ಕಲಾ ತಪಸ್ವಿನಿ ‘ಗಿರಿಜಾ ಲೋಕೇಶ್’ ಜೀವನಚರಿತ್ರೆ


ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಅತ್ಯುತ್ತಮ ಕಲಾವಿದೆ ಗಿರಿಜಾ ಲೋಕೇಶ್ ಅವರ ಜೀವನ ಚರಿತ್ರೆ ‘ಗಿರಿಜಾ ಪರಸಂಗ’. ಖ್ಯಾತ ಲೇಖಕ ಜೋಗಿ ಅವರು ನಿರೂಪಿಸಿರುವ ಈ ಜೀವನ ಚರಿತ್ರೆಯ ಕುರಿತು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರರು ಬರೆದಿರುವ ಅರ್ಥಪೂರ್ಣ ಮುನ್ನುಡಿ ಇಲ್ಲಿದೆ. 

ಶ್ರೀಮತಿ ಗಿರಿಜಮ್ಮನವರನ್ನು ನಾನು ಕಂಡದ್ದು 1972ರ ಅವಧಿಯಲ್ಲಿ. ಲಂಕೇಶರ ನೇತೃತ್ವದಲ್ಲಿ ನನ್ನ ಜೋಕುಮಾರ ಸ್ವಾಮಿ, ಲಂಕೇಶರ ಸಂಕ್ರಾಂತಿ ಹಾಗೂ ಈಡಿಪಸ್ ಅನುವಾದ - ಈ ಮೂರೂ ನಾಟಕಗಳ ಮೂರು ದಿನಗಳ ಒಂದು ನಾಟಕೋತ್ಸವ ಆಚರಿಸಲು ನಿರ್ಧರಿಸಿದೆವು. ಮೂರೂ ನಾಟಕಗಳನ್ನು ನಿರ್ದೇಶಿಸಲು ಆಗ ದೆಹಲಿಯಲ್ಲಿದ್ದ ಬಿ.ವಿ. ಕಾರಂತರನ್ನು, ನಟಿಸಲು ಸಿನಿಮಾ ಸ್ಟಾರ್ ಖ್ಯಾತಿಯ ಗಿರೀಶ್ ಕಾರ್ನಾಡರನ್ನು ಕರೆಸಿ, ಒಂದು ತಿಂಗಳು ರಿಹರ್ಸಲ್ ಮಾಡಿ ಕಲಾಕ್ಷೇತ್ರದ ಬಯಲನ್ನು ರಂಗವಾಗಿಸಿ ಆಡಿದೆವು. 

ಮೊದಲನೇ ದಿನ ಮೊದಲನೇ ಶೋ ಜೋಕುಮಾರಸ್ವಾಮಿ ನಾಟಕ ಮುಗಿಸಿ ಪ್ರತಿಕ್ರಿಯೆಗಾಗಿ ಹೊರಗೆ ಬಂದರೆ ಗೌಡನ ಪಾತ್ರ ಗಿರೀಶರಿಲ್ಲ, ನಾಟಕಕೋರ ನಾನಿಲ್ಲ, ನಿರ್ದೇಶಕ ಕಾರಂತರಿಲ್ಲ - ಎಲ್ಲರ ಬಾಯಿ ತುಂಬ ಗಿರಿಜಾ ಗಿರಿಜಾ..... ಆ ದಿನ ಶಿವರಾಮ ಕಾರಂತರು ನಾಟಕ ನೋಡಲು ಬಂದಿದ್ದರು. ಅವರ ಅಭಿಪ್ರಾಯ ನನ್ನ ಸ್ನೇಹಿತರಿಂದ, ತಿಳಿಯಿತು : ಶಿವರಾಮ ಕಾರಂತರು ಗಿರಿಜಾ ನಟನೆಯನ್ನು ತುಂಬ ಹೊಗಳಿದರು! ಮನೆಗೆ ಹೋದವರೇ ಅವಸರದಲ್ಲಿ ತಮ್ಮ ಮಗಳನ್ನು ಎರಡನೇ ಶೋ ನೋಡಲು ಕಳಿಸಿದರು! 

ಇಂಥದೇ ಇನ್ನೊಂದು ಘಟನೆ ಹೇಳುತ್ತೇನೆ : ಜೋಕುಮಾರಸ್ವಾಮಿ ಒಂದೇ ವಾರದಲ್ಲಿ ಇಡೀ ದೇಶದ ರಂಗಾಸಕ್ತರ ಕುತೂಹಲ ಕೆರಳಿಸಿತು. ದೆಹಲಿಯ ನಾಟ್ಯ ಸಂಘದ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಬಂತು. ಪ್ರಶಸ್ತಿ ಕೊಡುವ ದಿನ ನಾಟಕದ ಪ್ರದರ್ಶನವೂ ಇರಬೇಕೆಂದು ತಂಡಕ್ಕೂ ಕರೆ ಬಂತು. ಸುದೈವದಿಂದ ಆ ದಿನ ನಾಟಕ ಪ್ರದರ್ಶನಕ್ಕೆ ಅಲ್ಕಾಜಿ ಬಂದಿದ್ದರು, ನಾಟಕ ನೋಡಿ ನಮ್ಮ ಇಡೀ ತಂಡಕ್ಕೆ ಮಾರನೇ ದಿನ ಎನ್‍ಎಸ್‍ಡಿಗೆ ಟೀ ಗೆ ಬರಬೇಕೆಂದೂ ಕರೆ ಬಂತು. ಅಲ್ಕಾಜಿ ಸಾಮಾನ್ಯರೇ, ಆಧುನಿಕ ಭರತಮುನಿಯೆಂಬಷ್ಟು ಗೌರವಾನ್ವಿತರು. ನಮ್ಮ ನಾಟಕದ ಸ್ತ್ರೀ ಪಾತ್ರಗಳ ಪ್ರತಿಭೆಯನ್ನ ಹೊಗಳಿ ಮಾತಾಡಿದರು. ಅವರ ಬಾಯಲ್ಲೂ ಗಿರಿಜಮ್ಮನೇ! ಹೋಗುವಾಗಿರಲಿಲ್ಲ, ಬರುವಾಗ ಟ್ರೇನಿನಲ್ಲಿ ಸಹ ನಟನಟಿಯರ ಬಾಯಲ್ಲೂ ಗಿರಿಜಮ್ಮನೇ. ಆಗಲೇ ಅವರು ತಮ್ಮ ಸಹ ನಟಿಯರ ಮುಂದೆ `ಗುಂಗುರು ಕೂದಲಿನ ಹುಡುಗ’ನೊಬ್ಬನ ಬಗ್ಗೆ ಮೋಗಂ ಬಾಯಿಬಿಟ್ಟಿದ್ದರು. ಅದು ಮುಂದೆ ಲೋಕೇಶನೊಂದಿಗಿನ ಮದುವೆಯಲ್ಲಿ ನಿಜವಾಯಿತು. ಇರಲಿ, ಕಪ್ಪಣ್ಣ, ನಾಗೇಶ್, ಕಾರಂತ, ಲೋಕೇಶ್, ಸಿಂಹ ಇತ್ಯಾದಿ ಅವರ ಬಳಗದ ಒಂದೆರಡು ನಾಟಕ ಪ್ರವಾಸದಲ್ಲೂ ನಾನಿದ್ದೆನೆಂದು ನೆನಪು, ನನ್ನ ನಾಟಕದಲ್ಲಿ, ನನ್ನ ಸಿನೆಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದ ಲೋಕೇಶ್ ನಾನು ನೆರೆ ಹೊರೆಯಾಗಿ ಬಂದ ಅಲ್ಪಾವಧಿಯಲ್ಲೇ ನಮ್ಮನ್ನಗಲಿದರು. ಗಿರಿಜಮ್ಮನ ಮೇಲೆ ಬಿದ್ದ ಕೌಟುಂಬಿಕ ಭಾರ ನಮ್ಮ ಕಲ್ಪನೆಗೆ ಮೀರಿದ್ದು. ಎಳೆಯ ಮಕ್ಕಳನ್ನು ಉಡಿಯಲ್ಲಿ ಕಟ್ಟಿಕೊಂಡು ಅವರಿಗೆ ಅತ್ಯುತ್ತಮ ಭವಿಷ್ಯ ಕಟ್ಟಿಕೊಟ್ಟು ಅವರ ಬಾಳು ಬೆಳಗುವಂತೆ ಮಾಡಿ ನಗುನಗುತ್ತ ಎಲ್ಲರಿಗೂ ಬೇಕಾಗಿ ಬೆಲ್ಲದ ಹೇರಾಗಿ ಬದುಕುವುದು ಸಣ್ಣ ಸಾಧನೆಯಲ್ಲ.

ಗಿರಿಜಮ್ಮ ಕನ್ನಡದ ಅತ್ಯುತ್ತಮ ರಂಗನಟಿಯರಲ್ಲಿ ಒಬ್ಬರು. ನಟನೆಯಲ್ಲಿ ಲೋಕೇಶ ನಂತೆ ತಮ್ಮದೂ ಒಂದು ಶೈಲಿಯನ್ನು ಸೃಷ್ಟಿಸಿಕೊಂಡು ರಂಗಕ್ಷೇತ್ರದಲ್ಲಿ, ಗಟ್ಟಿಯಾಗಿ ನಿಂತು ಚರಿತ್ರೆ ನಿರ್ಮಿಸಿಕೊಂಡವರು. ``ದಿನಕ್ಕೆ ನಾಲ್ಕು ನಾಟಕಗಳ ನಾಲ್ಕು ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿದ್ದು..... ಆಗ ಅಂಥ ಎನರ್ಜಿ ಇತ್ತು. ಅನಿವಾರ್ಯತೆಯೂ ಇತ್ತು..... ಹೊಟ್ಟೆ ಎಲ್ಲವನ್ನೂ ಕಲಿಸುತ್ತದೆ. ಎಷ್ಟು ಬೇಕಾದರೂ ದುಡಿಸುತ್ತದೆ’’ - ತಪಸ್ವಿನಿ ಗಿರಿಜಮ್ಮನ ಮಾತುಗಳಿವು!  

ವಿಶೇಷವೆಂದರೆ ಇದು ಆತ್ಮಚರಿತ್ರೆ. ಸಾಮಾನ್ಯವಾಗಿ ಆತ್ಮಚರಿತ್ರೆಗಳೆಂದರೆ ಸತ್ಯ ಹೇಳುವ ನೆಪದಲ್ಲಿ ತಮ್ಮನ್ನು ತಾವು ವೈಭವಿಸಿಕೊಳ್ಳುವ ಆತ್ಮಪ್ರಶಂಸೆಗಳಾಗಿರುತ್ತವೆ. ಆಶ್ಚರ್ಯವೆಂದರೆ ಇಲ್ಲಿಯ ಸಾಕ್ಷಿಪ್ರಜ್ಞೆ ತನ್ನನ್ನು ತಾನು ನಿಯಂತ್ರಿಸಿಕೊಂಡು ತಾನೊಬ್ಬ ಸಾಮಾನ್ಯ ನಟಿ, ಮಡದಿ, ತಾಯಿ ಎಂಬ ಪ್ರಜ್ಞೆ ಅವರನ್ನು ದಾರಿ ತಪ್ಪಿಸಿಲ್ಲ. ಆದ್ದರಿಂದಲೇ ಇದು ಇಷ್ಟೊಂದು ಸೊಗಸಾದ ಆತ್ಮಚರಿತ್ರೆಯಾಗಿರೋದು.

ಕನ್ನಡದ ಹೆಮ್ಮೆಯ ಕಲಾವಿದೆ, ಮತ್ತು ತಾಯಿಯಾದ ಗಿರಿಜಮ್ಮನವರಿಗೆ ವಂದನೆಗಳು. ಹಲ್ಲುಕಚ್ಚಿ ವಾಸ್ತವತೆಗೆ ಕಟ್ಟುಬಿದ್ದು ಅತ್ಯುತ್ತಮ ಆತ್ಮಚರಿತ್ರೆ ನೀಡಿದ ಮಿತ್ರ ಜೋಗಿ ಅವರಿಗೂ ನಮ್ಮ ಅಭಿನಂದನೆಗಳು ಸಲ್ಲುತ್ತವೆ.

MORE FEATURES

ಪ್ರಾಚೀನ ಕನ್ನಡ ಸಾಹಿತ್ಯವು ಸಂಸ್ಕೃತ ಸಾಹಿತ್ಯದ ಪರಿಪೋಷಣೆ

02-10-2024 ಬೆಂಗಳೂರು

"ಪಂಪ, ರನ್ನ, ಲಕ್ಷ್ಮೀಶರಂತಹ ಮೇರು ಕವಿಗಳು ನೇರವಾಗಿಯೋ, ಪರೋಕ್ಷವಾಗಿಯೋ ಪ್ರಾಚೀನ ಕಾವ್ಯವಸ್ತುವನ್ನು ತೆಗೆದುಕೊಂಡ...

ನಾಗತಿಹಳ್ಳಿಯವರ ಪ್ರವಾಸಕಥನಗಳು ಇಷ್ಟವಾಗುವುದು ಇಂತಹ ಕಾರಣಗಳಿಗಾಗಿಯೇ !!

01-10-2024 ಬೆಂಗಳೂರು

“ಪ್ರಾಕೃತಿಕವಾಗಿ ಅಗರ್ಭ ಶ್ರೀಮಂತಿಕೆಯನ್ನು ಹೊಂದಿರುವ ದ್ವೀಪರಾಷ್ಟ್ರಗಳಾದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ...

ವಿಜ್ಞಾನದ ಲೇಖನಗಳನ್ನು ಮೊದಲ ಬಾರಿಗೆ ಪ್ರೂಫ್ ಮಾಡಿದ್ದೊಂದು ಹೊಸ ಅನುಭವ

01-10-2024 ಬೆಂಗಳೂರು

"ದಂಡೇಲಿ ನಿಂತು ನೋಡ್ದಾಗ ಸಮುದ್ರ ವಿಶಾಲವಾಗಿ, ಒಂದೇ ಸಮನಾಗಿರುವಂತೆ ಕಾವ್ಯಾತ್ಮಕವಾಗಿ ಕಾಣ್ಸುತ್ತೆ. ಅದೆ ಸಮುದ್ರ...