ನಗು- ಅಳು ಗಂಡ ಭೇರುಂಡದ ಮುಖಗಳಂತೆ


"ಮಲೆನಾಡಿನ ಸೆರಗಿನಲ್ಲಿರುವ ಆ ಊರು ಚಿಕ್ಕದಾದರೂ ಅದರಲ್ಲಿ ಪ್ರಕೃತಿ ಸೌಂದರ್ಯ ಅಡಕವಾಗಿರುವುದನ್ನು ತಿಳಿಸುತ್ತಾ, ತಮ್ಮ ಊರಿನ ರಸಿಕರು ಎಂದು ಅಲ್ಲಿರುವ ಹಲವು ವ್ಯಕ್ತಿಗಳ ಪರಿಚಯ ಮಾಡುತ್ತಾರೆ," ಎನ್ನುತ್ತಾರೆ ಮಾಲತಿ ರಾಮಕೃಷ್ಣಭಟ್. ಅವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ನಮ್ಮ ಊರಿನ ರಸಿಕರು’ ಕೃತಿ ಕುರಿತು ಬರೆದ ವಿಮರ್ಶೆ.

ಕನ್ನಡದ ವಿಶಿಷ್ಟ ಲೇಖಕರಾದ ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸಾಹಿತ್ಯದ ಎಲ್ಲಾ ಪ್ರಕಾರದಲ್ಲಿ ಬರೆದಿದ್ದಾರೆ. ಅವರ ನಮ್ಮೂರಿನರಸಿಕರು - ಈ ಹಾಸ್ಯ ಸಂಕಲನಕ್ಕೆ ಮುನ್ನುಡಿ ಬರೆದ ಡಿ.ವಿ.ಜಿ ಯವರು "ಉತ್ತಮ ಹಾಸ್ಯವು ಆನಂದದ ಒಂದು ಸ್ವರೂಪ. ಅದು ನಮ್ಮ ಮನಸ್ಸಿನ ವಿಸ್ಮೃತಿ- ದುರಾಗ್ರಹಗಳನ್ನು ಕಳೆಯುತ್ತದೆ. ನಗು- ಅಳು ಗಂಡ ಭೇರುಂಡದ ಮುಖಗಳಂತೆ. ಒಂದು ಸಾತ್ವಿಕ ಕಿರುನಗೆಯು ಸದ್ಭಾವ ಪ್ರಭಾವ ಮೂಡಿಸಬಲ್ಲದು" ಎಂದು ಹೇಳಿದ್ದಾರೆ.

ಮಲೆನಾಡಿನ ಸೆರಗಿನಲ್ಲಿರುವ ಆ ಊರು ಚಿಕ್ಕದಾದರೂ ಅದರಲ್ಲಿ ಪ್ರಕೃತಿ ಸೌಂದರ್ಯ ಅಡಕವಾಗಿರುವುದನ್ನು ತಿಳಿಸುತ್ತಾ, ತಮ್ಮ ಊರಿನ ರಸಿಕರು ಎಂದು ಅಲ್ಲಿರುವ ಹಲವು ವ್ಯಕ್ತಿಗಳ ಪರಿಚಯ ಮಾಡುತ್ತಾರೆ.

ಬೆಳಿಗ್ಗೆ ಬೇಗನೇ ಏಳುವ ನರಸಿಂಹಾಚಾರ್ಯರು ಅವರು ಸೇದುವ ನಶ್ಯ, ತಡವಾಗಿ ಏಳುವ ಕುಂಭಕರ್ಣನ ಗೋತ್ರದವರು, ಗುಡಾಣದ ಹೊಟ್ಟೆಯ ಶಾಸ್ತ್ರಿ, ಬೋರೆಗೌಡ, ರಂಗೆಗೌಡ, ಎಲ್ಲಾ ಕಾಲದಲ್ಲೂ ಶಾಲು ಹೊದೆಯುವ ಶಾಲುಸಾಬ, ಗುಡಿಯ ಪೂಜಾರಿ ನಾರಾಯಣಯ್ಯ, ಎಲೆ ಅಡಿಕೆ ಅಗಿಯುವ ಮಾದ, ಹಗಲಿರುಳೂ ಊರು ಸುತ್ತುವ ತಿರುಮಲಮ್ಮ ಹೀಗೆ... ಪಟ್ಟಿ ಬೆಳೆಯುತ್ತದೆ.

ಊರಲ್ಲಿ ದಿನಕ್ಕೆ ಮೂರು ಸಾರಿ ಬರುವ ಬಸ್ಸು ನೋಡಿ ಆನಂದಿಸುವವರು, ಅದರ ಚಾಲಕ ರಾಮಯ್ಯಂಗಾರ್ ಎನ್ನುವಾತ ಪ್ರಮುಖನಾಗಿದ್ದು, ದೀಪಾವಳಿಯ ಪಟಾಕಿ ಅವಾಂತರ,ಎಲ್ಲಾ ಜಾತಿಯ ಜನರೂ ಕೃಷಿಯ ಮೂಲಕ ಸಂಪಾದಿಸುವ ಬೆಳೆ, ಜಾತ್ರೆಯಲ್ಲಿ ದಾಸಯ್ಯನವರ ಹರಿ ಸೇವೆ, ದೇವರು ಮೈಮೇಲೆ ಬರುವುದು, ಊಟಕ್ಕೆ ಹೋದವರಿಗೆ ಹುಳಿಯನ್ನ ಸಿಗದೇ ಇದ್ದುದು ಇವನ್ನೆಲ್ಲ ರಸವತ್ತಾಗಿ ವಿವರಿಸಿದ್ದಾರೆ.

ಊರಲ್ಲಿ ತೀರಿಕೊಂಡ ಅನಾಥ ಮುದುಕಿಯ ಅಪರ ಕರ್ಮ ಕಥೆ ಹೇಳುತ್ತಾ, 'ಚಿತೆಯ ಉದ್ದ ಸಾಕೇ? ಎಂದು ಕೇಳಿದವನಿಗೆ ಅದರ ಮೇಲೆ ಮಲಗಿ ನೋಡು. ಮತ್ತೆ ನಿನ್ನ ಹೊರುವ ಕೆಲಸವಾದರೂ ತಪ್ಪುತ್ತದೆ' ಎಂದು ತಮಾಷೆ ಮಾಡುವುದು, ಪ್ಲೇಗು ,ಯುದ್ಧವೆಂದು ಸತ್ತವರ ಸಂಸ್ಕಾರ, ಮನೆಯಿಲ್ಲದ ಮೇಷ್ಟ್ರು ಎಲ್ಲರಿಗೂ ಚಿಕ್ಕ ಪುಟ್ಟ ಸಹಾಯ ಮಾಡುತ್ತಾ ಒಂದೊಂದು ವಾರ ಒಬ್ಬೊಬ್ಬರ ಮನೆಯಲ್ಲಿ ಉಳಿದು ಕೊಳ್ಳುವುದು, ಪೋಸ್ಟ್ ಮೆನ್ ಚೆನ್ನ ಕಾಗದ ಕೊಡಲು ಒಂದು ಮನೆಗೆ ಹೋದರೆ ಬರುವುದು ಒಂದು ತಾಸು ತಡ ಮಾಡುವುದು, ಹೋದಲ್ಲಿ ನಗು-ಗದ್ದಲ ಎಬ್ಬಿಸುವ ನಾಣಿ ಇವರೆಲ್ಲರ ಪಾತ್ರ ಓದಲು ಚೆನ್ನಾಗಿದೆ.

ಮನೆ ಕಂದಾಯ ವಸೂಲಿ ಬಗ್ಗೆ ಶೀನಪ್ಪ ಹಾಗೂ ಶ್ಯಾನು ಭೋಗರ ಅಭಿಪ್ರಾಯ, ಗ್ರಾಮ ಪಂಚಾಯಿತಿ ಸಭೆಗಳು, ಊರಿನ ಮುಖ್ಯ ದೆವ್ವ ಉರಿಸಿಂಗ, ಕಬ್ಬಿನ ಆಲೆಮನೆ, ಕಿಟ್ಟುವಿನ ಮದುವೆ, ಆಗ ಕಾಫಿ ಕುಡಿಯುವುದು ದೊಡ್ಡ ಗೌರವ ಎಂದು ಎಣಿಸುವುದು, ಮುಂತಾದ ಹತ್ತಾರು ಪ್ರಸಂಗಗಳ ಹಾಸ್ಯದ ಹೊನಲೇ ಇಲ್ಲಿ ಹರಿದಿದೆ. ಸುಗ್ಗಿಯ ಕಾಲದಲ್ಲಿ ನಮ್ಮ ಊರಿನ ಅಂದ- ಚೆಂದ ನೋಡಿದರೆ ನೀವೆಂದೂ ಮರೆಯಲಾರಿರಿ ಎಂದು ಲೇಖಕರು ತಮ್ಮೂರಿನ ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ.

MORE FEATURES

ಇಲ್ಲಿ ಪ್ರೀತಿ ಸೋತಿರಬಹುದು ಆದರೆ ಮಾನವೀಯತೆ ಗೆದ್ದಿದೆ

12-05-2025 ಬೆಂಗಳೂರು

"ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಯಾಗಿರುವ ಚಿರಂಜೀವಿಯವರು ವೃತ್ತಿಯಲ್ಲಿ ಶಿಕ್ಷಕರು ಪ್ರವೃತ್ತಿಯಲ್ಲಿ ಬರಹಗಾರರು...

ವೈವಿಧ್ಯಮಯ ಕೃತಿ ವಿಮರ್ಶೆಗಳ ಸಂಗಮ `ಓದಿನ ಮನೆ'

12-05-2025 ಬೆಂಗಳೂರು

"ವಿಮರ್ಶೆಯನ್ನು ಹೊರತುಪಡಿಸಿ ಇತರ ಕೆಲವು ಲೇಖನಗಳು ಈ ಸಂಕಲನದಲ್ಲಿವೆ. ಬೆಳಗೆರೆಯವರ ಅಭಿಮಾನಿಯಾಗಿ ‘ಬೆಳಗೆರ...

ಆಧುನಿಕ ಸಮಾಜಕ್ಕೆ ಅನ್ವಯಿಸುವ ಕಥೆಗಳು ಇಲ್ಲಿವೆ

12-05-2025 ಬೆಂಗಳೂರು

"ಇಲ್ಲಿನ ಕಥೆಗಳನ್ನು ಮುಖ್ಯವಾಗಿ ಸ್ತ್ರೀಶೋಷಣೆ, ಪರಂಪರೆ ಮತ್ತು ಆಧುನಿಕತೆಗಳ ನಡುವಣ ಮುಖಾಮುಖಿ, ಭಾರತೀಯ ಸಂಸ್ಕೃತ...