ಪನ್ನೇರಳೆ ಬನದಲ್ಲೊಮ್ಮೆ ಸುತ್ತಿಬಂದ ರೋಚಕ ಅನುಭವ


ಲಲಿತ ಪ್ರಬಂಧಕ್ಕೆ ವಿಷಯ ಇಂಥದ್ದೆ ಇರಬೇಕೆಂದಿಲ್ಲ. ದೊಡ್ಡ ದೊಡ್ಡ ವಿಚಾರಗಳನ್ನು ಹೊತ್ತು ತರಬೇಕೆಂದಿಲ್ಲ. ವಿಷಯ ಚಿಕ್ಕದಾದರೂ ನಡೆಯುತ್ತೆ. ಆದರೆ ಅದನ್ನು ನಿರೂಪಿಸುವಲ್ಲಿ ಕುಶಲತೆ ಮೆರೆಯಬೇಕು. ಆಗ ದುಂಬಿಯೊಂದು ಹೂವೊಳಗಿನ ಮಕರಂದ ಹೀರುವಂತೆ ಓದುಗರು ಪ್ರಬಂಧದ ಸಾರವನ್ನು ಸವಿಯುವರು. ಈ ನಿಟ್ಟಿನಲ್ಲಿ ಲೇಖಕರ ಪರಿಶ್ರಮ ಮತ್ತು ಜಾಣ್ಮೆ ಮೆಚ್ಚುವಂತದ್ದು ಎನ್ನುತ್ತಾರೆ ಬರಹಗಾರ್ತಿ ಅನುಸೂಯ ಯತೀಶ್. ಲೇಖಕ ಎಚ್. ಎಸ್. ಸತ್ಯನಾರಾಯಣಯವರ ಪನ್ನೇರಳೆ ಕೃತಿಯ ಬಗ್ಗೆ ಅವರು ಬರೆದ ವಿಮರ್ಶೆ ನಿಮ್ಮ ಓದಿಗಾಗಿ..

ಪ್ರಬಂಧ ಎಂದೊಡನೆ ವೈಚಾರಿಕ ಪ್ರಬಂಧಗಳು, ವೈಜ್ಞಾನಿಕ ಪ್ರಬಂಧಗಳು ಮತ್ತು ವೈಯಕ್ತಿಕವಾದ ಅನುಭವ ಜನ್ಯ ಪ್ರಬಂಧಗಳು ಎಲ್ಲರ ಮೆದುಳೊಳಗೆ ನುಸುಳುವುದು ಸರ್ವೇಸಾಮಾನ್ಯ. ಇವೆಲ್ಲವನ್ನು ಮೀರಿ ತನುಮನಗಳನ್ನು ರಂಜಿಸುವ ಮತ್ತೊಂದು ಪ್ರಬಂಧ ಪ್ರಕಾರವೇ ಲಲಿತ ಪ್ರಬಂಧಗಳು.ಇವು ಲಾಲಿತ್ಯ ಪೂರ್ಣವಾಗಿ ಜನರ ಚಿತ್ತವನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತವೆ. ಓದುಗರ ತುಟಿಯಂಚಲ್ಲಿ ಕಿರುನಗೆಯ ಮಿಂಚೊಂದು ಸುಳಿದು, ಮನದೊಳಗೆ ಹರುಷದ ಅಲೆಯೊಂದು ಚಿಮ್ಮಿದಾಗ ಈ ಬರಹಗಳು ಸಾರ್ಥಕತೆ ಕಾಣುತ್ತವೆ.

ಹಾಸ್ಯ ಬರಹಗಳಲ್ಲಿ ಲಲಿತ ಪ್ರಬಂಧಗಳು ಬಹಳ ಮುಂಚೂಣಿಯಲ್ಲಿರುವ ಸಶಕ್ತವಾದ ಪ್ರಕಾರವೆನ್ನಬಹುದು. ಯಾರು ಸಹನೆ ಮತ್ತು ತಾಳ್ಮೆಯ ಗುಣವನ್ನು ಹೊಂದಿದ್ದು ಗಂಭೀರ ವಿಷಯವನ್ನೂ ಕೂಡ ಸಕಾರಾತ್ಮಕ ಮನೋಭಾವದಿಂದ ನೋಡಿ ಅದರೊಳಗೆ ಅಂತರ್ಗತವಾಗಿರುವ, ಮನಸ್ಸಿಗೆ ಉಲ್ಲಾಸ ಉತ್ಸಾಹ ತುಂಬುವ ಅಂಶಗಳನ್ನು ಹೆಕ್ಕಿ ತೆಗೆದು ಅದನ್ನು ತನ್ನದೇ ಆದ ವಿಶಿಷ್ಟ ರೂಪದಲ್ಲಿ ಬರಹ ರೂಪಕ್ಕಿಳಿಸುವಂತಹ ವ್ಯಕ್ತಿಗಳಿಗೆ ಮಾತ್ರ ಲಲಿತ ಪ್ರಬಂಧಗಳನ್ನು ಬರೆಯುವ ಕಲೆಗಾರಿಕೆ ಸಿದ್ಧಿಸುತ್ತದೆ ಎನ್ನಬಹುದು.

ವಿಷಯವನ್ನು ಲಾಲಿತ್ಯಪೂರ್ಣವಾದ ಲಹರಿಯಲ್ಲಿ ತೆಳುವಾದ ಹಾಸ್ಯದೊಂದಿಗೆ ವ್ಯಕ್ತಪಡಿಸುವ ಬರಹವೆ ಲಲಿತ ಪ್ರಬಂಧಗಳು. ಈ ಲಲಿತ ಪ್ರಬಂಧಗಳು ಸಾಮಾನ್ಯ ಪ್ರಬಂಧಗಳಿಗಿಂತ ಸ್ವಲ್ಪ ವಿಭಿನ್ನವಾದ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಲಲಿತ ಪ್ರಬಂಧಗಳು ಹಾಸ್ಯ ಮಿಶ್ರಿತವಾಗಿದ್ದು, ಸತ್ಯ ಸಂಗತಿಗಳನ್ನು ಮತ್ತು ಘಟನೆಗಳನ್ನು ಹಾಸ್ಯ ದೃಷ್ಟಿಯಿಂದ ನೋಡುವುದಾಗಿದೆ. ನಿಜ ಘಟನೆಗಳು ಸರಸ ಅಥವಾ ಪರಿಹಾಸ ದೃಷ್ಟಿಕೋನದಿಂದ ಮೂಡಿಬಂದಿದ್ದರೆ ಅವುಗಳನ್ನು ಲಲಿತ ಪ್ರಬಂಧಗಳು ಎನ್ನಬಹುದು. 

ಭಾಷೆ ಮತ್ತು ಭಾವಗಳ ಲಾಲಿತ್ಯದಿಂದ ಲಲಿತ ಪ್ರಬಂಧಗಳು ಉಳಿದೆಲ್ಲಾ ಕಾವ್ಯ ಪ್ರಕಾರಗಳಿಗಿಂತ ಭಿನ್ನವಾದ ನೆಲೆಯಲ್ಲಿ ಓದುಗರನ್ನು ಎದುರುಗೊಳ್ಳುತ್ತವೆ. ಅಂತಹ ವಿಶಿಷ್ಟ ಬರಹಕ್ಕೆ ಕೈ ಹಾಕಿದವರಲ್ಲಿ ಡಾ. ಎಚ್. ಎಸ್. ಸತ್ಯನಾರಾಯಣ ಕೂಡ ಒಬ್ಬರು. ಇವರು ‘ಪನ್ನೇರಳೆ’ ಎಂಬ ಲಲಿತ ಪ್ರಬಂಧಗಳ ಸಂಕಲನವನ್ನು ಬರೆದು ಓದುಗರ ಮುಂದಿಟ್ಟಿದ್ದಾರೆ. ಪನ್ನೇರಳೆ ಹೇಗೆ ಸಿಹಿ ಮತ್ತು ಒಗರಿನ ಮಿಶ್ರಣವಾಗಿ ಫಲಪ್ರಿಯರಿಗೆ ಆಪ್ತವಾಗುತ್ತದೆಯೋ ಹಾಗೆ ಇಲ್ಲಿರುವ ಲಲಿತ ಪ್ರಬಂಧಗಳು ಕಾವ್ಯಾಸಕ್ತರಿಗೆ ತುಂಬಾ ಇಷ್ಟವಾಗಿ ಒಂದೇ ಗುಕ್ಕಿಗೆ ಕಾಡಿಸಿಕೊಂಡು ಓದಿಸಿಕೊಂಡು ಹೋಗುತ್ತವೆ.

ಪನ್ನೇರಳೆ ಕೃತಿಯಲ್ಲಿರುವ ಲಲಿತ ಪ್ರಬಂಧಗಳು ವಿಭಿನ್ನವಾದ ಕಥಾವಸ್ತುಗಳನ್ನು ಇಟ್ಟುಕೊಂಡು ರಚಿತವಾಗಿರುವ ಲೇಖಕರ ಸ್ವಗತದೋಪಾದಿಯಲ್ಲಿ ಜನ್ಮತಾಳಿವೆ. ಇಲ್ಲಿ ಲೇಖಕರು ಹನ್ನೆರಡು ಪ್ರಬಂಧಗಳನ್ನು ಮಂಡಿಸಿದ್ದಾರೆ. ಒಂದಕ್ಕಿಂತ ಮತ್ತೊಂದು ಹೊಸತನದಿಂದ ಮೂಡಿಬಂದಿದ್ದು ಲವಲವಿಕೆ ಜೊತೆಗೆ ನವಚೈತನ್ಯ ಹಾಗೂ ತಾಜಾತನವನ್ನು ಹೊಂದಿವೆ.

"ಕರಿಯನೆಂದು ಕುರಿಮರಿ, "ಸಾರಿಗೆ ಬರೆ ಹಾಕುತ್ತಿದ್ದ ಯಶೋದಕ್ಕ", "ಅಮ್ಮನ ಸರ್ಕಾರಿ ಆಸ್ಪತ್ರೆ" "ಪನ್ನೇರಳೆ" "ಎಲ್ಲರ ಒಡನಾಡಿ ಹಂಸ" "ಯಾರು ತಿಳಿಯರು ನಿನ್ನ" "ಪಾಸು ಫೇಲ್ ಎಂಬ ತ್ರಿಶಂಕು ಸ್ಥಿತಿ" "ಪೇಪರ್ಮೆಂಟ್ ಎಂಬ ಸಿಹಿಯ ಸ್ವರ್ಗ" ಲೇಖಕರ ಬಾಲ್ಯ ಜೀವನದ ಅನುಭವಗಳ ಹಾರವಾದರೆ, "ನಾನಾರ್ಥದ ಪಜೀತಿ" ಅವರ ವೃತ್ತಿ ಬದುಕಿನ ಅನುಭವ ಮಾಲೆಯಾಗಿದೆ. "ಪುಸ್ತಕ ಗಳೆಂಬ ಅಂತರಂಗದ ಅತಿಥಿ" "ಇದು ಹಾರ ಪುರಾಣಂ" ಪ್ರಬಂಧಗಳು ಸಾಮಾಜಿಕ ಬದುಕಿನ ಅನುಭವದಿಂದ ಮೂಡಿಬಂದ ಬರಹಗಳಾಗಿವೆ.

ಇಲ್ಲಿ ಪ್ರಾಣಿಗಳ ಬಗ್ಗೆ ಪ್ರೀತ್ಯಾಧರಗಳಿವೆ, ಜನಸಮುದಾಯದ ಕಷ್ಟಕೋಟಲೆಗಳ, ತಲ್ಲಣಗಳ, ತಾಕಲಾಟಗಳ ಚಿತ್ರಣವಿದೆ. ಬಡತನದಲ್ಲೂ ಕುಂದದ ಬದುಕಿನ ಸಂಭ್ರಮವಿದೆ. ಸರ್ವಧರ್ಮಗಳ ಸಾಮರಸ್ಯದ ಸಂದೇಶವಿದೆ. ಅಂಚೆ ಕಚೇರಿ ಜೊತೆಗಿನ ಜನರ ಅವಿನಾಭಾವ ಬಾಂಧವ್ಯದ ಎಳೆಗಳಿವೆ. ಲೇಖಕರಿಗೆ ಸಾಹಿತ್ಯದ ಗೀಳು ಹತ್ತಿದ ಸಮಗ್ರ ವಿವರಗಳಿವೆ, ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳ ಅತಿಯಾದ ಇಂಗ್ಲಿಷ್ ವ್ಯಾಮೋಹ ತಂದೊಡ್ಡುವ ರಂಪಾಟವಿದೆ, ರಂಗಭೂಮಿಯಯೊಂದಿಗಿನ ಲೇಖಕರ ನಂಟಿನ ಅಂಟಿದೆ. ಮಣ್ಣಿನ ಘಮಲಿದೆ, ಪುಷ್ಪ ಲೋಕದ ಸುತ್ತಾಟವಿದೆ. ಪೆಪ್ಪರ್ ಮಿಂಟ್ ನ ಸಿಹಿಸವಿಯ ರುಚಿಯಿದೆ.

ಪಾಸು ಫೇಲ್ ಅಗ್ನಿಕುಂಡದ ಬಿಸಿಯುಸಿರಿದೆ, ಗೌರವ ಮತ್ತು ಅಭಿಮಾನ ಭಾವವಿದೆ. ಒಟ್ಟಾರೆ ವೈವಿಧ್ಯತೆಗಳ ವಿಹಂಗಮ ನೋಟವೇ ಈ ಪನ್ನೇರಳೆ.

ಆಕರ್ಷಕವಾದ ಅಷ್ಟೇ ಹಾಸ್ಯ ಬರಿತವಾದ ಶೀರ್ಷಿಕೆಗಳು ಓದುಗರಲ್ಲಿ ಕುತೂಹಲ ಮೂಡಿಸಿ ಓದಿಸಿಕೊಳ್ಳಲು ಯಶಸ್ವಿಯಾಗುತ್ತವೆ. ಉದಾಹರಣೆ ನಾನಾರ್ಥಗಳ ಪಜೀತಿ ಎಂಬ ಶೀರ್ಷಿಕೆಯಲ್ಲಿ ಏನು ರಗಳೆ ಉಂಟಾಗಿದೆ ಅದೇನ್ ಇರಬಹುದು ಓದಿ ನೋಡೋಣ ಎಂಬ ಭಾವ ಮೂಡಿದರೆ, ಇದು ಹಾರ ಪುರಾಣಂ ಎಂಬುದು ಹಾರಗಳ ಸುಂದರ ಲೋಕವನ್ನೇ ಭಾವಕೋಶದ ಮುಂದೆ ತೆರೆದಿಡುತ್ತದೆ.

ಹಾಸ್ಯವನ್ನು ಪ್ರಧಾನವಾಗಿಟ್ಟುಕೊಂಡು ಲೇಖಕರು ನವಿರಾದ ಮೃದು ಮಧುರ ಭಾವಗಳಲ್ಲಿ ತನ್ನ ಜೀವನದ ಪ್ರಮುಖ ಘಟನೆಗಳನ್ನು ಸನ್ನಿವೇಶಗಳನ್ನು ಹಾಸ್ಯ ರೂಪದಲ್ಲಿ ಅಭಿವ್ಯಕ್ತಪಡಿಸಿದ ಫಲವೇ ಈ ಲಲಿತ ಪ್ರಬಂಧಗಳು.

ಇಲ್ಲಿ ಡಾ.ಎಚ್.ಎಸ್. ಸತ್ಯನಾರಾಯಣರವರು ತಮ್ಮ ವೈಯಕ್ತಿಕ ಬದುಕಿನ ಅನುಭವಗಳನ್ನು, ಅವರು ಅನುಭವಿಸಿದ ಕಷ್ಟಕೋಟಲೆಗಳನ್ನು ಯಾವುದೇ ಸಂಕೋಚಕ್ಕೆ ಒಳಗಾಗದೇ ನಿರ್ಭಿತಿಯಿಂದ, ಪ್ರಾಮಾಣಿಕವಾಗಿ ಓದುಗರ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಅವರ ಬಗ್ಗೆ ಮತ್ತಷ್ಟು ಗೌರವ ಭಾವ ಹುಟ್ಟುವಂತೆ ಪ್ರಬಂಧ ರಚಿಸಿದ್ದಾರೆ.

ಇಲ್ಲಿ ಯಾವುದೇ ಆಡಂಬರ ಉಪಮಾನ ಉಪಮೇಯಗಳ ಅಲಂಕಾರವಿಲ್ಲದೆ, ಸಹಜವಾಗಿ ನೈಜವಾದ ಜಾಡಿನಲ್ಲಿ ಸಾಗಿ ಪ್ರಬಂಧಗಳನ್ನು ರಚಿಸುವ ಮೂಲಕ ಓದುಗರಿಗೆ ರಸಪಾಕವನ್ನು ಉಣಬಡಿಸಿದ್ದಾರೆ. ಇಲ್ಲಿ ಲೇಖಕರು ಲಲಿತ ಪ್ರಬಂಧಗಳ ರಚನೆಯ ಕಡೆ ಹೆಚ್ಚು ಕಾಳಜಿವಹಿಸಿ ಪ್ರಬಂಧಗಳು ಗಂಭೀರತೆಯ, ವೈಚಾರಿಕತೆಯ ಭಾರದಿಂದ ಓದುಗನ ಮನದ ಬಿತ್ತಿಗೆ ಅಪ್ಪಳಿಸದಂತೆ ಎಚ್ಚರವಹಿಸಿ ತುಂಬಾ ಸ್ವಾರಸ್ಯಕರವಾಗಿ ಜೀವ ತುಂಬುವಲ್ಲಿ ಅದ್ಭುತವಾದ ಚಾಕಚಕ್ಯತೆಯನ್ನು ಮೆರೆದಿದ್ದಾರೆ. ಆ ಮೂಲಕ ಓದುಗರನ್ನು ಹಾಸ್ಯಲೋಕದಲ್ಲಿ ಸುತ್ತಿಸಿ ಬರುತ್ತಾರೆ.

ಲಲಿತ ಪ್ರಬಂಧಕ್ಕೆ ವಿಷಯ ಇಂಥದ್ದೆ ಇರಬೇಕೆಂದಿಲ್ಲ. ದೊಡ್ಡ ದೊಡ್ಡ ವಿಚಾರಗಳನ್ನು ಹೊತ್ತು ತರಬೇಕೆಂದಿಲ್ಲ. ವಿಷಯ ಚಿಕ್ಕದಾದರೂ ನಡೆಯುತ್ತೆ. ಆದರೆ ಅದನ್ನು ನಿರೂಪಿಸುವಲ್ಲಿ ಕುಶಲತೆ ಮೆರೆಯಬೇಕು. ಆಗ ದುಂಬಿಯೊಂದು ಹೂವೊಳಗಿನ ಮಕರಂದ ಹೀರುವಂತೆ ಓದುಗರು ಪ್ರಬಂಧದ ಸಾರವನ್ನು ಸವಿಯುವರು. ಈ ನಿಟ್ಟಿನಲ್ಲಿ ಲೇಖಕರ ಪರಿಶ್ರಮ ಮತ್ತು ಜಾಣ್ಮೆ ಮೆಚ್ಚುವಂತದ್ದು.

ಇಲ್ಲಿ ಡಾ. ಎಚ್.ಎಸ್. ಸತ್ಯನಾರಾಯಣರವರು ಸಾಮಾಜಿಕ ಸಂಗತಿಗಳನ್ನು, ವಿಚಾರಗಳನ್ನು, ಘಟನೆಗಳನ್ನು ತಮ್ಮ ಪ್ರಬಂಧಕ್ಕೆ ವಸ್ತುವಾಗಿಸದೇ ತನ್ನ ವೈಯಕ್ತಿಕ ಬದುಕಿನ ಜಾಡನ್ನಿಡಿದು ಪ್ರಬಂಧ ರಚಿಸಿದ್ದಾರೆ. ಆದರೆ ಇವು ಯಾರಿಗೂ ಅವರು ವೈಯಕ್ತಿಕ ನೆಲೆಯಲ್ಲಿ ಮಾತ್ರ ಕಾಣದೇ ಸಾರ್ವತ್ರಿಕ ಅನುಭವದ ಛಾಯೆಯನ್ನು ಹೊದ್ದು ಎಲ್ಲೂ ಬೇಸರಿಸದೆ ಓದಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತವೆ. ಓದುಗರ ಬದುಕಿನ ಅನುಭವಕ್ಕೂ ಇವು ಪಕ್ಕಾಗುತ್ತವೆ. ಪ್ರತಿಯೊಬ್ಬರಿಗೂ ತಾವು ಇಂತಹ ಪಾತ್ರವೊಂದರ ಭಾಗವಾಗಿದ್ದರಿಂದ ಅನುಭವ ನೀಡುತ್ತವೆ.

ಬುದ್ಧಿ-ಭಾವಗಳ ಆಲಿಂಗನ ದೊಂದಿಗೆ ತಮ್ಮ ಜೀವನದ ಘಟನೆಗಳನ್ನು ತುಂಬಾ ಸ್ವಾರಸ್ಯಕರವಾಗಿ ಲವಲವಿಕೆಯಿಂದ ಅಕ್ಷರಗಳಲ್ಲಿ ಗಟ್ಟಿಯಾದ ಮನೋಭೂಮಿಕೆ ನಿರ್ಮಿಸಿ ಲಲಿತ ಪ್ರಬಂಧಗಳನ್ನು ಹೆಣೆದಿದ್ದಾರೆ. ಈ ಪ್ರಬಂಧಗಳಲ್ಲಿ ಮೂಡಿಬರುವ ಅಚಾನಕ್ ತಿರುವುಗಳು, ಹಾಸ್ಯಪ್ರಸಂಗಗಳು, ಹೊಸ ಶಬ್ದಗಳು, ತುಂಟಾಟಗಳು, ಮನಕ್ಕೆ ಮುದ ನೀಡುತ್ತವೆ. ಪನ್ನೇರಳೆಯಲ್ಲಿ ಲೇಖಕರು ಬಳಸಿರುವ ಜನಪದ ನುಡಿಗಟ್ಟುಗಳು, ಗಾದೆಗಳು, ಕವಿಗಳ ಸಾಹಿತ್ಯದ ತುಲನಾತ್ಮಕ ಅಧ್ಯಯನ, ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಕವಿಗಳ ಸಂದರ್ಭೋಚಿತ ಸ್ಮರಣೆ, ಪ್ರಬಂಧಗಳ ತೂಕವನ್ನು ಮತ್ತಷ್ಟು ಗಟ್ಟಿಗೊಳಿಸಿದರೆ, ಆಡು ಭಾಷೆಯ ಬೈಗುಳಗಳು ಗ್ರಾಮೀಣ ‌ಸೊಗಡನ್ನು ಜೀವಂತವಾಗಿಸಿವೆ.

ಬಿಗಿಯಾದ ನಿರೂಪಣೆ, ಭಾವಗಳ ತೀವ್ರತೆ, ಪದಪುಂಜಗಳ ಹೆಣಿಗೆ ,ಅರ್ಥ ಸಂಯೋಜನೆಗಳ ದೃಷ್ಟಿಯಿಂದ ತೆಳುವಾಗದಂತೆ ಎಚ್ಚರ ವಹಿಸಿದ್ದಾರೆ. ಗ್ರಹಿಕೆಗೆ ನಿಲುಕುವ ನಿರೂಪಣೆ ಮನಸೆಳೆಯುತ್ತದೆ. ವಸ್ತು ವಿನ್ಯಾಸ ಮತ್ತು ಗುಣಾತ್ಮಕತೆಯ ದೃಷ್ಟಿಯಿಂದ ಉತ್ತಮವಾಗಿ ಮೂಡಿಬಂದಿದ್ದು‌ ಭಾಷಾ ಕಸುವನ್ನು ಹೆಚ್ಚಿಸುವಂತೆ ಜೀವ ತಳೆದಿವೆ.

ಪ್ರತಿಯೊಬ್ಬರ ಬದುಕನ್ನು ಸಹ್ಯಗೊಳಿಸುವುದು ಭಾವನೆಗಳು. ಹಾಗಾಗಿ ಮನುಷ್ಯನ ಜೀವನದಲ್ಲಿ ಭಾವನೆಗಳು ತುಂಬಾ ಮಹತ್ವಪೂರ್ಣ ಸ್ಥಾನ ಪಡೆದಿವೆ. ಅಂತಹ ಭಾವನೆಗಳ ತಳಹದಿಯ ಮೇಲೆ ತನ್ನ ಭಾವಕೋಶದಲ್ಲಿ ಇರುವಂತಹ ಸುಂದರ ಅಂಶಗಳ ಮೊಗ್ಗನ್ನು ತೆಗೆದುಕೊಂಡು ಅವುಗಳನ್ನು ಪ್ರಫುಲ್ಲವಾಗಿ ಅರಳಿ ನಗುವ‌ ಹೂವಂತ ಲಲಿತ ಪ್ರಬಂಧಗಳಾಗಿಸುವಲ್ಲಿ ಲೇಖಕರ ಕಲಾತ್ಮಕತೆ ಮತ್ತು ಅಭಿವ್ಯಕ್ತಿ ಸ್ತುತ್ಯರ್ಹ ಸಂಗತಿಯಾಗಿ ಕಾಣುತ್ತದೆ.

ವಾಸ್ತವದ ಘಟನೆಗಳನ್ನು ಹಾಸ್ಯದ ಮೂಲಕ ನಿರೂಪಿಸುವುದು ಉಪನ್ಯಾಸಕರು ಹಾಗೂ ಸಾಹಿತ್ಯದ ನಿಷ್ಟ ಅಧ್ಯಯನಶೀಲರಾಗಿರುವ ಇವರಿಗೆ ಕಠಿಣವೆನಿಸದು ಎನ್ನುವುದನ್ನು ಇವರ ಸುದೀರ್ಘ ಮತ್ತು ಮನಸೆಳೆವ ನಿರೂಪಣೆಯೆ ನಿರೂಪಿಸುತ್ತದೆ.

ಇವರು ಸಾಮಾಜಿಕ ಬದುಕಿನಲ್ಲಿ ಹಾಸು, ಹೊದ್ದು, ತಿಂದುಂಡ ಅವಮಾನ, ಬಡತನಗಳು ಪುಂಖಾನುಪುಂಕವಾಗಿ ಸಾಹಿತ್ಯಧಾರೆಯಾಗಿ ಪ್ರಬಂಧಗಳಲ್ಲಿ ಸೇರಿಕೊಂಡು, ಅವುಗಳನ್ನು ಎದುರಿಸಿ ನಿಂತ ಲೇಖಕರ ವರ್ತಮಾನದ ಬದುಕು ಇಂತಹ ಸನ್ನಿವೇಶವನ್ನು ಎದುರಿಸುವ ಅಸಹಾಯಕರಿಗೆ ಮಾರ್ಗ ದೀವಿಗೆಯಂತೆ ಕಾಣುವ ಜೊತೆಗೆ ಮನಸ್ಸಿದ್ದರೆ ಮಾರ್ಗ ಎನ್ನುವ ಮಾತಿಗೆ ಬಲ ತುಂಬುತ್ತವೆ.

ಇವರ ಬರಹದಲ್ಲಿ ಕಾಣುವ ಪ್ರಾದೇಶಿಕ ಭಾಷಾ ಸೊಗಡು ವಿಶೇಷವಾಗಿ ಗಮನ ಸೆಳೆಯುವ ಜೊತೆಗೆ ಓದುಗರಿಗೆ ಹೆಚ್ಚು ಆಪ್ತವೆನಿಸುತ್ತದೆ.ಭಾಷಾ ಹಿಡಿತದೊಂದಿಗೆ ರಚನಾತ್ಮಕವಾದ ಮತ್ತು ಧನಾತ್ಮಕವಾದ ಅಂಶಗಳನ್ನು ಸುಲಲಿತವಾಗಿ ಬಿತ್ತರಿಸುವ ಜೊತೆಗೆ ಸೊಗಸಾದ ಭಾವಾಭಿವ್ಯಕ್ತಿಯೊಂದಿಗೆ ಮನಸ್ಸಿನ ಮಾತುಗಳಿಗೆ ಜೀವತುಂಬುವ ಅದ್ಭುತ ಕಲಾತ್ಮಕತೆಯು ಲೇಖಕರ ಈ ಬರಹಕ್ಕಿದೆ.

ಇವರ ಲಲಿತ ಪ್ರಬಂಧಗಳಲ್ಲಿ ಅಡಕವಾಗಿರುವ ಸಂದರ್ಭೋಚಿತ ಸಮಯಪ್ರಜ್ಞೆ ಹಾಸ್ಯದ ತೀವ್ರತೆಗೆ ದಾರಿಯಾಗಿದೆ. ಲಲಿತ ಪ್ರಬಂಧಗಳ ಪ್ರಮುಖ ಆಶಯ ಮನಸ್ಸಂತೋಷ ಪಡಿಸುವುದೇ ಆದರೂ ಮಾನವನ ತಲ್ಲಣಗಳನ್ನು ಬಿಂಬಿಸುತ್ತಾ ಮಾನವೀಯ ಮೌಲ್ಯಗಳನ್ನು ಬಿತ್ತುವಲ್ಲಿ ಬಹಳ ಸಶಕ್ತವೆನಿಸುತ್ತವೆ. ಬಾಲ್ಯದ ಗೆಳೆಯರೊಂದಿಗಿನ ಚೋದ್ಯ, ಹಿಂಜರಿಕೆ, ಗೆಳೆತನ, ತಮಾಷೆ, ಹರಟೆ, ಮುನಿಸು, ಹಟ, ಗೊಣಗಾಟ, ತುಂಟಾಟಗಳ ಸ್ಮರಣೆ ಒಂದುಕಡೆಯಾದರೆ, ಅವಹೇಳನ, ಅವಮಾನ, ನಿರ್ಲಕ್ಷ್ಯ ಮುಂತಾದವು ಮತ್ತೊಂದು ಮಗ್ಗುಲಲ್ಲಿ ಲೇಖಕರ ಎದೆಯ ಮಾತಿಗೆ ದನಿಯಾಗಿವೆ.

ಕಣ್ಣಿಗೆ ಕಟ್ಟುವಂತಹ ವಿಚಾರಗಳನ್ನು ಹೊತ್ತು ತಂದಿರುವ ಪ್ರಬಂಧಗಳು ದೃಶ್ಯಕಾವ್ಯ ರೂಪದಲ್ಲಿ ಮನಃಪಟಲದ ಮೇಲೆ ಸುಳಿದಾಡಿ ಓದುಗರ ಹೃದಯ ತಟ್ಟುತ್ತವೆ. ಹಸಿವು, ಸೌಲಭ್ಯಗಳ ಅಲಭ್ಯತೆ ,ಅವಕಾಶಗಳ ಕೊರತೆ, ಕೌಟುಂಬಿಕ ಜವಾಬ್ದಾರಿಗಳು ಇವೇ ಮುಂತಾದ ಎಲ್ಲೆಗಳನ್ನು ದಾಟಿದ ಜೀವನಾನುಭವ ಅವರ ಬರಹಗಳ ತುಡಿತವಾಗಿದೆ.

ಒಬ್ಬ ಸೃಜನಶೀಲ ಬರಹಗಾರರಾಗಿ ಬದ್ಧತೆಯನ್ನು ಕಾಪಿಟ್ಟುಕೊಂಡು ಅಕ್ಷರ ಸಂಯೋಜನೆ ಜೊತೆಗೆ ಸ್ನೇಹಮಯಿಯಾದ ಲೇಖಕರ‌ ಅಕ್ಷರಬಂಧ ಸೊಗಸಾದ ಅರ್ಥಸಂಯೋಜನೆ ಜೊತೆಗೆ  ಮನೋರಂಜನೆಯನ್ನು ನೀಡುತ್ತದೆ.

ಡಾ. ಸತ್ಯನಾರಾಯಣರವರ ಲಲಿತ ಪ್ರಬಂಧಗಳು ನಗುವಿನ ಜೊತೆಗೆ ಸ್ವಲ್ಪ ಅಳುವನ್ನು ಸೇರಿಸಿಕೊಂಡು ಚಿಂತನೆ ಕಡೆಗೆ ಮುಖ ಮಾಡಿವೆ. ಹಾಗಂತ ಚಿಂತನಾ ಪ್ರಧಾನವಾದ ಬರಹಗಳಂತೂ ಅಲ್ಲ. ಹಾಸ್ಯಕ್ಕೆ ಪ್ರಾಧಾನ್ಯತೆ ಹಾಗೂ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿರುವುದನ್ನು ಇಲ್ಲಿ ಕಾಣಬಹುದು.

ಇವರ ಪ್ರಬಂಧಗಳನ್ನು ಓದುವಾಗ ಗಂಧವನ್ನು ತೇಯ್ದು ಅನುಭವವಾಗುತ್ತದೆ. ತೇದಷ್ಟು ಗಂಧ ಸುವಾಸನೆ ಬೀರುವಂತೆ ಬರಹಗಳು ಜೀವನಪ್ರೀತಿಯನ್ನು, ಜೀವನೋತ್ಸಾಹವನ್ನು, ಮನರಂಜನೆಯನ್ನು ನೀಡುತ್ತವೆ. ಯಾವುದೇ ಒಂದು ಬರಹ ಕಲ್ಪನೆಗಿಂತ ಅನುಭವಜನ್ಯವಾಗಿದ್ದಾಗ ಅದು ಜನರ ನಾಡಿಮಿಡಿತ ಆಗುತ್ತದೆ. ಆ ದೃಷ್ಟಿಯಿಂದ ಲೇಖಕರೆಲ್ಲ ಪ್ರಬಂಧಗಳು ಅವರ ವೈಯಕ್ತಿಕ ಅನುಭವದ ಮೂಸೆಯಿಂದ ಜನ್ಮತಾಳಿದ ಶಿಶುಗಳಾಗಿವೆ.

ಸತ್ಯನಾರಾಯಣ ಅವರ ಪ್ರಬಂಧಗಳ ಒಳಹೊಕ್ಕಾಗ ಹೃದಯ ತಟ್ಟಿದ ಬರಹವೆಂದರೆ ನಾನಾರ್ಥಗಳ ಪಜೀತಿ. ಇಲ್ಲಿ ವಿಷಯವೊಂದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ತರಾತುರಿಯಲ್ಲಿ ತೀರ್ಮಾನ ತೆಗೆದುಕೊಂಡರೆ ಏನೆಲ್ಲಾ ಅವಗಡಗಳು ಸಂಭವಿಸುತ್ತವೆ ಎಂಬುದನ್ನು ಲೇಖಕರು ಮನೋಜ್ಞವಾಗಿ ಚಿತ್ರಿಸಿದ್ದಾರೆ.

ತರಗತಿಯಲ್ಲಿ ಉಪನ್ಯಾಸಕರು ನಾನಾರ್ಥ ಹೇಳಿಕೊಟ್ಟರೆ ವಿದ್ಯಾರ್ಥಿ ಅದನ್ನು ಮನೆಯಲ್ಲಿ ನಮ್ಮ ಉಪನ್ಯಾಸಕರು ಡಬಲ್ ಮೀನಿಂಗ್ ಹೇಳಿಕೊಟ್ಟರು ಎಂಬ ಘಟನೆಯಲ್ಲಿ ಉಪನ್ಯಾಸಕರಿಗೆ ಮನೆಯವರಿಂದ ಆದ ಪೂಜೆ, ಅವರೇ ಒಂದೆ ಬೀಳುವ ಆತಂಕ ಸೃಷ್ಟಿಸಿದ ಪ್ರಸಂಗ ಓದಲು ಮಜವೋ ಮಜಾ.

ಲೇಖಕರು ಪ್ರಕಾಶನ ಸಂಸ್ಥೆಯಲ್ಲಿ ಕೆಲಸಮಾಡುತ್ತಿದ್ದಾಗ ಮಾಲಿಕರನ್ನು ಅಭಿನಂದಿಸಲು "ಇಟ್ ಈಸ್ ನಾಟ್ ಸೋ ಈಜಿ ಬಟ್ ಯು ಡಿಡ್ ಇಟ್" ಎಂಬ ಶುಭಾಶಯ ಪತ್ರ ನೀಡಿ ದೊಡ್ಡ ಸಾಧನೆ ಮಾಡಿದವರಿಗೆ ಹೇಳುವ ಶುಭಾಶಯವನ್ನು ಮಗುವಿನ ತಂದೆಯಾದ ಅಪ್ಪನಿಗೆ ಹೇಳಿ‌ ಪೇಚಿಗೆ ಸಿಲುಕಿಸಿದ ಪರಿಯನ್ನು ಓದುಗರೆಂದು ಮರೆಯಲಾರರು.

ಜೊತೆಗೆ ವಿಭಿನ್ನ ಪ್ರದೇಶಗಳ ಆಚರಣೆಯ ಪದ್ಧತಿಗಳು ಹಾಗೂ ಮಾತಿನ ವೈಖರಿಯ ಅರಿವಿಲ್ಲದಿದ್ದರೆ ನಾವು ಹೇಗೆ ಅಪಹಾಸ್ಯಕ್ಕೆ ಗುರಿಯಾಗುತ್ತೇವೆ ಎಂಬುದಕ್ಕೆ ಸಾಕ್ಷಿಯಾಗಿ ಲೇಖಕರು ತನ್ನ ಶಿಷ್ಯನೊಬ್ಬನಿಗೆ ಹೆಣ್ಣು ಕೇಳಿದಾಗ "ನಾವು ಸೋಮವಾರದವರು ಶನಿವಾರ ಮಾಡುವವರಿಗೆ ಹುಡುಗಿ ಕೊಡಲ್ಲ" ಎಂದಾಗ ಲೇಖಕರು ಮದುವೆ ಮಾಡುವುದೇ ಮಾಡಕ್ಕೆ ಯಾವ ವಾರ ಆದರೂ ಮಾಡಿಕೊಳ್ಳಲಿ ಬಿಡಿ ಎಂದು ಅವರ ಮಾತಿನ ಅರ್ಥ ತಿಳಿಯದೆ ಮಾತಾಡಿದಾಗ ಉಪನ್ಯಾಸಕರು ಅಂತಿರಿ ಇದೆಯಾ ನೀವು ಕಲಿತಿರೋದು ಅಂತ ಅವರಿಂದ ಬೈಸಿಕೊಂಡಿದ್ದನ್ನು ಒಮ್ಮೆ ಓದಲೇಬೇಕು.

ಪುಸ್ತಕಗಳೆಂಬ ಅಂತರಂಗದ ಅತಿಥಿ ಎಂಬ ಪ್ರಬಂಧದಲ್ಲಿ ಪುಸ್ತಕಗಳು ಲೇಖಕರ ಮೇಲೆ ಪ್ರಭಾವ ಬೀರಿದ ಪರಿಯನ್ನು, ತಮಗಿದ್ದ ಓದಿನ ಹುಚ್ಚಿಗೆ ಏನೆಲ್ಲಾ ಪಡಿಪಾಟಲು ಬಿದ್ದು ಸಾಹಿತ್ಯ ಜ್ಞಾನವನ್ನು ದಕ್ಕಿಸಿಕೊಂಡ ರೆಂಬ ಸಮಗ್ರ ವಿವರಗಳು ತುಂಬಾ ನವಿರಾದ ಭಾವದಲ್ಲಿ ಮೂಡಿಬಂದಿದ್ದು, ಕಾವ್ಯಾಸಕ್ತರು ಮತ್ತು ಬರಹಗಾರರಿಗೆ ಅವರು ಸಾಹಿತ್ಯ ನೆನಪುಗಳ ಸರಮಾಲೆಯನ್ನು ಬಿಚ್ಚಿಡುವ ಜೊತೆಗೆ ಲೇಖಕರು ಪುಸ್ತಕಗಳನ್ನು ಅದೆಷ್ಟು ಆರಾಧಿಸುತ್ತಿದ್ದರೆಂಬ ವಿಚಾರಗಳು ಅವರ ಅಧ್ಯಯನಶೀಲ ಗುಣದ ಬಗ್ಗೆ ಹೆಮ್ಮೆಪಡುವಂತೆ ಮೂಡಿಬಂದಿವೆ. ಇಲ್ಲಿ ಲೇಖಕರು ಕರೋನಾ ಪೀಡಿತರಾಗಿ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದ ಸಂದರ್ಭದಲ್ಲೂ "ಅಯ್ಯೋ ಎಷ್ಟೊಂದು ಕನ್ನಡದ ಪುಸ್ತಕಗಳನ್ನು ಓದದೆ ಸತ್ತುಹೋಗಿ ಬಿಡುತ್ತೇನಲ್ಲ" ಎಂದು ತಮ್ಮ ಶಿಷ್ಯರೊಂದಿಗೆ ಹಂಚಿಕೊಂಡ ಮಾಹಿತಿಯೊಂದು ಸಾಕು ಸಾಹಿತ್ಯಕ್ಷೇತ್ರ ಅವರನ್ನು ಅಪ್ಪಿಕೊಂಡು ಕದಂಬ ಬಾಹುಗಳಲ್ಲಿ ಬಂಧಿಸಿದೆ ಎಂಬುದನ್ನು ತೋರ್ಪಡಿಸಲು.

ಬಾಲಮಿತ್ರ ಚಂದಮಾಮ ಅಮರ ಚಿತ್ರಕಥೆಗಳಿಂದ ಪ್ರಾರಂಭವಾದ ಇವರ ಓದುವ ಅಭಿರುಚಿ ಮುಂದೆ ನಾಡಿನ ದಿಗ್ಗಜ ಕವಿಗಳನೇಕರ ಸಾಹಿತ್ಯ ಪ್ರಕಾರಗಳನ್ನು ಓದಿ ಅಪಾರ ಜ್ಞಾನ ಸಂಪಾದಿಸಿದ್ದು, ಸಾಹಿತ್ಯಕೃಷಿ ಆರಂಭಿಸಿದ್ದು ಅಭಿಮಾನದ ಸಂಗತಿ. ಪುಸ್ತಕ ಕೊಳ್ಳಲು ಹಣವಿಲ್ಲದ ಕಾರಣ ಪುಸ್ತಕ ‌ಓದಲೂ ಅವರು ಕಂಡುಕೊಂಡ ಅಭೂತಪೂರ್ವ ದಾರಿಗಳನ್ನು ನೀವೆಲ್ಲ ಓದಿಯೇ ತಿಳಿಯಬೇಕು‌

ಪಾಸು ಫೇಲ್ ಎಂಬ ತ್ರಿಶಂಕು ಸ್ಥಿತಿ ಪ್ರಬಂಧವು ನಮ್ಮ ತಲೆಮಾರಿನ ಬಹುತೇಕರ ಅನುಭವದ ಪ್ರತಿಬಿಂಬವಾಗಿ ಮೂಡಿಬಂದಿದೆ. ನಮ್ಮ ಕಾಲದಲ್ಲಿ ರಾಂಕ್ ಬರುವುದು ಆಗಿರಲಿ ಕನಿಷ್ಠ ನಂಬರ್ ತೆಗೆದುಕೊಂಡು ಪಾಸಾದರೆ ಹಿಮಾದ್ರಿ ಏರಿದಷ್ಟು ಸಾಹಸಗಾಥೆ ಆಗುತ್ತಿತ್ತು ಎಂಬುದನ್ನು ತುಂಬಾ ಸೊಗಸಾಗಿ ವಿವರಿಸಿದ್ದಾರೆ.

ಈ ಪ್ರಬಂಧದಲ್ಲಿ ಹಿಂದಿನ ಕಾಲದ ಮತ್ತು ಈಗಿನ ಕಾಲದ ಪರೀಕ್ಷೆ ಫಲಿತಾಂಶಗಳ ನಡುವಿನ ವ್ಯತ್ಯಾಸಗಳನ್ನು ಪದರ ಪದರಾಗಿ ಬಿಡಿಸುವ ಜೊತೆಗೆ ಫಲಿತಾಂಶದಂದು‌ ಮನೆ ಶಾಲೆಯ ವಾತಾವರಣ ಹೇಗಿರುತ್ತಿತ್ತು, ವಿದ್ಯಾರ್ಥಿಗಳ ಮನಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ತುಂಬಾ ನಾಜೂಕಾಗಿ ಚರ್ಚಿಸುವ ಮೂಲಕ ಗಂಭೀರ ವಿಷಯವನ್ನು ಹಾಸ್ಯದ ಪಂಚ್ ಗಳ ಮೂಲಕ ಸುಂದರವಾಗಿ ನಿರೂಪಿಸಿದ್ದಾರೆ. ಇಲ್ಲಿ ಓದುಗರ ಮನಸ್ಸನ್ನು ಬರ ಸೆಳೆದುಕೊಳ್ಳುವ ಮತ್ತೊಂದು ಪುರಾಣ ಯಾರದ್ದು. ಈ ಹಾರ ಪುರಾಣ ಓದಿ ಮುಗಿಸುವಷ್ಟರಲ್ಲಿ ಒಂದು ಸುಂದರವಾದ ಹೂಬನದಲ್ಲಿ‌ ಸುತ್ತಿ ,ವೈವಿಧ್ಯಮಯ ಹಾರಗಳನ್ನು ಸ್ಮೃತಿಪಟಲದ ಮೇಲೆ ತಗೊಂಡು ಅದರ ಮಹಿಮೆಯನ್ನರಿತು ಸಂಭ್ರಮಿಸುತ್ತಾನೆ. ಹಾರ ಸಾಂಸ್ಕೃತಿಕ ಕಾರ್ಯಕ್ರಮದಿಂದ ಹಿಡಿದು ಸ್ವಾಗತ ,ಬೀಳ್ಕೊಡುಗೆ, ದೇವರಪೂಜೆ, ಗೌರವ ಸಮರ್ಪಣೆ, ಅಭಿನಂದನೆ, ಮದುವೆ-ಮುಂಜಿ , ಹುಟ್ಟುಹಬ್ಬ, ದಿಂದ ಹಿಡಿದು ಶವದ ಮೇಲೆ ಹಾರವಾಗುವವರೆಗೂ ಒಂದಿಲ್ಲೊಂದು ರೀತಿಯಲ್ಲಿ ಜನರ ಕೊರಳ ಸೇರಿ ಸುಗಂಧ ಸೂಸುತ್ತ ರಾರಾಜಿಸುತ್ತದೆ ಎಂಬುದನ್ನು ತುಂಬಾ ಸುಂದರವಾಗಿ ವರ್ಣಿಸಿದ್ದಾರೆ.

ಸಾರ್ವಜನಿಕ ಸಭೆಗಳಲ್ಲಿ ನಿರೀಕ್ಷೆ ಮೀರಿ ಅತಿಥಿಗಳ ಆಗಮನವಾದರೆ ಆಯೋಜಕರು ಪಡುವ ಪಜೀತಿ ವರ್ಣಿಸಲಸದಳ. ವೇದಿಕೆಗಳಲ್ಲಿ ಒಂದೇ ಹಾರ ಕೊರಳಿಂದ ಕೊರಳಿಗೆ ಬದಲಾಗುತ್ತ ಮಾಲಾರ್ಪಣೆ ಮಾಡಿ ಅತಿಥಿಗಳನ್ನು ಸನ್ಮಾನಿಸುವ ಪರಿಯನ್ನು ಮನೋಜ್ಞವಾಗಿ ಚಿತ್ರಿಸುವ ಮೂಲಕ ಎಲ್ಲರನ್ನು ನಗೆಗಡಲಿನಲ್ಲಿ ಮುಳುಗಿಸುತ್ತಾರೆ.

ಕರಿಯನ ಕುರಿಮರಿ ಶೀರ್ಷಿಕೆಯಲ್ಲಿ ಬೇವಿನ ಸೊಪ್ಪು ಮತ್ತು ಕರಿಬೇವಿನ ಸೊಪ್ಪು ಗಳ ನಡುವಿನ ವ್ಯತ್ಯಾಸ ತಿಳಿಯದೆ ಲೇಖಕರು ಒದ್ದಾಡಿದ್ದು ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರೀತಿಯಿಂದ ಸಾಕಿ ಬೆಳೆಸಿದ ಲೇಖಕರು ಪ್ರಾಣಿ ಪ್ರೇಮ ಓದುಗರಿಗೆ ಖುಷಿ ನೀಡಿದರೆ ನಾವು ಬಿತ್ತಿದಂತೆ ಬೆಳೆ ಪಡೆಯುತ್ತೇವೆ ಎಂಬುದಕ್ಕೆ ಸಾಕ್ಷಿಯಾಗಿ ಲೇಖಕರು ತಮ್ಮ ಕುರಿಗೆ ಗುರಿಯಾಗುವ ಅಭ್ಯಾಸವನ್ನು ಮೋಜಿಗಾಗಿ ಮಾಡಿಸಿ ಮುಂದೆ ಅದು ಅಪಾಯಕಾರಿಯಾಗಿ ಬದಲಾದ ಘಟನೆ ವಿಷಾದಭಾವ ಮೂಡಿಸುತ್ತದೆ . ನಾವು ಏನನ್ನಾದರೂ ಕಲಿಸುವ ಮುನ್ನ ಮುಂದಿನ ಒಳಿತು ಕೆಡುಕುಗಳ ಕುರಿತು ಪರಾಮರ್ಶಿಸಬೇಕು ಎಂಬ ಮಾರ್ಗದರ್ಶನವಿದೆ.

ಎಲ್ಲರ ಒಡನಾಡಿ ಹಂಸ ಎಂಬ ಪ್ರಬಂಧದಲ್ಲಿ ಹಂಸ ಎಂಬುದನ್ನು ಅಂಚೆ ಇಲಾಖೆಯ ಸೂಚಕವಾಗಿ ಬಳಸಿದ್ದಾರೆ. ಈ ಇವತ್ತಿನ ದಿನ ಸದಾ ಆನ್ಲೈನ್ ಕಾಂಟ್ಯಾಕ್ಟ್ ನಲ್ಲೆ ಇರುವುದರಿಂದ ಲೇಖಕರು ಅಂಚೆ ಕಚೇರಿ, ಅಂಚೆಯಣ್ಣ ಮತ್ತು ಜನರ ನಡುವಿನ ಅವಿನಾಭಾವ ಬಾಂಧವ್ಯವನ್ನು, ಪತ್ರ ಬರೆಯುವ, ಪಾತ್ರ ಓದುವ ,ಪತ್ರ ಶೇಖರಿಸಿಡುವ ವಿಧಾನ ಮತ್ತು ಹವ್ಯಾಸಗಳನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ಪತ್ರ ಓದುವಾಗ ಆಗುತ್ತಿದ್ದ ಬಾಯಿ ತಪ್ಪಿನ ಓದಿಗೆ ಒಂದು ಉದಾಹರಣೆಯನ್ನು ನೋಡುವುದಾದರೆ "ಸೋಮವಾರ ನನ್ನ ಸೊಸೆ ವನಜ ಗಂಡುಮಗುವನ್ನು ಹೆತ್ತಿದ್ದಾಳೆ" ಎಂದು ಬರೆದಿದ್ದ ಕಾಗದವನ್ನು ಲೇಖಕರು "ವನಜ ಗಂಡು ಮಗುವನ್ನು ಹೇತಿದ್ದಾಳೆ" ಎಂದು ತಪ್ಪಾಗಿ ಓದಿ ಕಪಾಳಮೋಕ್ಷ

ಮಾಡಿಸಿಕೊಂಡು ಸಾಲದೆ ಕಲಿಸಿದ ಗುರುವಿಗೂ ಚಿಮಾರಿ ಹಾಕಿಸಿದ ಘಟನೆಯನ್ನು ಲೇಖಕರು ಸುಂದರವಾಗಿ ವಿಸ್ತರಿಸಿದ್ದಾರೆ. ಇದರಿಂದ ಶಿಕ್ಷಕರಿಗೆ ಮಕ್ಕಳ ಮೇಲಿನ ಜವಾಬ್ದಾರಿ ‌ಎಷ್ಟಿರುತ್ತದೆ ಎಂದು‌ ತಿಳಿಯುತ್ತದೆ. ಇಂದು ಇಷ್ಟೆಲ್ಲಾ ಪ್ರತಿಸ್ಪರ್ಧಿಗಳ ನಡೆಯುವ ಅಂಚೆ ಇಲಾಖೆ ತನ್ನ ಅಸ್ಮಿತೆ‌ ಉಳಿಸಿಕೊಳ್ಳಲು ಹೋರಾಡುತ್ತಿರುವುದು ಒಂದು ಹೆಮ್ಮೆಯ ಸಂಗತಿ.

ಪೆಪ್ಪರ್ ಮೆಂಟ್ ಎಂಬ ಸಿಹಿಯ ಸ್ವರ್ಗ ಪ್ರಬಂಧದಲ್ಲಿ ಲೇಖಕರು ವಿವಿಧ ಆಯಾಮಗಳಲ್ಲಿ ಚರ್ಚಿಸುತ್ತಾ ಸಿಹಿ ಮಕ್ಕಳಿಗೆ ಪ್ರಿಯ ಎಂಬ ಸಣ್ಣ ಜಾಡಿನಲ್ಲಿ ‌ಸಾಗಿ ಬಾಯಲ್ಲಿ ನೀರು ಬರುವಂತೆ ಬಾಲ್ಯದ ಅನುಭವವನ್ನು ಮದ್ಯವಯಸ್ಸಿನಲ್ಲಿಯೂ ಸುಲಲಿತವಾಗುವುದು ವರ್ಣಿಸಿರುವುದು‌ ಪ್ರಯಾಸವೇ ಸರಿ. ಆದರೆ ತುಂಬಾ ಅನಾಯಾಸವಾಗಿ ಕಾವ್ಯವಾಗಿಸುವ ಸೂಕ್ಷ್ಮತೆ ಲೇಖಕರಿಗೆ ಇರುವುದು ಗೋಚರಿಸುತ್ತದೆ.

ಸಾರಿಗೆ ಬರೆ ಹಾಕುತ್ತಿದ್ದ‌ ಯಶೋಧಕ್ಕ ಪ್ರಬಂಧದಲ್ಲಿ ಮಣ್ಣಿನ ಮಡಿಕೆಯಲ್ಲಿ ಸಾರು ಮಾಡುತ್ತಿದ್ದಾಗ ಕೊನೆಯಲ್ಲಿ ಒಂದು ಕಬ್ಬಿಣದ ಸೌಟನ್ನು ಕೆಂಡದೊಳಗಿಟ್ಟು ಕಾಸಿ ಕೆಂಪಗಾದ ನಂತರ ಅದನ್ನು ಕುದಿಯುವ ಸಾರಿಗೆ ಸುದ್ದಿದಾಗ ಅದು ಉಕ್ಕಿ‌ಬಂದು ಸಾರುತ್ತಿತ್ತು ಇದನ್ನು ಉಕ್ಕಿ ಬರುತ್ತಿತ್ತು ಎಂಬ ಸುಂದರ ರೂಪಕದ ಮೂಲಕ ಬರೆದಿದ್ದಾರೆ. ಜೊತೆಗೆ ಇದರ ಹಿಂದಿರುವ ವೈಜ್ಞಾನಿಕ ಅಂಶದ ಕಡೆಗೂ ಕೂಡ ಲೇಖಕರು ಬೆಳಕು ಚೆಲ್ಲಿದ್ದಾರೆ. ದೆವ್ವ ಮೈಮೇಲೆ ಬರುವ ನಂಬಿಕೆ ಬಗ್ಗೆ ಇಲ್ಲಿ ಪರ ವಿರೋಧವಾಗಿ ಅಭಿಪ್ರಾಯಗಳು ನಿರ್ಮಾಣಗೊಂಡು ಜನರ ಭಾವನೆಗಳೊಂದಿಗೆ ಹಗ್ಗಜಗ್ಗಾಟವೇರ್ಪಡುತ್ತದೆ.

ಇನ್ನು ಶೀಷಿಕೆ ಪ್ರಬಂಧ ಪನ್ನೇರಳೆಯಲ್ಲಿ ಈಗಿನ ಮಕ್ಕಳಿಗೆ ಬಾಲ್ಯದ ಸಂಭ್ರಮವಿಲ್ಲ ಎಂದು ಆತಂಕ ವ್ಯಕ್ತಪಡಿಸುವ ಲೇಖಕರು ಕುವೆಂಪುರವರ ಸರ್ವಜನಾಂಗದ ಶಾಂತಿಯ ತೋಟ, ಅನಿಕೇತನ ತತ್ವದ ಪಾಲನೆ ಅಂಶಗಳನ್ನು ಬಿಂಬಿಸುವಂತೆ ಸಾಮರಸ್ಯದ ಬೀಡೊಂದನು ಕುರಿತು ಚರ್ಚಿಸುತ್ತಾ ಅಂತಹ ಸಾಮರಸ್ಯದ ಸಮಾಜ ನಿರ್ಮಿಸುವ ಅಗತ್ಯತೆಯ ಆಶಯವನ್ನು ವ್ಯಕ್ತಪಡಿಸುತ್ತಾರೆ.

ಅಮ್ಮನ ಸರ್ಕಾರಿ ಆಸ್ಪತ್ರೆ ಬರಹದಲ್ಲಿ ಸರ್ಕಾರಿ ಆಸ್ಪತ್ರೆಯ ಕಾರ್ಯವೈಖರಿ, ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ತಾಕಲಾಟ , ಜವಾಬ್ದಾರಿಗಳ ನಡುವೆ ಪಾಲಿಸಲೇಬೇಕಾದ ಕೆಲವು ಕಟ್ಟುನಿಟ್ಟಿನ ನಿಯಮಗಳು, ಆಯುಧ ಪೂಜೆಯ ಸಂಭ್ರಮ ಜಗಮಗಿಸುತ್ತವೆ . ಲೇಖಕರ ಅಮ್ಮ ಅಲ್ಲಿ ಆಯಾ ಆಗಿದ್ದರಿಂದ ಸರ್ಕಾರಿ ಆಸ್ಪತ್ರೆಯೊಂದಿಗಿನ ಒಡನಾಟವನ್ನು ತುಂಬಾ ಆಪ್ಯಾಯಮಾನ ‌ರೂಪದಲ್ಲಿ ವಿವರಿಸಿದ್ದಾರೆ.

ಒಟ್ಟಾರೆ ಹೇಳುವುದಾದರೆ ಒಂದಕ್ಕಿಂತ ಮತ್ತೊಂದು ಪ್ರಬಂಧವು ಭಾವಗೀತಾತ್ಮಕ ರೂಪದಲ್ಲಿ ಗದ್ಯ ಪದ್ಯ ಮಿಶ್ರಿತ ಶೈಲಿಯಂತೆ ಜನ್ಮ ತಳೆದಿದ್ದು ಅದ್ಭುತವಾದ ಮನಮೋಹಕವಾದ ಮತ್ತು ಮನಸೆಳೆವ ಸೊಗಸಾದ ನಿರೂಪಣೆಯನ್ನು ಅಲ್ಲಿಯೇ ಓದಿ ತಿಳಿಯಬೇಕು. ಲೇಖಕರು ಅನುಭವಿಸಲು ಕಷ್ಟ ಕೋಟಲೆಗಳನ್ನು ಲಲಿತಪ್ರಬಂಧ ವಾಗಿಸುವ ಪ್ರಯತ್ನ ಶ್ಲಾಘನೀಯ. ಈ ಬರಹಗಳು ಲೇಖಕರಾದ ಸತ್ಯನಾರಾಯಣರವರ ಸ್ಥೂಲ ಪರಿಚಯವನ್ನು ಮಾಡಿಕೊಡುತ್ತವೆ.ಇವು ಲೇಖಕರ ಹರಳುಗಟ್ಟಿದ ಅನುಭವವನ್ನು, ಸಾಂದರ್ಭಿಕ ಕವಿವಾಣಿಗಳನ್ನು ಗರ್ಭೀಕರಿಸಿಕೊಂಡಿವೆ .ಇಲ್ಲಿ ಲೇಖಕರು ತನ್ನನ್ನು ತಾನೇ ದರ್ಶಿಸಿ ಕೊಳ್ಳುತ್ತಾ ಅದರ ಸುತ್ತ ಹೆಣೆದ ರೋಚಕ ಮಾಲೆ ಪನ್ನೆರಳೆ. ಇದು ಲೇಖಕರ ವಿದ್ವತ್ಪೂರ್ಣ ಕೃತಿಯ ಫಲವಾಗಿ ಮೂಡಿಬಂದಿದೆ.

ಎಚ್.ಎಸ್. ಸತ್ಯನಾರಾಯಣ ಅವರ ಲೇಖಕ ಪರಿಚಯ..

MORE FEATURES

ಜೀವ, ಜೀವನ, ಮರುಸೃಷ್ಟಿ ನಡುವಣ ಹೋರಾಟವೇ ಜಲಪಾತ...

21-11-2024 ಬೆಂಗಳೂರು

"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...

ನನ್ನ ದೃಷ್ಟಿಯಲ್ಲಿ ಬದುಕೆಂದರೆ ನ್ಯಾಯಾಲಯದ ಕಟಕಟೆಯಲ್ಲ..

21-11-2024 ಬೆಂಗಳೂರು

"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...

ಶಿವಾಜಿ ಟೆಂಟ್ʼನಲ್ಲಿ ನನ್ನನ್ನು ಬಹಳವಾಗಿ ಸೆಳೆದದ್ದು ಪದ ಬಳಕೆ

20-11-2024 ಬೆಂಗಳೂರು

“ಪುಸ್ತಕದಲ್ಲಿ ಬಾಲ್ಯವಿದೆ, ಹರೆಯವಿದೆ, ಯೌವನವಿದೆ, ವೃದ್ಧಾಪ್ಯವೂ ಇದೆ. ಎಲ್ಲ ಕಾಲದಲ್ಲೂ ಮನುಷ್ಯನನ್ನು ಕಾಡುವ, ...