ಸಮಕಾಲೀನ ಸಾಹಿತ್ಯ ಚಳುವಳಿಯೊಂದರ ಬಗ್ಗೆ ಬರೆಯುವುದು ಸದಾ ಕಷ್ಟದ ಕೆಲಸ


"ಒಂದನೆಯದಾಗಿ, ಬರೆಯುವವನಿಗೆ ಆ ಚಳುವಳಿಯನ್ನು ಚಾರಿತ್ರಿಕವಾಗಿ ಗ್ರಹಿಸಿ, ಅದರ ವ್ಯಾಪಕತೆಯನ್ನು ತನ್ನ ತೆಕ್ಕೆಗೆ ಒಗ್ಗಿಸಿಕೊಳ್ಳಲಾಗುವುದಿಲ್ಲ. ಎರಡನೆಯದಾಗಿ ಸಮಕಾಲೀನ ಬರಹಗಾರರ ದೊಡ್ಡ ಪಟ್ಟಿಯಲ್ಲಿ ಆಯ್ಕೆಯೂ ಬರಹಗಾರರೆಂದು ಯಾರನ್ನಾದರೂ ಬೊಟ್ಟು ಮಾಡಿ ತೋರಿಸುವುದು ಅಪಾಯಕರ," ಎನ್ನುತ್ತಾರೆ ಪುರುಷೋತ್ತಮ ಬಿಳಿಮಲೆ. ಅವರ ‘ಬಂಡಾಯ-ದಲಿತ ಚಳುವಳಿ ಮತ್ತು ಸಾಹಿತ್ಯ’ ಕೃತಿಯ ಒಂದು ಅಧ್ಯಾಯ.

ಪುರುಷೋತ್ತಮ ಬಿಳಿಮಲೆ‌ ಅವರ ಬಂಡಾಯ‌ ದಲಿತ ಚಳುವಳಿ‌ ಮತ್ತು ಸಾಹಿತ್ಯ ಪುಸ್ತಕದ ಪ್ರಸ್ತಾವನೆ

ಹೊಸಗನ್ನಡ ಸಾಹಿತ್ಯದ ನಾಲ್ಕನೆಯ ಘಟ್ಟವನ್ನು ನಾವು ಬಂಡಾಯ-ದಲಿತ ಸಾಹಿತ್ಯವೆಂದು ಗುರುತಿಸುತ್ತೇವೆ. ನವೋದಯ, ಪ್ರಗತಿಶೀಲ ಮತ್ತು ನವ್ಯದ ಅನಂತರ, ಅಂದರೆ ಸುಮಾರಾಗಿ 1970ರಿಂದೀಚೆಗೆ ಅದು ಬೆಳೆದುಬಂದಿದೆ. ಅದನ್ನು ಸಮಕಾಲೀನ ಕನ್ನಡ ಸಾಹಿತ್ಯವೆಂದೂ ಗುರುತಿಸಬಹುದು. ಸಮಕಾಲೀನ ಸಾಹಿತ್ಯ ಚಳುವಳಿಯೊಂದರ ಬಗ್ಗೆ ಬರೆಯುವುದು ಸದಾ ಕಷ್ಟದ ಕೆಲಸ. ಈ ಕಷ್ಟ ಮೂರು ತೆರನಾಗಿರುತ್ತದೆ.

ಒಂದನೆಯದಾಗಿ, ಬರೆಯುವವನಿಗೆ ಆ ಚಳುವಳಿಯನ್ನು ಚಾರಿತ್ರಿಕವಾಗಿ ಗ್ರಹಿಸಿ, ಅದರ ವ್ಯಾಪಕತೆಯನ್ನು ತನ್ನ ತೆಕ್ಕೆಗೆ ಒಗ್ಗಿಸಿಕೊಳ್ಳಲಾಗುವುದಿಲ್ಲ. ಎರಡನೆಯದಾಗಿ ಸಮಕಾಲೀನ ಬರಹಗಾರರ ದೊಡ್ಡ ಪಟ್ಟಿಯಲ್ಲಿ ಆಯ್ಕೆಯೂ ಬರಹಗಾರರೆಂದು ಯಾರನ್ನಾದರೂ ಬೊಟ್ಟು ಮಾಡಿ ತೋರಿಸುವುದು ಅಪಾಯಕರ. ಎಲ್ಲರೂ ಇನ್ನೂ ಬರೆಯುತ್ತಿದ್ದಾರೆ. ಮೂರನೆಯದಾಗಿ, ಬರೆಯುವಾತನಿಗೂ ಚಳುವಳಿಗೂ ಒಂದು ಅಂತರ ಏರ್ಪಟ್ಟಿರುವುದಿಲ್ಲದ ಕಾರಣ ಆತ ಒಂದಿಲ್ಲೊಂದು ಬಗೆಯ ಪ್ರಭಾವಗಳಿಗೆ, ಪೂರ್ವಾಗ್ರಹಗಳಿಗೆ ಗುರಿಯಾಗಿಬಿಡುತ್ತಾನೆ. ಅಂದರೆ ಇಲ್ಲಿ ವಸ್ತುನಿಷ್ಠತೆ ಕಷ್ಟಸಾಧ್ಯವಾಗುತ್ತದೆ.

ಈ ಮಿತಿಯಲ್ಲಿ ನಾವು ಬಂಡಾಯ-ದಲಿತ ಸಾಹಿತ್ಯವನ್ನು ಪರಿಚಯಿಸಿಕೊಳ್ಳಬೇಕಾಗುತ್ತದೆ. ಹಾಗೆ ಪರಿಚಯಿಸಿಕೊಳ್ಳಲು ಬೇಕಾದ ವಾತಾವರಣವೂ ಈಗ ನಿರ್ಮಾಣಗೊಂಡಿದೆ. ಆ ಚಳುವಳಿಯು ತನಗಿಂತ ಪೂರ್ವದ ನವ್ಯ ಸಾಹಿತ್ಯದ ಬಗೆಗೆ ತನ್ನ ಅಸಮಾಧಾನವನ್ನು ಬಹಳ ಖಚಿತವಾಗಿ ಪ್ರಕಟಿಸಿದೆ. ಅದರ ಜೊತೆಗೆ ನವ್ಯಕ್ಕಿಂತ ಭಿನ್ನವಾಗಿ ಬೆಳೆಯಲು ತನ್ನ ಶಕ್ತಿ ಮೀರಿ ಪ್ರಯತ್ನಿಸಿದೆ. ಆ ಮೂಲಕ ಕನ್ನಡದ ಓದುಗರಲ್ಲಿ ಒಂದು ಬಗೆಯ ರೋಮಾಂಚನವನ್ನು, ಒಳನೋಟಗಳಿಂದ, ನವೀನ ಅಭಿವ್ಯಕ್ತಿ ಮಾರ್ಗದಿಂದ ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿದೆ. ಈ ಜನಪ್ರಿಯತೆಯು ಹಳೆಯದರ ದೌರ್ಬಲ್ಯವನ್ನೂ ಎತ್ತಿ ತೋರಿಸಿದೆ. ಈ ಅರ್ಥದಲ್ಲಿ ಒಂದು ಹೊಸ ಸಾಹಿತ್ಯ ಚಳುವಳಿಯ ಹುಟ್ಟುಹಳೆಯ ಸಾಹಿತ್ಯ ಪರಂಪರೆಯ ಮೌನ ವಿಮರ್ಶೆಯಾಗಿಬಿಡುತ್ತದೆ. ಸೃಜನಶೀಲತೆಯ ಅನಿವಾರ್ಯತೆಯು ಚರಿತ್ರೆಯ ಮೌಲಿಕ ವಿಮರ್ಶೆಯಾಗಿಬಿಡುವುದು ಹೀಗೆ. ಇಲ್ಲಿ ಇರುವ ಒಂದೇ ಸಮಸ್ಯೆ ಎಂದರೆ ಹೊಸ ಮಾರ್ಗದ ಬಗೆಗೆ ಉಂಟಾಗುವ ಪಕ್ಷಪಾತ ದೃಷ್ಟಿ ಹೊಸದನ್ನು ಸಮರ್ಥಿಸಿಕೊಳ್ಳುವ ರಭಸದಲ್ಲಿ, ಅದಕ್ಕೂ ಪೂರ್ವದ ಸಾಹಿತ್ಯದ ದೌರ್ಬಲ್ಯಗಳನ್ನು ಉತ್ತೇಕ್ಷಿಸಿಬಿಡಲಾಗುತ್ತದೆ. ಆ ಸಂದರ್ಭದ ತೀವ್ರತೆ ಮತ್ತು ಉತ್ಕಟ ಕ್ಷಣಗಳಲ್ಲಿ ಹಾಗಾಗುವುದು ಕೇವಲ ಮಾನವ ಸಹಜ ಗುಣ ಎಂದು ನಾವದನ್ನು ಸಮರ್ಥಿಸಬಹುದಾದರೂ, ಸದ್ಯಕ್ಕೆ ಅದನ್ನು ಹೊಸ ಪರಂಪರೆಯ ರಕ್ಷಣಾ ತಂತ್ರ ಎಂದಷ್ಟೇ ಭಾವಿಸುವುದು ಒಳಿತು. ಏನಿದ್ದರೂ ಹೊಸಮಾರ್ಗವೊಂದರ ಆವಿಷ್ಕಾರ, ಹಳೆಯದನ್ನು ವಸ್ತುನಿಷ್ಠವಾಗಿ ನೋಡಲು ಬಹಳ ಸಹಾಯ ಮಾಡುತ್ತದೆ.

ಕರ್ನಾಟಕದಾದ್ಯಂತ ಅತ್ಯಂತ ಪ್ರಭಾವಶಾಲಿಯಾಗಿ ಬೇರುಬಿಟ್ಟಿದ್ದ ಬಂಡಾಯ- ದಲಿತ ಸಾಹಿತ್ಯ ಚಳುವಳಿಯು ಒಂದು ಹಂತಕ್ಕೆ ಈಗ ಬಂದು ನಿಂತಿದೆ ಎಂದು ಪ್ರಾಮಾಣಿಕವಾಗಿ ಅನ್ನಿಸುತ್ತಿದ್ದರೂ ಅದು ಇನ್ನೊಂದು ಚಳುವಳಿಯ ಉಗಮಕ್ಕೆ ಎಡೆಮಾಡಿಕೊಟ್ಟಿಲ್ಲ. ಬಂಡಾಯ-ದಲಿತ ಸಾಹಿತ್ಯಕ್ಕೆ ಅದರದ್ದೇ ಆದ ಒಂದು ಸಿದ್ಧ ಮಾರ್ಗಶೈಲಿ-ಧೋರಣೆಗಳು ರೂಪುಗೊಂಡಿದೆ ಎಂದು ತೋರುತ್ತಿದ್ದರೂ ಅದನ್ನು ಖಚಿತವಾಗಿ ಹೇಳಲು ಧೈರ್ಯ ಸಾಲದು. ಏಕೆಂದರೆ ಈ ಮಾರ್ಗದ ಅವನತಿಯನ್ನು ಸೂಚಿಸುವ, ಆ ಮೂಲಕ ಈ ಮಾರ್ಗದ ರೂಪ ಲಕ್ಷಣಗಳನ್ನು ಸಾಬೀತುಪಡಿಸುವ ಬಂಡಾಯ-ದಲಿತೋತ್ತರ ಸಾಹಿತ್ಯ ನಿರ್ಮಿತಿಯ ಕೆಲಸ ಇನ್ನೂ ಆಗುತ್ತಿಲ್ಲ. ಈ ಇದರೊಂದಿಗೆ ಬಂಡಾಯ-ದಲಿತ ಮಾರ್ಗದ ಅತ್ಯಂತ ಮಹತ್ವದ ಬರಹಗಾರರೆಂದು ನಾವು ಭಾವಿಸುವ ಮಂದಿ ಇನ್ನೂ ಬರೆಯುತ್ತಿದ್ದಾರೆ.

ಹೀಗೆ ನೋಡಿದಾಗ ಒಂದು ವಿಷಯ ಖಚಿತವಾಗುತ್ತದೆ. ಅದೆಂದರೆ, ಬಂಡಾಯ-ದಲಿತ ಸಾಹಿತ್ಯದ ಉಗಮದ ಅನಂತರ ನಾವು ಖಚಿತವಾಗಿ ಪರಿಶೀಲಿಸಬಹುದಾದದ್ದು ಅದಕ್ಕಿಂತ ಪೂರ್ವದ ನವ್ಯ ಸಾಹಿತ್ಯವನ್ನು, ನವ್ಯಸಾಹಿತ್ಯ ಒಂದು ನಿಲುಗಡೆಗೆ ಬಂದಿದೆ ಎಂದೇ ಅದರ ಅರ್ಥ.

ಈ ಕಾರಣಕ್ಕೆ ಪ್ರಸಕ್ತ ಅಧ್ಯಯನದಲ್ಲಿ ಬಂಡಾಯ-ದಲಿತ ಸಾಹಿತ್ಯದ ಒಟ್ಟು ಪರಿಚಯವನ್ನು ಬಹಳ ಸ್ಕೂಲವಾಗಿ ಮಾಡಿಕೊಡಲು ಯತ್ನಿಸಲಾಗಿದೆ. ಈ ಚಳುವಳಿಯ ಅಂತ್ಯವನ್ನು ಕುರಿತು ಹೇಳಲಾಗದು; ಬದಲು ಆರಂಭವನ್ನು ಕುರಿತು ಹೇಳಲಾಗುವುದು. ಜೊತೆಗೆ ಆ ಚಳುವಳಿಯ ಹುಟ್ಟಿಗೆ ಕಾರಣವಾದ ಅಂಶಗಳನ್ನು ಪರಿಶೀಲಿಸಿ, ಆ ಕಾರಣಗಳು ಬಂಡಾಯ-ದಲಿತ ಸಾಹಿತ್ಯದ ಸ್ವರೂಪವನ್ನು ಹೇಗೆ ನಿಯಂತ್ರಿಸಿವೆ ಎಂಬುದನ್ನು ಪರಿಶೀಲಿಸಲಾಗುವುದು. ಇದರ ಜೊತೆಗೆ ಈ ಕ್ಷೇತ್ರದಲ್ಲಿ ಇದುವರೆಗೆ ನಡೆದ ಕೆಲಸವನ್ನೂ ಪರಿಶೀಲಿಸಿ, ಅದರ ಮಿತಿಗಳನ್ನು ಗುರುತಿಸಲು ಯತ್ನಿಸಲಾಗುವುದು. ಬಂಡಾಯ-ದಲಿತ ಸಾಹಿತ್ಯದ ಉಸಿರಾಗಿರುವ ಪ್ರತಿಭಟನೆಯನ್ನೂ, ಅದರ ಏಕತಾನತೆಯನ್ನೂ ಆಯಾ ಪ್ರಕಾರಗಳ ಅಧ್ಯಯನದಲ್ಲಿಯೇ ಪರಿಶೀಲಿಸಲಾಗುವುದು. ಜಾಗತಿಕ ಪ್ರತಿಭಟನಾ ಸಾಹಿತ್ಯದೊಂದಿಗೆ ಹೋಲಿಸಿ ನೋಡಿದಾಗ ಕನ್ನಡದ ಸಾಧನೆ ಹೇಗೆ ಕಾಣುವುದೆಂಬುದನ್ನು ಸಮಾರೋಪದಲ್ಲಿ ಗುರುತಿಸಲಾಗುವುದು. ಕೃತಿಯ ಕೊನೆಯಲ್ಲಿ ಈ ಸಾಹಿತ್ಯ ಚಳುವಳಿಯು ಈ ಎದುರಿಸುತ್ತಿರುವ ತೊಡಕುಗಳನ್ನು ವಿಶ್ಲೇಷಿಸಲಾಗುವುದು.

ಹೀಗೆ ಪರಿಚಯಿಸುವಾಗಲೂ ಅದನ್ನು ಒಂದು ನಿರ್ದಿಷ್ಟವಾದ ಸೈದ್ಧಾಂತಿಕ ಚೌಕಟ್ಟಿಗೆ ಒಳಪಡಿಸಲಾಗಿದೆ. ಈ 'ಸೈದ್ಧಾಂತಿಕ ಚೌಕಟ್ಟು' ಎಂಬ ಮಾತು ಕೂಡಾ ಅಗತ್ಯವಾದ ಮತ್ತು ಅನಗತ್ಯವಾದ ಅನೇಕ ಸಮಸ್ಯೆಗಳನ್ನು ನಮ್ಮ ಮುಂದಿಡುತ್ತದೆ. ಏನಿದ್ದರೂ ಅದು ಕಲಾಕೃತಿಯೊಂದರ ಮೌಲ್ಯಮಾಪನದ ಬಗೆಯೇ ಆಗಿದೆ. ಕೃತಿಯು ಒಳಗಿನ ವಿವರಗಳು ನಮಗೆ ದಕ್ಕುವುದು ಕೂಡ ಈ ಸೈದ್ಧಾಂತಿಕ ಚೌಕಟ್ಟನ್ನು ಅವಲಂಬಿಸಿರುತ್ತದೆ.

ಕಲಾಕೃತಿಯೊಂದು ಅದು ಸೃಷ್ಟಿಯಾದ ಕಾಲದಿಂದ, ಮತ್ತು ಕಲಾಕಾರನ ಸೈದ್ಧಾಂತಿಕ ನಿಲುವಿನಿಂದ ಪ್ರೇರಿತವಾಗುತ್ತದೆ ಎಂಬ ಮಾತನ್ನು ಹೆಚ್ಚಿನ ವಿದ್ವಾಂಸರು ಇದೀಗ ಒಪ್ಪಿಕೊಂಡಿದ್ದಾರೆ, ಇದರ ಬಗ್ಗೆ ಡಿ. ಆರ್. ನಾಗರಾಜರು ಹೇಳಿದ್ದು ಹೀಗೆ; “ಕಾವ್ಯಕೃತಿ-ಚರಿತ್ರೆ-ಸಿದ್ಧಾಂತ (ಐಡಿಯಾಲಜಿ ಎಂಬರ್ಥದಲ್ಲಿ) - ಈ ಮೂರರ ನಡುವೆ ಅತ್ಯಂತ ನಿಕಟ ಸಂಬಂಧವಿದೆಯೆಂಬುದು ಇಲ್ಲಿಯ ಮೂಲಭೂತ ತಾತ್ವಿಕ ನಿಲುವು. ಕಾವ್ಯದ ವಸ್ತುವೊಂದು ರೂಪುಗೊಳ್ಳುವುದು ಈ ಮೂರರ ನಡುವಿನ ಅಂತರ್‌ ಪ್ರಕ್ರಿಯೆಗಳಿಂದ.” (೧೯೮೬:೬). ಈ ಮಾತಿನಲ್ಲಿ ತಥ್ಯವಿದೆ. ಕಲಾಕೃತಿಗಳು ಶೂನ್ಯದಿಂದ ಉದ್ಭವಿಸಲಾರವು. ಅವು ಕಾಲ-ದೇಶಕ್ಕೆ ಬದ್ಧವಾಗಿದ್ದುಕೊಂಡೇ ಹಠದಿಂದ ಅವನ್ನು ಮೀರುತ್ತವೆ. ಇಂಥ ಕಡೆ ಕಲಾಕೃತಿಯ ಅರ್ಥವೂ ಬರಹಗಾರನ ಘೋಷಿತ ಸೈದ್ಧಾಂತಿಕತೆಯನ್ನು ಮೀರಿಯೂ ಕೆಲಸ ಮಾಡಿಬಿಡುತ್ತದೆ. ಹಾಗಾದಾಗಿ ಅದಕ್ಕೆ ಬರಹಗಾರನೊಂದಿಗೆ ಏನೂ ಸಂಬಂಧವಿಲ್ಲವೆಂದು ಅರ್ಥವಲ್ಲ. ಆ ಸಂಬಂಧದ ಸ್ವರೂಪ ತುಂಬ ಗಹನವಾದುದು, ಸಂಕೀರ್ಣವಾದುದು ಎಂದು ಅರ್ಥ. ಸಮಕಾಲೀನ ಸಾಹಿತ್ಯ ವಿಮರ್ಶೆಯಲ್ಲಿ ಇದನ್ನು ಗಮನಿಸಿಕೊಳ್ಳಬೇಕಾದ್ದು ಅಗತ್ಯವೂ ಹೌದು. ಏಕೆಂದರೆ ಕನ್ನಡ ಸಾಹಿತ್ಯದಲ್ಲಿ ಈಚೆಗೆ ಕೃತಿಕಾರನ ಮತ್ತು ಕೃತಿಯ ಸಂಬಂಧವನ್ನು ಬಹಳ ನೇರವಾದುದು-ಸರಳವಾದುದು ಎಂದೆಲ್ಲಾ ಭಾವಿಸಲಾಗುತ್ತದೆ. ಆ ಮೂಲಕ ಕಲಾಕೃತಿಯ ಅನನ್ಯತೆಯನ್ನು ಮರೆಯಲಾಗುತ್ತಿದೆ. ಸಮಕಾಲೀನ ಸಾಹಿತ್ಯ ವಿಮರ್ಶಕನಿಗೆ ಧನಾತ್ಮಕವಾಗಿ ಸಹಕರಿಸುವ ಅಂಶವೂ ಇಲ್ಲೇ ಇದೆ. ಅದೆಂದರೆ ಕೃತಿಕಾರನ ಪೂರ್ವಾಪರ ವಿಷಯಗಳೂ ವಿಮರ್ಶಕನಿಗೆ ತಿಳಿದಿರುತ್ತವೆ. ಈ ತಿಳಿವನ್ನು ವಿಮರ್ಶೆಯಲ್ಲಿ ಬಳಸಿಕೊಳ್ಳುವುದೇ ಜಾಣತನವಾದೀತು. ಇಲ್ಲಿ ಗಮನಿಸಬೇಕಾದ ಅಂಶಗಳು ನಾಲ್ಕು :

1. ಕಲಾಕೃತಿಯೊಂದು ಹುಟ್ಟಿಕೊಂಡ ಕಾಲ;
2. ಕಲಾಕೃತಿಯ ಸೃಷ್ಟಿಕರ್ತನ ವರ್ಗ ಇಲ್ಲವೇ ಜಾತಿ;
3. ಕಲಾಕೃತಿಯೊಂದು ಹುಟ್ಟಿಕೊಂಡ ಪ್ರದೇಶ;
4. ಕಲಾಕೃತಿಯನ್ನು ಸೃಷ್ಟಿಸಿದವರ ವ್ಯಕ್ತಿತ್ವ

ಇದರಲ್ಲಿ ಯಾವುದಾದರೂ ಒಂದರಲ್ಲಿ ಬದಲಾವಣೆಯಾದರೂ ಆ ಕೃತಿಯಲ್ಲಿ ಬದಲಾವಣೆಯಾಗುತ್ತದೆ. ಹಾಗೇ ಈ ಪರಿಸರದ ಅನುಭವಗಳನ್ನು ಕಲಾಕೃತಿಯಾಗಿಸುವುದರಲ್ಲಿಯೇ ಆ ಪ್ರಕಾರದ ಅನನ್ಯತೆಯೂ ಇದೆ. ಕಲಾಕೃತಿಯ ಅರ್ಥವನ್ನು ಬಗೆಯುವಾಗ ಅವನ್ನು ನೆನಪಿಸಿಕೊಳ್ಳಬಹುದು, ಇಲ್ಲವೇ ಅವುಗಳ ಸಹಾಯದಿಂದ ಹೊಸ ಬಗೆಯ ಅರ್ಥವನ್ನು ದೋಚಬಹುದು.

ವಾಸ್ತವವಾಗಿ ಹೀಗೆಂದು ಹೇಳಿಕೊಂಡು ಬರದಿದ್ದರೂ ಕನ್ನಡ ವಿಮರ್ಶೆಯಲ್ಲಿ ಈ ಕೆಲಸವನ್ನು ಮೊದಲಿನಿಂದಲೂ ಮಾಡಿಕೊಂಡು ಬರಲಾಗಿದೆ. 'ಮೈಸೂರು ಕಡೆ', 'ಮಂಗಳೂರು ಕಡೆ' ಎಂದು ಗುರುತಿಸಿದಾಗ ಅಲ್ಲಿ ಪ್ರದೇಶವನ್ನು: ಹಳೆಗನ್ನಡ ಹೊಸಗನ್ನಡ ಎಂದೆಲ್ಲಾ ಹೇಳಿದಾಗ ಅಲ್ಲಿ ಕಾಲವನ್ನು: 'ದಲಿತ' ಎಂದಾಗ ಜಾತಿಯನ್ನು 'ವಿಶ್ವವಿದ್ಯಾನಿಲಯದ ಅಧ್ಯಾಪಕ ವರ್ಗ' ಎಂದಾಗ ಗಮನದಲ್ಲಿರಿಸಿಕೊಳ್ಳಲಾಗಿದೆ. ಇವೆಲ್ಲ ಅಂಶಗಳನ್ನು ಕೃತಿವಿಮರ್ಶೆಗೆ ಬಳಸಿಕೊಂಡದ್ದು ವೃತ್ತಿಯನ್ನು ಮಾತ್ರ ಕಡಮೆ.

ಕಲಾಕೃತಿಯ 'ರೂಪ' (form)ದ ಮೇಲೆ, ಮೇಲೆ ಹೇಳಿದ ಅಂಶಗಳೆಲ್ಲ ಪ್ರಭಾವ ಬೀರುವುದು ಹೌದಾದರೆ, 'ರೂಪ'ದ ಅಧ್ಯಯನ ಮಾತ್ರದಿಂದ ಕಾಲ, ದೇಶ, ವ್ಯಕ್ತಿ ಮತ್ತು ವೃತ್ತಿಗಳ ಬಗೆಗೂ ನಾವೂ ತೀರ್ಮಾನಗಳನ್ನು ಕೊಡಲು ಸಾಧ್ಯವಾಗಲೇಬೇಕು. ಸಾಮಾನ್ಯವಾಗಿ ಮಾರ್ಕ್ಸ್ ವಾದಿ ವಿಮರ್ಶಕರು ಈ ಕೆಲಸವನ್ನು ಬಹಳ ಚೆನ್ನಾಗಿ ನಿರ್ವಹಿಸುತ್ತಾರೆ. ಅವರು ರೂಪವನ್ನು ಅಂತಿಮವೆಂದು ಭಾವಿಸುವುದಿಲ್ಲ. ಬದಲು 'ರೂಪ'ದಿಂದ ಅಂತಿಮವಾಗಿ ಸಮಾಜದ ಕಡೆ ಬಾಚಿಕೊಳ್ಳುತ್ತಾರೆ ಅಥವಾ ಯಾವ ಸಮಾಜವು ಆ ರೂಪವನ್ನು ಸೃಷ್ಟಿ ಮಾಡಲು ಸಾಧ್ಯ ಎಂಬ ಪ್ರಶ್ನೆಯನ್ನಾದರೂ ಕೇಳಿಕೊಳ್ಳುತ್ತಾರೆ. ಈ ಅರ್ಥದಲ್ಲಿ ಸಾಹಿತ್ಯ ವಿಮರ್ಶೆಯ ಸಮಕಾಲೀನ ಸಮಾಜದ ವಿಮರ್ಶೆಯೂ ಆಗಿಬಿಡುತ್ತದೆ. ಕೃತಿಯ ಅರ್ಥವನ್ನು ಕೊಳ್ಳೆ ಹೊಡೆಯಲು ಬೇಕಾದ ಸಾಹಿತ್ಯೇತರ ವಿಚಾರಗಳನ್ನು ಇಲ್ಲಿ ಬಳಸಿಕೊಳ್ಳಲಾಗುವುದು. ಪ್ರಸ್ತುತ ಕೃತಿಯಲ್ಲಿ ಸ್ಕೂಲವಾಗಿ ಇಂಥ ಪ್ರಯತ್ನ ಮಾಡಲಾಗಿದೆ.

MORE FEATURES

ಪ್ರವಾಸಿ ಸಾಹಿತ್ಯದಲ್ಲಿ ಆಶಾದಾಯಕ ಬೆಳವಣಿಗೆಯನ್ನು ಮೂಡಿಸುವ ಕೃತಿಯಿದು

17-10-2024 ಬೆಂಗಳೂರು

“ಪ್ರವಾಸ ಸಾಹಿತ್ಯ ಬರಹಗಾರನ ಕೌಶಲ್ಯತೆಯಿಂದ ಇಲ್ಲಿಯವರೆಗೆ ಏಕತಾನತೆಯ ಏಕಮುಖದ ದಿಕ್ಕನ್ನು ತಪ್ಪಿಸಿ ಎಲ್ಲಾ ದಿಕ್ಕ...

ಕೆನಡಾದಲ್ಲಿರುವ ಅಚ್ಚ ಕನ್ನಡಿಗ ಲೇಖಕ ಡಾ. ರಾಮಭಟ್ ಬಾಳಿಕೆ

17-10-2024 ಬೆಂಗಳೂರು

"ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಮುನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಪ್ರಕಟಿಸಿದರು. ಅನೇಕ ವಿಜ್ಞಾ...

ಓದಿಯೇ ಅನುಭವಿಸಬಹುದಾದ ಒಂದೊಳ್ಳೆಯ ಶುದ್ಧವಾದ ಪ್ರೇಮ

16-10-2024 ಬೆಂಗಳೂರು

"ವಿರಹದ ತಕ್ಕಡಿ ಹಿಡಿದು ತೂಗಲು, ಸಂಜೆಯ ಹೊತ್ತಿಗೆ ನೆನಪು ಮಾಡಿಕೊಂಡು ಕನಸು ಕಾಣಲು, ಎಷ್ಟು ಪ್ರೀತಿಸ್ತೀನಿ ಅಂತ ಅ...