ಭಾವನೆಗಳನ್ನು ರೇಖೆಗಳ ನಡುವೆ ಬಂಧಿಸಿದ ಕೃತಿ


ಈ ಪುಸ್ತಕದ  ಶೀರ್ಷಿಕೆಯೇ ಹೇಳುವಂತೆ, ಭಾವ ರೇಖೆಗಳ ನಡುವೆ ಸಂಕಲನದಲ್ಲಿ ಭಾವನೆಗಳು ಉಕ್ಕಿ ಹರಿಯುತ್ತಿವೆ. ಆಸೆ, ನಿರೀಕ್ಷೆ, ನಿರಾಸೆ, ಅವಮಾನ, ಭಾವೋದ್ರೇಕ ಕ್ಷಣಗಳನ್ನ ಎಲ್ಲವನ್ನೂ ಒಟ್ಟುಗೂಡಿಸಿ ಕೆಲವೇ ಸಾಲುಗಳಲ್ಲಿ ಅಗಾಧವಾದ ಅರ್ಥವನ್ನ ತುಂಬಿದ ಜೇನುಹನಿಯನು ಸವಿಯಂತೆ ಸವಿಯಬಹುದಾದ ಈ ಕವನ ಸಂಕಲನವನ್ನು ಹೊರತಂದಿದ್ದಾರೆ ಎನ್ನುತ್ತಾರೆ ಕವಿ ನಾರಾಯಣಸ್ವಾಮಿ ಮಾಸ್ತಿ.  ಕವಿ ಸಿದ್ದಾಪುರ ಶಿವಕುಮಾರ್ ಅವರ ಭಾವ ರೇಖೆಗಳ ನಡುವೆ ಸಂಕಲನದ ಬಗ್ಗೆ ಅವರು ಬರೆದ ಲೇಖನ ನಿಮ್ಮ ಓದಿಗಾಗಿ..

ಕೃತಿ: ಭಾವ ರೇಖೆಗಳ ನಡುವೆ
ಲೇಖಕರು : ಸಿದ್ದಾಪುರ ಶಿವಕುಮಾರ್
ಪ್ರಕಾಶಕರು: ಕಗ್ಗೆರೆ ಪ್ರಕಾಶನ ಬೆಂಗಳೂರು
ಬೆಲೆ: 120

ಬರೀ ಕತ್ತಲ ಬದುಕಿನಲ್ಲಿ ಬೆಳೆದ ಜೀವಿಗೆ, ಸಣ್ಣ ಬೆಳಕು ಸಿಕ್ಕರೂ ಸಾಕು, ಆ ಬೆಳಕಿನ ಪಥದಲ್ಲಿ  ತನ್ನ ಬಾಳ ಬದುಕನ್ನು  ರೂಪಿಸಿಕೊಳ್ಳುವ ಪ್ರಯತ್ನ ಪಡುತ್ತಾನೆ. ಆ ಸಣ್ಣ ಬೆಳಕು ಆ ಕತ್ತಲಿನ ಕಡೆಗೆ ಸುಳಿಯಬೇಕು ಅಷ್ಟೇ.

ಒಂದು ಕವಿತೆ, ಕಾವ್ಯ ಕಥೆ, ಕಾದಂಬರಿ ಬರೆಯಬೇಕೆಂದರೆ ಶಿಕ್ಷಣದಲ್ಲಿ ದೊಡ್ಡ ದೊಡ್ಡ ಪದವಿಗಳನ್ನು ಓದಿರಬೇಕು ದೊಡ್ಡ ದೊಡ್ಡ ಹುದ್ದೆಯನು ಪಡೆಯಬೇಕೆಂದೇನೂ ಇಲ್ಲ. ಕನ್ನಡ ಶಬ್ದಕೋಶವನ್ನು ಅರಗಿಸಿಕೊಂಡು ಸಾಹಿತ್ಯವನ್ನ ಬರೆಯಬೇಕೆಂದೇನೂ ಇಲ್ಲಾ. ಕನ್ನಡ ಓದಲು ಬರೆಯಲು ಬಂದರೆ ಸಾಕು, ತಾನು ಕೂಡ ತನ್ನೊಳಗಿನ ಭಾವನೆಗಳನ್ನು ಹೊರಹಾಕುವ, ತನ್ನ ಒಡಲಾಳದ ನೋವುಗಳನ್ನು, ತನ್ನ ಎದೆಯಾಳದ ನೆನಪುಗಳನ್ನ,  ತನ್ನ ಸುತ್ತಲಿನ ಸಮಾಜವನ್ನ, ರಾಜಕೀಯ ವೈಪರೀತ್ಯಗಳನ್ನ, ಕಾವ್ಯ ಕವಿತೆ ಕಥೆಯಾಗಿ ಕಟ್ಟಬಹುದು. ಇಂತಹ ಕಾಲಘಟ್ಟದಲ್ಲಿ ತಾನು ಅನುಭವಿಸಿದ ನೋವುಗಳನ್ನು, ಯಾತನೆಗಳನ್ನು' ಸಮಾಜದ ತಿರಸ್ಕರಗಳನ್ನು ಅವುಗಳಿಂದ ತನ್ನೊಳಗೆ ಮೂಡಿದ ಭಾವನೆಗಳನ್ನು ಹನಿಗವನಗಳಾಗಿ ಬರೆದು ಭಾವ ರೇಖೆಗಳ ನಡುವೆ ಎಂಬ ಚೊಚ್ಚಲ ಹನಿಗವನ ಸಂಕಲನವನ್ನು ಲೋಕಾರ್ಪಣೆ ಮಾಡಿ,ಕನ್ನಡ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದವರು ಶ್ರೀ ಸಿದ್ಧಾಪುರ ಶಿವಕುಮಾರ್. 

ಸಿದ್ಧಾಪುರ ಶಿವಕುಮಾರ್ ಇವರು ಶಿಕ್ಷಣದಲ್ಲಿ  ಪದವಿಗಳನ್ನೇನು ಪಡೆದವರಲ್ಲ, ಕಾಲೇಜು ಮೆಟ್ಟಲು ಕೂಡ ಹತ್ತಿದವರಲ್ಲ , ಸ್ವಯಂ ಕಲಿಕಾ ಆಸಕ್ತಿಯಿಂದ, ಚಿತ್ರಕಲೆಯ ಅಭಿರುಚಿ ಬೆಳೆಸಿಕೊಂಡವರು. ಬಾಲ್ಯದಿಂದಲೂ ಪುಸ್ತಕದ ಸೆಳೆತಕ್ಕೆ ಒಳಗಾಗಿ, ಹಲವಾರು ಲೇಖಕರ ಕವಿಗಳ ಪುಸ್ತಕಗಳನ್ನು ಓದಿ ಅರಿಯುತ್ತಾ, ಸಾಹಿತ್ಯದ ಬಗ್ಗೆ ಜ್ಞಾನ ಬೆಳೆಸಿಕೊಂಡವರು, ಬರವಣಿಗೆಯ ತುಡಿತಕ್ಕೆ ಒಳಗಾದವರು. ತನ್ನೊಳಗೂ ಭಾವನೆಗಳಿವೆ ಅವುಗಳನ್ನ ಏಕೆ? ಸಾಲುಗಳಾಗಿ ಹೊರ ತರಬಾರದು, ಆ ಸಾಲುಗಳಿಗೆ ತನ್ನದೇ ಚಿತ್ರಕಲೆಯ ಮೂಲಕ ಚಿತ್ರಗಳನ್ನು ಬಿಡಿಸಿ, ಭಾವನೆಗಳಿಗೆ ಜೀವ ತುಂಬಿ ಏಕೆ? ಪುಸ್ತಕವನ್ನು ಹೊರ ತರಬಾರದು ಎಂದು ಯೋಚಿಸ ಅವರ ಪ್ರೋತ್ಸಾಹ ನೀಡಿದವರೇ ಕಗ್ಗರೆ ಪ್ರಕಾಶನ, ಅವರ ಅಭಿಲಾಷೆಯ ಕನಸಿನ ರೂಪವಾಗಿ ಈ ಪುಸ್ತಕ ಮೂಡಿಬಂದಿದೆ. ಈ ಪುಸ್ತಕವೇ ಭಾವ ರೇಖೆಗಳ ನಡುವೆ (ಹನಿಗವನ ಸಂಕಲನ).

ಈ ಪುಸ್ತಕದ  ಶೀರ್ಷಿಕೆಯೇ ಹೇಳುವಂತೆ, ಭಾವ ರೇಖೆಗಳ ನಡುವೆ ಸಂಕಲನದಲ್ಲಿ  ಭಾವನೆಗಳು ಉಕ್ಕಿ ಹರಿಯುತ್ತಿವೆ ಆಸೆ, ನಿರೀಕ್ಷೆ, ನಿರಾಸೆ, ಅವಮಾನ, ಭಾವೋದ್ರೇಕ ಕ್ಷಣಗಳನ್ನ ಎಲ್ಲವನ್ನೂ ಒಟ್ಟುಗೂಡಿಸಿ ಕೆಲವೇ ಸಾಲುಗಳಲ್ಲಿ  ಅಗಾಧವಾದ ಅರ್ಥವನ್ನ ತುಂಬಿದ ಜೇನುಹನಿಯನು ಸವಿಯಂತೆ ಸವಿಯಬಹುದಾದ ಈ ಕವನ ಸಂಕಲನವನ್ನು ಹೊರತಂದಿದ್ದಾರೆ.

ಕವಿ ಪರಿಚಯವನ್ನು ನಾವು ನೋಡುವುದಾದರೆ, ಸಿದ್ಧಾಪುರ ಶಿವಕುಮಾರವರು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿ ನವರು, ಬಡತನದ ಬದುಕಿನಲ್ಲಿ ಹುಟ್ಟಿ ಬೆಳೆದವರು,    ಬೋರ್ಡು ಬ್ಯಾನರ್ರು ಬರೆಯುತ್ತಾ, ಕನ್ನಡ ಶಾಲೆಯ ಗೋಡೆಗಳ ಮೇಲೆ ತನ್ನದೇ ಕುಂಚದ ಕೈಚಳಕದ ಮೂಲಕ ಚಿತ್ರಗಳನ್ನು ಬಿಡಿಸಿ ಚಿತ್ರಕಲಾವಿದನಾಗಿ ರೂಪಗೊಂಡವರು.

ಬದುಕಿನ ನೋವು, ಸಂಕಟ ಅವಮಾನ, ಹತಾಶೆಯಗಳಿಂದ ಸ್ವಾಭಿಮಾನದ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಹೋರಾಟ ಮಾಡುತ್ತಲೇ ಬಂದವರು. ಇವರು ಕಲಾವಿದನಾಗಿ ಅಷ್ಟೇ ಅಲ್ಲ, ಕವಿತೆ ಕಥೆ ಅಂಕಣಕಾರರಾಗಿ ಬರೆಯುತ್ತಿದ್ದಾರೆ. ಹಲವಾರು ಪತ್ರಿಕೆಗಳಲ್ಲಿ ಅವರು ಬರೆದ ಅಂಕಣಗಳನ್ನು ಪ್ರಕಟಿಸಿವೆ ಮತ್ತು  ಇವರು ಹಲವಾರು ಕಲಾವಿದರು ಲೇಖಕರನ್ನ ಪರಿಚಯಿಸಿದ ಸಂದರ್ಶನಗಳು ಕೂಡ ಪ್ರಕಟವಾಗಿವೆ. ಅವರೇ ತಮ್ಮ ಪುಸ್ತಕದಲ್ಲಿ ಹೇಳುವಂತೆ ನಾನು ಕಲಿತದ್ದೆಲ್ಲವೂ ನನ್ನ ಬದುಕೆಂಬ ವಿಶ್ವವಿದ್ಯಾನಿಲಯದಲ್ಲಿ ಮಾತ್ರ ಎನ್ನುತ್ತಾರೆ .

ಈ ಭಾವ ರೇಖೆಗಳ ನಡುವೆ ಹನಿಗವನ ಸಂಕಲನ ಒಂದು ವಿಶಿಷ್ಟವಾಗಿದೆ.  ಏಕೆಂದರೆ ತಮ್ಮ ಪುಸ್ತಕದ ಎಲ್ಲಾ ಕವಿತೆಗಳಿಗೂ, ತಮ್ಮ ಭಾವನೆಗಳಿಗೆ ಜೊತೆಯಾಗುವಂತೆ ತಾವೇ ಚಿತ್ರಗಳ ಬಿಡಿಸಿ, ಅವುಗಳಿಗೆ ಜೀವ ತುಂಬಿ ಓದುಗನ ಮನವನ್ನ ಆಕರ್ಷಿಸುವತ್ತ ಹೊಸ ಹೆಜ್ಜೆಯನ್ನು ಇಟ್ಟಿದ್ದಾರೆ ಸಿದ್ಧಾಪುರ ಶಿವಕುಮಾರ್.

ಭಾವ ರೇಖೆಗಳ ನಡುವೆ ಈ ಹನಿಗವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದವರು, ಕನ್ನಡನಾಡಿನ ಹೆಸರಾಂತ ಚಿತ್ರ ಸಾಹಿತಿ, ಚಲನಚಿತ್ರ ನಿರ್ದೇಶಕರೂ ಆದ ಡಾ. ವಿ ನಾಗೇಂದ್ರ ಪ್ರಸಾದ್ ರವರು. ಮುನ್ನುಡಿಕಾರರು ಹೇಳುವಂತೆ ಹನಿಗವಿತೆಗಳ ಸಾಗರಕ್ಕೆ ತಮ್ಮದೂ ಒಂದು ಔನ್ಸ್ ಎಂಬಂತೆ ಸಿದ್ಧಾಪುರ ಶಿವಕುಮಾರ್ ಅವರು ಭಾವ ರೇಖೆಗಳ ನಡುವೆ ಎಂಬ ಮುಗ್ಧ ಲಾಲಿತ್ಯವನ್ನ ಧಾರೆ ಎರೆದಿದ್ದಾರೆ.
ಪ್ರೀತಿ ಪ್ರೇಮ ದಾಂಪತ್ಯ ನೋವು ನಲಿವು ಸಮಾಜ ಮುಂತಾದ ಹಲವಾರು ಸಂಗತಿಗಳು ಈ ಕವನ ಸಂಕಲನದಲ್ಲಿದೆ. ಸರಳ ಪದಗಳ ಚಂದದ ಪ್ರಾಸದಲ್ಲಿ ಈ ಭಾವ ರೇಖೆಗಳ ನಡುವೆ ಎಂಬ ಕೃತಿಯನ್ನು ಕವಿಭಾವಕ್ಕೆ ರೇಖೆಗಳಿಂದ ಅಲಂಕರಿಸಿದ್ದಾರೆ. ತಮ್ಮೊಳಗಿನ ಕವಿಯನ್ನ ಜೀವಂತವಾಗಿರಿಸಿಕೊಂಡು ಹಲವಾರು ಮಗ್ಗುಲುಗಳಲ್ಲಿ ಅನುಭವದ ಒಳಗಿನ ಅಂತರಂಗದಿಂದ ಬಂದ ಚಂದದ ಹನಿಗಳು ಪಂದ್ಯವಾಗಿದೆ ಎಂದು ಬಹಳಷ್ಟು ವಿಶಿಷ್ಟ ರೀತಿಯಲ್ಲಿ ಮುನ್ನುಡಿಯನ್ನು ಬರೆದು ಹಾರೈಸಿದ್ದಾರೆ.

ಈ ಕವನ ಸಂಕಲನಕ್ಕೆ ಬೆನ್ನುಡಿ ಬರೆದಂತಹ, ಕವನಸಂಕಲನದ ಪ್ರಕಾಶಕರು ಆದಂತಹ, ಲೇಖಕರು ಪತ್ರಕರ್ತರಾದ ಕಗ್ಗೆರೆ ಪ್ರಕಾಶ್ ಕೆಲವರು ಹೇಳುತ್ತಾರೆ. ಶಿವಕುಮಾರ್ ಒಬ್ಬ ಕಲಾವಿದನು ಅಷ್ಟೇ ಅಲ್ಲ, ಹಲವು ಚಿತ್ರಗಳನ್ನು ಕವಿತೆ ಕಥೆಗಳನ್ನು, ಬರೆದಿದ್ದಾರೆ.  ಈ ಹವ್ಯಾಸಿ ಪತ್ರಕರ್ತನೊಳಗೆ ಸದಾ ಕವಿ ಕೂಡ ತುಡಿಯುತ್ತಲೇ ಇದ್ದ. ಇದರ ಪ್ರತಿಫಲವೇ ಈ ಭಾವ ರೇಖೆಗಳ ನಡುವೆ ಕವನ ಸಂಕಲನ. ಪರಿಸರ ಸಮಾಜದ ಶೋಷಣೆ, ದಬ್ಬಾಳಿಕೆ ವ್ಯಕ್ತಿಗತ ಸ್ವಾರ್ಥದ ಕುರಿತು ವ್ಯಂಗ್ಯ ವಿಡಂಬನಾತ್ಮಕವಾಗಿ ಶಿವಕುಮಾರ್ ಬರೆದಿರುವ ಹನಿಗವಿತೆಗಳು ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಮನೋಜ್ಞವಾಗಿ ಬೆನ್ನುಡಿಯನ್ನ ಬರೆದು ಶುಭ ಹಾರೈಸಿದ್ದಾರೆ. 

ಮುನ್ನುಡಿ ಮತ್ತು ಬೆನ್ನುಡಿಕಾರರ ಬರಹವನ್ನು ಓದಿ ಅರ್ಥೈಸಿಕೊಂಡರೆ ಸಾಕು, ಈ ಪುಸ್ತಕ ಹೇಗೆ? ಭಿನ್ನ ವಿಭಿನ್ನವಾಗಿ ಓದುಗನ ಮನಸ್ಸನ್ನು ಸೆಳೆಯುತ್ತದೆ ಮತ್ತು ಕವಿ ಬರೆದಂತಹ ಸಾಲುಗಳು ಓದುಗನ ಮನದೊಳಗೆ ಯಾವ ಭಾವಗಳನ್ನ ಬಿತ್ತಬಹುದೆಂದು ನಾವು ಮನಗಾಣಬಹುದು 

ಈ ಭಾವ ರೇಖೆಗಳ ನಡುವೆ ಹನಿಗವನ ಸಂಕಲನದ ಈ ಕೆಲವು ಕವಿತೆಗಳನ್ನು ಪರಿಚಯಕ್ಕಾಗಿ ಆರಿಸಿಕೊಂಡಿದ್ದೇನೆ.
ಈ ಕವನಸಂಕಲನದಲ್ಲಿ  ಹನಿಗವನಗಳ ಜೊತೆ  ಬಹಳಷ್ಟು   ಚುಟುಕು ಕವಿತೆಗಳು ಕೂಡ ನಮ್ಮ ಗಮನ ಸೆಳೆಯುತ್ತವೆ.
 
ಹಾಯಾಗಿ ಹಾರಾಡುವ
ಹಕ್ಕಿಯ ಇಚ್ಛೆನೋಡು
ಅದಕ್ಕಿಲ್ಲ ಯಾರ ಅಳುಕು 
ಹೆಕ್ಕಿ ತಿನ್ನಲು ಅಕ್ಕಿ ಸಾಕು
ಇದೇ ಹಕ್ಕಿಯ ಸುಖದ ಬದುಕು

ಎಷ್ಟೊಂದು ಅರ್ಥಪೂರ್ಣ ಸಾಲುಗಳು, ಹಕ್ಕಿಯು ಯಾರ ಹಂಗಿಲ್ಲದೆ, ಸ್ವೆಚ್ಚವಾಗಿ, ಒಂಟಿಯಾಗಿ ಎಲ್ಲೆಂದರಲ್ಲಿ ತನ್ನ ಮನಸ್ಸಿಗೆ ಬಂದ ಹಾಗೆ ಹಾರಾಡಬಲ್ಲದು. ಆದರೆ ಮನುಜನಿಗೆ ಹಕ್ಕಿಯಂತೆ ಹಾರಾಡಲು ಸಾದ್ಯವೇ? ಇಲ್ಲ.  ಅವನಿಗೆ ಸಮಾಜದ ಹಲವಾರು ನಿರ್ಬಂಧಗಳಿವೆ, ಅನುಕರಣೆಗಳಿವೆ. ತನಗೆ ಮನಬಂದಂತೆ ವಿಹರಿಸಲು ಸಾಧ್ಯವಿಲ್ಲ. ಮಾನವನಿಗೆ ಹೋಲಿಸಿಕೊಂಡರೆ ಹಕ್ಕಿಯ ಬದುಕು ಎಷ್ಟೊಂದು ಸೊಗಸಾಗಿದೆ. ಹಕ್ಕಿಗೂ ಕೂಡ ಮಾನವನಿಗಿರುವಂತೆ ಹಸಿವು, ನಿದ್ರೆ,  ನೀರಡಿಕೆಗಳಿವೆ ಮತ್ತು ಅದಕ್ಕೂ ಕೂಡ ಬದುಕಿದೆ. ಅದು ಹಕ್ಕಿ ತಿಂದು ಜೀವಿಸಲು ಒಂದು ಅಕ್ಕಿ ಕಾಳು ಸಾಕು. ಆ ಹಕ್ಕಿ ಕಾಳಿನಿಂದ ಅದು ಸಂತೃಪ್ತ ಜೀವನ ನಡೆಸುತ್ತದೆ. ಆದರೆ ಮಾನವ ಹಾಗೆ ಬದುಕಲು ಸಾಧ್ಯವೇ? ಮಾನವನ ದೇಹ ವಿವಿಧ ರೀತಿಯ ಸಮಸ್ಯೆಗಳ ಆಗರ, ಅವನ ಆಸೆಗಳಿಗೆ ಮಿತಿಯೇ ಇಲ್ಲ. ಸಣ್ಣ ತುತ್ತು ಆಹಾರ ಸೇವಿಸಿ ಅವನು ಬದುಕಲಾರ, ದೇಹ ತರತರದ ರುಚಿಗಳನ್ನು ಬಯಸುತ್ತದೆ. ಅವನು ಒಂದು ಬಾರಿಯಾದರೂ ಕೂಡ ನಾನು ಸುಖಿ ಅಂತ ಅವನಿಗೆ ಅನಿಸಲೇ  ಇಲ್ಲ. ಅವನ ಮನಸ್ಸು ಸಂತೃಪ್ತವಾದ ಜೀವನ ನಡೆಸಲೇ ಇಲ್ಲ ಎಂದು ಕವಿ ಈ ಸಮಾಜದ ಮನುಜನ ಮನಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಕ್ಕಿಯ ಬದುಕಿನ ಹಾಗೇ ಬದುಕಲು ಮನುಜ ಸಾಧ್ಯವಿಲ್ಲ ಎಂದು ಬಹಳ ಮನೋಜ್ಞವಾಗಿ ಕೆಲವೇ ಸಾಲುಗಳಲ್ಲಿ ಬರೆದು  ವಿಶಿಷ್ಟ ಅರ್ಥವನ್ನು ಕಲ್ಪಿಸಿದ್ದಾರೆ ಈ ಕವಿತೆಯಲ್ಲಿ.

ಮನುಷ್ಯನ ಅಜ್ಞಾನ ಅಹಂಕಾರ
ತೊಲಗಲು 
ಮನಸ್ಸು ಮಾಗಲು ಬಾಗಲು
ಬಡತನವೇ ಮೇಲು

 ಈ ಸಾಲುಗಳು ಮನುಜನಿಗೆ ಸ್ಫೂರ್ತಿದಾಯಕ ನೀಡುವಂತಹ, ತನ್ನನ್ನು ತಾನು ಆತ್ಮ ವಿಮರ್ಶೆಗೆ ಒಳಪಡಿಸಿ ಕೊಳ್ಳುವಂತಹ ಸಾಲುಗಳು. ಜನರಲ್ಲಿರುವ ಅಜ್ಞಾನ ತೊಲಗಿಸಬೇಕು, ಅವನಲ್ಲಿರುವ ಅಹಂಕಾರವನ್ನು ಕೂಡ ತೊಲಗಿಸಬೇಕಾಗುತ್ತದೆ. ಅವುಗಳನ್ನು ತೊಲಗಿಸಲು ಅವನು ಬಡತನದ ರುಚಿಯನ್ನು ಸವಿಯಲೇಬೇಕು. ಶ್ರೀಮಂತನಾಗಿ ಮೆರೆಯುವ ವ್ಯಕ್ತಿಗೆ ಅಹಂಕಾರ, ಅವನ ಮನಸ್ಸಿನಲ್ಲಿ ಆಹಂ ತುಂಬಿರುತ್ತದೆ. ತನಗೆ ಯಾವುದು ಕೂಡ ಅಸಾಧ್ಯವಲ್ಲ ಹಣವೊಂದಿದ್ದರೆ ಅಂತಸ್ತಿದ್ದರೆ ಎನಾದರೂ ಸಾಧಿಸಬಹುದು. ಸಮಾಜದಲ್ಲಿ ಮೆರೆಯಬಹುದು ಅಂತ ಭಾವಿಸಿರುತ್ತಾನೆ. ಆದರೆ ಆ ಶ್ರೀಮಂತಿಕೆಯು ಶಾಶ್ವತವಲ್ಲ ಎಂಬುದನ್ನು ಮರೆಯಬಾರದು. ಮನಸ್ಸು ಮಾಗಲು ಅಂದರೆ ಹಲವಾರು ವಿಷಯಗಳನ್ನು  ಅರಿತುಕೊಳ್ಳಲು ಅವನು ನೋವುಗಳನ್ನು ಅನುಭವಿಸಬೇಕು, ಸಮಾಜವು ಅವನನ್ನು  ತಿರಸ್ಕಾರವಾಗಿ ಕಾಣಬೇಕು, ಆಗ ಮಾತ್ರ ತನ್ನ ಮನಸ್ಸನ್ನು ಆಳವಾಗಿ ಯೋಚಿಸಲು, ಪ್ರಾಪಂಚಿಕವಾಗಿ ಚಿಂತಿಸುವ  ತನ್ನ ಮನಸ್ಸು ಮಾಗಿಸಿಕೊಳ್ಳಲು ಹಣ್ಣಾಗಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಮತ್ತು ಗುರು ಹಿರಿಯರು ಸಮಾಜದ ಮುಂದೆ ಹೇಗೆ ನಡೆಯಬೇಕು ಎಂಬುದನ್ನು ಬಡತನ ಮನುಷ್ಯನಿಗೆ ಕಲಿಸುತ್ತದೆ.  ಈ ಬಡತನವೇ ಮೇಲು ಎಂದು ಕವಿಗಳು ಕೆಲವೇ ಸಾಲುಗಳಲ್ಲಿ ಬಹಳಷ್ಟು ಅರ್ಥಬರುವಂತೆ ಕವಿಗಳ ಅಗಾಧವಾದ ಅರ್ಥವನ್ನು ತುಂಬಿ ಕವಿತೆಯನ್ನ ಕಟ್ಟಿರುವುದನ್ನು ನಾವು ಈ ಕವನ ಸಂಕಲನದಲ್ಲಿ ನೋಡಬಹುದಾಗಿದೆ.

ನನ್ನ ಗಮನ ಸೆಳೆದ ಮತ್ತೊಂದು ಚುಟುಕಿನ ಸಾಲುಗಳೆಂದರೆ ಪ್ರೀತಿ ದಟ್ಟವಾದ ಕತ್ತಲು
ದಕ್ಕದವರಿಗೆ
ಪ್ರೀತಿ ದಿವ್ಯ ಬೆಳಕು
ದಕ್ಕಿದವರಿಗೆ
ಎಂತಹ ಅದ್ಭುತ ಸಾಲುಗಳು ಈ ಕೆಲವೇ ಪದಗಳು ಶತಮಾನಗಳಿಂದ ಮನುಷ್ಯನಲ್ಲಿ ಬದುಕಿನಲ್ಲಿ ಒಂದು ಅಗಾಧ ಶಕ್ತಿಯಾಗಿ, ಶಾಶ್ವತವಾಗಿ ನೆಲೆ ನಿಂತು ಅದೊಂದು ದಿವ್ಯ ಶಕ್ತಿಯಾಗಿ ಹಲವಾರು ಜೀವಗಳಲ್ಲಿ ಪ್ರೀತಿಯು  ಹಾಸುಹೊಕ್ಕಿದೆಯೆಂದು ಕವಿಗಳು ಹೇಳುವುದು ನಿಜ.
ಪ್ರೀತಿ ಎಂಬುದು ಬಹಳ ಜನರನ್ನು  ಕಗ್ಗತ್ತಲಿನ ಕಡೆಗೆ ತಳ್ಳಿ ಅವರ ಬದುಕನ್ನು ನರಕವಾಗಿಸಿ ಅವರ ಬಾಳನ್ನೆ ಕತ್ತಲಾಗಿಸಿದೆ.ಎಂಬ ಮಾತು ಸುಳ್ಳಲ್ಲ.
ತನ್ನ ಹೃದಯ ಬಯಸಿದರೂ ಸಿಗದ ಪ್ರೀತಿ, ತಾನು ಪ್ರೀತಿಸಿದ  ಜೀವ ಮೋಸ ಮಾಡಿದಾಗ ಬದುಕು ಕತ್ತಲಾಗಿಸಿಕೊಂಡು ತನ್ನ ಬದುಕನ್ನೆ, ಜೀವದ ಉಸಿರನ್ನು ಕಳೆದುಕೊಂಡ ನಿದರ್ಶನಗಳು ಈ ಸಮಾಜದೊಳಗಿನ ಕಾಣಬಹುದು.
ಆದರೆ ಪ್ರೀತಿಯೊಂದು ದಿವ್ಯವಾದ ಬೆಳಕು, ನೊಂದು ಹೋಗಿದ್ದ ಹೃದಯಗಳನ್ನ  ಈ ಪ್ರೀತಿ ಉಳಿಸಿದೆ ಬೆಳೆಸಿದೆ. ಬಾಡಿ ಹೋಗುತ್ತಿದ್ದ ಬದುಕನ್ನ ಮತ್ತೆ ನೀರೆರೆದು ಉಸಿರು ನೀಡಿ ಮರುಜೀವ ನೀಡಿದ್ದೆ  ಈ ಪ್ರೀತಿ ಜಗದೊಳಗೆ. ಈ ಪ್ರೀತಿಯು ಶಾಶ್ವತವಾಗಿ ಉಸಿರಿನ ಜೊತೆಗೆ ನಿಂತು, ಜೀವಕ್ಕೆ ಜೀವ ನೀಡಿ ದಿವ್ಯಶಕ್ತಿಯಾಗಿ ರೂಪಗೊಂಡು, ಉತ್ಸಾಹ ನೀಡಿದಂತಹ ಪ್ರೀತಿಯನ್ನು  ಕೂಡ ಈ ಜಗದೊಳಗೆ ನಾವು ಕಾಣಬಹುದಾಗಿದೆ. ಆದರೆ ಈ ಪ್ರೀತಿ ಎಲ್ಲರಿಗೂ ಕೂಡ ದಕ್ಕುವುದಿಲ್ಲ, ದಕ್ಕಿದವರಿಗೆ ಮಾತ್ರ ಈ ಪ್ರೀತಿ ದಿವ್ಯ ಬೆಳಕು ಸಂಜೀವಿನಿಯಂತೆ  ಬದುಕನ್ನು ರೂಪಿಸುತ್ತದೆ ಎಂದು  ಕವಿಗಳು ಬಹಳಷ್ಟು ಸೊಗಸಾಗಿ ಬರೆದಿದ್ದಾರೆ. 

ಕವಿತೆ ಬರೆಯಬೇಕೆಂದು ಕುಳಿತೆ
ನನಗಾಯಿತು ವಸ್ತು ವಿಷಯದ ಕೊರತೆ
ಓ ಕವಿತೆ ಎಲ್ಲಿ ನೀನು ಅವಿತು ಕುಳಿತೆ
ಈ ಮನದ ಮಲ್ಲಿಗೆಯಾಗಿ 
ಅರಳ ಬಾರದೇ ಹೂವಿನಂತೆ .....

ಕವಿ ಹೃದಯ ಹೊಂದಿರುವ ಮನಸ್ಸಿಗೆ ಅಥವಾ ಕವಿತೆ ಬರೆಯಲು ಇಚ್ಛಿಸುವ ಒಬ್ಬ ವ್ಯಕ್ತಿಗೆ ಯಾವಾಗಲೂ ಕವಿತೆಯನ್ನು ಬರೆಯಲು ಸಾಧ್ಯವಿಲ್ಲ. ಬಹಳಷ್ಟು ಹಿರಿಯರು ಹೇಳಿರುವ ಹಾಗೆ ಕವಿತೆ ಕಟ್ಟುವುದಲ್ಲ ಕವಿತೆ ಹುಟ್ಟುವುದು.

ಇಲ್ಲಿ ಕವಿ ಹೇಳುತ್ತಾರೆ ನಾನು ಒಂದು ಕವಿತೆಯನ್ನ ಬರೆಯ ಬೇಕೆಂದು ಕುಳಿತೆ, ನನ್ನ ತಲೆಯೊಳಗೆ ಯಾವುದೇ ವಿಷಯ ವಸ್ತುವು ಇರಲಿಲ್ಲ. ಆ ಕ್ಷಣದಲ್ಲಿ  ಕವಿ ಹೃದಯಕೆ ವಿಷಯದ ಕೊರತೆ  ಕಾಡಿತ್ತು. ಈ ನನ್ನ ಮನದಲ್ಲಿ ಕವಿತೆಯಾಗಿ ಮಲ್ಲಿಗೆಯಂತೆ ನೀನು ಅರಳ ಬಾರದೆ, ಎಂದು ಪ್ರಶ್ನೆ ಮಾಡಿಕೊಳ್ಳುತ್ತಾನೆ. ಕವಿತೆ ಹೂವು ಅರಳುವ ರೀತಿಯಾಗಿ ನನ್ನಿಂದ ಒಂದು ಕವಿತೆಯನ್ನ ಬರೆಸಿಕೊಳ್ಳಬಾರದೇ ಅನ್ನುವ ದಾಟಿಯಲ್ಲಿ ಕವಿಯು ಕವಿತೆಯನ್ನು ಬರೆದಿದ್ದಾರೆ 

ಎತ್ತರದಲ್ಲಿದ್ದರೆ ಬೀಗುವುದೇಕೆ 
ತಳಮಟ್ಟದಿಂದ ತಾನೆ ಏರಿದ್ದು
ತಳಕ್ಕೆ ತಲೆಬಾಗು
ಏರುವೆ ಇನ್ನಷ್ಟು ಎತ್ತರಕ್ಕೆ ....

ಮನುಷ್ಯನ ಬದುಕಿಗೆ ಇವು ಸೂಕ್ತ ಪದಗಳು. ನೀನು ಎತ್ತರದ ಸ್ಥಾನದಲ್ಲಿರುವೆ ಎಂದು ಯಾಕೇ? ಬೀಗುವೆ. ನೀನು  ಅಹಂಕಾರ ಪಡುವೆ, ನೀನು ಮೇಲ್ಮಟ್ಟಕ್ಕೆ ಏರಲು ಕಾರಣ ಈ ತಳಮಟ್ಟದ ತಾನೆ? ನೀನು ಬೆಳೆದಿದ್ದೆ ಈ ತಳಮಟ್ಟದಿಂದ, ತಳಮಟ್ಟವನ್ನು ಮರೆಯಬೇಡ. ನಿನ್ನನ್ನು  ಬೆಳಸಿದ ತಳಮಟ್ಟವನ್ನು ಒಮ್ಮೆ  ಹಿಂದಿರುಗಿ ನೋಡು. ತಳಮಟ್ಟದ ಎದುರು ನೀನು ಸದಾ ತಲೆ ಬಾಗಿ ನಿಲ್ಲು.  ಈ ರೀತಿಯಾಗಿ ನೀನು ಹಿಂದಿನ ಇತಿಹಾಸವನ್ನು ಕೆದಕುತ್ತಾ ಹೋದರೆ,  ನೀನು ಇನ್ನಷ್ಟು ಎತ್ತರಕ್ಕೆ ಏರುವೆಯೆಂದು ಬಹಳಷ್ಟು ಮನೋಜ್ಞವಾಗಿ ಈ ಸಾಲುಗಳನ್ನ ಕವಿಯು ಕಟ್ಟಿದ್ದಾರೆ.

ಗೆಳೆಯ
ನಿನ್ನ ಸ್ನೇಹದ ಔಷಧಿಗೆ
ಅದೆಂತಹ ಅದ್ಭುತ ಗುಣವಿದೆ
ನನ್ನ ದುಃಖವಲ್ಲಾ ದಮನಗೊಂಡವು 
ನನ್ನ ಮುಂದಿನ ಜೀವನಕ್ಕೆ 
ಬೇಕಾದೀತು ಹಾಗೆಯೇ ಎತ್ತಿಡು....

ಈ ಜಗದೊಳಗೆ ವಿಶಿಷ್ಟವಾದ ಭಾವನೆಗಳ ಲೋಕವೆಂದರೆ ಅದು ಗೆಳೆತನ ಮಾತ್ರ.  ಪ್ರೀತಿಯಲ್ಲಿ ಇರದ ಶಕ್ತಿ ಗೆಳೆತನಕ್ಕೆ ಇದೆ. ಪ್ರೀತಿಯೊಳಗೆ ಬಯಕೆಗಳ ದಾಹವಿರಬಹುದು, ಆರಾಧನೆ ಇರಬಹುದು, ಆಲಾಪನೆ ಇರಬಹುದು, ಆದರೆ ಸ್ನೇಹ  ಹಾಗಲ್ಲ, ಹೆಗಲಿಗೆ ಹೆಗಲು ಕೊಡುವ, ಜೀವಕ್ಕೆ ಜೀವ ಕೊಡುವ ಪವಿತ್ರವಾದ ಸಂಬಂಧ, ಸೋತಾಗ ಮತ್ತೊಮ್ಮೆ ಪ್ರಯತ್ನ ಪಡು ಸೋಲನ್ನು ಪ್ರೀತಿಸು ನೀನು, ಮತ್ತೊಮ್ಮೆ  ಗೆಲ್ಲುವೆ  ಎಂದು ಹುರಿದುಂಬಿಸುತ್ತದೆ. ಅಂತಹ ಅದ್ಭುತವಾದ ಶಕ್ತಿ ಈ ಗೆಳೆತನ, ಸ್ನೇಹವೆಂಬ ಔಷಧಿಗೆ ಅದೆಂಥ ಅದ್ಭುತ ಗುಣವಿದೆ ಗೆಳೆಯ' ನೀನು ಜೊತೆಯಾದ ಮೇಲೆ ನನ್ನ ಜೀವನದ ದುಃಖದ ಕ್ಷಣಗಳು ಮಾಯವಾದವು  ದಮನಗೊಂಡವು,  ನಮ್ಮ ಮುಂದಿನ ಜೀವನಕ್ಕಾಗಿ ಈ ಗೆಳೆತನವೆಂಬ ಔಷಧಿ ಅವಶ್ಯಕತೆಯಿದೆ. ಸ್ವಲ್ಪ ಎತ್ತಿಡು ಎಂದು ಕವಿಯು ಗೆಳೆತನದ ಬಗ್ಗೆ ಬಹಳಷ್ಟು ಸೊಗಸಾಗಿ ವರ್ಣಿಸಿದ್ದಾರೆ.

ಹೀಗೆ ಈ ಭಾವ ರೇಖೆಗಳ ನಡುವೆ ಹನಿಗವನದ ಸಂಕಲನದ ಬಗ್ಗೆ ಬರೆಯುತ್ತಲೇ ಹೋದರೆ ಪುಟಗಟ್ಟಲೆ ಬರೆಯಬಹುದು ಈ ಪುಸ್ತಕಕ್ಕೆ ಅಂತಹ ಶಕ್ತಿ ಇದೆ. ಸಾಲುಗಳಲ್ಲಿ  ಇರುವ ಭಾವನೆಗಳು ನಮ್ಮನ್ನು  ಮತ್ತೊಂದು ಕವಿತಾ ಲೋಕಕ್ಕೆ ಸೆಳೆದೊಯ್ಯುವುದಂತು ನಿಜ.

ಅತಿಯಾದರೆ ಅಮೃತವು ವಿಷವಿದ್ದಂತೆ ಎಂಬ ನಾಲ್ನುಡಿಯಂತೆ ಈ ಕವನ ಸಂಕಲನದ ಬಗ್ಗೆ ಅತಿ ಹೆಚ್ಚು ಬರೆದರೆ ಪುಸ್ತಕದ ಒಳನೋಟ ಬಯಲಾಗಬಹುದು ಅದ್ದರಿಂದ ಹೆಚ್ಚಾಗಿ ಬರೆಯದೆ, ನಾನು ಓದುಗ ದೊರೆಗಳ ಅಭಿಪ್ರಾಯಕ್ಕೆ ಬಿಡುತ್ತಿದ್ದೇನೆ. ಈ ಪುಸ್ತಕವನ್ನು ಓದಿದಾಗ ಮಾತ್ರ ಈ ಕವಿಯೊಳಗಿನ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಓದುಗರು ಒಮ್ಮೆಯಾದರೂ ಕೂಡ ಈ ಕಲಾಚಿತ್ರಗಳಿಂದ ರೂಪಗೊಂಡಿರುವಂತಹ ಕವಿಯ ಎದೆಯೊಳಗಿನ ಭಾವನೆಗಳನ್ನ ಒಮ್ಮೆ ಓದುತ್ತೀರಿ ಎಂದು ಭಾವಿಸುವೆ.

ಚೊಚ್ಚಲ ಹನಿಗವನ ಸಂಕಲನ ಹೊರತಂದು ತಂದಿರುವ ಸಿದ್ಧಾಪುರ ಶಿವಕುಮಾರವರು ಮುಂದೆ ಕವನಸಂಕಲನ, ಕಥೆ ಕಾದಂಬರಿಗಳನ್ನು ಅಂಕಣಗಳನ್ನು ಬರೆದು  ಲೋಕಾರ್ಪಣೆ ಮಾಡಿ, ಸಾಹಿತ್ಯಲೋಕದಲ್ಲಿ ತನ್ನನ್ನ ತಾನು ಗುರುತಿಸಿಕೊಳ್ಳಲಿ, ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಲಭಿಸಿದೆ ಕನ್ನಡ ಸಾಹಿತ್ಯಲೋಕದಲ್ಲಿ ಅವರಿಗೆ ಕೀರ್ತಿ ದೊರೆಯಲಿ ಎಂದು ಹಾರೈಸುತ್ತೇನೆ.

-ನಾರಾಯಣಸ್ವಾಮಿ ಮಾಸ್ತಿ

ಶಿವಕುಮಾರ್. ಎಸ್ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..

MORE FEATURES

ಜೀವ, ಜೀವನ, ಮರುಸೃಷ್ಟಿ ನಡುವಣ ಹೋರಾಟವೇ ಜಲಪಾತ...

21-11-2024 ಬೆಂಗಳೂರು

"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...

ಅಂತಃಕರಣ ಕರೆವಾಗ ಎಂಥ ಕಾರಣವಿದ್ದರೂ ಕುಂತ ಜಾಗದಿಂದಲೇ ಧಾವಿಸು

21-11-2024 ಬೆಂಗಳೂರು

‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...

ನನ್ನ ದೃಷ್ಟಿಯಲ್ಲಿ ಬದುಕೆಂದರೆ ನ್ಯಾಯಾಲಯದ ಕಟಕಟೆಯಲ್ಲ..

21-11-2024 ಬೆಂಗಳೂರು

"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...