ಪ್ರೀತಿಗೇಕೆ ಪರಿಭಾಷೆ? 


''ನಮ್ಮ ಭಾರತೀಯ ಸಿನಿಮಾಗಳಲ್ಲಿ ಮತ್ತು ಸಾಹಿತ್ಯದಲ್ಲಿ ತೋರಿಸುವಂತೆ ಅಲ್ಲಿಯೂ ಪ್ರೀತಿ ಎನ್ನುವುದು ಒಂದು ಭಾವುಕ ಜೀವಿಗಳ ಕಾಲ್ಪನಿಕ ಪ್ರಪಂಚವೇ? ಅವರ ಸಂಗೀತ ಮತ್ತು ಸಾಹಿತ್ಯದ ವಸ್ತುಗಳು ಏಕೆ ನಮ್ಮಂತೆ ಬರೀ ಲವ್‌ ಸ್ಟೋರೀಸ್‌ ಆಗಿರುವುದಿಲ್ಲ? ಇತರೆ . ಬಹಳಷ್ಟು ಸಲ ಹೆಚ್ಚಿನ ವ್ಯತ್ಯಾಸವೇನೂ ಕಾಣುವುದಿಲ್ಲ. ಊಟ, ನಿದ್ದೆಗಳಷ್ಟೇ ಸಹಜವಾದ ಪ್ರೀತಿ, ವಿಭಿನ್ನ ಪರಿಸರಗಳಲ್ಲಿಯೂ ತನ್ನ ಮೂಲ ಪ್ರಕೃತಿಯನ್ನು ಕಾಯ್ದು ಕೊಂಡಿದೆ ಎಂದೇ ಅನಿಸುತ್ತದೆ,'' ಎನ್ನುತ್ತಾರೆ ಲೇಖಕಿ ಪೂರ್ಣಿಮಾ ಮಾಳಗಿಮನಿ. ಅವರು ತಮ್ಮ ‘ಲವ್ ಟುಡೆ’ ಕೃತಿಗೆ ಬರೆದ ಲೇಖಕಿಯ ನುಡಿ ನಿಮ್ಮ ಓದಿಗಾಗಿ.

ನಮ್ಮದಲ್ಲದ ಬೇರೊಂದು ಸಮಾಜದ ಅಥವಾ ನಾಗರಿಕತೆಯ ಪುಸ್ತಕವನ್ನು ಓದುವಾಗ, ಅಥವಾ ಸಿನಿಮಾ ನೋಡುವಾಗ, ಅಥವಾ ವಿದೇಶ ಪ್ರಯಾಣ ಕೈಗೊಂಡಾಗ ನನಗೆ ಕುತೂಹಲ ಕೆರಳಿಸುವ ವಿಚಾರಗಳೆಂದರೆ ಅಲ್ಲಿನವರು ಪ್ರೀತಿ, ಪ್ರೇಮ, ಪ್ರಣಯ ಮುಂತಾದ ವಿಚಾರಗಳನ್ನು ಹೇಗೆ ನೋಡುತ್ತಾರೆ? ಹೇಗೆ ಒಬ್ಬರು ಮತ್ತೊಬ್ಬರಿಗೆ ತಮ್ಮ ಮನದಾಳದ ಮಾತನ್ನು ಹೇಳಿಕೊಳ್ಳುತ್ತಾರೆ? ನಮ್ಮ ಭಾರತೀಯ ಸಿನಿಮಾಗಳಲ್ಲಿ ಮತ್ತು ಸಾಹಿತ್ಯದಲ್ಲಿ ತೋರಿಸುವಂತೆ ಅಲ್ಲಿಯೂ ಪ್ರೀತಿ ಎನ್ನುವುದು ಒಂದು ಭಾವುಕ ಜೀವಿಗಳ ಕಾಲ್ಪನಿಕ ಪ್ರಪಂಚವೇ? ಅವರ ಸಂಗೀತ ಮತ್ತು ಸಾಹಿತ್ಯದ ವಸ್ತುಗಳು ಏಕೆ ನಮ್ಮಂತೆ ಬರೀ ಲವ್‌ ಸ್ಟೋರೀಸ್‌ ಆಗಿರುವುದಿಲ್ಲ? ಇತರೆ ಇತರೆ. ಬಹಳಷ್ಟು ಸಲ ಹೆಚ್ಚಿನ ವ್ಯತ್ಯಾಸವೇನೂ ಕಾಣುವುದಿಲ್ಲ. ಊಟ, ನಿದ್ದೆಗಳಷ್ಟೇ ಸಹಜವಾದ ಪ್ರೀತಿ, ವಿಭಿನ್ನ ಪರಿಸರಗಳಲ್ಲಿಯೂ ತನ್ನ ಮೂಲ ಪ್ರಕೃತಿಯನ್ನು ಕಾಯ್ದು ಕೊಂಡಿದೆ ಎಂದೇ ಅನಿಸುತ್ತದೆ.

ಸ್ಮಾರ್ಟ್‌ ಫೋನ್‌ ಇಲ್ಲದ ಕಾಲದ ಪ್ರೇಮಿಗಳು `ಬೆಳ್ಳಿ ಮೋಡವೇ, ಎಲ್ಲಿ ಓಡುವೆ? ನನ್ನ ಬಳಿಗೆ ಅರಸಿ ಬಾ... ನನ್ನ ನಲ್ಲನ ಕಂಡು ಈ ಕ್ಷಣ ನನ್ನ ಒಲವ ತಿಳಿಸಿ ಬಾ...' ಎಂದು ಮೇಘದೂತನಲ್ಲಿ ಬೇಡಿಕೊಳ್ಳುವುದು, ಬೇರೆ ಬೇರೆ ಊರು ಕೇರಿಗಳಲ್ಲಿ ನೆಲೆಸಿರುವ ಪ್ರೇಯಸಿ ಪ್ರಿಯತಮರು ಹುಣ್ಣಿಮೆಯ ರಾತ್ರಿಯ ಚಂದ್ರನ ಮೇಲೆ ಒಟ್ಟಿಗೇ ಕಣ್ಣುಗಳನ್ನು ನೆಟ್ಟು ಮೈ ಮರೆಯುವುದು, `ಈ ಪತ್ರದೊಂದಿಗೆ ನನ್ನ ಹೃದಯವನ್ನೂ ಕಳಿಸಿರುವೆ' ಎಂದು ಬರೆಯುವುದು, `ನಿನ್ನ ಸೋಕಿ ಬಂದ ಗಾಳಿ ನನ್ನ ಮೈ ಸುಡುತಿದೆ' ಎನ್ನುವುದೆಲ್ಲಾ ಸ್ಮಾರ್ಟ್‌ ಫೋನಿನಲ್ಲೇ ಮುಳುಗಿ ಸಾಯುವ ಇಂದಿನ ಪ್ರೇಮಿಗಳಿಗೆ ಉತೇಕ್ಷೆಯಷ್ಟೇ ಅಲ್ಲ, ಇಲ್ಲಾಜಿಕಲ್‌ ಅನಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಅಭಿವ್ಯಕ್ತಿ ಮತ್ತು ಸಂವಹನ ಬಹಳ ಸುಲಭವಾಗಿರುವ ಇಂದಿನ ಕಾಲದಲ್ಲಿ ಪ್ರೀತಿಯ ಸ್ವರೂಪ ಬದಲಾಗಿದೆಯೇ? ಇಂದಿನ ಕಾಲದ ತರುಣ ತರುಣಿಯರು ಹೆಚ್ಚು ಭಾವುಕತೆಯಿಂದ ಬಳಲದೆ ಪ್ರಾಕ್ಟಿಕಲ್‌ ಆಗಿದ್ದಾರೆಯೇ? ಮೊದಲ ಕ್ರಶ್‌ ನೆನಪಿನಲ್ಲೇ ಜೀವನ ಸವೆಸಿ ಸತ್ತ ಹುಡುಗನೊಬ್ಬನ ಕತೆ ಹಾಸ್ಯಾಸ್ಪದ ಅನಿಸಬಹುದೇ? ಸತ್ತು ಹೋದ ಪ್ರೇಮಿಯ ತದ್ರೂಪು ಆದ ರೋಬೋಟ್‌ ಭಾವನಾತ್ಮಕವಾಗಿ ಬೆಸೆದುಕೊಳ್ಳಬಹುದೇ? ಎಲ್ಲದಕ್ಕೂ ಪರಿಹಾರ ಹುಡುಕಿಕೊಳ್ಳುವ ಮನುಷ್ಯ ನಿಜವಾಗಿಯೂ ಒಂದು ಬೊಗಸೆ ಪ್ರೀತಿಗೆ ಹಾತೊರೆಯುವುದನ್ನು ನಿಲ್ಲಿಸುತ್ತಾನೆಯೇ? ತನ್ನ ಪ್ರೇಮಿ ವಂಚಿಸುತ್ತಿರುವ ವಿಷಯ ತಿಳಿದಾಗ ಅಥವಾ ಮಾರಣಾಂತಿಕ ರೋಗಕ್ಕೆ ಬಲಿಯಾಗಿರುವಾಗ, ಇದ್ದಕ್ಕಿದ್ದಿಂತೆ ವೈರಾಗ್ಯ ಹುಟ್ಟಿ ಕಾರಣವನ್ನೂ ಹೇಳದೆ ಬಿಟ್ಟೇ ಹೋದಾಗ, ಲಿವ್‌-ಇನ್‌ ಓಕೆ, ಆದರೆ ಮದುವೆಯಾಗಲಾರೆ ಎಂದು ನಿರಾಕರಿಸಿದಾಗ ಇಂದಿನ ಯುವಜನತೆಗೆ ನಿಜಕ್ಕೂ ಪ್ರಪಂಚ ಮುಳುಗಿ ಹೋಗುತ್ತದೆಯೇ? ಪ್ರೀತಿಯಲ್ಲಿ ರಿಜೆಕ್ಷನ್‌ ಅನ್ನು ಒಪ್ಪಿಕೊಳ್ಳುವುದು, ಕೈಗೆಟುಕದ ಮುಗಿಲಮಲ್ಲಿಗೆಯನ್ನು ಮರೆಯುವುದು, ಮರೆತು ಮೂವ್‌ ಆನ್‌ ಆಗುವುದು ಇತರೆ, ಮಾನಸಿಕ ತಜ್ಞರ ಜೊತೆ ಕಳೆದ ನಾಲ್ಕಾರು ಘಂಟೆಗಳ ಕೌನ್ಸೆಲಿಂಗ್‌ ನಿಂದ ಸುಲಭವಾಗಿಬಿಟ್ಟಿದೆಯೇ? ಹೊಸದಾಗಿ ಮನೆ ಕಟ್ಟಿಸಿದ ನವ ದಂಪತಿಗಳು ಅಡಿಗೆ ಮನೆ ಕಟ್ಟಿಸುವುದು ಬೇಡವೆಂದು ಅಥವಾ ಮಕ್ಕಳು ಬೇಡವೇ ಬೇಡ ತಿರುಗಾಡಿಕೊಂಡಿರೋಣ ಎನ್ನುವುದು ಅತಿಶಯೋಕ್ತಿಯೇ? ಹೋಮೊಫೋಬಿಯಾ ನಿಧಾನವಾಗಿ ದೂರವಾಗುತ್ತಿದೆಯೇ?

ಈ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ ಇಂದಿನ ಕಾಲದ ಪ್ರೇಮಕತೆಗಳನ್ನು ಬರೆಯಲು ಕೂತೆ. ಬರೆದಂತೆಲ್ಲಾ ಸಿಕ್ಕ ಉತ್ತರಗಳು ಉತ್ತರಗಳಾಗಿರಲಿಲ್ಲ. ಬದಲಿಗೆ ಪ್ರೀತಿಯನ್ನು ಅರ್ಥೈಸಿಕೊಳ್ಳುವುದು, ಅದನ್ನೊಂದು ಪರಿಭಾಷೆಯಲ್ಲಿ ಬಂಧಿಸ ಹೋಗುವುದು, ಕಾಲಕ್ಕೆ ತಕ್ಕಂತೆ ಪ್ರೀತಿಯೂ ಬದಲಾಗುತ್ತದೆಯೇ ಎಂದು ಸರ್ವೇ ಮಾಡುವುದು ಈ ಪ್ರಪಂಚದಲ್ಲೇ ಪರಮ ಮೂರ್ಖತೆಯ ಕೆಲಸವೆನ್ನುವ ಅರಿವು ಮೂಡಿತು.

ಆದರೂ ಬರೆದೆ!

ಇಂದಿನ ಕಾಲಘಟ್ಟದ ಕತೆಗಳು ಸಂಭವಿಸುವ ಪರಿಸರವನ್ನು ಆಧುನಿಕಗೊಳಿಸಿದ ಮಾತ್ರಕ್ಕೆ ಇಂದಿನ ಕತೆಗಳಾಗುವುದಿಲ್ಲ ಎನ್ನುವ ಅರಿವಿನಿಂದಲೇ ಬರೆಸಿಕೊಂಡ ಈ ಕತೆಗಳಲ್ಲಿ ಎಂದಿನಂತೆ ನಾನು ಸೃಷ್ಟಿಸಿರುವ ಪಾತ್ರಗಳು ಕಪ್ಪು ಬಿಳಿ ಪಾತ್ರಗಳಲ್ಲ. ಸರಿ-ತಪ್ಪುಗಳು, ಮೌಲ್ಯಗಳು, ಸತ್ಯವೇ ಸುಂದರ, ಏಳೇಳು ಜನುಮದ ಲವ್‌ ಎಂದೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ಈ ಪಾತ್ರಗಳ ವಿಚಾರಗಳು, ನಂಬಿಕೆಗಳು, ಯೋಚಿಸುವ ಪರಿ, ಆರ್ಥಿಕ ಸ್ವಾತಂತ್ರ್ಯವಿರುವ ಪ್ರೇಮಿಗಳ ಪರಸ್ಪರ ಅಗತ್ಯಗಳು, ಅನಿವಾರ್ಯತೆಗಳು, ಆದರ್ಶಗಳು, ಗುರಿ, ಜೀವನೋದ್ದೇಶಗಳು ಎಲ್ಲವೂ ಕಾಲಕ್ಕೆ ತಕ್ಕಂತೆ ಬದಲಾಗಿರುವುದನ್ನು ಕಾಣಬಹುದು. ನಮ್ಮ ಕಾಲದ ಕತೆಗಳನ್ನು ಬರೆಯುವಲ್ಲಿ ಹೆಚ್ಚು ಕಂಫರ್ಟ್‌ ಕಂಡುಕೊಳ್ಳುವ ನನಗೆ ಈ ಕತೆಗಳನ್ನು ಬರೆಯುವ ಪ್ರಕ್ರಿಯೆ ಬಹಳ ಖುಷಿ ಕೊಟ್ಟಿದೆ.

ಎಂದಿನಂತೆ ಸದಾ ಹೊಸದೊಂದು ಟ್ರೆಂಡ್‌ ಹುಟ್ಟುಹಾಕುವ ವಿಚಾರದಿಂದ, ಮೂವರು ಲೇಖಕಿಯರಿಂದ ಒಂದೇ ಪುಸ್ತಕವನ್ನು ಹೊರತರುತ್ತಿರುವ, ಪ್ರೀತಿಯಿಂದ ಬರೆಸಿದ ಜಮೀಲ್‌ ಸಾವಣ್ಣ ಅವರಿಗೆ ಆಭಾರಿ!

ಇನ್ನು ಓದುವ ಖುಷಿ ನಿಮ್ಮದಾಗಲಿ!

-ಪೂರ್ಣಿಮಾ ಮಾಳಗಿಮನಿ

MORE FEATURES

ಒಂದು ಕಾಲದ ಯುಗಧರ್ಮವು ಎಲ್ಲ ಕಾಲಕ್ಕೂ ಸಲ್ಲಬೇಕೆಂದೇನೂ ಇಲ್ಲ

01-05-2025 ಬೆಂಗಳೂರು

“ಒಟ್ಟು ಕಾದಂಬರಿಯಲ್ಲಿ ಕಾಲಾವಧಿಯನ್ನು (ಟೈಮ್ ಲ್ಯಾಪ್ಸ್) ನಿರ್ವಹಿಸುವಲ್ಲಿ ಲೇಖಕರು ಇನ್ನಷ್ಟು ಜಾಣೆ ತೋರಬೇಕಿತ್...

ಆಧುನಿಕ ಮೈಸೂರು ರಾಜ್ಯದ ರೂವಾರಿ ಹೈದರಾಲಿ

01-05-2025 ಬೆಂಗಳೂರು

“ಬೃಹತ್ ಆಕರ ಗ್ರಂಥಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿ ಇರುವ ಸಾರವನ್ನು ಹೀರಿ ತಮ್ಮದೇ ದಾಟಿಯಲ್ಲಿ ಓದುಗರಿಗೆ ಉಣಬಡ...

ಸಂಶೋಧನಾ ವಿದ್ಯಾರ್ಥಿಗಳಿಗೆ ಒಂದು ಸಮೃದ್ಧ ಆಕರ ಗ್ರಂಥ

30-04-2025 ಬೆಂಗಳೂರು

"ಪ್ರತಿಯೊಂದು ಲೇಖನವು ಕೃತಿಯ ಸಂಕ್ಷಿಪ್ತ ವಿವರಣೆಯನ್ನು ಕೊಟ್ಟು ಕಾದಂಬರಿಯ ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಅದರ ...