನರಸಿಂಹನ್
ಪ್ರಕಾಶಕರು: ಅಂಕಿತ ಪುಸ್ತಕ ಬೆಂಗಳೂರು
ಬೆಲೆ: 130
ಪುಟ ಸಂಖ್ಯೆ: 128
ಮುದ್ರಣ: 2022
ಕಾದಂಬರಿಯ ಬೆನ್ನುಡಿಯಲ್ಲಿ 'ಸ್ತ್ರೀ ಅಸ್ಮಿತೆಯನ್ನು ವಾದಗಳು, ಪಠ್ಯಗಳು ಕಲಿಸುವುದಕ್ಕಿಂತ ಬದುಕು ಸುಭಗವಾಗಿ ಕಟ್ಟಿಕೊಡುತ್ತದೆ' ಎಂಬ ಸಾಲುಗಳನ್ನು ಓದಿ ಪುಸ್ತಕವನ್ನು ಖರೀದಿಸಿದೆ. ಉಷಾ ನರಸಿಂಹನ್ ಅವರ 'ಪರ್ಷಿಯಾ ಪರಿಮಳ' ಮತ್ತು 'ಕೃಷ್ಣ ಮೃಗ' ಕಾದಂಬರಿಯ ವಿಮರ್ಶೆಗಳನ್ನು ಓದಿದ್ದು ಪುಸ್ತಕ ಖರೀದಿಸಲು ಪ್ರೇರಣೆಯಾಯಿತು. ಬೆನ್ನುಡಿಯಲ್ಲಿ ಹೇಳಿರುವಂತೆ ತನ್ನ ಅಸ್ಮಿತೆ ಮತ್ತು ಅಸ್ತಿತ್ವವನ್ನು ಉಳಿಸಿಕೊಳ್ಳಲು, ಗಳಿಸಿಕೊಳ್ಳಲು ಮತ್ತು ಬೆಳೆಸಿಕೊಳ್ಳಲು ಪರದಾಡುವ ಎಲ್ಲಾ ಸ್ತರದ ಮತ್ತು ಸಾಂಪ್ರದಾಯಿಕ ಹಾಗೂ ಆಧುನಿಕ ಸ್ತ್ರೀಯರ ತೊಳಲಾಟವನ್ನು ಸಮರ್ಥವಾಗಿ ಹಿಡಿದಿಟ್ಟಿದ್ದಾರೆ ಲೇಖಕರು.
ಹಾಗೆಂದ ಮಾತ್ರಕ್ಕೆ ಇಲ್ಲಿ ಕೇವಲ ಮಹಿಳಾ ಶೋಷಣೆಯ ಕಥೆ ಮಾತ್ರವಲ್ಲ,ಮಹಿಳೆಯಿಂದ ಶೋಷಿತರಾದ ಪುರುಷರ ಬವಣೆಯೂ ಸೇರಿಕೊಂಡಿದೆ. ಹೆಣ್ಣು ಗಂಡು ಪರಸ್ಪರ ಒಬ್ಬರ ಮೇಲೊಬ್ಬರು ಹಿಡಿತ ಸಾಧಿಸುವುದೇ ತನ್ನ ಅಸ್ಮಿತೆಯನ್ನು ಪ್ರದರ್ಶಿಸುವ ಏಕೈಕ ಮಾರ್ಗ ಎಂದುಕೊಂಡಿರುವ ಈ ಕಾಲಘಟ್ಟದಲ್ಲಿ ಲೇಖಕಿ ಆರಿಸಿಕೊಂಡ ಕಥಾವಸ್ತು ವಾಸ್ತವಕ್ಕೆ ತೀರಾ ಹತ್ತಿರವೆನಿಸಿತು. ಒಬ್ಬರನ್ನೊಬ್ಬರು ದಮನಿಸುವುದಲ್ಲ,ಪರಸ್ಪರರ ಬೇಕು ಬೇಡಗಳನ್ನು ಗಮನಿಸಿಕೊಂಡು, ವ್ಯಕ್ತಿತ್ವವನ್ನು ಅರಿತುಕೊಂಡು ಗೌರವಿಸುವುದೇ ನಿಜವಾದ ಅಸ್ಮಿತೆ ಮತ್ತು ಅಸ್ತಿತ್ವವನ್ನು ಉಳಿಸುವ ಬೆಳೆಸುವ ಬಗೆ ಎಂಬುದನ್ನು ಬಹಳ ಮಾರ್ಮಿಕವಾಗಿ ಸತ್ಯವತಿ, ನಾಗವೇಣಿ, ರಾಮಣ್ಣ, ಗೊಪಾಲರಾಯ ಮತ್ತು ರಮ್ಯಳ ಕಥೆಗಳ ಮೂಲಕ ವಿಷದವಾಗಿ ಹೇಳುತ್ತಾರೆ ಲೇಖಕರು. ಮೇಲೆ ಹೇಳಿದ ಪಾತ್ರಗಳು ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಬದುಕಿನ ಸಂಕೀರ್ಣತೆಯನ್ನು, ಬಿಟ್ಟರೂ ಬಿಡಲಾಗದ ಅನಿವಾರ್ಯತೆ ಸೃಷ್ಟಿಯಾಗುವುದನ್ನು, ಎಷ್ಟೇ ಹದ ತಪ್ಪಿದರೂ ಸಂಬಂಧಗಳ ನಡುವೆ ಇರುವ ಮಾರ್ದವತೆಯನ್ನು ಚೆನ್ನಾಗಿ ಮನದಟ್ಟು ಮಾಡುತ್ತದೆ. ಯಾವುದೇ ಒಂದು ಪಾತ್ರವೂ ಇಲ್ಲಿ ಪರಿಪೂರ್ಣ ಅಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ದೌರ್ಬಲ್ಯಗಳಿವೆ. ಬದುಕಿನ ಆಯಾ ಸಂದರ್ಭಗಳಿಗೆ ತಕ್ಕಂತೆ ಅಚಾತುರ್ಯ ನಡೆದುಹೋಗುತ್ತದೆ. ಆದರೆ ಆದ ಪ್ರಮಾದಗಳನ್ನು ಸಮರ್ಥಿಸಿಕೊಳ್ಳಲು ಹೋಗದೆ ಅದನ್ನು ಸರಿಪಡಿಸಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಂಡರೆ ಎಲ್ಲರೂ ಎಲ್ಲವೂ ಸರಳ ಸುಂದರವಾಗಿ ಕಂಡು ಬದುಕು ಸಂಭ್ರಮದಿಂದ ಕೂಡುತ್ತದೆ. ಈ ಮನೋಭಾವವನ್ನು ಬೆಳೆಸಿಕೊಳ್ಳದೆ ಎಲ್ಲವನ್ನೂ ದೂರುತ್ತಾ ಜೀವನದಿಂದ ವಿಮುಖವಾಗುವುದು ಆ ವ್ಯಕ್ತಿ ತನಗೆ ತಾನೇ ಕೊಟ್ಟುಕೊಳ್ಳುವ ಅತೀ ದೊಡ್ಡ ಶಿಕ್ಷೆ… ( ಇಲ್ಲಿ ಕಥೆಯನ್ನು ಮತ್ತು ಪಾತ್ರಗಳನ್ನು ಕುರಿತು ಹೇಳಿದರೆ ರಸಭಂಗವಾಗಬಹುದೆಂದು ಉದ್ದೇಶಪೂರ್ವಕವಾಗಿ ಹೇಳಿಲ್ಲ)
ಸಾಧಾರಣವಾಗಿ ನಮ್ಮ ಸಮಾಜದಲ್ಲಿ ಹೆಣ್ಣು ತನ್ನ ಕುಟುಂಬದ ಒಳಿತಿಗಾಗಿ ಒಂದಿಡೀ ಜೀವಮಾನವನ್ನು ಮುಡಿಪಾಗಿಡಲು ಹಿಂಜರಿಯುವುದಿಲ್ಲ. ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಹತ್ತಿಕ್ಕಿಕೊಂಡು ಕುಟುಂಬದ ಏಳಿಗೆಗಾಗಿ ಶ್ರಮಿಸುವ ಆಕೆ ಒಂಚೂರು ದಾರಿ ತಪ್ಪಿದರೂ ಪ್ರಲೋಭನೆಗೆ ಒಳಗಾದರೂ ಸಾಕು ನಡತೆಗೆಟ್ಟವಳು ಎನ್ನುವ ಸಮಾಜ ಗಂಡಸು ಅದೇ ತಪ್ಪನ್ನು ಮಾಡಿದಾಗ ಅವನ ಪೌರುಷವನ್ನು ಕೊಂಡಾಡುವ ಮನಸ್ಥಿತಿಗೆ ಏನು ಹೇಳೋಣ? ಇಂತಹಾ ಅನೇಕ ದ್ವಂದ್ವಗಳಿಗೆ ಉತ್ತರ ಹುಡುಕುವುದಾದರೂ ಹೇಗೆ? ಬಹುಶಃ ಇದೊಂದು ಯಕ್ಷ ಪ್ರಶ್ನಯಾಗಿಯೇ ಉಳಿಯಬಹುದು. ಕಾದಂಬರಿಯ ಶೀರ್ಷಿಕೆಯಂತೆ ಹೆಣ್ಣಿನ ಜೀವನ ಅಕ್ಷರಶಃ ಕೆಂಡದ ರೊಟ್ಟಿಯೇ. ಕೆಂಡದಲ್ಲಿ ಸುಟ್ಟು ಉಬ್ಬಿದಾಗಲೇ ಅಸಲಿ ರುಚಿ ಬಣ್ಣ ಎಲ್ಲಾ. ಆದರೆ ಸೀಯುವುದಕ್ಕಿಂತ ಮುಂಚೆ ಮೇಲೆಳೆದು ಕೊಳ್ಳುವ ಜಾಣ್ಮೆ ಇದ್ದರಷ್ಟೇ ಬದುಕು ಸಾರ್ಥಕ. ಇಲ್ಲದಿದ್ದರೇ ಬರೀ ಉರಿಯುವ ಕೆಂಡವಾದೀತು ಅಷ್ಟೇ.
- ಅಮಿತ್ ಕಾಮತ್
“ನನ್ನ ಪ್ರಕಾರ, ಎಲ್ಲ ವಯೋಮಾನದ ಓದುಗರಿಗೂ ಈ ಪುಸ್ತಕ ಒಂದೊಂದು ಕಾರಣಕ್ಕೆ ಹತ್ತಿರವಾಗುತ್ತದೆ. ಹೆಣ್ಣು ಹೆತ್ತವರ ...
“ನೀನಾ ನನ್ನ ಮನೋಜಗತ್ತನ್ನು ಆಳವಾಗಿ ಆವರಿಸಿದೆ. ೧೯೬೪ರ ನಂತರ ಬಂದ ನನ್ನ ೧೮-೨೦ ಕಾವ್ಯಕೃತಿಗಳಲ್ಲಿ, ಕಥೆಗಳಲ್ಲಿ ...
“ಈ ಪುಸ್ತಕದಲ್ಲಿ ಕೊಡುವ ಸ್ವೀಡನ್ ದೇಶದ ಉದಾಹರಣೆಗಳು, ಸಾಮಾಜಿಕ ಸಮಾನತೆಯನ್ನು ಧನಾತ್ಮಕ ಚಿಂತನೆಗಳು ಮತ್ತು ನೀತಿ...
©2025 Book Brahma Private Limited.