ಸಂಬಂಧಗಳ ಪ್ರತಿಬಿಂಬವೇ ಈ ಕಾದಂಬರಿ : ಕಾರ್ತಿಕೇಯ


"ಈ ಕಾದಂಬರಿಯಲ್ಲಿ ಕಾರಂತರು ಗಂಡು ಹೆಣ್ಣುಗಳ ಮೈ ಮನಗಳ ಸಂಬಂಧದ ಚೆಲವು, ಅಸಹ್ಯಗಳನ್ನು ಮಂಜುಳೆಯಂಬ ಒಬ್ಬ 'ಗರತಿ'ಯಲ್ಲದವಳ ಬಾಳಿನ ಮೂಲಕ ಚಿತ್ರಿಸಿದ್ದಾರೆ" ಎನ್ನುತ್ತಾರೆ ವಿಮರ್ಶಕ ಕಾರ್ತಿಕೇಯ ಭಟ್‌ . ಅವರು ಹಿರಿಯ ಸಾಹಿತಿ ಕೆ. ಶಿವರಾಮ ಕಾರಂತ ಅವರ ‘ಮೈ ಮನಗಳ‌ ಸುಳಿಯಲ್ಲಿ’ ಕಾದಂಬರಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

ಈ ಕಾದಂಬರಿಯಲ್ಲಿ ಕಾರಂತರು ಗಂಡು ಹೆಣ್ಣುಗಳ ಮೈ ಮನಗಳ ಸಂಬಂಧದ ಚೆಲವು,ಅಸಹ್ಯಗಳನ್ನು ಮಂಜುಳೆಯಂಬ ಒಬ್ಬ 'ಗರತಿ'ಯಲ್ಲದವಳ ಬಾಳಿನ ಮೂಲಕ ಚಿತ್ರಿಸಿದ್ದಾರೆ. ಈ ಕಥೆ ನಡೆಯುವುದು ವಸಪುರ ಅಂದರೆ ಈಗಿನ ಬಸರೂರಿನ ಹಾಗು ಅದರ ಸುತ್ತ ಮುತ್ತಲಿನ ಪ್ರದೇಶದಲ್ಲಿ ಸಾಮಾನ್ಯವಾಗಿ ಕೆಲವರು ಬಸರೂರಿಗೆ ಹೋಗಿ ಬರುವುದನ್ನು ಕಂಡರೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಕಾಲವೂ ಇತ್ತು. ಕಾರಣ ಬಸರೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಸಿರಾಗದ ಮನೆಯಿಲ್ಲ, ಹಳ್ಳಿಯಿಲ್ಲ, ಪಟ್ಟಣವಿಲ್ಲ ಎಂಬ ಭಾವನೆ ನಗುವವರ ಮನಸ್ಸಿನಲ್ಲಿ ಅಚ್ಚಳಿದುಬಿಟ್ಟದ್ದು. ಇದು ಕರಾವಳಿ ಪ್ರದೇಶವಾದುದರಿಂದ ೧೭ನೆ ಶತಮಾನದಲ್ಲಿ ಇಂಗ್ಲೀಷರು, ಪೋರ್ಚುಗೀಸರು ವ್ಯಾಪಾರಕ್ಕಾಗಿ ಬಂದವರು ಕ್ರಮೇಣ ಅರಿವೆಯ ಸಾಗಾಣಿಕೆ, ಮೆಣಸಿನ ಸಾಗಾಣಿಕೆಯ ವ್ಯಪಾರಕ್ಕೂ ತೊಡಗಿದರು. ಅದೇ ಕಾರಣದಿಂದ ಊರೂರು ಅಲೆದಾಡುತ್ತಿದ್ದರು, ಆ ಸಮಯದಲ್ಲಿ ಅವರ ಮನವೊಲಿಸುವ ಪದಾರ್ಥ ವೇಶ್ಯಾ ಲಲನೆಯರು. ಅವರಿಗೆ ಮತ್ತೊಂದು ವಿದ್ಯೆಯೂ ಇತ್ತು ಕೆಲವರು ಸಂಗೀತ ಹಾಡುವುದು, ಪಿಟೀಲು ನುಡಿಸುವುದು, ನೃತ್ಯ ಮಾಡುವುದು. ಕ್ರಮೇಣ ಇದೆಲ್ಲವೂ ಒಟ್ಟುಗೂಡಿ ಒಂದು ಕಸುಬಾಗಿಯೇ ಬೆಳೆಯಿತು, ನಂತರ ಅದೇ ಕಸಬು ವ್ಯಾಪಾರವಾಗುವ ಕಾಲವೂ ಬಂದೊದಗಿತು.

ಸಂಸಾರ ಹೊರೆಯುವ ಭಾರ ಗಂಡಿಗೆ ಅದನ್ನು ಹೊರುವ ಭಾರವೆಲ್ಲವೂ ಹೆಣ್ಣಿಗೆ. ಆದರೇ ವೇಶ್ಯಾಲಲನೆಯವರಿಗೆ ಆ ಸಂಸಾರ ಎಂಬ ಭಾರವಿಲ್ಲ, ಅವರ ಕಸುಬಿಗೆ ಮೇಲು, ಕೀಳು ಎಂಬ ಅಂತರವಿಲ್ಲ, ಜಾತಿ ಕೋಮುಗಳ ಅಂತರವಿಲ್ಲ, ತಮ್ಮ ಜೀವನಕ್ಕೆ ಬೇಕಾದ ಅರಿವೆ, ಹೊಟ್ಟೆ ತುಂಬ ಅನ್ನ ಇದ್ದರೆ ಆಯಿತು ಅದಕ್ಕಿಂತ ಸುಖವಾದ ಜೀವನ ಯಾವುದಿದೆ ಎನ್ನುವುದು ಅವರ ಅಭಿಪ್ರಾಯ. ಇಂಥದೇ ಜೀವನ ನಡೆಸುತ್ತಿದ್ದ ಮಂಜುಳ ಜನರ ಬಾಯಲ್ಲಿ ಮಂಜಿ, ಅವಳ ಜೀವನವನ್ನು, ಮನ್ನಸ್ಸಿನ ಭಾವನೆಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಈ ವೃತ್ತಿಯು ಅವರ ಕುಟುಂಬದಲ್ಲಿ ತಲೆತಲಾಂತರದಿಂದ ಬಂದದ್ದೇ, ಮಂಜಿಯ ತಾಯಿಯು ನಂತರ ಮಂಜಿಯ ಮಗಳು ಶಾರಿಯದು ಇದೇ ಜೀವನ. ಆದರೆ ಶಾರಿಯ ಮಗಳಾದ ಚಂದ್ರಿ ಈ ವೃತ್ತಿಯನ್ನು ಅಳವಡಿಸಿಕೊಳ್ಳಲಿಲ್ಲ. ಆ ವೃತ್ತಿಯು ಆಕೆಗೆ ಅಸಹ್ಯವಾಗಿ ಕಾಣುತಿತ್ತು ಆದರೂ ಜನರು ಇವರನ್ನು ಕಾಣುವ ರೀತಿಯೇ ಬೇರೆ, ಹಲವಾರು ಪ್ರಸಂಗಗಳಿಂದ ಚಂದ್ರಿ ತುಂಬಾ ದುಃಖಕ್ಕೆ ಒಳಗಾಗುತ್ತಾಳೆ. ಒಮ್ಮೆ ಆಕಸ್ಮಿಕವಾಗಿ ತನ್ನ ಅಜ್ಜಿಯ (ಮಂಜುಳೆ) ಜೀವನ ಚರಿತ್ರೆಯ ಕುರಿತು ಬರೆದ ಪುಸ್ತಕ ಸಿಗುತ್ತದೆ, ಅದನ್ನು ಚಂದ್ರಿ ಓದುತ್ತಾ ಹೋಗುತ್ತಾಳೆ.

ಎಷ್ಟೋ ವರ್ಷಗಳಾದ ಮೇಲೆ ನನ್ನ ತಾಯಿಗೆ ಒಬ್ಬಳೇ ಬಬ್ಬಳು ಹುಟ್ಟಿದವಳೇ ನಾನು, ನಂತರ ತಂಗಿ ಕಪಿಲೆ, ಆಕೆಯು ನನಗಿಂತ ಅದೃಷ್ಟಶಾಲಿ ಎಂಬ ಭಾವನೆ, ಮಕ್ಕಳ ವಿಷಯದಲ್ಲಾಗಲಿ,ಬುದ್ದಿಯಲ್ಲಾಗಲಿ. ನನಗೆ ಇರುವ ಒಂದೇ ಕೊರತೆ ಮಕ್ಕಳಿಲ್ಲದಿರುವುದು, ಹತ್ತು ಜನರು ಓಡಾಡಿರುವ ಜಾಗದಲ್ಲಿ ಹುಲ್ಲು ಬೆಳೆಯುತ್ತದೆಯೇ? ಅದೇಯೇ ನನ್ನ ಬಾಳು ಸಹ. ಅಂತೂ ಸಮಾಜದಲ್ಲಿ ತಾವು ಗರತಿಯರೆಂದೇ ಪ್ರಸಿದ್ಧರಾದೆವು, ಅದು ವ್ಯಂಗ್ಯವೋ, ಅಥವಾ ಬೈಗುಳವೋ ಏನೋ ಸಹಿಸಬೇಕಾದದ್ದು ತಾವೇ ತಮ್ಮ ಜೀವನ ನಡೆಸಲು. ನಮ್ಮವರು ಹುಟ್ಟಿಸಿದ ಅಪ್ಪನಿಗೆ ಪಾಳ ಎನ್ನುವುದು ವಾಡಿಕೆ, ಪಾಳನು ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು, ಹಣ, ಅರಿವೆ, ಇತರ ಸೌಕರ್ಯಗಳನ್ನು ಒದಗಿಸಿಕೊಡುತ್ತಿದ್ದನು, ಆದರೆ ಜನರ ದೃಷ್ಟಿಯಲ್ಲಿ ಆ ಪಾಳನಿಗೆ ನನ್ನ ತಾಯಿಯು ಇಟ್ಟುಕೊಂಡವಳು ಎಂದೇ ಅಭಿಪ್ರಾಯ. ನಮ್ಮ ಜೀವನ ಸಾಗಿಸಲು ಮನಸ್ಸಿಲ್ಲದೆಯೇ ನಮ್ಮ ಮೈಯ್ಯನ್ನು ಮಾರಿಕೊಳ್ಳುವುದು ಅನಿವಾರ್ಯ, ಅದೇ ಜೀವನ ನಾನು ನಡೆಸಬಾರದೆಂದು ನನ್ನ ತಾಯಿಯು ನನಗೆ ಸಂಗೀತ ವಿದ್ಯೆ, ನೃತ್ಯ ಕಲಿಯಲು ಅವಕಾಶ ಒದಗಿಸಿಕೊಟ್ಟಳು. ಆದರೆ ಕಲಿತ ವಿದ್ಯೆ ಬೇರೆತರನೆ ಉಪಯೋಗವಾಯಿತು. ನನಗೆ ಹಲವಾರು ಕಡೆ ಸಂಗೀತ ಕಾರ್ಯಕ್ರಮ ಕೊಡಲು ಅವಕಾಶ ಒದಗಿಬರುತಿತ್ತು, ರಾಮೋತ್ಸವ, ಯುಗಾದಿ, ನವರಾತ್ರಿಗಳಲ್ಲಂತೂ ಬಿಡುವೇ ಇಲ್ಲದೇ ಇರುವ ಮಟ್ಟಿಗೆ,‌ ನನ್ನ ಜೊತೆ ಪಿಟೀಲು ಪದ್ಮನಾಭ ಸದಾ ಸಂಗೀತ ಕಚೇರಿಯಲ್ಲಿ ಭಾಗವಹಿಸುತ್ತಿದ್ದನು.

ಇದೇ ಸಮಯದಲ್ಲಿ ನನ್ನ ಚೆಲುವು, ನಿಲುವು, ಕಂಠ, ಕುಣಿತ ಎಲ್ಲಕ್ಕೂ ಮರುಳಾದ ಗಂಡಸರಿಂದ ಪತ್ರ ಬರತೊಡಗಿದವು. ರಂಭೆ, ಊರ್ವಶಿ, ಮೇನಕೆಯರಿಗೆ ಹೋಲಿಸಿ ಬಿಡುತ್ತಿದ್ದರು. ಮೊದಲು ಪತ್ರ ಬಂದದ್ದೇ ಕಂಡಲೂರು ಸಾಹೇಬರಿಂದ ಅವರ ಮಗಳ ಮದುವೆಯಲ್ಲಿ ಹಾಡಲು ಅವಕಾಶ ದೊರಕಿತು. ಈ ನೆಪದಲ್ಲೇ ಕಂಡಲೂರು ಸಾಹೇಬರು ನನ್ನ ಮೇಲೆ ಅವರ ಗಂಡಸುತನ ತೋರಿಸಿಬಿಟ್ಟರು. ನನ್ನ ಮನಸ್ಸಿನ ಭಾವನೆಗಳನ್ನು ಅರಿಯದೆ ನನ್ನ ಮೈಯ್ಯನ್ನು ಅನುಭವಿಸಿದರು. ಅಂದು ಮೊದಲ ಬಾರಿಗೆ ನನ್ನ ಯೌವನದ ಬೆಡಗು, ಭಿನ್ನಾಣ, ಮೋಹ, ಉನ್ಮತ್ತ ಕುದಿದುಬಂದು ಅದೇ‌ ವೇಳೆಯಲ್ಲಿ ಅವರ ತೋಳಿಗೆ‌ ಸಿಕ್ಕಿ ಅನುಭವ ಪಡೆದೆ. ಆದರೆ ಮನಸ್ಸಿಗೆ ನೋವಾಯಿತು ನನ್ನ ಬದುಕು ಸಹ ಅಮ್ಮನ ಬದುಕಿನ ರೀತಿಯಲ್ಲಿ ಸಾಗುತ್ತಿದೆಯೆಂದು. ನನ್ನ ತಾಯಿ ಮೈಯ್ಯೇ ಬೇರೆ; ಮನಸ್ಸೇ ಬೇರೆ ಎಂದು ಬೋಧಿಸಿ ಹೋಗಿದ್ದಾಳೆ. ಆದರೆ, ಸಾಹುಕಾರರ ವಿಷಯದಲ್ಲಿ ಮೈಯ್ಯೇ ಇಲ್ಲದೆ ಮನಸ್ಸೊಂದೇ ಇದ್ದವಳಂತೆ ವರ್ತಿಸಿದ್ದೇನೆ. ನಂತರ ಸಾಹುಕಾರರು ಸಂಗೀತ ಕೇಳುವ ನೆಪದಿಂದ ನನ್ನ ಬಳಿ ಬಂದು ಸಂಗೀತದ ನೆಪವೊಡ್ಡಿ ನನ್ನನ್ನು ಅನುಭವಿಸುತ್ತಿದ್ದರು.

ಹೀಗೆ ಕಂಡಲೂರು ಸಾಹುಕಾರರಿಗೆ‌ ಮಾರಿದ ನನ್ನ ಮೈ ನಂತರ ಉಳ್ಳೂರು ಸುಬ್ರಾಯರಿಗೆ, ನಂತರ ಮುರಗೋಡು ನಂಜಪ್ಪನವರಿಗೆ, ನಂತರ ಮೆಕ್ಕೆಮನೆಯವರಿಗೆ, ಕಡೆಗೆ ಲಕ್ಷ್ಮಣರಾಯರಿಗೂ ಮಾರಿದ ಪ್ರಸಂಗ ಬಂತು, ಮನೆಗೆ ಸಂಗೀತ ಕೇಳಲು ಬರುವುದು ನಂತರ ಅವರ ಚಟ ತೀರಿಸಿಕೊಳ್ಳುವುದು. ಈ ಗಂಡಸರಲ್ಲಿ ಉಳ್ಳೂರು ಸುಬ್ರಾಯರನ್ನು ಬಿಟ್ಟರೆ ಉಳಿದವರು ನನ್ನ ಮನಸ್ಸನ್ನು ಅರ್ಥಮಾಡಿಕೊಳ್ಳದೆ ಬರೀ ನನ್ನ ಮೈಯ್ಯನ್ನೇ ಅನುಭವಿಸಿದರು. ಆದರೆ ಉಳ್ಳೂರರು ಹಾಗಲ್ಲ ನನ್ನ ಮನಸ್ಸನ್ನು ಅರ್ಥ ಮಾಡಿಕೊಂಡ ಏಕೈಕ ವ್ಯಕ್ತಿ. ಅವರ ಜೊತೆ‌ ಪ್ರತಿ ಸಮಾಗಮದಲ್ಲೂ ಸುಖವನ್ನು ಪಡೆದೆ ಅವರಿಂದ ಮಗು ಪಡೆಯುವ ಹಂಬಲ ಹೆಚ್ಚಿತು ಆದರೆ ಅದು ಸಾಧ್ಯವಾಗಲಿಲ್ಲ ಹಾಗು ಅದಕ್ಕೆ ಅವರು ಯೋಗ್ಯರಲ್ಲವೆಂದು ಅವರೇ ತಿಳಿಸಿದಾಗ ಆಘಾತವಾಯಿತು. ನಂತರ ಮುರುಗೋಡು ನಂಜಪ್ಪನ ವ್ಯಾಘ್ರ ಅವತಾರಕ್ಕೆ ಬಲಿಯಾಗಿ ಗರ್ಭಿಣಿಯಾಗಿ ಆ ಶಿಶುವೂ ಉಳಿಯದೇ‌ ಏಕಾಂಗಿಯಾದೆ. ನನ್ನ ಸಂಗಸುಖ ಬಯಸಿ ನನ್ನ ತಂಗಿಯ ಸಂಗಸುಖ ಅನುಭಿವಿಸಿದರೆಂದು ಅಸಹ್ಯಪಟ್ಟು ಕಂಡಲೂರು ಸಾಹುಕಾರರನ್ನು ತ್ಯಜಿಸಿದೆ, ಮುರುಗೋಡು ನಂಜಪ್ಪನು ಕಳ್ಳತನ ಮಾಡಿ ಪೋಲಿಸರಿಗೆ ಸಿಕ್ಕಿಬಿದ್ದಾಗ ಅಂತಹ ವ್ಯಕ್ತಿಗೆ ತನ್ನ ಬಾಳನ್ನು ಅರ್ಪಿಸಿದನೆಂದು ಅಸಹ್ಯಪಟ್ಟು ಆತನನ್ನು ತ್ಯಜಿಸಿದೆ. ಉಳ್ಳರು ಸುಬ್ರಾಯರು ಅವರೇ ಹಾಸಿಗೆ ಹಿಡಿದು ನನ್ನನ್ನು ತ್ಯಜಿಸಿದರು, ಕಡೇ ಕಾಲದಲ್ಲಿ ಅವರ ಸೇವೆ ಮಾಡುವ ಭಾಗ್ಯವಾದರೂ ದೊರಕಿತು.

ಇನ್ನು ಲಕ್ಷ್ಮಣರಾಯರು ಸಿಕ್ಕಿದಾಗ ಅವರಿಗೆ ಇದರಲ್ಲಿ ಅನುಭವವಿಲ್ಲ, ಅವರು ನನಗೆ ಹೊಸ ವೀಣೆಯಂತೇ ಕಾಣಿಸಿದರು, ಎಲ್ಲಾ ತಂತಿಗಳು ಇವೆ. ಬಿರಡೆ ಬಿಗಿದು ನಾನೇ ನುಡಿಸಬೇಕಾಯಿತು. ಅವರ ಮೃದುವಾದ ಮಾತಿಗೆ, ರೂಪಕ್ಕೆ ಮಾರುಹೋಗಿ ಅವರಲ್ಲಿ ನಾನೊಬ್ಬಳಾದೆ, ಹಲವಾರು ಕಾಲ ಅವರ ಬಳಿ ಸುಖ ಅನುಭವಿಸಿದೆ, ಆದರೆ ಅವರು ಸನ್ಯಾಸಿ ಕಡೆಗೆ ನನ್ನ ಮನಸ್ಸನ್ನು ಅರ್ಥಮಾಡಿಕೊಳ್ಳದೆ ತ್ಯಜಿಸಿ ಹೋದರು ಒಂದು ದಿನ ಹೊಸ ವೀಣೆ ಮುರಿದುಹೋದಷ್ಟು ದುಃಖವಾಯಿತು.

ಹೀಗೆ ನಾಲ್ವರು ನನ್ನ ಬಾಳಿನಲ್ಲಿ ಚಿರವಾಗಿ ಉಳಿದು ನಿಂತಿದ್ದಾರೆ. ಒಬ್ಬರು ಯಾವ ಸಂಬಂಧವೂ ಇರದವರು, ಒಬ್ಬರು ಬಂದವರು, ಒಬ್ಬರು ಬಂದೂ ಬಾರದವರು. ಅವರಿಂದ ನನ್ನ ಬದುಕಿಗೆ‌ ಸಮಾಧಾನವಿತ್ತೋ ಇಲ್ಲವೋ ತಿಳಿಯೇ. ಕಾಲವು ನನ್ನನ್ನು ಅವರಿಂದ ದೂರಮಾಡಿತು. ನಾನು ಚಿರನಲ್ಲ ಅವರೂ ಅಲ್ಲ. ಆದರೆ ಉಳ್ಳೂರರು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟರು. ನನ್ನ ವಿವೇಕ ಸಾಲದ ಬದುಕಿಗೆ ಉಳ್ಳೂರರೇ‌‌ ಮಾರ್ಗದರ್ಶಕರು. ಮಂಚಕ್ಕೆ ನನ್ನ ಮನಸ್ಸು ‌ಸೀಮಿತವಾಗಿರಲಿಲ್ಲ, ಮಂಚದಿಂದ ಮೈಯ್ಯನ್ನು ತುಂಬಿತ್ತು, ಮೈಯ್ಯಿಂದ ಮನಸ್ಸು ತುಂಬಿತ್ತು, ಆ ಮೈ ಮನಗಳೆರಡೂ ನನ್ನ ಬಾಳಿನ ಎಲ್ಲಾ ಕ್ಷಣಗಳನ್ನೂ ತುಂಬಿದವು. ಇದನ್ನೆಲ್ಲಾ ಓದಿದ ಚಂದ್ರಿ ತನ್ನ ತಾಯಿಗೆ‌ ಅಜ್ಜಿ ಬರೆದಿರುವುದನ್ನು ತೋರಿಸಲು ಇಷ್ಟಪಡುವುದಿಲ್ಲ. ಅಂತೂ ಮರ್ಯಾದೆಯಿಂದ ಬದುಕು‌ ನಡೆಸಬೇಕೆಂಬ ಆಸೆ ಅವಳಲ್ಲಿ ಬೇರೂರಿತು.

- ಕಾರ್ತಿಕೇಯ

ಕಾರ್ತಿಕೇಯ ಅವರ ಪರಿಚಯಕ್ಕಾಗಿ

 

 

MORE FEATURES

ನಿವೃತ್ತರಾದಮೇಲೂ ಅದೇ ಕಾರ್ಯಗಳಲ್ಲಿ ನಿರತರಾಗಿದ್ದಾರೆ

10-03-2025 ಬೆಂಗಳೂರು

"ಎರಡನೆಯವರು ಅನ್ವಯಿಕ ಮನೋವಿಜ್ಞಾನದ ಪ್ರವರ್ತಕರು. ಇವೆರಡು ಮನೋವಿಜ್ಞಾನದ ಎರಡು ಕಣ್ಣುಗಳಿದ್ದಂತೆ. ಪ್ರಸ್ತುತ ಗ್ರ...

ಹುಲಿ ಪತ್ರಿಕೆ ಒಂದು ಪತ್ರಿಕೆಯ ಸುತ್ತ ಸುತ್ತುವ ಪತ್ತೆದಾರಿ ದಾಟಿಯಲ್ಲಿರುವ ಕಾದಂಬರಿ

10-03-2025 ಬೆಂಗಳೂರು

“ಈ ರೀತಿಯ ಪ್ರಯೋಗ ಕನ್ನಡ ಸಾಹಿತ್ಯದಲ್ಲಿ ಅತೀ ವಿರಳವಾಗಿರುವಾಗ ಈ ಪ್ರಯೋಗಕ್ಕೆ ಒಂದು ಚಪ್ಪಾಳೆ ಕೊಡಲೇಬೇಕು,&rdq...

ಮೊದಲ ಪುಟದಿಂದಲೇ ಕುತೂಹಲದಿಂದ ಸಾಗುವ ಕಥೆ

10-03-2025 ಬೆಂಗಳೂರು

“ಪ್ರಣೀತ್, ಪ್ರತೀಕ್ಷಾ ದಕ್ಷ ಆಡಳಿತ ಸೇವೆ, ಜಯ ಚಂದ್ರ ಸಾಗರ್ ಕುಟುಂಬ ಪರಿಚಯ, ರಾಜಕೀಯ ಹಿನ್ನಲೆ, ಮುಂತಾದ ವಿಷಯಗ...