ಮಣ್ಣಿನ ಸೊಗಡಿನ, ಜೀವನದ ಮಿಡಿತದ ಕೃತಿ ’ಕೃಷಿ ಯಾಕೆ ಖುಶಿ?’


"ಕೃಷಿ ಯಾಕೆ ಖುಷಿ" ಪುಸ್ತಕ ಓದೋಕೆ ಖುಷಿ ನೀಡುವ ಜೊತೆಗೆ ಅನೇಕ ಭಾವನೆಗಳನ್ನು, ತುಮುಲಗಳನ್ನು, ವಿಚಾರಗಳನ್ನು ಓದುಗರಿಗೆ ಸಮರ್ಥವಾಗಿ ವರ್ಗಾಯಿಸುವಲ್ಲಿ ಯಶಸ್ವಿಯಾಗುತ್ತದೆ. ಒಬ್ಬ ರೈತ ಕುಟುಂಬದ ಹಿನ್ನಲೆಯಲ್ಲಿ ಬೆಳೆದುಬಂದ ನನಗೆ ಮತ್ತೊಮ್ಮೆ ಆ ಜಾಗಗಳಲ್ಲಿ ಬರಿಗಾಲಲ್ಲಿ ಓಡಾಡಿದ ಅನುಭವ! ಇನ್ನು ಕೃಷಿಯ ಬಗ್ಗೆ ಅರಿವಿಲ್ಲದವರಿಗೆ ಹೀಗೂ ಇದೆಯೇ ಎನ್ನುವ ಅಚ್ಚರಿ ಎನ್ನುತ್ತಾರೆ ಲೇಖಕಿ ಶ್ವೇತಾ ಭಿಡೆ. ಲೇಖಕ ನರೇಂದ್ರ ರೈ ದೇರ್ಲ ಅವರು ಬರೆದಿರುವ ಕೃಷಿ ಯಾಕೆ ಖುಷಿ ? ಕೃತಿಯ ಬಗೆಗಿನ ಲೇಖನ ನಿಮ್ಮ ಓದಿಗಾಗಿ..

ಕೃತಿ: ಕೃಷಿ ಯಾಕೆ ಖುಷಿ ?
ಲೇಖಕ: ನರೇಂದ್ರ ರೈ ದೇರ್ಲ
ಬೆಲೆ: 140
ಪುಟ: 120
ಮುದ್ರಣ: 2022
ಪ್ರಕಾಶನ: ವೀರಲೋಕ ಪಬ್ಲಿಕೇಶನ್ 

ಸುರಿವ ಮಳೆಯಲ್ಲಿ ಕಂಬಳಿ ಕೊಪ್ಪೆ ಹಾಕಿಕೊಂಡು, ಕೆಸರು ಮೆತ್ತಿದ ಕೈಕಾಲುಗಳನ್ನು ತೊಳೆದು, ಚುರುಗುಟ್ಟುವ ಹೊಟ್ಟೆಗೆ ಆಗಷ್ಟೇ ಬಸಿದು ಮಾಡಿದ ಬಿಸಿಬಿಸಿ ಅನ್ನ, ಕಳಲೆ ಹುಳಿ, ಮೇಲೆ ಕೊಬ್ಬರಿ ಎಣ್ಣೆ, ಪಕ್ಕಕ್ಕೆ ಕರಿದ ಬಾಳಕ ಮೆಣಸು, ಗಟ್ಟಿ ಮೊಸರು ಅಂತೆಲ್ಲ ಸೇರಿಸಿ ಊಟ ಮಾಡಿ ಕೈತೊಳೆದ ಮೇಲೆ ಸಿಗುವ ತೃಪ್ತಿಯನ್ನು ಅಳೆವ ಪರಿಮಾಣ ಯಾವುದು? 

ಕೃಷಿ ಅನ್ನೋದೂ ಹಾಗೆಯೇ, ಬಣ್ಣಿಸಲು ಸಿಗದ ತೃಪ್ತಿ. ಸಣ್ಣ ಬೀಜವೊಂದು ಭೂಮಿಗೆ ಬೀರಿ, ಅದು ಒಳಹೊಕ್ಕು, ಹೊರಬಂದು, ಸಣ್ಣ ಟಿಸಿಲೊಡೆದು, ಚಿಗುರಿ, ಗಿಡವಾಗಿ, ಮರವಾಗಿ ಫಲ ನೀಡುವಾಗ ಸಿಗುವ ಆನಂದ ಬೆಲೆ ನಿಕ್ಕಿ ಮಾಡಿ ಹೇಳುವಂಥಹುದಲ್ಲ. 

"ಕೃಷಿ ಯಾಕೆ ಖುಷಿ" ಪುಸ್ತಕ ಓದೋಕೆ ಖುಷಿ ನೀಡುವ ಜೊತೆಗೆ ಅನೇಕ ಭಾವನೆಗಳನ್ನು, ತುಮುಲಗಳನ್ನು, ವಿಚಾರಗಳನ್ನು ಓದುಗರಿಗೆ ಸಮರ್ಥವಾಗಿ ವರ್ಗಾಯಿಸುವಲ್ಲಿ ಯಶಸ್ವಿಯಾಗುತ್ತದೆ. ಒಬ್ಬ ರೈತ ಕುಟುಂಬದ ಹಿನ್ನಲೆಯಲ್ಲಿ ಬೆಳೆದುಬಂದ ನನಗೆ ಮತ್ತೊಮ್ಮೆ ಆ ಜಾಗಗಳಲ್ಲಿ ಬರಿಗಾಲಲ್ಲಿ ಓಡಾಡಿದ ಅನುಭವ! ಇನ್ನು ಕೃಷಿಯ ಬಗ್ಗೆ ಅರಿವಿಲ್ಲದವರಿಗೆ ಹೀಗೂ ಇದೆಯೇ ಎನ್ನುವ ಅಚ್ಚರಿ. 

ಸರಿಯಾಗಿ ನೆನಪಿದೆ, ನಾನಾಗ ಎಂಟನೇ ತರಗತಿ. ಭತ್ತದ ತಳಿಗಳ ಬಗ್ಗೆ ಒಂದು ಉಪನ್ಯಾಸ ಕಾರ್ಯಕ್ರಮ. ಅದೆಷ್ಟು ಚೆಂದವಿತ್ತು ಎಂದರೆ ಸಂಜೆ ಮನೆಗೆ ಬಂದವಳೇ ಅಜ್ಜಿಗೆ ದುಂಬಾಲು ಬಿದ್ದೆ, ಮುಂದಿನ ಸಲ ನಮ್ಮಲ್ಲಿ ಐಟಿ ಭತ್ತ ಬೇಡ, ಗೌರಿ ಹಾಕೋಣ, ಅಥವಾ ಗಂಧಸಾಲೆ, ಜೀರಿಗೆ, ಕೆಂಪಕ್ಕಿ, ಇನ್ನೂ ಏನೇನೋ. ನಾನ್ಯಾಕಿದನ್ನು ಹೇಳುತ್ತಿದ್ದೇನೆ ಎಂದರೆ ನಮ್ಮಲ್ಲಿ ಈ ಪರಿ ಹಳ್ಳಿಯ, ಮಣ್ಣಿನ, ಕೃಷಿಯ ಸೊಗಡನ್ನು, ಅಗತ್ಯವನ್ನೂ ಎದೆಗಿಳಿಸುವ ಕೆಲಸ ಆಗಬೇಕಿದೆ. 

ತಿನ್ನುವ ಅನ್ನ ಎಲ್ಲಿಂದ ಬಂತು, ಹೇಗೆ ಬಂತು ಎನ್ನುವ ಅರಿವಿರುವವನು ತುತ್ತು ಅನ್ನವನ್ನೂ ಚೆಲ್ಲಲಾರ. ಆದರೆ ದುರಂತವೆಂದರೆ ಹಳ್ಳಿಯ ಪೋಷಕರೇ ನಗರದಲ್ಲಿ ದುಡಿವ ಹುಡುಗನಿಗೆ ಕೊಡುವ ಬೆಲೆಯನ್ನು ಬಿಸಿಲಲ್ಲಿ ಬೆವರಿ, ಮಳೆಯಲ್ಲಿ ನೆನೆದು ಹೊಟ್ಟೆ ತುಂಬಿಸುವ ಕಾಯಕ ಮಾಡುವ ಮತ್ತೊಬ್ಬ ಮಗನಿಗೆ ನೀಡಲಾರರು. 

ಲೇಖಕ ನರೇಂದ್ರ ರೈ, ತಮ್ಮ ಸುತ್ತ ಮುತ್ತಲಿನ ಪರಿಸರದ ನಡುವೆ ಗುಡ್ಡದಂತೆ ಇರುವ ಆತಂಕಗಳನ್ನು ಹೇಳುತ್ತಾ ಹೋಗುವಾಗ ಅದ್ಯಾವುದೂ ಸುಳ್ಳೆನಿಸುವುದಿಲ್ಲ. ಹಳ್ಳಿಯ ಜನರ ಜೊತೆ ಸಾಂಗತ್ಯ ಹೊಂದಿದ ಪ್ರತಿಯೊಬ್ಬರಿಗೂ ಇದು ನನ್ನದೇ ಊರಿನ, ಮನೆಯ ಕಥೆ ಎನಿಸುತ್ತದೆ. ಅದರ ಜೊತೆಯೇ ಒಂದಷ್ಟು ಆಶಾವಾದದ ಕಥೆಗಳ ಮೂಲಕ, ಸಾಧಕರ ನಿದರ್ಶನಗಳ ಮೂಲಕ ಸಣ್ಣದಾದ ಭರವಸೆಯ ಕಿಡಿಯನ್ನು ಹೊತ್ತಿಸಿದ್ದಾರೆ ಲೇಖಕರು. ಮತ್ತದು ಅಗತ್ಯ ಸಹ!

ಪ್ರೀತಿ, ಪ್ರೇಮ, ಸಹಜ ಕಥೆಗಳನ್ನು ಹಲವರು ಬರೆಯಬಲ್ಲರು. ಮಣ್ಣಿನ ಸೊಗಡಿನ, ಜೀವನದ ಮಿಡಿತವನ್ನು ಅಲ್ಲಿ ಇದ್ದು ಅನುಭವಿಸಿ, ಆಸ್ವಾದಿಸಿದವರು ಮಾತ್ರವೇ ಈ ಪರಿ ಕಟ್ಟಿಕೊಡಲು ಸಾಧ್ಯ! ಆ ನಿಟ್ಟಿನಲ್ಲಿ ಪುಸ್ತಕ ಮತ್ತು ಲೇಖಕರು ಗೆದ್ದಿದ್ದಾರೆ. ಅಭಿನಂದನೆಗಳು!

-ಶ್ವೇತಾ ಭಿಡೆ.

MORE FEATURES

ಕಾದಂಬರಿಯ ಕಟ್ಟುವಿಕೆ ಮಹಾಭಾರತವನ್ನು ನೆನಪಿಸಿತು…

23-11-2024 ಬೆಂಗಳೂರು

“ನಾನು ಇದನ್ನು ಓದುತ್ತಾ ಅಚ್ಚರಿಗೊಂಡಿದ್ದೇನೆ; ದಿಗ್ಭ್ರಾಂತನಾಗಿದ್ದೇನೆ; ಕಣ್ಣಂಚನ್ನು ಒದ್ದೆಯಾಗಿಸಿಕೊಂಡಿದ್ದೇನ...

ಇಲ್ಲಿ ಭಿನ್ನವಾದ ಕಥೆಯಿದೆ- ಜೀವಾನುನಭವವಿದೆ

23-11-2024 ಬೆಂಗಳೂರು

“ಸ್ವಲ್ಪ ಎಡವಿದರೂ ಕಥೆ ಕಾಮದಿಂದ - ಪ್ರೇಮಕ್ಕೂ ಪ್ರೇಮದಿಂದ - ಕಾಮಕ್ಕೂ ಹೊರಳಿಕೊಳ್ಳಬಹುದೆಂಬ ಎಚ್ಚರಿಕೆಯಿಂದಲೇ ನ...

ಬೇಸರವನ್ನೋಡಿಸುವ ತಾಕತ್ತಿನ ‘ಬೇಸೂರ್’

22-11-2024 ಬೆಂಗಳೂರು

"ಹಳೆಯ ದಿನಗಳೆಲ್ಲ ನೆನಪಾಗಲು ಕಾರಣವಾಗಿದ್ದು ಬೇಸೂರ್ ಎಂಬ ಕಥಾ ಸಂಕಲನ. ಮೊದಲಿಗೆ ಕುತೂಹಲ ಕೆರಳಿಸಿದ್ದು ಸಂಕಲನದ ಹ...