ಓದುಗರನ್ನು ರಸವಶ ಮಾಡುವಂತೆ ಇಲ್ಲಿನ ಕಥಾನಕಗಳ ನೇಯ್ಗೆಯಲ್ಲಿ ಅಲ್ಲಲ್ಲಿ ಕೆಲವು ಕಾಲ್ಪನಿಕ ವರ್ಣಲೇಪಿತ ಎಳೆಗಳು ಸೇರಿರಬಹುದು. ಅದು ವಿನ್ಯಾಸಕ್ಕಷ್ಟೆ. ಮತ್ತೆ ಇಲ್ಲಿನ ನಿರೂಪಣಾ ಶೈಲಿಯನ್ನು ನೋಡಿ. ಐದನೇ ಕ್ಲಾಸ್ ಓದಿದವರಿಗೂ ಅರ್ಥವಾಗುವಂತೆ ತೀರ ಸರಳವಾಗಿ, ನೀತಿಬೋಧೆಯ ಭಾರವಿಲ್ಲದೆ, ಮನಸ್ಸಿಗೆ ತಟ್ಟುವಂತಿವೆ. ನಿತ್ಯದ ಸುದ್ದಿಬಗ್ಗಡದಲ್ಲಿ ತಳಕ್ಕಿಳಿದು ಕೂತ ವಜ್ರದ ಹರಳನ್ನು ಮೇಲೆತ್ತಿ ತಂದಂತೆ, ಭಣಭೂಮಿಯ ನಡುವಣ ಓಯಸಿಸ್ಸಿನಂತೆ ಇಲ್ಲಿನ ಕಥನಗಳು ಮನತಣಿಸುವಂತಿವೆ ಎನ್ನುತ್ತಾರೆ ಲೇಖಕ ನಾಗೇಶ ಹೆಗಡೆ. ಪತ್ರಕರ್ತ, ಲೇಖಕ ಎ. ಆರ್. ಮಣಿಕಾಂತ್ ಅವರ ಹೊಸ ಕೃತಿ ಮತ್ತೆ ಹಾಡಿತು ಕೋಗಿಲೆಯಲ್ಲಿ ಬರೆದ ಮುನ್ನುಡಿಯ ಮಾತುಗಳು ನಿಮ್ಮ ಓದಿಗಾಗಿ..
ಮಣಿಕಾಂತರ ಕೃತಿಗೆ ಮುನ್ನುಡಿ ಬರೆಯಲು ಎಂಟೆದೆ ಬೇಕು! ಅವರ “ಅಮ್ಮ ಹೇಳಿದ ಎಂಟು ಸುಳ್ಳುಗಳು” ಸಂಕಲನ ನಿರ್ಮಿಸಿದ ಸಾರ್ವಕಾಲಿಕ ದಾಖಲೆಯನ್ನೇ ನೋಡಿ. ಅದು ಇದುವರೆಗೆ 172 ಮುದ್ರಣಗಳನ್ನು ಕಂಡಿದೆಯಂತೆ. ಮರುಮುದ್ರಣದ ವಿಷಯದಲ್ಲಿ ಕನ್ನಡದ ಇತರೆಲ್ಲ ಸಾಹಿತ್ಯ ಕೃತಿಗಳ ದಾಖಲೆಗಳನ್ನು ಎಂದೋ ಹಿಂದಿಕ್ಕಿ, ಹತ್ತೇ ವರ್ಷಗಳ ಅವಧಿಯಲ್ಲಿ ಇದು ಏರಿದ ಉತ್ತುಂಗ ಅಸಾಧಾರಣವಾದುದು*. ಇದೊಂದೇ ಅಲ್ಲ, ಮಣಿಕಾಂತರ “ಅಪ್ಪ ಅಂದರೆ ಆಕಾಶ” (92ನೇ ಮುದ್ರಣ), “ಭಾವತೀರಯಾನ” (40ನೇ ಮುದ್ರಣ) ಕೃತಿಗಳೂ ಜನಪ್ರಿಯತೆಯಲ್ಲಿ ದಾಖಲೆ ನಿರ್ಮಿಸಿವೆ. ಇಂಥ ಲೇಖಕರ ಕೃತಿಗೆ ಮುನ್ನುಡಿಯ ಅಗತ್ಯವಿದೆಯೆ?
ಇಂಗ್ಲಿಷ್‌ನಲ್ಲಿ ʼಬ್ರೆಕಿಂಗ್ ದಿ ಗ್ಲಾಸ್ ಸೀಲಿಂಗ್” ಎಂಬ ನುಡಿಗಟ್ಟೊಂದಿದೆ. ಗಾಜಿನ ಛಾವಣಿಯನ್ನು ಭೇದಿಸಿ ಮೇಲೇರಿದವರ ಸಾಧನೆಗಳ ಬಗ್ಗೆ ಹೇಳುವ ಮಾತು ಅದು. ಕನ್ನಡ ಲೇಖಕರಲ್ಲಿ ಅಷ್ಟೆತ್ತರಕ್ಕೆ ಜಿಗಿದ ಮಣಿಕಾಂತ್ ಈಗ ಹೊಸ ಕೃತಿಯೊಂದನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಲು ಹೊರಟಾಗ ಅದಕ್ಕೆ ಮುನ್ನುಡಿಯ ಹಂಗಿದೆಯೆ? ಅದನ್ನು ಬರೆಯುವ ಯೋಗ್ಯತೆ ನನಗಿದೆಯೆ?
ಆದರೂ ಇದನ್ನು ಬರೆಯಲು ನಾನು ಒಪ್ಪಿದೆ; ಏಕೆಂದರೆ ವಿನಯವೇ ಮೂರ್ತಿವೆತ್ತಂತಿರುವ ಮಣಿಕಾಂತ್ ಕೇಳಿದಾಗ ನಿರಾಕರಿಸುವಂತಿಲ್ಲ. ನನ್ನ ಮಟ್ಟಿಗೆ ಇದೊಂದು ಶಿಕ್ಷೆ ಎಂದೆನ್ನಿಸಿದರೂ ಒಪ್ಪಿದ್ದು ಏಕೆಂದರೆ, ಈ ಯುವಕ ಹೊಸದಾಗಿ ತನ್ನ ಬರೆವಣಿಗೆಯನ್ನು ಆರಂಭಿಸಿದ ಕಾಲಘಟ್ಟದಲ್ಲಿ ನಾನು ಇವರಿಗೆ ನಾನಾ ವಿಧದ ಶಿಕ್ಷೆಯನ್ನು ಕೊಟ್ಟಿದ್ದೆ. ಆಗ, ಮಣಿಕಾಂತ್ ಮಂಡ್ಯದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾಗ, ಅದೇನೋ ಪ್ರೇರಣೆ ಬಂದು ಮದ್ದೂರು ವಡೆಯ ಬಗ್ಗೆ ಲೇಖನ ಬರೆಯಲು ಹೊರಟಿದ್ದರು. ಆ ದಿನಗಳಲ್ಲಿ ಪ್ರಜಾವಾಣಿಯ “ಕರ್ನಾಟಕ ದರ್ಶನ” ಹೆಸರಿನ ಜನಪ್ರಿಯ ಪುರವಣಿಯೊಂದು ನನ್ನದೇ ಉಸ್ತುವಾರಿಯಲ್ಲಿದ್ದ ಕಾರಣ ನನಗೇ ಆ ಮದ್ದೂರು ವಡೆಯ ಕುರಿತ ಲೇಖನವನ್ನು ಕಳಿಸಿ ಪ್ರಕಟಿಸಬೇಕೆಂದು ಕೋರಿದ್ದರು. ನಾನದನ್ನು ಅದಿದ್ದ ಹಾಗೇ ಪ್ರಕಟಿಸುವ ಬದಲು, ಕಟ್ಟುನಿಟ್ಟಿನ ಶಾಲಾ ಮಾಸ್ತರರ ಹಾಗೆ ಆ ಲೇಖನವನ್ನು ಅವರಿಗೇ ಹಿಂದಿರುಗಿಸಿ, ತಿದ್ದಿ ಮತ್ತೆ ಬರೆಯಲು ಹೇಳಿದ್ದೆ. ಪ್ರಾಯಶಃ ಎರಡು ಮೂರು ಬಾರಿ ತಿದ್ದಿಸಿ ಆಮೇಲೆ ಪ್ರಕಟಿಸಿದೆನೆಂದು ಕಾಣುತ್ತದೆ. ಅದು ನನಗೆ ಮರೆತೂ ಹೋಗಿತ್ತು. ಆದರೆ ಮಣಿಕಾಂತ್ ಆ ಅನುಭವವನ್ನು ಮರೆತಿರಲಿಲ್ಲ. ತಾನು ಏಕೆ ಆ ಘಟನೆಯನ್ನು ಮರೆಯುವಂತಿಲ್ಲ ಎಂದು ವಿವರಿಸಿ ಇವರು ಫೇಸ್‌ಬುಕ್‌ನಲ್ಲಿ ಉದ್ದ ಕಥನವನ್ನೇ ಕಳೆದ ವರ್ಷ ಪ್ರಕಟಿಸಿದ್ದರು. ಬರೆಯುವ ಮುಂಚಿನ ಸಿದ್ಧತೆಯ ಕುರಿತು ತಾನು ಏನೇನು ಹೊಸ ಪಾಠ ಕಲಿತೆ ಎಂದೇನೋ ಅದರಲ್ಲಿ ಬರೆದಿದ್ದಾರೆ. ಈಗ ನನ್ನೆದುರು ಈ ಮುನ್ನುಡಿ ಬರೆಯುವ ಸವಾಲನ್ನು ಒಡ್ಡಿದ್ದಾರೆ.
ಬರೆಯಲೆಂದು ನಾನು ವಿಶೇಷ ಸಿದ್ಧತೆ ಏನನ್ನೂ ಮಾಡಿಕೊಂಡಿಲ್ಲ. ಅವರು ಎಂಜಿನಿಯರಿಂಗ್ ವೃತ್ತಿಯ ಬದಲು (ನನ್ನಂತೆ) ಪತ್ರಿಕೋದ್ಯಮಕ್ಕೆ ಬಂದಾಗಿನಿಂದ ಆಗಾಗ ಅವರ ಬರೆವಣಿಗೆಯ ವಿನ್ಯಾಸವನ್ನು, ಅಂಕಣ ಬರೆಹಕ್ಕೆ ಆಯ್ದುಕೊಳ್ಳುವ ವಿಷಯಗಳನ್ನು, ಅದರ ರಸಸ್ವಾದವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರು ಹಾಕುವ ಶ್ರಮವನ್ನು ಗಮನಿಸುತ್ತ ಬಂದಿದ್ದೇನೆ. ತನ್ನ ಶ್ರವಣದೌರ್ಬಲ್ಯವನ್ನೂ ಮೀರಿ ಅವರು “ಭಾವತೀರ ಯಾನ” ಅಂಕಣಕ್ಕೆ ಸಂಗ್ರಹಿಸುತ್ತಿದ್ದ ಸರಕುಗಳನ್ನು ನೋಡಿ ಚಕಿತನಾಗಿದ್ದೇನೆ. ಅವರು ಕೆಲಸ ಮಾಡುತ್ತಿದ್ದ ಎಲ್ಲ ದಿನಪತ್ರಿಕೆಗಳ ಸಹೋದ್ಯೋಗಿಗಳು ವೃತ್ತಿ ಮಾತ್ಸರ್ಯವನ್ನು ಬದಿಗಿಟ್ಟು ಇವರ ಪ್ರತಿಭೆಯನ್ನು ಕೊಂಡಾಡಿದ್ದನ್ನು ಕೇಳಿಸಿಕೊಂಡಿದ್ದೇನೆ. ಇವರ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ವಿಶಾಲ ಸಭಾಂಗಣದಲ್ಲೂ ಮೊಗಸಾಲೆಯಲ್ಲೂ ಮೆಟ್ಟಿಲಲ್ಲೂ ಸ್ಥಳ ಸಾಲದೆ ಅಂಗಳದಲ್ಲೂ ರಸ್ತೆಯಲ್ಲೂ ಜನ ಸಂದಣಿ ಸೇರಿತ್ತೆಂಬ ವರದಿಯನ್ನು ಗಮನಿಸಿದ್ದೇನೆ. ಒಬ್ಬ ಪತ್ರಕರ್ತ ಇಷ್ಟೊಂದು ಜನಸ್ಪಂದನೆ ಪಡೆದದ್ದು ಹೇಗೆಂದು ಬೆರಗಾಗಿದ್ದೇನೆ ಹಾಗೂ ಈ ಲೇಖಕ ಬಿತ್ತರಿಸಿದ ಅಕ್ಷರಪ್ರೀತಿಗೆ ನಮೋ ಎಂದಿದ್ದೇನೆ.
ಸಾಕಲ್ಲ? ಆದರೂ ಸಾಲದೆಂಬಂತೆ, ಮುನ್ನುಡಿ ಬರೆಯಲು ಬೇಕಾದ ಇನ್ನೂ ಒಂದು ಸಿದ್ಧತೆಯನ್ನು ಮಾಡಿಕೊಂಡಿದ್ದೇನೆ: ಈ ಕೃತಿಯಲ್ಲಿನ ಎಲ್ಲ ಲೇಖನಗಳನ್ನೂ ಒಂದಕ್ಷರ ಬಿಡದೇ, ಕೆಲವನ್ನು ಎರಡು ಸಲ ಓದಿದ್ದೇನೆ. ಒಂದೊಂದನ್ನು ಓದಿದಾಗಲೂ ಮಣಿಕಾಂತರ ಕಥನವಸ್ತುವಿನ ಆಯ್ಕೆ, ಹೃದಯಕ್ಕೆ ನೇರ ನಾಟುವಂಥ ನಿರೂಪಣೆ, ಸುಲಲಿತ ಶೈಲಿ ಇವೆಲ್ಲವುಗಳನ್ನು ಆಸ್ವಾದಿಸಿದ್ದೇನೆ.
ಇಲ್ಲಿನ ಕಥನಗಳನ್ನು ಪರಾಮರ್ಶಿಸುವ ಮೊದಲು ಖ್ಯಾತ ಬ್ರಿಟಿಷ್ ಕಾದಂಬರಿಕಾರ ಚಾರ್ಲ್ಸ್ ಡಿಕನ್ಸ್‌ನ “ಎ ಟೇಲ್ ಆಫ್ ಟೂ ಸಿಟೀಸ್” (ಎರಡು ನಗರಗಳ ಒಂದು ಕಥೆ) ಹೆಸರಿನ ಕಾದಂಬರಿಯ ಮೊದಲ ವಾಕ್ಯವನ್ನು ನೆನಪಿಸಿಕೊಳ್ಳಬೇಕು:
“ಅದು ಅತ್ಯಂತ ಶ್ರೇಷ್ಠ ಕಾಲಾವಧಿ ಆಗಿತ್ತು. ಅದು ಅತ್ಯಂತ ಕೇಡುಕಾಲವೂ ಆಗಿತ್ತು. ಅದು ಜ್ಞಾನ-ವಿವೇಕಗಳ ಉನ್ನತ ಕಾಲವಾಗಿತ್ತು. ಅದು ಅತ್ಯಂತ ಮೂರ್ಖಶಿಖಾಮಣಿಗಳ ಕಾಲವೂ ಆಗಿತ್ತು. ಅದು ಪರಸ್ಪರ ನಂಬಿಕೆ, ವಿಶ್ವಾಸಗಳ ಮತ್ತು ಅಪನಂಬಿಕೆ, ವಿಶ್ವಾಸದ್ರೋಹಗಳ ಕಾಲವೂ ಆಗಿತ್ತು. ಅದು ಜ್ಞಾನದ ಮುಂಬೆಳಕಿನ ಕಾಲವಾಗಿತ್ತು; ಅಜ್ಞಾನದ ಅಂಧಯುಗವೂ ಆಗಿತ್ತು. ಅದು ಆಶಾವಾದದ, ಭರವಸೆಯ ವಸಂತಕಾಲವಾಗಿತ್ತು; ಅದು ನಿರಾಸೆಯ ಕಾರ್ಮೋಡದ ಕಾಲವೂ ಆಗಿತ್ತು”
ನೂರಾ ಅರವತ್ತು ವರ್ಷಗಳ ಹಿಂದೆ, 1859ರಲ್ಲಿ ಡಿಕನ್ಸ್ ಇದನ್ನು ಬರೆದಿದ್ದರೂ ಆತನ ಈ ಹೇಳಿಕೆ ಮಾತ್ರ ಕಾಲಾತೀತ ಅಷ್ಟೇ ಅಲ್ಲ, ಕಾಲ ಕಳೆದಂತೆ ಹೆಚ್ಚು ಹೆಚ್ಚು ಪ್ರಸ್ತುತವಾಗುತ್ತಿದೆ. ಕತ್ತಲು ಕಳೆದು ಬೆಳಕು ಮೂಡುವುದು, ಬೆಳಕು ಸರಿದು ಕತ್ತಲು ಆವರಿಸುವುದು ಇವೆಲ್ಲ ನಿತ್ಯಸತ್ಯದ ಸಂಗತಿಯಾದರೂ ಪ್ರತಿ ಸಮಾಜದಲ್ಲೂ ಅವರವರ ವೈಯಕ್ತಿಕ ಬದುಕಿನಲ್ಲಿ ಅದರ ಕಾಲಾವಧಿಯಲ್ಲಿ ವ್ಯತ್ಯಾಸವಾಗುತ್ತಿರುತ್ತದೆ. ಅದು ಕೇವಲ ಇಪ್ಪತ್ನಾಲ್ಕು ಗಂಟೆಗಳ ಆವರ್ತನದಲ್ಲಿ ಇರುವುದಿಲ್ಲ. ಕೆಲವರ ಬಾಳಿನಲ್ಲಿ ಸತತ ಅನೇಕ ತಿಂಗಳು/ ವರ್ಷಗಳ ಕಾಲ ಕತ್ತಲು ಆವರಿಸಿದಂತೆನಿಸಬಹುದು. ನೆಮ್ಮದಿಯ ಮಜಲನ್ನು ಮುಟ್ಟಿದ ಕೆಲವರಿಗೆ ನಡುರಾತ್ರಿಯ ಕಾರ್ಗತ್ತಲೂ ಮೋಜುಮಸ್ತಿಯ, ಸುಖನಿದ್ದೆಯ ಪರ್ವವೇ ಆಗಿದ್ದೀತು. ಬಾಳಿನ ಕತ್ತಲನ್ನು ದಾಟಿ, ಭರವಸೆಯ ಬೆಳಕಿನ ಕಡೆಗೆ ಸಾಗುವುದು ಹೇಗೆಂದು ಮಣಿಕಾಂತ್ ಇಲ್ಲಿನ ಪ್ರತಿ ಕಥನದಲ್ಲೂ ಹೇಳಿದ್ದಾರೆ.
ಈ ಕೃತಿಯಲ್ಲಿ ಜೋಡಿಸಲಾದ ಲೇಖನಗಳ ಮಹತ್ವದ ಅರಿವಾಗಬೇಕೆಂದರೆ ಡಿಕನ್ಸ್‌ನ ಆರಂಭದ ಮಾತುಗಳನ್ನು ಮತ್ತೊಮ್ಮೆ ನೋಡಿ. ಅದರಲ್ಲಿನ ಕೆಡುಕಿನ ಭಾಗವೆಲ್ಲ ನಮಗೆ ದಿನನಿತ್ಯದ ಸುದ್ದಿಗಳ ಮೂಲಕ ಅಪ್ಪಳಿಸುತ್ತಲೇ ಇರುತ್ತದೆ. ಇಂದಿನ ಮಾಧ್ಯಮಗಳು ನಮಗೆ ಕೊಡುವ ಸುದ್ದಿಗಳು ಹೇಗಿರುತ್ತವೆ ಎಂದರೆ ಜಗತ್ತಿನ ಎಲ್ಲ ಕೆಡುಕು, ಅವಿಶ್ವಾಸ, ಮೋಸ, ವಂಚನೆ, ಕುಕೃತ್ಯ, ಸಂಕಟ, ಭಯ, ದುರ್ಭಿಕ್ಷಗಳೆಲ್ಲ ಸಾಲುಸಾಲಾಗಿ ಸುನಾಮಿಯಂತೆ ಬರುತ್ತಿವೆಯೇನೊ ಅನ್ನಿಸುತ್ತಿದೆ. ವಿವೇಕ, ವಿಶ್ವಾಸ, ಸನ್ನಡತೆ, ಸಾಧನೆ, ಆದರ್ಶಗಳೆಲ್ಲ ಇಲ್ಲವೇ ಇಲ್ಲವೇನೊ ಎನ್ನುವಷ್ಟು ಅಪರೂಪವಾಗಿವೆ. ಮಣಿಕಾಂತ್ ಇಲ್ಲಿ ಸಂಗ್ರಹಿಸಿದ ಎಲ್ಲ ಕಥನಗಳೂ ಇದಕ್ಕೆ ತದ್ವಿರುದ್ಧವಾಗಿವೆ; ಬದುಕಿಗೆ ಬೆಳಕು ನೀಡುವಂತಿವೆ. ನಾವು ದಿನವೂ ಟಿವಿಯಲ್ಲಿ, ಪತ್ರಿಕೆಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ನೋಡುವ ನೆಗೆಟಿವ್ ಸಂಗತಿಗಳಿಗೆ ತುಸು ಸಮತೋಲ ಕೊಡುವಂತೆ, ಮಾನವೀಯತೆ, ಸಜ್ಜನಿಕೆ, ವಿವೇಕ, ಸಾಧನೆಯ ಛಲ ಮತ್ತು ಲೋಕಕಲ್ಯಾಣದ ಹಂಬಲ ಅಷ್ಟೊಂದು ಬತ್ತಿ ಹೋಗಿಲ್ಲ ಎಂಬುದನ್ನು ಎತ್ತಿ ತೋರಿಸುವಂತಿವೆ. ಇಲ್ಲಿನ ಎಲ್ಲ ಲೇಖನಗಳಲ್ಲೂ ಅಂಥ ಒಂದಲ್ಲ ಒಂದು ಆದರ್ಶಗಳನ್ನು ಕಾಣಬಹುದು. ಆದರೂ ಕೆಲವೊಂದು ಉದಾಹರಣೆಗಳನ್ನು ನಾನಿಲ್ಲಿ ಎತ್ತಿ ಹೇಳಬೇಕು.
ಶ್ರಮಜೀವಿ ದೇವ್ ಮಿಶ್ರಾ ಆಕಸ್ಮಿಕವಾಗಿ ರೈಲು ಹಳಿಯ ಮೇಲೆ ಬಿದ್ದು ಎರಡೂ ಕಾಲುಗಳನ್ನು ಕಳೆದುಕೊಳ್ಳುತ್ತಾನೆ. ಮುಂಬೈಗೆ ಬಂದು ಕೆಲಸ ಹುಡುಕುತ್ತ ಬೀದಿಯಲ್ಲಿ ತೆವಳುತ್ತಿದ್ದಾಗ ಆಭರಣ ವಿನ್ಯಾಸಕಿ ಫರ್ಹಾ ಖಾನ್ ಅಲಿ ಅವನನ್ನು ಅಕ್ಷರಶಃ ಮೇಲೆತ್ತುತ್ತಾರೆ. ಹಣ ಕೊಟ್ಟು, ಓಡಾಡಲು ಗಾಲಿಕುರ್ಚಿ ಕೊಟ್ಟು, ಉದ್ಯೋಗ ಕೊಟ್ಟು ಪೋಷಿಸುತ್ತಾರೆ. ಮುಂದೆ ದೇವ್ ಉತ್ತಮ ಬಾಡಿ ಬಿಲ್ಡರ್ ಆಗಿ ನೃತ್ಯಪಟುವಾಗಿ ಗೆಲ್ಲುತ್ತಾನೆ. “ಕಾಲಿಲ್ಲದಿದ್ದರೂ ವಿಧಿಯ ಎದುರೇ ನಿಂತು ತೊಡೆ ತಟ್ಟಿದ್ದಾನೆ” ಎನ್ನುತ್ತಾರೆ ಮಣಿಕಾಂತ್.
ಶಫಿ ಮೊಹಮ್ಮದ್ ಹಗಲೆಲ್ಲ ದಿನಗೂಲಿ ಕಟ್ಟಡ ಕಾರ್ಮಿಕ. ರಾತ್ರಿ ಕೂತು ಸಾಹಿತ್ಯ ಕತೆಗಳನ್ನು ತಮಿಳಿನಿಂದ ಮಲೆಯಾಳಂಗೆ ಅನುವಾದಿಸುತ್ತ ಜನಪ್ರಿಯ ಸಾಹಿತಿಯಾಗುತ್ತಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ನಪಾಸಾಗಿ ಬೆಂಗಳೂರಿನಲ್ಲಿ ಕೂಲಿ ಕೆಲಸ ಆರಂಭಿಸಿದ ಇವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೆಲ್ಲುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಆರು ಬಾರಿ ಕ್ಯಾನ್ಸರ್ ಕಾಯಿಲೆಗೆ ಸಿಕ್ಕು ಆರೂ ಬಾರಿ ಗೆದ್ದು ಬಂದ ಜಯಂತ್ ಕಂಡಾಯ್ ಕತೆ ಇನ್ನೂ ರೋಚಕವಾಗಿದೆ. ಕೇವಲ 36 ಕಿಲೊ ತೂಕದ ಈ ಯುವಕ ತನ್ನ ಮೇಲಿನ ಕ್ಯಾನ್ಸರ್ ದಾಳಿಗಳನ್ನು ಎದುರಿಸುತ್ತಲೇ ಇತರ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಸಂಘಟನೆಯನ್ನು ಆರಂಭಿಸುತ್ತಾನೆ.( ಇದನ್ನು ಓದಿದ ನಂತರ ಕಟಕ್‌ನ ಅಭಿಮನ್ಯು ದಾಸ್ ಕತೆಯನ್ನು ಓದಬೇಕು. )
ಕಣ್ಣಿಲ್ಲದ ಭವೇಶ್ ಭಾಟಿಯಾ ತನ್ನಂಥ ದೃಷ್ಟಿಹೀನ 250ಕ್ಕೂ ಹೆಚ್ಚಿನವರಿಗೆ ಮೋಂಬತ್ತಿ ತಯಾರಿಸುವ ಉದ್ಯೋಗ ನೀಡಿ ಕೋಟ್ಯಧಿಪತಿಯಾಗಿದ್ದಾರೆ. ಬೆಳಕನ್ನೇ ಕಾಣದವರು ಇವರಿಂದಾಗಿ ಲೋಕಕ್ಕೆ ಬೆಳಕು ನೀಡುತ್ತಿದ್ದಾರೆ.
ಆಗ್ರಾದಲ್ಲಿ ಸಂಗೀತ ಪಾಠ ಹೇಳುತ್ತಿದ್ದ ದಢೂತಿ ಮಹಿಳೆ ಕಿರಣ್ ಡೆಂಬ್ಲಾ ಕಾಯಿಲೆಗೆ ತುತ್ತಾಗಿ ತೂಕ ಇಳಿಸುವ ಯತ್ನದಲ್ಲಿ ಬಾಡಿ ಬಿಲ್ಡರ್ ಆಗಿ ಬದಲಾಗಿ ಸೆಲೆಬ್ರಿಟಿಯಾಗಿದ್ದಾರೆ. ಕಥನಕ್ಕೆ ಮಣಿಕಾಂತ್ ಕೊಟ್ಟ ಶಿರೋನಾಮೆ ಅದೆಷ್ಟು ಸೃಜನಶೀಲ ನೋಡಿ: ʼಪಟ್ಟು ಹಿಡಿದು ಹೋರಾಡಿದ್ರೆ ಪಟ್ಟ ಸಿಗೋದು ಗ್ಯಾರಂಟಿʼ.
ನಾಳಿನ ಬದುಕಿನ ನಕ್ಷೆಯನ್ನು ರೂಪಿಸಲು ಪರದಾಡುವವರಿಗೆ ಇಲ್ಲಿನ ಒಂದೊಂದು ಕತೆಯೂ ಸುಂದರ ನೀಲನಕ್ಷೆಯನ್ನು ಬಿಡಿಸಿಡುವಂತಿದೆ. ಪಿಯುಸಿ ಪಾಸಾಗಲಾರದ ಜೆಂಪು ರೋಂಗ್ ಮೈ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ್ದು, ಬಳೆ ಮಾರುತ್ತಿದ್ದ ರಾಮು ಐಎಎಸ್ ಪಾಸಾಗಿದ್ದು, ತೀರ ಕುರೂಪಿಯಾದ ರೋಗಗ್ರಸ್ಥ ಹೆಣ್ಣುಮಗುವೊಂದನ್ನು ದತ್ತು ತೆಗೆದುಕೊಂಡು ಬೆಳೆಸಿದ ಅಲೋಮಾ ಲೋಬೊ ಆಕೆಯನ್ನು ಖ್ಯಾತೆಯ ಉತ್ತುಂಗಕ್ಕೇರಿಸಿದ್ದು.. ಇಂಥ ಹತ್ತಾರು ಕತೆಗಳು ಬದುಕಿನ ಸಾಧ್ಯತೆಗಳ ಬಗ್ಗೆ ಓದುಗರ ಭರವಸೆಯನ್ನೂ ಉತ್ತುಂಗಕ್ಕೇರಿಸುವಂತಿವೆ.
ಮತ್ತೆ ಈ ಯಾವವೂ ಕಪೋಲ ಕಲ್ಪಿತವೇನಲ್ಲ; ಅವು ಸತ್ಯಸಂಗತಿಗಳು ಎಂಬುದನ್ನು ಒತ್ತಿ ಹೇಳುವಂತೆ ಫೋಟೊಗಳನ್ನು ಸಂಗ್ರಹಿಸುವಲ್ಲಿ ಮಣಿಕಾಂತ್ ಅದೆಷ್ಟು ಶ್ರಮವಹಿಸಿರಬೇಕು ಎಂಬುದು ಆಯಾ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗಲೇ ನಮಗೆ ಗೊತ್ತಾಗುತ್ತದೆ. ಓದುಗರನ್ನು ರಸವಶ ಮಾಡುವಂತೆ ಇಲ್ಲಿನ ಕಥಾನಕಗಳ ನೇಯ್ಗೆಯಲ್ಲಿ ಅಲ್ಲಲ್ಲಿ ಕೆಲವು ಕಾಲ್ಪನಿಕ ವರ್ಣಲೇಪಿತ ಎಳೆಗಳು ಸೇರಿರಬಹುದು. ಅದು ವಿನ್ಯಾಸಕ್ಕಷ್ಟೆ. ಮತ್ತೆ ಇಲ್ಲಿನ ನಿರೂಪಣಾ ಶೈಲಿಯನ್ನು ನೋಡಿ. ಐದನೇ ಕ್ಲಾಸ್ ಓದಿದವರಿಗೂ ಅರ್ಥವಾಗುವಂತೆ ತೀರ ಸರಳವಾಗಿ, ನೀತಿಬೋಧೆಯ ಭಾರವಿಲ್ಲದೆ, ಮನಸ್ಸಿಗೆ ತಟ್ಟುವಂತಿವೆ. ನಿತ್ಯದ ಸುದ್ದಿಬಗ್ಗಡದಲ್ಲಿ ತಳಕ್ಕಿಳಿದು ಕೂತ ವಜ್ರದ ಹರಳನ್ನು ಮೇಲೆತ್ತಿ ತಂದಂತೆ, ಭಣಭೂಮಿಯ ನಡುವಣ ಓಯಸಿಸ್ಸಿನಂತೆ ಇಲ್ಲಿನ ಕಥನಗಳು ಮನತಣಿಸುವಂತಿವೆ. ಮಕ್ಕಳು ಹಿರಿಯರಿಗೂ ಹಿರಿಯರು ಎಳೆಯರಿಗೂ ಕಥನರೂಪದಲ್ಲಿ ಲವಲವಿಕೆಯಿಂದ ಓದಿ ಹೇಳಲು ಸಾಧ್ಯವಾಗುವಂತಿವೆ.
ಮಣಿಕಾಂತರ ಕಥೆಗಳು ಏಕೆ ಕನ್ನಡ ಓದುಗರ ಮನಸ್ಸಿಗೆ ಮುದ ನೀಡುತ್ತವೆ, ಏಕೆ ಅಷ್ಟೊಂದು ಸಂಖ್ಯೆಯಲ್ಲಿ ಇವರ ಪುಸ್ತಕಗಳು ಮರುಮುದ್ರಣ ಕಾಣುತ್ತಿವೆ ಎಂಬುದಕ್ಕೆ ಇನ್ನೂ ಹೆಚ್ಚಿನ ವಿವರಣೆ ಬೇಕಾಗಿಯೇ ಇಲ್ಲ ತಾನೆ?
-ನಾಗೇಶ ಹೆಗಡೆ, ಕೆಂಗೇರಿ
"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...
‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...
"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...
©2024 Book Brahma Private Limited.