ಹೂವು-ಹಣ್ಣು-ಹಸಿರು ತರಕಾರಿಗಳಿಲ್ಲದ ಜೀವನ ಬೇಗೆಯ ಬರಡು..


“ಕಾಡು ನಾಡಾಗುತ್ತಿದೆ, ಹೊಲಗದ್ದೆಗಳು ನಿವೇಶನಗಳಾಗುತ್ತಿವೆ. ನೆಲದ ಕಸುವು ಇಲ್ಲವಾಗುತ್ತಿದೆ. ಬಗೆಬಗೆಯ ಹಣ್ಣು, ತರಕಾರಿ, ಹೂವುಗಳು ಮಾರಾಟದ ವಸ್ತುಗಳಾಗಿವೆ. ಔಷಧೀಯ ಸಸ್ಯಗಳೂ ಸಸ್ಯಗಳೂ ಮಾಯವಾಗುತ್ತಿವೆ. ಈ ಕೊರತೆಯನ್ನು ನೀಗಿಸಲೋ ಎಂಬಂತೆ ನಮ್ಮೊಡನಿರುವ 'ಮಾತೃಮಡಿಲು' ಸುಂದರ ನಂದನವಾಗಿ ಕಂಗೊಳಿಸಿದೆ,” ಎನ್ನುತ್ತಾರೆ ಪ್ರದೀಪಕುಮಾರ ಹೆಬ್ರಿ. ಅವರು ಕೆ.ವಿ. ಲಕ್ಷ್ಮಣ ಮೂರ್ತಿ ಅವರ ‘ಮಾತೃಮಡಿಲು’ ಕವನ ಸಂಕಲನಕ್ಕೆ ಬರೆದ ಮುನ್ನುಡಿ.

ನಮ್ಮ ಜೀವಜಗತ್ತಿನ ಜೀವಿಗಳೆಲ್ಲರೂ ಆರೋಗ್ಯವಂತ ಬದುಕಿಗೆ ಆಶಿಸುವುದು ಮುಖ್ಯವಾಗಿ ಹೂವು, ಹಣ್ಣು ಮತ್ತು ತರಕಾರಿಗಳನ್ನು, ಪುಟ್ಟದಾದ ಗಿಡಗಳಿಂದ ಆಗಸದೆತ್ತರದ ವೃಕ್ಷ ಸಂಪತ್ತು ಚಂದದ ಗಾಳಿ, ನೆರಳು, ಹಸಿರು, ಆಸರೆಯೊಡನೆ ಹೂವು- ಹಣ್ಣು, ತರಕಾರಿಗಳನ್ನು ಧಾರಾಳವಾಗಿ ನೀಡುತ್ತ ಬದುಕ ಸಂಪದಕ್ಕೆ ಕಾರಣವಾಗಿರುವುದನ್ನು ನಾವಾರೂ ಮರೆಯಬಾರದು! ಇಂತಹ ಸಸ್ಯಸಂಪದದ ಪ್ರತಿರೂಪವಾಗಿ ನಮ್ಮ ಕರವನ್ನು ಅಲಂಕರಿಸಿರುವ ಹೂಹಸಿರ ಸಿರಿಯೇ 'ಮಾತೃಮಡಿಲು' ಎಂಬ ಕವನ ಸಂಕಲನ. ಮಾವು, ಟಮೋಟ, ಫಲಾಮೃತ, ಹಲಸು, ನೇರಳೆಹಣ್ಣು, ಬಾಳೆಹಣ್ಣು, ಫರಂಗಿಹಣ್ಣು, ಕಾಡು ಹಣ್ಣುಗಳು, ಪಾರಿಜಾತ, ಮಲ್ಲಿಗೆ, ಕಮಲ, ಬ್ರಹ್ಮಕಮಲ, ಗುಲಾಬಿ, ಮೊಲ್ಲೆ, ನಳನಳಿಸುತ್ತಿರುವ 'ಮಾತೃಮಡಿಲು' ತನ್ನ ಹಲವಾರು ರೆಂಬೆ-ಕೊಂಬೆಗಳಲ್ಲಿ ಬಗೆಬಗೆಯ ಹೂವುಗಳನ್ನು ಅರಳಿಸಿ ಘಮಘಮಿಸಿ ನಗುತ್ತಿವೆ. ಹಸಿ ತರಕಾರಿಗಳಾದ ಬದನೆಕಾಯಿ, ಹಾಗಲಕಾಯಿಗಳು ಆರೋಗ್ಯದಾಯಕವಾಗಿವೆ. ಇದರೊಡನೆ ಗಿಡದ ಮಹತ್ವ, ಹಣ್ಣುಗಳ ಮಹತ್ವ, ಆರೋಗ್ಯಕ್ಕೆ ಹಣ್ಣು, ಫಲಾಮೃತ, ದೇವನ ಕೊಡುಗೆ, ಆರೋಗ್ಯದ ಬುತ್ತಿ, ಮಿತದಿ ಸೇವಿಸಿ ಆರೋಗ್ಯ ವೃದ್ಧಿಸಿ, ಹಣ್ಣಿನ ತೋಟ, ಮಂದಿಯ ಊಟ, ಪುಷ್ಪಾಲಯ, ಚೆಲುವಿನ ಹೂಗಳು, ಮನುಜಕುಲ, ಹೂವಿನ ಸ್ವಗತ, ಶನಿವಾರದ ಸಂತೆ, ಸತ್ವಪೂರ್ಣ ಕಾಯಿಪಲ್ಲೆಗಳು, ತರಕಾರಿಗಳ ತಾಕತ್ತು ಎಂಬ ಸೊಗದಾನಂದವನ್ನೂ ಮನದಣಿಯೆ ಉಣಿಸಿದೆ. 'ಮಾತೃಮಡಿಲು' ಖಂಡಿತವಾಗಿ ಅಕ್ಷರರೂಪೀ ಹಸಿರ ನಂದನ. ಓದಿದಂತೆ ಸವಿಯುವ ಆನಂದವೂ ಮೈದುಂಬುತ್ತದೆ.

ಕಾಡು ನಾಡಾಗುತ್ತಿದೆ, ಹೊಲಗದ್ದೆಗಳು ನಿವೇಶನಗಳಾಗುತ್ತಿವೆ. ನೆಲದ ಕಸುವು ಇಲ್ಲವಾಗುತ್ತಿದೆ. ಬಗೆಬಗೆಯ ಹಣ್ಣು, ತರಕಾರಿ, ಹೂವುಗಳು ಮಾರಾಟದ ವಸ್ತುಗಳಾಗಿವೆ. ಔಷಧೀಯ ಸಸ್ಯಗಳೂ ಮಾಯವಾಗುತ್ತಿವೆ. ಈ ಕೊರತೆಯನ್ನು ನೀಗಿಸಲೋ ಎಂಬಂತೆ ನಮ್ಮೊಡನಿರುವ 'ಮಾತೃಮಡಿಲು' ಸುಂದರ ನಂದನವಾಗಿ ಕಂಗೊಳಿಸಿದೆ. ಈ ಕೃತಿಯು ಮಾನವನ ಆರೋಗ್ಯ ಬದುಕಿನ ಹಾಗೂ ಆನಂದದ ತವರಾದ ಅಮೂಲ್ಯ ಸಸ್ಯಗಳ ಬಗ್ಗೆ ಅರಿವನ್ನು ಹಾಗೂ ಪ್ರೀತಿಯನ್ನು ತುಂಬಿ ಅಭಿಲಾಷೆಯ ಹೆಜ್ಜೆಯಿಡುವಂತೆ ಮಾಡುತ್ತದೆ ಎಂಬ ನಂಬಿಕೆ ನನಗಿದೆ.

ನಾವು ಮಾನವರು. ಹಸಿರು ಗಿಡಗಳ ಪಾಲಿಗೆ ದಾನವರಾಗುವುದು ಬೇಡ. ಸಾವಿರ ಸಾವಿರ ವರ್ಷಗಳಿಂದ ಈ ಹೂ-ಹಣ್ಣು-ತರಕಾರಿ ಹಸಿರು ಸಸ್ಯಗಳು ನಮ್ಮನ್ನು ಉಳಿಸಿವೆ. ಉಳಿಸುತ್ತಿವೆ. ನಾವೀಗ ಇವುಗಳನ್ನು ಉಳಿಸುವಲ್ಲಿ ಮುಂದಾಗಿ ಈ 'ಮಾತೃಮಡಿಲು' ಕವನ ಸಂಕಲನದ ಸಂಪಾದಕರಿಗೆ, ಪುಷ್ಪ, ಕವನಗಳಿಂದ ಹಸಿರಾನಂದ ತುಂಬಿ ಕವಿಗಳೆಲ್ಲರಿಗೂ ಪ್ರೀತಿಯ ವಂದನೆ. ಹಾರ್ದಿಕ ಅಭಿನಂದನೆಗಳು. ಈ 'ಮಾತೃಮಡಿಲು' ಸಸ್ಯದ ಫಲಗಳನ್ನು ತಾವೆಲ್ಲರೂ ಓದಿ, ಆಸ್ವಾದಿಸಿ ಆನಂದಿಸಬೇಕೆನ್ನುವ ಒಲವ ಅಭಿಲಾಶೆಯೊಡನೆ ಒಂದಷ್ಟನ್ನು ಕಿರಿದಾಗಿ ಪರಿಚಯಿಸುವೆ:

'ಫಲರಾಜ ಮಾವಿನಹಣ್ಣ’ ನ್ನು ವರ್ಣಿಸುತ್ತ ಕವಿ ಲಕ್ಷ್ಮೀ ವಿ. ಭಟ್ ಅವರ ನುಡಿಗಳಿವು:-

"ತೂಗುತ ತೊನೆಯುವ ಮಾವಿನ ಫಲವಿದು
ಬಾಗುತ ನಮಿಪೆ ದೇವನಿಗೆ
ಪರ್ವದ ಕಾಲದಿ ಸರ್ವರು ಮೆಚ್ಚುವ
ಸವಿನಯ ಅಮೃತ ಈ ಫಲವು| ''

'ಹಣ್ಣುಗಳ ಮಹತ್ವ'ವನ್ನರುಹಿದ ಕವಿ ವಸುಧಾಪ್ರಭು ರವರ ಕೆಲ ನುಡಿಗಳಿವು:-

'ಪ್ರತೀ ಹಣ್ಣುಗಳಿಗೂ ಇವೆ ಅದರದೇ ಮಹತ್ವ
ತುಂಬಿ ತುಳುಕುತಿದೆ ಪ್ರತಿ ಹಣ್ಣಿನಲ್ಲೂ ಸತ್ವ
ಬೇರೆ ಆಹಾರದೊಡನೆ ನಾವು ತಿನ್ನೋಣ ಹಣ್ಣುಗಳನ್ನು
ಕಾಪಾಡುವ ಎಲ್ಲರೂ ನಮ್ಮ ನಮ್ಮ ಆರೋಗ್ಯವನ್ನು!"

'ಆರೋಗ್ಯಕ್ಕೆ ಹಣ್ಣು'ಗಳ ಅನಿವಾರ್ಯತೆ ಹಾಗೂ ಅವಶ್ಯಕತೆಯನ್ನು ಕವಿ ಮಂಚಶೆಟ್ಟಿ ಅವರು ತುಂಬ ಸೊಗಸಾಗಿ ನಿರೂಪಿಸಿದ್ದಾರೆ. ದನಿ ಕೊಡೋಣ:-

“ಜೀವನ ಉತ್ಸಾಹ ಹೆಚ್ಚಿಸುವ ಶಕ್ತಿಭರಿತ ಸೇಬು
ದೇಹದಲ್ಲಿ ರಕ್ತ ಹೆಚ್ಚಿಸಿ ಕಾಪಾಡುವ ಖರ್ಜೂರ ಬೇಕು
ದಣಿವನ್ನು ನೀಗಿಸಿ ಗಂಟಲು ಸರಿ ಮಾಡುವ ಕಿತ್ತಳೆ
ಹಸಿವು ನೀಗಿಸುವ ಹಲಸಿನ ಹಣ್ಣು ಬೇಕು ಬಾಳಿಗೆ||''

ಹಸಿರು ಸಸ್ಯಗಳ ನಾಶ ಮಾಡಿದರೆ ಜೀವಿಗಳ ಬದುಕೆ ಭೀಭತ್ಸವಾದೀತೆಂಬ ಭೀತಿಯನ್ನು ಕವಿ ರಾಜೇಶ್ವರಿ ದೇವೇಂದ್ರ ಅವರು ತಮ್ಮ 'ಫಲಾಮೃತ'ದಲ್ಲಿ ಬಿತ್ತರಿಸಿದ್ದಿಂತು:-

'ರೋಗ ನಿರೋಧಕ ಶಕ್ತಿಯ ಸಫಲತೆಗಳು!
ಪ್ರಕೃತಿ ಮಾತೆಯು ನೀಡಿದ ವಿವಿಧ ಹಣ್ಣುಗಳು
ಆರೋಗ್ಯ ಕಾಪಾಡುವ ನೈಸರ್ಗಿಕ ಸಂಪತ್ತುಗಳು
ಭಗವಂತನು ನೀಡಿದ ಸಮೃದ್ಧ ಫಲಗಳು।''
ಇದೇ ರೀತಿ ಶ್ರೀಕಲಾ ಬಿ. ಕಾರಂತ ಅವರು ತಮ್ಮ 'ಆರೋಗ್ಯದಾ ಬುತ್ತಿ' ಕವನದಲ್ಲಿ
"ಹಣ್ಣುಗಳ ತೋಟದಲಿ ಹಕ್ಕಿಯಿಂಚರ ದಿನವೂ
ಮನದ ದುಗುಡವ ದೂರ ಒಯ್ಯುತಿಹುದು
ಸ್ವಸ್ಥ ಬದುಕಿನ ಹಾದಿ ಖಗಮಿಗವು ಕಲಿಸುತಿವೆ
ಫಲದೊಳಗೆ ಜೀವನವೇ ನಲಿಯುತಿಹುದು"

ಎಂದು, ಸಪೋಟಾ, ಅನಾನಸು, ಕಲ್ಲಂಗಡಿ, ಬಾಳೆಹಣ್ಣು, ಪಪ್ಪಾಯಿ, ಮೂಸಂಬಿ, ಸೇಬು, ಕಿತ್ತಲೆ, ದಾಳಿಂಬೆ, ಹಲಸು ಹಣ್ಣುಗಳ ಉಪಯುಕ್ತತೆಯನ್ನು ಚಂದದಲ್ಲರುಹಿದ್ದಾರೆ.

ಮನ ಸೆಳೆದ ಸಾಲುಗಳಿವು:
“ಬಂಗಾರ ಬಣ್ಣವನು ಹೊತ್ತಂಥ ತೊಳೆಗಳವು''
- ಹಸಿವೆಗಾಧಾರ ಹಲಸು -ಬಿ. ಸತ್ಯವತಿ ಭಟ್ ಕೊಳಚಪ್ಪು
"ರೋಗಗಳ ತಡೆಗಟ್ಟುವ ನಿಯಂತ್ರಕ'
- ನೇರಳೆಹಣ್ಣು ನಾ ಜಂಬುಹಣ್ಣು -ಹೆಚ್. ನಾಗರತ್ನ
“ನಮ್ಮ ಹಣ್ಣುಗಳ ರಾಜ ಮಾವು"
- ಫಲಗಳ ರಾಜ -ಎಸ್.ಟಿ. ಶಾಂತಕುಮಾರಿ (ಕಾಸಿಂ)
"ಸವಿಯಿರಿ ಎಲ್ಲಾ ರೀತಿಯ ಹಣ್ಣು
ಪಡೆಯಿರಿ ಎಲ್ಲಾ ವಿಟಮಿನ್ನು''
- ಹಣ್ಣು - ಶಿವಪ್ರಿಯೆ
“ಉತ್ತಮ ಆರೋಗ್ಯಕ್ಕೆ ಉಪಯುಕ್ತ ಈ ಹಣ್ಣು"
- ನೇರಳೆ ಹಣ್ಣು - ಕಮಲಮ್ಮ ಐಕೆಜಿಬಿ
“ಬಾಳೆಹಣ್ಣು ನೀನು ಆರೋಗ್ಯದ ಕಣ್ಣು"
- ಬಾಳೆಹಣ್ಣು - ಕೆ.ವಿ. ಲಕ್ಷ್ಮಣ ಮೂರ್ತಿ
''ಹಣ್ಣವೋ ಹಣ್ಣು ಬಾಯಿರುಚಿ ತಣಿಸೋ ರಂಗಿನ ಹಣ್ಣು''
- ಹಣ್ಣಪ್ಪೋ ಹಣ್ಣು - ಶ್ರೀಮತಿ ಮಂದಾರ
"ಸೊಂಪಿನ ಮರವದು ಸ್ವಾಸ್ಥ್ಯದ ಕೊಡುಗೆ"
- ನೀಲಿ ಸುಂದರಿ ನೇರಳೆಹಣ್ಣು -ಆಶಾ ಅಡೂರ್
“ನೆನಪಿನ ಪುಟಗಳ ಸ್ವಾದವ ಹೆಚ್ಚಿಸಿ
ಮೋದವ ನೀಡಿಹ ಹಣ್ಣುಗಳು"
- ಕಾಡುಹಣ್ಣುಗಳು - ವಿದ್ಯಾಶ್ರೀ ಅಡೂರ್
'ಹಲಸೆಂದರೆ ಹಣ್ಣುರಾಜನು ಹಣ್ಣುಗಳಲಿ''
- ಮಿತದಿ ಸೇವಿಸಿ -ಎಂ. ರಮಿತಾ ಎ. ಶೆಟ್ಟಿ
“ನಿನಗಾಗಿ ನಾನು ಹಣ್ಣನು ತರುವೆ''
- ಹಣ್ಣಿನ ತೋಟ -ಸಾವಿತ್ರಮ್ಮ ಓಂ
"ಪ್ರೀತಿಸುವ ಮನಕೆ ಪ್ರೇಮಸಿರಿ ಮಲ್ಲಿಗೆ"
- ಪ್ರೇಮಕೆ ಸಾಕ್ಷಿ -ಕಲ್ಪನಾ ಎಸ್. ಪಾಟೀಲ್
"ಜಗದ ಸುಂದರತೆಯ ಸಿಂಗಾರದ ಸಿರಿ"
- ಪುಷ್ಪ ಕವನ - ಕವಿಮಿತ್ರ ಕುಣಿಗಲ್ ದಿವಾಕರ್
"ಒಂದು ದಿನದಲಿ ಅಳಿವುದಾದರು?
ಹಿರಿಮೆ ಮೆರೆಯುವ ಸುಮಗಳು"
- ಪಾರಿಜಾತ - ಪೆಲ್ಮುಖ ಸುಬ್ರಹ್ಮಣ ಭಟ್
"ಪ್ರಕೃತಿಯ ಮಡಿಲಲ್ಲಿ ನಾನಾ ವಿಧದ ರಂಗು ರಂಗಿನ ಹೂವು
ಸೇರುವೆ ಹಣ್ಣಿನ ಮುಡಿಯ ಈಶನ ಅಡಿಯ"
- ಏ ನನ್ನ ಮುದ್ದು ಹೂವೇ -ಗೋಪಾಲ ಕ. ದೇಶಪಾಂಡೆ
“ಹೂತೋಟದ ಹೂವುಗಳು ಶಿವನಿಗೆ ಅಲಯ"
- ಪುಷ್ಪಾಲಯ - ಆರ್.ಪಿ. ಕುಲಕರ್ಣಿ
“ಹಣ್ಣ ಸವಿದು ಎಸೆದ ಬೀಜವು
ಮತ್ತೆ ಚಿಗುರಾಗಿ ಗಿಡವಾಗಿ"
- ಮನುಜಕುಲ - ಶಾಂತಲಾ ಸುರೇಶ್
"ಕೆಸರಲಿ ಹುಟ್ಟಿದರೂ ಕೊಳೆಗಂಟದೇ ಸಮ
ಚಿತ್ರದಿ ಹಸನಾಗಿ ಬಾಳಿಹೆನು"
- ಸುಮರಾಣಿ ಕಮಲ -ಮಧು ವಸ್ತ್ರದ್
'ದೇವಲೋಕದ ಅಪೂರ್ವ ಚೆಲುವೆ
ಕುಸುಮ ಸುಂದರಿ ಬ್ರಹ್ಮ ಕಮಲೆ''
- ಬ್ರಹ್ಮ ಕಮಲೆ - ಸುಧಾ ಎನ್. ತೇಲ್ಕರ್
'ಬಿಳಿ ಕೆಂಪು ಮೊಗ್ಗಾಗಿದ್ದ ನಾನು ಅರಳಿದಾಗ
ನೋಡಿ ಸಂತಸ ಪಟ್ಟರು ನಾ ಬಿರಿದಾಗ"
- ಹೂವಿನ ಸ್ವಗತ - ಶುಭಾ ಶ್ರೀನಾಥ್
“ಟಂಟಂ ಟಮೋಟ
ನೀನಿಲ್ಲದೆ ನಮಗಿಲ್ಲ ಸವಿಯೂಟ"
- ಟಮೋಟ - ಮಧುಕರ್ ರಾವ್
“ಕರಿಬೇವಿನ ಗಿಡವೊಂದಿರಲಿ ಹಿತ್ತಲಲಿ
ಉಪಯೋಗಿಸಿದರೆ ತೀರಿಸಲಾರಿರಿ ಅವರ ಋಣ''
- ಕರಿಬೇವಿನ ಸೊಪ್ಪು - ಕೆ.ವಿ. ಲಕ್ಷ್ಮಣ ಮೂರ್ತಿ

ಹೂವು-ಹಣ್ಣು-ಹಸಿರು ತರಕಾರಿಗಳಿಲ್ಲದ ಜೀವನ ಬೇಗೆಯ ಬರಡು. ಬದುಕು ಅಂದದಲ್ಲೂ ಆನಂದದಲ್ಲೂ ಇರಬೇಕಾದರೆ ದಿನವೂ ಹಣ್ಣು, ಹೂವು, ತರಕಾರಿಗಳು ಬದುಕಿನ ಭಾಗವಾಗಿರಬೇಕು. 'ಮಾತೃಮಡಿಲು' ಕವನ ಸಂಕಲನದ ಸಂಪಾದಕರಾದ ಶ್ರೀ ಕೆ.ವಿ. ಲಕ್ಷ್ಮಣ ಮೂರ್ತಿ ರವರು ಸ್ತುತ್ಯಾರ್ಹ ಕಾರ್ಯ ಮಾಡಿದ್ದಾರೆ. ಹೂವ ಮಾಲೆಯ ಧರಿಸಿ, ಹಣ್ಣನ್ನು ಸವಿದು, ತರಕಾರಿಯನು ಮೆದ್ದು ಆನಂದ ಪಡುತ್ತೇವೆ. ಆದರೆ ಇದನ್ನು ಅಕ್ಷರ ರೂಪದಲ್ಲಿ ಬೆಳೆಸಿದ ಕವಿಗಳನ್ನು ಒಂದೆಡೆ ಸೇರಿಸಿ ಅವರ 'ಬೆಳೆ'ಯೆನುವ ಆನಂದವನ್ನು 'ಕವನ ಸಂಕಲನ'ವೆನ್ನುವ ಚಂದದ ಬುಟ್ಟಿಯಾಗಿಸಿದ ಶ್ರೀ ಕೆ.ವಿ. ಲಕ್ಷ್ಮಣ ಮೂರ್ತಿಯರವರಿಗೆ ಅಭಿನಂದನೆಗಳು.

ನಮ್ಮ ಕಣ್ಣೆದುರು ಇರುವ ಎಲ್ಲವೂ ನಿನ್ನೆ ಪರಿಚಯ ತೋರಿ, ಇಂದು ನಮ್ಮೊಡನೆ ಇದ್ದು ನಾಳೆ ಕಾಣದಾಗುವಂತಹವುಗಳು. ಹಾಗಾಗಿ ನಿನ್ನೆ ಪರಿಚಯ ತೋರಿ ಇಂದು ನಮ್ಮೊಡನಿದ್ದು ಆನಂದ ನೀಡುವ 'ಜೀವರಸ' ರೂಪೀ ಹಣ್ಣು- ಹೂವು-ತರಕಾರಿಗಳ ಸುಂದರ ಮಾಲೆಯಾಗಿಸಿ 'ಮಾತೃಮಡಿಲು' ಎಂಬ ಶಿರೋನಾಮೆಯಿಂದ ಕಂಗೊಳಿಸುವಂತೆ ಮಾಡಿದ ಎಲ್ಲರನ್ನೂ ಮತ್ತೊಮ್ಮೆ ಹಾರ್ದಿಕವಾಗಿ ಅಭಿನಂದಿಸುತ್ತ ಇಂತಹ ಕ್ರಿಯಾಶೀಲ ಜೀವ ಸಂವೇದಕ ಚಟುವಟಿಕೆಗಳು ನಿರಂತರವಾಗಿರಲಿ ಎಂದಾಶಿಸುವೆ.

- ಡಾ. ಪ್ರದೀಪಕುಮಾರ ಹೆಬ್ರಿ ವೈದ್ಯರು, ಹಿರಿಯ ಸಾಹಿತಿಗಳು

 

MORE FEATURES

ಮರೆತು ಹೋದ ವಾಸ್ತವಗಳಿಗೆ ಬರಹದ ರೂಪ ಕೊಟ್ಟಿರುವುದು ಆಕಸ್ಮಿಕ: ಶ್ರೀಧರ್ ನಾಯಕ್

21-10-2024 ಬೆಂಗಳೂರು

“ನಾನು ಹತ್ತು ಹಲವು ಹವ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಪುಸ್ತಕಗಳ ಓದು, ಪ್ರವಾಸ, ಛಾಯಾಚಿತ್ರಗ್ರಹಣ, ಇಂಗ್ಲಿ...

'ಸದರಬಜಾ‌ರ್' ಕಾದಂಬರಿಯ ವಸ್ತು ಎಂಬತ್ತನೆಯ ದಶಕದ್ದು

21-10-2024 ಬೆಂಗಳೂರು

“ಬೃಹತ್ ಕಾದಂಬರಿಯ ರಚನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಕ್ರಿಕೆಟ್ ಪರಿಭಾಷೆಯಲ್ಲಿ ಹೇಳುವಂತೆ, ಟೆಸ್ಟ್ ಕ್ರಿಕೆಟ...

ಮೂರೂ ಕಥನಗಳು ಮೂರು ದಿಕ್ಕಿನವು

20-10-2024 ಬೆಂಗಳೂರು

"ಮೂರೂ ಕಥನಗಳು ಮೂರು ದಿಕ್ಕಿನವು. ಹಾಗಾಗಿ, ಒಟ್ಟು ಓದು ಸ್ವಲ್ಪ ಚದುರಿದಂತೆ ಅನ್ನಿಸಿದರೂ ಕುತೂಹಲಕರವಾಗಿತ್ತು,&qu...