ಭ್ರಮೆಯಲ್ಲಿದ್ದವರಿಗೆ ಕೋವಿಡ್ ಒಂದು ಮರೆಯಲಾಗದ ಪಾಠ ಕಲಿಸಿದೆ : ಶ್ರೀನಿವಾಸ್ ಕಾರ್ಕಳ


ಕೊರೊನಾದ ನಂತರದ ಗ್ರಾಮ ಭಾರತವನ್ನು ದೇರ್ಲ ಕಾಣಿಸಲು ಹೊರಟಿದ್ದಾರೆ. ಇದು ಗಾಂಧಿಯ ಭಾರತ. ಗಾಂಧಿಯ ಸ್ವದೇಶಿ. ಇಲ್ಲಿ ಆರ್ಭಟವಿಲ್ಲ. ಆದ್ದರಿಂದ ಡೋಂಗಿಯ ಅಗತ್ಯವೂ ಇಲ್ಲ.... ಹಳ್ಳಿ ಮನೆಯಲ್ಲಿ ಉಣ್ಣುವ ಕೈಗಳು ಹೆಚ್ಚಾಗಿವೆ. ವೃದ್ಧಾಶ್ರಮಗಳೇ ಆಗಿದ್ದ ಮನೆಗಳಲ್ಲೀಗ ಕೂಡಾಟಗಳಿವೆ. ಮಕ್ಕಳ ಕಲರವವಿದೆ. ಬಾಲ್ಯದ ನೆನಪುಗಳಿವೆ. ಹಳ್ಳಿಯ ಆಟಗಳಿವೆ. ಅಟ್ಟದಲ್ಲಿದ್ದ ಚೆನ್ನೆ ಮಣೆ ಕೆಳಕ್ಕೆ ಬಂದಿದೆ ಎನ್ನುವ ದೇರ್ಲರ ಮಾತಿನಲ್ಲಿ ನಾಳಿನ ಭಾರತದ ಕನಸುಗಳಿವೆ ಎನ್ನುತ್ತಾರೆ ಲೇಖಕ ಶ್ರೀನಿವಾಸ ಕಾರ್ಕಳ. ಲೇಖಕ ನರೇಂದ್ರ ರೈ ದೇರ್ಲ ಅವರ ಕೊರೊನಾದ ನಂತರದ ಗ್ರಾಮ ಭಾರತ ಕೃತಿಯ ಬಗ್ಗೆ ಬರೆದ ಲೇಖನ ನಿಮ್ಮ ಓದಿಗಾಗಿ..

ಈ ವರ್ಷ ನಾನು ಓದಿದ ಅತ್ಯುತ್ತಮ ಪುಸ್ತಕಗಳಲ್ಲೊಂದು, ನರೇಂದ್ರ ರೈ ದೇರ್ಲ ಅವರ ‘ಕೊರೋನ ನಂತರದ ಗ್ರಾಮ ಭಾರತ’

ಕೋವಿಡ್ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಕೋವಿಡ್ ಹರಡುವುದನ್ನು ನಿಯಂತ್ರಿಸಲು ಹೇರಲಾದ ಅವೈಜ್ಞಾನಿಕ, ಅತಾರ್ಕಿಕ ಲಾಕ್ ಡೌನ್ ವಿಶೇಷವಾಗಿ ಭಾರತದಲ್ಲಿ ಮಾನವ ಜಗತ್ತು ಕಂಡು ಕೇಳರಿಯದ ವಿಪರೀತ ಪರಿಣಾಮಗಳಿಗೆ ಕಾರಣವಾಯಿತು; ಅನೇಕ ವೈರುದ್ಧ್ಯಗಳಿಗೂ ಕಾರಣವಾಯಿತು. ಒಂದೆಡೆ ಜನರು ಜೀವನ ಮತ್ತು ಜೀವನೋಪಾಯ ಕಳೆದುಕೊಂಡು ಬೀದಿಗೆ ಬಿದ್ದರೆ, ಇನ್ನೊಂದೆಡೆ ಈ ಜಗಕಾಯಿಲೆಯನ್ನು ನೆಪ ಮಾಡಿಕೊಂಡು ಪ್ರಭುತ್ವದ ಸಹಕಾರದೊಂದಿಗೆ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಂಡು ಕೆಲವರು ಬಿಲಿಯಾಧಿಪತಿಗಳಾದುದನ್ನೂ ನಾವು ನೋಡಿದೆವು.

ಕೋವಿಡ್ ಕಾಲದಲ್ಲಿ ಅನಿವಾರ್ಯವಾಗಿ ಮನೆಯಲ್ಲೇ ಉಳಿಯಬೇಕಾದುದು ಕೆಲವರಿಗೆ ಸಮಯ ಕಳೆಯುವ ಸಮಸ್ಯೆಯನ್ನು ಉಂಟು ಮಾಡಿದರೆ. ಈ ಸಂಕಟಕಾಲವನ್ನೇ ಅವಕಾಶವಾಗಿ ಪರಿವರ್ತಿಸಿಕೊಂಡು ಸೃಜನಾತ್ಮಕ ಕೆಲಸ ಮಾಡಿದರೂ ಇದ್ದಾರೆ. ಒಂದಷ್ಟು ಮಂದಿ ಕತೆ, ಕಾದಂಬರಿ, ಆತ್ಮಕತೆ, ಸಂಶೋಧನಾ ಗ್ರಂಥ ರಚಿಸಿದರೆ ಇನ್ನು ಕೆಲವರು ಕೊರೋನಾ ಬಗ್ಗೆಯೇ ಚಿಂತಿಸಿ ಕೃತಿ ರಚಿಸಿದರು. ಹಿರಿಯ ಪತ್ರಕರ್ತ ರಾಜಾರಾಮ್ ತಲ್ಲೂರು ಅವರಂಥವರು ಕೋವಿಡ್ ಕಾಲವನ್ನು ಪ್ರಭುತ್ವ, ಆಡಳಿತ, ಉದ್ಯಮ, ವ್ಯಾಪಾರ ಇತ್ಯಾದಿ ಮಗ್ಗುಲಿನಿಂದ ನೋಡಿ, ಅಧ್ಯಯನ ಮಾಡಿ ‘ಕರಿಡಬ್ಬಿ’ಯಂತಹ ಮಹತ್ತ್ವದ ಕೃತಿಯನ್ನು ರಚಿಸಿದರೆ. ಕೃಷಿ ತಜ್ಞ, ಲೇಖಕ ನರೇಂದ್ರ ರೈಯಂಥವರು ಕೋವಿಡ್ ಕಾಲವನ್ನು ಗ್ರಾಮ ಭಾರತದ ಕಣ್ಣಿನಿಂದ ನೋಡಿ ಗ್ರಾಮಗಳಲ್ಲಿ ನಡೆದ ಸ್ಥಿತ್ಯಂತರಗಳ ಮೇಲೆ ‘ಕೊರೋನಾ ನಂತರದ ಗ್ರಾಮ ಭಾರತ’ ದಂತಹ ಕೃತಿಯನ್ನು ರಚಿಸಿದರು. ‘ಕೊರೊನಾ ನಂತರದ ಭಾರತ’ ಎಂಬುದು ಕೃತಿಯ ಹೆಸರಾದರೂ ಸದರಿ ಕೃತಿ ಈ ಗಡಿಯನ್ನು ಮೀರಿ ಕೃಷಿ ಲೋಕದ ನಾನಾ ಸಮಸ್ಯೆಗಳು, ಕೃಷಿಯ ಬಗ್ಗೆ ಜನರಲ್ಲಿರುವ ತಪ್ಪು ಅಭಿಪ್ರಾಯಗಳು, ಆಧುನಿಕತೆ ಉಂಟು ಮಾಡುತ್ತಿರುವ ಹಾನಿ, ವಿವೇಚನಾರಹಿತವಾಗಿ ಬಳಸುವ ಕೀಟನಾಶಕಗಳು ಹೀಗೆ ಒಟ್ಟು ಗ್ರಾಮೀಣ ಕೃಷಿಲೋಕದ ಅನೇಕ ಒಳನೋಟಗಳನ್ನು ಒದಗಿಸುತ್ತದೆ.

‘ಕೊರೊನಾ ನಂತರ ಗ್ರಾಮಭಾರತ’, ‘ಕೃಷಿ ಮತ್ತು ಕೃಷಿಕ ಒಂಟಿಯಲ್ಲ’, ‘ನಮ್ಮ ನಡಿಗೆ ಹಳ್ಳಿಯೆಡೆಗೆ’, ‘ಇಲ್ಲಿರಲಾರೆ, ಹಳ್ಳಿಗೆ ಹೋಗಲಾರೆ’, ‘ಜೀವಂತಿಕೆಯ ನಾಶ, ಖಿನ್ನತೆಯ ಅಪಾಯ’, ‘ಖಾಲಿಯಾದ ಹುಂಡಿ’, ‘ಮನಸ್ಸು ಬದಲಾಯಿಸಿದ ಪೇಟೆ’ ಇತ್ಯಾದಿ ಶೀರ್ಷಿಕೆಗಳ ಇಪ್ಪತ್ತೊಂದು ಸ್ವಾರಸ್ಯಕರ ಲೇಖನಗಳು ಇಲ್ಲಿವೆ.

ನರೇಂದ್ರ ರೈ ದೇರ್ಲ ಅವರು ಹಿಂದೆ ಪತ್ರಕರ್ತರಾಗಿ ತರಂಗ ಪತ್ರಿಕೆಯಲ್ಲಿ ಕೆಲಸ ಮಾಡಿದವರು. ಈಗ ಶಿಕ್ಷಕರಾಗಿರುವವರು. ಆದರೆ ಅಂದಿನಿಂದ ಇಂದಿನ ವರೆಗೂ ಅವರ ಮೊದಲ ಆಸಕ್ತಿಯ ಕ್ಷೇತ್ರ ಕೃಷಿ. ಈಗಲೂ ಅವರು ಕೃಷಿಯನ್ನೇ ಬದುಕುತ್ತಿರುವವರು. ಕೃಷಿಯ ಮೇಲಿನ ಅಪರಿಮಿತ ಪ್ರೀತಿ, ಆಸಕ್ತಿ ಮತ್ತು ಅನುಭವ ಹಾಗೆಯೇ ತಮ್ಮ ಅನಿಸಿಕೆ ಮತ್ತು ಅನುಭವವನ್ನು ಸ್ವಾರಸ್ಯಕರವಾಗಿ ಕಟ್ಟಿಕೊಡುವ ಅವರ ಬರೆವಣಿಗೆಯ ಶಕ್ತಿ ಇವೆಲ್ಲವುಗಳ ಕಾರಣದಿಂದ ಈ ಕೃತಿ ಮತ್ತೆ ಮತ್ತೆ ಓದುವಂತೆ ಮಾಡುತ್ತದೆ.

ದೇರ್ಲ ಅವರ ಈ ಕೃತಿ ನನ್ನ ಹೃದಯಕ್ಕೆ ಅನೇಕ ಕಾರಣಗಳಿಂದ ಹತ್ತಿರವಾಯಿತು. ನಾವೀಗ ಹೊಟ್ಟೆ ಪಾಡಿನ ಕಾರಣಕ್ಕೆ ಪೇಟೆ ಸೇರಿ ಅಲ್ಲೇ ಮನೆ ಮಾಡಿಕೊಂಡು ನೆಲೆಯಾಗಿದ್ದೇವೆಯಾದರೂ ನಮ್ಮ ಬಹುತೇಕರ ಬೇರುಗಳಿರುವುದು ಹಳ್ಳಿಗಳಲ್ಲಿ. ನಮ್ಮ ಹಿರಿಯರೆಲ್ಲರೂ ಹಿಂದೆ ಕೃಷಿಕರಾಗಿದ್ದವರೇ (ನನ್ನ ತಾಯಿ ಅರಣ್ಯ ಇಲಾಖಾ ನೌಕರನ ಹೆಂಡತಿಯಾದರೂ ಕಳೆದ ಸುಮಾರು ಎರಡೂವರೆ ದಶಕಗಳ ಹಿಂದಿನವರೆಗೂ ಗದ್ದೆಯಲ್ಲಿ ನೇಜಿ ನೆಡುವುದನ್ನು ನಾನು ನೋಡಿದ್ದೆ). ಈಗಲೂ ನಗರದ ಐದು ಸೆಂಟ್ಸ್ ನಿವೇಶದನ ಅಳಿದುಳಿದ ಜಾಗದಲ್ಲಿ ಒಂದಿಷ್ಟು ಗಿಡ ನೆಟ್ಟು ಬೆಳೆಸುವುದು ನಮಗೆ ಪ್ರೀತಿಯ ಕೆಲಸವೇ. ಆದರೆ ನಗರದಲ್ಲಿ ಬದುಕುವ ನಮ್ಮದು ಸಂಪೂರ್ಣ ಪರಾವಲಂಬಿ ಬದುಕು. ಬೆಳಗ್ಗೆ ಎದ್ದು ಕುಡಿಯುವ ನೀರು, ಕಾಫಿಗೆ ಬಳಸುವ ಹಾಲು, ತಿಂಡಿ ಊಟಕ್ಕೆ ಬಳಸುವ ಆಹಾರ ಸಾಮಗ್ರಿಗಳು ಈ ಯಾವುದೂ ಹಣ ತೆರದೆ ನಮಗೆ ಸಿಗುವುದಿಲ್ಲ ಮತ್ತು ಇವೆಲ್ಲವೂ ನಮಗೆ ಬರುವುದು ಹಳ್ಳಿಗಳಿಂದ. ಹಳ್ಳಿಯವರಿಗೆ ಸಿಗುವ ಶುದ್ಧ ಗಾಳಿ, ಶುದ್ಧ ನೀರು, ಶಬ್ದ ಮಾಲಿನ್ಯ ರಹಿತ ಪರಿಸರ ನಮಗೆ ಇಲ್ಲಿ ಕೇವಲ ಕನಸು. ಹಾಗಾಗಿ ಮನಸು ಸದಾ ಹಳ್ಳಿಗಳೆಡೆಗೆ ಓಡುತ್ತಲೇ ಇರುತ್ತದೆ. ದಟ್ಟ ಕಾಡಿನ ನಡುವೆ ಇರುವ ನನ್ನ ಸಂಗಾತಿಯ ಬಂಟಮಲೆ ಮನೆಗೆ ಹೋದರಂತೂ ನನಗೆ ಅಲ್ಲೇ ಉಳಿದು ಬಿಡುವ ಅನಿಸುವುದಿದೆ.

ಆದರೆ ತಮ್ಮ ಬೇರುಗಳನ್ನು ಮರೆತ ಅನೇಕ ಪಟ್ಟಣವಾಸಿಗಳಲ್ಲಿ ಹಳ್ಳಿಗಳ ಬಗ್ಗೆ ಒಂದು ಬಗೆಯ ತಾತ್ಸಾರ ಭಾವನೆಯಿದೆ. ನಾವು ನಗರಗಳಲ್ಲಿದ್ದೇವೆ, ಮೆಟ್ರೋಗಳು, ಇಪ್ಪತ್ತನಾಲ್ಕು ಗಂಟೆ ವಿದ್ಯುತ್, ವೈಫೈ, ಟಿವಿ, ಮಾಲ್ ಗಳು, ಮಲ್ಟಿ ಫ್ಲೆಕ್ಸ್ ಗಳು, ಆಧುನಿಕ ಉದ್ಯಾನಗಳು ಇಲ್ಲೇ ಸ್ವರ್ಗವಿದೆ ಎಂಬ ಅಹಂ ಮತ್ತು ಭ್ರಮೆ. ‘ದೂರದ ಬೆಟ್ಟ ನುಣ್ಣಗೆ’ ಎಂಬ ಅರಿವಿಲ್ಲದೆ ಊರಲ್ಲಿ ಅಪಾರ ಕೃಷಿ ಭೂಮಿಯಿದ್ದರೂ ಅವನ್ನು ತೊರೆದು ನಗರ ಸೇರಿ, ಬಾಡಿಗೆ ಮನೆಯಲ್ಲಿ ನಿಂತು ಅತ್ಯಲ್ಪ ವೇತನದೊಂದಿಗೆ ನರಕದ ಬದುಕು ಸಾಗಿಸುವ ಮಂದಿ ದೊಡ್ಡ ಸಂಖ್ಯೆಯಲ್ಲಿದ್ದಾರೆ.

ಹೀಗೆ ಭ್ರಮೆಯಲ್ಲಿದ್ದವರಿಗೆಲ್ಲ ಕೋವಿಡ್ ಒಂದು ಮರೆಯಲಾಗದ ಪಾಠ ಕಲಿಸಿತು. ಲಾಕ್ ಡೌನ್ ಘೋಷಣೆಯಾದಾಗ ಉದ್ಯೋಗಕ್ಕೆ ಸಂಚಕಾರ ಬಂದಿತು. ಉದ್ಯೋಗಕ್ಕೆ ಸಂಚಕಾರ ಅಂದರೆ ಸಹಜವಾಗಿಯೇ ಆದಾಯ ಖೋತಾ. ಆದಾಯವಿಲ್ಲದೆ ಮನೆ ಬಾಡಿಗೆ ತೆರುವುದು ಹೇಗೆ, ಇತರ ಖರ್ಚುಗಳನ್ನು ನಿಭಾಯಿಸುವುದು ಹೇಗೆ? ಹಣವಿಲ್ಲದೆ ಒಂದು ಕ್ಷಣವನ್ನಾದರೂ ನಗರಗಳಲ್ಲಿ ಸಾಗಿಸುವುದು ಸಾಧ್ಯವೇ? ಆಗ ಹಳ್ಳಿಗೆ ಮರಳುವುದು ಅನಿವಾರ್ಯವಾಯಿತು. ಹೀಗೆ ಹಳ್ಳಿಗೆ ಮರಳಿದವರು ಅನಿವಾರ್ಯವಾಗಿ ಹಾರೆ ಪಿಕ್ಕಾಸು ಹಿಡಿದು ಕೃಷಿ ಕೆಲಸದಲ್ಲಿ ತೊಡಗಿಕೊಂಡರು. ‘ಕೃಷಿಯೊಂದೇ ಸತ್ಯ ಉಳಿದುದೆಲ್ಲ ಮಿಥ್ಯೆ’ ಎಂಬುದು ಅವರಿಗೆ ಅರಿವಾಯಿತು. ನಗರಗಳಲ್ಲಿ ಸುಖ ಇರಬಹುದು, ಆದರೆ ನೆಮ್ಮದಿಯಿರುವುದು ಹಳ್ಳಿಗಳಲ್ಲಿ, ಅಂತಿಮವಾಗಿ ಜೀವನಕ್ಕೆ ಭದ್ರತೆ ನೆಮ್ಮದಿ ನೀಡುವುದು ಈ ಭೂಮಿಯ ಮೇಲೆ ತಮ್ಮದು ಅಂತ ಇರುವ ಒಂದು ತುಂಡು ಭೂಮಿ, ಅದರಲ್ಲೂ ಮುಖ್ಯವಾಗಿ ಕೃಷಿ ಭೂಮಿ ಎಂಬ ಜ್ಞಾನೋದಯವಾಯಿತು ಅವರಿಗೆ.

ಆದರೆ ಕೋವಿಡ್ ಕಾಲವಲ್ಲವೇ? ಕೊರೊನಾ ವೈರಸ್ ಕಾರಣಕ್ಕೆ ಅತ್ಯಂತ ಆಪ್ತರನ್ನೂ ಅನುಮಾನಿಸುವ, ಅಸ್ಪೃಶ್ಯರಾಗಿ ಕಾಣುವ ಕಾಲವಲ್ಲವೇ? ಎಲ್ಲೋ ದೂರದಲ್ಲಿದ್ದಾತ ಹಳ್ಳಿ ಮನೆಗೆ ಮರಳಿ ಬಂದು ಮನೆಮಂದಿಯನ್ನು ಸೇರಿಕೊಳ್ಳುವುದು ಅಷ್ಟು ಸುಲಭವೇ? ಲೇಖಕ ದೇರ್ಲರೇ ಉದಾಹರಿಸಿದ ಒಂದು ಘಟನೆ ನೋಡಿ. “ಪ್ರತೀ ಬಾರಿ ನಾನು ಕತಾರ್ ನಿಂದ ಬರುವಾಗ ಮಂಗಳೂರು ವಿಮಾನ ನಿಲ್ದಾಣಕ್ಕೇ ಬಾಡಿಗೆ ಕಾರಲ್ಲಿ ಬಂದು ಕಾಯುವ ನನ್ನ ಭಾವ- ತಮ್ಮ ಈ ಬಾರಿ ಏಕಾಂಗಿಯಾಗಿ ನಾನು ಮನೆಗೆ ತಲಪುವಾಗಲೂ ಅಲ್ಲೂ ಇರಲಿಲ್ಲ. ಗದ್ದೆಗೋ ತೋಟಕ್ಕೋ ಹೋಗಿದ್ದರು. ಅಮ್ಮ ಬಿಟ್ಟರೆ ಬೇರೆ ಯಾರೂ ಪ್ರೀತಿಯಿಂದ, ಮೊದಲಿನ ಗೌರವದಿಂದ ಸ್ವಾಗತಿಸಲೇ ಇಲ್ಲ. ಈವರೆಗೆ ನನ್ನ ಲಗ್ಗೇಜ್ ಬಿಚ್ಚಿಯೇ ಇಲ್ಲ. ಕಾರಣ, ಅವೆಲ್ಲಾ ಖಾಯಂ ಆಗಿ ಇಲ್ಲೇ ಉಳಿಯುಂಥವು” ಎನ್ನುವ ರಾಘವೇಂದ್ರ, “ಸರ್, ಎಲ್ಲಾದರೂ ಒಂದೆಕ್ರೆ ಜಾಗ ಕೊಡಿಸಿ, ಐದು ಲಕ್ಷದಷ್ಟು ಉಳಿಕೆ ಹಣವಿದೆ” ಎನ್ನುತ್ತಾನೆ. ಕೋವಿಡ್ ಮನುಷ್ಯ ಸಂಬಂಧಗಳಿಗೆ ಸಂಬಂಧಿಸಿದ ಅನೇಕ ಮಿಥ್ಯೆಗಳನ್ನು ಒಡೆದು ಹಾಕಿತ್ತು. ಅಂತಹ ಅನೇಕ ಕಟು ಸತ್ಯಗಳನ್ನು ಸದರಿ ಕೃತಿ ನಮ್ಮ ಮುಂದಿರಿಸುತ್ತದೆ.

ಈ ಕೃತಿಯನ್ನು ತಾನೇಕೆ ಬರೆದೆ ಎಂಬುದನ್ನು ವಿವರಿಸುತ್ತಾ, “ಈಗಾಗಲೇ ಪರಪುಟ್ಟವಾಗಿರುವ ಹಳ್ಳಿಗಳಲ್ಲಿ ನಿಂತು ಯೋಚಿಸುವಾಗ ಹತ್ತಾರು ಪ್ರಶ್ನೆಗಳು ಹುಟ್ಟುತ್ತವೆ. ಬೆಳೆ-ಬೆಲೆ ಸ್ಥಿತ್ಯಂತರ, ಕಾಡುಪ್ರಾಣಿಗಳ ಉಪಟಳ, ಬದಲಾದ ತಾಪಮಾನ, ಕೂಲಿಯಾಳುಗಳ ಅಭಾವ, ಬತ್ತಿದ ಅಂತರ್ಜಲ ಹೀಗೆ ಅನೇಕ ಸಮಸ್ಯೆಗಳು, ನಗರಗಳು ಕುಲಕೆಟ್ಟ ವೇಗದಲ್ಲೇ ಗ್ರಾಮಗಳು ಬದಲಾದರೆ ಉಳಿಯುವುದೇನು? ಎಂಬ ಆತಂಕ ನನ್ನದು. ಈ ಹಿನ್ನೆಲೆಯಲ್ಲಿ ಈ ಕಿರುಹೊತ್ತಗೆಯನ್ನು ಬರೆದಿದ್ದೇನೆ, ಕೊರೋನಾ ನಂತರದ ಗ್ರಾಮಭಾರತದ ಸ್ವರೂಪದ ಬಗ್ಗೆ ಇದು ಭವಿಷ್ಯವಲ್ಲ. ಆದರೆ ವರ್ತಮಾನದ ಅನೇಕ ಸಂಗತಿ- ವಿಸಂಗತಿಗಳನ್ನು ಇಲ್ಲಿ ಕಾಣಿಸಿದ್ದೇನೆ. ರೈತನ ಮಗನಾಗಿ ಗ್ರಾಮದಲ್ಲೇ ಉಳಿದು ಕೃಷಿ ಬೇರಿನ ಎಳೆ ಹಿಡಿದು ಬರೆಯುವ ಲೇಖಕನಾಗಿ ಇದು ನನ್ನ ಬದ್ಧತೆಯೂ ಹೌದು, ಭರವಸೆಯೂ ಹೌದು” ಎನ್ನುತ್ತಾರೆ ಲೇಖಕ ನರೇಂದ್ರ ರೈ ದೇರ್ಲ.

“ಕೊರೊನಾದ ನಂತರದ ಗ್ರಾಮ ಭಾರತವನ್ನು ದೇರ್ಲ ಕಾಣಿಸಲು ಹೊರಟಿದ್ದಾರೆ. ಇದು ಗಾಂಧಿಯ ಭಾರತ. ಗಾಂಧಿಯ ಸ್ವದೇಶಿ. ಇಲ್ಲಿ ಆರ್ಭಟವಿಲ್ಲ. ಆದ್ದರಿಂದ ಡೋಂಗಿಯ ಅಗತ್ಯವೂ ಇಲ್ಲ.... ಹಳ್ಳಿ ಮನೆಯಲ್ಲಿ ಉಣ್ಣುವ ಕೈಗಳು ಹೆಚ್ಚಾಗಿವೆ. ವೃದ್ಧಾಶ್ರಮಗಳೇ ಆಗಿದ್ದ ಮನೆಗಳಲ್ಲೀಗ ಕೂಡಾಟಗಳಿವೆ. ಮಕ್ಕಳ ಕಲರವವಿದೆ. ಬಾಲ್ಯದ ನೆನಪುಗಳಿವೆ. ಹಳ್ಳಿಯ ಆಟಗಳಿವೆ. ಅಟ್ಟದಲ್ಲಿದ್ದ ಚೆನ್ನೆ ಮಣೆ ಕೆಳಕ್ಕೆ ಬಂದಿದೆ ಎನ್ನುವ ದೇರ್ಲರ ಮಾತಿನಲ್ಲಿ ನಾಳಿನ ಭಾರತದ ಕನಸುಗಳಿವೆ. ಈ ಕನಸುಗಳು ಕಲ್ಪನೆಗಳಾಗಿ ರೂಪುಗೊಂಡು ಪ್ರಬಲ ಇಚ್ಛಾಶಕ್ತಿಯಾಗಿ ಅನುಷ್ಠಾನಗೊಂಡು ಸುಂದರ ನಾಳೆಗಳು ಅರಳಲಿ ಎನ್ನುವುದು ನನ್ನ ಆಸೆಯೂ ಅಗಿದೆ. ಸ್ವಾವಲಂಬನೆಯ ಒಂದೇ ಒಂದು ಪಾಠ ನಮ್ಮ ಸಿಲೆಬಸ್ ನಲ್ಲಿ ಇಲ್ಲ ಎಂಬ ದೇರ್ಲರ ಮಾತು ಇಲ್ಲೊಂದು ದಿಕ್ಸೂಚಿಯನ್ನು ಒದಗಿಸುತ್ತಿದೆ ಎಂದು ಭಾವಿಸುತ್ತೇನೆ” ಎನ್ನುತ್ತಾರೆ ಈ ಕೃತಿಗೆ ಅರ್ಥಪೂರ್ಣ ಮತ್ತು ಸ್ವಾರಸ್ಯಕರ ಮುನ್ನುಡಿ ಬರೆದಿರುವ ಚಿಂತಕ, ಲೇಖಕ ಅರವಿಂದ ಚೊಕ್ಕಾಡಿ.

“ಇದು ಎಲ್ಲರನ್ನೂ ಆಳ ಚಿಂತನೆಗೆ ಹಚ್ಚಬಲ್ಲ ಕೃತಿ. ಆಡಳಿತದ ಮಂದಿ, ಶಿಕ್ಷಣ ತಜ್ಞರು, ಅಧ್ಯಾಪಕರು ಅಷ್ಟೇ ಏಕೆ ದೇಶದ ಎಲ್ಲ ವಿದ್ಯಾರ್ಥಿಗಳೂ ಇದನ್ನು ಓದಬೇಕು” ಎನ್ನುತ್ತಾರೆ ಬೆನ್ನುಡಿ ಬರೆದಿರುವ ಪರಿಸರವಾದಿ, ಅಡಿಕೆ ಪತ್ರಿಕೆಯ ಸಂಪಾದಕ, ಪತ್ರಕರ್ತ, ಜಲಾಂದೋಲನಗಾರ ಶ್ರೀಪಡ್ರೆ. ಶ್ರೀ ಪಡ್ರೆಯವರ ಮಾತು ನನ್ನವೂ ಆಗಿವೆ.

ಲೇಖಕ: ನರೇಂದ್ರ ರೈ ದೇರ್ಲ, ದೂರವಾಣಿ ಸಂಖ್ಯೆ: 91645-61789, 94489-51939, narendrarai64@yahoo.com

ಪ್ರಕಾಶನ: ಕನಸು ಪ್ರಕಾಶನ, ಮಾಡಾವು, ಪುತ್ತೂರು ತಾಲೂಕು, ದೂರವಾಣಿ: 91645-61789, 94489-51939

- ಶ್ರೀನಿವಾಸ ಕಾರ್ಕಳ

MORE FEATURES

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...

ಸಮ್ಮೇಳನಾಧ್ಯಕ್ಷರಾದ ಡಾ. ಗೊ.ರು. ಚನ್ನಬಸಪ್ಪ ಅವರ ಭಾಷಣ

20-12-2024 ಮಂಡ್ಯ

ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...