ಬರವಣಿಗೆಯ ಮೌಲ್ಯದಿಂದಾಗಿ ಓದಿಸಿಕೊಂಡು ಹೋಗುವ ಈ ಕೃತಿ ಎಲ್ಲರಿಗೂ ಆಪ್ತವಾಗುತ್ತದೆ. ನಾಟಕರಂಗದ ಅನುಭವಗಳನ್ನು , ಕೌಟುಂಬಿಕ ಬದುಕಿನ ಘಟನೆಗಳನ್ನು ಯಾವ ಸಂಕೋಚವಿಲ್ಲದೆ, ಅಂಜಿಕೆಯಿಲ್ಲದೆ ಸರಳವಾಗಿ, ನೇರವಾಗಿ, ಬರೆದ ರೀತಿ ಶ್ಲಾಘನೀಯ ಎನ್ನುತ್ತಾರೆ ಬರಹಗಾರ್ತಿ ವಾಣಿಶ್ರೀ ಕೊಂಚಾಡಿ. ಲೇಖಕಿ, ನಟಿ ಭಾರ್ಗವಿ ನಾರಾಯಣ್ ಅವರ ನಾನು, ಭಾರ್ಗವಿ (ಆತ್ಮಕಥನ) ಕುರಿತಾಗಿ ಅವರು ಬರೆದ ಟಿಪ್ಪಣಿ ಇಲ್ಲಿದೆ..
ಪುಸ್ತಕದ ಹೆಸರು: ನಾನು, ಭಾರ್ಗವಿ (ಆತ್ಮಕಥನ)
ಲೇಖಕಿ :ಭಾರ್ಗವಿ ನಾರಾಯಣ್
ಪ್ರಕಾಶಕರು :ಅಂಕಿತ ಪುಸ್ತಕ
ಬೆಲೆ: ರೂ.250/
ಟಿವಿ ಧಾರಾವಾಹಿಗಳ ವೀಕ್ಷಕರಿಗೆ ಚಿರಪರಿಚಿತವಾದ ಮುಖ ಭಾರ್ಗವಿ ನಾರಾಯಣ್ ಅವರದ್ದು ನಾಟಕ ಪ್ರಿಯರ ನೆಚ್ಚಿನ ಕಲಾವಿದೆ ಇವರ ಸಹಜವಾದ ಅಭಿನಯ ಸರಳವಾದ ನಡೆನುಡಿಯನ್ನು ನೋಡಿದಾಗ ನಮ್ಮ ಅಮ್ಮ ಅಜ್ಜಿ ಸೋದರತ್ತೆ ಇವರೆಲ್ಲರ ನೆನಪಾಗುತ್ತದೆ. ನಮ್ಮ ಮನೆಯ ಸದಸ್ಯೆಯೆಯೇನೋ ಅನ್ನಿಸುವುದಂತೂ ಸುಳ್ಳಲ್ಲ.
ಸುಮಾರು 2001/2002 ಸುಮಾರಿಗೆ ಪ್ರಸಾರವಾಗುತ್ತಿದ್ದ 'ಗರ್ವ' ಮತ್ತೆ 'ಮುಕ್ತ'ದ ಅಜ್ಜಿಯ ಪಾತ್ರ ತುಂಬಾ ಇಷ್ಟ. ಮತ್ತೆ ಸೇತುರಾಂ ಸರ್ ರವರ 'ಮಂಥನ' ಧಾರಾವಾಹಿಯ ಮುಖ್ಯಮಂತ್ರಿಯ ಪಾತ್ರವನ್ನಂತೂ ವೀಕ್ಷಕರು ಮರೆಯುವಂತಿಲ್ಲ.
ಹಲವಾರು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ, ರಂಗಭೂಮಿ ಕಲಾವಿದೆಯಾಗಿ ಅಲ್ಲದೆ ಅನೇಕ ನಾಟಕಗಳಲ್ಲಿ ಅಭಿನಯಿಸಿರುವ ಭಾರ್ಗವಿ ಅವರದು ಕಲಾ ಕುಟುಂಬ.
ಪ್ರೊಫೆಸರ್ ಹುಚ್ಚುರಾಯ ಚಿತ್ರದಲ್ಲಿನ ಭಾರ್ಗವಿ ಅವರ ನಟನೆಗೆ 1974-75ರ ಸಾಲಿನ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ,ರಾಜ್ಯ ಪ್ರಶಸ್ತಿ ಸಿಕ್ಕಿತ್ತು. 1998 ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿಗಳು, ಭಾರ್ಗವಿ ಅವರ ಪಾಲಾಗಿದೆ. 2012ರಲ್ಲಿ ಬಿಡುಗಡೆಯಾದ 'ನಾನು ,ಭಾರ್ಗವಿ' ಎಂಬ ಅವರ ಆತ್ಮಕಥೆಗಾಗಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ದೊರಕಿದೆ.
ಪ್ರಸ್ತುತ 'ನಾನು , ಭಾರ್ಗವಿ ' ಆತ್ಮಕಥನದಲ್ಲಿ ಭಾರ್ಗವಿಯವರ ಬಾಲ್ಯದಿಂದ ಪ್ರಾರಂಭವಾಗಿ ಆನಂತರದ ಬದುಕಿನ ಎಲ್ಲಾ ಹಂತಗಳಲ್ಲೂ ಎದುರಾಗುವ ಸಮಸ್ಯೆಗಳು, ಏರಿಳಿತಗಳು, ಸುಖ- ದು:ಖ ಎಲ್ಲವನ್ನೂ ತನ್ನ ಬರವಣಿಗೆಯಲ್ಲಿ ದಾಖಲಿಸಿದ್ದಾರೆ.
ಬರವಣಿಗೆಯ ಮೌಲ್ಯದಿಂದಾಗಿ ಓದಿಸಿಕೊಂಡು ಹೋಗುವ ಈ ಕೃತಿ ಎಲ್ಲರಿಗೂ ಆಪ್ತವಾಗುತ್ತದೆ. ನಾಟಕರಂಗದ ಅನುಭವಗಳನ್ನು , ಕೌಟುಂಬಿಕ ಬದುಕಿನ ಘಟನೆಗಳನ್ನು ಯಾವ ಸಂಕೋಚವಿಲ್ಲದೆ, ಅಂಜಿಕೆಯಿಲ್ಲದೆ ಸರಳವಾಗಿ, ನೇರವಾಗಿ, ಬರೆದ ರೀತಿ ಶ್ಲಾಘನೀಯ.
ಇದರಲ್ಲಿ ಸೇರಿ ಸುಮಾರು 15 ಅಧ್ಯಾಯಗಳಿವೆ.
1.ಬಾಲ್ಯದ ನೆನಪಿನ ಸುಳಿಯಲ್ಲಿ
2.ಭಾರ್ಗವಿ ಭಾಗ್ಯರೂಪ
3.ಶಾಲೆಯ ಆ ದಿನಗಳು- ಮೊದಲು ನಾಟಕವಾಡಿದ್ದು.
4.ಕಾಲೇಜು ರಂಗದಲ್ಲಿ
5.ನಾಣಿಯೊಂದಿಗೆ ಮದುವೆ
6.ವೃತ್ತಿ- ವೈವಾಹಿಕ ಬದುಕಿನ ಏರಿಳಿತದ ಹಾದಿಯಲ್ಲಿ.
7.ಹಿಸ್ಟ್ರಿಯಾನಿಕ್ ಕ್ಲಬ್ ಹಾಗೂ ನಂಕ್ಲಬ್ಬು
8. ಹೊಸ ಮನೆಯ ಜೀವನ -ನಾಟಕ
9.ಸಿನೆಮಾ ರಂಗ ಪ್ರವೇಶ
10.ಪ್ರೀತಿ ಪಾತ್ರರ ವಿದಾಯ
11.ಮಕ್ಕಳ ಸುಖ ಸಂಕಷ್ಟಗಳ ನೇಪಥ್ಯದಲ್ಲಿ
12.ಬಾಳ ಬಂಡಿಯ ನಿಲ್ದಾಣಗಳಲ್ಲಿ
13.ಹಿರಿಯ ಜೀವಗಳ ಒಡನಾಟ ಕಳಚಿದ್ದು
14.ನಾಣಿಯಿಲ್ಲದ ಗ್ರೀನ್ ರೂಮ್
15.ಅಮೇರಿಕಾ ರಿಟರ್ನ್
ಇಲ್ಲಿನ ಪ್ರತಿಯೊಂದು ಅಧ್ಯಾಯಗಳಲ್ಲೂ ಆಯಾಯ ಶೀರ್ಷಿಕೆಗೆ ಸಂಬಂಧಪಟ್ಟ ವಿಷಯಗಳ ಪ್ರಸ್ತಾಪವಿದೆ. ಭಾರ್ಗವಿಯ ಬಾಲ್ಯದ ಘಟನೆಗಳಿಂದ ಹಿಡಿದು ಶಾಲೆಯಲ್ಲಿ ಮೊದಲು ನಾಟಕ ಮಾಡಿದ್ದು ನಂತರದ ಕಾಲೇಜು,ಮೇಕಪ್ ನಾಣಿಯವರ ಪರಿಚಯ,ಕೊನೆಗೆ ಮದುವೆಯಲ್ಲಿ ಮುಕ್ತಾಯ.ಆನಂತರದ ವೈವಾಹಿಕ ಬದುಕಿನಲ್ಲಿ ಹೆಂಡತಿಯಾಗಿ, ಸೊಸೆಯಾಗಿ, ಪ್ರೀತಿಯ ಅಮ್ಮನಾಗಿ , ಇವೆಲ್ಲದರ ಜೊತೆಗೆ ಒಬ್ಬ ಸಮರ್ಥ ಕಲಾವಿದೆಯಾಗಿ ಬೆಳೆದು ಬಂದ ರೀತಿ, ಎದುರಾದ ಅಡಚಣೆಗಳನ್ನು, ಕಷ್ಟಗಳನ್ನು ಮೆಟ್ಟಿ ನಿಂತ ಪರಿ ವಾವ್ ! ನಿಜಕ್ಕೂ ಅಭಿನಂದನೀಯವೇ.
ಒಬ್ಬ ಮಹಿಳೆಯಾಗಿ ಈ ಎಲ್ಲಾ ಪಾತ್ರಗಳನ್ನು ನಿರ್ವಹಿಸುವುದು ಸುಲಭದ ಮಾತಲ್ಲ.ಓದುತ್ತಿದ್ದಂತೆ ಕೆಲವೊಮ್ಮೆ ಕಣ್ಣು ಒದ್ದೆಯಾಗುವ ಹಾಗೆಯೇ ಖುಷಿಯೆನಿಸುವ ,ನಗುವ ಸನ್ನಿವೇಶಗಳು ಕೃತಿಯ ಉದ್ದಕ್ಕೂ ಬರುತ್ತವೆ.15 ಅಧ್ಯಾಯಗಳ ಆನಂತರ ಅನುಬಂಧ ಎಂಬ ಶೀರ್ಷಿಕೆಯ ಅಡಿಯಲ್ಲಿ ನಾಣಿ ಭಾರ್ಗವಿ ಮದುವೆ ನಾಣಿಯವರು ಕಂಡಂತೆ ಎಂಬ ಭಾಗವಿದೆ.ಅಲ್ಲದೆ ಅಧ್ಯಾಯಗಳ ನಡು ನಡುವೆ ಭಾರ್ಗವಿ ಅವರ ಬದುಕಿನ ಅಪರೂಪದ ಫೋಟೋಗಳು ಮನಸ್ಸನ್ನು ಮುದಗೊಳಿಸುತ್ತದೆ.
ಕೊನೆಯಲ್ಲಿ ಭಾರ್ಗವಿ ಅವರ ಕುಟುಂಬದ ವಂಶವೃಕ್ಷವೂ ಇದೆ.
ಇಂತಹ ಕನ್ನಡ ಚಿತ್ರರಂಗದ ಪ್ರಬುದ್ಧ ನಟಿ ಹಾಗೂ ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್ ಈ ವರ್ಷದ ಫೆಬ್ರವರಿ 14ರಂದು ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದರು ಆಗ ಅವರ ವಯಸ್ಸು 84 .
ಭಾರ್ಗವಿಯವರ ಇಚ್ಛೆಯಂತೆ ಅವರ ಕಣ್ಣುಗಳನ್ನು ಹಾಗೂ ದೇಹವನ್ನು ಕುಟುಂಬಸ್ಥರು ದಾನ ಮಾಡಿರುತ್ತಾರೆ. ಮೌಲ್ಯಯುತ ಪಾತ್ರಗಳ ಮೂಲಕ ಜನಮನ ಗೆದ್ದಂತಹ ಹಿರಿಯ ನಟಿ ಸಾವಿನಲ್ಲೂ ತನ್ನ ಸಾರ್ಥಕತೆ ಮೆರೆದಿದ್ದಾರೆ. ಈ ಪುಸ್ತಕದ ಎರಡನೇ ಭಾಗ 'ನಾ ಕಂಡ ನಮ್ಮವರು' (ವ್ಯಕ್ತಿಚಿತ್ರಗಳು) ಪುಸ್ತಕವನ್ನು ಅಂಕಿತ ಪ್ರಕಾಶನದವರೇ ಪ್ರಕಟಿಸಿದ್ದಾರೆ.
-ವಾಣಿಶ್ರೀ ಕೊಂಚಾಡಿ
"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...
‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...
"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...
©2024 Book Brahma Private Limited.