ಗನ್ನೇರಿ ಎಂಬುದು ಒಂದು ಹೂವಿನ ಹೆಸರು. ಕವಿಗಳು ಬಣ್ಣಿಸಿ ಹೆಸರು ತಂದುಕೊಟ್ಟಿರುವ ಹೂವಲ್ಲ. ಒಂದು ಸಾಮಾನ್ಯ ಹೂ. ಕಣಿಗಲೆ ಎಂಬ ಹೆಸರೂ ನಾಡಿನ ಬೇರೆಕಡೆ ಇದೆ. ಈ ಹೂವಿನ ಹೆಸರಿನ ಗನ್ನೇರಿ ಎಂಬಾಕೆಯ ಹುಟ್ಟಿನಿಂದ ಹಿಡಿದು ಅವಳ ಬದುಕಿನ ಒಂದು ಘಟ್ಟದವರೆಗಿನ ಘಟನೆಗಳನ್ನು ಇಲ್ಲಿ ನಿರೂಪಿಸಲಾಗಿದೆ ಎಂಬುದು ಲೇಖಕ ಕೆ.ವಿ.ನಾರಾಯಣ ಅವರ ಮಾತು. ಲೇಖಕ ಸ. ರಘುನಾಥ ಅವರ ಗನ್ನೇರಿ ಎಂಬ ಸಂಕಲನದ ಬಗೆಗೆ ಅವರು ಬರೆದ ಲೇಖನ ನಿಮ್ಮ ಓದಿಗಾಗಿ..
ತಾ ಬರೆದ ಕವಿಗ್ವಿ ತನ್ನ ಮಿತಿ ಸೆರೆಯ ಆಚೆ
ನಡೆವುದನು ಕಾಂಬ ಭಾಗ್ಯ ಒದಗುವುದು ಕವಿಗೆ
ಜನುಮಾಂತರಗಳ ಪುಣ್ಯ ಅನಿಸಿ
ಕೈ ಮುಗಿದು ನಿಂತ ಕವಿತೆಗೆ.
ಇದು ಗನ್ನೇರಿ ಕವಿತೆಯ ಕೊನೆಯ ಸಾಲುಗಳು. ಈ ಸಾಲುಗಳಲ್ಲಿ ಅಡಕಗೊಂಡ ಭಾವ ಕವಿಯದ್ದು ಮಾತ್ರವಾಗದೇ ಓದುಗರದ್ದೂ ಆಗುವುದೆಂದು ನನಗೆ ಅನ್ನಿಸಿತು. ಈ ಮುಂದೆ ಬರೆಯಲಿರುವ ಕೆಲವು ಮಾತುಗಳು ಈ ಕಾವ್ಯವನ್ನು ಓದಿದ ಮೇಲೆ ನನಗೆ ಅನಿಸಿದ ಭಾವನೆಗಳನ್ನು, ವಿಚಾರಗಳನ್ನು ನನ್ನ ಸಹ ಓದುಗರೊಡನೆ ಹಂಚಿಕೊಳ್ಳುವ ಉದ್ದೇಶವನ್ನು ಹೊಂದಿವೆ. ಇದು ಕಾವ್ಯದ ವಿಮರ್ಶೆಯಲ್ಲ.
ಕೆಲವು ವಾರಗಳ ಹಿಂದೆ ಕವಿ ರಘುನಾಥ್ ತಾವು ಬರೆದಿರುವ ಖಂಡ ಕಾವ್ಯವೊಂದನ್ನು ಓದಲು ಬಿಡುವಿದೆಯೇ ಎಂದು ಕೇಳಿದರು. ನಾನು ಓದುವೆನೆಂದಾಗ ಅದರ ಗಣಕ ಪ್ರತಿಯನ್ನು ನನಗೆ ರವಾನಿಸಿದರು. ತೆರೆದು ನೋಡಿದರೆ ಸುಮಾರು ಇನ್ನೂರೈವತ್ತು ಪುಟಗಳಷ್ಟು ದೊಡ್ಡದಿತ್ತು. ಓದುವ ತಾಳ್ಮೆ ನನಗೆ ಇದ್ದೀತೇ ಎಂಬ ಅಳುಕಿನೊಂದಿಗೆ ಓದಲು ತೊಡಗಿದೆ. ಮೊದಲ ಕೆಲವು ಚರಣಗಳನ್ನು ಓದುವಷ್ಟರಲ್ಲಿ ಕನ್ನಡದ ಬಲವಾದ ಕಾವ್ಯ ನಿರೂಪಣೆಯ ಪರಂಪರೆಯೊಡನೆ ಈ ಕವಿತೆ ನಂಟು ಬೆಳೆಸಿದೆ ಎನಿಸತೊಡಗಿತು. ಕೆ.ಎಸ್.ನ, ಸು.ರಂ. ಎಕ್ಕುಂಡಿಯವರ ಹಲವು ಕವಿತೆಗಳ ನಿರೂಪಣೆಯ ಬಗೆ ನೆನಪಿಗೆ ಬರತೊಡಗಿತು. ಬಿಡದೆ ಓದಿದೆ. ಓದಿದ ಮೇಲೆ ನಿಡುಗಾಲದ ಬಳಿಕ ಕವಿತೆಯೊಂದು ಹೀಗೆ ಆವರಿಸಿಕೊಳ್ಳುವ ಅನುಭವವನ್ನು ಮರಳಿ ಪಡೆದೆ. ಮೊದಲಿಗೆ ಈ ಕವಿತೆಯನ್ನು ನನ್ನ ಕನ್ನಡದಲ್ಲಿ ಬರೆದ ಕವಿಗೆ ನಮಸ್ಕಾರ.
ಏಕೆ ಈ ಕವಿತೆ ನನ್ನನ್ನು ಇಷ್ಟೊಂದು ಸೆಳೆಯಿತು ಎಂದು ಯೋಚಿಸಲು ತೊಡಗಿದೆ. ಇದರಲ್ಲಿ ನಾವು ದಿನದಿನವೂ ಓದುವ ಕವಿತೆಗಳಲ್ಲಿ ಎದುರಾಗುವ ಸಾಂಕೇತಿಕತೆ ಇಲ್ಲ; ರೂಪಕತೆ ಇಲ್ಲ; ನಮ್ಮನ್ನು ತೀವ್ರವಾಗಿ ಯೋಚಿಸಲು ಹಚ್ಚುವ ವೈಚಾರಿಕತೆ ಇಲ್ಲ; ಕೊನೆಗೆ ಬರೆಯುತ್ತಿರುವ ಕವಿಯು ತನ್ನದೇ ಆದ ವಿಶಿಷ್ಟ ಎನಿಸುವ ಯಾವ ಸ್ವಂತ ಅನುಭವವನ್ನಾಗಲೀ ನಮ್ಮ ಜೊತೆ ಹಂಚಿಕೊಳ್ಳಲು ಈ ಕವಿತೆಯನ್ನು ಬರೆದಿದ್ದಾರೆಂದು ಅನಿಸುವಂತಿಲ್ಲ. ಹೀಗಾಗಿ ಸಾರಾಸಗಟಾಗಿ ಇದೊಂದು ಕವಿತೆಯೇ ಅಲ್ಲವೆಂದು ತಳ್ಳಿಹಾಕಲು ಹಲವು ಹತ್ತು ಕಾರಣಗಳಿವೆ. ಹಾಗಿದ್ದರೂ ಇದೇಕೆ ತನ್ನತ್ತ ನಮ್ಮನ್ನು ಸೆಳೆಯುತ್ತಿದೆ?
ಇಲ್ಲಿರುವ ನಿರೂಪಣೆಯ ಬಗೆಯೇ ಈ ಸೆಳೆತಕ್ಕೆ ಕಾರಣವೆಂದು ನನಗೆ ಅನ್ನಿಸುತ್ತಿದೆ. ಇಲ್ಲಿ ಕವಿ ತನ್ನ ಅನುಭವವನ್ನು ಇಲ್ಲವೇ ತಾನು ಇತರರಿಂದ ಕೇಳಿದ ಅನುಭವವನ್ನು ನಮಗೆ ಕಟ್ಟಿಕೊಡುತ್ತಿಲ್ಲ. ಕವಿ ಮತ್ತು ಓದುಗರಿಬ್ಬರೂ ಏಕಕಾಲಕ್ಕೆ ಒಂದು ಅನುಭವವನ್ನು ಕಟ್ಟಿಕೊಳ್ಳುತ್ತಿರುವಂತೆ ತೋರುತ್ತದೆ. ಕನ್ನಡ ಕಾವ್ಯ ಪರಂಪರೆಯಲ್ಲಿ ಕಥಿಸುವ ಹಲವು ಬಗೆಗಳಿವೆ. ತಾನು ಬಲ್ಲ ಕಥೆಯೊಂದನ್ನು ಕೇಳುಗರಿಗಾಗಿ, ಓದುಗರಿಗಾಗಿ ಮರಳಿ ಹೇಳುತ್ತಿರುವುದಾಗಿ ಕವಿಗಳು ತಮ್ಮ ನಿಲುವನ್ನು ಗುರುತಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಕವಿಗೆ ತಾನು ನಿರೂಪಿಸಬೇಕಾದ ಕಥೆಯೊಂದು ಮೊದಲೇ ಗೊತ್ತಿದೆ ಎಂಬ ನಿಲುವಾಗಲೀ ನಂಬಿಕೆಯಾಗಲೀ ಇದ್ದಂತಿಲ್ಲ. ಕವಿತೆಯ ಬೆಳವಣಿಗೆಯೊಡನೆ ಕಥೆಯೂ ಒಡಮುರಿದೇಳುತ್ತದೆ. ಕವಿ, ಓದುಗರಿಬ್ಬರ ಸಮಕ್ಷಮದಲ್ಲಿ ಕಥನದೊಡನೆ ಕಥೆಯೂ ಆಕಾರ ಪಡೆಯುತ್ತಿರುವಂತಿದೆ. ಈ ಬಗೆ ಹೊಸದು. ಇಲ್ಲಿ ಮರುಕಥನ, ಮರು ನಿರೂಪಣೆಯಿಲ್ಲ. ಹೊಸತೊಂದು ಕಥನವನ್ನು ಕವಿ ಮತ್ತು ಓದುಗರಿಬ್ಬರೂ ಒಮ್ಮೆಗೇ ಕಾಣುತ್ತಿದ್ದಾರೆ.
ಇಲ್ಲೊಂದು ಕಥೆ ಇದೆ. ಇದು ಗನ್ನೇರಿ ಎಂಬ ಹೆಣ್ಣಿನ ಕತೆ. ಗನ್ನೇರಿ ಎಂಬುದು ಒಂದು ಹೂವಿನ ಹೆಸರು. ಕವಿಗಳು ಬಣ್ಣಿಸಿ ಹೆಸರು ತಂದುಕೊಟ್ಟಿರುವ ಹೂವಲ್ಲ. ಒಂದು ಸಾಮಾನ್ಯ ಹೂ. ಕಣಿಗಲೆ ಎಂಬ ಹೆಸರೂ ನಾಡಿನ ಬೇರೆಕಡೆ ಇದೆ. ಈ ಹೂವಿನ ಹೆಸರಿನ ಗನ್ನೇರಿ ಎಂಬಾಕೆಯ ಹುಟ್ಟಿನಿಂದ ಹಿಡಿದು ಅವಳ ಬದುಕಿನ ಒಂದು ಘಟ್ಟದವರೆಗಿನ ಘಟನೆಗಳನ್ನು ಇಲ್ಲಿ ನಿರೂಪಿಸಲಾಗಿದೆ. ಈ ಕಥನದಲ್ಲಿ ಹಲವು ಪಾತ್ರಗಳು ಬಂದು ಹೋಗುತ್ತವೆ. ಇಡೀ ನಿರೂಪಣೆಯಲ್ಲಿ ಕಾಲಾನುಕ್ರಮಣಿಕೆ ಇದ್ದರೂ ಇಲ್ಲಿ ಯಥಾವತ್ತಾದ ನಿರೂಪಣೆ ಎಂಬುದಿಲ್ಲ. ಬದಲಿಗೆ ಪ್ರತಿ ಸನ್ನಿವೇಶವನ್ನೂ ತನ್ನಲ್ಲೇ ತಾನು ಮುಗಿತಾಯ ಕಾಣುವ ಹಾಗೆ ಚಿತ್ರಿಸಲಾಗಿದೆ. ಘಟನೆಗಳು ಕಾರ್ಯಕಾರಣ ಸಂಬAಧದಿAದ ಮುಂದುವರೆಯುವ ಕ್ರಮ ಇಲ್ಲಿಲ್ಲ. ಇದು ಕನ್ನಡ ಕಾವ್ಯ ಪರಂಪರೆಯಲ್ಲಿ ಕಾಣುವ ವರ್ಣಕ ಕಾವ್ಯಗಳ ದಾರಿಯನ್ನು ಅನುಸರಿಸಿದೆ. ಜೊತೆಗೆ ಬಾಯ್ದೆರೆಯ ಕಾವ್ಯಗಳ ಹಾದಿಯನ್ನೂ ಜೊತೆಗಿರಿಸಿಕೊಂಡಿದೆ. ಇವೆಲ್ಲವೂ ಕೇಳುಗಬ್ಬಗಳು ಇಲ್ಲವೇ ನೋಡುಗಬ್ಬಗಳು. ನೋಡುವವರಿಗೆ ಇಲ್ಲವೇ ಕೇಳುವವರಿಗೆ ಕಥೆ ಗೊತ್ತಿರುತ್ತದೆ. ಕಥನದಲ್ಲೂ ಹೊಸತನ ಇರುತ್ತದೆ ಎಂದೇನಲ್ಲ. ಆದರೆ ನಿರೂಪಣೆಯು ಈಗ ಮತ್ತು ಇಲ್ಲಿ ಮೈದಳೆಯುವ ಬಗೆಯಷ್ಟೇ ಅವರಿಗೆ ಮುಖ್ಯವಾಗಿರುತ್ತದೆ. ಗನ್ನೇರಿ ಎಂಬ ಈ ಕಾವ್ಯವೂ ಇದೇ ಹಾದಿಯನ್ನು ಹಿಡಿದಿದೆ. ಆದರೆ ಇಲ್ಲಿ ಓದುವವರಿಗೆ (ಅವರು ಕೇಳುವವರಾಗಬೇಕು ಎಂಬುದು ನನ್ನ ಬಯಕೆ) ಕಥೆಗೊತ್ತಿಲ್ಲ. ಕಥೆ ಕೂಡ ಕಥನದೊಡನೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಹೊಸಗಾಲದ ಓದುಗರು ಕಥೆಯ ಗತಿಯನ್ನು ಊಹಿಸುತ್ತಾರಾದರೂ ಅದು ಕಾವ್ಯಕ್ಕೆ ಅಗತ್ಯವಾದ ಶರತ್ತೇನಲ್ಲ. ಅಲ್ಲದೆ ಅದು ಮೊದಲೇ ಹೇಳಿದಂತೆ ಕಾರ್ಯಕಾರಣ ಸಂಬAಧದ ನೆಲೆಯಲ್ಲಿ ಚಲಿಸುವುದೇ ಇಲ್ಲ. ಕಥೆಯ ಆಯಾ ಭಾಗಗಳನ್ನು ತನ್ನಲ್ಲೇ ಪರಿಪೂರ್ಣವೆಂಬಂತೆ ಬಣ್ಣಿಸುವುದು ಇಲ್ಲಿನ ದಾರಿ.
ಈ ಕಥನ ತನ್ನಲೇ ಸಡಗರವನ್ನು ಮೈದುಂಬಿಕೊAಡಿದೆ. ಇಲ್ಲಿ ನಲಿವು ಇರುವಂತೆ ನೋವೂ ಇದೆ. ಹಳತು ಇರುವಂತೆ ಹೊಸತೂ ಇದೆ. ದುಡಿಮೆ ಇರುವಂತೆ ಬಿಡುವೂ ಇದೆ. ಬದುಕಿನ ಎಲ್ಲ ಲಯಗಳನ್ನೂ ಸಡಗರಿಸಿ ಹೇಳುವ ಹಂಬಲ ಇಲ್ಲಿದೆ. ಅದಕ್ಕೆ ತಕ್ಕ ನುಡಿಗಟ್ಟನ್ನು, ಲಯಗಳನ್ನು ಕವಿ ಹುಡುಕಿ ಅಳವಡಿಸಿಕೊಂಡಿದ್ದಾರೆ. ಕನ್ನಡ ಮಾತಿನ ಸಹಜ ಲಯಗಳ ಜೊತೆಗೆ ಹಾಡುಗಳ ಲಯಗಳನ್ನು ಬೆರಸಿ ನಿರೂಪಿಸಿದ್ದಾರೆ. ಸಂಪAಗಿ ಹಾಡುವ ಕವಿತೆಗಳಿರಲಿ, ಮೇಲೂರಮ್ಮನ ಧಾಟಿಗಳಿರಲಿ ಎಲ್ಲವೂ ಹದವಾಗಿ ಬೆರೆತಿವೆ. ಕೋಲಾರ ಜಿಲ್ಲೆ ಮತ್ತದರ ಆಸುಪಾಸಿನ ಸಮುದಾಯದಲ್ಲಿ ನೆಲೆಗೊಂಡಿರುವ ಹಲವಾರು ನಿರೂಪಣೆಯ ಧಾಟಿಗಳು ಇಲ್ಲಿ ಮತ್ತೆ ಮೈದಳೆದಿವೆ. ಹಾಗೆಯೇ ನುಡಿ ಬೆರಕೆಯೂ ಕೂಡ. ಕನ್ನಡ ತೆಲುಗು ಎರಡೂ ನುಡಿಗಳು ಸಮುದಾಯದ ದೈನಿಕಗಳಲ್ಲಿ ಬೆರೆತ ಮಾದರಿಯಲ್ಲೇ ಇಲ್ಲೂ ಬೆರೆಯುತ್ತವೆ. ಈ ಬೆರೆಸುವಿಕೆ ಸಡಗರದೊಡನೆ ಸೇರಿರುವುದರಿಂದ ಇಲ್ಲಿ ಯಾವುದೂ ಬುದ್ಧಿಯ ಬಲದಿಂದ ಕಟ್ಟಿದುದು ಎನಿಸುವುದಿಲ್ಲ.
ಗನ್ನೇರಿ ತಾನೂ ಬದಲಾಗಬೇಕು; ಹಾಗೆಯೇ ತನ್ನ ಸುತ್ತಲಿನ ಪರಿಸರ ಮತ್ತದರಲ್ಲಿರುವ ಜನರೂ ಹೀಗೆ ಎಲ್ಲವನ್ನೂ ಬದಲಿಸಬೇಕೆಂಬ ಹಂಬಲದವಳು. ಕಲಿಯಲು ಎಲ್ಲ ದಾರಿಗಳೂ ತೆರೆದಿರಬೇಕೆಂಬ ಬಯಕೆಯವಳು. ಶಾಲೆ ಕಾಲೇಜುಗಳಲ್ಲಿ ಕಲಿಯುವ ಹಾಗೆಯೇ ಜೇನು ಪೆದ್ದನ್ನನಿಂದ, ಮೇಲೂರಮ್ಮನಿಂದ, ಸೆಲ್ವಿ, ಪೊನ್ನುಸಾಮಿಯವರಿಂದಲೂ ಕಲಿಯಲು ಮುಂದಾಗುವವಳು. ಜೊತೆಗೆ ಹಕ್ಕುಗಳಿಗಾಗಿ ಹೋರಾಡುವವಳು. ಈ ಹೋರಾಟ ಕೇವಲ ತನ್ನ ಹಕ್ಕುಗಳಿಗಾಗಿ ಮಾತ್ರವಲ್ಲ; ತನ್ನ ಜೊತೆಯವರ ಹಕ್ಕುಗಳಿಗಾಗಿಯೂ ಹೋರಾಡುತ್ತಾಳೆ. ಅದಕ್ಕಾಗಿ ಯಾವ ಅಪಾಯಕ್ಕಾದರೂ ತನ್ನನ್ನು ಒಡ್ಡಿಕೊಳ್ಳಲು ಸಿದ್ಧವಿರುವವಳು. ಅಧಿಕಾರ ಕೇಂದ್ರ, ಪೋಲಿಸು ಎಲ್ಲಕ್ಕೂ ಸವಾಲುಗಳನ್ನೆಸೆದು ನಿಲ್ಲುವವಳು. ತಾನೂ ಬೆಳೆಯುತ್ತಾ ತನ್ನ ಜೊತೆಯಲ್ಲಿರುವವರನ್ನೂ ಒಟ್ಟಾಗಿ ಕರೆದೊಯ್ಯ ಬಲ್ಲವಳು. ಅವಳ ಹೋರಾಟಗಳು ಯಾವುದೇ ವೈಚಾರಿಕ ತರಬೇತುಗಳಿಂದ ಹುಟ್ಟಿದವುಗಳಲ್ಲ; ಬದುಕನ್ನು ಹಸನುಗೊಳಿಸಬೇಕೆಂಬ ಹಂಬಲದಿಂದ ರೂಪುಗೊಂಡಂಥವು. ಇತರಿಗಾಗಿ ತಾನು ಹೋರಾಡುವುದನ್ನು ಬಳಸಿಕೊಂಡು ತನ್ನ ವ್ಯಕ್ತಿತ್ವವನ್ನು ಮುಂಚೂಣಿಗೆ ತರಲು ಅವಳು ಬಯಸುವುದಿಲ್ಲ. ಅವಳು ಕಟ್ಟುವ ಕೂಲಿಕಾರರ ಸಂಘದ ನಾಯಕಿಯಾಗಿ ನಿಲ್ಲುವುದಿಲ್ಲ. ಅವಳ ಪ್ರಯತ್ನಗಳಿಂದಾಗಿ ಕೂಲಿಗಾಗಿ ಎಲ್ಲಿಂದಲೋ ಬಂದ ಸೆಲ್ವಿ, ಪೊನ್ನುಸಾಮಿ, ವೇಲಾಯುಧನ್ನರು ತಮ್ಮ ದುಡಿಮೆಗೆ ಹೆಚ್ಚಿನ ಫಲವನ್ನು ಪಡೆಯುವ ದಾರಿಯನ್ನು ಕಂಡುಕೊಳ್ಳುತ್ತಾರೆ. ಅವರಿಗೆ ಆ ದಾರಿಯನ್ನು ತೋರಿಸಿಕೊಡುತ್ತಲೇ ತಾನೂ ಅವರೊಡನೆ ದುಡಿದು ತನ್ನಲ್ಲಿ ಇಲ್ಲದ ಹೊಸ ಕೌಶಲವನ್ನು ಪಡೆದುಕೊಳ್ಳುತ್ತಾಳೆ.
ಅವಳಿಗೆ ಇಂದು ಮತ್ತು ನಿನ್ನೆಗಳು ಜೊತೆಜೊತೆಯಾಗಿಯೇ ಇರುವಂತೆ ತೋರುತ್ತದೆ. ಹಾಗೇ ಬೆಳೆಯುತ್ತಾಳೆ. ನಿನ್ನೆಗಳು ಜನರು ಹಾಡುವ ಹಾಡುಗಳಲ್ಲಿ, ಮೇಲೂರಮ್ಮ, ಜೇನು ಪೆದ್ದನ್ನನಂಥವರು ತಿಳಿವಿನ ವಲಯದಲ್ಲಿ ಅವಳಿಗೆ ದೊರಕುತ್ತಿರುತ್ತದೆ. ಈ ಹೊತ್ತಿನ ತಿಳುವಳಿಕೆಯು ಓದು, ಒಡನಾಟ, ಹೋರಾಟಗಳಿಂದ ಒದಗಿ ಬರುತ್ತದೆ. ಹಳತನ್ನು ಅದರ ಹಳೆತನಕ್ಕಾಗಿ ಮೆಚ್ಚುತ್ತಾ ಕೂರುವವಳಲ್ಲ. ಬದಲಿಗೆ ಅದರೊಡನೆ ಇರುವ ಜೀವನ ದರ್ಶನವನ್ನು ಕಂಡುಕೊಳ್ಳಲು ಯೋಜಿಸುತ್ತಾಳೆ. ಹಳಹಳಿಕೆ ಮತ್ತು ಭಾವುಕತೆಗಳನ್ನು ಮೀರಿದ ಒಂದು ನೆಲೆಯಲ್ಲಿ ಹಳತಿನೊಡನೆ ವ್ಯವಹರಿಸಬಲ್ಲ ಬಗೆಯೊಂದನ್ನು ಗನ್ನೇರಿ ಕಂಡುಕೊಂಡಿದ್ದಾಳೆ. ಕಾಮ್ರೇಡ್ ಗೀತಾಳ ನಿರ್ಮಮತೆ ಮತ್ತು ಲೋಲಾಕ್ಷಿಯ ಭಾವುಕತೆಗಳ ನಡುವಣ ಬಿಂದುವಿನಲ್ಲಿ ನಿಲ್ಲುತ್ತಾಳೆ; ಹಾಗೆಯೇ ವ್ಯವಹರಿಸುತ್ತಾಳೆ.
ಗನ್ನೇರಿಯ ಹೊರ ಚಹರೆಗಳಲ್ಲಿ ಗೆಳೆಯರೊಡನೆ, ಹಿರಿಯರೊಡನೆ, ದುಡಿಯುವವರೊಡನೆ, ಅಧಿಕಾರಿಗಳೊಡನೆ, ಪೋಲಿಸರೊಡನೆ ವ್ಯವಹರಿಸುವ ಬಗೆಗಳು ಒಡಮೂಡಿವೆ. ಆದರೆ ಹೊರಜಗತ್ತಿನ ಯಾರಿಗೂ ಕಾಣದ ಒಂದು ಒಳಜಗತ್ತು ಅವಳ ಒಳಗಡೆ ಇದೆ ಎಂಬುದು ಅವಳೊಡನೆ ಇರುವವರಿಗೂ ಗೊತ್ತಾಗುವುದಿಲ್ಲ; ಕಥನವನ್ನು ಕೇಳುತ್ತಿರುವ ನಮಗೂ ಅದರ ಸೂಚನೆ ಸಿಗುವುದಿಲ್ಲ. ಈ ಒಳಜಗತ್ತು ಇದೆಯೆಂಬುದು ಓಬಳೇಶನ ಪ್ರವೇಶದೊಂದಿಗೆ ಗೋಚರವಾಗಲು ತೊಡಗುತ್ತದೆ. ಇಡೀ ಕಥನಕ್ಕೆ ಹೊಸದೊಂದು ಜಿಗಿತ, ಆವರೆಗೆ ಇರದಿದ್ದ ಹೊಸ ಆಯಾಮ ದೊರಕುತ್ತದೆ. ತೆಲುಗು ಸಾಹಿತ್ಯದಲ್ಲಿ ಎಂಎ ಮಾಡಿದ, ನಾಟೀ ಮದ್ದನ್ನು ನೀಡುವ, ಕಿನ್ನರಿ ನುಡಿಸುವ ಓಬಲೇಶನೆಂಬುವವನು ಗನ್ನೇರಿಯ ಅಪ್ಪ ಸಂಪಂಗಿಯ ರೋಗಕ್ಕೆ ಮದ್ದು ನೀಡುತ್ತಲೇ ಗನ್ನೇರಿಯಲ್ಲಿ ಅಡಗಿದ್ದ ಕೊರೆ ಹೊರಬರುವಂತೆ ಮಾಡುತ್ತಾನೆ. ಅವನು ಬಿಟ್ಟು ಹೋದ ತಂಬೂರಿಯನ್ನು ಹಿಡಿದು ಧೇನಿಸುತ್ತ ಗನ್ನೇರಿ ಒಳಮುಖಿಯಾಗುತ್ತಾಳೆ. ಅವಳ ಮನೆಯಲ್ಲಿದ್ದ ಸೋರೆ ಬುರುಡೆಯನ್ನು ಆತ ಕೇಳಿ ಪಡೆದುಕೊಂಡು ಹೋಗುತ್ತಾನೆ. ಗನ್ನೇರಿಗಾಗಿ ಓಬಳೇಶನನ್ನು ಹುಡುಕಲು ಅವಳ ಗೆಳೆಯರು ಹೊರಡುತ್ತಾರೆ. ಅವನನ್ನು ಹುಡುಕಿಕೊಂಡು ಅವನ ಊರಿಗೆ ಹೋದಾಗ ಅಲ್ಲಿ ಅವನ ಮನೆಯಲ್ಲಿ ಅವನ ತಾಯಿಯಿಂದ ಅವನು ಇಲ್ಲವಾದ ಸುದ್ದಿ ತಿಳಿಯುತ್ತದೆ. ಈ ಸುದ್ದಿಯನ್ನು ಗನ್ನೇರಿಗೆ ತಿಳಿಸಬೇಕಾದ ಇಕ್ಕಟ್ಟಿನಲ್ಲಿ ಗೆಳೆಯರು ಇರುವಾಗಲೇ ಇದ್ದಕ್ಕಿದ್ದಂತೆ ಗನ್ನೇರಿ ಊರುತೊರೆದು ಹೊರಟು ಬಿಡುತ್ತಾಳೆ. ಅವಳ ಹುಡುಕಾಟದ ದಾರಿಗಳನ್ನು ಅವಳ ಗೆಳೆಯರು ಮರಳಿ ಕಾಣಲು ಯತ್ನಿಸುತ್ತಾರೆ. ಅವಳ ಕೊನೆ ಹೇಗಾಗಿರಬಹುದು ಎಂಬ ಕುರಿತು ಅವರು ತಮ್ಮದೇ ಆದ ಬಗೆಯಲ್ಲಿ ಯೋಚಿಸುತ್ತಿರುತ್ತಾರೆ. ಅವಳು ಇನ್ನು ಬರಲಾರಳು ಎಂದುಕೊಳ್ಳುವ ಹೊತ್ತಿಗೆ ಬಲದ ಕೈ ಹೆಬ್ಬೆರಳು ಇಲ್ಲದ ಗನ್ನೇರಿ ಮನೆಗೆ ಬಂದು ಮಾವಿನ ಸಸಿಗಳಿಗೆ ನೀರೆರುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾಳೆ. ಅಮೂರ್ತದ ಬೆನ್ನು ಹೋಗಿ ಮರುಭೂಮಿಯಲ್ಲೋ ಕದಳಿಯ ವನದಲ್ಲೋ ಮರೆಯಾಗಿ ಹೋದ ಮೀರಾ ಮತ್ತು ಅಕ್ಕ ಇವರ ದಾರಿಗಿಂತ ಬೇರೆಯದೇ ನೆಲೆಯಲ್ಲಿ ನಿಲ್ಲುತ್ತಾಳೆ. ಹೊರಗಿನ ಕರೆಯನ್ನು ಮೆಟ್ಟಿ ನಿಲ್ಲುವ ಬದುಕಿನ ಒಳಕರೆಗೆ ಕಿವಿಗೊಡುತ್ತಾಳೆ. ಗನ್ನೇರಿಯ ಬದುಕಿನ ಈ ಗತಿಶೀಲತೆಯು ಅಪರೂಪದ್ದು. ಹಾಗಾಗಿಯೇ ಓದುಗ/ಕೇಳುಗರಿಗೆ ಆಪ್ತವಾಗುವ ಪಾತ್ರವಿದು ಎನ್ನುವುದು ನನ್ನ ತಿಳುವಳಿಕೆ.
ಈ ಕಾವ್ಯದಲ್ಲಿ ಬರುವ ಇತರ ವ್ಯಕ್ತಿಗಳಿಗೂ ತಂತಮ್ಮದೇ ಆದ ಹೊರಚಾಚುಗಳಿವೆ. ಸಂಪಂಗಿ, ಅಲಮೇಲಿ, ರಾಮಕ್ಕ, ಮುರಳಿಕೃಷ್ಣ. ಶಿವರಾಮ, ನರಸಿಂಹ, ಗೀತಾ, ರುಕ್ಮಿಣಿ, ಲೋಲಾಕ್ಷಿ, ಸೆಲ್ವಿ, ಪೊನ್ನುಸಾಮಿ, ಮೇಲೂರಮ್ಮ, ಜೇನು ಪೆದ್ದನ್ನ ಹೀಗೆ ಹಲವರು ಗನ್ನೇರಿಯು ರೂಪುಗೊಳ್ಳಲು ನೆರವಾಗುತ್ತಲೇ ತಂತಮ್ಮ ಬದುಕಿನ ದಾರಿಯನ್ನೂ ಆ ದಾರಿಗಳ ಗುರಿಯನ್ನು ನಮ್ಮ ತಿಳಿವಿಗೆ ತಂದುಕೊಡುತ್ತಾರೆ.
ಈ ಕಾವ್ಯದ್ದು ಸಡಗರದ ನಿರೂಪಣೆ ಎಂದೆನಷ್ಟೆ. ಸರಿಯಾದ ಪದ ದೊರೆಯದೆ ಸಡಗರ ಎಂದು ಹೇಳಿದ್ದೇನೆ. ಈ ಸಡಗರ ರಮ್ಯತೆಯ ನೆಲೆಯಲ್ಲಿ ನಿಲ್ಲುವಂತದಲ್ಲ. ಇಲ್ಲಿನ ಈ ಬಗೆಯನ್ನು ವಿವರಿಸಿಕೊಳ್ಳುವ ಅಗತ್ಯವಿದೆಯೆಂದು ತಿಳಿದಿದ್ದೇನೆ. ಈಚಿನ ಕನ್ನಡ ಕಾವ್ಯ ಪರಂಪರೆಯಲ್ಲಿ ಮತ್ತು ಕಾವ್ಯ ಚಿಂತನೆಯಲ್ಲಿ ಕವಿಗಳಲ್ಲಿ ಮತ್ತು ಕಾವ್ಯ ಚಿಂತಕರಲ್ಲಿ ವೈಚಾರಿಕತೆ ಹಾಗೂ ಜನರ ನಂಬಿಕೆಯ ಜಗತ್ತುಗಳನ್ನು ಪರಸ್ಪರ ಎದುರುಬದುರು ಇರಿಸಿ ನೋಡುವ ಬಗೆ ಮುನ್ನೆಲೆಗೆ ಬಂದಿದೆ. ಹಾಗಾಗಿ ಕವಿತೆಯಲ್ಲಿ ಯಾವುದೋ ಒಂದು ವಿಚಾರ ಪ್ರಕಟವಾಗಬೇಕೆಂಬ ಮತ್ತು ಆ ವಿಚಾರ ಒಂದು ತಾತ್ವಿಕ ಚೌಕಟ್ಟನ್ನು ಪಡೆಯಬೇಕೆಂಬ ಒತ್ತಾಯ ಮತ್ತು ಅಪೇಕ್ಷೆಗಳು ಬಲವಾಗಿವೆ. ಉದಾಹರಣೆಗೆ ನಾವೀಗ ಬಾಯ್ದೆರೆಯ ಕಾವ್ಯಗಳನ್ನು ಹೇಗೆ ಗ್ರಹಿಸುತ್ತಿದ್ದೇವೆ ಎಂಬುದನ್ನು ನೋಡಿದರೆ ನನ್ನ ಮಾತಿಗೆ ಕೊಂಚ ಪುರಾವೆ ಸಿಗಬಹುದು. ಬಾಯ್ದೆರೆಯ ಕಾವ್ಯಗಳು, ಅವುಗಳನ್ನು ಉಳಿಸಿಕೊಂಡ ಮತ್ತು ಮರಳಿ ನಿರೂಪಿಸಿಕೊಳ್ಳುತ್ತಿರುವ ಜನರ ನಂಬಿಕೆಯ ಜಗತ್ತಿಗೆ ಸೇರಿವೆ. ನಾವು ಆ ಕಾವ್ಯಗಳ ಪಠ್ಯಗಳನ್ನು ಮಾತ್ರ ನೋಡುತ್ತಾ ಅವುಗಳಲ್ಲಿರುವ ಸಾಂಕೇತಿಕತೆ, ಚಾರಿತ್ರಿಕತೆ, ಮತ್ತು ವೈಚಾರಿಕತೆಗಳನ್ನು ಕಟ್ಟುತ್ತಿದ್ದೇವೆ. ಇದು ಸರಿಯಲ್ಲ ಎಂದು ಹೇಳುವ ಉದ್ಧಟತನ ನನ್ನದಲ್ಲ. ಆದರೆ ಎರಡು ಜಗತ್ತುಗಳು ಈಗ ಬೆರೆಯದಂತೆ ಬೇರೆಯಾಗಿವೆ. ಕಾವ್ಯಗಳನ್ನು ಕಾಯ್ದುಕೊಂಡು ಅವುಗಳನ್ನು ತಮ್ಮ ಮಾನಸಿಕ ಜಗತ್ತಿನಲ್ಲಿ ಇರಿಸಿಕೊಂಡ ಜನರ ಜಗತ್ತು ಒಂದೆಡೆ ಇದೆ. ಇನ್ನೊಂದೆಡೆ ಆ ಕಾವ್ಯಗಳ ಭಾಷಿಕ ರೂಪಗಳನ್ನು ಆಧರಿಸಿ ಒಂದು ವೈಚಾರಿಕ ಆಕೃತಿಯನ್ನು ಕಟ್ಟುತ್ತಿರುವ ಚಿಂತನೆಯ ಜಗತ್ತು ಇನ್ನೊಂದೆಡೆ ಇದೆ. ಇದರಿಂದಾಗಿ ಇಂದಿನ ಕವಿತೆಗಳು ಓದುಗರೊಡನೆ ಸಂವಾದಿಸುವಲ್ಲಿ, ಕೇಳುಗರೊಡನೆ ನಂಟು ಬೆಳೆಸುವಲ್ಲಿ ಇಕ್ಕಟ್ಟುಗಳನ್ನು ಅನುಭವಿಸುತ್ತಿವೆ. ಇದು ನನ್ನ ತಿಳುವಳಿಕೆ. ಇದರಲ್ಲಿ ತಪ್ಪು ಇದ್ದರೂ ಇರಬಹುದು. ಜನರ ನಂಬಿಕೆಯ ಜಗತ್ತಿನ ಜೊತೆಗೆ ಸಂವಾದಿಸುವಂತೆ, ಅವರ ತಿಳಿವಿನ ಲೋಕದೊಳಗೆ ಹೋಗುವಂತೆ ಕವಿತೆ ದಾರಿ ಮಾಡಿಕೊಳ್ಳುವುದು ಹೇಗೆ?
ಕೆಲವು ದಶಕಗಳ ಹಿಂದೆ ಹಾಡುಗಳ ಲಯದ ಮೂಲಕ, ಹಾಡುಗಾರಿಕೆಯ ಮೂಲಕ ಕವಿತೆಗೆ ಇದ್ದ ಬೇಲಿಗಳನ್ನು ದಾಟಲು ಯತ್ನಿಸಿದ್ದುಂಟು. ಜೊತೆಗೆ ಜನಪದರಲ್ಲಿ ಪ್ರಚಲಿತವಾಗಿರುವ ಪುರಾಣ, ಐತಿಹ್ಯಗಳನ್ನು ವಸ್ತುವಾಗಿಸಿಕೊಳ್ಳುವುದೂ ಕಂಡು ಬಂದಿತು. ಹಾಗಿದ್ದರೂ ಜನರು, ಅವರ ಜಗತ್ತು ಕಾವ್ಯದೊಳಗೆ ಜೀವತಳೆಯುವ ಬಗೆಯನ್ನು ಹುಡುಕಿದ್ದು ಕಡಿಮೆ ಎಂದೇ ಹೇಳಬೇಕು. ಭಾವಜಗತ್ತನ್ನು ದೂರೀಕರಿಸಿ ಬುದ್ಧಿಯನ್ನು ಮುಂಚೂಣಿಗೆ ತಂದದ್ದರಿಂದಲೂ ಹೀಗಾಯಿತೆನ್ನಬಹುದು. ಇದರಿಂದ ಕಳೆದುಕೊಂಡದ್ದೇನು? ವಾಸ್ತವವಾಗಿ ಇದರಿಂದಲೇ ಉತ್ತಮಕಾವ್ಯ ಹುಟ್ಟುವುದು ಸಾಧ್ಯ ಅಲ್ಲವೇ ಎಂದು ಕೇಳಬಹುದು. ಇಲ್ಲವೆನ್ನಲಾರೆ. ಆದರೆ ಕವಿತೆಗೆ ಕೇಳುಗರು ಇಲ್ಲವಾಗುತ್ತಿರುವ ದಿನಗಳನ್ನು ಬದಲಿಸಲು ಹೊಸದಾರಿಗಳನ್ನು ಕಂಡುಕೊಳ್ಳುವುದು ಅಗತ್ಯವೆಂಬ ನಂಬಿಕೆ ನನ್ನದು. ಹೀಗಾಗಬೇಕಾದರೆ ಜನರ ನಂಬಿಕೆ, ಶ್ರದ್ಧೆಯ ನಾಡಿಬಡಿತವನ್ನು ಹಿಡಿಯಲು ಕವಿಗಳು ಸಿದ್ಧರಾಗಬೇಕಾಗುತ್ತದೆ.
ಈ ಸಂಗತಿಯನ್ನು ಸ್ಪಷ್ಟಪಡಿಸಿಕೊಳ್ಳಲು ಇನ್ನೂ ಒಂದು ಉದಾಹರಣೆಯನ್ನು ನಿಮ್ಮ ಮುಂದಿಡುತ್ತೇನೆ. ಕುವೆಂಪು ಅವರು ಸೋಮನಾಥಪುರದ ದೇಗುಲವನ್ನು ಕುರಿತು ಬರೆದ ಕವಿತೆಯನ್ನು ನೆನಪಿಸಿಕೊಳ್ಳೋಣ. ಈ ಕವಿತೆಯನ್ನು ಬರೆಯುವ ಹೊತ್ತಿಗೇ ಆ ದೇಗುಲವು ದಿನದಿನದ ಪೂಜೆ ಮುಂತಾದ ಆಚರಣೆಗಳಿಲ್ಲದ ಹಂತದಲ್ಲಿದೆ. ಆದರೆ ಕವಿಗೆ ಗಂಟೆ, ಜಾಗಟೆಗಳ ದನಿ, ಮಂಗಳಾರತಿಗಳಿಲ್ಲದಿದ್ದರೂ ಅಲ್ಲಿ ಬರುವ ‘ಯಾತ್ರಿಕ’ರಿಗೆ ಭಗವಂತನ ನಿಕಟತೆಯ ಅನುಭವ ಸಾಧ್ಯವೆಂಬ ನಂಬಿಕೆಯಿದೆ. ನೆನಪಿಟ್ಟುಕೊಳ್ಳೋಣ. ಕವಿ ಆಹ್ವಾನಿಸುತ್ತಿರುವುದು ಯಾತ್ರಿಕರನ್ನು; ಪ್ರವಾಸಿಗಳನ್ನಲ್ಲ. ದೇಗುಲದ ಕಲೆಯನ್ನು ಪಾವಿತ್ರ‍್ಯದ ಹಂತಕ್ಕೆ ಕವಿ ಏರಿಸುತ್ತಾರೆ. ಆದರೆ ಇದು ದೇಗುಲಕ್ಕೆ ಬರುವವರ ಮೂಲ ಶ್ರದ್ಧೆಯನ್ನು ಪಲ್ಲಟಗೊಳಿಸಲು ನಡೆಸಿರುವ ಯತ್ನ. ದೇಗುಲದ ಗರ್ಭಗುಡಿಗೆ ‘ಸೀಮಿತ’ ವಾದ ಶ್ರದ್ಧೆಯನ್ನು ಹೊರ ಆವರಣದ ಕಲೆಯ ಬಲೆಯ ಕಡೆಗೆ ಜನರ ಆಸಕ್ತಿಯನ್ನು ಹೊರಳಿಸುವ ಯತ್ನವಿದು. ಹೀಗೆ ಮಾಡಲು ಕವಿಗೆ ಕಾರಣಗಳಿರಬಹುದು. ಆದರೆ ದಿಟವಾಗಿ ಯಾತ್ರಿಕರೂ ಆಗಿರುವವರ ಜೊತೆಯಲ್ಲಿ ದೇಗುಲವನ್ನು ನೋಡುವ ಯತ್ನದ ಅನುಭವವೇ ಬೇರೆ ಅಲ್ಲವೇ?
ಗನ್ನೇರಿ ಎಂಬ ಕಾವ್ಯ ಈ ದಿಕ್ಕಿನಲ್ಲಿ ಇಟ್ಟ ಹೆಜ್ಜೆ ಎಂದು ನನಗೆ ತೋರುತ್ತದೆ. ಇಲ್ಲಿ ಹೊಸ ತಿಳುವಳಿಕೆಯನ್ನು ದೂರವಿರಿಸಿಲ್ಲ. ಆದರೆ ಪಾತ್ರಗಳು ತಮ್ಮ ನಂಬಿಕೆಯ ಜಗತ್ತನ್ನು ತೊರೆಯುವುದಿಲ್ಲ. ಯಾವುದು ನಮ್ಮ ಬದುಕಿನ ಒಳಗಿರುವ ಕಟ್ಟಿಕೊಳ್ಳುವ ಶಕ್ತಿ ಎಂಬುದನ್ನು ಹುಡುಕುವುದೇ ಈ ಕಾವ್ಯದ ಗುರಿ. ಅದಕ್ಕಾಗಿ ಎಲ್ಲವನ್ನೂ ಸಡಗರಿಸಿ ನಿರೂಪಿಸುವ ಹಾದಿಯನ್ನು ಹಿಡಿದಿದೆ. ಇಲ್ಲಿನ ಲಯಗಳು, ನುಡಿಯ ಬಳಕೆ, ಕಥೆಯ ಸಾಮಗ್ರಿ ಎಲ್ಲವೂ ಈ ದಿಸೆಯಲ್ಲೇ ಸಾಗಿವೆ. ಅದರಿಂದಾಗಿ ನನಗೆ ಇದು ಕಾವ್ಯದ ಒಂದು ಹೊಸಹಾದಿ ಎಂದು ತೋರುತ್ತದೆ. ಈ ಹಾದಿಯಲ್ಲಿ ಹೆಜ್ಜೆ ಇಡಲು ಮುಂದಾದ ಕವಿಗೆ ನಮಸ್ಕಾರ.
- ಕೆ.ವಿ.ನಾರಾಯಣ
ಕೆ.ವಿ. ನಾರಾಯಣ ಅವರ ಲೇಖಕ ಪರಿಚಯ...
ಗನ್ನೇರಿ ಕೃತಿ ಪರಿಚಯ...
ಸ. ರಘುನಾಥ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...
"ಒಂದು ಭಾಷಿಕ ಲೋಕದಲ್ಲಿ ಈಗಾಗಲೇ ಪ್ರಚಲಿತವಾಗಿರುವ, ಆಚರಣೆಯಲ್ಲಿರುವ ಸೂಕ್ಷ್ಮತೆ, ಸಂವೇದನೆ, ವಸ್ತುವಿಷಯ, ದೃಷ್ಟಿ...
“ಕಂಬಾರರ ಈ ಹೊಸ ಹಾಗೂ ಪರ್ಯಾಯ ಆಲೋಚನೆಗಳನ್ನು ಕನ್ನಡ ಸಾಹಿತ್ಯ ವಿಮರ್ಶೆ ಗುರುತಿಸಬೇಕಾದಷ್ಟು ಗುರುತಿಸಿಲ್ಲ. ಕಂಬ...
“ಹಗಲಿನಲ್ಲಿ ಇರುಳಿನಲ್ಲಿ ಕನಸಿನಲ್ಲಿ ಕನವರಿಕೆಯಲ್ಲಿ ಹೊತ್ತೂ ಗೊತ್ತೂ ಇಲ್ಲದ ಹೊತ್ತಿನಲ್ಲೂ ದುಸ್ವಪ್ನವಾಗಿ ಕಾಡಿ...
©2024 Book Brahma Private Limited.