ಹಿರಿಯರೂ ಓದಬೇಕಾದ ಮಕ್ಕಳ ಕಾದಂಬರಿ ‘ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು’


"ಕಾದಂಬರಿ ಕಥೆಯ ವಿಸ್ತಾರ ರೂಪ. ಬರಹಗಾರನ ಕೌಶಲ್ಯ ಬೇಡುವ ಒಳಸುಳಿಗಳನ್ನು ಹುಡುಕುವ, ಪಾತ್ರದಲ್ಲಿತಾನೇ ಹೋಗಿ ಸೇರುವ ವಿವಿಧ ಸಂಗತಿಗಳ ಒಂದು ಗುಟ್ಟಾದ ಹೆಣಿಗೆ. ಕಥಾವಸ್ತುವಿನಲ್ಲಿ ತಲ್ಲೀನವಾಗಿ ಬೆರೆಯದೇ ಇದ್ದರೆ ಅದರ ಸಫಲತೆಗಳು ರುಚಿ ಕೆಡುತ್ತವೆ," ಎನ್ನುತ್ತಾರೆ ಮಹಾಂತೇಶ ಮಸ್ಕಿ. ಅವರು ಗುಂಡುರಾವ್ ದೇಸಾಯಿ ಅವರ ‘ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು’ ಕಾದಂಬರಿ ಕುರಿತು ಬರೆದ ವಿಮರ್ಶೆ.

ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು ಕಾದಂಬರಿಯನ್ನು ಮಕ್ಕಳಿಗಾಗಿ ರಚಿಸಿರುವ ಗುಂಡುರಾವ್ ದೇಸಾಯಿ ಲಲಿತ ಪ್ರಬಂಧ, ವಿಡಂಬನೆ, ಮಕ್ಕಳ ಕವಿತೆ, ಕತೆ ಮೊದಲಾಗಿ ವಿವಿಧ ಮಜಲುಗಳಿಂದ ಬರಹದಲ್ಲಿ ತೊಡಗಿದವರು. ಮಕ್ಕಳಿಗಾಗಿ ವಿಶೇಷ ಆಸ್ಥೆ ಹೊಂದಿದ ಇವರು ಮಕ್ಕಳಿಂದಲೇ ಕತೆಗಳನ್ನು ಸೃಜಿಸುವಂತೆ, ಆಡಲು ಕಾರ್ಯಾಗಾರ ಮಾಡಿ ಮಕ್ಕಳು ಬರೆದ ಕಥೆಗಳ ಸಂಕಲನವನ್ನು ಶಾಲೆಯಿಂದಲೇ ಪ್ರಕಟಿಸಿದ ಕ್ರಿಯಾಶೀಲರು.

ಕಾದಂಬರಿ ಕಥೆಯ ವಿಸ್ತಾರ ರೂಪ. ಬರಹಗಾರನ ಕೌಶಲ್ಯ ಬೇಡುವ ಒಳಸುಳಿಗಳನ್ನು ಹುಡುಕುವ, ಪಾತ್ರದಲ್ಲಿತಾನೇ ಹೋಗಿ ಸೇರುವ ವಿವಿಧ ಸಂಗತಿಗಳ ಒಂದು ಗುಟ್ಟಾದ ಹೆಣಿಗೆ. ಕಥಾವಸ್ತುವಿನಲ್ಲಿ ತಲ್ಲೀನವಾಗಿ ಬೆರೆಯದೇ ಇದ್ದರೆ ಅದರ ಸಫಲತೆಗಳು ರುಚಿ ಕೆಡುತ್ತವೆ.

ಇಂಗ್ಲಿಷ್ ಮೇಷ್ಟ್ರಿಗೆ ಬೆದರಿಕೊಳ್ಳುವ ಮಗ ಶಾಲೆ ಕಲಿಯುವ ಪ್ರಕ್ರಿಯೆಯನ್ನು ಜರಿಯುತ್ತಾನೆ. ಬುದ್ಧಿ ಮಾತು ಹೇಳುವ ಅಪ್ಪನಿಗೆ ಸವಾಲಿನ ಮಾತು ಹೇಳುತ್ತ ‘ನಮಗೆ ಬದ್ಧಿ ಇರಬಾರದಾಗಿತ್ತು’ ಇಲ್ಲ ‘ಸಸ್ಯಗಳಂತೆ ಪತ್ರ ಹರಿತ್ತು ಇರಬೇಕಿತ್ತು’ ಎನ್ನುವ ಮಾತು ಹೇಳುತ್ತಾನೆ. ಅಪ್ಪ ಮಗನ ದ್ವಿಪಾತ್ರದಲ್ಲಿ ಕಾದಂಬರಿಕಾರ ನಿಂತಿದ್ದಾನೆ.

ಕೀಟ ಪ್ರೀತಿಯ ಮಗ ನೊಣ, ಸೊಳ್ಳೆಗಳ ಸ್ನೇಹಿ. ಇವನಿಗೆ ಸೊಳ್ಳೆ ಪರಿಚಯವಾಗಿ ಮಾತನಾಡುವ ಫ್ರೆಂಡಾಗಿ ಪರಿವರ್ತನೆಗೊಳ್ಳುತ್ತದೆ. ಸೊಳ್ಳೆಯ ಮುಖಾಂತರ ಮನುಷ್ಯನ ವಿವೇಚನಾ ರಹಿತನಡೆವಳಿಕೆಗಳನ್ನು, ಮನುಕುಲದ ನಾಶಕ್ಕೆ ಕಾರಣವಾಗುವುದನ್ನು ಹೇಳುತ್ತಾನೆ. ಗಿಡಗಳ ರಸ ತಿಂದು ಬದುಕುವ ಸೊಳ್ಳೆಗಳಿಗೆ ಸಸ್ಯರಾಶಿ ಇಲ್ಲದಂತೆ ಮಾಡಿ ಮನೆಗೆ ಆಹ್ವಾನ ಮಾಡಿಕೊಂಡಿದ್ದು ನಾವೇ, ಗಟಾರ ಸೃಷ್ಟಿಸಿ ಮನೆಪಕ್ಕದಲ್ಲಿ ನೀರು ನಿಲ್ಲಿಸಿಕೊಂಡವರು ನಾವೆ ಎನ್ನುವುದನ್ನು ಸೊಳ್ಳೆಯೇ ಮನವರಿಕೆ ಮಾಡಿಕೊಡುತ್ತದೆ. “ಮಾನವನಿಗೆ ಸಮಸ್ಯೆ ಯಾವುದೇ ಇರಲಿ ಅದನ್ನು ಪರಿಹರಿಸುವ ಮಾರ್ಗ ಗೊತ್ತಿದ್ದರೂ ಒಗ್ಗೂಡಿ ಪ್ರಯತ್ನಿಸುವ, ಹೋರಾಡುವ ಸುಬುದ್ಧಿ ಇಲ್ಲ ಎಂದು ಕಂಡುಕೊಂಡಿನಿ” ಎಂದು ಸೊಳ್ಳೆ ತೀರ್ಮಾನ ಕೊಡುತ್ತದೆ.

ಬಾಲಕ ಸಮ್ಮು ಗೆ ಸೊಳ್ಳೆ ಒಳ್ಳೆ ಫ್ರೆಂಡಾಗಿ ಕೊನೆಗೆ ಸಮ್ಮುಗೆ ಸೊಳ್ಳೆಯಾಗಬೇಕೆಂಬ ಆಸೆಯನ್ನು ಈಡೇರಿಸುತ್ತದೆ. ಸಮ್ಮು ಸೊಳ್ಳೆಯಾಗಿ ಸ್ವೀಟ್ಸ್ ಅಂಗಡಿ ಹೊಕ್ಕು ಸುದ್ದಿ ಮಾಡಿ ಟಿ.ವಿ ಗಳಲ್ಲಿ ಸುದ್ದಿ ಹರಿದಾಡುವ, ಸೊಳ್ಳೆ ನೋಡಲು ಜನ ಹಾಗೂ ವಾಹಿನಿಗಳವರು ಮುಗಿಬೀಳುವ, ಪ್ರಸಂಗವನ್ನು ರಸಮಯವಾಗಿ ಚಿತ್ರಿಸಿದ್ದಾರೆ. ಸೊಳ್ಳೆಗಳಲ್ಲೆ ಹಿರಿದಾದ ವಿಜ್ಞಾನಿ ಸೊಳ್ಳೆ ಮನುಷ್ಯನಿಂದ ಪರಿವರ್ತನೆಗೊಂಡ ಸೊಳ್ಳೆಯನ್ನು ಲ್ಯಾಬ್ ಗೆ ತೆಗೆದುಕೊಂಡು ಹೋಗಿ ಪರೀಕ್ಷಿಸುವ, ಏಲಿಯನ್ಸ್ ಲೋಕಕ್ಕೆ ಕರೆದೊಯ್ದು ಹಾಳಾದ ನಿಸರ್ಗ ತೋರಿಸಿ ಮನುಷ್ಯ ದುರಾಸೆಯಿಂದ ಭೂಮಿಯು ಹೀಗಾಗಬಹುದೆಂಬ ಸಂದೇಹ ಮೂಡುತ್ತದೆ.

ಏಲಿಯನ್ಸ್ಗಳು ಸಮ್ಮುಗೆ ಆಹಾರದ ಬದಲಿಗೆ ಡ್ರೈ ಲೀಫ್ ನೀಡಿ ಹಸಿವು ನೀಗಿಸುವುದು, ತಾನು ಕೈಗೊಂಡ ಪ್ರಯೋಗವನ್ನು ನೆನಪಿಸುತ್ತದೆ. ಗಟಾರದಲ್ಲಿಯ ಸೊಳ್ಳೆ ಪ್ರಪಂಚವನ್ನು ಪರಿಚಯಿಸಿ ಪುನಃ ಸೊಳ್ಳೆಯನ್ನು ಸಮ್ಮುವನ್ನಾಗಿಸುವಲ್ಲಿಗೆ ಸೊಳ್ಳೆಯ ಆಯುಷ್ಯ ಮುಗಿಯುತ್ತದೆ. ಒಳ್ಳೆ ಫ್ರೆಂಡನ್ನು ಕಳೆದುಕೊಂಡ ದುಃಖದಲ್ಲಿ ಸಮ್ಮು ಮಾತ್ರವಲ್ಲ ಓದುಗನಿಗೂ ದುಖಿತನನ್ನಾಗಿ ಸೊಳ್ಳೆಗಳ ಮೇಲೆ ಮಮತೆ ಮೂಡುವಂತೆ ಮಾಡುತ್ತದೆ.

ಕಾದಂಬರಿಯನ್ನು ಮಕ್ಕಳಿಗಾಗಿ ಬರೆಯುವಾಗ ಲೇಖಕ ಮಗುವಿನ ಮನಸ್ಸಿನಲ್ಲೆ ಇರಬೇಕಾಗುತ್ತದೆ. ಅದು ಗುಂಡುರಾವ್ ಅವರಿಗೆ ಸಾಧ್ಯವಾಗಿದೆ.

‘ಐದು ನಿಮಿಷ ಸೂಸೂಗೆ ಹೋಗಿ ಬರತೀನಿ ಮೊದಲು’ ಎಂದು ಹೇಳುವ ಸಾಲುಗಳು ಮಕ್ಕಳ ಹಂತದಲ್ಲೆ ಹಿಡಿದಿಟ್ಟಿವೆ.

ಸೊಳ್ಳೆಯೊಂದಿಗೆ ಸ್ನೇಹವಾಗಿ, ಅದರೊಂದಿಗೆ ಮಾತನಾಡುವ ಹಂಬಲ ಬಲಿತಾಗಲೆಲ್ಲ ಮನೆಯಲ್ಲಿ ಅಡ್ಡ ಬರುವ ಸನ್ನಿವೇಶಗಳು ಇಂಗ್ಲೀಷ್ ಮೇಷ್ಟ್ರಿಂದ ಮಕ್ಕಳನ್ನು ಕಾಪಾಡುವ ಸೊಳ್ಳೆ ಪ್ರಸಂಗಗಳು ರಸವತ್ತಾಗಿವೆ.

ಅನೇಕ ವೈಜ್ಞಾನಿಕ ಸಂಗತಿಗಳನ್ನು ತಿಳಿಸುತ್ತ ಕಲ್ಪನೆ ಲೋಕದಲ್ಲಿ ಹೊಕ್ಕು ಸತ್ಯಾಂಶಗಳನ್ನು ನಿಕಷಕ್ಕೆ ಒಡ್ಡಿದ ಇದು ಹಿರಿಯರೂ ಓದಬೇಕಾದ ಮಕ್ಕಳ ಕಾದಂಬರಿಯಾಗಿದೆ.

MORE FEATURES

ಮಹಾಭಾರತದ ಕತೆ, ಓದಿದಷ್ಟೂ ಮುಗಿಯದು, ತಣಿಯದು...

10-11-2024 ಬೆಂಗಳೂರು

"‘ಕವಚ’ದಲ್ಲೂ ಇದೇ ಇರುವುದು. ಕರ್ಣನ ಸ್ವಗತವೇ ಅನೇಕ ಬಾರಿ ಮುಖಾಮುಖಿಯೂ ಆಗಿದೆ. ರಾಧಾಕೃಷ್ಣ ಕಲ್ಚಾರ...

ವ್ಯಕ್ತಿಚಿತ್ರಗಳನ್ನು ಬರೆಯುವಲ್ಲಿ ಲಕ್ಷ್ಮಣ ರಾಯರು ಸಿದ್ದಹಸ್ತರು...

10-11-2024 ಬೆಂಗಳೂರು

"ಲಕ್ಷ್ಮಣ ರಾಯರ ಒಡನಾಡಿಗಳ ಲೇಖನ ಅವರ ಪ್ರಿಯ ಮಿತ್ರ ಹಾ.ಮಾ.ನಾಯಕರ ಲೇಖನದಿಂದಲೇ ಆರಂಭವಾಗುತ್ತದೆ. ಬರಹಗಾರರಾಗಿ, ಪ...

‘ಕಿಲಿಗ್’ ಈ ಕಾಲಮಾನದ ದೊಡ್ಡ ಸಂಖ್ಯೆಯ ಸಮೂಹವೊಂದರ ಕಥೆ...

10-11-2024 ಬೆಂಗಳೂರು

"ಲೇಖಕರೇ ಹೇಳಿರುವಂತೆ ಪ್ರೇಮ ಹಾಗೂ ಕಾಮ ನಡುವೆ ತೆಳುವಾದ ಗಡಿ ರೇಖೆಯಿರುವ, ಥಟ್ಟನೆ ಗುರುತಿಸಲಾಗದ ಎರಡು ಸ್ಥಿತಿಗಳ...