ಕರ್ನಾಟಕ ಕಂಡ ವರ್ಣರಂಜಿತ ರಾಜಕಾರಣಿ ಸಾಹುಕಾರ್ ಚೆನ್ನಯ್ಯ


'ಕಿಂಗ್ ಮೇಕರ್ ಸಾಹುಕಾರ್ ಚೆನ್ನಯ್ಯ' ಎಂಬ ಜೀವನ ಚರಿತ್ರೆ ಪುಸ್ತಕ ಓದುಗರಿಗೆ ರಾಜಾಳ್ವಿಕೆಯಿಂದ ಪ್ರಜಾಳ್ವಿಕೆವರೆಗಿನ ಒಂದು ಸಂಕ್ಷಿಪ್ತವಾದ, ಅಷ್ಟೇ ವಿಕ್ಷಿಪ್ತವಾದ ರಾಜಕೀಯ ಚಿತ್ರಣವನ್ನು ಕಟ್ಟಿಕೊಡುತ್ತದೆ ಎನ್ನುತ್ತಾರೆ ಲೇಖಕ ಎಸ್. ಪ್ರಕಾಶ್ ಬಾಬು. ಅವರು ಬರೆದ ಕಿಂಗ್ ಮೇಕರ್ ಸಾಹುಕಾರ್ ಚೆನ್ನಯ್ಯ ಕೃತಿಗೆ ಅವರೇ ಬರೆದ ಪ್ರವೇಶಿಕೆ ನಿಮ್ಮ ಓದಿಗಾಗಿ.

ಆದಿ ಚುಂಚನಗಿರಿ ಮಹಾಸಂಸ್ಥಾನದ ವಿಕಸನ ಮಾಲೆಗೆ 'ಮೈಸೂರು ಗಾಂಧಿ ಎಚ್.ಸಿ. ದಾಸಪ್ಪ' ಎಂಬ ಜೀವನ ಚರಿತ್ರೆ ಬರೆದುಕೊಟ್ಟ ನಂತರ ನಾನು ಬರೆದ ಎರಡನೇ ಪುಸ್ತಕ “ಕಿಂಗ್ ಮೇಕರ್ ಸಾಹುಕಾರ್ ಚೆನ್ನಯ್ಯ'. ಸಾಹುಕಾರ್ ಚೆನ್ನಯ್ಯನವರ ಜೀವನ ಚರಿತ್ರೆ ಪುಸ್ತಕ ಬರೆಯಲು ಬಹು ದೀರ್ಘಕಾಲ ತೆಗೆದುಕೊಂಡಿದ್ದೇನೆ. ಇದಕ್ಕೆ ಅವರ ಸಮಕಾಲೀನರ ಕೊರತೆ ಮತ್ತು ಮಾಹಿತಿ ಸಂಗ್ರಹಣಕ್ಕೆ ಎದುರಾದ ತೊಡರುಗಳಿಂದ ಕೃತಿ ರಚನೆ ವಿಳಂಬವಾಯಿತು.

ಸಾಹುಕಾರ್ ಚೆನ್ನಯ್ಯನವರು ಕರ್ನಾಟಕ ಕಂಡ ವರ್ಣರಂಜಿತ ರಾಜಕಾರಣಿ ಮತ್ತು ಶ್ರೀಮಂತ ಉದ್ಯಮಿ. ಪ್ರಸ್ತುತ ರಾಜಕಾರಣ ಮತ್ತು ಉದ್ಯಮ ಎರಡೂ ದೇಶದ ರಾಜಕೀಯ ವ್ಯವಸ್ಥೆಗೆ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ದುಡ್ಡಿಲ್ಲದೆ ರಾಜಕಾರಣ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ರಾಜಕೀಯ ವ್ಯವಸ್ಥೆ ಬೌದ್ಧಿಕ ತಳಹದಿ ಬಿಟ್ಟು, ಜಾತಿ, ಹಣದ ತಳಹದಿಯಲ್ಲಿ ಏಕೆ ಬೇರು ಬಿಟ್ಟಿತು ಎಂಬುದಕ್ಕೆ 'ಕಿಂಗ್ ಮೇಕರ್ ಸಾಹುಕಾರ್ ಚೆನ್ನಯ್ಯ' ಪುಸ್ತಕ ಒಂದಿಷ್ಟು ಪುರಾವೆ ಒದಗಿಸುತ್ತದೆ. ಮೈಸೂರು ಅರಸರಿಂದ ಅಧಿಕಾರ ಕಿತ್ತುಕೊಂಡು, ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಪ್ರಜೆಗಳೆ, ಆಳಲು ಹೋದಾಗ ಹೇಗೆ ಹಾಳಾದರು ಎಂಬುದನ್ನು ಸಾಹುಕಾರ್ ಚೆನ್ನಯ್ಯನವರ 1938 ರಿಂದ 1971ರವರೆಗಿನ ಅವರ ರಾಜಕೀಯ ಜೀವನದ ಹೇಳುತ್ತವೆ.

ಒಬ್ಬರ ಅಹಂ, ಇನ್ನೊಬ್ಬರ ಆಸೆ, ಮತ್ತೊಬ್ಬರ ಅಸೂಯೆ, ಮಗದೊಬ್ಬರ ಮೂರ್ಖತನಗಳು ರಾಜಕೀಯ ರಂಗದಲ್ಲಿ ಕೆಟ್ಟ ಘಟನೆಗಳನ್ನು ಹುಟ್ಟು ಹಾಕುತ್ತವೆ ಎಂಬುದನ್ನೂ ಸಹ ಈ ಪುಸ್ತಕ ದರ್ಶನ ಮಾಡಿಸುತ್ತದೆ. ಅಧಿಕಾರ-ಪ್ರತಿಷ್ಠೆಗೆ. ರಾಜಕೀಯ ನಾಯಕರು ತಮ್ಮ ಬಹುಪಾಲು ಬದುಕನ್ನು ವಿರೋಧಿಗಳನ್ನು ಹಣಿಯಲೇ ಕಳೆದುಬಿಡುತ್ತಾರೆ. ಅಧಿಕಾರದಲ್ಲಿ ಕುಳಿತ ನಾಯಕರು ತಮ್ಮ ಅಧಿಕಾರ ಉಳಿವಿನ ಕಡೆಗೇ ಯೋಚಿಸುತ್ತಾ ಕೂತರೆ, ಜನಾಭಿವೃದ್ಧಿ ಕಡೆ ಯಾವಾಗ ಯೋಚಿಸಲು ಸಮಯಾವಕಾಶವಾಗುತ್ತದೆ? ಇದೊಂದು ಉತ್ತರ ಸಿಗದ, ಸಿಕ್ಕರೂ ವಿವರಿಸಲಾಗದ ನೋವಿನ ಪ್ರಶ್ನೆ.

'ಕಿಂಗ್ ಮೇಕರ್ ಸಾಹುಕಾರ್ ಚೆನ್ನಯ್ಯ' ಎಂಬ ಜೀವನ ಚರಿತ್ರೆ ಪುಸ್ತಕ ಓದುಗರಿಗೆ ರಾಜಾಳ್ವಿಕೆಯಿಂದ ಪ್ರಜಾಳ್ವಿಕೆವರೆಗಿನ ಒಂದು ಸಂಕ್ಷಿಪ್ತವಾದ, ಅಷ್ಟೇ ವಿಕ್ಷಿಪ್ತವಾದ ರಾಜಕೀಯ ಚಿತ್ರಣವನ್ನು ಕಟ್ಟಿಕೊಡುತ್ತದೆ. ಇದರಲ್ಲಿ ಎಂದಿನಂತೆ ನನ್ನ ಪುಸ್ತಕದಲ್ಲಿ ಸಾಮಾನ್ಯವಾಗಿ ಕಂಡುಬರುವ ಮಾಹಿತಿ ಕಣಜವನ್ನು ಓದುಗರ ನೆನಪಿನಾಳಕ್ಕೆ ತುರುಕುವ ಯತ್ನವನ್ನು ಈ ಪುಸ್ತಕದಲ್ಲೂ ಮಾಡಿದ್ದೇನೆ. ಇದು ಓದಿನ ಓಟದ ಮಧ್ಯೆ, ರಸ್ತೆ ಡುಬ್ಬದಂತೆ ಅಡಚಣೆ ಮಾಡಬಹುದು. ಆದರೆ, ಓದಿನ ಓಟದ ಮಧ್ಯೆ ನಿರಾಳವಾಗಿ ಅಪರೂಪದ ಮಾಹಿತಿಗಳನ್ನು ಹೆಕ್ಕಿ, ಜೋಪಾನವಾಗಿ ಮಿದುಳಿನ ಮಸ್ತಿಷ್ಕದಲ್ಲಿ ಸಂಗ್ರಹಿಸಿಟ್ಟುಕೊಳ್ಳಲೂಬಹುದು. 'ಕಿಂಗ್ ಮೇಕರ್ ಸಾಹುಕಾರ್ ಚೆನ್ನಯ್ಯ' ಪುಸ್ತಕ ಪ್ರಸ್ತುತ ಯುವ ರಾಜಕಾರಣಿಗಳಿಗೆ ರಾಜಕೀಯ ಪಠ್ಯ ಪುಸ್ತಕದಂತಿದೆ. ಆದ್ದರಿಂದ ಯುವ ರಾಜಕಾರಣಿಗಳು ಮತ್ತು ಹಿರಿಯ ರಾಜಕಾರಣಿಗಳು ಹಾಗು ಸಕ್ರಿಯ ರಾಜಕಾರಣದಲ್ಲಿರುವ ರಾಜಕಾರಣಿಗಳು “ಕಿಂಗ್ ಮೇಕರ್ ಸಾಹುಕಾರ್ ಚೆನ್ನಯ್ಯ' ಪುಸ್ತಕ ಓದುವುದು ಸೂಕ್ತ.

“ಕಿಂಗ್ ಮೇಕರ್ ಸಾಹುಕಾರ್ ಚೆನ್ನಯ್ಯ' ಪುಸ್ತಕ ಬರೆಯಲು ಮೊದಲಿಗೆ ಮಾಹಿತಿ ನೀಡಿದವರು ದಿವಂಗತ ಹ.ಕ. ರಾಜೇಗೌಡರು, ತಮ್ಮ ಮನೆಗೆ ನನ್ನನ್ನು ಕರೆಸಿಕೊಂಡು ಅತ್ಯಮೂಲ್ಯ ಮಾಹಿತಿ ನೀಡಿದರು. ಅವರು ಈ ಪುಸ್ತಕ ಮುದ್ರಣ ರೂಪದಲ್ಲಿ ಹೊರಬರುವ ಮುನ್ನವೇ ನಮ್ಮನ್ನಗಲಿದ್ದು ತುಂಬಾ ನೋವಿನ ಸಂಗತಿ. ಸಾಹುಕಾರ್ ಚೆನ್ನಯ್ಯನವರ ಜೀವನ ಚರಿತ್ರೆ ಪುಸ್ತಕವನ್ನು ವಿಸ್ತಾರವಾಗಿ ಬರೆಯಲು ಸಾಧ್ಯವೇ ಇಲ್ಲ ಅಂದುಕೊಂಡಾಗ ಸಾಕಷ್ಟು ಮಾಹಿತಿಗಳನ್ನು ಹಂಚಿಕೊಂಡವರು ಸರ್ಕಾರಿ ವೈದ್ಯರೂ ಹಾಗೂ ಸಂಬಂಧಿಗಳೂ ಆದ ಡಾ.ಬ್ರಿಜ್ ಮೋಹನ್. ಇವರಿಗೆ ತುಂಬಾ ಕತಜ್ಞನಾಗಿದ್ದೇನೆ. ಹಾಗೇ, ಸಾಹುಕಾರ್ ಚೆನ್ನಯ್ಯನವರ ಮಗಳು ಶ್ರೀಮತಿ ಪ್ರಮೀಳಾ ಕೃಷ್ಣ, ಮೊಮ್ಮಗ ಚಂದ್ರಪ್ರಕಾಶ್ ಅವರಿಂದ ಸಾಕಷ್ಟು ಮಾಹಿತಿ ದೊರಕಿಸಿಕೊಟ್ಟ ಶ್ರೀನಿವಾಸ್ ಬಾಬು ಅವರಿಗೆ ಮತ್ತು ಕೆ.ಎಚ್. ರಾಮಯ್ಯ ಹಾಸ್ಟೆಲ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕೃಷ್ಣಪ್ಪ ಅವರಿಗೂ ತುಂಬಾ ಆಭಾರಿಯಾಗಿದ್ದೇನೆ.

ಸಾಹುಕಾರ್ ಚೆನ್ನಯ್ಯರ ರಾಜಕೀಯ ಏರಿಳಿತಗಳನ್ನು ತಿಳಿಸಿದ ಹಿರಿಯ ರಾಜಕಾರಣಿ ಎಚ್.ಡಿ. ಚೌಡಯ್ಯನವರು ಮತ್ತು ಇತ್ತೀಚೆಗೆ ನಿಧನರಾದ ಜಿ. ಮಾದೇಗೌಡರಿಗೆ ಋಣಿಯಾಗಿದ್ದೇನೆ. ಸಾಹುಕಾರ್ ಚೆನ್ನಯ್ಯನವರ ಬಗ್ಗೆ ಬಹಳ ಅಭಿಮಾನ, ಗೌರವ ಇಟ್ಟುಕೊಂಡಿರುವ ಸಿಐಟಿಬಿ ಮಾಜಿ ಅಧ್ಯಕರಾದ ಡಿ. ಮಾದೇಗೌಡರು, ಸಾಹುಕಾರ್ ಚೆನ್ನಯ್ಯನವರ ಮನೆಯಲ್ಲೇ ಆಡಿ ಬೆಳೆದ ಮಾಜಿ ಶಾಸಕರಾದ ವಾಸು ಅವರು, ಸಾಹುಕಾರ್ ಚೆನ್ನಯ್ಯರನ್ನು ಹತ್ತಿರದಿಂದ ಬಲ್ಲವರಾಗಿದ್ದ ವಿದ್ಯಾವರ್ಧಕ ವಿದ್ಯಾ ಸಂಸ್ಥೆ ಅಧ್ಯಕ್ಷ ಗುಂಡಪ್ಪಗೌಡರು, ಸಾಹುಕಾರ್ ಚೆನ್ನಯ್ಯನವರ ಆಪ್ತರಾಗಿದ್ದ 'ವರ್ತಮಾನ್' ಪತ್ರಿಕೆ ಸಂಪಾದಕರಾದ ಎಂ.ಎನ್. ತಿಮ್ಮಯ್ಯರ ಪುತ್ರ ಎಂ.ಟಿ. ಜಯರಾಮ್ ಅವರು ನನ್ನೀ ಪುಸ್ತಕಕ್ಕೆ ಅಗತ್ಯವಾದ ಪೂರಕ ಮಾಹಿತಿ ಒದಗಿಸಿದ್ದಾರೆ. ಇವರಿಗೆಲ್ಲಾ ಹೃತೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ.

ಮೈಸೂರಿನ ಏಕೈಕ ಹ್ಯಾಟ್ರಿಕ್ ಲೋಕಸಭಾ ಸದಸ್ಯ ಎಚ್.ಡಿ. ತುಳಸಿದಾಸ್ ಅವರು ಸಾಹುಕಾರ್ ಚೆನ್ನಯ್ಯನವರ ಬಗ್ಗೆ ಬರೆದ ಕಿರು ಲೇಖನ, ಗುಜೇಗೌಡರ ಸ್ಮರಣಾರ್ಥ ಹೊರತಂದ 'ಪರೋಪಕಾರಿ' ಗೌರವಗ್ರಂಥ, ಮೈಸೂರಿನ ಹಿರಿಯ ರಾಜಕಾರಣಿ ಮತ್ತು ಮೈಸೂರು ಪುರಸಭೆ ಅಧ್ಯಕ್ಷರೂ ಆಗಿದ್ದ ಎಂ.ಕೆ. ಲಿಂಗಯ್ಯನವರು ಬರೆದ 'ಮೈಸೂರು ಒಂದು ಅಧ್ಯಯನ' ಎಂಬ ಅಪರೂಪದ ಪುಸ್ತಕ, ಡಾ.ಎಚ್.ಎಸ್. ಮುದ್ದೇಗೌಡರ 'ಕೆ.ವಿ. ಶಂಕರಗೌಡ: ಬದುಕು-ಬರಹ' ಮತ್ತು ಮಾಜಿ ಸಚಿವ ದಿವಂಗತ ಎಚ್.ಕೆ. ವೀರಣ್ಣಗೌಡರ ಆತ್ಮಕತೆ 'ಬದುಕು-ಮೆಲುಕು' ಹಾಗೂ 'ಸಾಧ್ವಿ’ ಪತ್ರಿಕೆ ಹೊರತಂದಿರುವ '1944ರ ಸುದ್ದಿ ಕೋಶ” “ಕಿಂಗ್ ಮೇಕರ್ ಸಾಹುಕಾರ್ ಚೆನ್ನಯ್ಯ' ಪುಸ್ತಕಕ್ಕೆ ಸಾಕಷ್ಟು ನಿಕಷ್ಟು ಮಾಹಿತಿ ಒದಗಿಸಿವೆ. ಹಾಗೇ ಮಂಡ್ಯದ ಡಾ. ಜಯಪ್ರಕಾಶ್‌ಗೌಡರು ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಮೈಸೂರು ಕುಸ್ತಿ ಇತಿಹಾಸದ ಸಂಶೋಧನೆಯಲ್ಲಿ ನಿರತರಾಗಿರುವ ಶ್ರೀಧರ್ ಮತ್ತು 1954ರ ಕುಸ್ತಿ ದುರಂತ ಘಟನೆಯ ಮಾಹಿತಿ ನೀಡಿದ ನಾಲಾಬೀದಿ ಈಶ್ವರಣ್ಣನವರ ಗರಡಿಯ ಪೈಲ್ವಾನ್. ಕೇಶವಣ್ಣನವರಿಗೂ ಕೃತಜ್ಞನಾಗಿದ್ದೇನೆ.

ಇಂಥ ಅಪರೂಪದ ಒಕ್ಕಲಿಗ ನಾಯಕರ ಜೀವನ ಚರಿತ್ರೆ ಪುಸ್ತಕಗಳನ್ನು ವಿಕಸನ ಮಾಲೆ' ಮೂಲಕ ಹೊರತರುತ್ತಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರುಗಳಾದ ಶ್ರೀಶ್ರೀಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಗೆ ನನ್ನ ಕೃತಜ್ಞತಾಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

ಎಸ್. ಪ್ರಕಾಶ್ ಬಾಬು

MORE FEATURES

ಸ್ವಯಂ ಅನ್ವೇಷಣೆಗೆ ತೊಡಗಿಸುವಂತಹ ವಿಚಾರಧಾರೆ ಇಲ್ಲಿ ಹಾಸು ಹೊಕ್ಕಾಗಿದೆ..!!

10-03-2025 ಬೆಂಗಳೂರು

"ಐಟಿ ಜಗತ್ತಿನಲ್ಲಿರುವ ಬಹುತೇಕ ಮಂದಿಯ ಸಂಘರ್ಷ ಇಂತಹುದೇ....!! ಆದರೆ ಅದರಿಂದ ಹೊರತಾಗಿಯೂ ಬದುಕನ್ನು ಕಟ್ಟಿಕೊಳ್ಳ...

ಸಹಜ ಜೀವನಪ್ರೀತಿಯ ಚಿತ್ರ ಕಟ್ಟಿಕೊಳ್ಳುತ್ತಾ, ಗಟ್ಟಿಗೊಳ್ಳುತ್ತಾ ಹೋಗಿದೆ

10-03-2025 ಬೆಂಗಳೂರು

“ಕಥೆಗಳ ಗುಚ್ಛವು ಹಲವರ ಜಗತ್ತುಗಳನ್ನು ಹೊಕ್ಕು, ವಿಭಿನ್ನ ಅನುಭವಗಳ ಅನುಭೂತಿಗೆ ಒಳಗಾದ ಕಥೆಗಾರ್ತಿ ತನ್ನ ಜೀವ-ಜೀ...

ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯತೆಯಲ್ಲಿ ಬೇರುಬಿಟ್ಟ ಕತೆಗಳು

09-03-2025 ಬೆಂಗಳೂರು

"ಎರಡನೆಯ ಬಂಡವಾಳಶಾಹಿ ವ್ಯವಸ್ಥೆಯ ಹುನ್ನಾರಗಳನ್ನು ಬಯಲುಮಾಡಿರುವ ಎರಡು ಕತೆಗಳು ಇಲ್ಲಿವೆ. ಅವು 'ವಿದಾಯ'...