ಮುಚ್ಚಿ ತೆರೆಯುವ ಆಟದೊಳಗೆ ಶಾಬ್ಧಿಕ ಚಮತ್ಕಾರ


ಬದುಕಿನ ಸರಳ ವ್ಯಾಖ್ಯಾನಗಳು, ಪುರಾಣ, ಚರಿತ್ರೆ, ವರ್ತಮಾನ ಹೀಗೆ ಎಲ್ಲಾ ಆಯಾಮಗಳನ್ನು ಒಳಗೊಂಡಿರುವ ಕವನಗಳು ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ ಎನ್ನುತ್ತಾರೆ ಲೇಖಕಿ ಶ್ರೀದೇವಿ ಕೆರೆಮನೆ. ಲೇಖಕ ಆನಂದ ಋಗ್ವೇದಿ ಅವರ ತಥಾಗತನಿಗೊಂದು ಪದ್ಮಪತ್ರ ಕುರಿತು ಅವರು ಬರೆದ ಲೇಖನ ಇಲ್ಲಿದೆ..

ಕವಿತೆಗಳನ್ನು ಬರೆಯುವುದೆಂದರೆ ಅದೊಂದು ಧ್ಯಾನಸ್ಥ ಸ್ಥಿತಿ. ಬರೆದಷ್ಟೂ ನಿಸೂರಗೊಳ್ಳುವ, ಬರೆದಷ್ಟೂ ಖಾಲಿಯಾಗುವ ಮತ್ತು ಬರೆದಷ್ಟೂ ತುಂಬಿಕೊಳ್ಳುತ್ತಲೇ ಹೋಗುವ ಕಾವ್ಯದ ಮಾದರಿಯೊಂದು ಇಲ್ಲಿದೆ. ನಾಲ್ಕು ವಿಭಾಗಗಳಲ್ಲಿ ಒಟ್ಟೂ ಅರವತ್ತೇಳು ಕವನಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಸಂಕಲನ ಇದು.

ಕಟ್ಟಿಕೊಂಡ ಮಾಯೆಯ ಕುಡಿಯೊಡೆದ ಚಿಗುರ
ನಡುರಾತ್ರಿಯಲಿ ತ್ಯಜಿಸಿ ಮೇಲ್ಪಂಕ್ತಿ
ಹಾಕಿದವನೇ ಸಿದ್ಧಾರ್ಥ ಕೇಳು, ನಿನ್ನ ಹಾಗೆ
ನಡುರಾತ್ರಿ ತ್ಯಜಿಸುವವರ, ಹೊಸಬರ
ಕೂಡುವವರ ಒಕ್ಕೂಟದಲ್ಲಿ ಕಾಣದು ನಿನ್ನ
ಮಾನವೀಯತೆಯ ಮಮತೆಯ ದಮ್ಮ   

ಮೊದಲ ಕವನ, ಶೀರ್ಷಿಕಾ ಕವನವೂ ಆಗಿರುವ ತಥಾಗತನಿಗೊಂದು ಪದ್ಮಪತ್ರ ಎಂಬ ಕವನದ ಈ ಸಾಲುಗಳು ಓದಿ ಮುಗಿಸಿ ಬಹಳಷ್ಟು ದಿನಗಳಾದ ನಂತರವೂ ಮತ್ತೆ ಮತ್ತೆ ಕಾಡತೊಡಗಿದಾಗ ಗೆಳೆಯ ಆನಂದ ಋಗ್ವೇದಿಯವರ ಕವನಸಂಕಲನವನ್ನು ಮತ್ತೊಮ್ಮೆ ಓದಲೆಂದು ಕೈಗೆತ್ತಿಕೊಂಡೆ. ಬಹುತೇಕವಾಗಿ ಸಮಾಜ ನೋಡದ ಮತ್ತೊಂದು ದೃಷ್ಟಿಕೋನದಿಂದಲೇ ವಿಷಯವನ್ನು ನೋಡಿ ಅದರ ಒಳಹೊರಗನ್ನು ಕಟ್ಟಿಕೊಡುವ ಅಪರೂಪದ ಪ್ರತಿಭೆಯ ಕವಿ ಕಥೆಗಾರ ಆನಂದ ಋಗ್ವೇದಿಯವರ ಕವಿತೆಗಳು ಸದಾ ಸಮಾಜಮುಖಿ. ಎಲ್ಲಕ್ಕಿಂತ ಆನಂದರ ಕವನಗಳಲ್ಲಿ ಇಣುಕುವ ಹೆಣ್ತನವೇ ಅವರ ಕವನಗಳಿಗೊಂದು ಅಪರೂಪದ ಸ್ಥಾನವನ್ನು ನೀಡಿದೆ.

ನಭದ ಗಹನತೆ ಅಗಲ
ವಿಸ್ತಾರಕ್ಕೂ ರೆಕ್ಕೆ
ಬಿಚ್ಚಿ ಹಾರುವ ಅದರ
ಕೊಕ್ಕಲ್ಲಿ ಅಡಗಿದ ಬಿಕ್ಕು
ಆಗಸಕ್ಕೆ ಕೇಳುವುದಿಲ್ಲ

ಈ ಸಾಲುಗಳಲ್ಲಿ ಮಾಟವಾದ ಕೊಕ್ಕು, ಮಿನುಗುವ ರೆಕ್ಕೆ ಹೊಂದಿರುವ ಹಕ್ಕಿ ಹೆಣ್ಣು ಎಂದು ಓದುಗರಿಗೆ ಅನ್ನಿಸಿದರೆ ಅದರಲ್ಲಿ ಅಚ್ಚರಿಯೇನಿಲ್ಲ. ಇಲ್ಲಿ ಹಕ್ಕಿಗೆ ಬೇಕಾದದ್ದು ಹಾಡನ್ನು ಆಲಿಸುವ ಕಿವಿ ಹಾಗೂ ಕಣ್ಣೊಳಗೆ ಮಡುಗಟ್ಟಿರುವ ಕನಸನ್ನು ಜೋಪಾನ ಮಾಡುವ ರೆಪ್ಪೆ ಮತ್ತು ಸಾಂತ್ವಾನ ನೀಡುತ್ತ ಬೆನ್ನು ಸವರುವ ಬೆರಳು. ಹೀಗಾಗಿ ಇದೆಲ್ಲವನ್ನು ಬಯಸುವ ಆ ಹೆಣ್ಣುಹಕ್ಕಿಯ ಒಡಲು, ಮಾನಸಿಕ ತಳಮಳ ಹೆಂಗರುಳಿನ ಕವಿಗಲ್ಲದೇ ಬೇರೆ ಯಾರಿಗೆ ಅರ್ಥವಾಗಲು ಸಾಧ್ಯ ಹೇಳಿ?

ಸದಾ ಕಾಲ ಬುಡದಲ್ಲಿ, ಸುಳಿದಾಡುವ ಕಾಮಿ ಬೆಕ್ಕು, ಅವಳ ನೆನಪು ಎನ್ನುತ್ತಲೇ ಕವಿ ಅವಳನ್ನು ವರ್ಣಿಸುವ ಪರಿಯನ್ನು ನೋಡಬೇಕು. ಬೆಕ್ಕಿನ ಠಕ್ಕತನವಿಲ್ಲದ, ಬೆನ್ನ ಹಿಂದೆ ಟೀಕಿಸಿ, ಎದುರಿಗೆ ಬಹುಪರಾಕ ಹೇಳದ ಅವಳು ತನ್ನವಳಲ್ಲ ಎನ್ನುತ್ತಲೇ ಅವಳ ನುಣುಪು ಸ್ಪರ್ಶವನ್ನು ಮತ್ತೆ ಮತ್ತೆ ಬೆಕ್ಕಿನ ಸಾಂಗತ್ಯದಲ್ಲಿ ಅನುಭವಿಸುವ ಪರಿ ಅನನ್ಯವಾಗಿದೆ. ತನ್ನವಳಾಗದೆಯೂ ತನ್ನವಳೇ ಎನ್ನಿಸುವ ಹೆಣ್ಣು ಸಹಜವಾಗಿಯೇ ಪಾಂಚಾಲಿಯೇ ಆಗುತ್ತಾಳೆ ಎಂಬ ಮಾತು ಕವಿಯದ್ದು.

ಯಾವ ಜಮದಗ್ನಿಯ ಕೋಪಕಟ್ಟಳೆಗಳು
ಪರಶುರಾಮರ ಕೊಡಲಿ ಪೆಟ್ಟುಗಳೂ
ತಡೆಗಟ್ಟವು ಅಂತರಂಗದೊಳಗೆ
ಅವಳ ಪುರುಷರ ಪ್ರವೇಶ

ಹೆಣ್ಣು ಬಾಹ್ಯ ಪ್ರಪಂಚದಲ್ಲಿ ಕೇವಲ ಒಬ್ಬನ ಜೊತೆಗಿರಬಹುದು. ಆದರೆ ಅಂತರಂಗದಲ್ಲಿ ಮನಸ್ಸು ತಟ್ಟಿದ ಯುಧಿಷ್ಠಿರ, ಪಾರ್ಥ, ಭೀಮ, ನಕುಲ, ಸಹದೇವರಂತಹ ಪುರುಷರ ಸಾಲುಗಳು ಇದ್ದೇ ಇರುತ್ತವೆ. ಅವರನ್ನೆಲ್ಲ ಆಕೆ ಕಾಮದ ದೃಷ್ಟಿಯಿಂದ ನೋಡಬೇಕೆಂದೇನು ಇಲ್ಲ. ನಿಜಜೀವನದಲ್ಲಿ ಅವರನ್ನು ಬಯಸಬೇಕೆಂದೇನೂ ಇಲ್ಲ. ಆದರೆ ಅಂತರಾಳದಲ್ಲಿ ಇಷ್ಟಪಡುವುದನ್ನು ಯಾವ ಮಹಾಋಷಿ ನಿರ್ಬಂಧಿಸಿಯಾನು ಹೇಳಿ? ಹೀಗಾಗಿಯೇ ಹೆಸರ ಹೊರದ ಸಂಬಂಧಗಳು, ಹಗಲು ಹೆಗಲಾಗುವ, ಇರುಳು ಮಡಿಲಾಗುವ, ಕರಳು ಕರೆಯಾಗುವ ಇಂತಹ ಸಂಬಂಧಗಳನ್ನು ಹೆಣ್ಣು ನೆಚ್ಚಿಕೊಳ್ಳುತ್ತಾಳೆಯೇ? ಹೀಗಾಗಿಯೇ ಹೆಣ್ಣಿಗಾಗಿ ಮಣ್ಣಿಗಾಗಿ ನಡೆಯುತ್ತದೆ ಎನ್ನಲಾದ ಯುದ್ಧವನ್ನು ಮೀರಿ ಅದರ ಹೊರತಾಗಿಯೂ ಯಶೋಧರ ಸೋತು ಹೋದ. ಹೀಗಾಗಿ

ಯುದ್ಧದಲ್ಲಿ ಮಣ್ಣ ಗೆಲ್ಲಬಹುದಲ್ಲದೇ
ಹೆಣ್ಣ ಗೆಲ್ಲಬಹುದೇ

ಎನ್ನುವ ಮಾತು ನಮ್ಮೆಲ್ಲ ವಾಸ್ತವ ಜಗತ್ತಿನ ಮಾಯೆಯನ್ನು, ಹೆಣ್ಣನ್ನು ಒಲಿಸಿಕೊಳ್ಳಲು ಬೇಕಾಗುತ್ತದೆ ಎಂದು ಈ ಪುರುಷ ಪ್ರಧಾನ ಸಮಾಜ ಭಾವಿಸುವ ಎಲ್ಲ ಮಾಪಕಗಳನ್ನು ಒದ್ದು ಕೆಡವಿಬಿಡುತ್ತದೆ ಯಶೋಧರನ ಕಥೆ ಎಂಬುದನ್ನು ನಾವು ಗಮನಿಸಬೇಕು.

ಹೆಣ್ಣು ಎಂದಿಗೂ ಆರಿ ಹೋಗದ ನೆನಪಿನ ಕಣಜ. ಅವಳ ನೆನಪು ಚಿಟ್ಟೆಯ ಬಣ್ಣ ಕೈಗೆ ಅಂಟಿದ ಹಾಗೆ
ಬೆರಳಿಗಂಟಿದ ಪಕಳೆಯ ನುಣುಪ
ಚಿಟ್ಟೆ ಹಾರಿಯೂ ಉಳಿದ ಬಣ್ಣದ ಹುಡಿ ನೆನಪ
ಕಳೆಯಲಾರದು.

ಜಗತ್ತಿನ ಯಾವ ಶಕ್ತಿಗೂ ಇಂತಹ ನೆನಪನ್ನು ಮರೆಸುವ ಬಲವಿಲ್ಲ. ಹೀಗಾಗಿ ಹೆಣ್ಣೆಂದರೆ ಅವಳು ಜಗತ್ತನ್ನೇ ತನ್ನೊಳಗೆ ಸೆಳೆದುಕೊಳ್ಳಬಲ್ಲ ನವಿಲುಗರಿಯ ಕಣ್ಣು ಎನ್ನುವಂತಿದೆ ಕವಿಯ ಅಭಿಪ್ರಾಯ. ಹೀಗಾಗಿಯೇ ಪುರ ಪ್ರವೇಶ ಎನ್ನುವ ಕವನದಲ್ಲಿ ಯಾರೂ ಪ್ರವೇಶಿಸದ ಊರೆಂದರೆ ಅದು ಅವಳ ಅಂತಃಪುರ ಎನ್ನುತ್ತಲೇ ಅದನ್ನು ಮುಗಿಲಿಗೆ ಹೋಲಿಸುವುದು ಕುತೂಹಲ ಮೂಡಿಸುತ್ತದೆ.

ಈ ಕಾಲಕ್ಕೆ ಶೀರ್ಷಿಕೆ ಇಲ್ಲ, ನಿನ್ನ ಪತ್ರಗಳಿಲ್ಲದ ಈ ನಡು ಮಧ್ಯಾಹ್ನದ ಹೊತ್ತು.. ನಿಜದ ಕವಿತೆ ಮುಂತಾದ ವ್ಯಕ್ತಿ ಚಿತ್ರಣವಿರುವ ಕೆಲವು ಕವಿತೆಗಳು ವಿವಿಧ ಕಾರಣಗಳಿಗೆ ಆಪ್ತವಾಗುತ್ತಲೇ ಭಿನ್ನವಾಗುತ್ತದೆ. ಆಪ್ತರ ಬಗ್ಗೆ ಬರೆವ ಮಾತುಗಳು ನಿಜಕ್ಕೂ ಹೃದಯಕ್ಕೆ ಹತ್ತಿರವಾಗುತ್ತದೆಯಾದರೂ ಅದರ ನಿರೂಪಣೆಗಳು ಅಷ್ಟೊಂದು ಗಮನ ಸೆಳೆಯುವುದಿಲ್ಲ. ಅಥವಾ ಬರೆದ ಕವಿತೆಯೊಳಗಿನ ವ್ಯಕ್ತಿ ಓದುಗನಿಗೆ ಹತ್ತಿರದವರಾಗಿರದಿದ್ದರೆ ಅಥವಾ ಸಮಪೂರ್ಣ ಅಪರಿಚಿತರೇ ಆಗಿಬಿಟ್ಟಿದ್ದರೆ ಅಲ್ಲಿನ ಯಾವ ಭಾವಗೂ ಎದೆಗೆ ತಾಗುವುದಿಲ್ಲ. ಸುಮ್ಮನೆ ಓದಬೇಕೆಂದು ಒದಿಸಿಕೊಳ್ಳುವ ಕವನಗಳಾಗುವ ಅಪಾಯವನ್ನೂ ಒಂದು ಸಲ ಗಮನಿಸಬೇಕಿದೆ. ಹಾಗೆ ನೋಡಿದರೆ ವೈಯಕ್ತಿಕವಾಗಿ ಪರಿಚಯವಿರುವ ಕಲಬುರ್ಗಿ ಸರ್ ಹಾಗೂ ಗೌರಿ ಲಂಕೇಶ್‌ರವರ ಕಾರಣಕ್ಕಾಗಿ ಈ ಕಾಲಕ್ಕೆ ಶೀರ್ಷಿಕೆ ಇಲ್ಲ ಎಂಬ ಕವನ ನನಗೆ ಹೆಚ್ಚು ಆಪ್ತವಾಗುತ್ತದೆ. ವೈಯಕ್ತಿಕ ಪರಿಚಯವಿಲ್ಲದಿದ್ದರೂ ಆನಂದ ಋಗ್ವೇದಿಯವರ ಮಾತಿನಿಂದಲೇ ಪರಿಚಯವಾಗಿ, ಅದಕ್ಕೂ ಹೆಚ್ಚಾಗಿ ಬರೆಹದ ಮೂಲಕ ಎಲ್ಲರನ್ನೂ ಆಪ್ತವಾಗಿಸಿಕೊಂಡ ವಿಭಾಳ ಕಾರಣದಿಂದಾಗಿ ನಿನ್ನ ಪತ್ರಗಳಿಲ್ಲದ ಈ ನಡು ಮಧ್ಯಾಹ್ನದ ಹೊತ್ತು ಕೂಡ ಸರಾಗವಾಗಿ ಓದಿಸಿಕೊಳ್ಳುತ್ತದೆ. ಆದರೆ ಇದೇ ಮಾತನ್ನು ನಾನು ಉಳಿದ ವ್ಯಕ್ತಿ ಪರಿಚಯದ ಕವಿತೆಗಳಿಗೂ ಹೇಳಲಾರೆ. ಅವೆಲ್ಲವೂ ಮೇಲ್ನೋಟಕ್ಕೆ ಓದಿಸಿಕೊಂಡು, ಯಾರೋ ಇರಬಹುದು ಬಿಡು ಎಂದುಕೊಳ್ಳುವಂತಾಗುವ ಅಪಾಯ ಈ ತರಹದ ಕವಿತೆಗಳಿಗಿದೆ ಎಂಬುದನ್ನು ಗಮನಿಸಬೇಕು.

ರವಿ ನೋಡಲಾಗದ್ದು ಕವಿ ಕಂಡ ಎನ್ನುತ್ತಾರೆ ತಿಳಿದವರು. ಜಗದ ಯಾವ ವಸ್ತುವೂ ಕವಿತೆಯ ವ್ಯಾಪ್ತಿಯಿಂದ ತಪ್ಪಿಸಿಕೊಳ್ಳುವುದಿಲ್ಲ. ಹೆಣ್ಣು, ಪ್ರೀತಿ, ಪ್ರೇಮ, ವಿರಹ, ಕಾಮಗಳು ಕವನದ ಸಹಜ ವಸ್ತುಗಳಾದರೂ, ರಾಜಕಾರಣ, ಧರ್ಮ ಕೊನೆಗೆ ಕಣ್ಣಿಗೆ ಕಾಣುವ ಪ್ರತಿಯೊಂದೂ ಕವಿತೆಯ ವಿಷಯಗಳೇ. ಕೆಲವೊಮ್ಮೆ ಅದೆಷ್ಟೋ ವಸ್ತುಗಳು ಕೇವಲ ಕವಿತೆಗೆ ವಸ್ತುವಷ್ಟೇ ಆಗಿರದೇ ಇನ್ನೇನನ್ನೋ ಹೇಳಹೊರಟ ಕವಿಗೆ ರೂಪಕಗಳಾಗಿಯೂ ಒದಗುತ್ತವೆ. ಉದಾಹರಣೆಗೆ ಕೊಳಲೂದುವುದೆಂದರೆ ಕವನವು ಕೊಳಲೂದುವುದನ್ನು ಹೇಳುತ್ತಲೇ ಮಾನವ ಸಹಜವಾದ ಆಸೆ, ಆಕಾಂಕ್ಷೆ ಹಾಗೂ ಕಾಮನೆಗಳ ಕುರಿತಾಗಿ ಮಾತನಾಡುತ್ತದೆ.

ಮಾತಂಗ ಬೆಟ್ಟದ ನಡುವಲ್ಲಿ ನಿಂತು ಎನ್ನುವ ಕವಿತೆ ಹಂಪೆಯನ್ನು ವಿವರಿಸುತ್ತ ಆ ಮೂಲಕ ನಮ್ಮನ್ನು ಇತಿಹಾಸದ ಪುಟಗಳಲ್ಲಿ ಓಡಾಡಿಸುತ್ತದೆ.

ಅವಳ ಉಸಿರಿನ ಬಿಸಿಬಿಸಿ ಅಲೆ
ಬಂಡೆಗಪ್ಪಳಿಸಿ ಬೆಳಕ ತೋಯಿಸಿದ ಆಧ್ರತೆ
ಕಂಗಳಲ್ಲಿ ಮೋಡ ಮುಸುಕಿದ ಹಗಲು
ಧೀಂಗುಡುವ ದುಗುಡ 

ಎನ್ನುತ್ತಲೇ ಮಾತಂಗ ಪರ್ವತದ ತುದಿಯಲ್ಲಿ ನಿಂತು ಹಂಪೆಯನ್ನು ನೋಡಿದರೆ ಅದು ಆಗಷ್ಟೇ ಮಿಂದು ಶ್ರೀಮುಡಿ ಕಟ್ಟಿದ ತಾಯಿಯಂತೆ ಕಾಣುವುದು ಎನ್ನುವ ಮಾತು ಎದೆ ತಟ್ಟುತ್ತದೆ. ಒಂದು ಕಾಲದಲ್ಲಿ ವೈಭವದಿಂದ ಮೆರೆದಿದ್ದ ಹಂಪೆಯೀಗ ಹಾಳು ಕೊಂಪೆ. ಆದರೂ ಅದರ ಗತವೈಭವ ಸಾರುವ ಕಟ್ಟಡಗಳು, ದೇಗುಲಗಳು, ಮಂಟಪಗಳು, ಶಿಲ್ಪಗಳು ನಮ್ಮನ್ನು ಮೂಕವಾಗಿಸುವುದರಲ್ಲಿ ಸಂದೇಹವಿಲ್ಲ. ಹೀಗಾಗಿಯೇ ಹಾಳಾದ ಹಂಪೆ ಅಳುವುದಿಲ್ಲ, ನಮ್ಮನ್ನೆಲ್ಲ ನೋಡುವಂತೆ ಕರೆಯುತ್ತಾಳೆ. ಎಂದೂ ನಿದ್ರಿಸದೇ ಜಾಗರಣೆ ಮಾಡುತ್ತ ತನ್ನ ಕಥೆಯನ್ನು ಸಾರುತ್ತಾಳೆ.

ಹಾಗೆ ನೋಡಿದರೆ ಸಂಜೆಯರಳಿನ ವಿಷಾದ ಗೀತೆ ಕವಿತೆ ಉಳಿದೆಲ್ಲ ಕವಿತೆಗಳಿಗಿಂತ ಭಿನ್ನವಾಗಿ ಮೂಡಿ ಬಂದಿದೆ. ಸಂಜೆ ಅರಳುವ ಪಾರಿಜಾತ ಇಲ್ಲಿ ಮತ್ತಾವುದೋ ಸಂಜೆಯ ಗೀತೆಯನ್ನು ಹಾಡುತ್ತಿದೆ. ಕೃಷ್ಣನಿಗೆ ಅದೆಷ್ಟೇ ಪ್ರಿಯವಾದರೂ ಹಗಲಲ್ಲಿ ಲುಪ್ತವಾಗ ಬಯಸುವ ಪಾರಿಜಾತದ ವರ್ಣನೆ ಓದುವಾಗಲೆಲ್ಲ ಅದ್ಯಾವುದೋ ಕಾರಣಗಳಿಗೆ ಸಂಜೆಯಲ್ಲಿ ಹೂವಾಗುವ ಅದೆಷ್ಟೋ ಅಸಂಖ್ಯಾತ ಸಹೋದರಿಯರು ಬೇಡಬೇಡವೆಂದೂ ನೆನಪಾಗುತ್ತಾರೆ. ಅವರೂ ಸಂಜೆಯಲ್ಲಿ ಅರಳಿ, ಯಾರಿಗೆ ಎಷ್ಟು ಪ್ರೇಮ ಎಂದು ಹೇಳಿದರೂ ಹಗಲಲ್ಲಿ ಎಟುಕಲಾರದವರು. ಸುರುಗಿಯಂತೆ ಮಾಲೆ ಮಾಡಿದರೂ, ಪೋಣಿಸಿದರೂ ಪಾರಿಜಾತವನ್ನು ಮುಡಿಯುವವರೇ ಸಿಕ್ಕುವುದಿಲ್ಲ ಎನ್ನುವ ಮಾತು ಅಂತಃಕರಣವನ್ನು ಕಲಕುತ್ತದೆ.

ನಿನ್ನೆಗಳ ಹಿಂದೆ ಬಿಟ್ಟು
ಮುಂದಿನ ನಾಳೆಗಳ ಬೆಂಬತ್ತಿ
ಬತ್ತೀಸರಾಗದಲ್ಲೊಂದು ರಾಗ ಉಸಿರಿ
ಸರಾಗ ಸಾಗಿದೆಯೆಂದು ಭಾವಿಸಿದ್ದಾಲೇ ಕಂಡಿದ್ದು
ಬಣ್ಣಗೆಟ್ಟ ಬಟ್ಟೆ

ಕವಿ ಶಬ್ಧಗಳ ಜೊತೆ ಆಟವಾಡುವುದು ಸಹಜ. ಒಂದೇ ಶಬ್ಧವನ್ನು ಅತ್ತಿತ್ತ ಆಡಿಸಿ, ಒಂದೇ ಶಬ್ಧವನ್ನು ಎರಡು ಮೂರು ಅರ್ಥ ಸ್ಪುರಿಸುವಂತೆ ಹೇಳುತ್ತ ಕವನದ ವೈಶಿಷ್ಟ್ಯವನ್ನು ಹೆಚ್ಚಿಸುವುದನ್ನು ಓದಿಯೆ ಅನುಭವಿಸಬೇಕು. ಹಾಗೆ ನೋಡಿದರೆ ಆನಂದ ಋಗ್ವೇದಿಯವರ ಈ ಸಂಕಲನದ ಕವಿತೆಗಳು ಏಕಾಂಗಿಯಾಗಿ ಓದಿ ಆಸ್ವಾದಿಸುವಂತಹುದ್ದಲ್ಲ ಎಂದು ನನಗೆ ಓದಿದಾಗಲೆಲ್ಲ ಅನ್ನಿಸಿದೆ. ಒಬ್ಬರು ಗಟ್ಟಿಯಾಗಿ ಓದಬೇಕು, ಇನ್ನೊಬ್ಬರು ಕುಳಿತು ಕೇಳಬೇಕು ಅಂದಾಗಲೇ ಅದು ಸರಿಯಾಗಿ ಅರ್ಥವಾಗುವುದು. ಕೊನೆಯಪಕ್ಷ ನಾವಾದರೂ ಈ ಕವಿತೆಗಳನ್ನು ಮನಸ್ಸಿನಲ್ಲಿಯೇ ಓದಿ ಆಸ್ವಾದಿಸುತ್ತೇವೆ ಎನ್ನುವುದನ್ನು ಬಿಟ್ಟು ಒಬ್ಬರೇ ಕುಳಿತು ಗಟ್ಟಿಯಾಗಿ ಓದಿಕೊಳ್ಳಬೇಕು. ಆಗಲೇ ಪ್ರತಿ ಸಾಲಿನ ನಿಲುಗಡೆಯ ನವಿರು, ಪ್ರತಿ ಪದವನ್ನು ಬಳಸಿದ ವೈಶಿಷ್ಟ್ಯದ ಅರಿವಾಗುವುದು. ಅದರಲ್ಲೂ ದೊಡ್ಡದಾಗಿ, ಸಾಲುಗಳನ್ನು ಎರಡೆರಡು ಸಲ ಓದಿಕೊಂಡಾಗ ಮಾತ್ರ ನಾನು ಆಗ ಹೇಳಿದ ಹಾಗೆ ಒಂದು ಶಬ್ಧಕ್ಕಿರುವ ಎರಡು ಮೂರು ಅರ್ಥಗಳು ಅರಿವಿಗೆ ಬರುವುದು.

ಏಸೊಂದು ರಾಧೆಯರಿಲ್ಲಿ ಕವನ ಓದಿದಾಗೊಂದು ಸಲದಂತೆ ಅರ್ಥವನ್ನು ನೀಡುತ್ತದೆ. ವರ್ತಮಾನದ ಹಾಗೆ ಹಿಮದೆಂದೂ ಗೋಕುಲವಿರಲಿಲ್ಲ ಎನ್ನುತ್ತಲೇ ಕವಿ ಈ ಗೋಕುಲದ ಒಳಗೆ ಬಂದ ಅರಿವಿರದ, ಹೊರ ಹೋಗುವ ಚೆಲುವಿರದ ಕುರಿತಾಗಿ ಹೇಳುತ್ತಲೇ ಉದ್ಯಾನವನಗಳ ಪೊದೆ ಪೊದರುಗಳಲ್ಲಿ ಪಲ್ಲವಿಸುವ ಬೆಳದಿಂಗಳ ರಾತ್ರಿಗಳನ್ನು ಪ್ರಸ್ತಾಪಿಸುತ್ತಾರೆ. ಆದರೆ ಕೊನೆಯಲ್ಲಿ ಕವನದ ವಾಚ್ಯತೆ ಕವನದ ಮೂಲ ಆಶಯವನ್ನೇ ಮರೆಮಾಚಿದಂತೆ ಭಾಸವಾಗುತ್ತದೆ. ಗಂಭೀರ ಕಾವ್ಯವನ್ನು ರಚಿಸುವ ಆನಂದ ಋಗ್ವೇದಿ ಸಧ್ಯದ ವರ್ತಮಾನಕ್ಕೆ ಅನುಗುಣವಾಗಿ ಗಪದ್ಯದತ್ತ ಹೊರಳಿರುವ, ಆ ಮೂಲಕ ಹೇಳಬೇಕಾದುದ್ದನ್ನು ನೇರವಾಗಿ ಓದುಗರಿಗೆ ನೀಡಿಬಿಡುವ ಪ್ರಯೋಗಕ್ಕಿಳಿದಿದ್ದಾರೆ. ಕಾವ್ಯವು ಮುಚ್ಚಿಟ್ಟಷ್ಟೂ ತೆರೆದುಕೊಳ್ಳುತ್ತದೆ. ತೆರೆದಿಟ್ಟಷ್ಟೂ ಮುಚ್ಚಿಕೊಳ್ಳುತ್ತದೆ. ಈ ಒಂದು ಸಂಕಲನದಲ್ಲಿಯೇ ಕವಿ ಮುಚ್ಚಿಟ್ಟು ಎಲ್ಲವನ್ನೂ ಬಯಲುಗೊಳಿಸುವ, ತೆರೆದಿಟ್ಟೂ ಅವ್ಯಕ್ತವಾಗಿಸುವ ಕಾವ್ಯಪ್ರಯೋಗ ಮಾಡಿ ಗೆದ್ದಿದ್ದಾರೆ.

ಬದುಕೆಂಬುದು
ರೆಪ್ಪೆ ತೆರೆದಾಗಿನಿಂದ ಮುಚ್ಚುವವರೆಗೆ
ತೆರೆದ ಅಧ್ಯಾಯ

ಬದುಕಿನ ಸರಳ ವ್ಯಾಖ್ಯಾನಗಳು, ಪುರಾಣ, ಚರಿತ್ರೆ, ವರ್ತಮಾನ ಹೀಗೆ ಎಲ್ಲಾ ಆಯಾಮಗಳನ್ನು ಒಳಗೊಂಡಿರುವ ಕವನಗಳು ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ. ಬದುಕು ಗುಟ್ಟುಗಳನ್ನು ಬಚ್ಚಿಟ್ಟುಕೊಂಡುತೆರೆಮರೆಯ ನಾಟಕವಾಗದೇ ತೆರೆದ ಅಧ್ಯಾಯವಾಗಿರಲಿ.

ಶ್ರೀದೇವಿ ಕೆರೆಮನೆ ಅವರ ಲೇಖಕ ಪರಿಚಯ..

MORE FEATURES

ಕಾವ್ಯಾನುವಾದ ಎಲ್ಲ ಕಾಲದಲ್ಲೂ ಅಗತ್ಯವಾದ ಕ್ರಿಯೆಯೇ

18-12-2024 ಬೆಂಗಳೂರು

"ಒಂದು ಭಾಷಿಕ ಲೋಕದಲ್ಲಿ ಈಗಾಗಲೇ ಪ್ರಚಲಿತವಾಗಿರುವ, ಆಚರಣೆಯಲ್ಲಿರುವ ಸೂಕ್ಷ್ಮತೆ, ಸಂವೇದನೆ, ವಸ್ತುವಿಷಯ, ದೃಷ್ಟಿ...

ಕಾವ್ಯವನ್ನು ಕಣ್ಣಿನಿಂದ ಕಿವಿಗೆ ಹಸ್ತಾಂತರಿಸಿ ಹೃದಯಕ್ಕೆ ಮುಟ್ಟುವಂತೆ ಮಾಡಿದವರು ಕಂಬಾರರು

18-12-2024 ಬೆಂಗಳೂರು

“ಕಂಬಾರರ ಈ ಹೊಸ ಹಾಗೂ ಪರ್ಯಾಯ ಆಲೋಚನೆಗಳನ್ನು ಕನ್ನಡ ಸಾಹಿತ್ಯ ವಿಮರ್ಶೆ ಗುರುತಿಸಬೇಕಾದಷ್ಟು ಗುರುತಿಸಿಲ್ಲ. ಕಂಬ...

ಅಖಂಡ ನಾಲ್ಕು ವರ್ಷಗಳ ಚಿಂತನ ಮಂಥನ ಪಾತ್ರಗಳ ಪರದಾಟ..

18-12-2024 ಬೆಂಗಳೂರು

“ಹಗಲಿನಲ್ಲಿ ಇರುಳಿನಲ್ಲಿ ಕನಸಿನಲ್ಲಿ ಕನವರಿಕೆಯಲ್ಲಿ ಹೊತ್ತೂ ಗೊತ್ತೂ ಇಲ್ಲದ ಹೊತ್ತಿನಲ್ಲೂ ದುಸ್ವಪ್ನವಾಗಿ ಕಾಡಿ...