ಅಮ್ಮನಂತೆ ಸಂತೈಸುತ್ತಾ, ಅಕ್ಕನಂತೆ ಗದರುತ್ತಾ, ಅಪ್ಪನಂತೆ ಮಮತೆಯಿಂದ ಅಪ್ಪುತ್ತಾ, ಅಣ್ಣನಂತೆ ಬೆಂಗಾವಲಾಗಿ ಆಸರೆಯಾಗುತ್ತಾ, ಸ್ನೇಹಿತೆಯಂತೆ ನಮ್ಮ ತಪ್ಪುಗಳನ್ನು ತಿದ್ದುತ್ತಾ, ನಮ್ಮಲ್ಲೊಂದು ಸಕಾರಾತ್ಮಕ ಬದಲಾವಣೆಯನ್ನು ಮೂಡಿಸಬಲ್ಲ ಆಪ್ತ ಬರಹಗಳಿವು ಎನ್ನುತ್ತಾರೆ ಲೇಖಕಿ ನಳಿನಿ. ಟಿ. ಭೀಮಪ್ಪ. ಅವರು ಮಾನಸ ಎಂ. (ಸುಮನಸ್ವಿನಿ) ಅವರ ‘ಕಡೆಗೀಲು’ ಕೃತಿಯ ಬಗ್ಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ..
ಪುಸ್ತಕದ ಹೆಸರು : ಕಡೆಗೀಲು
ಲೇಖಕಿ : ಮಾನಸ ಎಂ. (ಸುಮನಸ್ವಿನಿ)
ಪ್ರಕಾಶನ : ಪಪ್ಪ ಪಬ್ಲಿಕೇಷನ್
ಪುಟಗಳು : 112
ಬೆಲೆ : 120
‘ಕಡೆಗೀಲು’... ಪುಸ್ತಕ ಕೈಯ್ಯಲ್ಲಿ ಹಿಡಿದ ಮೇಲೆ ಕಟ್ಟಕಡೆಯವರೆಗೂ ನಿಮ್ಮನ್ನು ಬಿಟ್ಟೂಬಿಡದಂತೆ ಓದಿಸಿಕೊಂಡು ಹೋಗುವುದರಲ್ಲಿ ಎರಡು ಮಾತಿಲ್ಲ. ಅಷ್ಟರಮಟ್ಟಿಗೆ ಸುಮನಸ್ವಿನಿಯವರ ಲೇಖನಗಳ ಸಂಕಲನ, ಮನಸ್ಸನ್ನು ತಾಕುತ್ತದೆ.
ಬಹಳಷ್ಟು ಪ್ರೇರಣಾದಾಯಕ, ಸ್ಪೂರ್ತಿದಾಯಕ ಬರಹ ಬರೆಯುವವರನ್ನು, ಅವರ ಪುಸ್ತಕಗಳನ್ನು ಓದುತ್ತಲೇ ಇರುತ್ತೇವೆ. ಬಹುತೇಕ ಬರಹಗಳಲ್ಲಿ ಒಂದು ನೀತಿಬೋಧ ಕಥೆ, ಪ್ರಸಂಗ ಅಥವಾ ಘಟನೆಗಳನ್ನು ಹೇಳಿ ಅದರ ಮೂಲಕ ತಾವು ಹೇಳಬೇಕಾಗಿರುವುದನ್ನು ನಿರೂಪಿಸುತ್ತಾ ಹೋಗುವುದು ಸಾಮಾನ್ಯ ಸಂಗತಿ.
ಆದರೆ ಸುಮನಸ್ವಿನಿಯವರು ಶೈಲಿ ಪೂರ್ತಿ ವಿಭಿನ್ನ. ಹೇಳುವುದನ್ನು ನೇರವಾಗಿ, ತಮ್ಮದೇ ಶೈಲಿಯಲ್ಲಿ, ನಿರ್ಭೀಢೆಯಿಂದ ಹೇಳುತ್ತಾ ಹೋಗುತ್ತಾರೆ. ಹೇಳುವುದನ್ನು ಸುಮ್ಮನೆ ಗಿಳಿಪಾಠದಂತೆ ಹೇಳಿ ಸುಮ್ಮನಾಗುವ ಜಾಯಮಾನದವರಲ್ಲ. ಅಮ್ಮನಂತೆ ಸಂತೈಸುತ್ತಾ, ಅಕ್ಕನಂತೆ ಗದರುತ್ತಾ, ಅಪ್ಪನಂತೆ ಮಮತೆಯಿಂದ ಅಪ್ಪುತ್ತಾ, ಅಣ್ಣನಂತೆ ಬೆಂಗಾವಲಾಗಿ ಆಸರೆಯಾಗುತ್ತಾ, ಸ್ನೇಹಿತೆಯಂತೆ ನಮ್ಮ ತಪ್ಪುಗಳನ್ನು ತಿದ್ದುತ್ತಾ, ನಮ್ಮಲ್ಲೊಂದು ಸಕಾರಾತ್ಮಕ ಬದಲಾವಣೆಯನ್ನು ಮೂಡಿಸಬಲ್ಲ ಆಪ್ತ ಬರಹಗಳಿವು. ಅದರಲ್ಲೂ ಅವರು ಬಳಸಿರುವ ಕೆಲವೊಂದು ಪದಗಳು, ಪಂಚಿಂಗ್ ಸಾಲುಗಳು ಹೇಗಿವೆಯಪ್ಪಾ ಎಂದರೆ, ನಮ್ಮ ಜೊತೆಯಲ್ಲೇ ಹರಟುತ್ತಾ, ಪ್ರೀತಿಯಿಂದ ತಲೆಗೆ ಮೊಟಕುತ್ತಾ, ಜೀವನ ಇಷ್ಟೇ ಮಗಾ, ಅಷ್ಟ್ಯಾಕೆ ತಲೆಕೆಡಿಸಿಕೊಳ್ತೀಯಾ, ಬಂದದ್ದನ್ನು ಎದುರಿಸಲು ಕಲಿ ಎಂದು ಧೈರ್ಯ ತುಂಬುವಂತಿವೆ.
ಬದುಕು ಸರಳವಲ್ಲ, ಆದರೆ ನಾವೆಣಿಸಿದಷ್ಟು ಕಠಿಣವೂ ಅಲ್ಲ. ಬದುಕನ್ನು ಬದುಕುವುದು ಬಗೆ, ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ರೀತಿ, ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ನಾವು ಎಡವುತ್ತಿರುವುದು ಎಲ್ಲಿ, ಅದನ್ನು ಸರಿಪಡಿಸಿಕೊಳ್ಳುವುದು ಹೇಗೆ ಸುಲಭವಾಗಿ ಅರ್ಥೈಸಿಕೊಳ್ಳುವಂತೆ ವಿವರಿಸಿದ್ದಾರೆ. ನಮಗೆ ಗೋಚರವಾಗುವ ಪ್ರತಿಯೊಬ್ಬರೂ, ಪ್ರತಿಯೊಂದು ವಸ್ತುವೂ ನಮಗೆ ಹೇಗೆ ಗುರುವಾಗಬಲ್ಲದು, ಒಬ್ಬರನ್ನು ನಾವು ಪೂರ್ತಿಯಾಗಿ ಅರ್ಥ ಮಾಡಿಕೊಂಡಿದ್ದೇವೆನ್ನುವುದು ಎಷ್ಟರ ಮಟ್ಟಿಗೆ ಸತ್ಯ ಹಾಗೂ ಭ್ರಮೆ, ಇರುವುದರಲ್ಲಿ ಸುಖ ಕಾಣೋದು ಬಿಟ್ಟು, ಬೇರೆಡೆ ಹುಡುಕುತ್ತಾ ಹೋಗುವ ಮನುಷ್ಯನ ಪರಿ, ಭೂಮಿತಾಯಿಯ ಸಹನೆಯ ಬಗ್ಗೆ ಹೇಳುತ್ತಾ ಹೋಗುತ್ತಾರೆ.
‘ಹನಿಯಷ್ಟೂ ಮನುಷ್ಯತ್ವ ಇರದ ಜಾಗವೊಂದೇ ಪ್ರೀತಿಯ ಪಾಲಿಗೆ ಮಸಣ’ ಎಂತಹ ಅರ್ಥಗರ್ಭಿತ ಸಾಲು. ಪ್ರೀತಿ-ಮನಸು-ಬುದ್ಧಿ ಒಂದಕ್ಕೊಂದು ಹೇಗೆ ಅವಲಂಬಿತವಾಗಿವೆ, ಪ್ರಯತ್ನವೇ ಇಲ್ಲದೆ ಫಲ ನಿರೀಕ್ಷಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸುತ್ತಲೇ ಉತ್ತರ ಹೇಳುತ್ತಾ ಹೋಗುತ್ತಾರೆ. ಯಶಸ್ಸನ್ನು ಗಳಿಸುವುದರ ಜೊತೆಗೆ ಅದನ್ನು ಹ್ಯಾಂಡಲ್ ಮಾಡುವ ಅಥವಾ ಬ್ಯಾಲೆನ್ಸ್ ಮಾಡುವ ರೀತಿ, ಪ್ರೋತ್ಸಾಹ ಎನ್ನುವುದು ಹೇಗೆ ಟಾನಿಕ್ ಆಗಿ ಕೆಲಸ ಮಾಡಬಲ್ಲದು, ಸ್ಥಿತಪ್ರಜ್ಞತೆ ಬೆಳೆಸಿಕೊಳ್ಳಬೇಕಾದ ಅವಶ್ಯಕತೆ, ಹೀಗೆ ಮೂವತ್ತೊಂದು ಲೇಖನಗಳಲ್ಲಿಯೂ ಒಂದೊಂದು ಹೊಸ ವಿಷಯವನ್ನು ಬದುಕಿಗೆ ಅನ್ವಯಿಸುವಂತೆ ತಿಳಿಸಿ ಹೇಳುತ್ತಾ ಸಾಗುತ್ತಾರೆ. ಪುಸ್ತಕದ ಶೀರ್ಷಿಕೆ ‘ಕಡೆಗೀಲು’ ವಿನಲ್ಲಿ ಆತ್ಮವಿಶ್ವಾಸದ ಅವಶ್ಯಕತೆಯನ್ನು ಮನಮುಟ್ಟುವಂತೆ ಹೇಳಿದ್ದಾರೆ.
ಯಾವ ಟಾಪಿಕ್‌ನಲ್ಲಿಯೂ ವಿಷಯಗಳು ಪುನರಾವರ್ತನೆಯಾಗುವುದಿಲ್ಲ. ಅಷ್ಟರಮಟ್ಟಿಗೆ ಹೊಸತನ ತುಂಬಿದ ಪ್ರಬುದ್ಧ ಬರಹಗಳ ಸಂಕಲನವೆಂದೇ ಹೇಳಬಹುದು. ಓದು ಮುಗಿದಾಗ, ಹೌದು...ಇದರಲ್ಲಿರುವ ಕೆಲವು ಅಂಶಗಳ ಕಡೆ ಗಮನ ಕೊಡಲೇಬೇಕೆಂದುತಲೆದೂಗುವುದು ಖಂಡಿತ.
ಇಂತಹ ಸ್ಪೂರ್ತಿದಾಯಕ, ಪ್ರೇರಣಾದಾಯಕ ಬರಹಗಳು ಮತ್ತಷ್ಟು ಸುಮನಸ್ವಿನಿಯವರ ಲೇಖನಿಯಿಂದ ಹೊರಹೊಮ್ಮಲಿ ಎಂದು ಹಾರೈಸುತ್ತಾ...
‘ಕಡೆಗೀಲು; ಕೃತಿಯ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ..
ನಳಿನಿ ಟಿ.ಭೀಮಪ್ಪ ಅವರ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..
"ಗಂಡಸಾಗಿ ಕವಿತೆ ಬರೆಯುವುದು ಸುಲಭ ಕೃತಿಯ ಕವಿತೆಗಳು ಎಲ್ಲ ಗಂಡಸರ ಮತ್ತು ಹೆಂಗಳೆಯರ ಬದುಕಿನ ಅನುಭವದ ಪ್ರತಿಫಲನಗಳ...
“ನನ್ನ ಈ 'ನಾಡವರ್ಗಳ್' ಪುಸ್ತಕವನ್ನು ಸಿದ್ದಗೊಳಿಸುತ್ತಿರುವಾಗ ನಾನು ಇನ್ನೂ ಎಷ್ಟೊಂದು ಸಂಪನ್ನರ ಬಗ್ಗೆ...
"ಕನ್ನಡಿಗರಿಗೆ ಪ್ರೀತೀಶ್ ನೆನಪಾಗುವುದು ಕನ್ನಡದ ಮಹತ್ವದ ಕವಿ-ಕಥೆಗಾರ ಲಂಕೇಶರನ್ನು ಭಾರತೀಯ ಸಾಹಿತ್ಯವಲಯಕ್ಕೆ (ತಮ...
©2025 Book Brahma Private Limited.