ಕುಂವೀ ವ್ಯಕ್ತಿತ್ವದ ಅನಾವರಣ ‘ಗಾಂಧಿ ಕ್ಲಾಸು’


ಕುಂ ವೀ ಅವರ ಆತ್ಮಚರಿತ್ರೆ ಸಂಕೀರ್ಣತೆಯನ್ನೇ ಹಾಸಿ ಹೊದ್ದಿಕೊಂಡಿರುವಂತಹದು! ಸರಳವೇನಿಲ್ಲ...ಆದರೆ ಅಲ್ಲಿನ ಭಾಷಾ ವೈಶಿಷ್ಟ್ಯವೇ ಏಲಕ್ಕಿ , ಒಣಶುಂಠಿ, ಕೊಬ್ಬರಿಯಿಂದ ನಾಸಿಕವನ್ನು, ರಸನೆಯನ್ನು ತನ್ನತ್ತ ಸೆಳೆದು ಘಮಘಮಿಸುವ ಹೂರಣವಾಗಿ ಬಿಡುತ್ತದೆ ಎನ್ನುತ್ತಾರೆ ಸಿ ಬಿ ಶೈಲಾ ಜಯಕುಮಾರ್. ಸಾಹಿತಿ ಕುಂ ವೀರಭದ್ರಪ್ಪ ಅವರ ಆತ್ಮಕಥನ ಗಾಂಧಿ ಕ್ಲಾಸ್ ಬಗ್ಗೆ ಅವರು ಬರೆದ ಲೇಖನ ನಿಮ್ಮ ಓದಿಗಾಗಿ..

ಕೃತಿ- ಗಾಂಧಿ ಕ್ಲಾಸ್
ಕೃತಿಕಾರ- ಕುಂ ವೀರಭದ್ರಪ್ಪ
ಐದನೇ ಮುದ್ರಣ- 2013
ಪುಟಗಳು- 390
ಬೆಲೆ- ರೂ 225
ಪ್ರಕಾಶಕರು- ಸಪ್ನಾ ಬುಕ್ ಹೌಸ್, ಬೆಂಗಳೂರು.

ಗ್ರಾಮೀಣ ಸಂವೇದನೆಗಳಿಗೆ ಕಲಾತ್ಮಕವಾಗಿ ವಿಶಿಷ್ಟ ಅಕ್ಷರ ವಸ್ತ್ರ ತೊಡಿಸಿ ಮೆರೆಸಿದವರು ಕುಂ ವೀ. ನವೋದಯ, ಪ್ರಗತಿಶೀಲ, ನವ್ಯ, ನವ್ಯೋತ್ತರ, ಕಾರ್ಪೋರೇಟ್ ಎಂಬೆಲ್ಲಾ ಉಪಾಧಿಗಳನ್ನು ಮೀರಿದವರು ಕುಂ ವೀ. ಕತೆಗಾರ, ಕಾದಂಬರಿಕಾರ, ಕವಿ, ಅನುವಾದಕ, ಜೀವನ ಚರಿತ್ರೆ... ಹೀಗೆ ಸಾಹಿತ್ಯ ಬೃಹದಾಲದ ಅನೇಕ ಟಿಸಿಲುಗಳಲ್ಲಿ ಕೂತು ಕುಂ ವೀ ದಣಿವಾರಿಸಿಕೊಂಡವರು. ಪ್ರೈಮರಿ ಶಾಲಾ ಶಿಕ್ಷಕನಾಗಿದ್ದುಕೊಂಡೂ , ತಮ್ಮ ಸೃಜಿಸುವ ಕಲೆಯನ್ನು ಪೋಷಿಸಿಕೊಂಡು, ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಎತ್ತರಕ್ಕೆ ಬೆಳೆದು ವಿಸ್ಮಯ ಮೂಡಿಸಿದವರು.

ಶಾಮಣ್ಣ, ಅರಮನೆ... ಕಾದಂಬರಿಗಳಿಗೆ ರಾಜ್ಯ ಹಾಗೂ ಕೇಂದ್ರ ಅಕಾಡೆಮಿ ಪ್ರಶಸ್ತಿ ಪಡೆದವರು.ಚಾರ್ಲಿ ಚಾಪ್ಲಿನ್ ಅವರನ್ನು ಆರಾಧಿಸಿದವರು. ಮನ ಮೆಚ್ಚಿದ ಹುಡುಗಿ, ಕೆಂಡದ ಮಳೆ, ದೊರೆ, ಕೊಟ್ರೇಶಿ ಕನಸು, ಭಗವತಿ ಕಾಡು ಸಿನಿಮಾಗಳಿಗೆ ಕುಂ ವೀ ಅವರ ಕಾದಂಬರಿಗಳೇ ಮೂಲ! ಎಂಟು ಎಂ ಫ಼ಿಲ್ ಪ್ರಬಂಧಗಳಿಗೆ, ನಾಲ್ಕು ಪಿಎಚ್. ಡಿ ಮಹಾಪ್ರಬಂಧಗಳಿಗೆ ವಸ್ತುವಾದವರು ಕುಂ ವೀ. ಕುಂ ವೀ ಅವರ ಆತ್ಮಕಥನ 'ಗಾಂಧಿ ಕ್ಲಾಸ್' ನ್ನು ಪರಿಚಯಿಸುವೆ. 

ಇಂದಿನ ದಿನ ಮಾನಗಳಲ್ಲಿ ಅಗ್ಗಕೆ, ಕನಿಷ್ಠತೆಗೆ ಮತ್ತೊಂದು ಹೆಸರೇ 'ಗಾಂಧಿ' ಎನ್ನುವಂತಾಗಿದೆ. ಗಾಂಧಿ ಗೇಟು, ಗಾಂಧಿ ಸೀಟು, ಗಾಂಧಿ ಪಾಸು, ಗಾಂಧಿ ಊಟ... ಹೀಗೆ. ಕುಂ ವೀರಭದ್ರಪ್ಪನವರ ಆತ್ಮಚರಿತ್ರೆಯ ಹೆಸರು 'ಗಾಂಧಿ ಕ್ಲಾಸ್'! ಅತಿಶಯೋಕ್ತಿಯಿಲ್ಲದ, ವಿಶೇಷವಾಗಿದ್ದೂ ಸರಳವಾಗಿರುವ, ಆಡಂಬರವೇ ಇಲ್ಲದ ಉಡುಪು ಧರಿಸಿ, ಸಹಾನುಭೂತಿಯಿಂದ ಬಿದ್ದವರನ್ನೂ ಮೇಲೆತ್ತುವ, ಹೋರಾಟದಲ್ಲೇ ಜೀವನ ಕಟ್ಟಿಕೊಂಡವರನ್ನು ಗಾಂಧಿ ಕ್ಲಾಸ್ ಗೆ ಸೇರಿಸಬಹುದೇನೋ!

ಬಾಲ್ಕನಿ ಅಲ್ಲದೇ ಇರುವುದು ಗಾಂಧಿ ಕ್ಲಾಸ್!

ಈ ಕೃತಿಗಿಳಿಯುವ ಮುನ್ನವೇ ಅರ್ಥಪೂರ್ಣ ಸಂಭಾಷಣೆಯೊಂದು ಕಣ್ಣಿಗೆ ಕಟ್ಟುತ್ತದೆ. ಮನ ಮಂಥನಕ್ಕೆ ಇಲ್ಲೇ ಹೆಪ್ಪುಗಟ್ಟಿದ ಕೆನೆ ಮೊಸರು ದೊರೆತಂತಾಗುತ್ತದೆ. "ಅದ್ಯಾಕೆ ಬಾಪೂಜಿ, ನೀವು ಮೂರನೆಯ ತರಗತಿಯ ಬೋಗಿಗಳಲ್ಲಿ ಪ್ರಯಾಣಿಸುವುದು?" "ನಾಲ್ಕನೆ ತರಗತಿಯ ಬೋಗಿಗಳಿಲ್ವಲ್ಲ , ಅದಕ್ಕೆ" ಹಾಗೆಯೇ ಈ ಆತ್ಮಕಥನಕ್ಕೆ ಇನ್ನೊಂದು ಹೆಸರು ಸೂಕ್ತವಾಗಲಿಕ್ಕಿಲ್ಲ!

ಕುಂ ವೀ ಅವರ ಆತ್ಮಚರಿತ್ರೆ ಸಂಕೀರ್ಣತೆಯನ್ನೇ ಹಾಸಿ ಹೊದ್ದಿಕೊಂಡಿರುವಂತಹದು! ಸರಳವೇನಿಲ್ಲ...ಆದರೆ ಅಲ್ಲಿನ ಭಾಷಾ ವೈಶಿಷ್ಟ್ಯವೇ ಏಲಕ್ಕಿ , ಒಣಶುಂಠಿ, ಕೊಬ್ಬರಿಯಿಂದ ನಾಸಿಕವನ್ನು, ರಸನೆಯನ್ನು ತನ್ನತ್ತ ಸೆಳೆದು ಘಮಘಮಿಸುವ ಹೂರಣವಾಗಿ ಬಿಡುತ್ತದೆ.

ಮುನ್ನೂರ ತೊಂಭತ್ತು ಪುಟಗಳಲ್ಲಿ ವ್ಯಾಪಿಸಿರುವ ಕುಂ ವೀ ಅವರ ಆತ್ಮಕಥನದಲ್ಲಿ ಹನ್ನೆರಡು ಓಣಿಗಳಿವೆ . ಅಧ್ಯಾಯಗಳನ್ನು ಅವರು ಕಾಂಡ, ಪರ್ವ, ಪರಿಚ್ಛೇದ ಎಂದು ಕರೆಯದೆ 'ಓಣಿ ' ಎಂದು ವಿಶೇಷವಾಗಿ ನಾಮಕರಣ ಮಾಡಿದ್ದಾರೆ.

ಈ ಸುದೀರ್ಘ ಆತ್ಮ ಕಥೆಯನ್ನು ಪರಿಚಯಿಸಲು, ಜನಕ ಹಾಲಪ್ಪ, ಬಡತನದ ಬಾಲ್ಯ, ಶಿಕ್ಷಣ ಹಾಗೂ ಶಿಕ್ಷಕ ವೃತ್ತಿ, ಬಂಡಾಯ,ಜಮೀನ್ದಾರಿ ಕ್ರೌರ್ಯ, ಅಪರೂಪದ ಆತ್ಮವಿಶ್ವಾಸ, ಕೃತಿ ರಚನೆ , ಅಮೇರಿಕಾ ಪಯಣ, ವಿಶಿಷ್ಟ ಭಾಷೆ, ಹೀಗೆ ಭಾಗಗಳನ್ನು ಮಾಡಿಕೊಳ್ಳುವುದು ನನಗೆ ಉಚಿತವೆನಿಸಿತು.

ಇಲ್ಲಿನ ನಿರೂಪಣೆಯಲ್ಲಿ ಬೆರಗಿದೆ, ಬೆಡಗಿದೆ, ಕುತೂಹಲವಿದೆ, ಲಘು ಹಾಸ್ಯವಿದೆ, ಕಟಕಿ- ವ್ಯಂಗ್ಯ- ವಿಡಂಬನೆಗಳಿವೆ, ನೋವು- ನರಳಿಕೆಗಳಿವೆ, ಸಂತೋಷ- ಸಂಭ್ರಮಗಳಿವೆ ! ತರಲೆ- ತಾಪತ್ರಯಗಳಿವೆ!

ಖಂಡಿತಾ ಇಲ್ಲೊಂದು ಮಿನಿ ಜಗತ್ತಿದೆ. ಅದೇ ಗಾಂಧೀ ಕ್ಲಾಸೆಂಬ ವೀರಭದ್ರಾಯಣ!

ಕುಶಲ ಕುಂಬಾರನಂತೆ, ಇಲ್ಲಿನ ಅಸಂಖ್ಯಾತ ನೆಲದ ನಂಟಿನ ಪಾತ್ರಗಳಿಗೆ ಕುಂಬಾರ ಹಾಲಪ್ಪನವರ ಸುಪುತ್ರ ವೀರಭದ್ರಪ್ಪನವರು ಅಭಿಜಾತ ಕೌಶಲ್ಯದಿಂದ ಹದವಾದ ಆಕಾರ, ರೂಪಗಳಿಂದ ಶೋಭಾಯಮಾನವಾಗಿಸಿದ್ದಾರೆ!

ಶಾಲೆಯ ಕಟ್ಟೆಯನ್ನೂ ತುಳಿಯದ ಸುಸಂಸ್ಕೃತ ಗಾಯಕ, ಸ್ತ್ರೀ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಅಭಿನಯ ಪಟು, ಶಿಸ್ತುಗಾರ ಪುಟ್ಟಸ್ವಾಮಿ ಷೋಕಿವಾಲಾ, ವಾಚಾಳಿ , ಅಶಿಸ್ತು, ಅನೈತಿಕ ಚಟುವಟಿಕೆಗಳಿಂದಲೇ ರೂಪುಗೊಂಡಂತಿದ್ದ, ಧಾರ್ತರಾಷ್ಟ್ರನ ಛಲವನ್ನು ಮೈಗೂಡಿಸಿಕೊಂಡಿದ್ದ, ಮೈ ಮುರಿದು ದುಡಿದದ್ದನ್ನೆಲ್ಲಾ ಸೂಳೆಯರ ಮತ್ತು ವಕೀಲರ ಪಾಲು ಮಾಡಿ , ಸ್ಥಿರ ಮತ್ತು ಚರಾಸ್ಥಿಗಳನ್ನು ಉಡಾಫೆಯಲ್ಲಿ ಕಳೆದುಕೊಂಡು ಸ್ವಯಂಕೃತಾಪರಾಧದ ಬಡತನದಲ್ಲಿ ಬದುಕಿದ , ಫ಼್ಯೂಡಲ್ ಗುಣಗಳನ್ನು ಆಭರಣದಂತೆ ಅಲಂಕರಿಸಿಕೊಂಡಿದ್ದ , ಅರಿಷಡ್ವರ್ಗಗಳೆಲ್ಲಾ ಮಾನವ ರೂಪು ತಳೆದಂತಿದ್ದ ಕುಂಬಾರಿಕೆಯ ಹಾಲಪ್ಪನವರು ಕುಂ ವೀ ಅವರ ತಂದೆ!

ಒಮ್ಮೆ ಕಲ್ಲಂಗಡಿ ಹಣ್ಣಿನ ಬೀಜ ಬಿತ್ತಿ, ಭರಪೂರ ಬೆಳೆ ಬಂದಾಗ," ನಾನು ಹಾಕಿರುವುದು ಒಂದು ಸೇರು ಬೀಜ, ರೊಕ್ಕಕ್ಕೆ ಮಾರಿ ಭೂಮ್ತಾಯಿ ಮನಸ್ಸನ್ನು ನೋಯಿಸಲಾರೆ, ಸುತ್ತಮುತ್ತಲ ಹಳ್ಳಿಗಳಲ್ಲಿರುವ ಬಡಬಗ್ಗರು, ಮೂಗ ಜೀವಿಗಳು ತಿಂದು ಸುಖ ಪಡಲಿ " ಎನ್ನುವಂತಹ ದಿಲ್ದಾರ್ ಮನುಷ್ಯನಾತ!

ಮೀಸೆ ಮಣ್ಣಾದಾಗ, ಬಡತನ ತಾಂಡವನೃತ್ಯ ಆಡುತ್ತಿದ್ದಾಗಲೂ ಮಗನಿಗೆ ದೊರೆತ ಸ್ಕಾಲರ್ ಶಿಪ್ ಹಣವನ್ನೂ , ಭೂ ಹೀನರ ಬಡ ಮಕ್ಕಳಿಗೆ ಸಿಗಬೇಕೆಂದು ನಿರಾಕರಿಸಿದಾತ ಸ್ವಾಭಿಮಾನಿ ಹಾಲಪ್ಪ!

ತಂಗಾಳಿ ಮತ್ತು ಚಂಡಮಾರುತಗಳೆರಡನ್ನೂ ಸಮಪ್ರಮಾಣದಲ್ಲಿ ಜೀರ್ಣಿಸಿಕೊಂಡಿದ್ದ ಅಪ್ಪ ಹಾಲಪ್ಪ , ಮಗ ವೀರಭದ್ರಪ್ಪನ ಮೇಲೆ ಅಗಣಿತ ಪ್ರಭಾವ ಬೀರಿದ್ದವರು.

ಕಥೆ ಹೇಳುವ ಕಲೆ ಕುಂ ವೀ ಅವರಿಗೆ ತಂದೆ ಹಾಗೂ ಅಜ್ಜಿಯ ಬಳುವಳಿ ! ಪುರಾಣ ಪ್ರವಚನಗಳ ಪ್ರಭಾವವೂ ಇತ್ತೆನ್ನಿ.

ಅನೇಕ ಎಡರು ತೊಡರುಗಳ ಮಧ್ಯೆಯೂ ಕುಂ ವೀ ಎಸ್ ಎಸ್ ಎಲ್ ಸಿ ಪಾಸಾಗಿ, ರೈಲ್ವೆ ದಿನಗೂಲಿಯಾಗಿ, ಹಸಿವೆಯಿಂದ ಸಾಯುವ ಸ್ಥಿತಿ ತಲುಪಿ, ಯಾರೋ ಪುಣ್ಯಾತ್ಮರ ಸಹಾಯದಿಂದ ಊರು ತಲುಪಿ, ಶಿಕ್ಷಕ ತರಬೇತಿಗೆ ಸಿದ್ದಗಂಗೆಗೆ ಬಂದು, ಕುಮಾರವ್ಯಾಸನ ಷಟ್ಪದಿ ಹೇಳಿ ಸೀಟು ಗಿಟ್ಟಿಸಿ, ಖರ್ಚಿಗಾಗಿ ಗೋಡೆ ಚಿತ್ರಕಾರನಾಗಿದ್ದು, ನಿರುದ್ಯೋಗದಿಂದ ಆತ್ಮಹತ್ಯೆಯ ಪ್ರಯತ್ನ ನಡೆಸಿ ವಿಫ಼ಲವಾಗಿದ್ದು, 'ಬಹಿರಂಗ' ಪತ್ರಿಕೆ ನಡೆಸಿದ್ದು, ನಂತರದಲ್ಲಿ ಕರ್ನಾಟಕದ ಗಡಿಯ ತೀರಾ ಕುಗ್ರಾಮ, ತಿಂಗಳಿಗೊಂದಾದರೂ ಕೊಲೆಯಾಗುವ 'ವಾಗಿಲಿ'ಯಲ್ಲಿ ಶಾಲಾ ಮಾಸ್ತರ ಆಗಿ , ಮೇಲ್ವರ್ಗದವರ ಅಸಹನೆಗೆ ಗುರಿಯಾಗಿಯೂ ಮೊಂಡು ಧೈರ್ಯದಿಂದ , ಪಟ್ಟು ಬಿಡದ ತ್ರಿವಿಕ್ರಮನಂತೆ ದಲಿತ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿ ಕೊಂಡೂ , ಕೊಲೆಯಾಗದೆ ಬದುಕಿ ಉಳಿಯಲು ಸಹಕಾರಿಯಾದ ಕುಂ ವೀ ಅವರ ಮಾತುಗಾರಿಕೆ, ಅಸಾಧಾರಣ ಧೈರ್ಯ,ಬಹು ಭಾಷಾ ಸಾಮರ್ಥ್ಯ ಹಾಗೂ ಸಮಯಸ್ಪೂರ್ತಿ ಅಚ್ಚರಿ ಹುಟ್ಟಿಸುತ್ತವೆ.

ಶಿಕ್ಷಕರಾದ ಮೇಲೆ ಬುಡಕಟ್ಟು ಜನಾಂಗದ ಅಸ್ಮಿತೆಯನ್ನು ಉಳಿಸಬೇಕೆಂಬ ವೆರಿಯರ್ ಎಲ್ವಿನ್ನನ ಆದರ್ಶ ಕುಂ ವೀ ಕಣ್ಣ ಮುಂದೆ!

ಕುಂ ವೀ ವೃತ್ತಿ ಬದುಕಿನ ಜೊತೆ ಜೊತೆಗೆ ಆಂಧ್ರದ ರಾಯಲಸೀಮೆಯ ಪಾಳೇಗಾರಿಕೆಯ ರೆಡ್ಡಿಗಳ ದೌರ್ಜನ್ಯ, ರಕ್ತ ಸಿಕ್ತ ಪುಟಗಳೂ ಇಲ್ಲಿ ತೆರೆದುಕೊಳ್ಳುತ್ತವೆ.

ನಿರುಪದ್ರವಿ ಕುಲಕಸುಬು ಕುಂಬಾರಿಕೆ ಅವಹೇಳನದ ಭಾಗವಾಗಿ ಕೀಳರಿಮೆಗೆ ಕಾರಣ, ಕುಂಬಾರ ಪದದ ಉಸಿರುಗಟ್ಟುವಿಕೆಯಿಂದ ಬಿಡುಗಡೆ ಪಡೆಯುವುದೂ ಮುಖ್ಯವಾಗಿತ್ತು.

ಮೇಲರಿಮೆ ಮತ್ತು ಕೀಳರಿಮೆಗಳ ಸಂಘರ್ಷದ ನಡುವೆ ಮೃದ್ವಂಗಿಯಂತಾಗುತ್ತಿದ್ದಾಗ ಧೈರ್ಯದಿಂದ ಬದುಕು ಕಟ್ಟಿಕೊಂಡಿದ್ದು ಅಸಾಧಾರಣ ಸಂಗತಿ. ಅವರು ಇಂಗ್ಲಿಷ್ ಭಾಷೆ ಬಾರದೆ ಒದ್ದಾಡಿದ ಪ್ರಸಂಗಗಳು ಈಗಲೂ ಪ್ರಸ್ತುತವೆನಿಸುತ್ತವೆ.

ಹಸಿವೆಂಬ ಹೆಬ್ಬಾವು ಬಸಿರ ಹಿಡಿದೊಡೆ ವಿಷವೇರಿತ್ತಯ್ಯ ಆಪಾದ ಮಸ್ತಕಕ್ಕೆ ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲಡೆ ಆತನೇ ಗಾರುಡಿಗ...ದಾಸಿಮಯ್ಯನ ಸಾಲುಗಳು ... ಭಾಷಾ ಸಾಹೇಬನ ಹಸಿವಿನ ಪ್ರಸಂಗದಲ್ಲಿ ಜೀವತಾಳುತ್ತವೆ. ಹಾಗೆಯೇ ಅಸಂಖ್ಯಾತ ಹಸಿದ ಹೊಟ್ಟೆಗಳು ಗೋಚರವಾಗುತ್ತವೆ.

ಊಟಕ್ಕೂ ತತ್ವಾರವಾಗಿ ತಂಗಿ ಕೊನೆಯುಸಿರೆಳೆದಾಗ , ಅಳಲಾಗದೆ , ಬಂಧುಗಳಿಗೂ ತಿಳಿಸದೆ, ಖರ್ಚನ್ನೂ ಭರಿಸಲಾಗದೆ , ಗೋಣಿತಾಟಿನಲ್ಲಿ ಕಳೇಬರವನ್ನು ಸುತ್ತುಕೊಂಡು ,ತಂದೆ ಮಕ್ಕಳೇ ಶವ ಸಂಸ್ಕಾರ ಮಾಡಿದ್ದು , ನಿಜಕ್ಕೂ ಹೊಟ್ಟೆಗೆ ಉರಿಯುವ ಕೊಳ್ಳಿ ಇಟ್ಟಂತೆನಿಸುತ್ತದೆ.

ತಾವು ಮಾಡಿದ ಕೃತಿಚೌರ್ಯ- ಸಾಹಿತ್ಯಕ ಕಳ್ಳ ಸಾಗಣೆ ಹಾಗೂ ಪತ್ರಿಕೆಯಲ್ಲಿ ಪ್ರಕಟವಾದ ಮೊದಲ ಲೇಖನದ ಸಂತಸವನ್ನು ಹಂಚಿಕೊಳ್ಳುತ್ತಾರೆ ಕುಂ ವೀ. 'ಕೂಳು ಹೆಚ್ಚಾದಾಗ ಕುವ್ವಾಡ'ವೂ ಹೆಚ್ಚಾಗಿ ಸೊಕ್ಕು, ಪುಡಿ ರೌಡಿಗಳ ಸಹವಾಸ, ಹುಡುಗಿಯರ ಹಿಂದೆ- ಮುಂದೆ ಸುತ್ತಾಟ, ಇತರರನ್ನು ಮಾತಿನಿಂದ ಚುಚ್ಚಿ, ಲೇವಡಿ ಮಾಡುವ ತಮ್ಮ ಮನಸ್ಥಿತಿಯನ್ನು ಓದುಗರ ಮುಂದೆ ತೆರೆದಿಡುತ್ತಾರೆ.

ಪಿಸು ಮಾತಿನ ಮೊಗ ಸಾಲೆಯಂತಿದ್ದ, ವಿಟ್ಟೂ, ಥ್ರೆಟ್ಟೂಗಳಿಗೆ ಹೆಸರಾಗಿದ್ದ, ಜೀವಂತ ಪ್ರೇಕ್ಷಣೀಯ ವ್ಯಕ್ತಿಯೆನಿಸಿದ್ದ ಲಂಕೇಶ್ ಮೇಸ್ಟ್ರು ಮತ್ತವರ ಜನಪರ ಹೋರಾಟದ ಮುಖವಾಣಿಯಂತಿದ್ದ ಲಂಕೇಶ್ ಪತ್ರಿಕೆಯ ಬಿಡುಗಡೆ ಹಾಗೂ ಪೀತಪತ್ರಿಕೆಯ ನಿರ್ಮೂಲನ ಪ್ರಸಂಗಗಳು...ಅಚ್ಚರಿ ಉಂಟು ಮಾಡುತ್ತವೆ.

ಪಂಚೇಂದ್ರಿಯಗಳನ್ನು ತಾಕಿದ ಪ್ರತಿಯೊಂದೂ ಅನುಭವವನ್ನೂ ಕಥೆಯಾಗಿಸುವ ಪರಿಪಾಠವನ್ನಿಟ್ಟುಕೊಂಡಿದ್ದ ಕುಂ ವೀ..."ನೀನು ಬರೆದ್ರೆ ಸಂತೋಷ,ಬರಿದಿದ್ರೆ ಇನ್ನೂ ಸಂತೋಷ " ಎನ್ನುತ್ತಿದ್ದ ಆತ್ಮೀಯ ಲಂಕೇಶರ ಮನಸ್ಥಿತಿಗಳು ಸ್ವಲ್ಪ ಮಟ್ಟಿಗೆ ಅರಿವಿಗೆ ನಿಲುಕುತ್ತವೆ.

'ವಾಗಿಲಿ' ಯಲ್ಲಿ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲೋಸುಗ ನಿರಂತರವಾಗಿ ಕಥೆ ಬರೆಯುತ್ತಿದ್ದ ಕುಂ ವೀ ಯವರ ಆತ್ಮವಿಶ್ವಾಸ ಏನು ಕಡಿಮೆಯೇ...

ಪದವಿಟ್ಟಳುಪದೊಂದು ಹೆಗ್ಗಳಿಕೆ, ರೀರೈಟ್ ಮಾಡದೇ ಅಖಾಡಕ್ಕೆ ಕಳಿಸಿ ಮರೆತು ಬಿಡುವುದು, ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದೇ ಬರುತ್ತದೆ ಎಂದು ಹಾಗೂ ಆರ್ಥಿಕ ಬಹುಮಾನ ಮಗನ ಉನ್ನತ ವಿದ್ಯಾಭ್ಯಾಸಕ್ಕೆ, ಹೆಂಡತಿಯೊಂದಿಗಿನ ಪ್ರವಾಸಕ್ಕೆ ಸಿದ್ದರಾಗುವುದು...

ತಮ್ಮ ಕಥೆಗಳ ಮೂಲಕ ಸಿನಿ ಪ್ರಪಂಚದಲ್ಲಿ ಕುಂ ವೀ ಕಾಲಿಟ್ಟಾಗ ಲಂಕೇಶರ ಹಿತೋಪದೇಶ..."ನಿನಗೆ ತಲೆ ಇದೆ ಏನಯ್ಯಾ? ಜುಜುಬಿ ಎರಡು ಸಾವಿರಕ್ಕೆ ಕಥೆಯ ರೈಟ್ಸ್ ಕೊಡೋದೇನು? ಆ ಸಿಲ್ಕ್ ಸ್ಮಿತಾಳ ಚಡ್ಡಿ ಬೆಲೆ ಎಷ್ಟು ಗೊತ್ತೋ... ಟ್ವೆಂಟಿ ಥೌಸಂಡ್...ಆಕೆಯ ಚಡ್ಡಿಗಿಂತ ಸುಮಾರೇನು ನಿನ್ನ ಕಥೆ? "ಎಂದು ನಕ್ಕಿದ್ದು!

'ಸಿಲ್ಕ್ ಸ್ಮಿತಾಳ ಚಡ್ಡಿಯೂ ಮತ್ತು ಕುಂ ವೀ ಬರೆದ ಬೇಟೆ ಎಂಬ ಕಥೆಯೂ...' ಸಾಕಷ್ಟು ಸಂಚಲನ ಉಂಟು ಮಾಡಿದ ಸಂದರ್ಭದಲ್ಲಿ ಮಲ್ಲೇಪುರಂ ವೆಂಕಟೇಶ್ ಅವರು "ಕಥೆ ಬರೆದಷ್ಟು ಸುಲಭವಲ್ಲವೋ ಮಂಕೆ,ಕಾದಂಬರಿ ಬರೆವುದು" ಎಂದು ಗೆಳೆಯ ಕುಂ ವೀ ಅವರ ಸೃಜಿಸುವ ತಾಕತ್ತನ್ನು ಕೆಣಕಿದಾಗ, "ನಾನು ವಾರೊಪ್ಪತ್ತಲ್ಲಿ ಕಾದಂಬರೀನ ಬರಿತೀನಿ, ಅದಕ್ಕೆ ಸಾಹಿತ್ಯ ಅಕಾಡೆಮಿ ಅವಾರ್ಡನ್ನೂ ಕೊಡುತ್ತೆ" ಎಂದು ಬೆಟ್ ಕಟ್ಟಿ, ವಾರದೊಳಗಾಗಿ ನೂರೈವತ್ತಾರು ಪುಟದ ಕಾದಂಬರಿ ಬರೆದರು. ಮಲ್ಲೇಪುರಂ ಅವರೇ ಅದಕ್ಕೆ ' ಕಪ್ಪು' ಎಂದು ನಾಮಕರಣ ಮಾಡಿದ್ದರು.

ಬರೆಯುವುದೇನೊ ಸುಲಭ...ಆದರೆ ಪ್ರಕಟಿಸುವುದು ಬಲು ದೊಡ್ಡ ಸವಾಲು!

ಹಸ್ತಪ್ರತಿಯನ್ನು ಮುಟ್ಟದೆ, ಓದದೆ, ಕುಂ ವೀ ಅವರ ಹೆಸರನ್ನು ಹಂಗಿಸಿದವರೆಷ್ಟೋ! ಎಮಿಲಾಜೋಲಾ, ಜಾರ್ಜ್ ಮೆಡಿರೆತ್, ಬಟ್ಲರ್, ಹಾರ್ಡಿ ಪುಸ್ತಕಗಳನ್ನು ಓದಬೇಕೆಂದು ಸಲಹೆ ನೀಡಿದವರೂ ಇದ್ದರು.

ಪಡಿಪಾಟಲುಗಳ ನಡುವೆ ಪುಸ್ತಕ ಬೆಳಕು ಕಂಡು ಅಕಾಡೆಮಿಯ ಅವಾರ್ಡನ್ನು ಪಡೆದು ಪತ್ರಿಕೆಗಳಲ್ಲಿ ಒಳ್ಳೆಯ ರಿವ್ಯೂಗಳೂ ಬಂದವಾದರೂ ಸಾಡೇಸಾಥ್ ಶನಿಯೋಪಾದಿಯಲ್ಲಿ ಆ ಕಾದಂಬರಿ ಕಾಡಿತು.

ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿದ್ದ ಅಗ್ರಹಾರ ಕೃಷ್ಣ ಮೂರ್ತಿಯವರ ಪರಿಚಯವಾಗಿ , ಒಂದೇ ಗಂಟೆಯಲ್ಲಿ ಹದಿನಾರಕ್ಕೂ ಹೆಚ್ಚಿನ ಕವನಗಳನ್ನು ಬರೆಸಿ ರೆಕಾರ್ಡಿಂಗ್ ಮಾಡಿಸಿದ್ದು , ಕುಂ ವೀ ವವರ ಆರ್ಥಿಕ ಪುನಃಶ್ಚೇತನಗೊಳಿಸುವ ಸಲುವಾಗಷ್ಟೇ ಅಲ್ಲ ಪ್ರತಿಭಾವಂತ ಕವಿಯನ್ನು ಇನ್ನಷ್ಟು ಅನಾವರಣಗೊಳಿಸಲು!

ತಂದೆಯ ಸಾವಿನ ನಂತರ ಕುಂ ವೀ ತಂದೆ ಮಾಡಿದ್ದ ಸಾಲ ತೀರಿಸುವ ಸನ್ನಿವೇಶ , ಬಳ್ಳಾರಿ ರೈಲ್ವೇ ನಿಲ್ದಾಣದಲ್ಲಿ ಹದಿನೆಂಟರ ಹರಯದಲ್ಲಿ ಮೂವತ್ತಾರು ತಾಸು ಉಪವಾಸವಿದ್ದಾಗ ರೊಟ್ಟಿದಾತನಾಗಿದ್ದ ದುರುಗ್ಯಾ ನಾಯಕನ ನೆನಪು... ಕನ್ನಡ ವಿ ವಿಯ ವಿಜಿಟಿಂಗ್ ಫ಼ೆಲೋ ಆಗಿ ಆರು ತಿಂಗಳು ಹಂಪಿಯಲ್ಲಿದ್ದಾಗ, ನಾಟಕಕಾರ ದುತ್ತರಿಗಿ ಅವರ ಕರುಣಾಜನಕ ಸ್ಥಿತಿ ಓದುಗರನ್ನು ಭಾವುಕರನ್ನಾಗಿಸಿ ಕಂಬನಿಗಳುದುರುತ್ತವೆ. ಹೊಸಪೇಟೆಯಲ್ಲಿ ಅನನುಭವಿ , ಬ್ರಹ್ಮ ಚಾರಿ ಕುಂ ವೀ ಮತ್ತು ವೇಶ್ಯೆಯೊಂದಿಗಿನ ಸಂಭಾಷಣಾ ಪ್ರಸಂಗ ಮನದಲ್ಲುಳಿಯುತ್ತದೆ...

ಕುಂ ವೀ ತೇನ್ ಸಿಂಗ್ ಜಾಯಮಾನದ ಸಾಹಸಿ ಲೇಖಕ. 'ಶಾಮಣ್ಣ' ಪುಸ್ತಕದ ಬಿಡುಗಡೆಯ ದಿನಾಂಕವನ್ನು ನಿಗದಿಪಡಿಸಿ , ನಂತರ ಕಾದಂಬರಿಯನ್ನು ಆರಂಭಿಸಿ ಕೇವಲ ಹದಿನೇಳು ದಿನಗಳಲ್ಲಿ ( ಅವಸರದ ಹೆರಿಗೆಯಾದ್ರೂ ಆರೋಗ್ಯವಂತ ಕೂಸು) ಬೃಹತ್ ಕಾದಂಬರಿಯನ್ನು ಪೂರ್ಣಗೊಳಿಸಿದ್ದು ವಿಸ್ಮಯವೆನಿಸುತ್ತದೆ!

ಜಾತಿ ವ್ಯವಸ್ಥೆ ಪ್ರಬಲವಾಗಿದ್ದ, ಸಣ್ಣದೊಂದು ಬದಲಾವಣೆಗೂ ವಿರೋಧಿಸುತ್ತಿದ್ದ ಕುಗ್ರಾಮ, ಹಾಡಹಗಲೇ ಸಾರ್ವಜನಿಕರೆದುರೇ ನಡೆಯುವ ಕೊಲೆಗಳು , ನಂತರದ ಸರಣಿ ಕೊಲೆಗಳು... ಇಂತಹ ವಾಗಿಲಿಯೇ ಕುಂ ವೀಯವರ ವ್ಯಕ್ತಿತ್ವವನ್ನು ರೂಪಿಸಿದ್ದು! ವಾಗಿಲಿಯಿಂದ ಗೂಳ್ಯಂ, ನಂತರದ ಹಿರೇಹಾಳ್...

ಸುಮ್ಮನಿರಲಾರದೆ ಇರುವೆ ಬಿಟ್ಟುಕೊಳ್ಳುವ ಜಾಯಮಾನದವರು ಕುಂ ವೀ. 

ಕೊಲೆಯಾಗುವುದನ್ನು ತಪ್ಪಿಸಿಕೊಳ್ಳಲು ಮೇಲಧಿಕಾರಿಗಳ ಸಹಕಾರದಿಂದ ಸಂಬಳ ಸಹಿತ ದೀರ್ಘ ರಜೆ ಪಡೆದು, ವಾಗಿಲಿಯಿಂದ ದೂರವಾಗಿ, ಕಷ್ಟ ಕೋಟಲೆಗಳನ್ನು ಅನುಭವಿಸಿ ಮತ್ತೆ ಉದ್ಯೋಗಕ್ಕೆ ಸೇರಿದ್ದು, ಬಾಳ ಸಂಗಾತಿಯ ಒತ್ತಡಕ್ಕೆ ಮಣಿದು 'ಗೂಳ್ಯಂ' ಗೆ ವರ್ಗವಾಗಿದ್ದು, ಹದಿನೈದು ವರ್ಷಗಳ ನಂತರ ಹಿರೇಹಾಳ್ ಇಬ್ರಾಹಿಂ ಅವರ ಸಹಕಾರದಿಂದ ರಕ್ತಸಿಕ್ತ ' ಗೂಳ್ಯಂ' ನಿಂದಲೂ ಮುಕ್ತಿ ಸಿಕ್ಕು ' ಹಿರೇಹಾಳು'ಗೆ ಟ್ರಾನ್ಸ್ ಫ಼ರ್ ಮಾಡಿಸಿಕೊಂಡಿದ್ದು, ಮುಳ್ಳಿನ ಹಾದಿಗಳೇ... ಎಲ್ಲಿಯೂ 'ಬತ್ತಿತೆನ್ನೊಳು ಸತ್ವದ ಊಟೆ' ಎನ್ನದ ಅಪ್ರತಿಮ ಹೋರಾಟಗಾರ ಕುಂ ವೀ.

ಕೇಂದ್ರ ಸಾಹಿತ್ಯಅಕಾಡೆಮಿ ಪ್ರಶಸ್ತಿ ಪಡೆದ ಕಾದಂಬರಿ 'ಅರಮನೆ'... ನಾಲ್ಕು ಸಲ ರೀ ರೈಟ್ ಮಾಡಿಸಿಕೊಂಡ, ಹದಿನೈದು ವರ್ಷಗಳ ಕಾಲ ಲೇಖಕನ ತಾಕತ್ತು ಮತ್ತು ವೈಯಕ್ತಿಕ ಜೀವನವನ್ನು ಹಿಂಡಿ ಹಿಪ್ಪೆ ಮಾಡಿದ , ಮತ್ತೆ ಮತ್ತೆ ಮುರಿದು ಕಟ್ಟಿದ ಬೃಹತ್ ಕಾದಂಬರಿ ಬರೆವ ಸಂದರ್ಭದ ಸಂಕಷ್ಟಗಳು, ಬದ್ದತೆಯ ಬರಹಗಾರನ ಬದುಕನ್ನು ಬಿಂಬಿಸುವಂತಹದ್ದು! ನಂತರದಲ್ಲಿ ಅರಮನೆಯ ಬಗ್ಗೆ ವಿವೇಕದ ವಿಮರ್ಶೆಗಳು ಬಂದಂತೆ , ಮತ್ಸರದ ದಳ್ಳುರಿಗಳು ಜ್ವಲಿಸಿದವು! ಪ್ರಶಸ್ತಿ ಬಂದಾಗ ಮ್ಯಾಚ್ ಫ಼ಿಕ್ಸಿಂಗ್ ಎಂದೂ ಗೂಬೆ ಕೂರಿಸಿದವರೆಷ್ಟೋ ಮಂದಿ! 

'ಗಾಂಧೀ ಕ್ಲಾಸ್' ಕೃತಿಯಲ್ಲಿನ ಸ್ವಾರಸ್ಯಕರ ಪ್ರಸಂಗಗಳು ಹಾಗೂ ಸಜೀವ ಕಥಾನಕಗಳು ಬೇಕಾದಷ್ಟು... ಕೆಲವು ಸುಳುಹುಗಳು ನಿಮಗಾಗಿ!  ಮೈ ಮೇಲೆ ದೆವ್ವ, ದೇವರು ಬರುವ ಪ್ರಸಂಗಗಳು...

ಕುಂ ವೀ ಮಾಧ್ಯಮಿಕ ಶಾಲೆಗೆ, ಪ್ರೌಢಶಾಲೆಗೆ ದಾಖಲಾಗುವ ಪ್ರಸಂಗಗಳಂತೂ ಹಾಸ್ಯ ಉಕ್ಕಿಸುವಂತಹದ್ದು....ವೀರಯ್ಯನವರನ್ನು ಕಕ್ಕಸ್ಸು ಕೋಣೆಯಲ್ಲಿ ಕೂಡಿ ಹಾಕಿದ್ದು...ಕುಂ ವೀ ತಮ್ಮ ಬಡಕಲು ಬಾಡಿಯನ್ನು ಒನ್ನಂಬರ್ ಬಾಡಿಯನ್ನಾಗಿಸುವ ದಾರಿಯಲ್ಲಿಮೊಟ್ಟೆ, ಕಸರತ್ತು, ಬುಲ್ ವರ್ಕರ್ ಗಳ ಪ್ರಯತ್ನ...

ಕೆ(ತ)ಳಗೇರಿಗಳಲ್ಲಿ ಶಾ(ಸಾ)ಲೆಗೆ ಮಕ್ಕಳನ್ನು ಸೇರಿಸಲು ದಿನಾಲು ನೂರಿನ್ನೂರು ಗ್ರಾಂ ಪೆಪ್ಪರಮೆಂಟನ್ನು ಕೈಲಿ ಹಿಡಿದು ಆಸೆ ತೋರಿಸಿ ಸೆಳೆಯುವ ಪ್ರಯತ್ನ...ಅನಾಮಿಕ ಮಕ್ಕಳಿಗೆ ನಾಮಕರಣವನ್ನೂ ಮಾಡಿ ಅವರ ಶಾಲಾ ದಾಖಲಾತಿ ಮಾಡಿಕೊಂಡಿದ್ದು...

ಡೆಕ್ಕನ್ ಹೆರಾಲ್ಡ್ ಹಾಸಿ, ಇಂಡಿಯನ್ ಎಕ್ಸಪ್ರೆಸ್ ಹೊದ್ದು ಮಲಗುತ್ತಿದ್ದ ಮಲ್ಲೇಪುರಂ ಜಿ ವೆಂಕಟೇಶ ಬೆಂಗಳೂರಿನಿಂದ ವಾಗಿಲಿಗೆ ಬಂದ ಪ್ರಸಂಗ...ರನ್ನ ಮತ್ತು ಕುಮಾರವ್ಯಾಸರ ಕೃತಿಗಳ ಮೂಲಕ ಜುಗಲ್ ಬಂಧಿ- ವೈಚಾರಿಕ ಚರ್ಚೆ...'ಇನ್ನಾದರೂ ಸಾಯಬೇಕು' ಕಥೆ ಬರೆದ ಸಂದರ್ಭ ಹಾಗೂ ಕುಂ ವೀ ಪ್ರಜಾವಾಣಿ ಲೆವೆಲ್ಲಿನ ರೈಟರ್ ಆಗಿದ್ದು...ಬಯಲಾಟದ ಪ್ರಸಂಗಗಳು...ಬಳ್ಳಾರಿಯ ರಾಯಲ್ ಟೂರಿಸ್ಟ್ ಹೋಟೆಲ್ ಮಾಲಿಕರ ಪ್ರಸಂಗ...ಕುಂತಕುಂತಂಗೆ ಕಥೆ ಬರೆಯುವ ಕುಂ ವೀ ಹಾಗೂ ಕಥಾ ವಸ್ತುವಿಗಾಗಿ ಹಪಹಪಿಸುತ್ತಿದ್ದ ಚೆನ್ನಣ್ಣ ವಾಲಿಕರ ಅವರ ಪ್ರಸಂಗಗಳು...ಚಪ್ಪರ ಚೆನ್ನಪ್ಪನ ಗುಂಡು ಎತ್ತುವ ಪ್ರಸಂಗ...ಹಗಲು ಕಗ್ಗೊಲೆ ಮಾನ್ಯ ಬಂಗಾರಿಗನಿಗೆ ಮನೆಯಲ್ಲಿ ಆಶ್ರಯ ಕೊಟ್ಟಿದ್ದು...ಪೋಲಿಸ್ ವ್ಯವಸ್ಥೆ ಕುರಿತಂತೆ ಎರಡೇ ದಿನಗಳಲ್ಲಿ ಬರೆದ ಕಿರು ಕಾದಂಬರಿ 'ಬೇಲಿ ಮತ್ತು ಹೊಲ ' ನಾಟಕವಾಗಿ ನೂರಾರು ಪ್ರಯೋಗಗಳನ್ನು ಕಂಡಿದ್ದು... ಸಿನಿಮಾದವರ ನಕಲಿ ಚೆಕ್ಕುಗಳ ಪ್ರಸಂಗ...ಅಂಗರಕ್ಷಕರ ನಡುವೆ ಲೆಟ್ರಿನ್ನಿಗೆ ಹೋಗಿ ಬರುವುದು...ಕೊಟ್ಟೂರಿನಿಂದ ನೂರಾರು ಮೈಲಿ ದೂರವಿದ್ದ ತಂಗಿಯ ಊರು 'ಹನಕನಹಾಳು'ಗೆ ಕಚ್ಚಾ ರಸ್ತೆಯಲ್ಲಿ ಪತ್ನಿಯೊಂದಿಗೆ ಸುಜುಕಿ ಸವಾರಿ ಹಾಗೂ ಅಲ್ಲಿನ radicals ಪ್ರಸಂಗಗಳು...ಕಿರುನಗೆಯೊಂದನ್ನು ಮೂಡಿಸುವ ರಾಜಕಾರಣಿಗಳೊಂದಿಗೆ ಹಸ್ತ ಲಾಘವ ಪ್ರಸಂಗ. ಮದನ್ ಪಟೇಲರೊಂದಿಗೆ ಅಮೇರಿಕಾ ಪ್ರವಾಸಕ್ಕೆ ಸಿದ್ದತೆ, ವೀಸಾ ಪಡೆಯಲು ಅಡ್ಡವಾದ ಇಂಗ್ಲಿಷ್ ಭಾಷೆ... ಕಾಫ಼್ ಸಿರಪ್, ಹಾವೇರಿಯ ಮೃತ್ಯುಂಜಯನ ಅಗಾಧ ಪ್ರೀತಿ ಮತ್ತು ಗೌರವ... ಮಾತಿದ್ದೂ ಮೂಗನಂತಾದ ಕುಂ ವೀ ಪರದಾಟ...ಲೆಕ್ಕಾಚಾರದ ಅಮೇರಿಕಾ ಬದುಕು...ಅಮೆರಿಕಾ ಎಂಬ ಬಾಲ್ಕನಿಗಿಂತ ಇಂಡಿಯಾ ಎಂಬ 'ಗಾಂಧಿ ಕ್ಲಾಸ್' ಎಷ್ಟೋ ವಾಸಿ ಎಂಬ ನಿರ್ಧಾರ!

ಬಳ್ಳಾರಿ ಜಿಲ್ಲೆಯ ಗ್ರಾಮೀಣ ಸೊಗಡಿನ ವಿಶಿಷ್ಟ ಭಾಷೆಯೂ, ಕುಂ ವೀ ಅವರ ವಾಗ್ವಿಲಾಸವೂ... ಓದಿಯೇ ಚಪ್ಪರಿಸಿ ಸವಿಯಬೇಕು. ಒಂದಷ್ಟು ನಿದರ್ಶನಗಳು...ಕಥೆಗಳನ್ನು ಆಭರಣೋಪಾದಿಯಲ್ಲಿ ಮುಡಿದುಕೊಂಡು ಲಕಲಕ ಹೊಳೆಯುತ್ತಿದ್ದ ಮುದುಕಿ...ಅಪ್ಪನ ಅತ್ಯಾಚಾರದಿಂದ ನಾವಿಬ್ಬರಲ್ಲದೆ ಇನ್ನೊಬ್ಬ ತಮ್ಮನಿಗೆ ಅವ್ವ ಜನ್ಮ ನೀಡಿದ್ದಳು...ಉತ್ತರೆ ಪಾತ್ರ ವಹಿಸಿದ ಹೆಂಗಸನ್ನು ರಾತ್ರಿಯ ದಾಸೋಹಕ್ಕೆ ಮನೆಗೆ ಕಳಿಸು...ಮನಸೆಂಬ ಕಳಿಂಗ...ಕುಂಬಾರನಿಗ್ಯಾಕೆ ಗೊಂಬೆ ಮಾಟದ ಹೆಂಣು?  ಪಾಂಚಜನ್ಯದಂತಾ ಶಾಲಾಗಂಟೆ...ಮುದುಕರ ಸ್ನಾನ ಮತ್ತು ಶೋಭನದ ನಡುವೆ ವ್ಯತ್ಯಾಸವಿರಲಿಲ್ಲ...ಹ್ಹಾ ಹ್ಹಾ ಹ್ಹೋ ಹ್ಹೋ ಎಂಬ ಸುಖದ ನರಳಿಕೆ ಎರಡೂ ಕ್ರಿಯೆಗಳಲ್ಲಿರುತ್ತಿದ್ದುದೇ ಅದಕ್ಕೆ ಕಾರಣ...

ಕುಪ್ಪೆ ಕುಪ್ಪೆ ಹೇನುಗಳು ಅಜ್ಜಿಯ ತಲೆಯಲ್ಲಿ ಪಿತ್ರಾರ್ಜಿತ ಆಸ್ತಿಯೆಂಬಂತೆ ಪಟ್ಟಾಗಿ ಠಿಕಾಣಿ ಹೂಡಿರುತ್ತಿದ್ದವು... ಹೇನುಗಳ ಸಂತತಿಗೆ ಆಶ್ರಯದಾತರು...ಮನೆಗಳ ನಡುವೆ ಕಳ್ಳಸಾಗಣಿಕೆ ಮತ್ತು ವಿದೇಶಿ ವಿನಿಮಯ...ಆತನ ದೇಹದೊಳಗೆ ಒಂದೆರಡು ತೊಲೆ ಮಾಂಸ, ಒಂದೆರಡು ಚಟಾಕು ರಕ್ತವಿದ್ದರೆ ಹೆಚ್ಚು...ನಮ್ಮ ಓಣಿ , ಜಗಳಕ್ಕೆ ಸಂಬಂಧಿಸಿದ ಪಕ್ಷಿ ಕಾಶಿ...ಥರ್ಟಿ ಎಮ್ಮೆಲ್ ನೀರು ತುಂಬಿಕೊಂಡು ಶೋಭಾಯಮಾನವಾಗಿ ಶೌಚಕ್ಕೆ ಓಡುತ್ತಿದ್ದರು.

ನಳಂದಾ, ತಕ್ಷಶಿಲೆಗೆ ಸಮಾನವಾದ ಜಾತಪ್ಪ ಮೇಸ್ಟ್ರು ಮನೆ ಪಾಠ,ರಾತ್ರಿ ಮಲಗುವ ಮೊದಲು ಒಂದೆರಡು ತಂಬಿಗೆ ನೀರು ಕುಡಿದು ಮಲಗಿದರೆ, ಮೂತ್ರಾಶಯ ತುಂಬಿ ಜೀಕರಿಸುವುದಕ್ಕಿಂತ ದೊಡ್ಡ ಅಲರಾಂ ಈ ಪ್ರಪಂಚದಲ್ಲಿ ಯಾವುದೂ ಇಲ್ಲವೆಂಬ ತರ್ಕ ಮೇಸ್ಟ್ರುದು...ಮೂಗಿನಲ್ಲಿದ್ದ ಬ್ಯಾಲೆನ್ಸ್ ಏರುವುದು , ಇಳಿಯುವುದು ಮಾಡುತ್ತಿತ್ತು...ಶಿಶು ಪ್ರಾಯದಲ್ಲಿದ್ದ ಅಲ್ಸರ್ ಖಾಯಿಲೆ ಬಿದಿಗೆ ಚಂದ್ರಮನಂತೆ ಶೀಘ್ರ ಗತಿಯಲ್ಲಿ ಬೆಳೆಯಿತು. ಡೈವೋರ್ಸ್ ಕೊಟ್ಟ ಹಳೆಯ ಹೆಂಡತಿಯಂತಿದ್ದ ಒಂಭತ್ತನೇ ತರಗತಿ...( ಫ಼ೇಲಾದ ಹುಡುಗನಿಗೆ)

ಸಾಹೇಬರು ತಮ್ಮ ದುಬಾರಿ ಪ್ಯಾಂಟೊಳಗೆ ಕಿಮ್ಮತ್ತಿನ ಮೂತ್ರ ವಿಸರ್ಜಿಸಿಕೊಂಡರು...ತೀರ್ಥಂಕರ ಪದವಿಗೇರಿದ ಅಮಲುದಾರರು...ಅಪ್ಪ ಎಂಬ ಅಮೇರಿಕ ಹಾಗೂ ಅಜ್ಜಿಯೆಂಬ ಕ್ಯೂಬಾ ರಾಜಿ ಕಬೂಲಿಯಾಗಿದ್ದರು. ಸಾಹಿತಿಗಳ ಕ್ರಿಯಾಶೀಲ ಬಲಗೈಯನ್ನು ಕುಲುಕಿ ರೋಮಾಂಚನಗೊಳ್ಳುವ ಬಯಕೆ... ಬಾಡಿ ಲಾಂಗ್ವೇಜ್‌ ವ್ಯಾಕರಣ ಮತ್ತು ಛಂದಸ್ಸು ಸಹಿತ ಬದಲಿಸಿಕೊಳ್ಳತೊಡಗಿತು.

ದಲಿತ ಕೇರಿಯ ಭೌತಿಕ ಬದುಕಿನ ಕಾವ್ಯಮಯ ವಿವರಣೆ,ಜೀವನೋತ್ಸಾಹಕ್ಕೆ ಪರ್ಯಾಯವೆಂಬಂತಿದ್ದ ಅವರ ದಿನಚರಿ, ಸೇಂದ್ರ ಅಥವಾ ಚಂದ್ರನ ವಸ್ತ್ರ ವಿಲಾಸ,ಮಲಯಾಳಿ ಡಬ್ಬಿ ಉರುಫ಼್ ಕ್ಯಾಮೆರಾ ಮತ್ತು ಮೇಲ್ಗಿರಿ ತಿಮ್ಮನ ಪ್ರಸಂಗ...ಪಿಂಡಾರಿ ಕಳ್ಳರನ್ನು ಕಂಠಶ್ರೀಯಿಂದ ಯಾಮಾರಿಸುವುದು ದಾಳಿಯ ಪ್ರಮುಖ ಭಾಗ...ಲಂಬಾಣಿ ಹೆಂಗಸರ ಸೌಂದರ್ಯ ಹಾಗೂ ಅವರ ಶಿಕಾರಿ...

ಸೈಕಲ್ ಎಂಬ ಪುಷ್ಪಕ ವಿಮಾನ...ಚಪ್ಪಲಿ ಎಂಬ ವಜ್ರಾಯುಧ...ಹುಸೇನಿಯ ಲಡಾಸು ವ್ಯಾನ್ ಮುಬಾರಕ್ಕಿನಲ್ಲಿ ಮಳೆಯಲ್ಲಿನ ಪಯಣ, ಸಮಸ್ತ ಹಿಂಸೆಯನ್ನೆಲ್ಲಾ ಗುತ್ತಿಗೆ ಹಿಡಿದಿದ್ದ ಕ್ರೌರ್ಯ ತಜ್ಞ...ಚೊಚ್ಚಲು ಕಾದಂಬರಿಯೆಂಬ ವಿಲಕ್ಷಣ ಕೂಸಿಗೆ ಹಾಲುಣಿಸಿದ್ದು...ಸಂತಾನ ಕರುಣಿಸುವ ವಿಷಯದಲ್ಲಿ

ಇಳೀ ವಯಸ್ಸಿನಲ್ಲೂ ಬೀಜದ ಹೋರಿಗಳಂತಿದ್ದ ತಿಮ್ಮ ಮತ್ತು ದಿಬ್ಬಯ್ಯ, ಎಪ್ಪತ್ತೆಂಬತ್ತು ವಯೋ ಮಾನದ ದಿಬ್ಬಯ್ಯಗೆ ಐವತ್ತರವತ್ತರ ಮಗನಿದ್ದನಲ್ಲದೆ ಆರು ವರ್ಷದ ಮಗನಿದ್ದ. ಆತನ ಹೆಂಡತಿ ಎಲ್ಲಮ್ಮಆರು ತಿಂಗಳ ಗರ್ಭಿಣಿ ಬೇರೆ! ನಾಲಗೆಯಿಂದ ಬ್ಯಾಟಿಂಗ್...

ಇದು ಕುಂ ವೀ ಅವರ ಆತ್ಮಚರಿತ್ರೆಯಷ್ಟೇ ಅಲ್ಲ, ನಮ್ಮ ಭಾರತದ ಅಂದಿನ ದಿನಗಳ ಸಾಂಸ್ಕೃತಿಕ , ಸಾಮಾಜಿಕ ಶೈಕ್ಷಣಿಕ ಬದುಕಿನ ಪರಿಸ್ಥಿತಿಗಳ ಚಿತ್ರಣವೂ ಇಲ್ಲಿದೆ. ಪಕ್ಕಾ ಕಟ್ಟಡಗಳಿಲ್ಲದ ಅಲೆಮಾರಿ ಸರ್ಕಾರಿ ಶಾಲೆಗಳು...

ಆಣೆಗೆ ಬದಲಾಗಿ ಪೈಸೆ ಚಲಾವಣೆಗೆ ಬಂದಿದ್ದು...ಪಂಚಾಯ್ತಿ ಕಛೇರಿಯ ಎತ್ತರದ ಕಂಬದ ತುದಿಗೆ ಕಟ್ಟಿರುತ್ತಿದ್ದ ಊರಿಗೊಂದೇ ರೇಡಿಯೋ...ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೈ ಜವಾನ್, ಜೈ ಕಿಸಾನ್ ಘೋಷಣೆ, ನಾಗರಿಕರು ವಾರಕ್ಕೊಮ್ಮೆ ಒಂದು ಹೊತ್ತಿನ ಊಟವನ್ನು ತ್ಯಾಗ ಮಾಡುವ ನಿರ್ಧಾರ!

ಡಾ. ರಾಜಕುಮಾರ್ ಅಭಿಮಾನಿಗಳು ಗಂಗಾಧರ ಮೊದಲಿಯಾರನನ್ನು ತದಕಿದ್ದು...ತುರ್ತುಪರಿಸ್ಥಿತಿ, ಪ್ರಧಾನಿ ಇಂದಿರಾ ಗಾಂಧಿ, ದೇವರಾಜ ಅರಸು ಅವರ ಪ್ರಸ್ತಾಪವೂ, ಪ್ರಧಾನಿ ಇಂದಿರಾಗಾಂಧಿ ಅವರ ಕೊಲೆ, ಕರ್ಫ಼್ಯೂ, ಒನ್ ಫ಼ಾರ್ಟಿಫ಼ೋರ್ ಜಾರಿಗೊಳಿಸಿದ್ದು...ತೆಲುಗು ದೇಶಂ ಪಾರ್ಟಿಯ ಇತಿಹಾಸ, ವರ್ತಮಾನದ ಪ್ರಸಂಗಗಳು...

ಆತ್ಮವಿಶ್ವಾಸದ ಈ ಆತ್ಮಕಥನ ಕುಂ ವೀ ಅವರ ವ್ಯಕ್ತಿತ್ವದ ಅನಾವರಣ ಮಾಡುತ್ತಲೇ , ಸ್ವಪ್ರೇಮಗಳಾಚೆಯೂ ಲೇಖಕರೊಂದಿಗೆ ಆಪ್ತತೆಯನ್ನು ಬೆಳೆಸುತ್ತದೆ. ಕೃತಿಯ ಓದು ಎಲ್ಲಿಯೂ ಬೇಸರವೆನಿಸದೇ ಅಚ್ಚರಿ, ಅಭಿಮಾನ, ಆನಂದವನ್ನು ಹುಟ್ಟು ಹಾಕುತ್ತದೆ.

ನೀವೂ ಓದಿ ಸಂಭ್ರಮಿಸಿ.

- ಸಿ ಬಿ ಶೈಲಾ ಜಯಕುಮಾರ್.ಚಿತ್ರದುರ್ಗ.

MORE FEATURES

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...

ಸಮ್ಮೇಳನಾಧ್ಯಕ್ಷರಾದ ಡಾ. ಗೊ.ರು. ಚನ್ನಬಸಪ್ಪ ಅವರ ಭಾಷಣ

20-12-2024 ಮಂಡ್ಯ

ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...