ಚಿತ್ರರೂಪಕ ಪ್ರಯೋಗ:ಕನ್ನಡದ ಕಣ್ಣೊಂದರ ಅನನ್ಯ ಸಾಧ್ಯತೆ


ವಿಶ್ವಪ್ರಸಿದ್ಧ ಕಲಾಕೃತಿಗಳೊಂದಿಗೆ ಕನ್ನಡ ಮನಸ್ಸುಗಳ ಸಂವಾದ ಮಾಲಿಕೆ ’ಚಿತ್ರರೂಪಕ’. ಕಲಾಕಾರ ಹಾಗೂ ಕಲಾಕೃತಿಯ ಪರಿಚಯ ಮತ್ತು ಆ ಕಲಾಕೃತಿಗೆ ಕವಿತೆ/ಕಥಾರೂಪದ ಪ್ರತಿಕ್ರಿಯೆಯ ವಿಶಿಷ್ಟ ಪ್ರಯೋಗ ಅದು. ಪ್ರಜಾವಾಣಿ ದಿನಪತ್ರಿಕೆಯ ’ಸಾಪ್ತಾಹಿಕ ಪುರವಣಿಯಲ್ಲಿ’ 2012ರಲ್ಲಿ ಎರಡು ವಾರಗಳಿಗೊಮ್ಮೆ ಪ್ರಕಟಗೊಳ್ಳುತ್ತಿದ್ದ ಒಂದು ಅಪರೂಪದ ಪ್ರಯೋಗ. ’ಅನ್ಯ, ಅನನ್ಯವೆಂದು ಸ್ವೀಕೃತವಾದ ದೃಶ್ಯಗಳ ನಿರೂಪಣೆಗೆ ಕನ್ನಡದ ಮಣ್ಣಿನ ಅನುಭವದ ಪದಗಳು ಹೇಗೆ ತಮ್ಮ ಜಾಯಮಾನಕ್ಕೆ ತಕ್ಕಂತೆ ಪ್ರತಿಕ್ರಿಯಿಸಿದವು ಎಂಬುದರ ದಾಖಲೆ ಈ ಮಾಲಿಕೆ’ ಎನ್ನುತ್ತಾರೆ ಕಲಾ ಇತಿಹಾಸಕಾರ ಎಚ್‌.ಎ. ಅನಿಲ್‌ಕುಮಾರ್‌.

ಗೋಚರ ಜಗತ್ತಿನ, ಪರಿಚಿತ ದೃಶ್ಯಗಳು ಯಾವಾಗಲೂ ಕಲಾಕೃತಿಗಳೇ ಆಗಿರದಿದ್ದರೂ, ಅವುಗಳ ಪರಿಚಯ ಮಾತ್ರ ನಮ್ಮನ್ನು ಅನೇಕ ವಿಧದಲ್ಲಿ, ಬಹುಕಾಲ ಪುಳಕಗೊಳಿಸುವ ಸಾಮರ್ಥ್ಯ ಹೊಂದಿರುತ್ತವೆ. ಪ್ರವಾಸಿ ತಾಣಗಳು, ಸ್ಮಾರಕಗಳು ಇಂತಹವು. ಅನೇಕ ಸಲ ಪ್ರಸಿದ್ಧ ಕೃತಿಗಳ ದೃಶ್ಯಪರಿಚಯ ನಮಗಿದ್ದರೂ ಅದನ್ನು ನಮ್ಮ ಸಂದರ್ಭದಲ್ಲಿರಿಸಿ ನೋಡುವ ಯತ್ನವನ್ನು ನಾವುಗಳು ಮಾಡಿರುವುದಿಲ್ಲ. ಅನೇಕ ಸಲ ನಮ್ಮಲ್ಲಿ ರೂಪುಗೊಂಡಿರುವ ಅವುಗಳ ಪರಿಚಯಕ್ಕೂ ಅವುಗಳ ಉದ್ದೀಪನಾ ಸಾಮರ್ಥ್ಯಕ್ಕೂ ನಡುವಣ ವ್ಯತ್ಯಾಸವೇ ನಮ್ಮ ವ್ಯಕ್ತಿತ್ವದ ಮೊತ್ತವು ಆಗಿರುತ್ತದೆ. ಜಗತ್ಪ್ರಸಿದ್ಧ ಚಿತ್ರಕೃತಿಗಳು ಕನ್ನಡದ ಮನಸ್ಸಿಗೆ ಮುದ ನೀಡುತ್ತಲೇ,  ಅವುಗಳು ಯಾವ ಕಾರಣಕ್ಕೆ ಗುರುತರವಾಗುತ್ತವೆ ಎಂಬ ಅರಿವನ್ನು ಮರೆಮಾಚಬಿಟ್ಟಿರಲು ಕಾರಣ ಕನ್ನಡದ ಜಗತ್ತು ಬಹುವಾಗಿ ವಾಚ್ಯವಾಗಿರುವುದೇ ಆಗಿದೆ. ಆದ್ದರಿಂದಲೇ ಇರಬಹುದು, ದೃಶ್ಯಪ್ರಜ್ಞೆಗಿಂತಲೂ ಸಾಂಸ್ಕೃತಿಕ-ದೃಶ್ಯಗಳಿಗೆ (ಕಲಾಕೃತಿಗಳಿಗೆ) ಪ್ರತಿಕ್ರಿಯಿಸುವ ಅಗಾಧ ಶಕ್ತಿ ಈ ಕನ್ನಡದ ಬರಹದ ಜಗತ್ತಿಗಿರುವುದಂತೂ ಖಂಡಿತ.

ಈ ಹಿನ್ನೆಲೆಯಲ್ಲಿ ೨೦೧೨ರ ಸಾಲಿನಲ್ಲಿ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಎರಡು ವಾರಗಳಿಗೊಮ್ಮೆ ಪ್ರಕಟಗೊಳ್ಳುವಂತಹ ಒಂದು ಅಪರೂಪದ ಪ್ರಯೋಗವನ್ನು ರೂಪಿಸಲಾಗಿತ್ತು. ವಿಶ್ವಪ್ರಸಿದ್ಧ ಕಲಾಕೃತಿಗಳೊಂದಿಗೆ ಕನ್ನಡ ಮನಸ್ಸುಗಳ ಸಂವಾದದ ಆ ಮಾಲಿಕೆಯಲ್ಲಿ ಕಲಾಕಾರ ಹಾಗು ಕಲಾಕೃತಿಯ ಪರಿಚಯ ಮತ್ತು ಆ ಕಲಾಕೃತಿಗೆ ಕವಿತೆ/ಕಥಾರೂಪದ ಪ್ರತಿಕ್ರಿಯೆಯ ವಿಶಿಷ್ಟ ಪ್ರಯೋಗವದಾಗಿತ್ತು. ನಾಟ್ಯ, ನಾಟಕ, ಕಾವ್ಯವಾಚನ ಮುಂತಾದ ವೇದಿಕೆ ಮೇಲಿನ ಅಭಿನಯಾತ್ಮಕ ನಿರೂಪಣೆಗೆ ಕಲಾವಿದರು ತಕ್ಷಣಕ್ಕೆ ಪ್ರತಿಕ್ರಿಯಿಸುವ ‘ಪ್ರಾತ್ಯಕ್ಷಿಕೆ’ಯ ಕನ್ನಡದ ಸಂಪ್ರದಾಯವೊಂದು ಮೊದಲಿನಿಂದಲೂ, ಕಲಾಶಾಲೆಗಳಲ್ಲೂ ಇರುವ ಒಂದು ರೂಢಿ. ಪ್ರಜಾವಾಣಿಯ ಈ ‘ಚಿತ್ರರೂಪಕ’ವು ಭಿನ್ನವಾದುದು: ಅನ್ಯ, ಅನನ್ಯವೆಂದು ಸ್ವೀಕೃತವಾದ ದೃಶ್ಯಗಳ ನಿರೂಪಣೆಗೆ ಈ ಮಣ್ಣಿನ ಅನುಭವದ ಪದಗಳು ತಮ್ಮ ಜಾಯಮಾನಕ್ಕೆ ತಕ್ಕಂತೆ ಹೇಗೆ ಪ್ರತಿಕ್ರಿಯಿಸಿದವು ಎಂಬುದರ ದಾಖಲೆ ಈ ಮಾಲಿಕೆ. ಎಲ್ಲೋ ಒಂದೆಡೆ, ಕನ್ನಡ ಸಾಹಿತ್ಯಕ ಪದಸಂಪತ್ತು ಲೋಕೋತ್ತರ ಅನುಭವವನ್ನೆಲ್ಲ ತನ್ನದಾಗಿಸಿಕೊಳ್ಳುವ ಸಾಧ್ಯತೆ ಇದೆಯೇ? ಎಂಬ ಮಹತ್ವಾಕಾಂಕ್ಷೆಯ ಪರಿಶೀಲನೆಯೂ ಈ ಕ್ರಮದಲ್ಲಿ ಅಡಗಿರಬಹುದು.

ಕನ್ನಡದಲ್ಲಿ ಆದಿಯಿಂದಲೂ ಚಿತ್ರ ಅಕ್ಷರಕ್ಕೆ ಪೂರಕವಷ್ಟೇ ಎಂಬ ಬುನಾದಿಯ ಮೇಲಿದೆ ಈ ನಾಡಿನ ಚಿತ್ರಕಲೆ, ಸಿನೆಮಾ, ನಾಟಕ ಮುಂತಾದವು. ಚಿತ್ರವೊಂದಕ್ಕೆ ಅಕ್ಷರ ಪ್ರತಿಕ್ರಿಯಿಸುವಾಗ ಆ ಕ್ಷರಗುಚ್ಛವೂ ಸಹ ಪೂರಕವಾಗಿ ಮಾತ್ರ ಬಳಕೆಯಾಗಿದೆ. ಚಿತ್ರ ಮತ್ತು ಅಕ್ಷರ ಸಮೂಹವು ಸರಿ-ಸಮಾನಯಂತರದಲ್ಲಿ ಸಾಗುವ ಈ ‘ಚಿತ್ರರೂಪಕ’ ಪ್ರಯೋಗವು ಆ ಹಲವು ಸಾಂಪ್ರದಾಯಿಕ ಬುನಾದಿಗಳನ್ನು, ಅವುಗಳನ್ನು ಸೃಷ್ಟಿಸಿದ ಸಾಂಸ್ಕೃತಿಕ ಹಿನ್ನೆಲೆಯನ್ನು ಯಥಾಸ್ಥಿತಿಯಲ್ಲಿ ಇರಿಸಿಕೊಂಡೂ ಸಹ, ಪರಿಶೀಲಿಸುವ ಯೋಗ್ಯತೆಯುಳ್ಳ ಪ್ರಕ್ರಿಯೆಯಾಗಿದೆ.
*
ನಾಲ್ಕಾರು ಶತಮಾನದ ಹಿಂದೆ ಲಿಯೊನಾರ್ಡೊ ಡಾ ವಿಂಚಿಯ ಅಷ್ಟೇನೂ ಪರಿಚಿತವಲ್ಲದ “ಲೇಡಿ ವಿತ್ ಎನ್ ಅರ್ಮಿನ್’ನಳ ಮಹಿಳೆಯ ಆಕಾರದಲ್ಲಿ ಕವಿ ಎಚ್.ಎಸ್. ವೆಂಕಟೇಶಮೂರ್ತಿಯವರು ಸಮಕಾಲೀನ ಜೀವಂತ ಯುವತಿಯ ಛಾಯಾಚಿತ್ರವೊಂದನ್ನು ವೀಕ್ಷಿಸುವ ಸೊಗಸಿನ ಸ್ವಾಧದ ಇರುವನ್ನು ಕಾವ್ಯವನ್ನಾಗಿಸಿದ್ದಾರೆ. ಕಲಾವಿದ ಎಂ.ಬಿ.ಪಾಟೀಲರು ಅದೇ ಕೃತಿಯಲ್ಲಿ ಛಾಯಾಚಿತ್ರಾಧಾರಿತ ನೈಜತೆಯ ಸರಿತಪ್ಪುಗಳ ರಸಾನುಭವದ ಉತ್ಕೃಷ್ಟ ಪಾಠವನ್ನು ಹೇಳಿದ್ದಾರೆ. ವಿಶೇಷವೆಂದರೆ, ಈ ಕವಿ-ಕಲಾವಿಯರಿಬ್ಬರೂ ಪರೋಕ್ಷವಾಗಿ ಈ ಚಿತ್ರದ ಮೂಲಕ ಛಾಯಾಚಿತ್ರ ಮಾಧ್ಯಮದ ಭಾಷೆಯನ್ನೇ ಹೆಣ್ಣಿನ ರೂಪವಾಗಿರುವಂತೆ ತಮ್ಮ ವಿವರವನ್ನಾಗಿಸಿದ್ದಾರೆ. ಪ್ರಸ್ತುತ ಚಿತ್ರವು ರಚನೆಗೊಂಡ ನಾಲ್ಕು ಶತಮಾನಗಳ ನಂತರವಷ್ಟೇ ಛಾಯಾಚಿತ್ರ ಮಾಧ್ಯಮವು ಅನ್ವೇಷಿತವಾದುದು, ತದನಂತರ ಒಂದು ಶತಮಾನದ ನಂತರವಷ್ಟೇ ಛಾಯಾಚಿತ್ರವು ಕಲಾಮಾಧ್ಯಮವೆಂದು ಸ್ವೀಕೃತವಾದುದು!  ಅಂತೆಯೇ ಪ್ರಸಿದ್ಧ, ಅಪರೂಪದ ಬೃಹದಾಕಾರದ ಕಪ್ಪುಬಿಳುಪಿನ ‘ಗೆರ್ನಿಕಾ’ ಎಂಬುದು, ಅದೇ ಹೆಸರಿನ ಸ್ಪೇನ್ ದೇಶದ ನಗರವನ್ನು ಬಾಂಬ್ ಸ್ಫೋಟವು ನಾಶಪಡಿಸಿದಾಗ ಸೃಷ್ಟಿಗೊಂಡ, ಅದೇ ದೇಶದ ಕಲಾವಿದ ಪಿಕಾಸೋ ರಚಿಸಿದ ಕೃತಿ. ಗೇರ್ನಿಕಾ ನಗರದ ಸ್ಮಾರಕ ಗೇರ್ನಿಕಾ ಕೃತಿ. ಇದನ್ನು ಸಾಧ್ಯಂತವಾಗಿ ವರ್ಣಿಸುವ ಕಲಾ ಇತಿಹಾಸಕಾರ ಡಾ. ಶಿವಾನಂದ ಬಂಟನೂರ್ ಅವರು ಕಡೆಗೆ ಕೇಳುವ ಪ್ರಶ್ನೆ, “ಹಾಗಾದರೆ ಇದರ ಪ್ರತಿಭಟನೆ ಎಲ್ಲಿದೆ?” ಎಂದು. ಕಂಡ ವಿವರವೆಲ್ಲವೂ ಅರ್ಥವಾಗಿಯೇ ಕೊನೆಗೊಳ್ಳಬೇಕೆಂಬ ಸಾಧಾರಣ ನಿರೀಕ್ಷೆಯನ್ನು ಸುಳ್ಳಾಗಿಸುವ ಹೊಳಹನ್ನು ಈ ಕನ್ನಡದ ವಿಶ್ಲೇಷಣೆಯ ವಿವರವು ಒಳಗೊಂಡಿದೆ. ಇದೇ ಕೃತಿಗೆ ಪ್ರತಿಕ್ರಿಯಿಸಿರುವ ಕಥೆಗಾರ ನಾಗಮಂಗಲ ಕೃಷ್ಣಮೂರ್ತಿಯವರ ‘ಆಪರೇಷನ್ ಅಶ್ವಮೇಧ’ವು ಗೆರ್ನಿಕಾದ ಕುದುರೆಯನ್ನು ಪೌರುಷೇಯ ಶಕ್ತಿಯನ್ನಾಗಿ ಓದಿ, ಕನ್ನಡದ ಸ್ತ್ರಿವಾದದ ದೃಷ್ಟಿಕೋನದಿಂದಲೂ ಈ ಕೃತಿಯ ಓದು, ಅದೂ ಕಥೆಯೊಂದರ ರೂಪದಲ್ಲಿ ಸಾಧ್ಯ ಎಂದು ನಿರೂಪಿಸಿದ್ದಾರೆ.

ಕನ್ನಡದ ನುಡಿಜಗತ್ತು ಚಿತ್ರಕಲೆಗೆ ಅತ್ಯಂತ ಹತ್ತಿರಕ್ಕೆ ಬಂದಿರುವುದು ರವಿವರ್ಮನ ಪೌರಾಣಿಕ ಚಿತ್ರಗಳಿಗೇ. ಬದಿಯ ಕೇರಳದ ಈ ಕಲಾವಿದ ಕನ್ನಡಿಗನೇ ಆಗಿಬಿಟ್ಟಿದ್ದಾನೆ. ಆದರೆ ನಿಜದಲ್ಲಿ ಕನ್ನಡದ್ದೇ ಆಗಿರುವ ಚಿತ್ರಸಂಪ್ರದಾಯವೆಂದರೆ ಅದು ನಿಸರ್ಗಚಿತ್ರಣ. ರವಿವರ್ಮನ ಆಕಾರಗಳೆಲ್ಲವೂ ಹೇಗೆ ಎಲ್ಲ ರೀತಿಯಲ್ಲೂ ರಾಜಮನೆತನದವರೋ ಹಾಗೆಯೇ ನಿಸರ್ಗವು ಪ್ರಜಾಪ್ರಭುತ್ವದ ಜನಸಾಮಾನ್ಯರಿಗೆ ಸೇರಿದ್ದು. ಕನ್ನಡದ ಚಿತ್ರಣ ಕ್ರಿಯೆಯ ಮೂಲಕವೂ ರಾಜಾಢಳಿತವನ್ನು ಪ್ರಜೆಗಳ ಪ್ರಭುತ್ವವು ಸ್ಥಳಾಂತರಿಸಿದ್ದು ಹೀಗೆ. ಆದ್ದರಿಂದಲೇ ಅಪ್ರಜ್ಞಾವಾಗಿ ಈ ‘ಚಿತ್ರರೂಪಕ’ ಸರಣಿಯಲ್ಲಿ ಅನೇಕ ನಿಸರ್ಗಚಿತ್ರಗಳ ಉದಾಹರಣೆಗಳನ್ನು ಸೇರಿಸಲಾಗಿದೆ. ಒಂದು ವಿಶೇಷವೆಂದರೆ ಇಂತಹ ಕನ್ನಡಕುಲ ನಿರ್ದಿಷ್ಟವಾದ ನಿಸರ್ಗ ಚಿತ್ರಣವು ಒಂದು ಔಪಕಾರಿಕ ಕಲಿಕೆಯ ವಿಷಯವಾಗಿ ಕನ್ನಡದ ಕಲಾಶಾಲೆಗಳಲ್ಲಿ ಆರಂಭದಿಂದಲೂ ನಿಷಿದ್ಧವಾದ ವಿಷಯ. ಇದಕ್ಕಿರುವ ಪರೋಕ್ಷ ಕಾರಣವೆಂದರೆ, ಕಲಾಶಾಲೆಗಳನ್ನು ರಾಜಮಹಾರಾಜರು/ಬ್ರಿಟಿಷರು ಆರಂಭಿಸಿದ್ದೇ  ಆಗಿದೆ. ಇದಕ್ಕೆ ಕಾರಣ ಸಾಹಿತ್ಯದಲ್ಲಿ ಹಾಸ್ಯವಿದ್ದಂತೆ. ವಿಮರ್ಶೆಯ ಗಾಂಭಿರ್ಯವು ಹಾಸ್ಯಕ್ಕೆ ಅನವಶ್ಯಕ ಎಂದು ರೂಢಿಗತ ವಿಮರ್ಶಾಕ್ರಮವು ತೀರ್ಪು ನೀಡಿರುವ ಹಿನ್ನೆಲೆ ಇದಕ್ಕಿದೆ. ಜಾನ್ ಮಿರೋ ಎಂಬ ಕಲಾವಿದನ ಒಂದು ಹಳ್ಳಿಯ ಭಾವಚಿತ್ರಣದ ಭೌತಿಕ ವಿವರ, ಅದರ ವರ್ಣ, ಸಂಯೋಜನೆ ಇತ್ಯಾದಿಗಳು ಎ.ಎನ್. ಮೂರ್ತಿರಾಯರ ‘ದಿವಾನಖಾನೆಯ ಅಂದಚಂದ’ದಂತಹ ಲಲಿತಪ್ರಬಂಧವನ್ನು ದೃಶ್ಯವಾಗಿ ಕಟ್ಟಿಕೊಡುವಂತಹದ್ದು. ಕಲಾವಿದ ಬಾಬು ಜತ್ತಕರ್ ಇಷ್ಟೇ ವಿವರವನ್ನು ತಮ್ಮ ಬರಹದಲ್ಲಿ, ಚಿತ್ರಕ್ಕೆ ಸಂವಾದಿಯಾಗಿ ಕಟ್ಟಿಕೊಡಲು ಕಾರಣ ಸ್ವತಃ ಈ ಕಲಾವಿದರ ಚಿತ್ರಣ ಕ್ರಮವೇ ಚರ್ವಿತಚರ್ವಣ ಹಾಗು ವಿವರಪೂರ್ಣವಾಗಿದೆ. ಅಂದರೆ ಮಿರೊ ಚಿತ್ರವು ಬಾಬು ಅವರಿಗೆ ತನ್ನತನವನ್ನು ಮೀರುವ ಪದಾರ್ಥ ಅವಕಾಶವಾಗಿ ಸಿಕ್ಕಿದೆ. “ಪದವೇ ಪದ್ಯವಾಗುವಂತೆ, ಸೊಲ್ಲೊಂದು ನಾದವಾಗುವಂತೆ, ನಾನು ಬಣ್ಣವನ್ನು ಬಳಸುತ್ತೇನೆ” ಎನ್ನುತ್ತಾನೆ ಮಿರೊ. “ಈ ಕೃತಿಯು ನನ್ನ ಜಾಣ್ಮೆಯನ್ನು ಮೆಚ್ಚಿತು. ನಾನು ಕಲೆಯ ಸೂಕ್ಷ್ಮತೆಯನ್ನು ಇಷ್ಟಪಟ್ಟೆ. ಪ್ರೀತಿ ಅಂಕುರಿಸಿತು” ಎನ್ನುತ್ತಾರೆ ಈ ಕೃತಿಯನ್ನು ಮನೆಯೊಂದನ್ನು ಪ್ರವೇಶಿಸುವಂತೆ ವಿವರಿಸಿರುವ ಕಥೆಗಾರ್ತಿ ಸುನಂದಾ ಪ್ರಕಾಶ ಕಡಮೆ. ಸ್ವತಃ ಚಿತ್ರಪಟವನ್ನೇ ಇನಿಯನನ್ನಾಗಿ ಕಾಣುವ ಈ ಬರವಣಿಗೆಯ ಜಾಣ ಹುನ್ನಾರವು ವಚನಗಾರ್ತಿಯರು ಆತ್ಯಂತಿಕತೆಯನ್ನು ಇನಿಯನನ್ನಾಗಿಸಿಕೊಂಡಿರುವ ಕನ್ನಡದ ವಿಶಿಷ್ಟ ಮನಸ್ಸಿನ ಪ್ರತೀಕವೇ ಆಗಿದೆ.

ತಮ್ಮ ಐವತ್ತರ ವಯಸ್ಸಿನ ನಂತರ ಚಿತ್ರಕಲಾ ರಚನೆಯಲ್ಲಿ ತೊಡಗಿಕೊಂಡ ರುಮಾಲೇ ಚಿನ್ನಬಸಪ್ಪನವರು ನಿರ್ದಿಷ್ಟವಾಗಿ ಬೆಂಗಳೂರು ನಗರವನ್ನು ಚಿತ್ರಿಸಿದವರು. ಅವರ ಚಿತ್ರಗಳಲ್ಲಿ ಮರಗಳ ನಡುವೆ ಕಟ್ಟಡಗಳಿವೆಯೋ ಅಥವಾ ಕಟ್ಟಡಗಳ ಸುತ್ತಲೂ ಜರ್ಮನಿಯ ಕ್ರುಮ್ಬಿಗಲ್ ಅವರು ನೆಟ್ಟ ಮರಗಿಡಗಳಿವೆಯೋ ಎಂಬುದರ ಕುರಿತ ಮೈಕ್ರೊಸ್ಕೊಪಿಕ್ ವ್ಯಾಖ್ಯಾನವನ್ನು ಕಲಾವಿದ/ವಿಶ್ಲೇಷಕ ಕೆ.ಎಸ್.ಶ್ರೀನಿವಾಸ ಮೂರ್ತಿ ಹಾಗು ಪ.ಸ.ಕುಮಾರ್ ಪದಗಳಲ್ಲಿ ವಿವರಿಸಿದ್ದಾರೆ. ರುಮಾಲೆಯವರು ಔಪಕಾರಿಕವಾಗಿ ಕಲೆಯನ್ನು ಕಲಿತರು ಹಾಗು ಇಲ್ಲ ಎಂಬ ಇವರಿಬ್ಬರ ನಡುವಣ ಬರವಣಿಗೆಯೊಳಗಿನ ಅರಿವು ರುಮಾಲೆಯವರ ಕೃತಿಯಲ್ಲಿ ಅಡಕವಾಗಿರುವ ಸತ್ಯದಂತೆ, ನಿತ್ಯ ನಿರಂತರ ‘ಅಯೋಮಯ’ದ ಆಹ್ಲಾದವನ್ನು ಒಳಗೊಂಡಿದೆ. ಶೈಲಿಯಲ್ಲಿ ರುಮಾಲೆ ಅಸಲಿ ಎಂದು ಮೂರ್ತಿ ಸಾಧಿಸಿದರೆ ಅವರದ್ದು ವ್ಯಾನ್ ಗೋನನ್ನ ನೆನಪಿಸುವ ಶೈಲಿ ಎನ್ನುತ್ತಾರೆ ಕುಮಾರ್. ವಾಸ್ತವದಿಂದ ವ್ಯಾಖಾನದವರೆಗೂ ಕನ್ನಡದ ಕಲಾವಿದರನ್ನು ಸಹ ಇದೆ ಕನ್ನಡದ ಬರವಣಿಗೆಯ ಅಭಿವ್ಯಕ್ತಿಯು ಹೇಗೆ ಸಮಾನರೇಖೆಯ ದೃಶ್ಯಾನುಭಾವಕ್ಕೆ ಎಳಿಸಿದೆ ಎಂಬುದಕ್ಕೆ ಈ ಎರಡು ಬರಹಗಳು ಸಾಕ್ಷಿ. “ಆಟಮ್ ಡೇ ಇನ್ ಸಾಕೋಲ್ ನಿಕಿ” ಎಂಬ ರಷ್ಯನ್ ಕಲಾವಿದ, ಅಷ್ಟೇನೂ ಕನ್ನಡ ಜಗತ್ತಿಗೆ ಪರಿಚಿತವಲ್ಲದ ಐಸಾಕ್ ಲೆವಿಟೆನ್ ಕೃತಿಯಲ್ಲಿ, ನಿಸರ್ಗದೊಳಗೆ ಅಪರೂಪಕ್ಕೆ ಮಹಿಳೆಯೊಬ್ಬಳ ಚಿತ್ರಣವಿದೆ.  “ಒಂಟಿ ಹಾದಿ, ಒಂಟಿ ಹುಡುಗಿ...ಬದುಕಿನ ಒಂಟಿತನ ಅಥವಾ ಬಯಸಿದ ಏಕಾಂಗಿತನದ ಪ್ರತೀಕದಂತಿವೆ ಎರಡೂ” ಎಂಬ ಸ್ತ್ರೀತ್ವದ ತುಮುಲವನ್ನು, ಕಲಾವಿದನ ಸ್ತ್ರೀರಹಿತ ಜೀವನದ ವಿವರದ ನಡುವಿನಿಂದ ಹೆಕ್ಕಿತೆಗೆವ ವಿವರ ನೀಡಿದ್ದಾರೆ ಶ್ಯಾಮಲಾ ಗುರುಪ್ರಸಾದ್. “ಇಷ್ಟಕ್ಕೂ ಮೊದಲು ನಡೆದವಳಿಗೆ ದಾರಿಯೊಂದಿತ್ತೇ ಈ ಊರಿನಲ್ಲಿ?” ಎಂದು ಕಾವ್ಯಾತ್ಮಕವಾಗಿ ಕೇಳುವ ರಮೇಶ ಅರೋಲಿಯವರೂ ಸಹ ಇದೇ ದೃಷ್ಟಿಕೋನವನ್ನೇ ಊರ್ಜಿತಗೊಳಿಸುತ್ತಾರೆ.

ಕನ್ನಡಿಗ ಕಲಾವಿದರೇ ಆದ ಕೆ.ಕೆ. ಹೆಬ್ಬಾರರ ವೀಣೆಯ ಚಿತ್ರದೊಳಗಿನಿಂದ ನಿಸರ್ಗಚಿತ್ರಣದ ದೃಶ್ಯ-ಅಮೂರ್ತ ಸಾಧ್ಯತೆಯನ್ನು ಹೆಕ್ಕಿ ತೆಗೆದಿದ್ದಾರೆ ಸುರೇಶ್ ಜಯರಾಮ್.  “ನನಗೆ ಗುಲಾಬಿ ಹೂವು ಎಷ್ಟು ಪ್ರಿಯವೋ, ಕಳ್ಳಿಯ ಪೊದೆ ಕೂಡ ಅಷ್ಟೇ ಇಷ್ಟ” ಎಂಬ ಸಾಮಾಜಿಕ ಅಸಮತೆಯನ್ನು ತೊಡೆದು ಹಾಕುವ ದೃಶ್ಯ-ವಲಸಿಗ (ಡಯಾಸ್ಪೊರಿಕ್) ಅನುಭವಕ್ಕೆ ಸಂವಾದಿಯಾಗಿ ವಿವರಿಸಿದ್ದಾರೆ ಹೆಬ್ಬಾರ್.  ಈ ದೃಶ್ಯವಿವರವನ್ನು ಬಳಸಿ ಸುರೇಶ್ ಅವರು ಚಿತ್ರವೊಂದರಲ್ಲಿ ಹಿನ್ನೆಲೆ-ಮುನ್ನೆಲೆ ಎಂಬ ರೂಪನಿಷ್ಠ  ಸಾಂಪ್ರದಾಯವನ್ನು ಪ್ರಶ್ನಿಸುತ್ತಾರೆ.  “ಶಾಶ್ವತ ಸ್ವರ್ಗವ ಮರೆತು ಕ್ಷಣದ ಮಿತಿಯ ಲೋಕದಲಿ ಅಲೌಕಿಕ ತನ್ಮಯರಾಗಿ,” ಎಂಬ ಕಾವ್ಯ ಸಾಲುಗಳನ್ನು ಎಚ್. ಆರ್. ರಮೇಶ್ ಇದೆ ಚಿತ್ರದಲ್ಲಿ ಕಾಣುವುದು, ಕವಿ ಹಾಗು ವಿಮರ್ಶಕರು ಪರಸ್ಪರ ಒಪ್ಪಿಗೆ ಸೂಚಿಸುವ ಸಂಕೀರ್ಣ ಅಲೌಕಿಕ ನಿಸರ್ಗಚಿತ್ರಣ ಕ್ರಮವನ್ನು ಸಮಾನ ಮನಸ್ಸಿನ ಒಪ್ಪಂದವಾಗಿದೆ.

ಪ್ರಕೃತಿಯು ಮೊದಲೆಲ್ಲ ಮಾನವನ ನಾಟಕಾದ ಒಂದು ಕೇವಲ ಹಿನ್ನೆಲೆಯಾಗಿದ್ದು, ಒಂದು ಸರ್ವ ಸ್ವತಂತ್ರ ಅಭಿವ್ಯಕ್ತಿಯಾಗಿ ಹೊಮ್ಮುವ ಕಾಲಕ್ಕೆ ಕಾಡುಗಳೆಲ್ಲ ನಾಡಾಗಿ, ಕಟ್ಟಡ-ರಸ್ತೆಗಳಾಗಿ ‘ಅರ್ಥ’ವ್ಯಾಪ್ತಿ ಹಾಗೂ ಲಾಭದ ಅರ್ಥವನ್ನು ಹೊಂದತೊಡಗಿದ್ದು ಕಾಕತಾಳೀಯವಲ್ಲ. ರುಮಾಲೆ ಚೆನ್ನಬಸಪ್ಪ ಇದನ್ನು ತಮ್ಮ ಚಿತ್ರದಲ್ಲಿ ಪ್ರತಿಭಟಿಸಿದ ರೀತಿಯಲ್ಲಿಯೇ ಕಟ್ಟಡಗಳನ್ನು ಮರಗಳಿಂದ ಮುಚ್ಚುವ ಚಿತ್ರಗಳನ್ನು ರಚಿಸಿದ್ದು. ಎಡ್ವರ್ಡ್ ಮುಂಕ್ ಎಂಬ ಕಲಾವಿದನ ‘ಸ್ಕ್ರೀಮ್’ ೨೦ನೇ ಶತಮಾನದ ಅತ್ಯುತ್ತಮ ಕೃತಿಗಳಲ್ಲಿ ಅನಿವಾರ್ಯವೆನಿಸುವಷ್ಟು ಪ್ರಮುಖ ಕೃತಿ. ನಿಸರ್ಗವನ್ನೊಳಗೊಂಡ ಸೇತುವೆಯೊಂದು ಉದ್ದೀಪಿಸಬಹುದಾದ ಗಾಢ ಏಕಾಂಗಿತನ ಹಾಗೂ ಅನಿಶ್ಚಿತತೆಯನ್ನು ಚಿತ್ತದೊಳಕ್ಕೆ ಇಳಿಬಿಡುವ ಸಾಮರ್ಥ್ಯದ ಕೃತಿ. ಜಿ.ಕೆ. ರವೀಂದ್ರಕುಮಾರ್ ಅವರು “ಸ್ತಬ್ಧವಾಗುವುದು ಎಂದರೆ ಹೀಗೆ, ಸಾಧ್ಯವಾದ ಚಿತ್ರದಲ್ಲಿ, ಸಾಧ್ಯವಾಗದ ಚಿತ್ತದಲ್ಲಿ” ಎಂದು ಈ ಕೂಗನ್ನು ಕಾವ್ಯವನ್ನಾಗಿಸಿದ್ದಾರೆ. ಅಧಿಕಾರವು ಹುಟ್ಟಿಹಾಕುವ ಏಕಾಂಗಿತನಕ್ಕಿಂತಲೂ ಇಡಿಯ ಸಮಾಜವೇ ಉದ್ದೀಪಿಸುವ ಮಾನಸಿಕ ಏಕಾಂಗಿತನಕ್ಕೆ ಒತ್ತು ಇದೆ ಈ ಕಾವ್ಯದಲ್ಲಿ. ಇದನ್ನು ಒಪ್ಪುವ ಕಲಾ ಇತಿಹಾಸಕಾರ ಡಾ,ಬಿ.ಕೆ.ಹಿರೇಮಠ್, “ಆದರೆ (ಈ ಐಕಾಂಗಿತನವನ್ನು) ತನ್ನ ಸೃಜನಶೀಲತೆಯ ಮೂಲವನ್ನಾಗಿಸಿಕೊಂಡುದು ಅನನ್ಯ. ಅದೇ ಈ ಕಲಾವಿದನ.. ಸಂದೇಶವೂ ಆದೀತು” ಎನ್ನುತ್ತಾರೆ.
*
ವ್ಯಾನ್ ಗೋ ಎಂಬ ಕಲಾವಿದನ ‘ಸ್ಟಾರಿ ನೈಟ್ಸ್’ ಅಪರೂಪದ ರಾತ್ರಿಯ ನಿಸರ್ಗಚಿತ್ರ. ಡಾ. ಚಿಂತಾಮಣಿ ಕೂಡ್ಲುಕೆರೆ ಅವರ ಕಥೆಯಲ್ಲಿ ಮಾಸ್ತರನೊಬ್ಬನ ಸ್ವಾಧಿಕಾರ, ಸ್ವಾಭಿಮಾನ ಹಾಗು ಅವನ ಬಾಲ್ಯದ ನೆನಪಿನ ಆಕಾಶದ ನಕ್ಷತ್ರವಾಗಿ ಹೊಮ್ಮಿದೆ. ಭೌತಿಕತೆಯ ಇತಿಮಿತಿಗೆ ಸಿಲುಕದ ನಿಸರ್ಗದ ಅನವರತ, ನಿಗೂಢ ಆಕಾಶವು ಹೇಗೆ ಕಥೆಯೊಂದರಲ್ಲಿ ಮಾಸ್ಟರನೊಬ್ಬನ ಸ್ವಾಧಿಕಾರ, ಸ್ವಾಭಿಮಾನ ಹಾಗು ಅವನ ಬಾಲ್ಯದ ನೆನಪಿನ ಆಕಾಶವಾಗಿ ಹೊಮ್ಮಿದೆ ಎಂದು ನಿರೂಪಿತವಾಗಿದೆ. ಬಾಲ್ಯದ ನೆನಪುಗಳು ಸಾಧಾರಣವಾಗಿ ಭೂಮಿಗೆ ಸಂಬಂಧಿಸಿದ್ದು--ಸ್ಥಳ ಹಾಗು ಅವಕಾಶದ ಬಂಧಕ್ಕೆ ಒಳಪಟ್ಟಿದ್ದು. ಆಕಾಶ-ನಕ್ಷತ್ರಗಳು ಸ್ವತಃ ನೆನಪುಗಳಿಗೆ ಮೂಲ ಪ್ರೇರಣೆಯಾದ ಕಾಲ-ಸ್ಥಳಗಳನ್ನು ಸೃಷ್ಟಿಸುವ ಮೂಲಪ್ರೇರಣೆಗಳು. ‘ರಾತ್ರಿ ಮತ್ತು ಆಕಾಶ’ ಇವೆರೆಡೂ ಸಾಧಾರಣವಾಗಿ ಚಿತ್ರಸೃಷ್ಠಿಗಳಾಚೆ ಉಳಿದುಬಿಡುವಂತಹದ್ದು. ವ್ಯಾನ್ ಗೋ ನ ಚಿತ್ರದಲ್ಲಿ ಇದನ್ನು ಗುರ್ತಿಸಿ ಕಥೆನ್ಯನಾಗಿಸಿರುವುದು ಕೂಡ್ಲುಕೆರೆಯವರಿಗೆ ಕನ್ನಡದ ಮನಸ್ಸಿನ ಹಿನ್ನೆಲೆಯೇ ಕಾರಣ. ಇದಕೆ ಪೂರಕವಾಗಿ “ಕಲಾವಿದನ ಆರೋಗ್ಯವನ್ನು ಕಾಪಾಡಲು ಆತ ತನ್ನ ಮೇಲೆಯೇ ಪ್ರಯೋಗಿಸಿಕೊಂಡ ಫಿಸಿಯೋಥೆರಪಿ ಈ (ಯುಗವೊಂದನ್ನು ದಿನವೊಂದರಲ್ಲಿ ಹಿಡಿದಿರಿಸುವ ಪ್ರಯತ್ನದ) ಚಿತ್ರ(ಸೃಷ್ಟಿ)” ಎನ್ನುತ್ತಾರೆ ವಿಮರ್ಶಕ ಅನಿಲ್.  

*
ಚಿತ್ರಕಲೆಯ ಇತಿಹಾಸದ ಪಾಠ ಹಾಗು ಬರವಣಿಗೆಯಲ್ಲಿ ತೊಡಗಿಕೊಂಡ ನನಗೆ ಈ ‘ಚಿತ್ರರೂಪಕ’ ಪ್ರಯೋಗವು ವಿಶಿಷ್ಟ ಎನ್ನಿಸಲು ಕಾರಣ ಇದು: ಕಲಾಕೃತಿಯೊಂದರ ಅಸಲಿ ಸಂದರ್ಭವನ್ನು ಮಾತ್ರ ಗಮನದಲ್ಲಿರಿಸಿ ಅದನ್ನು ಅನುಭವಿಸುವುದು, ಅದರ ಎಲ್ಲಾ ಸಾಧ್ಯತೆಯ ನಡುವೆಯೂ, ಒಂದು ದೃಶ್ಯ-ವಸಾಹತೀಕರಣದ ಕ್ರಿಯೆಯೂ ಹೌದಾಗಿದೆ. ಆ ಕ್ರಿಯೆ ಕೀಳರಿಮೆಯನ್ನು ಹುಟ್ಟಿಹಾಕಬಲ್ಲದು, ಹಾಕಿದೆ ಕೂಡ. ಪರ್ಯಾಯವಾಗಿ, ಸಿನೆಮಾ ಹಾಗು ಕಥೆ ಕಾದಂಬರಿ ಪ್ರಕಾರಗಳು ಜನಸಾಮಾನ್ಯರನ್ನು ಅನಿವಾರ್ಯವಾಗಿ ಒಳಗೊಳ್ಳುವ ನಿರ್ಮಿತಿಗಳು. ಈ ಜನಮಾನಸದ ಪ್ರತಿಕ್ರಿಯೆಯನ್ನು, ಸಾಹಿತ್ಯದ ಒಳಗಿನವರನ್ನೂ ದೃಶ್ಯಭಾಷೆಯ ರಂಗದೊಳಕ್ಕೆ ಆಹ್ವಾನಿಸಿದಾಗ, ಪ್ರಸಿದ್ಧ ಕೃತಿಗಳ ಗೋಚರ ಗುಣವು ಬಿಡುಗಡೆಗೊಳ್ಳುತ್ತ, ವಿಚಿತ್ರ, ವಿಕ್ಷಿಪ್ತ ಹಾಗು ವಿಭಿನ್ನ ವ್ಯಕ್ತಿತ್ವಗಳನ್ನು ಪಡೆದುಕೊಳ್ಳುತ್ತ ಸಾಗುತ್ತದೆ. ಈ ಅಂಶವು ಸ್ವತಃ ಚಿತ್ರಕಲಾ ವ್ಯಾಖ್ಯಾನಕ್ಕೆ ಹೊಸತನದ ಸ್ಪರ್ಶವನ್ನೇ ನೀಡಿಬಲ್ಲ ಯೋಗ್ಯತೆ ಹೊಂದಿರುತ್ತದೆ. ಕ್ರಮೇಣ ‘ಕನ್ನಡದ-ಕಣ್ಣು’ ಎಂಬ ಸಾಧ್ಯತೆಯನ್ನೂ ಹುಟ್ಟಿಹಾಕಬಲ್ಲ ಮಾನವೀಯ ಅನುಭವವನ್ನು ಉದ್ದೀಪಿಸುತ್ತದೆ. ದೃಶ್ಯಸೃಷ್ಟಿ ವಿಪರೀತವಾಗಿದ್ದರೂ (ಟಿವಿ ಸೀರಿಯಲ್ಲುಗಳು, ಸಿನೆಮಾ, ಜಾಹಿರಾತು, ಫ್ಲೆಕ್ಸ್-ಗಳು ಇತ್ಯಾದಿ) ನಮ್ಮಲ್ಲಿ ದೃಶ್ಯಪ್ರಜ್ಞೆ ಮಾತ್ರ ಕಡಿಮೆಯೇ. ಇಂತಹ ಕನ್ನಡದ ದೃಶ್ಯದರಿವಿನ ಸಂದರ್ಭದಲ್ಲಿ ‘ಚಿತ್ರರೂಪಕ’ದಂತಹ ಪ್ರಯೋಗವು ಮುಂದುವರೆದು ತನ್ನದೇ ಸಂಪ್ರದಾಯವೊಂದನ್ನು ಹುಟ್ಟಿಹಾಕುವ ತುರ್ತು ಎಂದಿಗಿಂತಲೂ ಇಂದು ಅವಸರದ್ದಾಗಿದೆ. ಇದೊಂದು ಮಾತಿನ ಮೂಲಕ ಕಣ್ತೆರೆಸುವ ಸ್ವಾಗತಾರ್ಹ ಸಂದರ್ಭ.


ಎಚ್.ಎ.ಅನಿಲ್ ಕುಮಾರ್

ಕಲಾ ವಿಮರ್ಶಕರು, ಚಿತ್ರಕಲಾ ಪರಿಷತ್ತಿನ ಕಲಾ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕಲೆಗೆ ಸಂಬಂಧಿಸಿದ ಬರಹಗಳ ಮೂಲಕ ಕನ್ನಡ ಮತ್ತು ಇಂಗ್ಲಿಷ್ ಓದುಗರಿಬ್ಬರಿಗೂ ಪರಿಚಿತರು. ಇವರಿಗೆ ದೆಹಲಿ ಕಲಾ ಶಾಲೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಕಲಾ ಶಿಕ್ಷಕರಿಗೆ ನೀಡುವ ಪ್ರತಿಷ್ಠಿತ ಬಿ.ಸಿ.ಸನ್ಯಾಲ್ ಪ್ರಶಸ್ತಿ ನೀಡಿ ಗೌರವಿಸಿದೆ. ಮೊದಲ ಬಾರಿಗೆ ಕರ್ನಾಟಕದ ಕಲಾ ಶಿಕ್ಷಕರೊಬ್ಬರಿಗೆ ಈ ಪ್ರಶಸ್ತಿ ದೊರೆತಿದೆ. ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದ ಕಲಾ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚಿತ್ರಕಲಾ ಪರಿಷತ್ತಿನ ಹಳೆಯ ವಿದ್ಯಾರ್ಥಿಯೂ ಹೌದು. ಲಂಡನ್‌ನ ರಾಯಲ್ ಕಾಲೇಜ್‌ನಲ್ಲಿ ಸಮಕಾಲೀನ ಕ್ಯುರೇಶನ್ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ಕಲಾ ವಿಮರ್ಶೆಗೆ ಕುರಿತಂತೆ ಉನ್ನತ ಅಧ್ಯಯನ ಮಾಡಿದ್ದಾರೆ.

MORE FEATURES

ಅದ್ಭುತ ರಮ್ಯಗಳ ಸಂಗಮವಾಗಿ ಸಾಗುವ ಕಥೆಯ ಓದುವಿಕೆ

11-03-2025 ಬೆಂಗಳೂರು

"ಲಕ್ಷ್ಮಣರಾವ್ ಬರವಣಿಗೆಗೊಂದು ಮಾಂತ್ರಕತೆ ಇರುತ್ತದೆ ಎಂಬುದು ಮತ್ತೊಮ್ಮೆ ಇಲ್ಲಿ ನಿಜವಾಗುತ್ತದೆ. ಆಧುನಿಕ ಜಾನಪದದ...

ಕಾಪಿಟ್ಟುಕೊಂಡು ಬರೆಯುತ್ತಲೇ ಸಾಗಬೇಕಷ್ಟೇ

11-03-2025 ಬೆಂಗಳೂರು

“ಮನೆಯಲ್ಲಿ ತಂದೆ ಕಥೆಗಾರರಾಗಿದ್ದರಿಂದ ಕನ್ನಡ ಪುಸ್ತಕಗಳು ಕೈಹಿಡಿದು ತಂದು ನಿಲ್ಲಿಸಿದ್ದು ಕಥಾಲೋಕಕ್ಕೆ. ಬಾಲ್ಯದ...

'ಮನಸಾರ ಲೋಕವನ್ನು ಕಟ್ಟಿಕೊಂಡ' ಕನ್ನಡದ ಕಡುಗಲಿಯ ವ್ಯಕ್ತಿತ್ವ

11-03-2025 ಬೆಂಗಳೂರು

“ಗೆಳೆಯರ ಗುಂಪಿನಲ್ಲಿ ಹಂಚಿದ ಸ್ನೇಹದ ಸವಿಯುಣಿಸು, ಶಿಷ್ಯಸಂಕುಲಕ್ಕೆ ಪಾಠ ಹೇಳುವುದರ ಜೊತೆಗೆ ವಾತ್ಸಲ್ಯಪಥದಲ್ಲಿ ...