“ಎಷ್ಟೊಂದು ಜನರು; ಅವರಲ್ಲಿ ಸ್ನೇಹ ಸಂಬಂಧಗಳ ವಲಯದೊಳಗೆ ಬಂದವರು, ಸಹಾಯ ಹಸ್ತ ಚಾಚಿದವರು, ನಮ್ಮಿಂದ ಸಹಾಯ ಪಡೆದವರು, ನಡೆನುಡಿಗಳಿಂದ ವ್ಯಕ್ತಿತ್ವದಿಂದ ಸ್ಪೂರ್ತಿಪ್ರದರಾದವರು ಇವರೆಲ್ಲ ಭಾವಕೋಶದಲ್ಲಿ ನೆಲೆಗೊಂಡು ಆಗಾಗ ಭಾವ ತರಂಗಗಳನ್ನು ಮಿಡಿಯುತ್ತಿರುತ್ತಾರೆ. ಇದೇ ಬದುಕಿನ ಸಿಹಿ ಹೂರಣ ಎನಿಸುತ್ತದೆ” ಎನ್ನುತ್ತಾರೆ ಲೇಖಕಿ ಕೆ.ಆರ್. ಉಮಾದೇವಿ ಉರಾಳ. ಅವರು ತಮ್ಮ ʻಮುಳ್ಳುಬೇಲಿಯ ಹೂಬಳ್ಳಿʼ ಪುಸ್ತಕದಲ್ಲಿ ʻಹೂಬಳ್ಳಿಯ ಹೂವರಳುವ ಮುನ್ನʼ ಶೀರ್ಷಿಕೆಯಡಿ ಬರೆದ ಮಾತುಗಳು ನಿಮ್ಮ ಓದಿಗಾಗಿ.
ಬದುಕಿನಲ್ಲಿ ಸಾಗಿ ಬಂದ ದಾರಿಯನ್ನು ಹಿಂದಿರುಗಿ ನೋಡಿದಾಗ ಮನಸ್ಸಿನ ಮೇಲೆ ಅಚ್ಚಳಿಯದ ಪರಿಣಾಮ ಬೀರಿದ ಅವೆಷ್ಟೋ ವಿಧವಿಧದ ಘಟನೆಗಳು, ಸನ್ನಿವೇಶಗಳು ಮನದಲ್ಲಿ ಅಚ್ಚೊತ್ತಿ ಬೀಡು ಬಿಟ್ಟಿರುತ್ತವೆ. ಎಷ್ಟೊಂದು ಜನರು; ಅವರಲ್ಲಿ ಸ್ನೇಹ ಸಂಬಂಧಗಳ ವಲಯದೊಳಗೆ ಬಂದವರು, ಸಹಾಯ ಹಸ್ತ ಚಾಚಿದವರು, ನಮ್ಮಿಂದ ಸಹಾಯ ಪಡೆದವರು, ನಡೆನುಡಿಗಳಿಂದ ವ್ಯಕ್ತಿತ್ವದಿಂದ ಸ್ಪೂರ್ತಿಪ್ರದರಾದವರು ಇವರೆಲ್ಲ ಭಾವಕೋಶದಲ್ಲಿ ನೆಲೆಗೊಂಡು ಆಗಾಗ ಭಾವ ತರಂಗಗಳನ್ನು ಮಿಡಿಯುತ್ತಿರುತ್ತಾರೆ. ಇದೇ ಬದುಕಿನ ಸಿಹಿ ಹೂರಣ ಎನಿಸುತ್ತದೆ. ಅದರದೇ ನೆಲೆಯಲ್ಲಿ ನೆಲೆಗೊಂಡ, ನೋವನ್ನೇ ಮಿಡಿವ ಘಟನೆಗಳು ಸನ್ನಿವೇಶಗಳು ವ್ಯಕ್ತಿಗಳನ್ನು ಕೂಡ ಭಾವಕೋಶ ಆಗಾಗ ತೆರೆದು ತೋರಿಸುತ್ತಿರುತ್ತದೆ. ಈ ಹಿಂದಿನೆಲ್ಲ ಸಿಹಿಕಹಿ ಘಟನೆಗಳನ್ನು ಒಂದು ಹದಗೊಂಡ ಮನಃಸ್ಥಿತಿಯಲ್ಲಿ ನಿರುಕಿಸಲು ಸಾಧ್ಯವಾಗುತ್ತಿದೆ ಎನಿಸಿದಾಗ ಅವುಗಳಿಗೆ ಬರಹ ರೂಪ ಕೊಟ್ಟು ಅಭಿವ್ಯಕ್ತಿಸಬೇಕೆನ್ನಿಸುತ್ತದೆ. ಆಗ ನಾನು ಆಯ್ದುಕೊಂಡಿದ್ದು ಸುಲಭವೆಂದೆನಿಸಿದ ಪ್ರಬಂಧ ಪ್ರಕಾರವನ್ನು.
ಹಾಗೆ ಬರೆದ ಪ್ರಬಂಧಗಳನ್ನು ಪತ್ರಿಕೆಗಳಿಗೆ ಕಳಿಸಿದೆ. ಸುಧಾ, ಪ್ರಜಾವಾಣಿ, ಕಸ್ತೂರಿ, ಹೊಸತು, ತುಷಾರ, ವಿಜಯ ಕರ್ನಾಟಕ, ಛಲಗಾರ ಪತ್ರಿಕೆಗಳಲ್ಲಿ, ಕೆಂಡಸಂಪಿಗೆ ಮತ್ತು ಅವಧಿ ಬ್ಲಾಗ್‌ಗಳಲ್ಲಿ ಇಲ್ಲಿನ ಲೇಖನಗಳು ಪ್ರಕಟಗೊಂಡಿವೆ. ಜಾರ್ಜಿಯಾದ ಅಟ್ಲಾಂಟಾದ ನೃಪತುಂಗ ಕನ್ನಡ ಕೂಟ ಸಂಚಿಕೆಯಲ್ಲಿ, ತುಂಗಾ ಸುವರ್ಣ ತರಂಗ, ಸುವರ್ಣ ಗಣಪ ಸ್ಮರಣ ಸಂಚಿಕೆ - ಇವುಗಳು ಕೂಡ ಇವನ್ನು ಪ್ರಕಟಿಸಿರುವುದನ್ನು ಧನ್ಯವಾದಗಳೊಂದಿಗೆ ನೆನೆಯುತ್ತೇನೆ. ಇವನ್ನು ಓದಿದ ಸಹೃದಯ ಓದುಗರನೇಕರು ಪತ್ರ ಬರೆದು, ದೂರವಾಣಿ ಮೂಲಕ, ಪತ್ರಿಕೆಗಳಲ್ಲಿ ಪ್ರತಿಕ್ರಿಯಿಸಿ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಬರವಣಿಗೆಗೆ ಸ್ಫೂರ್ತಿ ನೀಡಿದೆ.
***
ʻಮುಳ್ಳುಬೇಲಿಯ ಹೋಬಳ್ಳಿʼ ಕೃತಿಯ ಆಯ್ದ ಭಾಗ ಇಲ್ಲಿದೆ...
ಕಾಲನ ಜಾಲ
ನಾನು ಬೆಳಗಿನ ವಾಕಿಂಗ್ ಹೋದಾಗ ಕೆಲವೊಂದು ದಿನ ನನಗೆ ಭೇಟಿಯಾಗುವವಳು ಸೀತಮ್ಮ. ಅದೇ ದಾರಿಯನ್ನು ಗುತ್ತಿಗೆ ಹಿಡಿದಿರುವವರಂತೆ ದಿನವೂ ಬರುವ ನನ್ನಂತೆ ಮತ್ತು ಇನ್ನೂ ಹಲವರಂತೆ ಇವಳು ವಾಕಿಂಗ್‌ವಾಲಿಯಲ್ಲ. ಅಲ್ಲೇ ತುಂಗಾ ನದಿ ದಡದಲ್ಲಿ ಅವಳ ಪುಟ್ಟ ಮನೆ ಇದೆ. ಬೇರೊಬ್ಬರ ಮನೆಯಿಂದ ಬೆಳಗಿನ ಹಾಲು ಹಾಕಿಸಿಕೊಳ್ಳಲು ಬರುವ ಅವಳು ಮನೆಗೆ ಹೋಗಿ ಚಾ ಕಾಸಿ ಮನೆಯವರಿಗೆಲ್ಲ ಕೊಟ್ಟು ತಾನೂ ಕುಡಿದು ಎಂಟು ಗಂಟೆಗೆಲ್ಲ ದೂರದಲ್ಲಿರುವ ಇನ್ನೊಬ್ಬರ ಮನೆಗೆ ಕೆಲಸಕ್ಕೆ ಹಾಜರಾಗಬೇಕು. ಅವಳು ಅಲಾರಾಂ ಕೀ ಕೊಟ್ಟ ಗಡಿಯಾರದಂತೆ ಕೇಳುತ್ತಾಳೆ, “ಅಮ್ಮ ಟೇಮೆಷ್ಟಾತು?” ನಾನೊಮ್ಮೆ ವಾಚು ನೋಡಿ ಸಮಯ ಹೇಳಿದರೆ ಅವಳಿಗೆ ನೆಮ್ಮದಿ. ದಿನವೂ ನಿರ್ದಿಷ್ಟ ಸಮಯಕ್ಕೆ ಮನೆ ಬಿಡುವ ನನಗೆ ಅವಳು ನಿರ್ದಿಷ್ಟ ಜಾಗದಲ್ಲಿ ಸಿಗುವುದರಿಂದ ಸಾಧಾರಣವಾಗಿ ಅವಳ ಪ್ರಶ್ನೆಗೆ ನನ್ನ ಉತ್ತರ 'ಏಳು ಗಂಟೆ' ಎಂದಿರುತ್ತದೆ. ಆದರೂ ನನ್ನನ್ನು ನೋಡಿದಾಗ ಟೇಪ್ ಹಾಕಿದಂತೆ ಈ ಪ್ರಶ್ನೆ ಅವಳು ಕೇಳಬೇಕು, ಅದೇ ಉತ್ತರ ನಾನು ಹೇಳಬೇಕು. ಏಕೆಂದರೆ ನನ್ನೊಂದಿಗೆ ಏನಾದರೂ ಒಂದೆರಡು ಮಾತು ಬೆಳೆಸಬೇಕೆಂಬ ಇರಾದೆ ಅವಳಿಗಿರುತ್ತದೆ. ಅದಕ್ಕಾಗಿ ಈ ಪೀಠಿಕೆ ಎಂದು ನನಗೆ ಚೆನ್ನಾಗಿ ಗೊತ್ತು. ಹಾಗಾಗಿ ಒಂದೊಂದು ದಿನ ನಾನೇ ಏನಾದರೂ ಲೋಕಾಭಿರಾಮವಾಗಿ ಒಂದೆರಡು ಮಾತು ಪ್ರಾರಂಭಿಸುತ್ತೇನೆ. ಮಾತಿಗೆ ಚಾಲನೆ ಕೊಟ್ಟರಾಯಿತು, ಸೀತಮ್ಮ ಆಡಿಕೊಂಡು ಹೋಗುತ್ತಾಳೆ. ಹೆಚ್ಚು ಮಾತು ನನಗೆ ಬೇಕಿರುವುದೂ ಇಲ್ಲ. ಸಮಯವಿರುವುದೂ ಇಲ್ಲ. ಆದರೂ ಈ ಒಂದೆರಡು ಮಾತುಗಳ ನಂತರ ಅವಳು “ಆತು, ಅಮಾ, ನಾ ಹೋತೀನಿ” ಎಂದು ಆತ್ಮೀಯವಾಗಿ ವಿದಾಯ ಹೇಳಿ ತನ್ನ ಮನೆಯ ದಾರಿ ಹಿಡಿಯುತ್ತಾಳೆ. ಸುಖಾಸುಮ್ಮನೆ ಒಂದು ಆತ್ಮೀಯ ಭಾವ ಬೆಳಗಾ ಮುಂಚೆ ನಮ್ಮಿಬ್ಬರಲ್ಲಿ ಸದ್ದಿಲ್ಲದೇ ಹರಿದಾಡಿರುತ್ತದೆ.
ಹೀಗೇ ಇತ್ತೀಚೆಗೊಮ್ಮೆ ಅವಳಿಂದ ಬೀಳ್ಕೊಂಡು ಮುಂದುವರಿದಾಗ ನನಗೆ ಅನಿಸಿತು, ಸದ್ಯ ಸೀತಮ್ಮ ಟೇಮೆಷ್ಟಾತು ಎಂದು ಕೇಳುತ್ತಾಳೆ, ʻಅಮ್ಮ ಟೇಮೆಂದ್ರೇನು?' ಎಂದೇನಾದರೂ ಅವಳು ಕೇಳಿದರೆ ಎಂಬ ವಿಲಕ್ಷಣ ಪ್ರಶ್ನೆಯೊಂದು ಮನಸ್ಸಿನಲ್ಲಿ ಮೂಡಿತು. ಹಾಗೇ ಈ ಬಗ್ಗೆ ಯೋಚಿಸುತ್ತಾ ಮುಂದೆ ನಡೆಯುತ್ತಿದ್ದಂತೆ ಈ ಪ್ರಶ್ನೆಯ ಸ್ವರೂಪದಿಂದಾಗಿ ಬೆಚ್ಚಿ ಬೀಳುವಂತಾಯ್ತು. ಸಮಯವೆಂಬುದೇನು ಎಂಬ ಪ್ರಶ್ನೆ ಸಮಯವೆಷ್ಟು ಎಂಬ ಪ್ರಶ್ನೆಗೆ ಉತ್ತರಿಸಿದಷ್ಟು ಸುಲಭದ್ದಲ್ಲ. ಏಕೆಂದರೆ ಸಮಯದ ಸ್ವರೂಪವೇ ಅಂಥದ್ದು. ನಮ್ಮ ಅಳವಿಗೆ ನಿಲುಕದ್ದು, ಅಮೂರ್ತವಾದ ಅದರ ಬಗೆಗಿನ ಜಿಜ್ಞಾಸೆ ದಾರ್ಶನಿಕ ಚರ್ಚೆಗೆ ಸಂವಾದಕ್ಕೆ ಎಡೆಮಾಡಿಕೊಡುವಂಥದ್ದು ಎನಿಸಿತು.
ನಿಜಕ್ಕೂ ಈ ಕಾಲ ಎನ್ನುವುದು ಎಷ್ಟು ವಿಚಿತ್ರವಾದದ್ದು. ನಾವು ಚಿಕ್ಕವರಿರುವಾಗ ಜಾತ್ರೆಯಲ್ಲಿ ಗರ್ದಿಗಮ್ಮತ್ತು ಎಂದೆನಿಸಿಕೊಳ್ಳುವ ಮಾಯಾಪೆಟ್ಟಿಗೆ ಎಂಬುದು ಬರುತ್ತಿತ್ತು. ಅದರ ಒಡೆಯ ನಾಲ್ಕು ಕಾಲುಗಳ ಮೇಲೆ ಇರಿಸಿದ ಚೌಕಾಕಾರದ ಪೆಟ್ಟಿಗೆಗೆ ಕಪ್ಪು ಮುಸುಕು ಹೊದಿಸಿರುತ್ತಿದ್ದ. ತಲೆಗೊಂದು ಉದ್ದದ ಬಣ್ಣಬಣ್ಣದ ಕುಚ್ಚು ಇರುವ ಟೋಪಿ ಹಾಕಿರುತ್ತಿದ್ದ. ಲಯಬದ್ಧವಾಗಿ ಕೈಯ್ಯಲ್ಲಿನ ಗೆಜ್ಜೆಕೋಲು ಆಡಿಸುತ್ತಾ ಭುಜ ಕುತ್ತಿಗೆ ಸೊಂಟವನ್ನು ಲಯಕ್ಕನುಗುಣವಾಗಿ ತೊನೆಯುತ್ತಾ ದೊಡ್ಡ ಧ್ವನಿಯಲ್ಲಿ ಆತ
ಆಹ! ಬೊಂಬಾಯಿ ನಗ್ರ ನೋಡು
ದಿಲ್ಲೀಯ ಚೆಲ್ವು ನೋಡು
ಮದ್ರಾಸು ಸೀಮೆ ನೋಡು
ಬೆಂಗ್ಳೂರ ಅಂದ ನೋಡು
ಮೈಸೂರ ಚಂದ ನೋಡು
ಎಂದು ಮುಂತಾಗಿ ಹಾಡುತ್ತ ಆಹ್ವಾನಿಸುತ್ತಿದ್ದ. ಮಕ್ಕಳೆಲ್ಲ ಮೈಯೆಲ್ಲಾ ಕಾತುರ ತುಂಬಿ ಆ ಕಪ್ಪು ಮುಸುಕಿನೊಳಗಿಣುಕಿ ವಿಶ್ವದರ್ಶನದ ಮ್ಯಾಜಿಕ್ ನೋಡಲು ತುದಿಗಾಲಲ್ಲಿ ನಿಂತು ಕಾದಿರುತ್ತಿದ್ದೆವು. ತಾನು ನಿಂತಲ್ಲಿಂದಲೇ ಎಲ್ಲರಿಗೆ ವಿಶ್ವದರ್ಶನ ಮಾಡಿಸುತ್ತಿದ್ದ ಆ ಮಾಯಾಪೆಟ್ಟಿಗೆಯಂಥ ಮಾಯಾಂಗನೆ ಈ ಕಾಲ ಎನ್ನಬಹುದೇನೋ. ಏಕೆಂದರೆ ಒಮ್ಮೆ ಇದು ಬಣ್ಣಬಣ್ಣದ ಆಕರ್ಷಕ ರೆಕ್ಕೆಪುಕ್ಕವುಳ್ಳ ಸುಂದರ ಹಕ್ಕಿಯಂತೆ ಕಾಣುತ್ತದೆ. ಬದುಕೊಂದು ರಸಗವಳವಾಗಿರುತ್ತದೆ. ಚುರುಕು ಚೈತನ್ಯಶೀಲತೆಯ ಚಟುವಟಿಕೆಗಳಿಗೆ ದಿನದ ಇಪ್ಪತ್ನಾಲಕ್ಕು ಗಂಟೆಗಳು ಯಾಕೂ ಸಾಲವು ಎನಿಸುತ್ತಿರುತ್ತದೆ. ಆ ದೇವರೇಕೆ ಇಷ್ಟು ಜುಗ್ಗತನದಿಂದ ದಿನಕ್ಕೆ ಇಪ್ಪತ್ನಾಲ್ಕೇ ಗಂಟೆ ಎಂದು ಮಾಡಿದ ಎನಿಸುತ್ತಿರುತ್ತದೆ. ಅದೇ ಕೆಲವೊಮ್ಮೆ ಕಾಲ ಎನ್ನುವುದು ಅನಾಕರ್ಷಕವಾದ ಅತಿ ನಿಧಾನವಾಗಿ ತೆವಳುವ ಬಸವನ ಹುಳದಂತೆ ಭಾಸವಾಗುತ್ತದೆ. ಕ್ಷಣವೊಂದು ಯುಗದಂತೆ ಎನಿಸುತ್ತದೆ. ದಿನದ ಇಪ್ಪತ್ನಾಲ್ಕು ತಾಸುಗಳು ಯಾವಾಗ ಮುಗಿಯುತ್ತವೆಯೋ ಎನಿಸುತ್ತದೆ. ಪರಭಾಷೆಯ ಪರರಾಜ್ಯದ ದೂರದೂರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೀವು ಕುಟುಂಬದ ಒಂದು ಸಂತೋಷದ ಸಮಾರಂಭದಲ್ಲಿ ಭಾಗಿಯಾಗಲು ರೈಲು ಪ್ರಯಾಣ ಕೈಗೊಂಡಿದ್ದೀರಿ. ಈ ಸಮಾರಂಭದಲ್ಲಿ ನಿಮ್ಮ ಕುಟುಂಬದ ಎಲ್ಲ ಸದಸ್ಯರು, ನೆಂಟರಿಷ್ಟರು, ಸ್ನೇಹಿತರು ಎಲ್ಲ ಬರುವವರಿದ್ದಾರೆ. ಈ ರೈಲು ಪ್ರಯಾಣದ ಅವಧಿ ಎನ್ನುವುದು ನಿಮಗೆ ಆ ಬಸವನ ಹುಳದ ಗತಿಯಂತೆ ಭಾಸವಾಗುತ್ತದೆ. ಅದೇ ನೀವು ನಿಮ್ಮ ಕುಟುಂಬವನ್ನು ಸೇರಿದಾಗ? ಬಣ್ಣಬಣ್ಣದ ರೆಕ್ಕೆಪುಕ್ಕ ಬಿಚ್ಚಿ ಪುರೆಂದು ಹಾರಿಯೇ ಹೋಗುವ ಹಕ್ಕಿಯಂತೆ ನಿಮ್ಮ ರಜೆಯ ಅವಧಿಯ ಕಾಲವೂ ಮಾಯವೇ ಆಗಿಬಿಡುತ್ತದೇನೋ ಎನಿಸಿಬಿಡುತ್ತದೆ. ಮಂಜೂರು ಮಾಡಿಸಿಕೊಂಡ ನಾಲ್ಕಾರು ದಿನಗಳ ರಜೆ ಅವಧಿ ಎನ್ನುವುದು ನಾಲ್ಕಾರು ಕ್ಷಣಗಳದ್ದೆನಿಸಿ ಬಿಡುತ್ತದೆ. ಇದ್ದಲ್ಲಿಂದಲೇ ರಜೆಯನ್ನು ವಿಸ್ತರಿಸಲು ಸೂಕ್ತ (ಕುಂಟು) ನೆಪವೊಡ್ಡಿ ರಜೆಯನ್ನು ವಿಸ್ತರಿಸಲು ಮನಸ್ಸು ಹಾತೊರೆಯುತ್ತದೆ. ಈಗ ಹೇಳಿ, ಒಮ್ಮೆ ಹಾಗೂ ಕಾಣುವ ಇನ್ನೊಮ್ಮೆ ಹೀಗೂ ಕಾಣುವ ಕಾಲವು ಮಾಯಾಂಗನೆಯಲ್ಲದೆ ಮತ್ತಿನ್ನೇನು?
ಅಮೂರ್ತವಾದ, ಅಳತೆಗೆ ನಿಲುಕದ ಕಾಲವನ್ನು ನಾವು ನಮ್ಮ ಅಳವಿಗೆ ತಂದುಕೊಳ್ಳಲು ಭೂತ, ವರ್ತಮಾನ ಮತ್ತು ಭವಿಷ್ಯತ್‌ಕಾಲ ಎಂದು ವಿಂಗಡಿಸಿಕೊಂಡಿದ್ದೇವೆ. ಇದರಲ್ಲಿ ಭೂತಕಾಲ ಸರಿದುಹೋದ ದಿನಗಳಿಗೆ ಸಂಬಂಧಿಸಿದ್ದು. ಆ ಸರಿದುಹೋದ ದಿನಗಳಲ್ಲಿ ನಮ್ಮ ಬಾಳ ಪುಟಗಳಲ್ಲಿ ಕೆಲವು ಘಟನೆಗಳು, ಸನ್ನಿವೇಶಗಳು ವ್ಯಕ್ತಿಗಳಿಂದ ಅಳಿಸಲಾಗದ ಶಾಯಿಯಿಂದ ಹಾಕಿದ ಕೆಲವು ರುಜುಗಳು ಮೂಡಿಬಿಟ್ಟಿರುತ್ತವೆ. ಇದರಿಂದಾಗಿ “ಕಳೆದ ನಿನ್ನೆಯು ಕತ್ತಲು” ಎಂದು ಸಾರಾಸಗಟಾಗಿ ಭೂತಕಾಲವನ್ನು ಬದಿಗೊತ್ತಲು ನಮಗಾಗುವುದಿಲ್ಲ. ಭೂತಕಾಲದ ಬೇರು ನಮಗೆ ವರ್ತಮಾನ ಕಾಲಕ್ಕೆ ಆಧಾರವಾಗಿರುತ್ತದೆ. ನಮ್ಮ ದೃಷ್ಟಿ ಭವಿಷ್ಯದಲ್ಲಿ ಅದು ನೀಡಲಿರುವ ಹಣ್ಣು ಹೂಗಳ ಮೇಲಿರುತ್ತದೆ. ಅದರಲ್ಲೂ ಭೂತಕಾಲಕ್ಕೆ ಸಂಬಂಧಿಸಿದ ಬಾಲ್ಯಕಾಲ ಎನ್ನುವುದು ಎಲ್ಲರಿಗೂ ಸುಂದರವಾಗಿ ನಳನಳಿಸುವ ಬಣ್ಣಬಣ್ಣದ ಹೂಗಳ ನಂದನವನದಂತೆ ಎಂದು ಭಾಸವಾಗುತ್ತದೆ. ಆದ್ದರಿಂದಲೇ “ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು, ಅದು ಬಾಲ್ಯವಾಗಿತ್ತು” ಎಂದಾಗಲೀ, “ಬಾಳ ಸಂಪುಟದಲ್ಲಿ ಬಾಲ್ಯವೆಂಬುದೊಂದು ಅಳಿಸಲಾಗದ ಮಧುರ ಭಾವಗೀತೆ” ಎಂದಾಗಲೀ ಕವಿವರ್ಯರು ಹಾಡಿ ಬಾಲ್ಯದ ಮಧುರ ಸ್ಮೃತಿಯಲ್ಲಿ ತೇಲಿಹೋಗಬಯಸುತ್ತಿದ್ದುದು. ಗೆಳೆಯರನ್ನು ಕಾಡಿ ಬೇಡಿ ಪಡೆದ ನವಿಲುಗರಿಯನ್ನು ಪುಸ್ತಕದ ಪುಟಗಳಲ್ಲಿಟ್ಟು ದೀರ್ಘಕಾಲ ಪುಟ ತೆರೆದು ನೋಡದಿದ್ದಲ್ಲಿ ಆ ಗರಿ ಮರಿ ಹಾಕಿರುತ್ತದೆಂದು ನಂಬಿದ್ದು, ಹಾರುವ ಬೆಳ್ಳಕ್ಕಿಗಳನ್ನು ಕಂಡಾಗ ತಕ್ಷಣ ಬೆರಳುಗಳನ್ನು ಮುಚ್ಚಿ 'ಬೆಳ್ಳಕ್ಕಿ, ಬೆಳ್ಳಕ್ಕಿ, ಬೆಳ್ಳಿ ಕೊಡ್, ಬೆಲ್ಲ ತರ್ತೀನಿ ಹಾರಿ ಬಾ' ಎಂದು ಗಟ್ಟಿಯಾಗಿ ಹೇಳಿ ಉಗುರುಗಳ ಮೇಲೆ ಬೆಳ್ಳಕ್ಕಿಯ ಸುಂದರ ಚಿತ್ತಾರ ಮೂಡಿರುತ್ತದೆ ಎಂದು ಕಾತುರದಿಂದ ನೋಡುತ್ತಿದ್ದುದು, ಎಳೆಯ ಮಕ್ಕಳ ಹಾಲು ಹಲ್ಲು ಉದುರಿ ಬಿದ್ದಾಗ ಅದನ್ನು ಸಗಣಿ ಉಂಡೆಯೊಳಗಿಟ್ಟು ಮನೆಯ ಮಾಡಿನ ಮೇಲೆ ಎಸೆಯುತ್ತಾ “ಅಜ್ಜಿ, ಅಜ್ಜಿ, ಹಳೇ ಹಲ್ ಕೊಡ್ತೀನಿ, ಹೊಸಾ ಹಲ್ ಕೊಡು” ಎಂದು ಕೋರಿಕೆ ಮುಂದಿಡುವಾಗ ಆ ಕಾಣದ ಪ್ರೇಮಮಯಿ ಅಜ್ಜಿಯ ಕುರಿತು ಸಂಶಯವೇ ಇರದಿದ್ದುದು ಮುಂತಾದ ಅಪನಂಬಿಕೆಗೆ ಎಡೆಯೇ ಇಲ್ಲದ ಮುಗ್ಧ ನಂಬಿಕೆಗಳನ್ನು ಬಾಲ್ಯದಲ್ಲಲ್ಲದೆ ಇನ್ಯಾವ ಕಾಲದಲ್ಲಿ ಕಾಣಲು ಸಾಧ್ಯ! ಆದ್ದರಿಂದಲೇ ಆ ಮುಗ್ಧತೆಯ ನೆನಪುಗಳನ್ನಾದರೂ ಉಳಿಸಿಕೊಳ್ಳಲು ಮನಸ್ಸು ಹವಣಿಸುತ್ತದೆ.
ಬಾಲ್ಯಕಾಲ ನಂದನವನದಂತಿದ್ದರೆ, ವೃದ್ಧಾಪ್ಯಕಾಲ? ಸದ್ಯ, ಅದು ಬಿರುಬಿಸಿಲ ಮರುಭೂಮಿಯಂತಿರದಿದ್ದರೆ ಸಾಕೆನಿಸಿರುತ್ತದೆ. ಇನ್ನು ಬಾಲ್ಯವನ್ನು ಸವಿವವರು, ವೃದ್ಧಾಪ್ಯವನ್ನು ಯಾತನಾಮಯ ಹೊರೆಯಂತೆ ಹೊರುವವರು ಇದ್ದಾಗಲೇ 'ನಮ್ಮ ಕಾಲ ಇಷ್ಟು ಕೆಟ್ಟಿರಲಿಲ್ಲ' ಎಂದು ತಮ್ಮ ಮಕ್ಕಳಿಗೆ ಹೇಳುವ ಮಧ್ಯವಯಸ್ಕರೂ ಇರುತ್ತಾರೆ. ತಮ್ಮ ತಂದೆ-ತಾಯಿಯರಿಂದ ಅವರು ಕೇಳಿದ ಈ ಮಾತು ಮುಂದೊಂದು ದಿನ ಅವರ ಮಕ್ಕಳ ಬಾಯಿಂದಲೂ ಬಂದೀತು.
ಮಹಾಭಾರತದಲ್ಲಿ ಯಕ್ಷಪ್ರಶ್ನೆಯಲ್ಲಿ 'ಗಾಳಿಗಿಂತ ವೇಗವಾಗಿ ಚಲಿಸಬಲ್ಲದ್ದು ಯಾವುದು?' ಎಂಬ ಪ್ರಶ್ನೆಗೆ ಧರ್ಮರಾಯನು 'ಮನಸ್ಸು' ಎಂಬ ಸರಿಯುತ್ತರ
ನೀಡಿದ್ದನು ಎಂದು ಕೇಳಿದ್ದೇವೆ. ಈ ಮನಸ್ಸಿನ ಭಾವನೆಗಳಿಗೇನಾದರೂ ಕಾಲವನ್ನು ಗೆಲ್ಲುವ ಶಕ್ತಿ ಇದ್ದೀತೆ? ಕೆಲವರ ಜೀವನೋತ್ಸಾಹ, ಸಂಕಲ್ಪಶಕ್ತಿ, ಸೃಜನಶೀಲತೆ ಅಕಾಲಾಬಾಧಿತವಾಗಿರುವುದು ನೋಡುವಾಗ ಹೀಗನಿಸುತ್ತದೆ. ಅವರು ವೃತ್ತಿಗೆ ಸೇರುವಾಗ ಹೊಂದಿದ್ದ ಅದೇ ಪುಟಿದೇಳುವ ಉತ್ಸಾಹವನ್ನೇ ನಿವೃತ್ತಿ ಹೊಂದುವವರೆಗೂ ಕಾಪಾಡಿಕೊಂಡು ಬಂದಿರುತ್ತಾರೆ. ಅಷ್ಟೇಕೆ, ನಿವೃತ್ತಿಯ ನಂತರವೂ ಸೇವಾ ಮನೋಭಾವದಿಂದ ತಮ್ಮ ಕರ್ತವ್ಯವನ್ನು ಅಗತ್ಯವಿರುವ ಸಂಸ್ಥೆಗಳಿಗೆ ಸಲ್ಲಿಸುವ ಅಧ್ಯಾಪಕರು, ವೈದ್ಯರು ಮುಂತಾದವರನ್ನು ಕಾಣಬಹುದು. ಇಂಥ ಜೀವನೋತ್ಸಾಹದ ಗೃಹಿಣಿಯರನೇಕರು ದೈನಂದಿನ ಯಾಂತ್ರಿಕ ಗೃಹಕೃತ್ಯದ ಕೆಲಸಗಳ ಗಾಣದಡಿ ಸಿಕ್ಕು ತಮ್ಮ ಪ್ರತಿಭೆ ರಸ ಸೋರಿ ಸೊಪ್ಪಾಗಿ ಹೋಗದಿರುವಂತೆ ಕಾಪಾಡಿಕೊಂಡು ಬಂದಿರುತ್ತಾರೆ. ಇಂತಹವರ ಜೀವನೋತ್ಸಾಹ ಕಾಲದ ಬಿಸಿಯುಸಿರ ಸೋಂಕಿಂದ ಇವರನ್ನು ಸಂರಕ್ಷಿಸಿ, ಚಿರಯೌವನಿಗರಾಗಿರಿಸಿರುತ್ತದೆ. ಇಂತಹವರನ್ನು ನೋಡಿದಾಗ ಹಿರಿಯರೊಬ್ಬರು ಹೇಳುತ್ತಿದ್ದ ಮಾತುಗಳು ನೆನಪಾಗುತ್ತವೆ. “ನೋಬಡಿ ಗ್ರೌಸ್ ಓಲ್ಡ್; ಹಿ ಹೂ ಸ್ಟಾಪ್ಸ್ ಗ್ರೌವಿಂಗ್ ಬಿಕಮ್ಸ್ ಓಲ್ಡ್”.
ಕಾಲಕ್ಕಿಂತ ದೊಡ್ಡ ನೋವು ನಿವಾರಕ ಬಾಮ್ (ಮುಲಾಮು) ನಮಗೆ ಯಾವುದೇ ಮಾರುಕಟ್ಟೆಯಲ್ಲಿ ಎಷ್ಟೇ ದುಡ್ಡು ಕೊಡುತ್ತೇನೆಂದರೂ ಕೊಳ್ಳಲು ಸಿಗದು. ಕೈಮೀರಿದ ಹತಾಶ ಪರಿಸ್ಥಿತಿ, ವಿಧಿಯ ಆಘಾತ, ಸೋಲು ಮುಂತಾದವುಗಳನ್ನು ಮೇಲಿಂದಮೇಲೆ ಸರಣಿಯಂತೆ ಅನುಭವಿಸಿ ಜರ್ಝರಿತವಾಗಿ ನೆಲಕಚ್ಚಿದವನು ಇನ್ನೆಂದಿಗೂ ಚೇತರಿಸಿಕೊಳ್ಳುವುದು ಸಾಧ್ಯವೇ ಇಲ್ಲದ್ದು ಎಂದು ನೋಡುವವರಿಗೆ ಅನಿಸುತ್ತಿರುತ್ತದೆ. ಆದರೆ ತಿಂಗಳುಗಳು, ವರ್ಷಗಳು ಎಂದು ಕಾಲಚಕ್ರ ಉರುಳಿದಂತೆ ನೆಲಕಚ್ಚಿದವನು ಎದೆಸೆಟೆಸಿ ತಲೆಯೆತ್ತಿ ಎದ್ದು ನಿಂತಿರುತ್ತಾನೆ. ಸಹನೆಯೊಂದಿದ್ದಲ್ಲಿ ಕೊರಡನ್ನೂ ಕೊನರಿಸಬಲ್ಲ ಕಸುವು ಕೇವಲ ಕಾಲರಾಯನಿಗೆ ಮಾತ್ರ ಮೀಸಲು.
ನಾಳೆಯೆಂಬೆಯಾ?
ನಾಳೆ ಸೇರ್ವುದು ನೂರ್ಕೋಟಿ ನಿನ್ನೆಗಳ ಜೊತೆಗೆ
ನಮ್ಮಾಯಸ್ಸಿನ ಪಕ್ಕಿ ಪಾರ್ವ ದೂರವೆ ಕಿರಿದು
ಅದು ರೆಕ್ಕೆಯೆತ್ತಿಹುದು, ನೋಡು, ಮನ ಮಾಡು
ಎಂಬ ಜಾಗ್ರತ ಪ್ರಜ್ಞೆಯ ಕ್ರಿಯಾಶೀಲರಿರುತ್ತಾರೆ. ಅಂತಹವರತ್ತ ಮಾತ್ರ ಕಾಲ ತನ್ನ ಕೃಪಾಕಟಾಕ್ಷ ಬೀರುತ್ತದೆ. ಅಂತಹವರು ಸರಿದುಹೋಗುವ ಬಾಳ ದಾರಿಯಲ್ಲಿ ತಮ್ಮ ಶಾಶ್ವತ ಹೆಜ್ಜೆ ಗುರುತು ಮೂಡಿಸುವ ಸಾಧಕರಾಗಲು ತನ್ನ ಸಹಾಯ ಹಸ್ತ ಮುಂಚಾಚುತ್ತದೆ. ಹ್ಞಾಂ, ಅಂದಹಾಗೆ ಕಾಲರಾಯ ಎಂದಿಗೂ ಮಿತಿಯ ಚೌಕಟ್ಟನ್ನು ಮೀರದವನು ತಾನೆ? ಆದ್ದರಿಂದ ಈ ವಿಚಾರವನ್ನು ಹಿಗ್ಗಾಮುಗ್ಗಾ ಎಳೆದು ಓದುಗರ ಕಾಲಹರಣ ಮಾಡಬೇಡ ಎಂದು ಮನಸ್ಸು ಕಾಲೋಚಿತವಾದ ಸಲಹೆ ಕೊಡುತ್ತಿದೆ. ಆದ್ದರಿಂದ, ಪೂರ್ಣವಿರಾಮವಿಡಲೇ?
****
"ಇತ್ತೀಚೆಗೆ ಅವರ ‘ಗೀತಾಂತರಂಗ’ ಕೃತಿ ಸಿಕ್ಕಿತು. ಇದು ಅವರ ಸಂಶೋಧನಾ ಕೃತಿ. ಅವರು ಇದನ್ನು ಬರೆದಿದ್...
"ಇತಿಹಾಸವನ್ನು ಮುರಿದು ಕಟ್ಟುವುದರ ಜತೆಗೆ ಅಲ್ಲಿರುವ ಲೋಪದೋಷಗಳನ್ನು ಸರಿಪಡಿಸುತ್ತಾ ಸತ್ಯವನ್ನು ನಾವು ದಾಖಲಿಸಬೇಕ...
"ಕವಿತೆ ಬಗ್ಗೆ ಹಿಂದಿನಿಂದ ಇವತ್ತಿನವರೆಗೆ ವಿದ್ವಾಂಸರು ಹತ್ತಾರು ನುಡಿಗಳನ್ನು ಹೇಳುತ್ತಲೆ ಬಂದಿದ್ದಾರೆ. ಅಂದರೆ ತ...
©2024 Book Brahma Private Limited.