ಮೈಸೂರು ಪಾಕ್ ಹುಡುಗ, ಬೆಕ್ಕಿನ ಕಣ್ಣಿನ ಹುಡುಗಿ ಮುಂತಾದವು ಮೃದುಲವಾದ, ಮುಟ್ಟಿದರೆ ನಲುಗುವಂತಹ ಪ್ರೇಮದ ಕತೆಗಳು. ಮೆಚ್ಚಿದ ಹುಡುಗಿ ಸಿಕ್ಕಿದರೆ ಕತೆ, ಸಿಕ್ಕದಿದ್ದರೆ ಮಹಾಕಾವ್ಯ. ಸಿಕ್ಕಿಯೂ ಸಿಕ್ಕದಂತಿದ್ದರೆ ವಿಮರ್ಶೆ! ಎನ್ನುತ್ತಾರೆ ಲೇಖಕ ಹರೀಶ್ ಕೇರ. ಕತೆಗಾರ ಪ್ರಮೋದ ಮೋಹನ ಹೆಗಡೆ ಅವರ ಮೈಸೂರ್ ಪಾಕ್ ಹುಡುಗ ಕಥಾಸಂಕಲನದ ಬಗ್ಗೆ ಅವರು ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ..
ಒಂದು ನಡುರಾತ್ರಿ ಟಿಂಗ್ ಅಂತ ನನ್ನ ಮೊಬೈಲಿಗೆ ಈ ಹುಡುಗನ ವಿಡಿಯೋ ಮೆಸೇಜ್ ಬಂದು ಬಿತ್ತು. ನೋಡಿದರೆ ಇವನು ಥಿಯೇಟರಿನಲ್ಲಿ ಆರ್‌ಆರ್‌ಆರ್ ಫಿಲಂ ಹಾಡಿಗೆ ಡ್ಯಾನ್ಸ್ ಮಾಡುತ್ತಿದಾನೆ, ಒಬ್ಬನೇ.
ಭಾನುವಾರ ಇವನು ಗೆಳೆಯರನ್ನು ಕಟ್ಟಿಕೊಂಡು ಹೋಗುತ್ತಾನೆ. ಮರಗಳ ಮೊಳೆ ಕೀಳುವುದು, ಅನಾಥಾಶ್ರಮದ ಮಕ್ಕಳಿಗೆ ಆಟ ಆಡಿಸುವುದು, ಅಡುಗೆ ಮಾಡಿ ಬಡಿಸುವುದು, ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ, ಹೀಗೆ ಕಸುಬು. ಕಟ್ಟಿಕೊಂಡ ಗುಂಪಿನ ಹೆಸರು ಪರಹಿತಂ ಫೌಂಡೇಶನ್.
ಹೀಗೆ ಹೊಸ ಕಾಲದ ಹುಡುಗುತನ ಮತ್ತು ತುಡಿವ ಮನಸ್ಸು ಎರಡರ ಸಂಗಮವಾಗಿರುವ ಪ್ರಮೋದ ಹೆಗಡೆ ಬರೆದ ಸಣ್ಣಕತೆಗಳೂ ಅವನಂತೆಯೇ ಹಲವು ಭಾವಗಳ ಮೊತ್ತ. ಈ ಕತೆಗಳನ್ನು ಓದುವಾಗ ಕತೆಗಾರನ ಒಳಜಗತ್ತಿನ ಬಗ್ಗೆ ವಿಸ್ಮಯವಾಗುತ್ತದೆ. 'ಮೈಸೂರುಪಾಕ್ ಹುಡುಗ' ಕತೆಗಳು ಹೀಗೆ ಹೊರಜಗತ್ತು ಮತ್ತು ಒಳಜಗತ್ತುಗಳು ಹದವಾಗಿ ಬೆರೆತ ಮೈಸೂರುಪಾಕ.
ಇಲ್ಲಿನ ಕತಾನಾಯಕ 'ಇಲ್ಲದ ಊರಿಗೆ' ಹೋಗುತ್ತಾನೆ. ಬಾಲ್ಯದ ಊರನ್ನು ಹುಡುಕುತ್ತ ಹೋದವನಿಗೆ ಹಳೆಯ ನೆನಪಿನ ಸ್ಥಾವರಗಳು ಇಲ್ಲದ ಊರು ಎದುರಾಗುತ್ತದೆ. ಸ್ಟಾರ್, ರೇಟಿಂಗ್‌ಗಳೆಲ್ಲ ಆ ಊರಿಗೂ ಬಂದು ಯಾವುದೇ ಊರಿಗೂ ಅದಕ್ಕೂ ಫರಕು ಇಲ್ಲದಂತಾಗಿಬಿಟ್ಟಿದೆ. ಬದಲಾವಣೆಯ ಚಲನೆಗಳನ್ನು ಕತೆಗಾರ ಹೀಗೆ ಪ್ರಬುದ್ಧವಾಗಿ ಗ್ರಹಿಸುತ್ತಾನೆ.
ಮೈಸೂರು ಪಾಕ್ ಹುಡುಗ, ಬೆಕ್ಕಿನ ಕಣ್ಣಿನ ಹುಡುಗಿ ಮುಂತಾದವು ಮೃದುಲವಾದ, ಮುಟ್ಟಿದರೆ ನಲುಗುವಂತಹ ಪ್ರೇಮದ ಕತೆಗಳು. ಮೆಚ್ಚಿದ ಹುಡುಗಿ ಸಿಕ್ಕಿದರೆ ಕತೆ, ಸಿಕ್ಕದಿದ್ದರೆ ಮಹಾಕಾವ್ಯ. ಸಿಕ್ಕಿಯೂ ಸಿಕ್ಕದಂತಿದ್ದರೆ ವಿಮರ್ಶೆ!
ಬೀರ ಕತೆಯನ್ನು ಓದಿದಾಗ ಕತೆಗಾರನಿಗೆ ಬೇರುಗಳು ಎಷ್ಟು ಮುಖ್ಯ ಎಂಬುದು ಗೊತ್ತಾಗುತ್ತದೆ. ಪಾತ್ರದ ಬೇರುಗಳು ತನ್ನದೂ ಆಗಿದ್ದಾಗ ಮಾತ್ರ ಅದರಲ್ಲಿ ತಾದಾತ್ಮ್ಯ ಮೂಡಲು ಸಾಧ್ಯ. ಊರು ಬಿಟ್ಟು ಹೋದ ಬೀರ ಊರಿಗೆ ಮರಳಿ, ತಂದೆ ಚಪ್ಪಲಿಗಳಲ್ಲಿ ತನ್ನ ಕಾಲನ್ನು ತೂರಿಸುವಾಗ, ಬದಲಾವಣೆ ಎಂಬುದು ಕಡೆಗೂ ನಮ್ಮ ಗ್ರಹಿಕೆಯಲ್ಲಿ ಮಾತ್ರ ನಿಜವಾಗುವಂಥದು ಎಂಬುದನ್ನು ಕತೆಗಾರ ಒತ್ತಿ ಹೇಳುತ್ತಿದಾನೆ ಅನಿಸದೇ ಇರದು.
ಕಮಲಾಪುರದಲ್ಲೊಂದು ಕಾಣದ ಕೋಟೆ- ಅನೇಕ ಒಳನೋಟಗಳು ಇಡಿಕಿರಿದ ಒಂದು ಕತೆ. ಇಲ್ಲಿನ ಕತಾನಾಯಕ ತಾನು ಸಂಶೋಧನೆಗೆ ಹೋದ ಊರಿನಲ್ಲಿ ಕಾಣುವ ಕೋಟೆಯು ನಿಜಕ್ಕೂ ಏನು ಎಂಬ ವಿಸ್ಮಯಕಾರಿ ಪ್ರಶ್ನೆಯನ್ನು ಉಳಿಸುತ್ತದೆ. ಹಾಲಿವುಡ್ ಭಾಷೆಯಲ್ಲಿ ಇದನ್ನು ಸರಳವಾಗಿ ಸೈಕಲಾಜಿಕಲ್ ಥ್ರಿಲ್ಲರ್ ಅಂದುಬಿಡಬಹುದು. ಆದರೆ ಅದು ಪೂರ್ತಿ ನಿಜವಲ್ಲ. ಹಾಗೇ ಈ ಕತೆ ಕನ್ನಡದ ಆದಿ ಕತೆಗಳಲ್ಲಿ ಒಂದಾದ 'ಕಮಲಾಪುರದ ಹೋಟ್ಲಿನಲ್ಲಿ' (ಪಂಜೆ ಮಂಗೇಶರಾಯ) ಕತೆಯ ಜೊತೆ ಸಾಧಿಸುವ ಒಂದು ಬಹುದೂರದ ಸಂಬಂಧವೂ ಇದೆ. ಅದು ಮನೋವೈಜ್ಞಾನಿಕ ಹಂತದ್ದು. ಇಂಥ ಕತೆಗಳಲ್ಲಿ ಪ್ರಮೋದನ ಸಾಧ್ಯತೆ ಮತ್ತು ಮಿತಿಗಳು ಗಾಢವಾಗಿ ಎದ್ದು ತೋರುತ್ತವೆ.
ನೀಲಕುರಂಜಿ ಪ್ರೇಮದ ಗಾಢತೆಯನ್ನೂ ದುರಂತದ ತೀವ್ರತೆಯನ್ನೂ ಏಕಕಾಲಕ್ಕೆ ಮುಂದಿಡುವ ಕಥಾನಕ. ಸಂಬಂಧ ನೀಲಕುರಂಜಿಯಂತೆ. ಹೂ ಬಿಟ್ಟಾಗಲಷ್ಟೇ ಅದನ್ನು ಕಣ್ತುಂಬಿಕೊಳ್ಳಬೇಕು ಅಲ್ಲವೇ.
ಪ್ರಮೋದ ತನ್ನ ಮೊದಲ ಸಂಕಲನದ ಕತೆಗಳ ಮೂಲಕ ನನ್ನನ್ನು ಚಕಿತಗೊಳಿಸಿದ್ದಾನೆ. ಅವನಲ್ಲಿ ಇಂಥ ಅಚ್ಚರಿಗಳು ಬಹಳ ಇವೆ ಎಂಬ ನನ್ನ ನಿರೀಕ್ಷೆ ಹುಸಿಯಾಗದಿರಲಿ.
ಮೈಸೂರ್ ಪಾಕ್ ಹುಡುಗ ಕೃತಿ ಪರಿಚಯ..
ಪ್ರಮೋದ ಮೋಹನ ಹೆಗಡೆ ಅವರ ಲೇಖಕ ಪರಿಚಯ..
“ಪ್ರೇಮವನ್ನು ಕಟ್ಟಿಕೊಡುವ ಒಂದಕ್ಕಿಂತ ಒಂದು ಶ್ರೇಷ್ಠ ಆದರ್ಶ ಪ್ರೇಮದ ಅನುಭೂತಿಯನ್ನು ಈ ಪ್ರೇಮಮಹಲ್ ಸಂಕಲನದ ನೂರ...
"ಮೊದಲಿಗೆ ರೇಣುಕಾ ನಿಡಗುಂದಿ ಅವರು ಅನುವಾದ ಮಾಡಿದ ಅಮೃತಾ ಪ್ರೀತಂ ಕವಿತೆ ಓದಿದೆ. ಅದರ ಧಾಟಿ ಶೈಲಿ ಭಾವ ಬೇರೆ. ನಿ...
"ಮನಸ್ಸು ಮಾಗಿ ಎಲ್ಲವನ್ನೂ ಜೀರ್ಣಿಸಿಕೊಂಡು ಅದಕ್ಕೆ ಅಷ್ಟು ಹೊತ್ತಿಗೆ ಸಿದ್ಧವಾಗಿರುತ್ತದೆ ಅನ್ನುವುದೂ ಹೌದೇನೋ ಅನ...
©2025 Book Brahma Private Limited.