ಬೂಬರಾಜನ ಮೂಲಕ ಪ್ರಭುತ್ವದ ಸರ್ವಾಧಿಕಾರಿ ಮನೋಪ್ರವೃತ್ತಿಯನ್ನು ಕಾದಂಬರಿಕಾರರು ನಿಕಷಕ್ಕೊಡ್ಡುತ್ತಾರೆ. ಬೂಬರಾಜ ಕಟ್ಟಿದ ಸಾಮ್ರಾಜ್ಯ ಮತ್ತದರ ಅವನತಿಯನ್ನು ಹೇಳುವ ನೆಪದಲ್ಲಿ ಆಳರಸರ ತೆವಲುಗಳನ್ನೆಲ್ಲ ಕಾದಂಬರಿ ಚಿತ್ರಿಸುತ್ತದೆ ಎನ್ನುತ್ತಾರೆ ವಿಮರ್ಶಕ ಎಚ್. ಎಸ್. ಸತ್ಯನಾರಾಯಣ. ಅವರು ಸಾಹಿತಿ ಬಿ. ಜನಾರ್ದನ ಭಟ್ ಅವರ `ಬೂಬರಾಜ ಸಾಮ್ರಾಜ್ಯ' ಕೃತಿಯ ಬಗ್ಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ..
ಲೇಖಕ: ಬಿ.ಜನಾರ್ದನ ಭಟ್
ಕೃತಿ: ಬೂಬರಾಜ ಸಾಮ್ರಾಜ್ಯ
ಪುಟಗಳು: 272
ಬೆಲೆ: 250
ಮುದ್ರಣ: 2020
ಪ್ರಕಾಶನ: ಅಂಕಿತ ಪುಸ್ತಕ
ಡಾ. ಬಿ. ಜನಾರ್ಧನ ಭಟ್ಟರು ಬರೆದಿರುವ 'ಬೂಬರಾಜ ಸಾಮ್ರಾಜ್ಯ' ಎಂಬ ಕಾದಂಬರಿ ಇತ್ತೀಚಿನ ಉತ್ತಮ ಕಾದಂಬರಿಗಳಲ್ಲೊಂದು. ಕಾದಂಬರಿಗೆ ಮುನ್ನವೇ ಬೂಬರಾಜನ ಸಾಮ್ರಾಜ್ಯದ ಬಗ್ಗೆ ಒಂದು ಬ್ಲೂಪ್ರಿಂಟ್ ಕೊಟ್ಟಿರುವುದನ್ನು ನೋಡಿ, ಯಾರಾದರೂ ಈ ಸಾಮ್ರಾಜ್ಯವನ್ನು ಹುಡುಕಿ ಹೊರಡುವ ಸಾಧ್ಯತೆಗಳಿವೆ. ಅಷ್ಟು ನಿಖರವಾಗಿ ನೀಲನಕಾಶೆಯನ್ನು ಲೇಖಕರು ಒದಗಿಸಿದ್ದಾರೆ. ತಾವು ಬರೆಯುತ್ತಿರುವ ಕಾದಂಬರಿಗೊಂದು ಸೈದ್ಧಾಂತಿಕ ಚೌಕಟ್ಟನ್ನು ರೂಪಿಸಿಕೊಳ್ಳುವಂತೆ, ಒಂದು ಭೌಗೋಳಿಕ ನೆಲೆಗಟ್ಟನ್ನೂ ಹಾಕಿಕೊಳ್ಳುವುದು ಭಟ್ಟರ ವಿಶಿಷ್ಟ ಬಗೆಯಂತಿದೆ. ಓದುಗನ ಕಲ್ಪನೆಯಲ್ಲಿ ಈ ಭೌಗೋಳಿಕ ಕಲ್ಪನೆ ಉಂಟುಮಾಡುವ ಅದ್ಭುತ ಪರಿಣಾಮವನ್ನು ಕೃತಿ ಓದಿದವರೆಲ್ಲ ಅನುಭವಿಸಬಲ್ಲರೆಂಬುದನ್ನು ಧೈರ್ಯವಾಗಿ ಹೇಳಿಬಿಡಬಹುದು.
ಸಂಶೋಧನೆಯನ್ನು ನೆಪವಾಗಿರಿಸಿಕೊಂಡು ಇತಿಹಾಸವನ್ನು ಮತ್ತು ವರ್ತಮಾನವನ್ನು ಬೆದಕುವ ಮತ್ತು ಬೆಸೆಯುವ ಎರಡೂ ಪ್ರಕ್ರಿಯೆಗಳ ಪರಿ ಜನಾರ್ಧನ ಭಟ್ಟರಿಗೆ ಸರಾಗವಾಗಿ ಒಲಿದು ಬಿಟ್ಟಂತಿದೆ. 'ಬೂಬರಾಜ ಸಾಮ್ರಾಜ್ಯ' ಭಟ್ಟರ ಕಾದಂಬರಿಗಳ ಈ ಭಿನ್ನ ಬಗೆಯ ಜಾಡಿಗೊಂದು ಉತ್ತಮ ನಿದರ್ಶನದಂತಿದೆ.
'ಬೂಬರಾಜ' ಎಂಬ ಹೆಸರೇ ತನ್ನ ವಿಲಕ್ಷಣತೆಯಿಂದ ತಟ್ಟಕ್ಕನೆ ನಮ್ಮ ಗಮನ ಸೆಳೆಯುತ್ತದೆ. 'ಭೂ ವರಾಹರಾಜ' ಎಂಬುದು ಈ ಹೆಸರಿನ ಮೂಲರೂಪ. ತುಳು ನಾಡಿನ ಭೂತಾರಾಧನೆಯ ಸಂಸ್ಕೃತಿಯನ್ನು ಬಿಂಬಿಸುವ ಒಂದು ಕಾಲ್ಪನಿಕ ದೈವದ ಕಥೆ ಇಲ್ಲಿದೆ. ಹಾಗೆಂದು, ಸಂಪೂರ್ಣ ಕಾಲ್ಪನಿಕವೆಂದಲ್ಲ, ಹಲವು ತಮಿಳು, ತುಳು ಉಲ್ಲೇಖಗಳ ನೆರವು ಪಡೆದು ಈ ಕಾದಂಬರಿಯನ್ನು ಕಟ್ಟಲಾಗಿದೆ.
ಬೂಬರಾಜನ ಮೂಲಕ ಪ್ರಭುತ್ವದ ಸರ್ವಾಧಿಕಾರಿ ಮನೋಪ್ರವೃತ್ತಿಯನ್ನು ಕಾದಂಬರಿಕಾರರು ನಿಕಷಕ್ಕೊಡ್ಡುತ್ತಾರೆ. ಬೂಬರಾಜ ಕಟ್ಟಿದ ಸಾಮ್ರಾಜ್ಯ ಮತ್ತದರ ಅವನತಿಯನ್ನು ಹೇಳುವ ನೆಪದಲ್ಲಿ ಆಳರಸರ ತೆವಲುಗಳನ್ನೆಲ್ಲ ಕಾದಂಬರಿ ಚಿತ್ರಿಸುತ್ತದೆ. ಅವರ ಹೆಣ್ಣುಬಾಕತನ, ತನಗೆ ಸಿಗದಿರುವುದು ಮತ್ತಾರಿಗೂ ಸಿಗಬಾರದೆಂಬ ಸಣ್ಣಬುದ್ಧಿ, ಹಟ ಮುಂತಾದ ಸ್ವಯಂಕೃತಾಪರಾಧಗಳಿಂದಾಗಿ ಬೂಬರಾಜ ಕೋಶಕ ಆಕ್ರೋಶಕ್ಕೆ ಈಡಾಗುವುದು ಮಾತ್ರವಲ್ಲ, ತನ್ನ ಅಂಗರಕ್ಷಕನಿಂದಲೇ ದುರಂತವನ್ನಪ್ಪುತ್ತಾನೆ. ಈ ದುರಂತದೊಂದಿಗೆ ದೈವಿಕ ಆಚರಣೆಗಳೂ ತಳುಕು ಹಾಕಿಕೊಂಡಿವೆ. ಮಾವಿನಹಣ್ಣನ್ನು ಆಸೆಯಿಂದ ಕಿತ್ತು ತಿಂದ ಹೆಣ್ಣಿನ ಬರ್ಬರ ಹತ್ಯೆಗೈವುದಲ್ಲದೆ, ಆ ಮರವನ್ನೇ ಬುಡಸಮೇತ ಕಿತ್ತೊಗೆಯುವ ದಬ್ಬಾಳಿಕೆ-ದೌರ್ಜನ್ಯದ ಕ್ರೂರ ಮುಖದ ಮಗ್ಗಲೂ ಇದೆ. ದುರಂತವೆಂದರೆ, ಮುಂದೆ ಚಂದ್ರಮ್ಮ ದೇವಿಗೆ ಮಾವಿನಹಣ್ಣಿನ ಹರಕೆ ತೀರಿಸುವ ಕಣ್ಣೊರೆಸುವ ಪರಿಪಾಠ ರೂಢಿಗೆ ಬಂದು, ಈ ರೂಢಿಯು ಕಾಲಾಂತರದಲ್ಲಿ ಆಧುನಿಕತೆಯ ಸೋಂಕಿಗೊಳಗಾಗಿ ಕಾಣಿಸಿಕೊಂಡ ಬೆಳ್ಳಿಯ ಮಾವಿನಹಣ್ಣಿನ ಹರಕೆ ತೀರಿಸುವ ಕ್ರಮವನ್ನು ಹೇಳುವ ಕಾದಂಬರಿಕಾರರು ನಾವೀಗ ಕುಕ್ಕೆಸುಬ್ರಹ್ಮಣ್ಯ ಮುಂತಾದೆಡೆ ಹರಕೆ ತೀರಿಸುವ ಬೆಳ್ಳಿನಾಗರಗಳ ಹಿಂದೆಯೂ ಇರಬಹುದಾದ ಈ ಬಗೆಯ ಕಥೆ-ನಂಬುಗೆಗಳ ಕುರಿತಾಗಿ ಚಿಂತಿಸುವಂತೆ ಪರೋಕ್ಷವಾಗಿ ಒತ್ತಾಯಿಸುತ್ತಾರೆ. ವಿಶೇಷವೆಂದರೆ, ಈ ಎಲ್ಲ ಸಂಗತಿಗಳನ್ನೂ ಪ್ರಭುತ್ವದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸದ ಶೈಲಿಯಲ್ಲಿ ಜನಾರ್ಧನಭಟ್ಟರು ನಿರ್ವಹಿಸಿರುವುದು. ಈ ಕ್ರಮ ಓದುಗರನ್ನು ಆಕರ್ಷಿಸುವ ಮುಖ್ಯ ಅಂಶಗಳಲ್ಲೊಂದು.
ಬೂಬರಾಜನ ಕಥೆಗೆ ಸಂವಾದಿಯಾಗಿ ಸಂಶೋಧನೆಯಲ್ಲಿ ಆಸಕ್ತಿ ತಳೆದ ಕೃಷ್ಣಚಂದ್ರನೆಂಬ ಉಪನ್ಯಾಸಕನ ಕಥೆಯಿದೆ. ಬೋಧನೆಯ ಜೊತೆಜೊತೆಯಲ್ಲೇ ತನ್ನ ಸಂಶೋಧನೆಯ ಹಂಬಲವನ್ನು ಈಡೇರಿಸಿಕೊಳ್ಳ ಬಯಸುವ ಈ ಉಪನ್ಯಾಸಕನಿಗೆ ಸಹದ್ಯೋಗಿ ಮತ್ತು ಎಮ್ಮೆ ಚರ್ಮದ ಪ್ರಿನ್ಸಿಪಾಲರಿಂದ ಒದಗುವ ಕಿರುಕುಳದ ಸರಣಿ ಅಂತಿಂಥದ್ದಲ್ಲ. ಇವನ ಕಾರ್ಯಶ್ರದ್ಧೆಯನ್ನು ಕಂಡು ಹೊಟ್ಟೆ ಉರಿದುಕೊಳ್ಳುವ ಇಂಗ್ಲಿಷ್ ಉಪನ್ಯಾಸಕನೊಬ್ಬ ಇವನನ್ನು ಸಂಪೂರ್ಣವಾಗಿ ಮುಳುಗಿಸಿಯೇ ಬಿಡಬೇಕೆಂಬ ಕೆಟ್ಟಹಟಕ್ಕೆ ಬಿದ್ದು ಪ್ರಿನ್ಸಿಪಾಲನ ಕಿವಿಕಚ್ಚುತ್ತಾನೆ. ಆ ಹಿತ್ತಾಳೆ ಕಿವಿಯ ಪ್ರಿನ್ಸಿಪಾಲನ ಕಾಟಗಳು ಅಷ್ಟಿಷ್ಟಲ್ಲ. ಹಣ ಕೀಳುವ ಉಪನಿರ್ದೇಶಕನೂ ಸೇರಿದಂತೆ ಈ ಕರ್ತವ್ಯಪ್ರಜ್ಞೆಯ ಉಪನ್ಯಾಸಕನ ಸುತ್ತ ದುಷ್ಟಚತುಷ್ಟಯರೆ ಹುಟ್ಡಿಕೊಳ್ಳುತ್ತಾರೆ. ಅಕಾರಣ ಮತ್ಸರ, ತಮಗಿಂತ ಮೇಲೆ ಯಾರೂ ಏರಬಾರದೆಂಬ ಹೀನಬುದ್ಧಿ, ಸಣ್ಣತನ, ಅಧಿಕಾರದ ದುರುಪಯೋಗ ಮುಂತಾದವುಗಳನ್ನು ಒಂದು ಪುಟ್ಟ ಊರಿನ ಜೂನಿಯರ್ ಕಾಲೇಜಿನಲ್ಲಿ ಕಾಣಿಸುವ ಲೇಖಕರು ಎಲ್ಲ ಇಲಾಖೆಗಳಲ್ಲೂ ಶ್ರದ್ಧಾವಂತರ ಸುತ್ತಲಿರಬಹುದಾದ ಹೊಟ್ಟೆಕಿಚ್ಚಿನ ಸಹದ್ಯೋಗಿಗಳೆಂಬ ವಿಷಜಂತುಗಳ ಕಡೆಗೆ ಗಮನ ಸೆಳೆದು, ಇವೆಲ್ಲವೂ ಪ್ರಭುತ್ವದ ಹಿಂಸೆಗಳೇ ಆಧುನಿಕ ರೂಪ ಪಡೆದಿರುವವೇನೋ ಎಂಬಂತೆ ಬಿಂಬಿಸಿದ್ದಾರೆ. ಏನೇನೂ ತಪ್ಪು ಮಾಡದ ಆ ಉಪನ್ಯಾಸಕ ಮತ್ತವನ ಪತ್ನಿಯು ಅನುಭವಿಸುವ ಕಳವಳ ಮತ್ತು ಕಿರುಕುಳ ಬದುಕಿನ ಬಗ್ಗೆಯೇ ಜಿಗುಪ್ಸ್ಎ ಮೂಡಿಸುವಂತೆ ಮಾಡಿದರೆ ಅಚ್ಚರಿಯೇನಲ್ಲ. ಜನಾರ್ಧನ ಭಟ್ಟರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿದವರಾದ್ದರಿಂದ ಅಲ್ಲಿನ ಮರ್ಮವನ್ನು ಚೆನ್ನಾಗಿ ಬಲ್ಲವರೆ ಆಗಿದ್ದಾರೆ.
ಡಾ. ಜನಾರ್ಧನಭಟ್ಟರು "ಕಾಲಘಟ್ಟದಲ್ಲಿ ಪಾತ್ರ-ಪರಿಸ್ಥಿತಿಗಳು ಬದಲಾಗಬಹುದೇ ವಿನಃ ಮನಸ್ಥಿತಿಗಳಲ್ಲ" ಎಂಬುದನ್ನು ಅಂದು ಪ್ರಜಾಪಾಲಕ ದೊರೆಯು ಕ್ಷುಲ್ಲಕ ವ್ಯಾಮೋಹಪೀಡಿತನಾಗಿ ಹೇಗೆ ತನ್ನ ಸಾಮ್ರಾಜ್ಯದ ಅವಸಾನಕ್ಕೆ ನಾಂದಿ ಹಾಡಿದನೋ ಹಾಗೆ ಇಂದು ಮಾತ್ಸರ್ಯಪೀಡಿತರ ನಡುವೆ ಸತ್ಯವಂತರ ಚಾರಿತ್ರ್ಯಹರಣ ನಿರಂತರವಾಗಿದೆ ಎಂಬುದನ್ನು ಹೇಳುತ್ತಾರೆ. "ಚರಿತ್ರೆ ಅನ್ನೋದು ಕೇವಲ ಕತ್ತಿ ಹಿಡಿದು ಹೋರಾಡಿದವರದು ಮಾತ್ರವೇ? ನಮ್ಮಂಥವರಿಗೆ ಇಲ್ಲವೇ?" ಎಂಬ ಮಾತೊಂದು ಈ ಕಾದಂಬರಿಯಲ್ಲಿ ಬರುತ್ತದೆ. ಇದು ಆಕಸ್ಮಿಕವಾಗಿ ಬರುವ ಮಾತಲ್ಲ ಎಂಬುದು ಗಮನಾರ್ಹ.
ತುಳುನಾಡಿನ ಸಂಸ್ಕೃತಿಯನ್ನು, ಚರಿತ್ರೆಯನ್ನು ಕಾದಂಬರಿಕಾರರು ವ್ಯಾಪಕವಾಗಿ ಅಧ್ಯಯನ ಮಾಡಿದ್ದಾರೆಂಬುದಕ್ಕೆ ಕೃತಿಯ ಉದ್ದಕ್ಕೂ ಅನೇಕ ಪುರಾವೆಗಳಿವೆ. ತಾವು ಬರೆದಿರುವುದು ಕಾದಂಬರಿಯಾದ್ದರಿಂದ ಸಂಶೋಧನಾ ಪ್ರಬಂಧಗಳ ಕೊನೆಯಲ್ಲಿ ನೀಡುವ ಆಕರಗ್ರಂಥಗಳ ಪಟ್ಟಿಯನ್ನು ನೀಡುವ ಅಗತ್ಯ ಲೇಖಕರಿಗೆ ಕಂಡಿಲ್ಲ. ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ಓದುಗರಾದ ನಮಗೆ ಕಂಡರೆ ತಪ್ಪೇನಿಲ್ಲ! ಒಟ್ಟಿನಲ್ಲಿ ಹೇಳುವುದಾದರೆ, ನಾನು ಈ ಹಿಂದೆ ಉಲ್ಲೇಖಿಸಿರುವಂತೆ ಮಾನವನ ಮೂಲ ಪ್ರವೃತ್ತಿಗಳು ಅವಕಾಶ ದೊರೆತಾಗಲೆಲ್ಲ ಹೆಡೆಯೆತ್ತುವುದನ್ನು ಇತಿಹಾಸ ಮತ್ತು ವರ್ತಮಾನದ ಎರಡು ಸಮಾನಾಂತರ ಕಥೆಗಳ ಮೂಲಕ ಪರಿಶೀಲಿಸುವುದು 'ಬೂಬರಾಜ ಸಾಮ್ರಾಜ್ಯ' ಕಾದಂಬರಿಯ ತಾತ್ವಿಕ ಹಂದರ.
ಭಟ್ಟರು ಅವರ ಈ ಹಿಂದಿನ ಕಾದಂಬರಿಗಳಾದ ಉತ್ತರಾಧಿಕಾರ, ಹಸ್ತಾಂತರ, ಮೂರುಹೆಜ್ಜೆ ಕಾದಂಬರಿಗಳಲ್ಲೂ ಕೂಡ ಪೂರ್ವಕಾಲವನ್ನು ವರ್ತಮಾನಕ್ಕೆ ಜೋಡಿಸಿಕೊಂಡು ಮನುಷ್ಯ ವರ್ತನೆಗಳ ಸಾರ್ವಕಾಲಿಕ ಸ್ವರೂಪವನ್ನು ಹೇಳಲು ಯತ್ನಿಸಿರುವುದನ್ನು ಹಿರಿಯ ವಿಮರ್ಶಕರಾದ ಎಸ್. ಆರ್. ವಿಜಯಶಂಕರ್ ಅವರು ಗುರುತಿಸಿದ್ದಾರೆ. ಈ ಮಾತನ್ನು ಒಪ್ಪಿ ಮುಂದುವರಿಯುವುದಾದರೆ ವರ್ತಮಾನದ ಕಣ್ಣಿನಿಂದ ಚರಿತ್ರೆಯನ್ನು ಪರಿಭಾವಿಸಬೇಕಾದ ಬಗೆಯನ್ನು ಭಟ್ಟರು ಪ್ರಸ್ತುತ ಕಾದಂಬರಿಯ ಮೂಲಕವೂ ನಿರ್ವಚಿಸುತ್ತಿದ್ದಾರೆ.
ಈ ಕಾದಂಬರಿಯ ಓದು ಕೊಡುವ ಸುಖವೇ ಸುಖ. ಭಟ್ಟರ ಲೇಖನಿಯ ಸೊಗಸೇ ಹಾಗೆ. ಇಡೀ ಕಾದಂಬರಿಯನ್ನು ಸರಾಗವಾಗಿ, ಕೆಳಗಿಡಲು ಮನಸ್ಸಾಗದಂತೆ ಓದಿಸಿಕೊಳ್ಳುವ ಬಗೆ ಬಗೆಯ ಘಟನಾವಳಿಗಳ ಚುರುಕುತನ, ಬಳಸುವ ಭಾಷೆಯೊಳಗಣ ನವಿರು, ಇದ್ದಕ್ಕಿದ್ದಂತೆ ಎದುರಗೊಳ್ಳುವ ಆಕಸ್ಮಿಕ ತಿರುವುಗಳು, ಕುತೂಹಲ ಕಾಯ್ದುಕೊಳ್ಳುವ ಕಥಾನಕ ಎಲ್ಲವೂ ಸೊಗಸಾಗಿ ಮಿಳಿತಗೊಂಡು, ಕಾದಂಬರಿಯ ಓದನ್ನು ಚೆಂದಗಾಣಿಸುತ್ತದೆ.
ಕಾದಂಬರಿಕಾರರು ನಮ್ಮ ಮುಖ್ಯ ವಿಮರ್ಶಕರೂ ಆಗಿರುವುದರ ಲಾಭ ಈ ಕಾದಂಬರಿಗಾಗಿರುವುದರಿಂದ ರೋಚಕತೆಯ ಜೊತೆ ಜೊತೆಯಲ್ಲೇ ವಿಮರ್ಶೆಯ ತರ್ಕಬದ್ಧತೆ, ಪ್ರಬಂಧಗುಣ, ಸಾವಧಾನ ಬೆರೆತ ಕಥನದ ನಡೆ ಎಲ್ಲವೂ ಹದಬೆರೆತು ಒಗ್ಗೂಡಿರುವುದನ್ನು ಇಲ್ಲಿ ಹೇಳಲೇಬೇಕು. ಎಲ್ಲರೂ ಓದಿ ಸುಖಿಸಬಹುದಾದ ಈ ಕಾದಂಬರಿಯನ್ನು ಮಾಸ್ತಿ ಕಾದಂಬರಿ ಬಹುಮಾನಕ್ಕೆ ಆಯ್ದಿರುವುದು ಸಂತಸದ ಸಂಗತಿ ಕೂಡ. ಒಂದು ಒಳ್ಳೆಯ ಕಾದಂಬರಿಯನ್ನು ನಮಗೆ ಕೊಟ್ಟ ಬಿ. ಜನಾರ್ಧನಭಟ್ಟರನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ.
ಬಿ ಜನಾರ್ದನ ಭಟ್ ಅವರ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.