"ಕವಿಯ ಸಕಾರಾತ್ಮಕ ದೃಷ್ಟಿ ಸೃಷ್ಟಿ ಚಿಂತನೆ, ಸಂವೇದನೆ, ಅಭಿವ್ಯಕ್ತಿಯಲ್ಲಿ ತೋರುವ ಲಯಬದ್ಧ ಉತ್ಸಾಹಗಳಿಂದ ಅಭಿವ್ಯಕ್ತಿ ಕಳೆಗಟ್ಟಿದೆ. ನವೋತ್ತರ ಮುಕ್ತ ಛಂದಸ್ಸಿನ ಸಂಯೋಗ ಚಂದಗೊಳಿಸಿದೆ ಜೀವನೋತ್ಸಹ ಹಾಡು ಹಬ್ಬವಾಗಿ ಮರು ಸೃಷ್ಟಿಯಾಗಿದೆ" ಎನ್ನುತ್ತಾರೆ ಹಿರಿಯ ಸಾಹಿತಿ ಮಹಾಲಿಂಗ ಮಂಗಿ . ಅವರು ಲೇಖಕ ಅಂಬರೀಷ್ ಎಸ್. ಪೂಜಾರಿ ಅವರ ‘ಕಾವ್ಯ ಕಾರಣ’ ಕವನ ಸಂಕಲನಕ್ಕೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...
ಬದಲಾವಣೆಯೇ ನಿಸರ್ಗ ನಿಯಮ! ಪರಿವರ್ತನೆಯೇ ಸಂಸ್ಕೃತಿಯ ನಿಲುವು ನೀತಿ. ಇದುವೇ ಜೀವನದ ಆಶಯ ಸಂದೇಶ. ದಾನವ ಮಾನವನಾಗಬೇಕು ಮಹಾ ಮಾನವನಾಗಿ ಮಹಾದೇವನಾಗಬೇಕೆಂಬ ಮೋಹನ್ನತಿ-ಮಹೋದ್ದೇಶ ಸಾಹಿತ್ಯದ ಗುರಿಯಾಗಿದೆ. ನಾವುಗಳು ಪ್ರಗತಿಶೀಲ ಕವಿಗಳಾಗಿರುವಂತೆ ಅಂಬರೀಷ ಪೂಜಾರಿ ಪರಿವರ್ತನಾಶೀಲ ಕವಿ. ಅದೇ ಅವರ ಕಾವ್ಯದ ಸಕಾರಾತ್ಮಕ ಆದರ್ಶ ಮತ್ತು ವೃತ್ತಿ ಪ್ರವೃತ್ತಿ ಕೂಡ.
ಮನುಷ್ಯ ಪರಿಸರದ ಶಿಶು. ಉನ್ನತಿಗೆ ಅವನತಿಗೆ ಆತ -ಆಕೆ ಬೆಳೆದು ಬಂದ ಪ್ರಕೃತಿ ಮತ್ತು ವಾತಾವರಣ ಸಮುದಾಯ ಕೂಡ ಪರೋಕ್ಷ ಕಾರಣ. ಯಾರು ಹುಟ್ಟಿನಿಂದ ನೀಚರು ಪಾತಕಿಗಳಾಗಿರುವುದಿಲ್ಲ. ಸಮಾಜ ಮನುಷ್ಯನ ಮನಸ್ಸನ್ನು ರೂಪಿಸುತ್ತದೆ. ಪರಿಸ್ಥಿತಿ ಪ್ರಸಂಗ ಕೂಡ ಪ್ರಚೋದಿಸುತ್ತದೆ. ಯಾವತ್ತು ಎಲ್ಲಾ ಕಾಲಕ್ಕೂ ಯಾರೆಲ್ಲ ಕೆಟ್ಟವರಾಗಿರುವುದಿಲ್ಲ. ತಪ್ಪಿನ ಅರಿವು ಮೂಡಿಸಿ ಪಶ್ಚಾತ್ತಾಪ ಪ್ರಾಯಶ್ಚಿತಗಳಿಂದ ಸಾಧಕ -ಭಾದಕ, ಸತ್ಸಂಗ ಸಂಸ್ಕಾರಗಳಿಂದ ಪರಿವರ್ತನೆ ತರಲು ಸಾಧ್ಯವೆಂಬ ಆತ್ಮವಿಶ್ವಾಸದ ಮೂಲಕ ಅಂಬರೀಷರು ಕಾವ್ಯದಲ್ಲೂ ಪ್ರತಿಪಾದಿಸುತ್ತ ಕೃತಿಯಲ್ಲೂ ಪ್ರವರ್ತವಾಗುತ್ತಾರೆ. ತಿಳಿ ನೀಲ ಮುಗಿಲ ಮೇಲೆ/ಕಪ್ಪು ಮೋಡ ಕೆನೆಗಟ್ಟಿಧರಣಿಯಡೆಗೆ (ಪರಿಶುದ್ಧ) ಧಾರೆಯಾಗಲು-ಕವಿತೆ ಬರೆಯುತ್ತೇನೆ ಎನ್ನುತ್ತಾರೆ ಕವಿ.
ಸೋತ ಮನದ ಸರತಿ ಸಾಲಿಗೆ
ತಟ್ಟೆ ತುಂಬ ಅನ್ನ ನೀಡಿ
ಹೊಟ್ಟೆ ತುಂಬಿತಾ?
ಕೇಳುವೆ, ಮನಸ್ಸು ತುಂಬಿ
ಊಟ ಬಿಟ್ಟವನಿಗೆ
ರಮಿಸಿ ಉಣಿಸುವೆ
ಅನ್ನ ಕೇಳಿದವನಿಗೆ
ಕೇಳಿದಷ್ಟು ನೀಡಿ ಕಳಿಸುವೆ (ಅನ್ನದ ಮಾತಿದು)
ಮಾನವೀಯತೆಯಿಂದ ಕೈದಿಗಳ ಹೊಟ್ಟೆಗೆ ಅನ್ನ ಹಾಕುತ್ತಲೇ ಅವರ ನೆತ್ತಿ ಮಸ್ತಕಕ್ಕು ಜ್ಞಾನದ ಹಸಿವು ಹಿಂಗಿಸಿ, ಕ್ಷಮಿಸಿ ಮನವೊಲಿಸಿ ತಿದ್ದಬಲ್ಲ ಸಹೃದಯಿಗಳು ನಿಜಕ್ಕೂ ಕಾರಾಗೃಹವಲ್ಲ ಸುಧಾರಣಾ ನಿಲಯವಿದು. ವರ್ತಮಾನ ಪತ್ರದಂತೆ ಸಮಾಜದ ಪ್ರತ್ಯಕ್ಷ ವಾಸ್ತವ ನಿರೂಪಣೆ ಮಾತ್ರ ಅಲ್ಲ-ಸಾಹಿತ್ಯವದು ನವ ಸಮಾಜದ ನಿರ್ಮಾಣಕ್ಕೆ ದಿಕ್ಸೂಚಿಯಾಗಿ ಸರ್ವಂಗ ಸುಂದರಗೊಳಿಸುವ ರೂಪ ಕೊಡುವ ಹೊಣೆಗಾರಿಕೆ ಇದೆ. ಸಾಹಿತ್ಯಕತೆ ಎಂದರೆ ಸಮುದಾಯದ ಸರ್ವಾಂಗಿನ ಉನ್ನತಿಗೆ ಸರ್ವತೋಮುಖ ಅಭಿವೃದ್ಧಿಗೆ ಪ್ರೇರಣೆ ನೀಡುವುದಾಗಿದೆ. ಕಾವ್ಯ ಕಾರಣದಲ್ಲಿ ಸಮಾಜದಿಂದ ಅಲಕ್ಷಿಸಲ್ಪಟ್ಟ ಕಾರಾಗೃಹ ಹೊಸ ತರಹದ ವ್ಯಾಖ್ಯಾನ ಪಡೆದಿದೆ.
ಬಂದಿಗಳ ಬಂದಿಸಿಡುವ
ಬಂಧನದ ಬಂದಿನಾನಲ್ಲ!
ಸವೆದ ಸಂಬಂಧ /ಮಾಸಿದ ಮನಸ್ಸುಗಳ /ಬತ್ತಿದ ಭಾವ
ಆರಿದ ಆಸೆಗಳ/ ಮರಳಿ ಅರಳಿಸುವ ಸರಳು ನಾ.( ಕಾರಾಗೃಹ)
ಜೈಲರ್ ದೃಷ್ಟಿಯಲ್ಲಿ ಜೈಲನ್ನು ನೋಡಿ ಅನುಭವದಿಂದ ಅಂಬರೀಷರು ಹೇಳುತ್ತಾರೆ.
ಜೈಲೊಳಗೆ ಕಾಲಿಟ್ಟ
ಮುಖಗಳನ್ನು ದಿಟ್ಟಿಸುತ್ತಿರುವೆ
ಅದೆಷ್ಟು ತರೇವಾರಿ ನೋಟಗಳು.!
ತಮ್ಮ ವೃತ್ತಿಯನ್ನು ತುಂಬಾ ಸೂಕ್ಷ್ಮವಾಗಿ ಆಳವಾಗಿ ಯೋಚಿಸಿ ಸರಳವಾಗಿ ಹೇಳುತ್ತಾ
ಸರಳನು ನುಕಿ
ಬಾಗಿಲು ಹಾಕಿ
ಕಾವಲು ಕಾಯುವೆ
ಗೋಡೆಯ ಕಟ್ಟಿ
ಗೊಡವೆಯ ಮೆಟ್ಟಿ
ಮನಸುಗಳ ಬೆಸೆಯುವೆ...
ಬೆಳಕನ್ನು ಕತ್ತಲೆಯೊಳಗೆ
ಹೊಸತನ ಬಂಧನದೊಳಗೆ
ಹುಡುಕುತಲಿರುವ ಜೈಲರ್ ನಾನು.!
ಅಂಬರೀಷರ ಕಾವ್ಯ ಕಾರಣದಲ್ಲಿ ಜೈಲು ಕಾವ್ಯರೂಪದಲ್ಲಿ ಅನಾವರಣಗೊಳುವ ಜೊತೆ ಜೊತೆಗೆ ಹಬ್ಬಗಳನ್ನು ವಸ್ತುವಾಗಿಸಿ ಕವನಗಳ ಮೂಲಕ ಆಕೃತಿ ಕೊಡುವ ಪ್ರಯತ್ನವೂ ಇಲ್ಲಿದೆ. ಇಲ್ಲಿ ನಾಡ ಹಬ್ಬಗಳೆಲ್ಲ ಹಾಡು ಗಬ್ಬಗಳಾಗಿವೆ 'ಅನು' ಭಾವನೆ ಸಂವೇದನೆ ಹುರಿಗೊಂಡು ಹುಟ್ಟು ಹಾಡಾಗಿವೆ ಬದುಕಿನ ಪಾಡು ಜಗದ ಜನರ ರೀತಿ - ನೀತಿ, ಪಟ್ಟಪಾಡು ಹಾಡಾಗಿ ಮೂಡಿವೆ.
" ಬೇವು ಬೆಲ್ಲ ಒಂದಾಗುವ
ಸಿಹಿ-ಕಹಿ ಸಮನಾಗುವ
ಸಮತೆಯ ಕಾಲ ಸಮಷ್ಟಿಗೆ"( ಯುಗಾದಿ)
ಕೇರಿಯ ಕೊಳ್ಳಿ ಊರಿಗೆ ಹೊತ್ತಿ
ಕಳ್ಳತನದ ಕೊಳ್ಳು ಉರಿಯುತ್ತಿದೆ ಹೊತ್ತಿ.
ಕಾಮದಹನವೆಲ್ಲ ನಿಮಿತ್ಯ ಕಾಮ ಕಥೆಗಳೇ ನಿತ್ಯ ಸತ್ಯ!( ಕಾಮದಹನ )
ಕತ್ತಲೆ ಕಳೆದು ಬೆಳಕು ಬರಲಿ
ಕುಡಿ ತೆಗೆದು ಕಾಂತಿ ಹೊಮ್ಮಲಿ ಹಚ್ಚು ಕಾಂತಿಯ ದೀಪ
ಎದೆಯ ದಾರಿದ್ರ ತೊಳೆದು ಔದಾರ್ಯ ಬರಲಿ
ಮನದ ಆಲಾಸ್ಯ ಆಳಿದು ಉತ್ಸಾಹ ಹೊಮ್ಮಲಿ ಹಚ್ಚು ನಿತ್ಯ ಸತ್ಯ ದೀಪ ( ದೀಪಾವಳಿ)
"ಎಳ್ಳು ಬೆಲ್ಲ ಬೀರುತಿರಲು ಪ್ರೀತಿ ಮಾತಾಗಿದೆ
ಮೊಗವು ಬಿಗುವ ಮಾರುತಿರಲು
ನಗು ಮೊಗತುಂಬಿದೆ "( ಸಂಕ್ರಾಂತಿ )
ದಿನಮಾನ ನಾಲ್ಕು ಕೈ ನೀಡು ಜೊತೆ ಬರುವೆ
ಬಿಗುಮಾನ ಸಾಕು ಕೈ ಒಡ್ದು
ಬನ್ನಿ ನೀಡುವೆ ( ದಸರಾ )
ಅರ್ಥಪೂರ್ಣ ಔಚಿತ್ಯಪೂರ್ಣ ಶಬ್ದ ಸಾಲುಗಳ ಮೂಲಕ ಕಾವ್ಯವು ಘನತೆ ಪಡೆಯುತ್ತದೆ. ಅಂಬರೀಷರು ಸಹೃದಯಿ ಭಾವಜೀವಿ, ಗ್ರಾಮೀಣರ ಮುಗ್ಧತೆ ಪ್ರಾಮಾಣಿಕತೆ ಅವರ ವಸ್ತು ವಿಶೇಷ ನಿಜಕ್ಕೂ ಅವರು ಜನಪರ ಜೀವ ಪರ ಕವಿ.ಅವರ ವಿನಯ ಸೌಜನ್ಯದ ಕುರಿತು ನನಗೆ ಅಪಾರ ಪ್ರೀತಿ ಗೌರವ.
ಕವಿಯ ಸಕಾರಾತ್ಮಕ ದೃಷ್ಟಿ - ಸೃಷ್ಟಿ ಚಿಂತನೆ, ಸಂವೇದನೆ, ಅಭಿವ್ಯಕ್ತಿಯಲ್ಲಿ ತೋರುವ ಲಯಬದ್ಧ ಉತ್ಸಾಹಗಳಿಂದ ಅಭಿವ್ಯಕ್ತಿ ಕಳೆಗಟ್ಟಿದೆ. ನವೋತರ ಮುಕ್ತ ಛಂದಸ್ಸಿನ ಸಂಯೋಗ ಚಂದಗೊಳಿಸಿದೆ ಜೀವನೋತ್ಸಹ ಗೆಯತೆ ಹಾಡು ಹಬ್ಬವಾಗಿ ಮರು ಸೃಷ್ಟಿಯಾಗಿದೆ ಜೀವನಾನುಭವ, ಸಂಬಂಧಗಳು,ಹಬ್ಬ ಹರಿದಿನ, ಹುಟ್ಟುಹಬ್ಬ, ಜವಳ... ಸಾರ್ವತ್ರಿಕ ಸಮುದಾಯಿಕ, ಸಂಸ್ಕೃತಿ ಸಂಸ್ಕಾರಗಳನ್ನು ವೈಯಕ್ತಿಕ ನೆಲೆಯಲ್ಲಿ ವ್ಯಕ್ತಪಡಿಸುವ ಅಭಿವ್ಯಕ್ತಿ ಜೊತೆಗೆ ವೈಯಕ್ತಿಕ ಅನುಭವದ ಆಚರಣೆ ಸಂಭ್ರಮಗಳನ್ನು ಸಾರ್ವತ್ರಿಕಗೊಳಿಸಿ ಖುಷಿ ಹಂಚುವ ಪರಿ ಈ ಕಾವ್ಯದ ವೈಶಿಷ್ಟ ಸಾಮಾಜಿಕ ಕಾಳಜಿ ಕಳಕಳಿಗಳು ಇಲ್ಲಿ ಮನನೀಯವೆನಿಸುತ್ತವೆ.
- ಮಹಾಲಿಂಗ ಮಂಗಿ
"ಎರಡನೆಯವರು ಅನ್ವಯಿಕ ಮನೋವಿಜ್ಞಾನದ ಪ್ರವರ್ತಕರು. ಇವೆರಡು ಮನೋವಿಜ್ಞಾನದ ಎರಡು ಕಣ್ಣುಗಳಿದ್ದಂತೆ. ಪ್ರಸ್ತುತ ಗ್ರ...
“ಈ ರೀತಿಯ ಪ್ರಯೋಗ ಕನ್ನಡ ಸಾಹಿತ್ಯದಲ್ಲಿ ಅತೀ ವಿರಳವಾಗಿರುವಾಗ ಈ ಪ್ರಯೋಗಕ್ಕೆ ಒಂದು ಚಪ್ಪಾಳೆ ಕೊಡಲೇಬೇಕು,&rdq...
“ಪ್ರಣೀತ್, ಪ್ರತೀಕ್ಷಾ ದಕ್ಷ ಆಡಳಿತ ಸೇವೆ, ಜಯ ಚಂದ್ರ ಸಾಗರ್ ಕುಟುಂಬ ಪರಿಚಯ, ರಾಜಕೀಯ ಹಿನ್ನಲೆ, ಮುಂತಾದ ವಿಷಯಗ...
©2025 Book Brahma Private Limited.