ಮಲೆನಾಡಿನ ಸಾಗರದಲ್ಲಿ ಕಳೆದ ಬಾಲ್ಯದ ನೆನಪುಗಳು ಜೆಪಿಯವರ ಪ್ರಬಂಧಗಳ ಸೊಗಸು: ಎಚ್. ಡುಂಡಿರಾಜ್


“ಪ್ರಬಂಧಗಳಿಗೆ ಜೆಪಿ ಆಯ್ದುಕೊಂಡಿರುವ ವಸ್ತುಗಳು ನಮಗೆಲ್ಲ ಚಿರಪರಿಚಿತ ಅನ್ನಿಸುವಂಥವು. ಆದರೆ ಅವುಗಳನ್ನು ಅವರು ನೋಡುವ ರೀತಿ ಮತ್ತು ಅವುಗಳ ಮೂಲಕ ಹೇಳುವ ವಿಚಾರಗಳಲ್ಲಿ ಜೆಪಿಯವರ ವಿಸ್ತ್ರತವಾದ ಓದು ಮತ್ತು ಸಮೃದ್ಧ ಜೀವನಾನುಭವದ ಪ್ರಭಾವವನ್ನು ಗುರುತಿಸಬಹುದು” ಎನ್ನುತ್ತಾರೆ‌ ಎಚ್.‌ ಡುಂಡಿರಾಜ್‌ . ಇವರು ಲೇಖಕ ಜಯಪ್ರಕಾಶ ಮಾವಿನಕುಳಿ ಅವರ ʻಸಾಗರ ಯಾನದ ಬಣ್ಣದ ತೆರೆಗಳುʼ ಪುಸ್ತಕಕ್ಕೆ ಬರೆದ ಮುನ್ನುಡಿಯ ಸಾಲುಗಳು ನಿಮ್ಮ ಓದಿಗಾಗಿ...

ನನ್ನ ಬಹುಕಾಲದ ಆತ್ಮೀಯ ಮಿತ್ರರೂ ಹಿತೈಷಿಗಳೂ ಆದ ಡಾ. ಜಯಪ್ರಕಾಶ ಮಾವಿನಕುಳಿಯವರ 'ಸಾಗರಯಾನದ ಬಣ್ಣದ ತೆರೆಗಳು' ಎಂಬ ಪ್ರಬಂಧಗಳ ಸಂಕಲನಕ್ಕೆ ಮುನ್ನುಡಿಯ ರೂಪದಲ್ಲಿ ಕೆಲವು ಮಾತುಗಳನ್ನು ಬರೆಯಲು ತುಂಬಾ ಸಂತೋಷವೆನಿಸುತ್ತದೆ. ಈಗಾಗಲೇ ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ತಮ್ಮ ಸಾಧನೆಯಿಂದ ಪ್ರಸಿದ್ಧರಾಗಿರುವ ಮಾವಿನಕುಳಿಯವರ ಕೃತಿಗೆ ಅವರಿಗಿಂತ ಕಿರಿಯನಾದ ನನ್ನ ಮುನ್ನುಡಿಯ ಅಗತ್ಯವಿಲ್ಲ. ಆದರೂ ಅವರು ನನ್ನಿಂದ ಮುನ್ನುಡಿಯನ್ನು ಬಯಸಿರುವುದಕ್ಕೆ ಕಾರಣ ಅವರ ಮತ್ತು ನನ್ನ ಬಹುಕಾಲದ ಮುಪ್ಪಾಗದ, ಮುಕ್ಕಾಗದ ಗೆಳೆತನ. ಮಾವಿನಕುಳಿಯವರ ಪುಸ್ತಕಕ್ಕೆ ಮುನ್ನುಡಿ ಬರೆಯುವ ಈ ಅವಕಾಶ ನನಗೆ ಸಿಕ್ಕ ದೊಡ್ಡ ಪ್ರಶಸ್ತಿ ಎಂತಲೇ ನಾನು ಭಾವಿಸುತ್ತೇನೆ. ಡಾ. ಜಯಪ್ರಕಾಶ ಮಾವಿನಕುಳಿಯವರನ್ನು ಅವರ ಗೆಳೆಯರು ಜೆಪಿ ಅಂತಲೇ ಕರೆಯುವುದು. ನಾನೂ ಅವರ ಹಳೆಯ ಗೆಳೆಯನಾಗಿರುವುದರಿಂದ ಹಾಗೇ ಕರೆದರೆ ಸಹಜವಾಗಿರುತ್ತದೆ.

ಇದುವರೆಗೆ ತಮ್ಮ ಕಾದಂಬರಿ, ಸಣ್ಣಕಥೆ, ಕವಿತೆ ಹಾಗೂ ನಾಟಕಗಳಿಂದ ಸಾಹಿತ್ಯಾಸಕ್ತರ ಮನ ಗೆದ್ದಿದ್ದ ಜೆಪಿ ಈ ಪುಸ್ತಕದಲ್ಲಿ ಲಘುಧಾಟಿಯ 30 ಪ್ರಬಂಧಗಳನ್ನು ನೀಡಿದ್ದಾರೆ. ಅವರ ಕಾದಂಬರಿ ಮತ್ತು ಕಥೆಗಳಂತೆ ಆಪ್ತವಾಗಿ ಓದಿಸಿಕೊಳ್ಳುವ ಗುಣ ಇಲ್ಲಿನ ಪ್ರಬಂಧಗಳಲ್ಲಿಯೂ ಕಾಣಬಹುದು. ಅದು ಅವರ ಬರಹದ ಶಕ್ತಿ. ಆದರೆ ಅವರೊಡನೆ ಆತ್ಮೀಯವಾಗಿ ಹರಟೆ ಹೊಡೆಯುವಾಗ ಅವರ ಮಿತ್ರರಿಗೆ ಮಾತ್ರ ಕಾಣಸಿಗುತ್ತಿದ್ದ ಜೆಪಿಯವರ ತಮಾಷೆಯ ಗುಣ, ನಗೆ ಇಲ್ಲಿನ ಪ್ರಬಂಧಗಳಲ್ಲಿ ಬೆರೆತಿರುವುದು ಅವರ ಓದುಗರಿಗೆ ಸಿಗುತ್ತಿರುವ ಬೋನಸ್ ಅನ್ನಬಹುದು. ಜೆಪಿಯವರ ಗಂಭೀರ ಸಾಹಿತ್ಯವನ್ನು ಮೆಚ್ಚಿರುವ ಓದುಗರು ಅವರ ಬರವಣಿಗೆಯ ಈ ಲಘು ಬಗೆಯನ್ನೂ ಸಂತೋಷದಿಂದ ಸ್ವಾಗತಿಸುತ್ತಾರೆಂದು ನಾನು ಭಾವಿಸುತ್ತೇನೆ. ಲೇಖಕರ ಮಾತುಗಳಲ್ಲಿ ಅವರೇ ಹೇಳಿರುವಂತೆ ಇಲ್ಲಿನ ಪ್ರಬಂಧಗಳ ಭಾಷೆ, ವಿನ್ಯಾಸ, ಶೈಲಿ ಲಘುವಾಗಿ ಕಂಡರೂ ಅವುಗಳ ಹಿಂದೆ ಒಂದು ಗಂಭೀರವಾದ ಉದ್ದೇಶವಿದೆ. ಲಘುದಾಟಿಯ ಪ್ರಬಂಧಗಳಲ್ಲೂ ಆಳವಾದ ವಿಷಯ, ಹೊಸ ಕಾಣ್ಕೆ ಹಾಗೂ ಗಟ್ಟಿಯಾದ ಸಂದೇಶವನ್ನು ನೀಡಲು ಸಾಧ್ಯ ಎಂಬ ನಂಬಿಕೆಯಿಂದ ಜೆಪಿ ಈ ಪ್ರಬಂಧಗಳನ್ನು ರಚಿಸಿದ್ದಾರೆ.

ಪ್ರಬಂಧಗಳಿಗೆ ಜೆಪಿ ಆಯ್ದುಕೊಂಡಿರುವ ವಸ್ತುಗಳು ನಮಗೆಲ್ಲ ಚಿರಪರಿಚಿತ ಅನ್ನಿಸುವಂಥವು. ಆದರೆ ಅವುಗಳನ್ನು ಅವರು ನೋಡುವ ರೀತಿ ಮತ್ತು ಅವುಗಳ ಮೂಲಕ ಹೇಳುವ ವಿಚಾರಗಳಲ್ಲಿ ಜೆಪಿಯವರ ವಿಸ್ತ್ರತವಾದ ಓದು ಮತ್ತು ಸಮೃದ್ಧ ಜೀವನಾನುಭವದ ಪ್ರಭಾವವನ್ನು ಗುರುತಿಸಬಹುದು. ಹೀಗಾಗಿ ಇಲ್ಲಿನ ಪ್ರಬಂಧಗಳನ್ನು ಓದುವಾಗ ಓರ್ವ ಜವಾಬ್ದಾರಿಯುತ, ಸುಸಂಸ್ಕೃತ ಹಾಗೂ ಪ್ರಬುದ್ಧ ಚಿಂತಕರೊಡನೆ ಆಪ್ತ ಸಂವಾದ ಮಾಡಿದ ಸಂತೋಷ, ತೃಪ್ತಿ ಉಂಟಾಗುತ್ತದೆ. ಇಲ್ಲಿನ ಹಲವು ಪ್ರಬಂಧಗಳನ್ನು ಓದಿ ಮುಗಿಸಿದ ನಂತರವೂ ಲೇಖಕರು ಎತ್ತಿದ ಪ್ರಶ್ನೆಗಳು, ವ್ಯಕ್ತಪಡಿಸಿದ ಸಂದೇಹಗಳು ನಮ್ಮನ್ನು ಕಾಡುತ್ತವೆ.

'ಕಾಲು ಕಥಾನಕ' ಎಂಬ ಆರಂಭದ ಪ್ರಬಂಧವನ್ನೆ ತೆಗೆದುಕೊಳ್ಳೋಣ. ದೀಪಾವಳಿ ಹಬ್ಬದ ದಿನ ಕಥಾನಾಯಕನ ಇಬ್ಬರು ಮಕ್ಕಳು ಆತನ ಕಾಲುಗಳಿಗೆ ಎಣ್ಣೆ ಹಚ್ಚಿ ಮಾಲೀಶ್ ಮಾಡುವಾಗ ಅವನ ಗಮನ ತನ್ನ ಕಾಲುಗಳತ್ತ ಹೋಗುತ್ತದೆ. ನಂತರ ಆ ಕಾಲುಗಳು ಹೇಗೆ ತನ್ನ ಜೀವನದುದ್ದಕ್ಕೂ ನಂಬಿಕಸ್ಥ ಸಂಗಾತಿಗಳಾಗಿ ತನ್ನೊಂದಿಗೆ ಹೆಜ್ಜೆ ಹಾಕಿದವು ಎಂಬುದನ್ನು ಕಥಾನಾಯಕ ಓದುಗರ ಮನಸ್ಸಿಗೆ ನಾಟುವಂತೆ ಬಣ್ಣಿಸುತ್ತಾನೆ. ಬಿದ್ದು ಎದ್ದು ನಡಿಗೆ ಕಲಿತಲ್ಲಿಂದ ಆರಂಭಿಸಿ ನಿವೃತ್ತಿಯ ನಂತರ ಯಕ್ಷಗಾನದ ಕುಣಿತಕ್ಕೆ ಹೆಜ್ಜೆ ಹಾಕಿದವರೆಗೆ ಕಾಲು ಮಾಡಿದ ವಿವಿಧ ಸಾಧನೆಗಳ, ಕಾಲು ಕಥಾನಾಯಕನನ್ನು ಕಾಪಾಡಿದ ಸಂದರ್ಭಗಳ ವಿವರಣೆ ಈ ಪ್ರಬಂಧದಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿದೆ. ಅವುಗಳ ನಡುವೆ ಬಲಿ ಚಕ್ರವರ್ತಿ, ಶಂಕರಾಚಾರ್ಯ, ಗಾಂಧೀಜಿ, ವಿನೋಬಾ ಭಾವೆಯವರ ಕಾಲುಗಳ ಪ್ರಸ್ತಾಪವೂ ಬರುತ್ತದೆ. ಕೊನೆಯಲ್ಲಿ ಕಥಾನಾಯಕನಿಗೆ ತನ್ನೆಲ್ಲ ಕೆಲಸಗಳಿಗೆ ಒತ್ತಾಸೆಯಾಗಿ ನಿಂತ ಕಾಲುಗಳಿಗೆ ಕೃತಜ್ಞತೆಯಿಂದ ಮುತ್ತು ಕೊಡಬೇಕು ಅನ್ನಿಸುವುದು ಸಹಜವೇ ಆಗಿದೆ. (ನಾನು ಕಾಲುಗಳ ಬಗ್ಗೆ ಬರೆದ ಪ್ರಬಂಧದಲ್ಲಿ 'ಕಾಲಾಯ ತಸ್ಯೆ ನಮಃ ಎಂದು ಕಾಲುಗಳಿಗೆ ಕೈಮುಗಿದು ನಮಸ್ಕರಿಸಿದ್ದೆ.)

'ಟಿಕೆಟ್! ಟಿಕೆಟ್!! ಎಲ್ಲಾ ಲೊಳಲೊಟ್ಟೆ' ಎನ್ನುವ ಪ್ರಬಂಧದಲ್ಲಿ ಬಸ್ ಟಿಕೆಟ್, ರೈಲಿನ ಟಿಕೆಟ್, ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್, ಪರೀಕ್ಷಾ ಕೊಠಡಿಯ ಹಾಲ್ ಟಿಕೆಟ್ ಇವುಗಳ ಬಗ್ಗೆ ಸ್ವಾರಸ್ಯಕರ ಸಂಗತಿಗಳನ್ನು ಹೇಳುತ್ತಾ, ಕೊನೆಯಲ್ಲಿ ಭೂಲೋಕದಿಂದ ಪರಲೋಕಕ್ಕೆ ಟಿಕೆಟ್ ತೆಗೆದುಕೊಳ್ಳುವ ಪ್ರಸ್ತಾಪ ಬರುತ್ತದೆ. ಅದು ಪ್ರಬಂಧಕ್ಕೆ ಒಂದು ವಿಷಾದದ ಹೊಸ ಆಯಾಮವನ್ನು ನೀಡುತ್ತದೆ. 'ಮುದುಕರಿಗಿದು ಕಾಲವಲ್ಲ' ಅನ್ನುವ ಪ್ರಬಂಧದಲ್ಲೂ ಅಷ್ಟೇ, ಹೆಂಡತಿ, ಮಗ, ಸೊಸೆ ಎಲ್ಲರಿಂದಲೂ ಹಿತೋಪದೇಶ ಕೇಳಬೇಕಾದ ಮುದುಕರ ಪಾಡನ್ನು ಜೆಪಿ ಓದುಗರ ಮನ ಮಿಡಿಯುವಂತೆ ನಿರೂಪಿಸಿದ್ದಾರೆ. ಕೊನೆಯಲ್ಲಿ ಬರುವ ವೃದ್ದಾಶ್ರಮದ ಆಹ್ವಾನ ಪತ್ರಿಕೆ ಪ್ರಬಂಧಕ್ಕೆ ಧ್ವನಿಪೂರ್ಣವಾದ ಮುಕ್ತಾಯವನ್ನು ನೀಡುತ್ತದೆ. ಇದೊಂದು ಸಣ್ಣ ಕತೆಯಂಥ ಪ್ರಬಂಧ ಅನ್ನಬಹುದು.

ಮಲೆನಾಡಿನ ಸಾಗರದಲ್ಲಿ ಕಳೆದ ಬಾಲ್ಯದ ಸಮೃದ್ದ ನೆನಪುಗಳು ಜೆಪಿಯವರ ಪ್ರಬಂಧಗಳ ಸೊಗಸನ್ನು ಹೆಚ್ಚಿಸಲು ನೆರವಾಗಿವೆ. 'ಸಾಗರಯಾನದ ಬಣ್ಣದ ತೆರೆಗಳು' ಎಂಬ ಪುಸ್ತಕದ ಶೀರ್ಷಿಕೆಯೂ ಇದನ್ನು ಸೂಚಿಸುವಂತಿದೆ. ಊರೊಳಗಿನ ಸಂತೆಗೆ ಹೋಗಿ, ಕೊಡೆಗಳು ಸಾರ್ ಕೊಡೆಗಳು, ರೈಲು ಬಂತು ರೈಲು, ಸೈಕಲ್ ಕೀ ಜೈ, ಕೇಶಾಲಂಕಾರಿಯ ಆಸ್ಥಾನದಲ್ಲಿ, ಮುಟ್ಟಿನ ಕಥಾ ಪ್ರಸಂಗ ಮುಂತಾದ ಪ್ರಬಂಧಗಳಲ್ಲಿ ಇದನ್ನು ಕಾಣಬಹುದು. ಆಹಾ! ಬಾಲ್ಯದ ನೆನಪುಗಳೇ ಎಂಬ ಪ್ರತ್ಯೇಕ ಪ್ರಬಂಧವೂ ಈ ಕೃತಿಯಲ್ಲಿದೆ. ಮಿಕ್ಕ ಪ್ರಬಂಧಗಳಿಗಿಂತ ತುಸು ದೀರ್ಘವಾಗಿರುವ ಈ ಲೇಖನದಲ್ಲಿ ಜೆಪಿಯವರು ಬಾಲ್ಯದಲ್ಲಿ ಆಡಿದ ವಿವಿಧ ಆಟಗಳ ಸುಂದರ ವಿವರಣೆ ಇದೆ. 'ಅಯ್ಯೋ ವಸ್ತ್ರವೇ ಎಂಬ ಪ್ರಬಂಧದ ನಿರೂಪಕ ಕಾಲಪುರುಷನಾಗಿರುವುದು ವಿಶೇಷ.

ಇಲ್ಲಿರುವ ಎಲ್ಲ ಪ್ರಬಂಧಗಳ ಬಗ್ಗೆ ಬರೆಯುತ್ತಾ ಹೋದರೆ ಮೂಗಿಗಿಂತ ಮೂಗುತಿ ಭಾರ ಅನ್ನುವಂತಾಗಬಹುದು. ಅವುಗಳನ್ನು ನೀವೇ ಓದಿ ಆನಂದಿಸಿ. ಆದರೆ ʻಕಳೆದು ಕಂಗಾಲಾದ ಎರಡು ಘಟನೆಗಳು' ಎಂಬ ಪ್ರಬಂಧದ ಬಗ್ಗೆ ಪ್ರಸ್ತಾಪ ಮಾಡಲೇಬೇಕು. ಏಕೆಂದರೆ ಅದರಲ್ಲಿನ ಮೊದಲ ಘಟನೆ, ನಾನು ಬೆಳಗಾವಿಯಲ್ಲಿದ್ದಾಗ ಜೆಪಿ ನಮ್ಮ ಮನೆಗೆ ಬಂದಾಗ ನಡೆದದ್ದು. ನಾನೂ ಅದರ ಬಗ್ಗೆ ನನ್ನ ಅಂಕಣದಲ್ಲಿ ಬರೆದಿದ್ದೆ. ಪ್ರೊಫೆಸರ್‌ಗಳು ಮರೆಗುಳಿಗಳಾಗಿರಲಿ ಎಂಬುದನ್ನು ಸಾಬೀತು ಮಾಡಿದ ಆ ಘಟನೆಯನ್ನು ನಾನು ಎಂದಿಗೂ ಮರೆಯಲಾರೆ.

ನವ್ಯದ ಸಂದರ್ಭದಲ್ಲಿ ಅವಗಣನೆಗೆ ಒಳಗಾಗಿದ್ದ ಪ್ರಬಂಧವೆಂಬ ಸಾಹಿತ್ಯ ಪ್ರಕಾರ ನವ್ಯೋತ್ತರ ಕಾಲಘಟ್ಟದಲ್ಲಿ ಪುನಃ ಚಾಲ್ತಿಗೆ ಬಂದಿದೆ. ಜಯ ಮಾವಿನಕುಳಿಯವರ 'ಸಾಗರಯಾನದ ಬಣ್ಣದ ತೆರೆಗಳು' ಈ ಪ್ರಕರಕ್ಕೆ ಒಂದು ಮೌಲಿಕ ಸೇರ್ಪಡೆ ಎಂದು ಧಾರಾಳವಾಗಿ ಹೇಳಬಹುದು.

1982ರಲ್ಲಿ 'ನಮ್ಮ ಗೋಡೆಯ ಹಾಡು' ಎಂಬ ನನ್ನ ಮೊದಲ ಕವನ ಸಂಕಲನದ ಹಸ್ತಪ್ರತಿ ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರದವರು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಪ್ರಶಸ್ತಿಯ ಮೊತ್ತವನ್ನು ಪಡೆಯಲು ಸಂಕಲನದ ಮುದ್ರಿತ ಪ್ರತಿಗಳನ್ನು ಕೇಂದ್ರಕ್ಕೆ ಸಲ್ಲಿಸಬೇಕೆಂಬ ನಿಯಮವಿತ್ತು. ಹೊಸಬನಾಗಿದ್ದ ನನ್ನ ಕವನ ಸಂಕಲನವನ್ನು ಯಾರು ಪ್ರಕಟಿಸುತ್ತಾರೆ ಎಂದು ನಾನು ಚಿಂತಿಸುತ್ತಿದ್ದಾಗ ಜೆಪಿ ತಮ್ಮ ಸ್ಪಟಿಕ ಪ್ರಕಾಶನದ ಮೂಲಕ ಅದನ್ನು ಪ್ರಕಟಿಸುವುದಾಗಿ ನನಗೆ ಪತ್ರದ ಮೂಲಕ ತಿಳಿಸಿದ್ದರು. ನನಗಿಂತ ಐದು ವರ್ಷ ಹಿರಿಯರಾಗಿದ್ದ ಅವರು ಆಗಲೇ ಸಾಹಿತ್ಯ ಕ್ಷೇತ್ರದಲ್ಲಿ ಪರಿಚಿತರಾಗಿದ್ದರು. ನೇರ ಪರಿಚಯವಿಲ್ಲದಿದ್ದರೂ ಕಿರಿಯರನ್ನು ಪ್ರೋತ್ಸಾಹಿಸುವ ಅವರ ದೊಡ್ಡ ಗುಣವನ್ನು ಕಂಡು ನಾನು ಆಶ್ಚರ್ಯ ಪಟ್ಟಿದ್ದೆ. ಮುಂದೆ ನಾವು ಆತ್ಮೀಯ ಸ್ನೇಹಿತರಾಗಿ ಆಗಾಗ ಭೇಟಿಯಾಗುತ್ತಿದ್ದೆವು. ಉದ್ಯೋಗದ ನಿಮಿತ್ತ ನಾನು ಕರಾವಳಿಯಿಂದ ದೂರ ಹೋದದ್ದರಿಂದ ನಮ್ಮ ನಡುವೆ ನೇರ ಸಂಪರ್ಕ ಕಡಿಮೆಯಾಯಿತು. ಆದರೆ ಸಾಹಿತ್ಯ, ರಂಗಭೂಮಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಅವರ ಚಟುವಟಿಕೆಗಳನ್ನು ನಾನು ಗಮನಿಸುತ್ತಲೇ ಇದ್ದೆ. ಈಗ ಅವರ ಸಾಧನೆಯ ವಿವರಗಳನ್ನು ನೋಡುವಾಗ ನಮ್ಮ ಗೆಳೆಯ ಜೆಪಿ ಎಷ್ಟೆಲ್ಲ ಸಾಧಿಸಿದ್ದಾರೆ ಎಂದು ಹೆಮ್ಮೆಯಾಗುತ್ತದೆ.

- ಎಚ್.‌ ಡುಂಡಿರಾಜ್

ಎಚ್. ಡುಂಡಿರಾಜ್ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...

MORE FEATURES

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...

ಸಮ್ಮೇಳನಾಧ್ಯಕ್ಷರಾದ ಡಾ. ಗೊ.ರು. ಚನ್ನಬಸಪ್ಪ ಅವರ ಭಾಷಣ

20-12-2024 ಮಂಡ್ಯ

ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...