ಕಾವ್ಯದೀಪ್ತಿಗೆ ಶಬ್ದ ರೂಪ : ಪದ್ಮನಾಭ. ಡಿ


“ಎಲ್ಲರಿಗಿರುವಂತೆ ಕವಿಗಳಿಗೂ ಕೌಟುಂಬಿಕ ಜವಾಬ್ದಾರಿ ಬಾಂಧವ್ಯದ ಸೆಳೆತ ಇದ್ದೇ ಇರುತ್ತದೆ. ಇವುಗಳ ಅಭಿವ್ಯಕ್ತಿಯೂ ಕವಿತೆಗಳಲ್ಲಿ ಕಾಣುವುದು ಸಹಜ. ಈ ಹಿನ್ನೆಲೆಯಲ್ಲಿ ಪುಟ್ಟಪೋರಿ, ಅಪ್ಪ ಮಗಳ ಮಾತುಕತೆ, ಮುದ್ದುಕಂದ , ಮದುವೆ ಕವನಗಳು ಮನೋಜ್ಞವಾಗಿ ಮೂಡಿಬಂದಿವೆ. ಕವನದ ಹುಮ್ಮಸ್ಸಿನಲ್ಲಿ ಇದ್ದಾಗ ಅಡುಗೆಮನೆಯಲ್ಲಿ ಕವಯತ್ರಿಗೆ ಆಗಬಹುದಾದ ಅವಘಡವನ್ನು. ಕಲ್ಪಿಸಿಕೊಂಡು ಹಾಸ್ಯಮಯವಾಗಿ ಕವನ ಕಟ್ಟಿರುವುದು ವಿಶೇಷವಾಗಿದೆ” ಎನ್ನುತ್ತಾರೆ ಲೇಖಕ ಪದ್ಮನಾಭ. ಡಿ. ಕವಿ ಆಶಾ ಮಯ್ಯ ಅವರ ‘ಕಾವ್ಯ ದೀಪ್ತಿ’ ಕವನಸಂಕಲನಕ್ಕೆ ಅವರು ಬರೆದಿರುವ ಮುನ್ನುಡಿ ನಿಮ್ಮ ಓದಿಗಾಗಿ...

ಕವನ ಎಂದರೇನು ಎಂಬ ಪ್ರಶ್ನೆ ಹಾಕಿದಾಗ ಸಾಮಾನ್ಯವಾಗಿ ಎಲ್ಲರೂ ಕೊಡುವ ಉತ್ತರ ಎಂದರೆ "ಮನದ ಭಾವನೆಗಳಿಗೆ ಕೊಡುವ ಶಬ್ದಗಳ ರೂಪ" ಎಂದೇ ಆಗಿರುತ್ತದೆ. ಸಂಸ್ಕೃತದ ಕವಿವಾಣಿಯೊಂದು ಹೀಗೆ ಹೇಳುತ್ತದೆ.
"ವಿದ್ಯಾಧಿದೇವತಾ ದೇವಿ ವಾಣಿ ಸಾಕ್ಷಾತ್ ಸರಸ್ವತಿ
ಯತ್ ಪ್ರಸಾದೇನ ಕಾವ್ಯಾಣಿ ಕುರ್ವಂತಿಕವಯಃ ಸದಾ"
ಹೀಗೆ ಶಾರದೆಯ ಕೃಪೆ ಪಡೆದ ಶ್ರೀಮತಿ ಆಶಾ ಮಯ್ಯ ಫೇಸ್ಬುಕ್, ವಾಟ್ಸಾಪ್ ಇತ್ಯಾದಿ ಜಾಲತಾಣಗಳಲ್ಲಿ ತಮ್ಮ ಮಧುರ ಲಯಬದ್ಧ ರಚನೆಗಳಿಂದ ಓದುಗರ ಮನಸೆಳೆದಿದ್ದಾರೆ. ಈಗ "ಕಾವ್ಯದೀಪ್ತಿ"ಎಂಬ ಶೀರ್ಷಿಕೆಯಡಿ ಸಾಹಿತ್ಯ ಲೋಕಕ್ಕೆ ಇನ್ನೊಂದು ಕೃತಿಯನ್ನು ಸಮರ್ಪಿಸಿದ್ದಾರೆ .ಇದಕ್ಕಾಗಿ ಮೊದಲು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಈ ಕೃತಿಯ ಮೊದಲ ಓದುಗನಾಗಿ ನನ್ನೆರಡು ಮಾತುಗಳನ್ನು ಹಂಚಿಕೊಳ್ಳುವೆ.

ಬಿಳಿಯ ಹಾಳೆಯ ಮೇಲೆ ಅಕ್ಷರಗಳುದುರಿದವು
ಮುತ್ತು ಪೋಣಿಸಿದಂತೆ ಸಾಲುಸಾಲು/
ಕವಿಯ ಹೃದಯ ಮಿಡಿದ ಮಧುರಪದಗಳ ಮುದವು
ಎದೆಯ ಗೂಡಿಗೆ ಲಗ್ಗೆ ಇಟ್ಟ ಹೊನಲು//

ಶ್ರೀ ಎಸ್. ಪಿ . ಹಿರೇಮಠ್ ರವರು ಬರೆದ ಈ ಸಾಲುಗಳು ಶ್ರೀಮತಿ ಆಶಾ ಮಯ್ಯರವರು ಬರೆದ ಪ್ರತಿಕವನಗಳಿಗೂ ಅನ್ವಯಿಸುತ್ತವೆ. ಪ್ರತಿಯೊಂದು ಕವನಗಳೂ ರಮ್ಯತೆಯ ಜಾಡಿನಲ್ಲಿ ಲಯಬದ್ಧತೆ ಗೇಯತೆಗಳನ್ನು ತುಂಬಿಕೊಂಡು ಓದುಗರ ಮನಸ್ಸನ್ನು ಗೆಲ್ಲುತ್ತವೆ ಎಂದು ನಿಸ್ಸಂಶಯವಾಗಿ ಹೇಳಬಲ್ಲೆ.

`ಕಾವ್ಯದೀಪ್ತಿ' ಎಂಬ ಶೀರ್ಷಿಕೆಯೇ ಸುಂದರವಾಗಿದೆ. ಅಷ್ಟೇ ಅಲ್ಲದೆ, ಸಂಕಲನದಲ್ಲಿನ ಕವನಗಳ ದಿಕ್ಸೂಚಿಯೂ ಆಗಿದೆ. ದೀಪ್ತಿ ಎಂದರೆ ಹೊಳಪು, ಕಾಂತಿ ಎಂಬ ಅರ್ಥವಿದೆ. ಮನದ ಸುಪ್ತಭಾವಗಳಿಗೆ ಪ್ರತಿಭೆಯಿಂದಲೂ, ಲೋಕಾನುಭವದಿಂದಲೂ ಮಥಿಸಿದ ಅನುಭಾವಪೂರ್ಣ ಕಲ್ಪನೆಗಳು ಇಲ್ಲಿ ಕವಿತೆಗಳಾಗಿವೆ. "ಮೃಗತ್ವವನು ದೂರವಿರಿಸಿ ಮೃದುತ್ವವನು ಹರಿಸುವ, ಕವಿಮನದ ಭಾವಗಳು ಬೆಳಕಿನ ಕಾಂತಿಯ ಕೊಳದಲ್ಲಿ ಓದುಗರನ್ನು ಮೀಯುವಂತೆ ಮಾಡುತ್ತವೆ" ಎಂಬ ಕವಿವಾಣಿ ನೆನಪಾಗುತ್ತದೆ. ಆರಂಭದಲ್ಲಿನ ಗಣೇಶ ಹಾಗೂ ಆದಿಶಕ್ತಿಯ ಸ್ತುತಿಯ ಬಳಿಕ ಬರುವ "ಅಂತರಂಗದ ಬಂಧು" ವಿಶೇಷವಾಗಿದೆ. ಇದು ಭಕ್ತಿಗೀತೆ ಎಂದೂ ಅನಿಸುತ್ತದೆ. ರಾಧೆಯು ಕೃಷ್ಣನನ್ನು ನೆನೆದು ಹಾಡುವ ಶೃಂಗಾರಗೀತೆಯಂತೆಯೂ ತೋರುತ್ತದೆ. ಈ ಕವನದ ಕೆಲವು ಸಾಲುಗಳನ್ನು ನೋಡಿ,

"ಹೇ ಕೃಷ್ಣ ನಿನ್ನೆದೆಯ ಬಡಿತವನು ಆಲಿಸುತ
ಮರೆಯಬೇಕಿದೆ ನಾನು ಜಗವನಿಂದು"
ಹಬ್ಬಿರುವ ಸುಮಲತೆಯು ನೋಡುತಿದೆ ನಿನ್ನನ್ನು
ಕೂಗಿ ಕರೆಯಲಾರದೆ ನಿನ್ನ ಹೆಸರನಿಂದು"

"ಒಲಿದ ಮನವದು ನಿತ್ಯ ನಿನ್ನನೇ ಸ್ಮರಿಸಿರಲು
ದೂರ ಸರಿಯುವ ಮಾತು ಇಲ್ಲ ಎನಗೆ"
"ಪ್ರಿಯಬಂಧು ನೀನಿರಲು ಗರ್ವವೆನಗೆ" ಎಂಬ ಸಾಲುಗಳು ಭಗವಂತ ಎಷ್ಟೇ ದೂರ ಇದ್ದರೂ ಭಕ್ತಿ ಭಾವದ ಮನಕೆ ಹತ್ತಿರವೇ ಇರುತ್ತಾನೆ ಎಂಬ ಮಾತನ್ನು ಸೊಗಸಾಗಿ ಬಿಂಬಿಸಿವೆ.

ಸ್ವತಂತ್ರ ದಿನಾಚರಣೆ, ಗಣರಾಜ್ಯೋತ್ಸವ ಇತ್ಯಾದಿ ಸಮಾರಂಭಗಳಲ್ಲಿ ಮಕ್ಕಳೂ ಸಹ ಸುಶ್ರಾವ್ಯವಾಗಿ ಸುಲಭವಾಗಿ ಹಾಡಬಹುದಾದ ದೇಶಭಕ್ತಿ ಗೀತೆ " ನಮ್ಮ ತಾಯಿ ಭಾರತಿ" ಇದರ ಕೆಲವು ಸಾಲುಗಳನ್ನು ನೋಡಿ

"ಹಿಮದ ಮಕುಟವ ಧರಿಸಿ ಶಿರದಲಿ
ಪೊರೆವಳೆಮ್ಮನು ಭಾರತಿ
ಸುಮದ ವೃಷ್ಟಿಯಗೈದು ಹರುಷದಿ
ಹಾಡುವೆ ನಿನ್ನ ಕೀರುತಿ"
ಇದೇ ಸಾಲಿಗೆ ಸೇರುವ ಇನ್ನೊಂದು ಗೀತೆ ವಂದೇ ಮಾತರಂ ಸುಲಲಿತವಾಗಿ ಮೂಡಿಬಂದಿದೆ. ಅಂತೆಯೇ ಕನ್ನಡದ ದೀಪ ಕವಿತೆ ಸಹ ರಾಜ್ಯೋತ್ಸವ, ಪುಸ್ತಕ ಬಿಡುಗಡೆ ಕವಿಗೋಷ್ಠಿ ಇತ್ಯಾದಿ ಕನ್ನಡದ ಕಾರ್ಯಕ್ರಮಗಳಲ್ಲಿ ಹಾಡಲು ಬಹು ಪ್ರಶಸ್ತವಾಗಿದೆ.

ಮುಂದುವರೆದಂತೆ ಷಟ್ಪದಿಗಳಲ್ಲಿ ರಚಿತವಾದ "ಧರಣಿಮಡಿಲ ವೈಭವ", "ಮಾತು ಮೌನ", ನೇಸರನ ಹೊನ್ನಿನ ಹೊದಿಕೆ" ಕವನಗಳು ಕವಯತ್ರಿಯ ಪ್ರತಿಭೆಗೆ ಸಾಕ್ಷಿಯಾಗಿವೆ. ಮಾತು ಮೌನ ನೀತಿಸಂದೇಶ ಸಾರುವ ಗೀತೆಯಾದರೆ ಉಳಿದೆರಡೂ ಪ್ರಕೃತಿಯ ಸೊಬಗನ್ನು ಸುಂದರವಾಗಿ ಬಿಂಬಿಸಿವೆ.

"ಬಯಲೆಲ್ಲ ಹಸಿರಾಗಿ
ಸುಮವೆಲ್ಲ ಉಸಿರಾಗಿ
ಕರೆಯುತಿದೆ ನೋಡಲ್ಲಿ ಪ್ರೀತಿಯಿಂದ
ನಿನ್ನ ರಂಗಿನ ಪರದೆ
ಆವರಿಸಿದಾ ಹೊತ್ತು
ನಸುನಾಚಿಹಳು ಧರಣಿ ಮೋದದಿಂದ"

ಭೂಮಿಯನ್ನು ಸೂರ್ಯನ ಪ್ರೇಮಿಯಂತೆ ಕಲ್ಪಿಸಿರುವುದು, ಭೂರಮೆಯು ನಾಚುವ ಕಲ್ಪನೆ ಎರಡೂ ವಿಶಿಷ್ಟ. ನಿಸರ್ಗದ ಚೆಲುವನ್ನು ವರ್ಣಿಸುವ ಇನ್ನಿತರ ಕವನಗಳೆಂದರೆ ನಿಶೆ-ಉಷೆ, , ಋತುಗಳ ಸಿಂಗಾರಿ, ವಸುಧೆಯ ಸೀಮಂತ , ಸಂಜೆಯ ರಂಗಿಗೆ, ಅರುಣ ಕಿರುಣ, ರಂಗೇರಿಹುದು ಅಂಬುಧಿಯಂಗಣ ಹಾಗೂ ದುಂಬಿ ನೀನು ದೂರವಿರು.

ದುಂಬಿ ನೀನು ದೂರವಿರು ಕವನದ ಕೆಲವು ಸಾಲುಗಳನ್ನು ನೋಡಿ...
"ಕಣ್ಣ ಸೆಳೆವ ರೂಪವನ್ನು
ನೋಡಿ ನೀನು ನಕ್ಕೆಯೇನು
ಸುಮ್ಮನಿರದೆ ಜೇನ ಹೀರಿ
ಹಾರಿ ಮುಂದೆ ಹೋದೆಯೇನು"
ಹೀಗೆ ದುಂಬಿಯನ್ನು ಪ್ರಶ್ನಿಸುವ ಕವಯತ್ರಿ ಕೊನೆಯಲ್ಲಿ
"ಮೆಲ್ಲ ಬಂದು ಸನ್ನೆ ಮಾಡಿ ಮಧುವ ಕುಡಿದು ಓಡದಿರು" ಎಂದು ಭ್ರಮರಕ್ಕೆ ಹೇಳುವುದು ಸೊಗಸಾಗಿದೆ.

ಕವಯತ್ರಿಯು ಕೇವಲ ಪ್ರಕೃತಿಯ ಚೆಲುವಿನ ವರ್ಣನೆಗಷ್ಟೇ ಸೀಮಿತವಾಗಿಲ್ಲ , ಬದಲಿಗೆ ಅತಿವೃಷ್ಟಿಯಿಂದಾದ ಅನರ್ಥಗಳತ್ತಲೂ ತಮ್ಮ ಚಿತ್ತ ಹರಿಸಿದ್ದಾರೆ. ಪ್ರವಾಹ ಹಾಗೂ ಸೋರುತಿದೆ ಬಾನಂಗಳ ಕವನಗಳು ಇದಕ್ಕೆ ಸಾಕ್ಷಿ ಆಗಿವೆ.
ಸೋರುತಿದೆ ಬಾನಂಗಳ ಕವನದ ಸಾಲುಗಳನ್ನು ನೋಡಿ
"ಬಾನಿನಂಗಳವೇಕೋ ತೂತಾಗಿ ಸೋರುತಿದೆ
ಮುನಿದು ನಿಂತಿಹನೇನೋ ವರುಣದೇವ" ಎಂದು ಆರಂಭವಾಗುವ ಕವನದಲ್ಲಿ ಕುಸಿದು ಕುಳಿತಿಹುದಿಲ್ಲಿ ರೈತನೊಡಲು ಎಂದು ಮರುಗುತ್ತಾರೆ.

ಆದೇ ರೀತಿ ಪ್ರವಾಹ ಕವನದಲ್ಲಿ ನಾವು ಪ್ರಕೃತಿ ಸಂರಕ್ಷಣೆಯನ್ನು ಮರೆತದ್ದೇ ಅನರ್ಥಕ್ಕೆ ಕಾರಣ ಎಂದು ಆರಂಭಿಸಿದರೂ ಕೊನೆಯಲ್ಲಿ ದೈವಕ್ಕೆ ಶರಣಾಗಿದ್ದಾರೆ.
"ಮೊರೆಯ ಕೇಳುವ ದೇವ ಮೌನದಲಿ ನೋಡುತಿಹ
ಕತ್ತಲು ತುಂಬಿದ ಜಗದ ಬವಣೆಯನ್ನು
ದಯೆತೋರಿ ಪಾರುಗಾಣಿಸು ದೇವ ನೀನಿಂದು
ಕ್ಷಮಿಸಿ ತಪ್ಪುಗಳ ಉಳಿಸು ಬದುಕನ್ನು" ಎಂಬ ಸಾಲುಗಳು ಮನೋಜ್ಞವಾಗಿವೆ.
ಇವೆರಡೂ ಅತಿವೃಷ್ಟಿ ಬಗ್ಗೆ ಆದರೆ ಮಳೆಯೇ ಬಾರದಿದ್ದಾಗ ಹಪಹಪಿಸುವ ಕಾತರಿಸುವ ಕ್ಷಣದ ಭಾವಗಳನ್ನು ಅತ್ಯಂತ ಸಮರ್ಥವಾಗಿ ಎರಡು ಕವನಗಳಲ್ಲಿ ಬಿಂಬಿಸಿದ್ದಾರೆ. ಸುಡುತಿಹುದು ಇಳೆಯ ಒಡಲು, ಹಾಗೂ ಜೀವ ಜಲ ತಣಿಯಲಿ ನೆಲ ಈ ಎರಡೂ ಕವನಗಳು ಸುಂದರವಾಗಿ ಮೂಡಿಬಂದಿವೆ..

ಪ್ರಕೃತಿಯ ಸುಂದರ ಹಂದರದಲ್ಲಿ ಕವಿಮನ ನಲಿದರೂ ಕವಿಯೂ ಮಾನವನೇ. ಎಲ್ಲರಿಗಿರುವಂತೆ ಕವಿಗಳಿಗೂ ಕೌಟುಂಬಿಕ ಜವಾಬ್ದಾರಿ ಬಾಂಧವ್ಯದ ಸೆಳೆತ ಇದ್ದೇ ಇರುತ್ತದೆ. ಇವುಗಳ ಅಭಿವ್ಯಕ್ತಿಯೂ ಕವಿತೆಗಳಲ್ಲಿ ಕಾಣುವುದು ಸಹಜ. ಈ ಹಿನ್ನೆಲೆಯಲ್ಲಿ ಪುಟ್ಟಪೋರಿ, ಅಪ್ಪ ಮಗಳ ಮಾತುಕತೆ, ಮುದ್ದುಕಂದ , ಮದುವೆ ಕವನಗಳು ಮನೋಜ್ಞವಾಗಿ ಮೂಡಿಬಂದಿವೆ. ಕವನದ ಹುಮ್ಮಸ್ಸಿನಲ್ಲಿ ಇದ್ದಾಗ ಅಡುಗೆಮನೆಯಲ್ಲಿ ಕವಯತ್ರಿಗೆ ಆಗಬಹುದಾದ ಅವಘಡವನ್ನು. ಕಲ್ಪಿಸಿಕೊಂಡು ಹಾಸ್ಯಮಯವಾಗಿ ಕವನ ಕಟ್ಟಿರುವುದು ವಿಶೇಷವಾಗಿದೆ.

ಹೋಳಿಹಬ್ಬ ಊರ ಜಾತ್ರೆಯ ಸಂಭ್ರಮ ಕಾರಂತಜ್ಜನ ನೆನಪಿನಲ್ಲಿ ಬರೆದ ಗೀತೆಗಳು ಉತ್ತಮವಾಗಿ ಮೂಡಿವೆ. ಯೋಧನಮನ, ರೈತಗೀತೆ ಕೃಷ್ಣಲೀಲೆ ಈ ಕೃತಿಯ ಉಲ್ಲೇಖನಾರ್ಹ ಕವನಗಳು.

ರಮ್ಯತೆಯ ಜಾಡಿನಲ್ಲಷ್ಟೇ ವಿಹರಿಸದೆ ಸಮಾಜಕ್ಕೆ ಸಂದೇಶ ನೀಡುವ ಮೌಲ್ಯಯುತ ಕವನಗಳನ್ನೂ ಇಲ್ಲಿ ಕಾಣಬಹುದು. ಉದಾಹರಣೆಗೆ ಛಲದಿಂದ ಸಾಗು, ವ್ಯಸನದ ಬದುಕು ಹಗಲುಗನಸು ಕವನಗಳು.

ಕನಸುಗಳೇ ಇಲ್ಲದೆ ಬದುಕಿನಲ್ಲಿ ಯಾವುದೇ ಸಾಧನೆ ಸಾಧ್ಯವಿಲ್ಲ. ಆದರೆ ನನಸಾಗದ ಕನಸಿನ ಮಹಲಲಿ ಕಾಲ ಕಳೆವುದು ವ್ಯರ್ಥ. ವಾಸ್ತವವನ್ನು ಅರಿತು ನಡೆಯಬೇಕು ಎಂಬುದನ್ನು ಲೇಖಕಿ ಮನೋಜ್ಞವಾಗಿ ಹೇಳಿದ್ದಾರೆ.
ಈ ಕವನದ ಕೆಲವು ಸಾಲುಗಳನ್ನು ನೋಡಿ
ನನಸೇ ಆಗದ ಕನಸ ಮಹಲಲಿ
ಸಮಯವೇತಕೆ ಕಳೆಯುವೆ

ವ್ಯರ್ಥ ಮಾಡುವ ಹೊತ್ತಿನಲ್ಲಿಯೇ
ಕಟ್ಟಬೇಕಿದೆ ಭವಿಷ್ಯವ
ಮತ್ತೆ ಹುಡುಕುತ ತಿರುಗಿ ಬಂದರೆ
ಅಲ್ಲಿ ಕಂಡಿಹೆ ಶೂನ್ಯವ..|
ಜಗದ ಸತ್ಯದ ದಾರಿಯಲ್ಲಿಯೇ
ಇರಲಿ ನಿನ್ನಯ ಹೆಜ್ಜೆಯು..||
ಸರಳ ಶಬ್ದಗಳಲ್ಲಿ ಉತ್ತಮ ಸಂದೇಶ ಸಾರುವ ಇಂತಹ ಹಲವಾರು ಕವಿತೆಗಳು ಈ ಕವನಸಂಕಲನದಲ್ಲಿವೆ. ಇಂತಹ ಕೃತಿಯನ್ನು ರಚಿಸಿದ ಲೇಖಕಿಗೆ ಮತ್ತೊಮ್ಮೆ ಅಭಿನಂದನೆಗಳು. ಭುವನೇಶ್ವರಿಯ ಕೃಪೆಯಿಂದ ಮತ್ತಷ್ಟು ಕೃತಿಗಳು ಹೊರಬರಲಿ ಯಶಸ್ಸಿನ ಹಾದಿಯಲ್ಲಿ ಪಯಣ ಸಾಗಲಿ ಎಂದು ಹಾರೈಸುತ್ತಾ ನನ್ನ ಮಾತುಗಳನ್ನು ಮುಗಿಸುವೆ.

- ಪದ್ಮನಾಭ. ಡಿ.
ಡಿ. ಪದ್ಮನಾಭ ಅವರ ಲೇಖಕ ಪರಿಚಯ...

MORE FEATURES

ಲೇಖಕಿಯ ನೈಜ ಬದುಕಿನ ಬಾಲ್ಯದ ಅನಾವರಣವಿಲ್ಲಿದೆ

03-12-2024 ಬೆಂಗಳೂರು

"ಎಳವೆಯಲ್ಲಿಯೇ ತಂದೆಯನ್ನು ಅನಿರೀಕ್ಷಿತವಾಗಿ ಕಳೆದುಕೊಂಡು ತಾಯಿ, ತಮ್ಮನ ಜೊತೆ ತಾಯಿಯ ತಾಯಿಯ ಅಂದರೆ ಅಜ್ಜಿಮನೆ-ಸಂ...

ಇಲ್ಲಿನ ಬಹುತೇಕ ಪುಟ್ಟ ಕಥೆಗಳು ಯಾವುದೋ ಸಂಗತಿಯೇನೋ ಎಂಬಷ್ಟು ಸಹಜವಾಗಿವೆ

03-12-2024 ಬೆಂಗಳೂರು

"ಲೇಖಕಿ ಅಶ್ವಿನಿ ಸುನಿಲ್ ಅವರು ವಾರದ ಹಿಂದೆ ತಮ್ಮ ಈ ಹೊಸ ಕೃತಿಯ ಬಗ್ಗೆ ಪುಸ್ತಕ ಅವಲೋಕನ ಬಳಗದಲ್ಲಿ ಪೋಸ್ಟ್ ಹಾಕಿ...

ಶರಣರು ಮೊದಲು ನಡೆದರು ನಂತರ ನುಡಿದರು

03-12-2024 ಬೆಂಗಳೂರು

“ಬೆಳೆವ ಸಿರಿ ಮೊಳಕೆಯಲ್ಲೇ ನೋಡು ಎಂಬಂತೆ ಶ್ರೀ ರೇವಣಸಿದ್ದಯ್ಯ ಹಿರೇಮಠರವರಿಗೆ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ ಸ...