‘ಕನ್ನಡಮೆನಿಪ್ಪನಾಡು’ ಕನ್ನಡ ಬಾಶೆಯ ಹಂಚಿಕೆ


'ಒಂದು ಬಾಶೆ ಎಲ್ಲೆಲ್ಲ ಮತ್ತು ಎಶ್ಟೆಶ್ಟು ಬಳಕೆಯಲ್ಲಿದೆ ಎಂದು ತಿಳಿದುಕೊಳ್ಳುವುದಕ್ಕೆ ಅತ್ಯವಶ್ಯಕವಾಗಿ ‘ಕನ್ನಡ ಸರ್ವೆ’ ಒಂದನ್ನು ಮಾಡಬೇಕು. ಅದರಿಂದ ಕನ್ನಡದ ಹಂಚಿಕೆಯ ಬಗೆಗೆ ಸ್ಪಶ್ಟವಾದ ತಿಳುವಳಿಕೆಯನ್ನು ಪಡೆದುಕೊಳ್ಳಲು ಸಾದ್ಯ. ಸರ್ವೆಗಳು ಒದಗಿಸುವ ಮಾಹಿತಿ ಸಾಮಾನ್ಯವಾಗಿ ಯಾವುದೆ ಕಾನೂನು, ಪಾಲಸಿ, ನೀತಿ-ನಿಯಮಗಳಿಗೆ ಆದಾರವಾಗಿರುತ್ತದೆ. ಹಾಗಾಗಿ, ಕನ್ನಡ ಸರ್ವೆ ಒಂದನ್ನು ನಡೆಸಬೇಕಿದೆ' ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ ಅವರು ತಮ್ಮ ‘ಕನ್ನಡಮೆನಿಪ್ಪನಾಡು’ ಕನ್ನಡ ಬಾಶೆಯ ಹಂಚಿಕೆ  ಕೃತಿಗೆ ಬರೆದ ಪ್ರವೇಶಿಕೆ ನಿಮ್ಮ ಓದಿಗಾಗಿ. 

ಕನ್ನಡ ಬಾಶೆ ಎಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕ ರಾಜ್ಯದ ಪ್ರದಾನ ಬಾಶೆ, ಪ್ರದಾನವಾಗಿ ಕರ್ನಾಟಕದಲ್ಲಿ ಬಳಕೆಯಲ್ಲಿರುವ ಬಾಶೆ. ಆದರೆ, ಇದನ್ನು ಇನ್ನೂ ತುಸು ವಿಸ್ತಾರವಾಗಿ ಇಲ್ಲವೆ ಇನ್ನೂ ತುಸು ಸ್ಪಶ್ಟವಾಗಿ ಬಾರತದ ಪ್ರದಾನ ಬಾಶೆಗಳಲ್ಲಿ ಒಂದು, ದಕ್ಶಿಣ ಬಾರತದಲ್ಲಿ ಪ್ರದಾನವಾಗಿ ಬಳಕೆಯಲ್ಲಿರುವ ಬಾಶೆ ಎಂದು ಹೇಳಬೇಕು. ಕನ್ನಡ ಬಾಶೆ ಬಹುತೇಕ ಕರ್ನಾಟಕ ಮತ್ತು ಕರ್ನಾಟಕ ರಾಜ್ಯಕ್ಕೆ ಹೊಂದಿಕೊಂಡಿರುವ ರಾಜ್ಯಗಳಲ್ಲಿ ಗಡಿಗುಂಟ ಮತ್ತು ಕೆಲವು ಕಡೆ ತುಸು ಒಳನಾಡಿನಲ್ಲಿ ಬಳಕೆಯಲ್ಲಿದೆ. ಗೋವಾ, ಆಂದ್ರಪ್ರದೇಶ (ತೆಲಂಗಾಣ), ಆಂದ್ರಪ್ರದೇಶ ಮತ್ತು ಕೇರಳಗಳಲ್ಲಿ ಕರ್ನಾಟಕ ರಾಜ್ಯದ ಗಡಿಗೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಕನ್ನಡ ಬಾಶೆ ಪರಿಗಣಿಸುವಶ್ಟು ಮಟ್ಟಿಗೆ ಬಳಕೆಯಲ್ಲಿದೆ. ಆದರೆ, ಮಹಾರಾಶ್ಟ್ರ ಮತ್ತು ತಮಿಳುನಾಡು ಜಿಲ್ಲೆಗಳಲ್ಲಿ ರಾಜ್ಯದ ಗಡಿಬಾಗದಲ್ಲಿ ಮಾತ್ರವಲ್ಲದೆ ಈ ರಾಜ್ಯಗಳ ಒಳಗಿನವರೆಗೆ ಕನ್ನಡ ಬಾಶೆ ಬಳಕೆಯಲ್ಲಿದೆ. ಈ ಹಂಚಿಕೆಯನ್ನು ತಿಳಿದುಕೊಳ್ಳುವುದು ಅತ್ಯವಶ್ಯವಾಗಿದೆ. 

ಕನ್ನಡವು ಕೋಟ್ಯಾಂತರ ಮಂದಿ ಮಾತಾಡುವ ಜಗತ್ತಿನ ಕೆಲವು ಬಾಶೆಗಳಲ್ಲಿ ಒಂದಾಗಿದೆ. ನಾಲ್ಕು ಸಾವಿರದಶ್ಟು ಸುದೂರವಾದ ತಿಳಿದ ಇತಿಹಾಸವನ್ನು ಹೊಂದಿರುವ ಜಗತ್ತಿನ ಕೆಲವು ಬಾಶೆಗಳಲ್ಲಿ ಇದೂ ಒಂದಾಗಿದೆ. ಲಿಪಿಯನ್ನು ಹೊಂದಿರುವ ಮಹತ್ವದ ಬಾಶೆಗಳಲ್ಲಿ ಒಂದು ಮತ್ತು ಸುಮಾರು ಎರಡು ಸಾವಿರ ವರುಶಗಳ ಹಿಂದೆ ಲಿಪಿಯನ್ನು ಸಂಯೋಜಿಸಿಕೊಂಡಿರುವ ಕೆಲವೆ ಕೆಲವು ಜಗತ್ತಿನ ಬಾಶೆಗಳಲ್ಲಿ ಒಂದು, ಒಂದೂವರೆ ಸಾವಿರ ವರುಶಗಳಿಗೂ ಹೆಚ್ಚು ಕಾಲದ ಬರಹದ ದಾಕಲೆಯನ್ನು ಹೊಂದಿರುವ ಜಗತ್ತಿನ ಕೆಲವೆ ಬಾಶೆಗಳಲ್ಲಿ ಕನ್ನಡವೂ ಒಂದಾಗಿದೆ. ಸಾವಿರ ವರುಶಕ್ಕೂ ಹೆಚ್ಚು ಕಾಲದ ವ್ಯಾಕರಣದ ಇತಿಹಾಸವನ್ನು ಹೊಂದಿರುವ ಕೆಲವೆ ಬಾಶೆಗಳಲ್ಲಿ ಕನ್ನಡವೂ ಒಂದಾಗಿದೆ. ಹೀಗೆ ಹಲವು ಬಗೆಯಲ್ಲಿ ಕನ್ನಡವು ಜಾಗತಿಕ ಮಟ್ಟದಲ್ಲಿ ಪ್ರದಾನವಾದ ಬಾಶೆಯಾಗಿದೆ. ಇದರೊಟ್ಟಿಗೆ ಸಾವಿರ ವರುಶಕ್ಕೂ ಹೆಚ್ಚಿನ ನಿರಂತರವಾದ ಸಾಹಿತ್ಯ, ಎರಡು ಸಾವಿರ ವರುಶಕ್ಕೂ ಹೆಚ್ಚು ಕಾಲದ ವ್ಯಾಪ್ತಿಯನ್ನು ತೋರಿಸುವ ಜನಪದ, ಆಚರಣೆ, ಸಂಸ್ಕ್ರುತಿ, ಮತಪಂತಗಳು ಮೊದಲಾದವುಗಳನ್ನು ತನ್ನೊಳಗೆ ಇಟ್ಟುಕೊಂಡಿದೆ ಕನ್ನಡ. ಈ ಅಂಶಗಳು ಸಹಜವಾಗಿಯೆ ಒಂದು ಬಾಶೆಯ ಬಗೆಗೆ ಅಬಿಮಾನ ಪಟ್ಟುಕೊಳ್ಳುವಂತವು. ಆ ಬಾಶೆ ತನ್ನದಲ್ಲದ ಒಬ್ಬ ವ್ಯಕ್ತಿಯೂ ಅಬಿಮಾನ ಪಟ್ಟುಕೊಳ್ಳುವಂತವು. ಇದು ಬರಿಯ ಅಬಿಮಾನ ಮಾತ್ರವಾಗಿರದೆ ಬಾಶೆ, ಸಮಾಜ, ಸಮುದಾಯ, ಜಾನಪದ ಮೊದಲಾದವುಗಳನ್ನು ತಿಳಿದುಕೊಳ್ಳುವುದಕ್ಕೆ ಕರೆಕೊಡುತ್ತದೆ.

ಕನ್ನಡ ಬಾಶೆಗೆ ವಿವಿದ ಆಯಾಮಗಳಲ್ಲಿ ಇರುವ ಈ ಸುದೂರವಾದ ಇತಿಹಾಸವನ್ನು ಹೇಳುವುದಕ್ಕೆ ಕಾರಣಗಳಿವೆ. ಇದು ಬರಿಯ ಅಬಿಮಾನದ ಮಾತಲ್ಲ. ಇದು ವಾಸ್ತವದ, ಅರಿವಿನ ವಿಶಯವಾಗಿದೆ. ಇದನ್ನು ಎರಡು ನೆಲೆಗಳಲ್ಲಿ ನೋಡಬಹುದು. ಒಂದು ಕನ್ನಡ ಮತ್ತು ಕರ್ನಾಟಕಗಳನ್ನು ಮತ್ತು ಆ ಮೂಲಕ ಬಾರತವನ್ನು ಅರ್ತ ಮಾಡಿಕೊಳ್ಳುವುದಕ್ಕೆ ಸಹಾಯಕ. ಇನ್ನೊಂದು ನೆಲೆಯಲ್ಲಿ ಸಾಮಾನ್ಯವಾಗಿ ಮನುಶ್ಯರ, ಮನುಶ್ಯ ಸಮಾಜದ, ಮನುಶ್ಯ ಸಮಾಜದ ವಿವಿದ ವಲಯಗಳ ಮತ್ತು ಮನುಶ್ಯ ಗ್ನಾನಶಾಸ್ತ್ರದ ಬೆಳವಣಿಗೆ ಇವುಗಳನ್ನು ಅರ್ತ ಮಾಡಿಕೊಳ್ಳುವುದಕ್ಕೂ ಇದು ಸಹಾಯಕ. ಈ ಎಲ್ಲ ಆಯಾಮಗಳಲ್ಲಿ ಅದ್ಯಯನ ಮಾಡಬೇಕು ಮತ್ತು ಈ ಅದ್ಯಯನಗಳ ಪಲಿತಗಳು ಇತಿಹಾಸವನ್ನು ಮತ್ತು ವರ್ತಮಾನವನ್ನು ತಿಳಿದುಕೊಳ್ಳುವುದಕ್ಕೆ ಸಹಜವಾಗಿ ಸಹಾಯಕವಾಗಿರುತ್ತವೆ ಮತ್ತು ಬವಿಶ್ಯವನ್ನು ರೂಪಿಸುವುದಕ್ಕೆ ಕಂಡಿತ ಈ ತಿಳುವಳಿಕೆ ಸಹಾಯ ಮಾಡುತ್ತದೆ.

ಕನ್ನಡ ಬಾಶೆಯ ಸಾವಿರಾರು ವರುಶಗಳ ಬೆಳವಣಿಗೆಯನ್ನು ಅದ್ಯಯನ ಮಾಡಿದರೆ ಕನ್ನಡವನ್ನು ತಿಳಿದುಕೊಳ್ಳುವುದು ಮಾತ್ರವಲ್ಲದೆ ಕನ್ನಡ ಮಾತಾಡುವ ಸಮಾಜವನ್ನು ತಿಳಿದುಕೊಳ್ಳುವುದಕ್ಕೆ ಸಾದ್ಯವಾಗುತ್ತದೆ. ಕನ್ನಡ ಬಾಶೆ, ಮೂಲ ಕನ್ನಡ, ಕನ್ನಡದ ಇತಿಹಾಸಿಕವಾದ ಬೆಳವಣಿಗೆ, ಕನ್ನಡದ ಒಳನುಡಿಗಳು, ಕನ್ನಡ ಒಳನುಡಿಗಳ ಒಡೆತ ಮತ್ತು ಪಸರಣ, ಕನ್ನಡದ ಮತ್ತು ಕನ್ನಡಗಳ ಬಳಕೆ, ಬಳಕೆಯ ವ್ಯಾಪ್ತಿ, ವಿಶಿಶ್ಟತೆ, ವಿಶಿಶ್ಟ ಬೆಳವಣಿಗೆಗಳು, ಇಂದಿನ ಶಿಶ್ಟ ಕನ್ನಡ, ಅದರ ಬೆಳವಣಿಗೆ, ಕನ್ನಡದ/ಕನ್ನಡಗಳ ಸಾಮಾಜಿಕತೆ ಮೊದಲಾದ ಎಲ್ಲ ಆಯಾಮಗಳಲ್ಲಿ ಕನ್ನಡವನ್ನು ಅರಿತುಕೊಳ್ಳುವುದಕ್ಕೆ ಸಹಾಯಕ. ಬಾಶೆಯ ಅದ್ಯಯನ ಮಾತ್ರವಲ್ಲದೆ ಬಾಶಾ ಕೇಂದ್ರಿತವಾಗಿರುವ ಸಾಹಿತ್ಯ, ಜನಪದ ಒಳಗೊಂಡು ಸಮಾಜದ ಅದ್ಯಯನಕ್ಕೆ ಮತ್ತು ಸಮಾಜದ ಮತಪಂತಗಳು, ರಾಜಕೀಯ, ಒಕ್ಕಲುತನ, ಆರ್ತಿಕ ಮೊದಲಾದ ವಿವಿದ ವಲಯಗಳ ಇತಿಹಾಸಿಕವಾದ ಬೆಳವಣಿಗೆಗಳನ್ನು ತಿಳಿದುಕೊಳ್ಳುವುದಕ್ಕೂ ಇದು ಸಹಾಯಕವಾಗುತ್ತದೆ. ಒಟ್ಟಾರೆಯಾಗಿ ಕರ್ನಾಟಕದ ಮತ್ತು ಕನ್ನಡ ಮಾತಾಡುವ ಸಮುದಾಯದ ಇತಿಹಾಸ ಮತ್ತು ಬೆಳವಣಿಗೆಯನ್ನು ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಇದು ಸಹಜವಾಗಿಯೆ ಈ ಎಲ್ಲ ಆಯಾಮಗಳಲ್ಲಿ ಬಾರತವನ್ನು ಅರಿತುಕೊಳ್ಳುವುದಕ್ಕೆ ಸಹಾಯಕವಾಗುತ್ತದೆ.

ಇನ್ನೊಂದು ನೆಲೆಯಲ್ಲಿ ಬಾಶೆ, ಸಾಹಿತ್ಯ, ಜನಪದ, ಮತಪಂತ ಮೊದಲಾದ ವಲಯಗಳಲ್ಲಿನ ತಿಳಿದಿರುವ ಈ ಸುದೂರವಾದ ಇತಿಹಾಸವನ್ನು ಅದ್ಯಯನ ಮಾಡುವ ಮೂಲಕ ಸಾಮಾನ್ಯವಾಗಿ ಈ ಎಲ್ಲ ವಲಯಗಳಲ್ಲಿನ ಮನುಶ್ಯ ಇತಿಹಾಸವನ್ನು ಅರಿತುಕೊಳ್ಳುವುದಕ್ಕೆ ಸಹಾಯಕವಾಗುತ್ತದೆ. ಜಗತ್ತಿನ ಇನ್ನಿತರ ಈ ಬಗೆಯ ಇತಿಹಾಸವಿರುವ ಬಾಶೆಗಳ ಬೆಳವಣಿಗೆಯನ್ನೂ ಇದೆ ರೀತಿಯಲ್ಲಿ ತುಲನಾತ್ಮಕವಾಗಿ ಅದ್ಯಯನ ಮಾಡಿದಾಗ ಮನುಶ್ಯ ಇತಿಹಾಸದ ಬಗೆಗೆ ಹೆಚ್ಚಿನ ಒಳನೋಟಗಳು ಸಿಗುವುದಕ್ಕೆ ಸಾದ್ಯ. ಹಾಗಾಗಿ ಕನ್ನಡ ಬಾಶೆಯ ಅದ್ಯಯನ ಮಾಡುವುದು ಈ ಎಲ್ಲ ಬಗೆಯ ಅದ್ಯಯನ ಅವಕಾಶಗಳಿಗೆ ಮತ್ತು ಅರಿವಿನ ಉತ್ಪಾದನೆಗೆ ಸಹಾಯಕ. ಈ ಆಶಯಗಳಿಗೆ ಪೂರಕವಾಗಿ ಕನ್ನಡದಲ್ಲಿ ಅದ್ಯಯನಗಳು ಕಡಿಮೆ, ಹೆಚ್ಚಿನ ಅದ್ಯಯನಗಳು ಆಗಬೇಕಿವೆ. ಈ ಎಲ್ಲ ವಿಸ್ತಾರವಾದ ಆಶಯಗಳನ್ನು ಇಟ್ಟುಕೊಂಡು ಈಗಿನ ಪುಸ್ತಕದ ರಚನೆಯನ್ನು ಮಾಡಿಕೊಂಡಿದೆ.

ಕನ್ನಡವು ಮೊದಲಲ್ಲಿ ಹೇಳಿದಂತೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ಪಸರಿಸಿಕೊಂಡಿಲ್ಲ. ಇದು ಬಹುಮುಕ್ಯವಾದ ಅಂಶ. ಕನ್ನಡವನ್ನು ಅದ್ಯಯನ ಮಾಡುವ ಹೆಚ್ಚಿನ ಅದ್ಯಯನಗಳು ಕರ್ನಾಟಕಕ್ಕೆ ಸೀಮಿತಗೊಳ್ಳುವುದು ದುರದ್ರುಶ್ಟ. ಬೇಸರದ ವಿಚಾರವೆಂದರೆ ಶಂಕರಬಟ್ಟರಂತ ನಿಜವಾದ ವಿದ್ವಾಂಸರೂ ಈ ಮಿತಿಯನ್ನು ಹಾಗೆಯೆ ಮುಂದುವರೆಸುತ್ತಾರೆ. ವಾಸ್ತವದಲ್ಲಿ ಕರ್ನಾಟಕ ಅದ್ಯಯನ ಮಾಡುವಾಗ ಸಾಮಾಜಿಕ, ಸಾಂಸ್ಕ್ರುತಿಕ, ಇತಿಹಾಸಿಕ ಮೊದಲಾದ ವಲಯಗಳಲ್ಲಿ ರಾಜಕೀಯ ಗಡಿಗಳನ್ನು ಹಲವು ಬಾರಿ ಇಟ್ಟುಕೊಳ್ಳುವುದು ಅದ್ಯಯನಕ್ಕೆ ಅಶ್ಟುಮಟ್ಟಿಗೆ ತೊಡಕಾಗುತ್ತದೆ. ಇತಿಹಾಸದ ಉದ್ದಕ್ಕೂ ಈ ಗಡಿ ಇದ್ದಿರಲಿಲ್ಲವಾದ್ದರಿಂದ ಈ ಅದ್ಯಯನಗಳಿಗೆ ಗಡಿಗಳನ್ನು ತುಸು ಹಗುರವಾಗಿ ಪರಿಗಣಿಸಬೇಕು. ಆದರೆ, ಬಾಶೆಯ ವಿಚಾರದಲ್ಲಿ, ಅಂದರೆ ಕನ್ನಡ ಬಾಶೆಯನ್ನು ಅದ್ಯಯನ ಮಾಡುವಾಗ ಯಾವುದೆ ಕಾರಣಕ್ಕೂ ಕರ್ನಾಟಕ ಎಂಬ ಗಡಿಯನ್ನು ಇಟ್ಟುಕೊಳ್ಳಬಾರದು. ಕನ್ನಡ ಮತ್ತು ಕರ್ನಾಟಕ ಇವೆರಡು ಸಮಾನಾರ್ತಕಗಳಂತೆ ಬಳಸುವುದರಲ್ಲಿಯೆ ತಪ್ಪಿದೆ. 

ಕನ್ನಡ ಬಾಶೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಕರ್ನಾಟಕದ ಹೊರಗೆ ಕೂಡ ಪರಿಗಣಿಸುವಶ್ಟು ಸಂಕೆಯ ಮಾತುಗರನ್ನು ಹೊಂದಿದೆ. ಕನ್ನಡದ ಕಾಳಜಿ ಎನ್ನುವುದು ಕರ್ನಾಟಕದ ಕಾಳಜಿ ಎಂದು ಉಳಿಯಬಾರದು, ಬದಲಿಗೆ ಅದು ವಾಸ್ತವದ ಕನ್ನಡ ಕಾಳಜಿ ಆಗಿರಬೇಕು. ಅಂದರೆ ಕರ್ನಾಟಕದ ಆಚೆಗೆ ಇರುವ ಕನ್ನಡವನ್ನೂ ಕಾಳಜಿಯಿಂದ ನೋಡಬೇಕು. ಈ ಮಾತನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ಸಾಂಸ್ಕ್ರುತಿಕವಾಗಿ ಪರಿಗಣಿಸಬೇಕು. ವಿವಿದ ರಾಜ್ಯಗಳಲ್ಲಿ ಇರುವ ಕನ್ನಡಿಗರಿಗೆ ಅಲ್ಲಿಯೆ ಕನ್ನಡ ಶಿಕ್ಶಣ ಒಳಗೊಂಡು ಸಮಾಜದ ಇತರೆಲ್ಲ ಅವಕಾಶಗಳಲ್ಲಿ ಸಮಾನತೆ ಒದಗಿಸುವಂತೆ ಈ ಕಾಳಜಿ ಇರಬೇಕು. ಅದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ಇರುವ ಇತರೆಲ್ಲ ಬಾಶೆಗಳ ಮಾತುಗರಿಗೆ ಅವರವರ ಬಾಶೆಗಳಲ್ಲಿಯೆ ಶಿಕ್ಶಣ ಮೊದಲಾಗಿ ಎಲ್ಲ ಕಡೆ ಸಮಾನ ಅವಕಾಶಗಳು ಒದಗುವಂತೆ ನೊಡಿಕೊಳ್ಳಬೇಕು ಎನ್ನುವುದನ್ನು ಬೇರೆ ಹೇಳಬೇಕಿಲ್ಲ. ಹಾಗಾದರೆ, ಇದನ್ನು, ಈ ಆಶಯವನ್ನು ಈಡೇರಿಸಬೇಕಾದರೆ ಮೊದಲು ಮಾಡಬೇಕಾದ ಕೆಲಸವೆಂದರೆ ಕನ್ನಡ ಎಲ್ಲೆಲ್ಲಿ ಎಶ್ಟೆಶ್ಟು ಬಳಕೆಯಲ್ಲಿದೆ ಎನ್ನುವುದನ್ನು ಗಮನಿಸುವುದು. ಆನಂತರ ಎಲ್ಲೆಲ್ಲಿ ಎಶ್ಟೆಶ್ಟು ಮತ್ತು ಯಾವಯಾವ ಕೆಲಸಗಳನ್ನು ಮಾಡಬಹುದು ಎಂದು ಯೋಚಿಸುವುದು, ಆ ಕೆಲಸಗಳನ್ನು ಯೋಜಿಸುವುದು ಮತ್ತು ಅವುಗಳನ್ನು ಜಾರಿಗೆ ತರುವುದು. 

ಒಂದು ಬಾಶೆ ಎಲ್ಲೆಲ್ಲ ಮತ್ತು ಎಶ್ಟೆಶ್ಟು ಬಳಕೆಯಲ್ಲಿದೆ ಎಂದು ತಿಳಿದುಕೊಳ್ಳುವುದಕ್ಕೆ ಅತ್ಯವಶ್ಯಕವಾಗಿ ‘ಕನ್ನಡ ಸರ್ವೆ’ ಒಂದನ್ನು ಮಾಡಬೇಕು. ಅದರಿಂದ ಕನ್ನಡದ ಹಂಚಿಕೆಯ ಬಗೆಗೆ ಸ್ಪಶ್ಟವಾದ ತಿಳುವಳಿಕೆಯನ್ನು ಪಡೆದುಕೊಳ್ಳಲು ಸಾದ್ಯ. ಸರ್ವೆಗಳು ಒದಗಿಸುವ ಮಾಹಿತಿ ಸಾಮಾನ್ಯವಾಗಿ ಯಾವುದೆ ಕಾನೂನು, ಪಾಲಸಿ, ನೀತಿ-ನಿಯಮಗಳಿಗೆ ಆದಾರವಾಗಿರುತ್ತದೆ. ಹಾಗಾಗಿ, ಕನ್ನಡ ಸರ್ವೆ ಒಂದನ್ನು ನಡೆಸಬೇಕಿದೆ. ಇದನ್ನು ಎತ್ತಿ ಹೇಳುವ ಕೆಲಸವನ್ನು ಈ ಪುಸ್ತಕ ಮಾಡುತ್ತಿದೆ. ಕನ್ನಡ ಸರ್ವೆಗೆ ಪೂರಕವಾದ ಮಾಹಿತಿಯನ್ನು, ತಿಳುವಳಿಕೆಯನ್ನು ಮತ್ತು ರಚನೆಯನ್ನು ಕೊಡುವ ಸ್ತೂಲ ಪ್ರಯತ್ನ ಈ ಪುಸ್ತಕವಾಗಿದೆ. ಇದರಲ್ಲಿ ಜನಗಣತಿ ಕೊಟ್ಟಿರುವ ಮಾಹಿತಿಯನ್ನು ಬಳಸಿಕೊಂಡಿದೆ. ಮೂಲಬೂತವಾಗಿ ಜನಗಣತಿಯಲ್ಲಿ ಬಾಶೆ ಒಂದು ಬಾಗ ಮಾತ್ರ. ಬಾಶೆಗೆ ಸಂಬಂದಿಸಿದ ಮಾಹಿತಿಯಲ್ಲಿ ಸಾಕಶ್ಟು ಅರೆಕೊರೆಗಳು ಇವೆ. ಇದಲ್ಲದೆ, ಜನಗಣತಿ ಬಾಶೆಗಳ ಮಾತುಗರ ಸಂಕೆಯನ್ನು ಒದಗಿಸುತ್ತದೆ. ಆದರೆ, ಬಾಶೆಯ ರಚನೆ ಮೊದಲಾದ ಅಂಶಗಳನ್ನು ಇದು ಒದಗಿಸುವುದಿಲ್ಲ. ಈ ತರದ ಅಂಶಗಳನ್ನು ಬಾಶಾಸರ್ವೆ ಪ್ರದಾನವಾಗಿ ಒಳಗೊಳ್ಳುತ್ತದೆ. ಅಂತದೊಂದು ಕನ್ನಡ ಸರ್ವೆ ಕನ್ನಡ ಬಾಶೆಯ ಬಗೆಗೆ ಸರಿಯಾದ, ಹೆಚ್ಚಿನ ತಿಳುವಳಿಕೆ ಕೊಡುತ್ತದೆ.

ಕನ್ನಡಮೆನಿಪ್ಪ ನಾಡು:

ಈ ಪುಸ್ತಕಕ್ಕೆ ಕನ್ನಡಮೆನಿಪ್ಪ ನಾಡು ಎಂದು ಹೆಸರಿಡಲು ಮುಕ್ಯವಾಗಿ ಇದು ವಾಸ್ತವದ ಕನ್ನಡ ನಾಡನ್ನು ತೋರಿಸುತ್ತಿರುವುದರಿಂದ. ಕವಿರಾಜಮಾರ್ಗದ ಶ್ರೀವಿಜಯ ಹೇಳುವ ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡು ಕೂಡ ಇದಕ್ಕಿಂತ ಚಿಕ್ಕದಾಗಿ ಕಾಣಬಹುದು. ಕರ್ನಾಟಕ ಬೇರೆ, ಕನ್ನಡ ನಾಡು ಬೇರೆ. ಇವೆರಡನ್ನೂ ಬೇರೆಯಾಗಿ ನೋಡುವುದರಲ್ಲಿಯೆ ಈ ಎರಡೂ ಅಸ್ತಿತ್ವಗಳಿಗೆ ಅರ್ತವಿದೆ, ಅನುಕೂಲವಿದೆ. 

ಈ ಪುಸ್ತಕ ಬಿಡಿಸಿರುವ ನಕಾಶೆಗಳು ಕನ್ನಡ ಪರಿಗಣಿಸುವಶ್ಟು ಸಂಕೆಯಲ್ಲಿ ಬಳಕೆಯಲ್ಲಿರುವ ಪ್ರದೇಶಗಳನ್ನು ತೋರಿಸುತ್ತದೆ. ಈ ಹಂಚಿಕೆ ಎಶ್ಟು ಎಂಬುದನ್ನು ಮಾತ್ರವಲ್ಲದೆ ಯಾಕೆ, ಹೇಗೆ ಎಂಬ ಮೊದಲಾದ ಪ್ರಶ್ನೆಗಳನ್ನೂ ಎದುರಿಗಿಡುತ್ತದೆ. ಈ ಪ್ರಶ್ನೆಗಳಿಗೆ ನಮಗೆ ಗೊತ್ತಿಲ್ಲದ, ನಾವು ಅದ್ಯಯನ ಮಾಡಿಲ್ಲದ ಉತ್ತರಗಳು ದೊರೆಯಬಹುದು. ಎಶ್ಟು ಕಾಲದಿಂದ ಈ ಪ್ರದೇಶದಲ್ಲಿ ಕನ್ನಡ ಬಳಕೆಯಲ್ಲಿದೆ ಎಂಬ ಪ್ರಶ್ನೆಯನ್ನು ಎತ್ತಿಕೊಂಡರೆ ಬೆರಗೆ ಸರಿ. ನಿಜ. ಈ ಪ್ರಶ್ನೆಗಳನ್ನು ಈ ಪುಸ್ತಕ ನಮ್ಮೆದುರು ತೆರೆದಿಡುತ್ತದೆ. ಹಲವು ಅದ್ಯಯನಗಳಿಗೆ ಅಲ್ಲಿಂದ ದಾರಿ ತೆರೆದುಕೊಳ್ಳುತ್ತದೆ. ಪುಸ್ತಕದ ಕೊನೆಯಲ್ಲಿ ಕೆಲವು ಅದ್ಯಯನ ಸಾದ್ಯತೆಗಳನ್ನು ಈ ನಕಾಶೆಗಳು ಕೊಡುವ ಚಿತ್ರಣದ ಚರ್ಚೆಯ ಬಾಗವಾಗಿ ಮಾತಾಡಿದೆ.

ಜನಗಣತಿ-ಬಾಶಿಕ ಮಾಹಿತಿ:

ಜನಗಣತಿ ಸದ್ಯಕ್ಕೆ ಬಾರತದಾಗ ಬಾಶೆಗಳಿಗೆ ಸಂಬಂದಿಸಿದ ದೊಡ್ಡಪ್ರಮಾಣದ ಮಾಹಿತಿಯನ್ನು ಕೊಡುವ ಮುಕ್ಯವಾದ ಮೂಲವಾಗಿದೆ. ಬಾರತದಲ್ಲಿ ಇತ್ತೀಚಿನ ಜನಗಣತಿ ಎಂದರೆ 2011ರ ಜನಗಣತಿ (https://censusindia.gov.in/).  2021ರ ಜನಗಣತಿ ಕರೊನಾ ಕಾರಣಕ್ಕೆ ಇನ್ನೂ ಶುರುವಾಗಿಲ್ಲ ಮತ್ತು ಇದಕ್ಕೆ ಇನ್ನೂ ಕಾಲನಿರ್ದಾರವೂ ಆಗಿಲ್ಲ. ಸಾಮಾನ್ಯವಾಗಿ ಜನಗಣತಿಯ ನಂತರ ಅದರ ವಿಶ್ಲೇಶಣೆ, ವರದಿಗೆ ಎಂಟತ್ತು ವರುಶಗಳೆ ಆಗುತ್ತವೆ. ಹಾಗಾಗಿ, ಸದ್ಯ ನಮಗೆ ಲಬ್ಯವಿರುವ 2011ರ ಜನಗಣತಿಯ ಮಾಹಿತಿಯನ್ನು ಬಳಸಿಕೊಂಡು ಕನ್ನಡ ಬಾಶೆಯ ಪಸರಿಕೆಯ ಪರಿಚಯವನ್ನು ಮಾಡಿಕೊಟ್ಟಿದೆ.

ಜನಗಣತಿ ಜನರಿಂದ ಅವರ ‘ತಾಯ್ಮಾತಿ’ನ ಮಾಹಿತಿಯನ್ನು ಕಲೆ ಹಾಕುತ್ತದೆ. ಅದನ್ನು ತನ್ನದೆ ಆದ ಹಲವು ಕಾಲದಿಂದ ನಂಬಿಕೊಂಡ ನಿಲುವುಗಳ ಹಿನ್ನೆಲೆಯಲ್ಲಿ ವಿಶ್ಲೇಶಿಸುತ್ತದೆ. ಅದರಂತೆ ಮಾಹಿತಿಯನ್ನು ವರದಿ ಮಾಡುತ್ತದೆ. ಸಂಗ್ರಹಿಸಿದ ತಾಯ್ಮಾತುಗಳ ಮಾಹಿತಿಯನ್ನು ವಿಶ್ಲೇಶಿಸಿ ಅವುಗಳನ್ನು ವಿಬಿನ್ನ ಬಾಶೆಗಳಲ್ಲಿ ಜೋಡಿಸಲಾಗುತ್ತದೆ. ಹೀಗೆ ಜೋಡಿಸಿದ ನಂತರ ಪ್ರತಿ ಬಾಶೆಗೆ ದೇಶದಲ್ಲಿ ಹತ್ತು ಸಾವಿರ ಮಂದಿ ಇರಬೇಕು. ಹಾಗಿದ್ದಾಗ ಮಾತ್ರ ಅದನ್ನು ಪ್ರಕಟಿಸಲಾಗುತ್ತದೆ. ಅದಕ್ಕಿಂತ ಕಡಿಮೆ ಮಾತುಗರು ದಾಕಲಾಗಿದ್ದರೆ ಅವುಗಳನ್ನು ಕೊನೆಯಲ್ಲಿ ಇತರ ಎಂಬ ಗುಂಪಿನಲ್ಲಿ ಹಾಕಲಾಗುತ್ತದೆ. ಇನ್ನು ಒಂದು ಬಾಶೆಯ ಒಳಗೆ ಗುರುತಿಸಿದ ತಾಯ್ಮಾತುಗಳನ್ನು ಆಯಾ ಬಾಶೆಯ ಕೆಳಗೆ ಪಟ್ಟಿಸಲಾಗುತ್ತದೆ. ಹೀಗೆ ತಾಯ್ಮಾತುಗಳನ್ನು ಕೊಡುವಾಗಲೂ ಅದಕ್ಕೆ ದೇಶಮಟ್ಟದಲ್ಲಿ ಹತ್ತು ಸಾವಿರ ಮಂದಿ ಇರಬೇಕು ಎಂಬುದನ್ನು ನೋಡಲಾಗುತ್ತದೆ. ಇಲ್ಲದಿದ್ದರೆ ಅಂತಾ ಎಲ್ಲ ತಾಯ್ಮಾತುಗಳನ್ನು ಆಯಾ ಬಾಶೆಯ ಒಳಗೆ ಇತರ ಎಂಬ ಒಂದು ಗುಂಪನ್ನು ಮಾಡಿ ಅದರೊಳಗೆ ಅವುಗಳನ್ನು ಹಾಕಲಾಗುವುದು, ಅವುಗಳ ಹೆಸರುಗಳನ್ನೂ ಉಲ್ಲೇಕಿಸುವುದಿಲ್ಲ.

ಕನ್ನಡ ಬಾಶೆಯ ಒಳಗೆ ಒಟ್ಟು ನಾಲ್ಕು ತಾಯ್ಮಾತುಗಳು ಮತ್ತು ಇತರ ಎಂಬ ಒಂದು ಗುಂಪು ದಾಕಲಾಗಿವೆ. ಬಡಗ, ಕನ್ನಡ, ಕುರುಬ/ಕುರುಂಬ ಮತ್ತು ಪ್ರಾಕ್ರುತ/ಪ್ರಾಕ್ರುತ ಬಾಶಾ ಎಂಬ ನಾಲ್ಕು ತಾಯ್ಮಾತುಗಳು ಇವೆ. 

ಈ ಪುಸ್ತಕದ ರಚನೆ:

ಈ ಪುಸ್ತಕದಲ್ಲಿ ಜನಗಣತಿಯ ಮಾಹಿತಿಯನ್ನು ಬಳಸಿಕೊಂಡು ಕನ್ನಡವು ದಾಕಲಾಗಿರುವ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕನ್ನಡ ಬಾಶೆಯ ಪಸರಣದ ಮಾಹಿತಿಯನ್ನು ಚರ್ಚಿಸಿದೆ. ಇಲ್ಲಿ ಜನಗಣತಿ ಒದಗಿಸಿರುವ ಮಾಹಿತಿಯಿಂದ ಕನ್ನಡದ ಮಾಹಿತಿಯನ್ನು ಬೇರೆ ಮಾಡಿಕೊಂಡು ಅವುಗಳನ್ನು ಮೊದಲು ರಾಜ್ಯವಾರು ವಿಂಗಡಿಸಿ ಯಾವ ಯಾವ ರಾಜ್ಯಗಳಲ್ಲಿ ಎಶ್ಟೆಶ್ಟು ಕನ್ನಡ ಬಳಕೆಯಲ್ಲಿದೆ ಎಂಬುದನ್ನು ತೋರಿಸಿದೆ. ಆನಂತರ ಈ ಚರ್ಚೆಯನ್ನು ಆಯಾ ರಾಜ್ಯಗಳಲ್ಲಿನ ಜಿಲ್ಲಾಮಟ್ಟದ ಮಾಹಿತಿಯನ್ನು ಬಳಸಿಕೊಂಡು ಮುಂದುವರೆಸಿದೆ. ಕನ್ನಡ ಮಾಹಿತಿಯನ್ನು ಜಿಲ್ಲಾವಾರು ವಿಂಗಡಣೆ ಮಾಡಿಕೊಟ್ಟಿದೆ. ಒಂದು ರಾಜ್ಯದಲ್ಲಿ ಎಶ್ಟು ಮಂದಿ ಕನ್ನಡ ಮಾತುಗರು ಇದ್ದಾರೆ ಎನ್ನುವುದಕ್ಕಿಂತ ರಾಜ್ಯದಲ್ಲಿ ಎಲ್ಲಿ, ಎಶ್ಟು ಮಂದಿ ಇದ್ದಾರೆ ಎನ್ನುವುದು ಮುಕ್ಯವಾದ ಅಂಶ. ಮುಂದಿನ ಯಾವುದೆ ಅದ್ಯಯನಗಳಿಗೆ ಮತ್ತು ಮುಕ್ಯವಾಗಿ ಸರಕಾರದ ಸಾರ್ವಜನಿಕ ಪಾಲಸಿ ಮೊದಲಾದ ಕೆಲಸಗಳಿಗೆ ಈ ಮಾಹಿತಿ ಅವಶ್ಯವಾಗಿರುತ್ತದೆ. ಆದ್ದರಿಂದ ಜಿಲ್ಲಾವಾರು ಮಾಹಿತಿಯನ್ನು ಇಲ್ಲಿ ಒದಗಿಸಿಕೊಟ್ಟಿದೆ. ಇದಕ್ಕೆ ಪೂರಕವಾಗಿ ವಿವಿದ ಕನ್ನಡ ನಕಾಶೆಗಳನ್ನು ಹಾಕಿದೆ ಮತ್ತು ತುಸು ಚರ್ಚೆಯನ್ನು ಮಾಡಿದೆ. ಕನ್ನಡದ ದಟ್ಟತೆಯನ್ನು ಮತ್ತು ಪಸರಣವನ್ನು ಒಟ್ಟೊಟ್ಟಿಗೆ ಅರಿತುಕೊಳ್ಳುವುದಕ್ಕೆ ಈ ನಕಾಶೆಗಳು ಸಹಾಯಕವಾಗುತ್ತವೆ. ಈ ಮಾಹಿತಿಯನ್ನು ಗಮನಿಸಿದ ನಂತರ ತೆರೆದುಕೊಳ್ಳುವ ಅರಿವಿನ ವಿಸ್ತರ, ಅದ್ಯಯನಗಳ ಅವಶ್ಯಕತೆ ಮೊದಲಾದವನ್ನು ಕೊನೆಯಲ್ಲಿ ತುಸು ಮಾತಾಡಿದೆ.

MORE FEATURES

ಈ ವಿಶ್ವವು ಕಲ್ಪನೆಗೆ ಮೀರಿದಷ್ಟು ವಿಸ್ತಾರವಾಗಿದೆ

02-05-2025 ಬೆಂಗಳೂರು

“ಇಲ್ಲಿ ಜೀವ ಮತ್ತು ದೇವ ಭಿನ್ನವಲ್ಲ. ಇಲ್ಲಿ ಜೀವ ಮತ್ತು ದೇವ ಇಬ್ಬರೂ ಸೇರಿ ಆದ ಬಯಲಿನ ಚಿತ್ರಣವನ್ನು ನೀಡುತ್ತದೆ...

ದೈನಿಕ ಅನಿವಾರ್ಯತೆಯ ರೂಪಕಗಳು

02-05-2025 ಬೆಂಗಳೂರು

"ಮೂವತ್ತು ಕವಿತೆಗಳ ಗುಚ್ಛವಿರುವ ಮೊದಲ ಭಾಗದಲ್ಲಿ ಹಿಂದೆ ಬಿದ್ದ ನೆರಳು, ಮುತ್ತುಗದೆಲೆಯ ಮೇಲಿನ ಬೆಲ್ಲ, ಪಂಜರದ ಗಿ...

ಸಮಾಜದಲ್ಲಿ ನಡೆಯುವ ನೈಜ ಘಟನೆಗಳ ಆಧಾರಿತ ಕಾದಂಬರಿಯಿದು

02-05-2025 ಬೆಂಗಳೂರು

"ಒಂಟಿ ಹೆಣ್ಣು ತನ್ನ ಜೀವನವನ್ನು ಯಾವ ರೀತಿ ನಡೆಸಬೇಕು ಎಂಬುದನ್ನು ಈ ಕಾದಂಬರಿಯಲ್ಲಿ ಅದ್ಭುತವಾಗಿ ತಿಳಿಸಿಕೊಟ್ಟಿದ...