ನೆನಪುಗಳ ತಳುಕು ‘ನೆನಪಿನ ಒರತೆ’ ಕೃತಿ: ರಾಘವೇಂದ್ರ ಪಾಟೀಲ್


"ಎಚ್ಚೆಸ್ವಿಯವರ ಸಂಬಂಧಗಳ ಜಾಲವನ್ನು ಹೆಣೆಯುವ ಅವರ ಪ್ರೇಮದ ಸ್ವಭಾವದೊಂದಿಗೆ ನನ್ನ ಸಾಹಿತ್ಯ ಜೀವನವು ಹೊಂದಿರುವ ಸಂಬಂಧವನ್ನು ಅತ್ಯಂತ ಖಚಿತವಾಗಿ ಹೇಳಲು ಗಣಿತಶಾಸ್ತ್ರದ ಖಚಿತತೆಯೇ ಯೋಗ್ಯವಾದದ್ದು ಎನ್ನುವ ಕಾರಣ ನನ್ನ ಅಂತರಂಗಕ್ಕೆ ಹೊಳೆದಿರಬಹುದು. ಇರಲಿ" ಎನ್ನುತ್ತಾರೆ ಲೇಖಕ ರಾಘವೇಂದ್ರ ಪಾಟೀಲ್. ಅವರು ಲೇಖಕಿ ಅಂಜನಾ ಹೆಗಡೆ ಅವರ ನಿರೂಪಣೆಯ ಸಾಹಿತಿ ಎಚ್‌.ಎಸ್‌ ವೆಂಕಟೇಶ ಮೂರ್ತಿ ಅವರ ‘ನೆನಪಿನ ಒರತೆ’ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

ನೆನಪುಗಳ ತಳುಕು…

ಎಚ್ಚೆಸ್ವಿ ‘ಸಾಹಿತ್ಯಿಕ ಆತ್ಮಕಥೆ’ ಬರೆಯುತ್ತಾರೆ ಎನ್ನುವುದನ್ನು ತಿಳಿದಾಗ ನನಗೆ ಅತೀವ ಸಂತೋಷವಾಯಿತು. ಎಚ್ಚೆಸ್ವಿಯವರ ಈ ಬರೆಹವನ್ನು ಆಗುಗೊಳಿಸುವ ಕೈಂಕರ್ಯದಲ್ಲಿ ತೊಡಗಿರುವ, ನನ್ನ ಆತ್ಮೀಯ ಗೆಳೆಯರಾಗಿದ್ದ ಎನ್.ಎಸ್. ಚಿದಂಬರರಾಯರ ಮಗಳು, ಮಾಲಿನಿ ಗುರುಪ್ರಸನ್ನ 'ಅಂಕಲ್... ಈ ಕೃತಿಗಾಗಿ ನೀವು ಒಂದು ಲೇಖನವನ್ನು ಬರೆಯಬೇಕು...' ಎಂದು ಕೇಳಿದಾಗ ನನಗೆ ಸ್ವಲ್ಪ ಗೊಂದಲವೇ ಆಯಿತು. ಆದರೂ, ಎಚ್ಚೆಸ್ವಿಯವರ ಬರೆಹದೊಂದಿಗೆ ನನ್ನ ಬರೆಹವೂ ಇರುತ್ತದಾದರೆ ಯಾಕೆ ಬೇಡ ಎಂದು ಭಾವಿಸಿ - `ಆಗಲಿ. ಬರೆಯುತ್ತೇನೆ' ಎಂದುಬಿಟ್ಟೆ. ಎಚ್ಚೆಸ್ವಿಯವರ ನೆನಪುಗಳ ಸರಣಿಯೊಂದಿಗೆ, ಅವರನ್ನು ಕುರಿತಾದ ನನ್ನ ನೆನಪುಗಳನ್ನೂ ಹರಡಿಕೊಂಡು, ಆಯ್ದು, ಜೋಡಿಸಿ ಬರೆದು ಅವರ ನೆನಪುಗಳ ಜೊತೆಗೆ ಇಡುವುದೆಂದು ಯೋಚಿಸಿದೆ. ಮಾಲಿನಿ ಫೋನ್ ಮಾಡಿದ ಎರಡು ದಿನಗಳ ನಂತರ ಎಚ್ಚೆಸ್ವಿಯವರೂ ನನಗೆ ಫೋನ್ ಮಾಡಿದರು. `ನಾನು ಲಿಟರರೀ ಆಟೋ ಬಯಾಗ್ರಫಿಯೊಂದನ್ನು ಬರೆಯುತಿದ್ದೇನೆ' ಎಂದು ತಿಳಿಸಿದರು.

ನಾನು ಈಗಾಗಲೇ ಮಾಲಿನಿ ಈ ವಿಷಯ ತಿಳಿಸಿದ್ದಾಳೆಂದು ಹೇಳಿ-ತುಂಬ ಒಳ್ಳೆಯದಾಯಿತು ಸರ್... ನಿಮ್ಮ ಅನುಭವಕ್ಕೆ ಬಂದ ಎಲ್ಲ ಎಲ್ಲವನ್ನೂ ನಿರ್ದಾಕ್ಷಿಣ್ಯವಾಗಿ ಬರೆಯಿರಿ ಎಂದು ವಿನಂತಿಸಿದೆ. ಎಚ್ಚೆಸ್ವಿಯಂತಹ ಮಹತ್ವದ ಕವಿ-ಸಾಹಿತಿಗಳು ತಾವು ತೀವ್ರವಾಗಿ ಅನುಭವಿಸಿದ ಸ್ಥಿತಿ-ಗತಿಗಳು, ಸಾಹಿತ್ಯಿಕ ಸಂಘರ್ಷಗಳ, ವಿರೋಧಗಳ ಅನುಭವಗಳು, ಅವರ ಕಾಲದ ಸಾಹಿತ್ಯಿಕ ವಾಗ್ವಾದಗಳನ್ನು ಕಟ್ಟಿಕೊಡುತ್ತ, ಬೇರೊಂದು ನೆಲೆಯಲ್ಲಿ ಸಾಹಿತ್ಯ ಚರಿತ್ರೆಯ ಕಥನವಾಗ ಬಲ್ಲದೆನ್ನುವ ಯೋಚನೆಯಿಂದ ನಾನು ಎಚ್ಚೆಸ್ವಿಯವರಿಗೆ ಆ ವಿನಂತಿಯನ್ನು ಮಾಡಿದ್ದೆ. ಎಚ್ಚೆಸ್ವಿಯವರ ಮೂವತ್ತೆರಡು ಅಧ್ಯಾಯಗಳ ಸಾಹಿತ್ಯಿಕ ಆತ್ಮಕಥೆಯನ್ನು ಓದಿದ ಮೇಲೆ, ಅವರು ತಮ್ಮ ಈ ಬರೆಹದಲ್ಲಿ, ನಾನು ಭಾವಿಸಿದ್ದುದನ್ನು ಪೋಷಿಸುವ ಕೆಲವೇ ಕೆಲವಷ್ಟು ಸಂಗತಿಗಳನ್ನು ಆನುಷಂಗಿಕವಾಗಿ ಪ್ರಸ್ತಾಪಿಸಿದ್ದಾರೆ ಎನ್ನುವುದನ್ನು ಬಿಟ್ಟರೆ, ಅವರ ಈ ಇಡೀ ಸಾಹಿತ್ಯಿಕ ನೆನಪುಗಳ ಸರಣಿಯು ತನ್ನ ಕಾಲದ ಸಾಹಿತ್ಯ ಚರಿತ್ರೆಯ ಕಥನವನ್ನು ಹೇಳಲು ಆರಿಸಿಕೊಂಡದ್ದು ಸಂಘರ್ಷ ಮತ್ತು ನಕಾರಾತ್ಮಕವಾದ ಸಂಗತಿಗಳನ್ನು ಅಲ್ಲವೇ ಅಲ್ಲ! ಎಚ್.ಎಸ್.ವಿ. ಅವರು ತಮ್ಮ ಸಾಹಿತ್ಯ ಬದುಕಿನ ನೆನಪುಗಳ ಮೂಲಕ ಸೃಜಿಸುವ ಸಾಹಿತ್ಯ ಚರಿತ್ರೆಯು, ಸಂಬಂಧಗಳ ಜಾಲದ ಮೂಲಕದ, ಹಾರ್ದಿಕತೆಯ ಸಂಪನ್ನ ಕಥನವನ್ನು ಕಟ್ಟಿಕೊಡುವುದಾಗಿದೆ. ಹಾಗೆ ನೋಡಿದ, ಎಚ್ಚೆಸ್ವಿಯವರು ತಮ್ಮೊಂದಿಗೆ ಸಹವರ್ತಿಯಾಗಿ ಸಾಗಿ ಬರುತ್ತಿರುವ ಸಾಹಿತ್ಯ ಚರಿತ್ರೆಗೆ ಸೇರಿಸಲು ಬಯಸಿದ್ದು ಕೇವಲ ಸಂಬಂಧಗಳ ಸೇಂದ್ರೀಯತೆಯನ್ನೇ! ಎಚ್ಚೆಸ್ವಿಯವರ ಕವಿತೆಯೊಂದು ನೆನಪಾಗುತ್ತಿದೆ:

ಈ ಲೇಖನವನ್ನು ಬರೆಯುತ್ತಿರುವಾಗ ಅವರ ಕವಿತೆಗಳ ಪುಸ್ತಕವು ನನ್ನ ಹತ್ತಿರ ಇಲ್ಲದಿರುವುದರಿಂದ, ನೆನಪಿನಿಂದಲೇ ಅದರ ಸಾರವನ್ನು ಹೇಳುತ್ತೇನೆ. ಕವಿ-ನಿರೂಪಕ, ಕಾರ್ಯಕ್ರಮವೊಂದಕ್ಕೆ ಮದ್ರಾಸಿಗೆ ಹೋಗಿರುತ್ತಾರೆ. ಅವರು ತಾವಿದ್ದ ರೂಮಿಗೆ ಬೆಳಗಿನ ಉಪಹಾರವನ್ನು ತರಿಸಿ ಕಿಡಕಿಯ ಎದುರಿಗೆ ಕುಳಿತು ತಿನ್ನುತ್ತಿರುವಾಗ, ಗುಬ್ಬಚ್ಚಿಯೊಂದು ಚಿಂವುಗುಟ್ಟುತ್ತ ಇವರ ಎದುರಿಗಿನ ಕಿಟಕಿಯಲ್ಲಿ ಬಂದು ಕುಳಿತುಕೊಳ್ಳುತ್ತದೆ. ಕವಿ, ತಾವು ತಿನ್ನುತ್ತಿದ್ದ ಇಡ್ಲಿಯ ತುಂಡೊಂದನ್ನು ಗುಬ್ಬಚ್ಚಿಯ ಮುಂದೆ ಎಸೆಯುತ್ತಾರೆ. ಗುಬ್ಬಚ್ಚಿ ಅದನ್ನು ಕಚ್ಚಿಕೊಂಡು ಹಾರಿ ಹೋಗುತ್ತದೆ. ಮರುದಿನವೂ ಹಾಗೆಯೇ ಆಗುತ್ತದೆ. ಕಿಟಕಿಯಲ್ಲಿ ಬಂದು ಕುಳಿತ ಗುಬ್ಬಚ್ಚಿಯು, ಕವಿ ಎಸೆದ ಇಡ್ಲಿಯ ತುಂಡನ್ನು ಎತ್ತಿಕೊಂಡು ಹಾರಿ ಹೋಗುತ್ತದೆ... ಅದರ ಮರುದಿನ, ಕವಿಯು ಗುಬ್ಬಚ್ಚಿ ಬರುವ ಮೊದಲೇ ತಮ್ಮ ಉಪಹಾರವನ್ನು ಮುಗಿಸಿರುತ್ತಾರೆ. ಅವರು ಕಿಟಕಿಯಾಚೆ ನೋಡುತ್ತ ಸುಮ್ಮನೇ ಕುಳಿತಿರುತ್ತಾರೆ. ಹಾರಿಬಂದು ಕಿಟಕಿಯಲ್ಲಿ ಕುಳಿತ ಗುಬ್ಬಚ್ಚಿಯು ಇಂದು ಕವಿಗೆ ಉಪಹಾರ ದೊರೆತಿಲ್ಲವೆಂದು ಭಾವಿಸುತ್ತದೆ. ಅದು ಕೂಡಲೇ ಭರ‍್ರೆಂದು ಹಾರಿಹೋಗಿ, ಹುಳುವೊಂದನ್ನು ಕಚ್ಚಿಕೊಂಡು ತಂದು, ಕವಿಯ ಮುಂದೆ ಇಡುತ್ತದೆ! ತನಗೆ ಎರಡು ದಿನ ಆಹಾರ ನೀಡಿದ ಕವಿಯೊಂದಿಗೆ ಸಂಬಂಧವನ್ನು ಕಟ್ಟಿಕೊಳ್ಳುವ ಗುಬ್ಬಚ್ಚಿ, ತನಗೆ ಆಹಾರ ನೀಡಿದ ಕವಿಯ ಕಾಳಜಿಯನ್ನು ನೋಡಿಕೊಳ್ಳುವುದು ತನ್ನ ಕರ್ತವ್ಯವೆಂದು ಭಾವಿಸುತ್ತದೆ; ಅವನು ಉಪವಾಸದಿಂದ ಇರಬಾರದೆನ್ನುವ ಉದ್ದೇಶದಿಂದ ತನ್ನ ಆಹಾರವಾದ ಹುಳುವೊಂದನ್ನು ಹುಡುಕಿ ತಂದು ನೀಡುತ್ತದೆ! ಪ್ರಾಣಿ, ಮನುಷ್ಯರ ನಡುವಿನ ಇಂಥ ಪ್ರೀತಿ-ಕರ್ತವ್ಯಗಳ ಸಂಬಂಧವನ್ನೇ ಗುರುತಿಸಿ ಕಾಣುವ ಕವಿ, ಎಚ್ಚೆಸ್ವಿಯವರು, ಮನುಷ್ಯ ಮನುಷ್ಯರ ನಡುವಿನ ಸಂಬಂಧದ ಬಗೆಗೆ ಗರಿಷ್ಟ ಕಳಕಳಿ, ಉತ್ಸಾಹ ತೋರುವುದು ಅತ್ಯಂತ ಸಹಜವೇ ಆಗಿದೆ. ಅವರ ಜೀವನಗಾಥೆಯ, ಸಾಹಿತ್ಯ ಪಯಣವು ತನ್ನ ಉದ್ದಕ್ಕೂ ಸಂಬಂಧದ ಬಗೆಗಿನ ಇಂಥ ಕಾಳಜಿಯನ್ನು ಪ್ರಸ್ತಾಪಿಸುತ್ತ ಬಂದಿದೆ.

ಅವರ ಮೊದಲ ಕವನ ಸಂಕಲನ, `ಪರಿವೃತ್ತ' ಬಂದದ್ದರ ನೆನಪು ನೋಡಿ. ಇವರು ತಮ್ಮ ಕವನಗಳ ಕಟ್ಟನ್ನು ಒಯ್ದು, ಬೆಂಗಳೂರಿನಲ್ಲಿದ್ದ ಗೆಳೆಯ ಈಶ್ವರಚಂದ್ರ ಅವರಿಗೆ ಒಪ್ಪಿಸಿ ಬರುತ್ತಾರೆ. ಮುಂದೆ ಕೆಲ ದಿನಗಳ ನಂತರ `ಪರಿವೃತ್ತ' ಸಂಕಲನವು ಅಚ್ಚುಕಟ್ಟಾಗಿ ಮುದ್ರಣಗೊಂಡು, ಆ ಪುಸ್ತಕಗಳ ಪಾರ್ಸಲ್ಲು ಇವರಿಗೆ ರೈಲಿನ ಮೂಲಕ ಬಂದು ತಲುಪುತ್ತದೆ. ಕರಡು ತಿದ್ದುವುದು, ಮುಖಪುಟದ ಚಿತ್ರ ಬರೆಯುವುದು ಮೊದಲುಗೊಂಡು, ಮುದ್ರಣದ ಎಲ್ಲ ಜವಾಬ್ದಾರಿಯನ್ನು ಈಶ್ವರಚಂದ್ರ ಅವರೇ ನಿರ್ವಹಿಸಿರುತ್ತಾರೆ. ಇವರ ಎರಡನೆಯ ಸಂಕಲನ, `ಬಾಗಿಲುಬಡಿವ ಜನ' ಪ್ರಕಟಗೊಂಡ ಕತೆಯೂ ಹೀಗೆಯೇ! ಎಚ್ಚೆಸ್ವಿಯವರಿಗೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜಿನಲ್ಲಿ ಕೆಲಸ ಸಿಕ್ಕು ಅವರ ಜೀವನಕ್ಕೊಂದು ಸಫಲವಾದ ನೆಲೆಸಿಗುವಲ್ಲಿ ಕೆಲಸ ಮಾಡಿದ ಸಂಬಂಧಗಳ ಸೇಂದ್ರೀಯತೆಯನ್ನು ನೋಡಿರಿ! ಜಿಎಸ್‌ಎಸ್, ಅ.ರಾ.ಮಿತ್ರ, ಶೇಷನಾರಾಯಣ, ಈಶ್ವರಚಂದ್ರ... ಕೊನೆಗೆ ಸೇಂಟ್ ಜೋಸೆಫ್ ಕಾಲೇಜಿನ ಪ್ರಾಚಾರ್ಯರು. ಎಷ್ಟೆಲ್ಲ ಜನರ ಸದ್ಭಾವನೆಗಳ ಸಂಬಂಧದ ಜಾಲವು ಇದರ ಹಿಂದೆ ಕೆಲಸ ಮಾಡಿದೆ. ಎಚ್ಚೆಸ್ವಿ ಇವುಗಳನ್ನೆಲ್ಲ ಅತ್ಯಂತ ಪ್ರಾಂಜಲವಾಗಿ ನಿರೂಪಿಸಿರುವುದು ಮಾತ್ರವಲ್ಲ, ತಾವೂ ಇದೇ ಮಾರ್ಗವನ್ನು ಅನುಸರಿಸಿ ನಡೆದಿದ್ದಾರೆ. ಎಚ್ಚೆಸ್ವಿಯವರು ಬೆಂಗಳೂರಿಗೆ ಹೋಗಿ ನೆಲೆನಿಂತಮೇಲೆ, ಎನ್.ಎಸ್. ಚಿದಂಬರರಾವ್ ಅವರ ಮೊದಲ ಕಥಾಸಂಕಲನವನ್ನು ಹೊರತರುವುದರಲ್ಲಿ ಇಂಥದೇ ಪ್ರೀತಿಯ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಇದಲ್ಲದೇ, ನನ್ನ ಮೊದಲ ಎರಡು ಕಥಾ ಸಂಕಲನಗಳು,`ಒಡಪುಗಳು' ಮತ್ತು `ಪ್ರತಿಮೆಗಳು' ಸಂಕಲನಗಳ ಪ್ರಕಾಶನದ ಪೂರ್ಣ ಜವಾಬ್ದಾರಿಯನ್ನು ಎಚ್ಚೆಸ್ವಿಯವರೇ ನಿರ್ವಹಿಸಿದರು.

ಮಲ್ಲಾಡಿಹಳ್ಳಿಯಲ್ಲಿದ್ದ ನನ್ನನ್ನು ಸಾಹಿತ್ಯದ ರಾಜಮಾರ್ಗದಲ್ಲಿ ಕೈಹಿಡಿದು ನಡೆಸಿದವರು ಈ ವೆಂಕಟೇಶಮೂರ್ತಿಯವರೇ. ಎಚ್ಚೆಸ್ವಿಯವರಲ್ಲಿ ಇಂಥ ಧೋರಣೆ - ಸೌಹಾರ್ದದ ಸಂಬಂಧ ನಿರ್ಮಾಣ - ವ್ಯಕ್ತವಾಗುತ್ತಿದ್ದದ್ದು ತಾನು ಪರೋಪಕಾರದ ಕೈಂಕರ್ಯ ನಡೆಸುತ್ತಿದ್ದೇನೆ ಎನ್ನುವ ಪ್ರಜ್ಞೆಯಲ್ಲಿ ಅಲ್ಲವೇ ಅಲ್ಲ... ಅದೊಂದು ಬಗೆಯ, ಸಹಜ ಅಂತಃಪ್ರೇರಣೆಯಿಂದ ನಡೆಯುತ್ತಿದ್ದ ಹವನ! ತಾವು ಆ ಸಂದರ್ಭದಲ್ಲಿ ಹಾಗೆ ನಡೆದುಕೊಳ್ಳುವುದರಿಂದ ಸಾಂಸ್ಕೃತಿಕ ಒಳಿತೊಂದು ಸಂಭವಿಸುತ್ತದೆ ಎನ್ನುವ ಆಂತರಂಗಿಕ ತಿಳುವಳಿಕೆ ಮತ್ತು ಅಂತಃಕರಣದ ಸದ್ಭಾವನೆಯ ನೆಲೆಯಲ್ಲಿ, ಅವರು ಸಹಜವಾಗಿ ಒಳಿತಿನ ಘಟನೆಗಳಲ್ಲಿ ತೊಡಗಿಬಿಟ್ಟಿರುತ್ತಿದ್ದರು... ಅವರ ಇಂತಹ ಕಾರ್ಯತತ್ಪರತೆ ಕುರಿತಂತೆ, ಸ್ವತಃ ನನ್ನ ಬದುಕಿನುದ್ದಕ್ಕೂ ಒದಗಿದ ಹಲವಾರು ಅಮೃತ ಘಳಿಗೆಗಳ ನೆನಪುಗಳು ನನ್ನಲ್ಲಿವೆ.

ಎಚ್ಚೆಸ್ವಿಯವರ ಸಾಹಿತ್ಯಿಕ ಜೀವನದೊಂದಿಗಿನ ನನ್ನ ಸಾಹಿತ್ಯಿಕ ಜೀವನದ ಸಂಬಂಧವನ್ನು ಗುರುತಿಸಿಕೊಳ್ಳುವಾಗ, ಅದೇಕೋ ಏನೋ... ಜೀವಶಾಸ್ತ್ರದ ವಿದ್ಯಾರ್ಥಿಯಾದ ನನಗೆ, ಒಮ್ಮೆಲೆ ಗಣಿತದ, ಸೆಟ್ ಥಿಯರಿಯ (ಗಣಗಳ ಸಿದ್ಧಾಂತ), ರೂಪಕವೊಂದು ಗೋಚರವಾಯಿತು... ಬಹುಶಃ, ಎಚ್ಚೆಸ್ವಿಯವರ ಸಂಬಂಧಗಳ ಜಾಲವನ್ನು ಹೆಣೆಯುವ ಅವರ ಪ್ರೇಮದ ಸ್ವಭಾವದೊಂದಿಗೆ ನನ್ನ ಸಾಹಿತ್ಯ ಜೀವನವು ಹೊಂದಿರುವ ಸಂಬಂಧವನ್ನು ಅತ್ಯಂತ ಖಚಿತವಾಗಿ ಹೇಳಲು ಗಣಿತಶಾಸ್ತ್ರದ ಖಚಿತತೆಯೇ ಯೋಗ್ಯವಾದದ್ದು ಎನ್ನುವ ಕಾರಣ ನನ್ನ ಅಂತರಂಗಕ್ಕೆ ಹೊಳೆದಿರಬಹುದು. ಇರಲಿ... ನನ್ನ ಸಾಹಿತ್ಯಿಕ ಬದುಕಿನ ಬಹುದೊಡ್ಡ ಭಾಗವು, (ಎಲ್ಲೋ ಒಂದಿಷ್ಟು ಭಾಗ ಮಾತ್ರ, `ಎಚ್ಚೆಸ್ವಿ ಸಾಹಿತ್ಯಿಕ ವಿಶ್ವಗಣ'ದ ಹೊರಗುಳಿದಿರಬಹುದು), ಎಚ್ಚೆಸ್ವಿಯವರ ಸಾಹಿತ್ಯಿಕ ಬದುಕಿನ, ವಿಶಾಲವಾದ `ವಿಶ್ವ ಗಣ'ದ (ಯೂನಿವರ್ಸಲ್ ಸೆಟ್) ಒಂದು ಚಿಕ್ಕ ಭಾಗ ವಾಗಿದೆ. ನನ್ನ ಸಾಹಿತ್ಯಿಕ ಜೀವನವನ್ನು `ಎಚ್.ಎಸ್.ವಿ. ಸಾಹಿತ್ಯಿಕ ವಿಶ್ವ ಗಣ'ದ ಸಬ್ ಸೆಟ್ ಎಂದು ಪರಿಭಾವಿಸುವಷ್ಟು ಎಚ್ಚೆಸ್ವಿಯವರಿಗೆ ಸಂಬಂಧ ಪಟ್ಟುದಾಗಿದೆ. ನನ್ನ ಬದುಕನ್ನು, ಸಾಂಸ್ಕೃತಿಕ ಶ್ರೀಮಂತಿಕೆಯ, ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮದ ನೆಲದಲ್ಲಿ ಪ್ರತಿಷ್ಠಾಪಿಸುವಲ್ಲಿ ಗರಿಷ್ಟ ಪ್ರಮಾಣದ ಆಸಕ್ತಿ ವಹಿಸಿದ್ದಲ್ಲದೇ, ಅದು ಅಲ್ಲಿ ಬೇರುಬಿಟ್ಟು ಹುಲುಸಾಗಿ ಬೆಳೆಯುವಂತೆ, ಹೂಬಿಟ್ಟು ಕಂಗೊಳಿಸುವಂತೆ ಮಾಡುವಲ್ಲಿ ಮತ್ತು ಫಲವಂತಿಕೆಯನ್ನು ಸಾಧಿಸುವ ಪ್ರೇರಣೆಯನ್ನು ನೀಡುವಲ್ಲಿ, ಎಚ್ಚೆಸ್ವಿಯವರ ಸದಾಕಾಂಕ್ಷೆ ಮತ್ತು ಪ್ರೋತ್ಸಾಹಗಳ ಗರಿಷ್ಟ ಕರ್ತೃತ್ವವಿದೆ.

ಇವೆಲ್ಲವುಗಳೂ ನನ್ನ ಬದುಕಿನ ಅಮೃತ ಘಳಿಗೆಗಳಾಗಿವೆ...! ಅಂತಲೇ ಅವು ಸಂಭವಿಸಿದ ದಿನಾಂಕ ಸಮಯ ಮೊದಲು ಮಾಡಿಕೊಂಡು... ಎಲ್ಲವೂ ನನಗೆ ನೆನಪಿವೆ... ಅದು 1973ರ ಜುಲೈ 16ರ ಬೆಳಗಿನ ಹನ್ನೊಂದು ಗಂಟೆಯ ಮುಹೂರ್ತ... ಅಂದು ಸೋಮವಾರ. ಅದಾಗಲೇ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನ ಇಂಟರ್‌ವ್ಯೂನಲ್ಲಿ ಆಯ್ಕೆಗೊಂಡು, ನೇಮಕಾತಿಯ ಆದೇಶ ಎಚ್ಚೆಸ್ವಿಯವರಿಗೆ ಸಿಕ್ಕಿದ್ದಿತು. ಆದರೆ ಅವರು ಮಲ್ಲಾಡಿಹಳ್ಳಿಯ ಪ್ರೌಢಶಾಲೆಯಿಂದ ಇನ್ನೂ ಬಿಡುಗಡೆ ಹೊಂದಿರಲಿಲ್ಲ... ಅಂದು, ಮಲ್ಲಾಡಿಹಳ್ಳಿಯ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರಾರ್ಥನೆ ಮುಗಿದು ಪ್ರಾರ್ಥನೆಯಲ್ಲಿ ಪಾಲುಗೊಂಡ ಅಧ್ಯಾಪಕರು ಒಬ್ಬೊಬ್ಬರಾಗಿ ಸ್ಟಾಫ್ ರೂಮಿಗೆ ಬರುತ್ತಿದ್ದ ಸಮಯವದು... ಆಗ ಒದಗಿತ್ತು ನೋಡಿ ನನಗೆ ವೆಂಕಟೇಶಮೂರ್ತಿಯವರ ಪ್ರಥಮ ಭೇಟಿ... ಮಲ್ಲಾಡಿಹಳ್ಳಿಯ ಪದವಿ ಪೂರ್ವ ಕಾಲೇಜಿನಲ್ಲಿ ಜೀವಶಾಸ್ತçದ ಉಪನ್ಯಾಸಕ ವೃತ್ತಿಗೆ ಅರ್ಜಿ ಸಲ್ಲಿಸಿ ನಾನು ಇಂಟರ್‌ವ್ಯೂಗೆ ಹೋದ ಸಂದರ್ಭವದು. ಸ್ಟಾಫ್ ರೂಮಿನಲ್ಲಿ ನಿರಾಸಕ್ತಿಯಿಂದ ಕುಳಿತಿದ್ದೆ... ಸ್ಟಾಫ್ ರೂಮಿಗೆ ಬಂದ ಎಚ್ಚೆಸ್ವಿಯವರು ನನ್ನನ್ನು ನೋಡಿ ‘ಇಂಟರ್‌ವ್ಯೂಗೆ ಬಂದಿದ್ದೀರಾ... ಯಾವ ಊರು’ ಎಂದು ಕೇಳಿದರು. (ಉಳಿದ ಅಧ್ಯಾಪಕರಾರೂ ನನ್ನನ್ನು ವಿಚಾರಿಸಿರಲಿಲ್ಲ). ನಾನು ನಿರಾಸಕ್ತಿಯಿಂದ `ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ...' ಅಂದೆ. (ಬೆಟಗೇರಿ ಎಂದೊಡನೆ ಎಲ್ಲರೂ ಗದಗ ಬೆಟಗೇರಿಯಾ...? ಎಂದು ಕೇಳುತ್ತಿದ್ದರು. ಆದ್ದರಿಂದ ನಾನು ನನ್ನ ಊರಿನ ಹೆಸರು ಹೇಳುವಾಗ ಜಿಲ್ಲೆ ತಾಲೂಕುಗಳ ವಾಚನದೊಂದಿಗೇ ನನ್ನ ಊರಿನ ಹೆಸರು ಹೇಳುತ್ತೇನೆ). ಎಚ್ಚೆಸ್ವಿ ಒಮ್ಮೆಲೆ ಉದ್ದೀಪ್ತರಾದಂತೆ ತೋರಿದರು...! ಕಣ್ಣುಗಳಲ್ಲಿ ಅಪಾರವಾದ ಆಸಕ್ತಿಯ ಕಿರಣಗಳನ್ನು ಹೊಮ್ಮಿಸುತ್ತ, `ಹಾಂ...! ಕೃಷ್ಣಶರ್ಮರ ಬೆಟಗೇರಿಯೇ? ನಿಮಗವರು ಗೊತ್ತಾ?' ಎಂದು ಉದ್ಗರಿಸಿದರು.

ನನಗೆ ಅವರ ಪ್ರಶ್ನೆಯಲ್ಲಿದ್ದ ಉತ್ಸಾಹದ ಧ್ವನಿ ಆಶ್ಚರ್ಯವನ್ನುಂಟುಮಾಡಿತು. ಬೆಳಗಾವಿಯಿಂದ ಮಲ್ಲಾಡಿಹಳ್ಳಿಗೆ ಹೊರಡುವ ಪೂರ್ವದಲ್ಲಿ, ಅಲ್ಲಿನ ರೇಲ್ವೆ ಸ್ಟೇಶನ್ ಮಾಸ್ರ‍್ರು ಒಂದು ಮಾತು ಹೇಳಿದ್ದರು... `ನೀವು ಸುಮ್ಮನೇ ಅಲ್ಲಿಗೆ ಸಂದರ್ಶನಕ್ಕೆ ಹೋಗಿಬರಬೇಕು ಅಷ್ಟೇ... ಈಗಾಗಲೇ ಅಲ್ಲಿ, ಅವರು ಆ ಕೆಲಸಕ್ಕೆ ಯಾರನ್ನೋ ಆಯ್ಕೆ ಮಾಡಿಕೊಂಡಿರು ತ್ತಾರೆ...' ಎಂದು ಹೇಳಿದ್ದನ್ನು ನಂಬಿದ್ದ ನಾನು, ನನ್ನ ನಿರಾಸಕ್ತಿಯ ಸ್ಥಾಯಿಯಲ್ಲಿಯೇ ಉಳಿದು, ನಿರ್ಭಾವುಕನಾಗಿಯೇ ಉತ್ತರಿಸಿದೆ - `ಹಾಂ... ಗೊತ್ತು ಸರ್... ಅವರು ನನ್ನ ಕಾಕಾ... ನನ್ನ ಚಿಕ್ಕಪ್ಪನವರು' ಎಂದೆ. ಎಚ್ಚೆಸ್ವಿಯವರ ಉತ್ಸಾಹ ಪರಾಕಾಷ್ಠೆಯನ್ನೇ ಮುಟ್ಟಿತು... `ಬನ್ನಿ ಬನ್ನಿ...' ಎಂದು ಅವರು ನನ್ನನ್ನು ಅವಸರದಿಂದ ಪ್ರಾಚಾರ್ಯರ ಬಳಿಗೆ ಕರೆದೊಯ್ದು - `ಸರ್... ಗೊತ್ತಾ...! ಇವರು ಬೆಟಗೇರಿ ಕೃಷ್ಣಶರ್ಮರ ಅಣ್ಣನ ಮಗ! ನಮ್ಮ ಕಾಲೇಜಿನ ಜೀವಶಾಸ್ತ್ರದ ಉಪನ್ಯಾಸಕ ಹುದ್ದೆಯ ಸಂದರ್ಶನಕ್ಕೆ ಬಂದಿದ್ದಾರೆ...' ಎಂದು ಪರಿಚಯಿಸಿ, ಅವರಲ್ಲಿಯೂ ಉತ್ಸಾಹವನ್ನು ಕುದುರಿಸಿದರು. ನನ್ನನ್ನು ಅಲ್ಲಿಂದ, ಅನಾಥ ಸೇವಾಶ್ರಮದ ಸ್ಥಾಪಕ ಅಧ್ಯಕ್ಷರಾದ ರಾಘವೇಂದ್ರ ಸ್ವಾಮೀಜಿಯವರ ಭೇಟಿಗೆ ಕಳಿಸಿದರು. ಇಂಟರ್‌ವ್ಯೂದ ನಂತರ ನಡೆದ ಡೆಮೋ ಕ್ಲಾಸುಗಳ ಪರೀಕ್ಷಕರಾಗಿ ಎಚ್ಚೆಸ್ವಿ ಇದ್ದರು; ನನ್ನ ತರಗತಿಗೆ ಬಂದು ನಾನು ಮಾಡಿದ ಪಾಠವನ್ನೂ ನೋಡಿದರು... ನನ್ನದೇ ಕೊನೆಯ ಡೆಮೊ ಕ್ಲಾಸ್. ಕ್ಲಾಸ್ ಮುಗಿಸಿಕೊಂಡು ಕ್ಲಾಸ್‌ರೂಮಿನಿಂದ ಸ್ಟಾಫ್ ರೂಮಿನಕಡೆ ಹೊರಟಿದ್ದ ನನ್ನೊಡನೆ ಬಂದ ಎಚ್ಚೆಸ್ವಿ, ಉತ್ಸಾಹದಿಂದ ಹೇಳಿದರು, `ನಿಮ್ಮ ಕ್ಲಾಸ್ ಚೆನ್ನಾಗಿತ್ತು... ಶೇಕಡಾ ೯೯ರಷ್ಟು ನಿಮ್ಮ ಆಯ್ಕೆ ಆಗಿಹೋಗಿದೆ...'

ಎಂದು ಉತ್ಸಾಹದಿಂದ ಹೇಳಿದರು. ಕೊನೆಗೆ, ಸಂಜೆಯಷ್ಟೊತ್ತಿಗೆ, ನನ್ನ ಆಯ್ಕೆ ನಡೆದು, ನನಗೆ ನೇಮಕಾತಿ ಆದೇಶ ದೊರೆಯುವವರೆಗೂ... ನನ್ನ ಬಗೆಗಿನ ಎಚ್ಚೆಸ್ವಿಯವರ ಉತ್ಸಾಹ ಹೆಚ್ಚುತ್ತಲೇ ಹೋದದ್ದು ನನ್ನ ಜೀವನದ ಒಂದು ಅಮೃತ ನೆನಪು! ಬರೀ ಸಾಹಿತಿಯೊಬ್ಬನ ಹೆಸರನ್ನು ಕೇಳುವುದರಿಂದಲೇ ಉದ್ದೀಪ್ತಗೊಳ್ಳುವ ಎಚ್ಚೆಸ್ವಿಯವರ ಮನಸು, ಕೃತಿ ಮತ್ತು ಬದುಕುಗಳು ಸಾಹಿತ್ಯ ಚರಿತ್ರೆಯ ಬಗೆಗೆ ಯಾವ ಪ್ರಮಾಣದಲ್ಲಿ ಇತ್ಯಾತ್ಮಕ ತುಡಿತ ಹೊಂದಿರಬಹುದೆನ್ನುವುದನ್ನು ನಾವು ಊಹಿಸಬಹುದು.

ಆ ನಂತರ, ಜೀವಶಾಸ್ತ್ರದ ಅಧ್ಯಾಪಕನಾದ ನಾನು, ಮಲ್ಲಾಡಿಹಳ್ಳಿಯಲ್ಲಿನ ಸಾಂಸ್ಕೃತಿಕ ವಾತಾವರಣದಿಂದ ಪ್ರಭಾವಿತನಾಗಿಯೋ ಅಥವಾ ಎಚ್ಚೆಸ್ವಿಯವರು ತೆರವು ಮಾಡಿದ ಸ್ಥಳವನ್ನು ತುಂಬುವ ಉಮೇದಿನಿಂದಲೋ, ಆಕಸ್ಮಿಕವೆಂತಲೇ ಹೇಳಬೇಕು, ಅಂತೂ, ನಾನು ಬರವಣಿಗೆಯ ಬಗೆಗೆ ಆಸಕ್ತಿ ತಳೆದೆ... ಕವಿತೆ ಬರೆಯ ತೊಡಗಿದೆ... ಚಿದಂಬರರಾವ್ ಮತ್ತು ರಾಮಪ್ಪ ಅವರ ಮುಂದೆ ಓದುತ್ತಿದ್ದೆ. ಎಚ್ಚೆಸ್ವಿ ತಮ್ಮ ಊರು, ಹೋದಿಗೆರೆಗೆ ಬಂದಾಗಲೆಲ್ಲ ಮಲ್ಲಾಡಿಹಳ್ಳಿಗೆ ಬರದೇ ಹೋಗುತ್ತಿರಲಿಲ್ಲ. ಅವರು ಬಂದಾಗಲೆಲ್ಲ ನನ್ನ ಕವಿತೆಗಳನ್ನು ತೋರಿಸುತ್ತಿದ್ದೆ ಮತ್ತು ಅವರ ಪ್ರೋತ್ಸಾಹದ ಮಾತುಗಳಿಂದ ಇನ್ನಷ್ಟು ಹುರುಪಿನಿಂದ ತೊಡಗುತ್ತಿದ್ದೆ... ಮತ್ತೆ ಇನ್ನೊಂದು ಅಮೃತ ದಿನ... 1975ರ ಜೂನ್ ತಿಂಗಳಿನ ಒಂದು ಶನಿವಾರವದು... ಅಷ್ಟರಲ್ಲಾಗಲೇ ಮಲ್ಲಾಡಿಹಳ್ಳಿಯಲ್ಲಿ ಸಾಕಷ್ಟು ಮಳೆ ಸುರಿದು, ಆಶ್ರಮದ ಆವರಣವೆಲ್ಲ ಹಸಿರಾಗಿದ್ದಿತು. ಶನಿವಾರ ಶಾಲೆಗೆ ಅರ್ಧ ದಿನದ ಬಿಡುವು... ಬೆಳಗಿನ ಅವಧಿಯ ತರಗತಿಗಳೆಲ್ಲ ಮುಗಿದವು. ಚಿದಂಬರರಾಯರು, `ಇಂದು ಎಚ್ಚೆಸ್ವಿ ಬರ್ತಾ ಇದಾರೆ... ಒಂದರ್ಧ ಗಂಟೆ ಬಿಟ್ಟು ನಮ್ಮ ಮನೆಗೆ ಬನ್ನಿ...' ಎಂದು ಹೇಳಿದರು. ನಾನು ಮನೆಗೆ ಹೋಗಿ ನನ್ನ ಕವಿತೆಗಳ ಪುಸ್ತಕ ಮತ್ತು ನಾಲ್ಕೈದು ಪುಟಗಳಷ್ಟು ಬರೆದಿದ್ದ ಒಂದು ಗದ್ಯದ ತುಣುಕನ್ನು ತೆಗೆದುಕೊಂಡು ಚಿದಂಬರರಾಯರ ಮನೆಗೆ ಓಡಿದೆ. ನಾನು ಹೋಗುವಷ್ಟರಲ್ಲಿ ಅಲ್ಲಿ ಎಚ್ಚೆಸ್ವಿ ಬಂದಿದ್ದರು. ನನ್ನನ್ನು ಪ್ರೀತಿಯಿಂದ ಮಾತನಾಡಿಸಿ, `ಹೊಸದು ಏನಾದರೂ ಬರೆದಿದ್ದೀರಾ...' ಎಂದರು. ನಾನು ನನ್ನ ಕವಿತೆಗಳ ನೋಟ್‌ಪುಸ್ತಕ ಕೊಟ್ಟೆ. ಕವಿತೆಗಳನ್ನು ಓದಿ, ಕೆಲವು ಕವಿತೆಗಳನ್ನು ಮೆಚ್ಚಿ - ಈ ಕವಿತೆಗಳನ್ನು ಪ್ರತಿ ಮಾಡಿಕೊಡಿ...

ವೈಕುಂಠರಾಜು ಅವರಿಗೆ ತಲುಪಿಸುತ್ತೇನೆ - ಎಂದು ಹೇಳಿದರು. ಅದಾದ ಮೇಲೆ ನಾನು ನನ್ನ ಗದ್ಯದ ತುಣುಕನ್ನು ಅನುಮಾನಿಸುತ್ತ ಅವರ ಕೈಗಿತ್ತೆ. ಎಚ್ಚೆಸ್ವಿ ತನ್ಮಯರಾಗಿ ಓದಿದರು... ಓದಿಯಾದಮೇಲೆ ಒಂದೆರಡು ನಿಮಿಷ ಸ್ತಬ್ಧರಾಗಿ, ನಿಶಬ್ದರಾಗಿ ಕುಳಿತುಬಿಟ್ಟರು... ನಾನು ಆತಂಕ - ಕುತೂಹಲದಿಂದ ಅವರ ಮುಖ ನೋಡುತ್ತಿದ್ದರೆ, ಅವರು ಒಮ್ಮೆಲೆ, ಅತ್ಯಂತ ಆಳವಾದ ಧ್ವನಿಯಲ್ಲಿ, ಅಂತರಾಳದಿಂದ ಉಗ್ಗಡಿಸುವಂತೆ - `ಪಾಟೀಲ್... ನೀವು ಗದ್ಯ ಬರೀಬೇಕು... ನೀವು ಕಥೆ ಬರೀಬೇಕು...' ಎಂದು ಹೇಳಿದರು. ಅವರ ಮಾತಿನ ಆಳ ಮತ್ತು ಅಂತಃಕರಣ ನನ್ನ ಮೇಲೆ ಅಗಾಧ ಪರಿಣಾಮ ಬೀರಿದವು... ಅವರ ಅಂತರಂಗದ ಆ ಮಾತಿನಿಂದ ನನಗೆ ನನ್ನ ಬರೆಹದ ಅಭಿವ್ಯಕ್ತಿಯ ಮಾರ್ಗ ಯಾವುದೆನ್ನುವುದು ನನ್ನ ಅಂತರಂಗಕ್ಕೆ ತಿಳಿದು ಹೋಯಿತು. ಎಚ್ಚೆಸ್ವಿ ಅಂದು ನನಗೆ ಕಥನದ ದೀಕ್ಷೆ ಕೊಟ್ಟರು... ಅಂದಿನಿಂದ ನಾನು ಕಥೆ ಬರೆಯತೊಡಗಿದೆ. ನನ್ನ ಕಥೆಗಳ ಮೊದಲ ಓದುಗರಾಗಿಯೂ ಎಚ್ಚೆಸ್ವಿ ನಾನು ಕಥನ ಮಾರ್ಗದಲ್ಲಿ ಯಶಸ್ವಿಯಾಗಿ ಸಾಗುವಂತೆ ಮಾರ್ಗದರ್ಶನ ಮಾಡಿದ್ದಾರೆ. ಬರೀ ಕಥನ ಮಾತ್ರವಲ್ಲ... ಕವಿತೆಯನ್ನು ಓದುವುದು, ಅದನ್ನು ಅರ್ಥೈಸುವುದು ಮತ್ತು ವಿಮರ್ಶೆ ಬರೆಯುವುದರ ಕುರಿತಂತೆಯೂ ಎಚ್ಚೆಸ್ವಿ ನನಗೆ ಪ್ರೋತ್ಸಾಹ ನೀಡಿ ಬರೆಯಹಚ್ಚಿದರು. 1980ರ ದಶಕದಲ್ಲಿ ನಾವಿಬ್ಬರೂ ಸೇರಿ `ಹೊಸ ಕಾವ್ಯದ ಮುನ್ನೆಲೆ' ಎಂತೆನ್ನುವ, ಹೊಸ ಕವಿಗಳ ಕುರಿತ ವಿಮರ್ಶಾ ಲೇಖನಗಳ ಎರಡು ಸಂಪುಟಗಳನ್ನು ಪ್ರಕಟಿಸಿದೆವು. ಮೊದಲ ಸಂಪುಟದಲ್ಲಿ ಪ್ರಕಟಗೊಂಡ ಕಂಬಾರರ ಕಾವ್ಯದ ಬಗೆಗೆ ಬರೆದ ಲೇಖನವೇ ನನ್ನ ಮೊದಲ ವಿಮರ್ಶಾ ಬರೆಹ.

ಎಚ್ಚೆಸ್ವಿಯವರಲ್ಲಿ, ತಮ್ಮ ಸುತ್ತಲಿನವರನ್ನು ಸಾಂಸ್ಕೃತಿಕವಾಗಿ ಪ್ರೇರೇಪಿಸಿ ಅವರ ಅಂತರಂಗವನ್ನು ಶ್ರೀಮಂತಗೊಳಿಸಬೇಕೆನ್ನುವ `ಮಿಶನ್' ಯಾವತ್ತಿಗೂ ಅಂತರ್ಗತ ವಾಗಿದೆ. ಅದು ಸದಾ ಜಾಗೃತವಾಗಿದ್ದು, ಸಹೃದಯತೆಯ ಸಸಿ ನೆಡಲು ಸದಾ ಸೂಕ್ತವಾದ ಮಾನುಷ ಹೃದಯಗಳ ಮಾತೃಕೆಗಳನ್ನು ಹುಡುಕುತ್ತಿರುತ್ತದೆ. ಅಂತಲೇ ಅವರು ತಮ್ಮ ಅಧ್ಯಾಪನದಿಂದ, ತಮ್ಮ ಸಾಹಿತ್ಯ ಸೃಷ್ಟಿಯ ಸತತ ಕ್ರಿಯಾ ಶೀಲತೆಯಿಂದ ತೃಪ್ತಗೊಳ್ಳುವುದಿಲ್ಲ. ಕಾಲೇಜಿನಲ್ಲಿ `ಕನ್ನಡ ಸಂಘ' ಕಟ್ಟಿ ತಮ್ಮ ಮಿಶನ್ನಿನ ಕಾರ್ಯ ಸಾಧನೆಗೆ ತೊಡಗುತ್ತಾರೆ. ಪುತಿನ ಟ್ರಸ್ಟಿನ ವಿಧಾಯಕ ಚಟುವಟಿಕೆಗಳ ಅಧ್ವರ್ಯುಗಳಾಗುತ್ತಾರೆ. ತುಂಬ ಇತ್ತೀಚೆಗೆ, ಅವರು ತಮ್ಮ ಅನಾರೋಗ್ಯದ ಸಂದರ್ಭದಲ್ಲಿಯೂ, ಹಾಸನದಲ್ಲಿ ನಡೆದ ಹೊಯ್ಸಳ ಸಾಹಿತ್ಯ ಉತ್ಸವದ ಅಧ್ಯಕ್ಷರಾಗಿ ಅದರ ಸಂಯೋಜನೆಯ ಜವಾಬ್ದಾರಿಯನ್ನು ನಿರ್ವಹಿಸಿದರು. ಎಚ್ಚೆಸ್ವಿಯವರ ನಿರ್ದೇಶನದಲ್ಲಿ ನಡೆದ ಆ ಸಾಹಿತ್ಯ ಉತ್ಸವವು ಮಾದರಿಯ ಉತ್ಸವ ಎನ್ನಿಸಿಕೊಳ್ಳುವಂತೆ ಸಂಪನ್ನಗೊಂಡಿತು.

MORE FEATURES

ನಿವೃತ್ತರಾದಮೇಲೂ ಅದೇ ಕಾರ್ಯಗಳಲ್ಲಿ ನಿರತರಾಗಿದ್ದಾರೆ

10-03-2025 ಬೆಂಗಳೂರು

"ಎರಡನೆಯವರು ಅನ್ವಯಿಕ ಮನೋವಿಜ್ಞಾನದ ಪ್ರವರ್ತಕರು. ಇವೆರಡು ಮನೋವಿಜ್ಞಾನದ ಎರಡು ಕಣ್ಣುಗಳಿದ್ದಂತೆ. ಪ್ರಸ್ತುತ ಗ್ರ...

ಹುಲಿ ಪತ್ರಿಕೆ ಒಂದು ಪತ್ರಿಕೆಯ ಸುತ್ತ ಸುತ್ತುವ ಪತ್ತೆದಾರಿ ದಾಟಿಯಲ್ಲಿರುವ ಕಾದಂಬರಿ

10-03-2025 ಬೆಂಗಳೂರು

“ಈ ರೀತಿಯ ಪ್ರಯೋಗ ಕನ್ನಡ ಸಾಹಿತ್ಯದಲ್ಲಿ ಅತೀ ವಿರಳವಾಗಿರುವಾಗ ಈ ಪ್ರಯೋಗಕ್ಕೆ ಒಂದು ಚಪ್ಪಾಳೆ ಕೊಡಲೇಬೇಕು,&rdq...

ಮೊದಲ ಪುಟದಿಂದಲೇ ಕುತೂಹಲದಿಂದ ಸಾಗುವ ಕಥೆ

10-03-2025 ಬೆಂಗಳೂರು

“ಪ್ರಣೀತ್, ಪ್ರತೀಕ್ಷಾ ದಕ್ಷ ಆಡಳಿತ ಸೇವೆ, ಜಯ ಚಂದ್ರ ಸಾಗರ್ ಕುಟುಂಬ ಪರಿಚಯ, ರಾಜಕೀಯ ಹಿನ್ನಲೆ, ಮುಂತಾದ ವಿಷಯಗ...