ಕೃಷ್ಣನ ಸೂತ್ರಗಳಿಂದ ಯಶಸ್ಸಿನ ಪಾಠ ಹೇಳುವ ಮ್ಯಾನೇಜ್ ಮೆಂಟ್ ಭಗವದ್ಗೀತೆ


ಮ್ಯಾನೇಜ್-ಮೆಂಟ್ ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ, ಸೂಚಿಸಿದ, ವ್ಯಕ್ತಪಡಿಸಿದ, ಪರಿಭಾವಿಸಿದ ಸಂಗತಿಗಳನ್ನೆಲ್ಲ ಇಟ್ಟುಕೊಂಡು ನಮ್ಮ ಸೋಮಾರಿತನಕ್ಕೆ, ಒತ್ತಡಕ್ಕೆ, ದಾಹಕ್ಕೆ, ದೌರ್ಭಾಗ್ಯಕ್ಕೆ ಪಾಠ ಕಲಿಸಲು ಹೊರಟಿದ್ದಾರೆ ಮಹಾಬಲ. ನಾಲ್ಕು ಭಾಗಗಳಲ್ಲಿ ಹಂಚಿಹೋಗಿರುವ ಈ ಪುಸ್ತಕದ ನಾಲ್ಕನೆಯ ಭಾಗ ನನಗಿಷ್ಟ ಎಂಬುದು ಹಿರಿಯ ಪತ್ರಕರ್ತ, ಲೇಖಕ ಜೋಗಿ ಅವರ ಮಾತು. ಅವರು ಲೇಖಕ ಮಹಾಬಲ ಸೀತಾಳಭಾವಿ ಅವರ ‘ಮ್ಯಾನೇಜ್ ಮೆಂಟ್ ಭಗವದ್ಗೀತೆ’ ಯ ಬಗ್ಗೆ ಬರೆದ ಲೇಖನ ನಿಮ್ಮ ಓದಿಗಾಗಿ...

ಈಗಲೇ ಆಫೀಸಿನಲ್ಲಿ ಹರಿದು ರುಬ್ಬುತ್ತಿದ್ದಾರೆ ಮಾರ್ರೆ. ಅಂಥವರಿಗೆ ನಿಮ್ಮ ಗೆಳೆಯ ಮಾಬಲಭಟ್ರು ಐಡಿಯಾ ಬೇರೆ ಕೊಡುತ್ತಿದ್ದಾರೆ. ಅವರಿಗೆ ಇದನ್ನೆಲ್ಲ ಬರೀಬೇಡ ಅಂತ ಹೇಳ್ರೀ ಅಂತ ಒಂದು ರಾತ್ರಿ ನನ್ನ ಹತಾಶ ಗೆಳೆಯನೊಬ್ಬ ಫೋನ್ ಮಾಡಿದ. ಅವನು ಕೆಲಸ ಮಾಡುವ ಸಂಸ್ಥೆಯ ಮಾಲಿಕರು ಉಡುಪಿಯವರಂತೆ. ಅವರಿಗೆ ಇರುವ ಎರಡು ದುರಭ್ಯಾಸಗಳೆಂದರೆ ಅಡುಗೆ ಪುಸ್ತಕ ಓದುವುದು ಮತ್ತು ಅದನ್ನು ಪ್ರಯೋಗ ರೂಪಕ್ಕೆ ತರುವುದು. ಎರಡನೆಯದು ಮ್ಯಾನೇಜ್ ಮೆಂಟ್ ಪುಸ್ತಕ ಓದುವುದು. ಅದನ್ನು ಕಾರ್ಯರೂಪಕ್ಕೆ ತರುವುದು. ನಲವತ್ತೆರಡು ದಾಟಿದರೂ ಮದುವೆಯಾಗದ ಸಾಹೇಬರು ಈ ಪ್ರಯೋಗಶೀಲತೆಗೆ ಬಲಿಯಾಗುತ್ತಿದ್ದದ್ದು ಅವರ ಸಂಸ್ಥೆಯ ಉದ್ಯೋಗಿಗಳೇ. ಅವರು ಲೇಟೆಸ್ಟಾಗಿ ಕೈಗೆತ್ತಿಕೊಂಡು ಪ್ರಯೋಗಿಸಿದ್ದು ಮಹಾಬಲ ಸೀತಾಳಭಾವಿಯ ಮ್ಯಾನೇಜ್-ಮೆಂಟ್ ಭಗವದ್ಗೀತೆ ಪುಸ್ತಕವನ್ನು.

ಆತ ತನ್ನ ಕಷ್ಟ ಸುಖ ಹೇಳಿಕೊಂಡ ನಂತರ ನಾನೂ ಆ ಪುಸ್ತಕವನ್ನು ತರಿಸಿಕೊಂಡೆ. ಸಾಮಾನ್ಯವಾಗಿ ನನಗೆ ಮ್ಯಾನೇಜ್-ಮೆಂಟ್ ಪುಸ್ತಕಗಳು ಆಸಕ್ತಿ ಹುಟ್ಟಿಸುವುದಿಲ್ಲ. ಅವೇನಿದ್ದರೂ ಶಿಲ್ಪಾಶೆಟ್ಟಿ ಯೋಗ ಕ್ಯಾಸೆಟ್ಟಿನ ಥರ. ನೋಡುವುದಕ್ಕೆ ಮಾತ್ರ ಚೆನ್ನಾಗಿರುತ್ತದೆ. ನಾವೇ ಮಾಡಲು ಹೊರಟರೆ ಕೈ ಕಾಲು ಬೆಂಡಾಗುವುದಿಲ್ಲ. ಮ್ಯಾನೇಜ್-ಮೆಂಟ್ ಟಿಪ್ಸುಗಳೂ ಅಷ್ಟೇ. ಓದುವಾಗ ಬಹಳ ಹಿತವಾಗಿರುತ್ತದೆ. ಕಾರ್ಯರೂಪಕ್ಕೆ ತರಲಿಕ್ಕಾಗುವುದಿಲ್ಲ. ಯಂಡಮೂರಿ ವೀರೇಂದ್ರನಾಥ್ ಎಂಬ ಕಾದಂಬರಿಕಾರರು ಇಂಥ ಮ್ಯಾನೇಜ್-ಮೆಂಟ್ ಟಿಪ್ಪಣಿಗಳಿರುವ ಕಾದಂಬರಿಗಳನ್ನೇ ಬರೆಯುತ್ತಿದ್ದರು. ನಾನು ಓದಿದ ಒಂದು ಕಾದಂಬರಿಯಲ್ಲಿ ಒಂದು ಸಂಸ್ಥೆ ತಲೆಕೂದಲು ಬೆಳೆಯದೇ ಇರುವ ಒಂದು ಎಣ್ಣೆ ಕಂಡುಹಿಡಿಯುತ್ತದೆ. ಒಮ್ಮೆ ನಮಗೆ ಬೇಕಾದ ಹೇರ್ ಸ್ಟೈಲ್ ಮಾಡಿಸಿ, ಆ ಎಣ್ಣೆ ಹಚ್ಚಿಕೊಂಡರೆ ಎಷ್ಟೇ ವರುಷವಾದರೂ ಹೇರ್ ಸ್ಟೈಲ್ ಹಾಗೆಯೇ ಇರುತ್ತದೆ. ಇದು ಬಂದದ್ದೇ ತಡ ಎಲ್ಲರೂ ಅದನ್ನು ಬಳಸಲು ಆರಂಭಿಸಿ ಕ್ಷೌರಿಕರೆಲ್ಲ ಕೆಲಸ ಕಳಕೊಳ್ಳುತ್ತಾರೆ. ಹತ್ತು ವರುಷದ ನಂತರ ಆ ಸಂಸ್ಥೆ ಪ್ರತಿ ಊರಲ್ಲೂ ಹತ್ತು ಮಂದಿಯನ್ನು ಆಯ್ಕೆ ಮಾಡಿ ಅವರಿಗೆ ಮತ್ತೊಂದು ಎಣ್ಣೆ ಕೊಡುತ್ತದೆ. ಆಗ ಕೂದಲು ಮತ್ತೆ ಬೆಳೆಯಲು ಆರಂಭವಾಗುತ್ತದೆ. ಅದೇ ಸಂಸ್ಖೆ ಕ್ಷೌರಿಕರನ್ನೆಲ್ಲ ಕೆಲಸಕ್ಕೆ ತೆಗೆದುಕೊಂಡು ವಿಭಿನ್ನ ಶೈಲಿಯ ಕೇಶವಿನ್ಯಾಸ ಮಾಡಿಸುತ್ತಾರೆ. ಎಲ್ಲರಿಗೂ ಕೇಶಶೈಲಿಯ ಆಸಕ್ತಿ ಹುಟ್ಟುತ್ತದೆ. ಆದರೆ ಕ್ಷೌರಿಕರೆಲ್ಲ ಆ ಸಂಸ್ಥೆಯ ಕೆಲಸಗಾರರಾಗಿದ್ದರಿಂದ, ಸಂಸ್ಥೆ ಕೋಟ್ಯಂತರ ರುಪಾಯಿ ಸಂಪಾದನೆ ಮಾಡುತ್ತದೆ. ತಲೆಕೂದಲು ಬೆಳೆಯದಂತೆ, ಬೆಳೆಯುವಂತೆ, ಕೇಶವಿನ್ಯಾಸಕ್ಕೆ- ಹೀಗೆ ಒಂದು ಬಾಣಕ್ಕೆ ಮೂರು ಹಕ್ಕಿ ಹೊಡೆಯುತ್ತದೆ ಎಂಬುದು ಆ ಕಾದಂಬರಿಯ ನಾಯಕನ ಮ್ಯಾನೇಜ್-ಮೆಂಟ್ ಭಗವದ್ಗೀತೆ.

ಆದರೆ ಮಹಾಬಲ ಸೀತಾಳಭಾವಿ ಇಂಥ ಕತೆಗಳನ್ನು ಮತ್ತೊಂದು ಹಂತಕ್ಕೆ ಏರಿಸಿದವರು. ಅವರ ಸಂಸ್ಕೃತದ ಓದು, ಕನ್ನಡ ಭಾಷೆಯ ಮೇಲಿನ ಹಿಡಿತ, ಇಂಗ್ಲಿಷ್ ಭಾಷೆಯ ಪ್ರೌಢಿಮೆ, ಹಿಂದಿ ಭಾಷೆಯ ವಿದ್ವತ್ತು ಮತ್ತು ಓದು- ಅವರನ್ನು ಕನ್ನಡದ ವಿಭಿನ್ನ ಶೈಲಿಯ ಬರಹಗಾರನನ್ನಾಗಿ ಮಾಡಿದೆ. ಅವರ ಯಾವ ಪುಸ್ತಕಗಳೂ ನನ್ನನ್ನು ನಿರಾಸೆಗೊಳಿಸಿಲ್ಲ.

ಮ್ಯಾನೇಜ್-ಮೆಂಟ್ ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ, ಸೂಚಿಸಿದ, ವ್ಯಕ್ತಪಡಿಸಿದ, ಪರಿಭಾವಿಸಿದ ಸಂಗತಿಗಳನ್ನೆಲ್ಲ ಇಟ್ಟುಕೊಂಡು ನಮ್ಮ ಸೋಮಾರಿತನಕ್ಕೆ, ಒತ್ತಡಕ್ಕೆ, ದಾಹಕ್ಕೆ, ದೌರ್ಭಾಗ್ಯಕ್ಕೆ ಪಾಠ ಕಲಿಸಲು ಹೊರಟಿದ್ದಾರೆ ಮಹಾಬಲ. ನಾಲ್ಕು ಭಾಗಗಳಲ್ಲಿ ಹಂಚಿಹೋಗಿರುವ ಈ ಪುಸ್ತಕದ ನಾಲ್ಕನೆಯ ಭಾಗ ನನಗಿಷ್ಟ. ಅದರಲ್ಲಿ ನದಿ ದಾಟಿದ ಕತೆಯಂತೂ ಹಲವಷ್ಟನ್ನು ಹೇಳುವ ಪುಟ್ಟ ಪ್ರಸಂಗ.

ಇಂಥ ಕತೆಗಳನ್ನು ಅನೇಕರು ಇಂಗ್ಲಿಷಿನಲ್ಲಿ ಬರೆದು ಬರೆದು ಬಿಸಾಕಿದ್ದಾರೆ. ಆ ಕತೆಗಳಿಗೂ ಇವಕ್ಕೂ ಇರುವ ವ್ಯತ್ಯಾಸವೆಂದರೆ ಸೀತಾಳಭಾವಿ ಕೇವಲ ಒಣವಿವರಗಳಲ್ಲಿ ಕತೆ ಹೇಳುವುದಿಲ್ಲ. ಸಂಜಯನಿಗೇ ದಿವ್ಯಚಕ್ಷು ಯಾಕೆ ಕೊಟ್ಟರು, ಅದನ್ನು ಧೃತಾರಾಷ್ಟ್ರನಿಗೇ ಕೊಡಬಹುದಿತ್ತಲ್ಲ ಎಂಬಂಥ ಹಲವು ಉತ್ತರಗಳನ್ನು ಹೊಳೆಯಿಸಬಲ್ಲ ಪ್ರಶ್ನೆಗಳನ್ನೂ ಎತ್ತುತ್ತಾರೆ.

ಮ್ಯಾನೇಜ್‌ಮೆಂಟ್ ಎಂಬ ಪದ ಬಂದಾಗ ಅಲ್ಲಿ ಮಾನವೀಯ ಎಂಬ ಪದಕ್ಕೆ ಅಷ್ಟಾಗಿ ಅವಕಾಶ ಇರುವುದಿಲ್ಲ. ಗೆಟ್ ದಿ ಥಿಂಗ್ಸ್ ಡನ್ ಎಂಬುದರ ಜೊತೆಗೆ ಆ ಕೆಲಸವನ್ನು ನಿನಗೆ ಬೇಕಾದ ರೀತಿಯಲ್ಲೇ ಮಾಡಿ ಮುಗಿಸು ಎಂಬುದೂ ಸೇರಿಕೊಂಡಿರುತ್ತದೆ. Mission accomplished ಎನ್ನುವುದೇ ಅಂತಿಮ ವಾಕ್ಯ.

ಇಂಥ ಕೆಲವು ಮ್ಯಾನೇಜ್-ಮೆಂಟ್ ಕಥನಗಳು ಕರ್ಮಣ್ಯೇವ ಅಧಿಕಾರಸ್ಥೇ ಎನ್ನುವಾಗಲೂ ಅಂತಃಕರಣ ಇಟ್ಟುಕೊಂಡಿರಬಹುದು ಎನ್ನುವುದನ್ನು ಹೇಳುತ್ತವೆ.

ಅಂದಹಾಗೆ, ನನ್ನ ಗೆಳೆಯನ ಬಾಸ್ ಬಳಸಿದ ಈ ಪುಸ್ತಕದ ಮ್ಯಾನೇಜ್-ಮೆಂಟ್ ಸೂತ್ರ ಯಾವುದು ಅಂತ ಅವನನ್ನೇ ಕೇಳಿದೆ.

ಬಾಸ್ ಹೇಳಿದ್ದನ್ನೆಲ್ಲ ಕಣ್ಮುಚ್ಚಿಕೊಂಡು ಒಪ್ಪಬೇಡಿ ಎಂಬ ಅಧ್ಯಾಯ ಇದೆ. ಅದನ್ನು ಓದಿದ ಮೇಲೆ, ಅವರು ಹೇಳಿದ್ದನ್ನು ನಾವು ಒಪ್ಪುವಂತಿಲ್ಲ. ವಿರೋಧಿಸಬೇಕು. ಈ ವಿರೋಧ-ಪರ ಮಾತುಕತೆ ಅರ್ಧದಿನ ನಡೆಯುತ್ತದೆ. ಕೊನೆಗೆ ಅವರು ಹೇಳಿದ ತೀರ್ಮಾನವೇ ಉಳಿಯುವುದು. ಆದರೆ ಕಣ್ಮುಚ್ಚಿಕೊಂಡು ಒಪ್ಪುವಂತಿಲ್ಲ ಅಂತ ಹೇಳಿ ಕಾಟ ಕೊಡುತ್ತಿದ್ದಾರೆ ಅಂದ.

ಜೋಗಿ (ಗಿರೀಶ್ ರಾವ್ ಹತ್ವಾರ್) ಅವರ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..
ಮಹಾಬಲ ಸೀತಾಳಭಾವಿ ಅವರ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ...
ಮ್ಯಾನೇಜ್ ಮೆಂಟ್ ಭಗವದ್ಗೀತೆ ಕೃತಿ ಪರಿಚಯ

MORE FEATURES

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...

ಸಮ್ಮೇಳನಾಧ್ಯಕ್ಷರಾದ ಡಾ. ಗೊ.ರು. ಚನ್ನಬಸಪ್ಪ ಅವರ ಭಾಷಣ

20-12-2024 ಮಂಡ್ಯ

ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...