ನಾಡಿನ ನಕ್ಷತ್ರಗಳ ಪುಸ್ತಕ ವ್ಯಕ್ತಿಚಿತ್ರಗಳ ಕೃತಿ: ನಾ.ಸೋಮೇಶ್ವರ


"ನಿಗದಿತ ವ್ಯಕ್ತಿಯ ಹಿರಿಯ - ಕಿರಿಯ ಸಮಕಾಲೀನನಾಗಿ ಅವರ ಜೊತೆಯಲ್ಲಿ ಓಡಾಡಿ, ಅವರ ಬದುಕು ಸಾಧನೆಗಳನ್ನು ಪ್ರತ್ಯಕ್ಷ ಕಂಡು, ಅವರ ಮೇಲೆ ಪ್ರಭಾವವನ್ನು ಬೀರಿ ಅವರಿಂದ ಪ್ರಭಾವಿತನಾಗಿ - ಅವರೊಡನೆ ಆತ್ಮೀಯ ಕ್ಷಣಗಳನ್ನು ಹಂಚಿಕೊಳ್ಳುವ ವ್ಯಕ್ತಿ ಚಿತ್ರಣಗಳು, ಡಿವಿಜಿಯವರ ಜ್ಞಾಪಕ ಚಿತ್ರ ಶಾಲೆಯಲ್ಲಿ ಅವರ ನಿಕಟ ಸಂಪರ್ಕಕ್ಕೆ ಬಂದ ಮಹಾನುಭಾವರ ಬದುಕಿನ ಒಳನೋಟವನ್ನು ನಮಗೆ ಕೊಡುವ ಪರಿ ಅನನ್ಯ" ಎನ್ನುತ್ತಾರೆ ಲೇಖಕ ನಾ.ಸೋಮೇಶ್ವರ . ಅವರು ಲೇಖಕ ಸಿ. ಆರ್‌. ಚಂದ್ರಶೇಖರ್‌ ಅವರ "ನಾನು ಕಂಡ ನಾಡಿನ ನಕ್ಷತ್ರಗಳು" ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

ನಾಡಿನ ನಕ್ಷತ್ರಗಳ ಪುಸ್ತಕವು ವ್ಯಕ್ತಿಚಿತ್ರಗಳ ಕೃತಿ, ವ್ಯಕ್ತಿಚಿತ್ರಗಳನ್ನು ಸಾಮಾನ್ಯವಾಗಿ ಎರಡು ರೀತಿಯಲ್ಲಿ ಬರೆಯುವ ಪದ್ಧತಿಯುಂಟು. ಮೊದಲನೆಯ ಪದ್ಧತಿಯನ್ನು ಸಂಕ್ಷಿಪ್ತವಾಗಿ ಗಮನಿಸೋಣ. ಕುವೆಂಪು, ಬೇಂದ್ರೆ, ಮಾಸ್ತಿ, ಗೋಕಾಕ್ ಮುಂತಾದ ಮಹನೀಯರ ಬಗ್ಗೆ ವ್ಯಕ್ತಿ ಚಿತ್ರಗಳನ್ನು ಬರೆಯಬಹುದು. ಇಂತಹ ವ್ಯಕ್ತಿಚಿತ್ರಗಳಲ್ಲಿ ನಿಗದಿತ ವ್ಯಕ್ತಿಯ ಬದುಕು-ಸಾಧನೆಯ ಸಂಕ್ಷಿಪ್ತ ಚಿತ್ರಣವಿರುತ್ತದೆ. ಸಾಮಾನ್ಯವಾಗಿ 1000-1500 ಪದಗಳ ಮಿತಿಯಿರುತ್ತದೆ. ಇಂತಹ ಬರಹವನ್ನು ಓದಿದಾಗ, ಆ ವ್ಯಕ್ತಿಯ ಬದುಕಿನ ಬಗ್ಗೆ ಒಂದು ಸ್ಥೂಲ ಪರಿಕಲ್ಪನೆಯು ಓದುಗನಿಗೆ ಬರುತ್ತದೆ. ನಾವು ಏಕೆ ಈ ವ್ಯಕ್ತಿಯ ಬದುಕಿನ ಬಗ್ಗೆ ತಿಳಿದುಕೊಳ್ಳಬೇಕು, ಇದರಿಂದ ನನಗೇನು ಲಾಭ, ಈ ನಾಡಿನ ನಿರ್ಮಾಣದಲ್ಲಿ ಇವರ ಪಾಲು ಎಷ್ಟು ಎಂಬ ಮೂಲಭೂತ ಪ್ರಶ್ನೆಗಳಿಗೆ ಉತ್ತರವು ದೊರೆಯುತ್ತದೆ. ಈ ಓದಿನಿಂದ ನಮ್ಮ ಸಾಮಾನ್ಯ ತಿಳಿವಳಿಕೆ ಹೆಚ್ಚುವುದರ ಜೊತೆಯಲ್ಲಿ, ಇಂತಹವರ ಬದುಕಿನಿಂದ ಸ್ಫೂರ್ತಿಯನ್ನು ಪಡೆಯುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಈ ಮೊದಲ ಪದ್ಧತಿಯಲ್ಲಿ ಒಂದು ಉಪ ಪ್ರಭೇದವನ್ನು ಗುರುತಿಸಬಹುದು. ಒಂದು ನಿಗದಿತ ವಿಷಯಕ್ಕೆ ಸಂಬಂಧಪಟ್ಟ ವ್ಯಕ್ತಿಗಳ ಬದುಕಿನ ಪಕ್ಷಿನೋಟವನ್ನು ಕಟ್ಟಿಕೊಡುವುದು. ಡಾ.ಟಿ.ಆರ್.ಅನಂತರಾಮುರವರು 'ತ್ರಿವಿಕ್ರಮ್ ಹೆಜ್ಜೆಗಳು' ಎನ್ನುವ ಪುಸ್ತಕವನ್ನು ಸಂಪಾದಿಸಿದರು. ಈ ಪುಸ್ತಕದ ವಿಶೇಷವೆಂದರೆ, ಕರ್ನಾಟಕದ ವಿಜ್ಞಾನ ಕ್ಷೇತ್ರಗಳ ಸರ್ವತೋಮುಖ ಪ್ರಗತಿಗೆ ದುಡಿದ ಮಹಾನುಭಾವರ ಬದುಕು- ಬರಹ-ಸಾಧನೆಗಳನ್ನು ಗುರುತಿಸುವುದು. ಇಂತಹ ಪುಸ್ತಕವು ಕನ್ನಡದಲ್ಲಿ ಮೊದಲ ಬಾರಿಗೆ ಪ್ರಕಟವಾಗಿದೆ. ಇಲ್ಲಿ ನಿಗದಿತ ವಿಷಯವೊಂದನ್ನು ಕುರಿತಂತೆ ಹಲವು ವ್ಯಕ್ತಿಗಳ ಕಾಣಿಕೆಯನ್ನು ಗುರುತಿಸುವುದು. ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹಾನುಭಾವರನ್ನು ಕುರಿತೂ ಇಂತಹುದೇ ಪುಸ್ತಕವು ಪ್ರಕಟವಾಗಿರುವುದನ್ನು ನಾವು ಗಮನಿಸಬಹುದು. ಇಂತಹ ವ್ಯಕ್ತಿ ಚಿತ್ರಗಳನ್ನು ಬರೆಯುವಾಗ, ಲೇಖಕನಿಗೆ ನಿಗದಿತ ವ್ಯಕ್ತಿಯ ನಿಕಟ ಸಂಪರ್ಕವು ಇರಬಹುದು ಅಥವ ಇಲ್ಲದಿರಬಹುದು.

ಎರಡನೆಯ ನಮೂನೆಯ ವ್ಯಕ್ತಿ ಚಿತ್ರಣವುಂಟು. ನಿಗದಿತ ವ್ಯಕ್ತಿಯ ಹಿರಿಯ/ಕಿರಿಯ ಸಮಕಾಲೀನನಾಗಿ ಅವರ ಜೊತೆಯಲ್ಲಿ ಓಡಾಡಿ, ಅವರ ಬದುಕು ಸಾಧನೆಗಳನ್ನು ಪ್ರತ್ಯಕ್ಷ ಕಂಡು, ಅವರ ಮೇಲೆ ಪ್ರಭಾವವನ್ನು ಬೀರಿ ಅವರಿಂದ ಪ್ರಭಾವಿತನಾಗಿ - ಅವರೊಡನೆ ಆತ್ಮೀಯ ಕ್ಷಣಗಳನ್ನು ಹಂಚಿಕೊಳ್ಳುವ ವ್ಯಕ್ತಿ ಚಿತ್ರಣಗಳು, ಡಿವಿಜಿಯವರ ಜ್ಞಾಪಕ ಚಿತ್ರ ಶಾಲೆಯಲ್ಲಿ ಅವರ ನಿಕಟ ಸಂಪರ್ಕಕ್ಕೆ ಬಂದ ಮಹಾನುಭಾವರ ಬದುಕಿನ ಒಳನೋಟವನ್ನು ನಮಗೆ ಕೊಡುವ ಪರಿ ಅನನ್ಯ.

ಒಂದು ವೇಳೆ ಡಿವಿಜಿಯವರು ಇವರ ಬಗ್ಗೆ ದಾಖಲಿಸದೇ ಹೋಗಿದ್ದಲ್ಲಿ ಸಾಮಾನ್ಯ ಕನ್ನಡಿಗನಿಗೆ ಇವರ ಬಗ್ಗೆ ಏನೇನೂ ತಿಳಿಯುತ್ತಿರಲಿಲ್ಲ. ಡಿವಿಜಿಯವರು ತಮ್ಮ ಜ್ಞಾಪಕ ಚಿತ್ರಶಾಲೆಯ ಮೂಲಕ ನಮ್ಮ ಮೈಸೂರು ಸಂಸ್ಥಾನದ ಒಂದು ಕಾಲಘಟ್ಟವನ್ನು ಸೆರೆ ಹಿಡಿದಿಟ್ಟಿದ್ದಾರೆ. ಇದು ಅತ್ಯಂತ ಶ್ಲಾಘನೀಯ ಕೆಲಸವಾಗಿದೆ.

ಸಿಆರ್.ಸಿಯವರು ಬರೆದಿರುವ ನಾಡಿನ ನಕ್ಷತ್ರಗಳು ಈ ಎರಡನೆಯ ನಮೂನೆಗೆ ಸೇರಿದೆ ಎನ್ನಬಹುದು. ಈ ಪುಸ್ತಕದಲ್ಲಿ ಅವರು, ನಮ್ಮ ಕರ್ನಾಟಕದ ಪ್ರಗತಿಗೆ ತಮ್ಮದೇ ಆದ ರೀತಿಯಲ್ಲಿ ಕಾಣಿಕೆಯನ್ನು ನೀಡಿರುವ 26 ಹಿರಿಯ-ಕಿರಿಯ ಸಮಕಾಲೀನರನ್ನು ಗುರುತಿಸಿರುವುದನ್ನು ನಾವು ನೋಡಬಹುದು. ವಿಶೇಷವೆಂದರೆ ಈ ಇಪ್ಪತ್ತಾರೂ ಜನರನ್ನು ಅವರು ದೂರದಿಂದ ಹಾಗೂ ಸ್ವಲ್ಪಮಟ್ಟಿಗೆ ಹತ್ತಿರದಿಂದ ಬಲ್ಲವರು. ಅವರ ಬದುಕಿನ ನಿಗದಿತ ಕಾಲಘಟ್ಟದಲ್ಲಿ ವಿಶೇಷವಾದ ಪ್ರಭಾವನ್ನು ಬೀರಿ ಅವರ ಬದುಕಿಗೊಂದು ಅರ್ಥವನ್ನು ತಂದುಕೊಟ್ಟವರು. ಅವರ ತಿಳಿವಿನ ಜಗತ್ತನ್ನು ಹಾಗೂ ಭಾವ ಪ್ರಪಂಚವನ್ನು ಅರಳಿಸಿದವರು.

ಜಿ.ಎಸ್.ಶಿವರುದ್ರಪ್ಪನವರು 'ಗೆಳೆಯನೊಬ್ಬನಿಗೆ ಬರೆದ ಕಾಗದ' ಎಂಬ ಕವನವನ್ನು ಸಾಂದರ್ಭಿಕವಾಗಿ ಇಲ್ಲಿ ನೆನೆಪಿಸಿಕೊಳ್ಳಬಹುದು.

ಗೆಳೆಯನೊಬ್ಬನಿಗೆ ಬರೆದ ಕಾಗದ
ಬಾಳ ಪಯಣದಲ್ಲಿ ಹಿರಿಯ ಗುರಿಯ ಕಡೆ
ನಡೆಯುತಿರಲು ನಾನು
ಯಾವ ಜನ್ಮದಲಿ ಗೈದ ಸುಕೃತವೂ
ಮಿಲನವಾದ ನೀನು.
ತಾಯಿ ಮೊದಲ ಗುರು, ತಂದೆ ರಕ್ಷಕನು
ಮಿತ್ರ ಎರಡು ಹೌದು,
ಎಂಬ ಹಿರಿನುಡಿಯ ನಿನ್ನ ವಾಣಿಯಲ್ಲಿ
ಕೇಳಿ ನಲಿದೆನಿಂದು

ಬಾಳ ಹಾದಿಯಲಿ ಪಯಣಕರ್ಮದಲಿ
ನೀನು ಮುಂದೆ ಮುಂದೆ.
ನಾನಿನ್ನ ಹಿಂದೆ ; ಬಾಹ್ಯದೃಷ್ಟಿಯಲಿ
ನಾವೆಲ್ಲರಿಲ್ಲಿ ಒಂದೆ!
ಸಹೃದಯ ಗೆಳೆಯ 'ಸಂಜೀವ' ಕೇಳು
ಭವ್ಯಜೀವ ನೀನು.
ನನ್ನ ದೃಷ್ಟಿಗದು ; ಹೊಗಳಲರಿಯ ನಾ
ಒಲಿಯಬಲ್ಲೆ ನಾನು.
ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ

ತಿಳಿದು ನೋಡಿದರೆ ಬಾಳು ಎಂಬುದಿದು
ಋಣದ ರತ್ನಗಣಿಯೋ?

ಈ ಕವನದ ಸಂಜೀವನು ಯಾರೋ ಏನೋ ನಮಗೆ ತಿಳಿದಿಲ್ಲ. ಆದರೆ ಕವನದ ಭಾವವನ್ನು ನೋಡಿದರೆ, ಜಿ.ಎಸ್.ಎಸ್ ಅವರಿಗೆ ಸಂಜೀವನು, ಸಂಜೀವಿನಿಯ ಸದೃಶದಲ್ಲಿ ಮಾರ್ಗದರ್ಶನವನ್ನು ಮಾಡಿರಬೇಕು. ಸಕಾಲದಲ್ಲಿ ಉಪಕಾರವನ್ನು ಮಾಡಿದವರಿಗೆ ನಾವು ಈ ಜನ್ಮದಲ್ಲಿ ಪ್ರತ್ಯುಪಕಾರವನ್ನು ಮಾಡುವುದು ಬಹಳ ಕಷ್ಟ. ಅದಕ್ಕಾಗಿಯೇ ಕೊನೆಗೆ ಸಾಲು, 'ಬಾಳು ಎಂಬುದು ಋಣದ ರತ್ನಗಣಿಯ" ಎಂದಿರುವುದು ನಿಜಕ್ಕೂ ಅರ್ಥವತ್ತಾಗಿದೆ.

ನಮ್ಮ ಹೆತ್ತವರು, ನಮ್ಮ ಒಡಹುಟ್ಟಿದವರು, ನಮ್ಮ ಬಂಧು ಬಾಂಧವರು ಹಾಗೂ ನಮ್ಮ ಗೆಳೆಯರು ನಮ್ಮ ಸರ್ವತೋಮುಖ ಪ್ರಗತಿಗೆ ಕಾರಣರು. ಅವರು ನಮಗೆ ನೀಡಿದ ಅನ್ನ, ಆಶ್ರಯ ಮಾರ್ಗದರ್ಶನವನ್ನು ನಾವು ಎಂದಿಗು ತೀರಿಸಲಾರೆವು. ಈ ಹಿನ್ನೆಲೆಯಲ್ಲಿಯೇ ನಮ್ಮ ಸಂಸ್ಕೃತಿಯಲ್ಲಿ ನಾಲ್ಕು ನಗರ ಪ್ರಸ್ತಾಪವಾಗಿದೆ. ದೈವಋಣ, ಪಿತೃಋಣ, ಆಚಾರ್ಯ ಋಣ ಹಾಗೂ ಸಮ ಋಣ. ನಮ್ಮ ಹೆತ್ತವರು ನಮ್ಮನ್ನು ಎಷ್ಟು ಕಷ್ಟಪಟ್ಟು ಸಾಕಿರುತ್ತಾರೆ ಎಂದು ಅದನ್ನು ಹಣದ ರೂಪದಲ್ಲಿ ಅಥವ ಇತರ ರೂಪದಲ್ಲಿ ತೀರಿಸಲು ಸಾಧ್ಯವೇ ಇಲ್ಲ. ಅದು ಅಸಾಧ್ಯ ಋಣ, ಅದು ತೀರಬೇಕಾದರೆ, ನಮ್ಮ ಹೆತ್ತವರು ನಮ್ಮನ್ನು ಎಷ್ಟು ಕಾಳಜಿ ವಹಿಸಿ, ಬೆಳೆಸಿ ಈ ಸಮಾಜದ ನಾಗರಿಕರನ್ನಾಗಿ ಮಾಡಿದ್ದಾರೆ. ಅದಕ್ಕಿಂತಲೂ ಹೆಚ್ಚಿಗೆ ನಾವೂ ಸಹ ಮಕ್ಕಳ ಯೋಗಕ್ಷೇಮಕ್ಕೆ ಆದ್ಯತೆಯನ್ನು ಕೊಟ್ಟು, ಅವರನ್ನು ನಮಗಿಂತ ಬುದ್ಧಿವಂತರನ್ನಾಗಿ ಯೋಗ್ಯ ನಾಗರಿಕರನ್ನಾಗಿ ಬೆಳೆಸಬೇಕಾಗುತ್ತದೆ. ಆಗ ಸ್ವಲ್ಪ ಮಟ್ಟಿಗೆ ಪಿತೃಋಣವು ತೀರಬಹುದೇನೋ ಇನ್ನೂ ಆಚಾರ್ಯ ಋಣ. ವರ್ಣಮಾತ್ರಂ ಕಲಿಸಿದಾತಾನ್ ಗುರು ಎನ್ನುತ್ತಾನೆ ಪುಲಿಗೆರೆಯ ಸೋಮನಾಥ, ನಮ್ಮ ಬದುಕಿನಲ್ಲಿ ಅದೆಷ್ಟು ಜನರಿಂದ ನಾವು ಕಲಿತಿದ್ದೇವೆ! ವೈದ್ಯರಾದ ನಮಗೆ, ಪ್ರತಿಯೊಬ್ಬ ರೋಗಿಯೂ ಓರ್ವ ಗುರುವೆ ಪುಸ್ತಕದಲ್ಲಿ ಕಲಿತದ್ದನ್ನು ಅನುಭವಕ್ಕೆ ತಂದುಕೊಡುವ ರೋಗಿಯು ವಾಸ್ತವದಲ್ಲಿ ನಮಗೆ ಗುರು! ನಾವು ಅವನಿಗೆ ಉಪಕಾರವನ್ನು ಮಾಡುತ್ತಿಲ್ಲ; ಬದಲಿಗೆ ಅವನು ನಮಗೆ ಉಪಕಾರವನ್ನು ಮಾಡುತ್ತಿದ್ದಾನೆ. ಹಾಗೆಯೇ ನಾವು ಸಮಾಜದಿಂದ ಪಡೆದದ್ದು ಅಪಾರ! ಬದಲಿಗೆ ನಾವು ಈ ಸಮಾಜಕ್ಕೆ ಏನು ಕೊಟ್ಟಿದ್ದೇವೆ? ಇವೆಲ್ಲವನ್ನೂ ಯೋಚಿಸಿದರೆ, ನಮ್ಮ ಋಣದ ಗಣಿ ಎಂದಿಗೂ ತೀರಲಾರದೇನೋ ಎಂಬ ಅನುಮಾನವು ಬರುವುದು ಸಹಜ!

ಸಿ.ಆರ್.ಸಿ.ಯವರಿಗೆ ಕರ್ನಾಟಕಾದ್ಯಂತ ಅಭಿಮಾನಿಗಳಾಗಿದ್ದಾರೆ. ಅವರೊಡನೆ ಒಡನಾಡಿದವರ ಸಂಖ್ಯೆಯೇನೂ ಕಡಿಮೆಯಿಲ್ಲ. ಆದರೆ ಸಿ.ಆರ್.ಸಿಯವರು ಬರೀ 26 ಜನಗಳನ್ನು ಆಯ್ಕೆಮಾಡಿಕೊಂಡು ಅವರಿಗೆ ನಾಡಿನ ನಕ್ಷತ್ರಗಳ ಪಟ್ಟವನ್ನು ಕೊಟ್ಟಿದ್ದಾರೆ. ಸಿ.ಆರ್.ಸಿಯವರು ಬಡಪಟ್ಟಿಗೆ ಯಾರನ್ನೂ ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಸರ್ವವಿದಿತ. ಹಾಗಾಗಿ ಅವರಿಗೆ ನಂಬಿಕೆ ಬರುವ ರೀತಿಯಲ್ಲಿ ಸಾರ್ವಜನಿಕ ಸ್ವಚ್ಛ ಜೀವನವನ್ನು ನಡೆಸಿ, ಸಿ.ಆರ್.ಸಿಯವರ ಜೊತೆಯಲ್ಲಿ ಹೆಜ್ಜೆ ಹಾಕಿರುವ 26 ಜನರನ್ನು ಮಾತ್ರ ಗುರುತಿಸಿರುವುದು ಗಮನೀಯ ವಿಚಾರ. ಅವರ ಆಯ್ಕೆಯಲ್ಲಿಯೂ ಎಲ್ಲಿಯೂ ಅಪಸ್ವರ ಬರುವುದಿಲ್ಲ ಎನ್ನುವ ನಂಬಿಕೆಯು ನನ್ನದು. ಈ ನಾಡಿನ 26 ನಕ್ಷತ್ರಗಳ ಆಯ್ಕೆಯ ಬಗ್ಗೆ ಸಿ.ಆರ್.ಸಿಯವರು 'ನನ್ನ ಜೀವಿತಾವಧಿಯಲ್ಲಿ ನಾನು ಅನೇಕ ನಕ್ಷತ್ರಗಳ ಸಂಪರ್ಕಕ್ಕೆ ಬಂದಿದ್ದೇನೆ. ಕೆಲವು ನಕ್ಷತ್ರಗಳು ನನ್ನ ವೃತ್ತಿಗೆ ಬೆಳಕಾಗಿವೆ, ಕೆಲವು ನಕ್ಷತ್ರಗಳು ನನ್ನ ಪ್ರವೃತ್ತಿಗೆ ಬೆಳಕಾಗಿವೆ.

- ನಾ.ಸೋಮೇಶ್ವರ

ನಾ.ಸೋಮೇಶ್ವರ ಅವರ ಲೇಖಕ ಪರಿಚಯಕ್ಕಾಗಿ

MORE FEATURES

ಉರಿದೆಸೆಯುವ ಬದುಕಲ್ಲಿ ಹುಚ್ಚೆಬ್ಬಿಸಿ ಕುಣಿಸುವ ಆಸೆ

07-07-2024 ಬೆಂಗಳೂರು

‘ಉಸಿರು ನಿಲ್ಲುವ ತನಕವೂ ಕಾಮ ಮೋಹವು ಜೀವವನ್ನು ಆವರಿಸಿಕೊಂಡಿರುತ್ತದೆ ಎನ್ನುವ ನಿಜದ ಹಂಗು-ಭವದಲ್ಲಿ ಉಸಿರಾಡುವ ಎ...

ಬರವಣಿಗೆ ಮನಸಿಗೆ ಮತ್ತು ಮೆದುಳಿಗೆ ಮುದಕೊಟ್ಟಿದೆ; ಗುರುಪ್ರಸಾದ ಕಾಗಿನೆಲೆ

07-07-2024 ಬೆಂಗಳೂರು

‘ತನ್ನ ಇಂದ್ರಿಯಗ್ರಹೀತ ಅನುಭವವನ್ನು ಅಕ್ಷರಗಳಿಂದ ಓದುಗನಿಗೆ ತಲುಪಿಸುವುದು ಲೇಖಕನ ಕೆಲಸ’ ಎನ್ನುತ್ತಾರೆ ಗ...

ವಡ್ಡಮ್ಮ ತಾತನ ತತ್ವಪದಗಳ ಸಂಕಲನವೇ ‘ಒಡಲ ಜೋಗುಳ’

06-07-2024 ಬೆಂಗಳೂರು

‘ತಂಬಾಕು ತಿನ್ನಬಾರದೆ ತಂಗ್ಯಮ್ಮ ತಂಬಾಕು ತಿನ್ನಬಾರದೆ, ತಂಬಾಕು ತಿಂದರೆ ಉಂಬಾಕ ಬಾರದೆ’ ಎನ್ನುತ್ತಾರೆ ಯಮ...