ಆಲಿಬಾಬಾರವರ ರೈಲು ಹಳಿಗಳ ಮೇಲೆ ಸಂಕಲನದಲ್ಲಿನ ಕವನಗಳಲ್ಲಿ ಬದುಕಿನ ತಳಮಳಗಳಿವೆ. ಸಾಮಾಜಿಕ ಸಂಕಟಗಳಿವೆ, ನೊಂದ ಮನಸುಗಳ ದುಗುಡ ದುಮ್ಮಾನಗಳು ವೈಯಕ್ತಿಕ ನೋವುಗಳಂತೆ ಭಾವಿಸುವ ರೂಪವಿದೆ. ಅಂತರಂಗದ ಭಾವವನ್ನು ಬಹಿರಂಗಕ್ಕೆ, ಬಹಿರಂಗದ ಕಾಣೆಯನ್ನು ಅಂತರಂಗಕ್ಕೊಗ್ಗಿಸಿ ಮಥಿಸುವ ಸಂವೇದನೆಯಲ್ಲಿ ಕವಿತೆಗಳು ಸಹಜವಾಗಿ ಹೊರಹೊಮ್ಮಿವೆ ಎನ್ನುತ್ತಾರೆ ಸಾಹಿತಿ ಅಬ್ದುಲ್ ಹೈ ತೋರಣಗಲ್ಲು. ಅವರು ಅಲಿಬಾಬಾ ರವುಡಕುಂದಾ ಅವರ ರೈಲು ಹಳಿಗಳ ಮೇಲೆ ಕವನಸಂಕಲನಕ್ಕೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಾವ್ಯಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಆದಿಕವಿ ಪಂಪನಿಂದ ಕವಿಗಳವರೆಗೂ ಹರಿಯುತ್ತಲೇಯಿದೆ. ಈ ಹರಿವಿನ ಓಘದಲ್ಲಿ ಅದೆಷ್ಟೋ ಜನ ಬರುತ್ತಾರೆ. ಬಂದಷ್ಟೇ ವೇಗವಾಗಿ ಹಿಂದಿರುಗುತ್ತಾರೆ. ಕೆಲವರು ಇಲ್ಲಿ ತಮ್ಮ ಛಾಪು ಮೂಡಿಸುತ್ತಾರೆ. ಅಂಥಹ ಕವಿಗಳಲ್ಲಿ ತಮ್ಮ ಸಾತ್ವಿಕ ಕವನಗಳ ಮೂಲಕ ಕನ್ನಡ ಕಾವ್ಯ ಲೋಕದಲ್ಲಿ ನೆಲೆನಿಂತವರಲ್ಲಿ ಸಿಂಧನೂರು ತಾಲೂಕಿನ ರವುಡಕುಂದಾ ಗ್ರಾಮದ ಕವಿ ಅಲಿಬಾಬಾರವರದು ಭಿನ್ನ ಸ್ಥಾನ.
ಆಧುನಿಕ ಕಾವ್ಯ ಪ್ರಕಾರ ಅನೇಕ ಸ್ಥಿತ್ಯಂತರಗಳನ್ನ ಕಂಡು, ಅದು ಆಕೃತಿ ಮತ್ತು ಅಭಿವ್ಯಕ್ತಿಯ ಕಾರಣಕ್ಕಾಗಿ ಭರಪೂರ ಭಾವದ ಒಳ ರಭಸದಿಂದ ನೈತಿಕತೆಯ ಸ್ವರೂಪ ಪಡೆದು ಮೆರಗುತ್ತಿರುವುದು ಕಾಣುತ್ತಿದ್ದೇವೆ. ಕಾವ್ಯ ಕಥೆಯಂತಲ್ಲ. ಕಥೆ ವಿಸ್ತೀರ್ಣತೆಯನ್ನ ಬಯಸಿದರೆ, ಕಾವ್ಯ ಸಂಕೀರ್ಣತೆಯನ್ನ ಬೇಡುತ್ತದೆ. ಕಥೆ ಕಡಲಾದರೆ ಕವಿತೆ ತೊರೆ. ಸಣ್ಣ ಸಣ್ಣ ಹನಿಗಳು ಹಳ್ಳವಾದಂತೆ ಪದಗಳಿಗೆ ಪದ ಸೇರಿ ಕಾವ್ಯವಾಗುತ್ತೆ. ಹೀಗೆ ಕಟ್ಟಿದ ಕಾವ್ಯ ಪ್ರತಿಮೆ, ರೂಪಕ ಅಲಂಕಾರಗಳ ಚಾದರ ಹೊದ್ದು ಕಂಗೊಳಿಸುವಂತಿರಬೇಕು. ಆ ಕಾವ್ಯ ಬಹುಬೇಗ ಓದುಗನೆದೆ ಅಪ್ಪಿಕೊಳ್ಳಬೇಕು. ಅಷ್ಟೇ ಅಲ್ಲ ಸಾಮಾಜಿಕ ಹೊಣೆಗಾರಿಕೆಯನ್ನ ಹೊರಬೇಕು. ಇದು ಕಾವ್ಯಕ್ಕಿರಬೇಕಾದ ಮಾನದಂಡ. ಕಾವ್ಯವೆಂದರೇನು ಈ ಜಿಜ್ಞಾಸೆಗೆ ಶತಮಾನಗಳ ಸಾಕ್ಷಿಯಿದೆ. ಇದನ್ನ ಕೆಲವರು ಜನರ ಧ್ವನಿಯೆಂದರು, ಸಮಾಜದ ಪ್ರತಿಧ್ವನಿ ಎಂದವರು ಅನೇಕರು, ವ್ಯವಸ್ಥೆಯ ಕನ್ನಡಿಯೆಂದು ಕರೆದವರು ಮತ್ತೊಬ್ಬರು. ತನ್ನದಲ್ಲದ ವೇಷತೊಟ್ಟ ಚರಿತ್ರೆಯ ಬಗೆಯೆಂದು ಬಣ್ಣಿಸಿದವರಿಗೆ ಕಡಿಮೆಯಿಲ್ಲ. ನಾನು ಕವಿತೆಯನ್ನ ಹೀಗೆಂದು ಭಾವಿಸುವೆ. ಮನುಜರಲ್ಲಿ ಅಂತರ್ಗತಗೊಂಡ ಭಾವಗಳ ಒಳ ಮತ್ತು ಹೊರ ಮಗ್ಗಲುಗಳಿಗೆ ಅಕ್ಷರಗಳ ಮುಖೇನ ಜೀವ ತುಂಬುವ ಕ್ರಿಯೆಯೇ ಕಾವ್ಯ. ಯಾವುದೇ ಕಾವ್ಯ ಅಂತರಂಗವನ್ನ ತೆರೆದು ಭಾವಸಂಪನ್ನಗೊಳಿಸುತ್ತಾ ಮನುಷ್ಯ ಸಂಬಂಧಗಳ ಜೊತೆ ಸಖ್ಯ ಬೆಳೆಸುತ್ತಾ ಜನ ಸಂಸ್ಕೃತಿಯೊಳಗಿನ ಬಹುಮುಖ್ಯ ಅಂಶವಾದ ಮಾನವೀಯತೆಯೊಂದಿಗೆ ಮಾತಾಡಬೇಕಿದೆ. ಇದಕ್ಕಾಗಿ ಕವಿ ಸದಾ ಶೋಧನೆಯಲ್ಲಿರ ಬೇಕು. ಜಗತ್ತಿನ ಆಂತರಿಕ ಚಹರೆಯಲ್ಲಿ ಅಡಗಿದ್ದೆಲ್ಲವನ್ನ ಸೆರೆಹಿಡಿಯಬೇಕು. ಹಾಗೆ ಹಿಡಿದ ಎಲ್ಲ ಭಾವಕ್ಕೂ ಮನುಷ್ಯತ್ವದ ಸ್ಪರ್ಶ ಕೊಡಬೇಕು. ಈ ಪ್ರಯತ್ನ ಕನ್ನಡ ಕವಿಗಳು ಮಾಡುತ್ತಲೇ ಇರುವುದು ಕಾಣುತ್ತೇವೆ. ಈ ಸಾಲಿನ ಇನ್ನೊಂದು ಹೆಸರೇ ಅಲಿಬಾಬಾ ರವುಡಕುಂದಾ.
ಆಲಿಬಾಬಾರವರ ರೈಲು ಹಳಿಗಳ ಮೇಲೆ ಸಂಕಲನದಲ್ಲಿನ ಕವನಗಳಲ್ಲಿ ಬದುಕಿನ ತಳಮಳಗಳಿವೆ. ಸಾಮಾಜಿಕ ಸಂಕಟಗಳಿವೆ, ನೊಂದ ಮನಸುಗಳ ದುಗುಡ ದುಮ್ಮಾನಗಳು ವೈಯಕ್ತಿಕ ನೋವುಗಳಂತೆ ಭಾವಿಸುವ ರೂಪವಿದೆ. ಅಂತರಂಗದ ಭಾವವನ್ನು ಬಹಿರಂಗಕ್ಕೆ, ಬಹಿರಂಗದ ಕಾಣೆಯನ್ನು ಅಂತರಂಗಕ್ಕೊಗ್ಗಿಸಿ ಮಥಿಸುವ ಸಂವೇದನೆಯಲ್ಲಿ ಕವಿತೆಗಳು ಸಹಜವಾಗಿ ಹೊರಹೊಮ್ಮಿವೆ. ಇಲ್ಲಿನ ಬಹುತೇಕ ಕವಿತೆಗಳು ಸಾಮಾಜಿಕ ಹದ ಕೊಡುವ ಕರಾಮತ್ತಿಗೆ ಪ್ರಯತ್ನಿಸಿದ್ದಾರೆ. ಇದು ಒಬ್ಬ ಸೃಜನಶೀಲ ಕವಿಗೆ ಇರಬೇಕಾದ ಅಗತ್ಯವಾಗಿದೆ.
ಇವರ ಕಾವ್ಯದಲ್ಲಿ ಬರುವ ಪ್ರತಿಮೆ, ರೂಪಕಗಳು ದಿನನಿತ್ಯ ನಮ್ಮೆದುರೇ ಸುಳಿದಾಡುವ ವಸ್ತುಗಳಾಗಿವೆ. ಜನ ಭಾಷೆಯ ಮೂಲಕ ಸಂವಾದಿಸುತ್ತಲೇ ಸತತ ಕಾವ್ಯಾಭಿವ್ಯಕ್ತಿಯ ಪ್ರಯತ್ನದಿಂದ ಗಟ್ಟಿಗೊಳ್ಳುತ್ತಾ ಹಾಗೂ ಏಕತಾನತೆಯಿಂದ ದೂರ ಸರಿದಿರುವುದು ಇಲ್ಲಿನ ಕವಿತೆಗಳ ಹೆಗ್ಗಳಿಕೆಯಾಗಿದೆ.
ಉರುಳುವ ಕಾಲ ಚಕ್ರದಲಿ
ಎಲ್ಲ ಜೀವಿಗಳು ಸಾಯುವವು
ಕಣ ಕಣದಿಂದ ಸೃಷ್ಟಿಯಾದ ವಿಶ್ವ
ಇನ್ನಿಲ್ಲದಂತೆ ಛಿದ್ರಗೊಳ್ಳುವುದು
ನಿನ್ನ ಅಸ್ತಿತ್ವ ಒಂದೇ ಬಾಕಿ
ನಿನಗಿದೋ ನನ್ನ ಸಾವಿರ ಧ್ಯಾನ
ಕಾಲ ಉರುಳುತ್ತದೆ. ಋತುವು ಮರಳುತ್ತೆ. ಜೊತೆಗೆ ಸೃಷ್ಟಿಯ ಸಕಲ ಚರಾಚರಗಳ ಸಾವೂ ಆಗುತ್ತದೆ. ಎಲ್ಲವದೂ ನಶ್ವರವೇ. ದೇವರೊಬ್ಬನೇ ಶಾಶ್ವತವೆಂದು ಸಾರುವ ಈ ಚರಣ ಮನುಷ್ಯ ಅಹಂನ ಕೋಟೆಗೆ ಲಗ್ಗೆ ಹಾಕಿ ಬದುಕ ಸತ್ಯವ ಸಾರುತ್ತಾ ಅಂತರಂಗ ತೆರೆಯುವ ಪ್ರಯತ್ನ ಮಾಡಿದ್ದು ಸಾರ್ಥಕ ಸಂದೇಶವಾಗಿ ಗೋಚರವಾಗುತ್ತೆ. ಈ ಸಾಲುಗಳು ಬುದ್ಧಿ ಭಾವಗಳ ನಿಗಾವಣೆಯಲ್ಲಿ ನಡೆಯುತ್ತಾ ಜಗತ್ತೆಲ್ಲಾ ಶೂನ್ಯ ಪರಮಾತ್ಮನೇ ಅಂತಿಮವೆನ್ನುವ ವೇದಾಂತವನ್ನ ಸಾದರ ಪಡಿಸುತ್ತವೆ.
ಹೀಗೆ ಹೇಳುವ ಕವಿ ಮನುಷ್ಯನನ್ನ ಜಾತಿ ಮತದ ಸಂಕೋಲೆಯಿಂದ ಬಿಡುಗಡೆಗೊಳಿಸಿ ಮರುಕವಿಲ್ಲದ ಮನುಜರಲ್ಲಿ ಮನುಷ್ಯತ್ವದ ಧಾತುವನ್ನ ಉದ್ದೀಪನಗೊಳಿಸುವ ಸಲುವಾಗಿ ಈ ರೀತಿ ಹೇಳುತ್ತಾನೆ.
ವಿಷಮ ಸಮಾಜದಲಿ ಕಣ್ಣುಮುಚ್ಚಾಲೆ ಆಟ
ಜಾತಿ ಕುಲದ ಕಟ್ಟಳೆಯು ನಮಗೆ ಬೇಕಿಲ್ಲ
ನಾವು ಈಜುವ ನೀರಿಗೆ ನಮ್ಮಯ ಗಾಳಿಪಟಕೆ
ಶರೀರದಿ ಸುಳಿಯುವ ಆತ್ಮಕೆ ಬಣ್ಣ ಕಂಡಿಲ್ಲ
ಹೀಗೆನ್ನುತ್ತಲೇ ಮನುಷ್ಯ ಸಂಬಂಧಗಳ ಬೆಸೆಯುವ ಪ್ರಯತ್ನ ಮಾಡಿದ್ದಾನೆ. ಬುದ್ಧ ಬಂದ ಬದುಕು ನಶ್ವರವೆಂದ; ಬಸವ ಕಾಯಕ ಮಾಡಿಯೆಂದ; ಗಾಂಧೀಜಿ ಸತ್ಯ ನುಡಿಯೆಂದ. ಇವರೆಲ್ಲಾ ಮುಕ್ತ ಬಯಲಿನ ಸಮಾಜವನ್ನ ಕಟ್ಟುವ ಕಾಯಕ ಮಾಡಿದವರು. ಸಮಾಜ ನಿಸ್ತೇಜಗೊಂಡಾಗಲೆಲ್ಲಾ ಇವರ ತತ್ವಗಳು ಹಕೀಮನ ಔಷಧಿಯಂತೆ ಕೆಲಸಮಾಡಿವೆ ಮತ್ತು ಮಾಡುತ್ತಲೇ ಇವೆ. ಈ ಮಹಾತ್ಮರ ಮಹಿಮೆಯನ್ನ ಹಿಡಿದಿಟ್ಟ ಕವಿತೆಯೇ ಸತ್ಯಾನ್ವೇಷಣೆ. ಇಲ್ಲಿ ಕವಿ ಆಳಕ್ಕಿಳಿದು ಮನುಷ್ಯತ್ವ ಬೇರುಗಳ ಬೆದಕಿ ಅದನ್ನ ಗಟ್ಟಿಗೊಳಿಸಬೇಕೆಂಬ ಮುಗ್ಧ ಪ್ರಯತ್ನವನ್ನ ಈ ಕವಿತೆಯ ಮೂಲಕ ಮಾಡಿದ್ದಾರೆ. ಅದು ಅತಿರೇಕಗಳು ನಮ್ಮನ್ನಾಳುತ್ತಿರುವ ಕಾಲಘಟ್ಟದಲ್ಲಿ ಬುದ್ಧ-ಬಸವ-ಗಾಂಧಿ ಮತ್ತು ಅಂಬೇಡ್ಕರ್ ಅವರೆಷ್ಟು ಅನಿವಾರ್ಯ ಎನ್ನುವುದನ್ನ ಹೇಳುವ ಪ್ರಯತ್ನ ಮಾಡಿದ್ದಾರೆ.
***
ಹೀಗೆ ಸಾಗುತ್ತಾ ದೇಶಭಕ್ತಿ, ಸೈನಿಕನ ಸಾಹಸ... ನೆಲ ನಂಬಿ ಬದುಕುವ ಯೋಗಿಗಳ ಗೋಳು, ಅನ್ನದಾತನ ಅಳಲು ದಾಖಲಿಸುತ್ತಾ ಮತಾಂಧತೆ, ಜಾತಿಯತೆ ಕೊರೆದಿಟ್ಟ ಗಾಯಗಳುಂಡ ಸಮಾಜಕ್ಕೆ ಎದುರಾಗಿ ಕವಿ ವ್ಯವಸ್ಥೆಯ ಅನಾದರವನ್ನು ಪ್ರಶ್ನಿಸುವ ಧೈರ್ಯ ಮಾಡಿದ್ದು ಇಡೀ ಸಂಕಲನದುದ್ದಕ್ಕೂ ಕಾಣಬಹುದಾಗಿದೆ. ಕಾಯಕ ಹೀಗೆ ಸರಳ ಹಂದರ, ವಿಶಿಷ್ಠ ಭಾವವನ್ನ ಬಿಗಿದು ಕವಿತೆ ಕಟ್ಟುವ ಪ್ರಯತ್ನ ಸಾಧುವೂ ಸಮಯೋಚಿತವೂ ಹೌದೆಂದು ನಾನಂತು ಭಾವಿಸುವೆ.
ಹೌದು…
ಬರಹದಲ್ಲಿ ಅನುಷಂಗಿಕವಾಗಿ ಕಟ್ಟಿಕೊಡಬೇಕಾಗಿದದ್ದು ಮನುಜ ಪ್ರೀತಿ. ಇದನ್ನ ದಾಖಲಿಸುತ್ತಾ ಆಧ್ಯಾತ್ಮಿಕ ತಹತಹಿಕೆ, ಪರಮಾತ್ಮನ ಲೀಲೆಯನ್ನ ಸಲಹುತ್ತಾ ಸಾಗಿದ್ದಾರೆ. ಈ ರೀತಿಯಾಗಿ ಆಲೋಚಿಸುವ ಇವರೊಳಗೊಬ್ಬ ಸೂಫಿಯಿರುವುದನ್ನ ಕಂಡಿದ್ದೇನೆ. ಈ ಗುಣಗಳುಳ್ಳ ಕವಿ ಯಾವಾಗಲೂ ತಾಯ್ತನದ ಗುಣವನ್ನ ಮೈಗೂಡಿಸಿಕೊಂಡು ಮರಗುವಿಕೆಯನ್ನ ದಾಖಲಿಸುತ್ತಲೇ ತನ್ನ ಕಾಲದ ಕ್ರೌರ್ಯವನ್ನ ಕಟ್ಟಿಕೊಡಬೇಕು. ಈ ಪ್ರಯತ್ನದಲ್ಲಿ ಕವಿಯ ನಿರಾಸಕ್ತಿ ಎದ್ದು ಕಾಣುತ್ತಿದೆ. ಬದುಕಿನ ಇಂಥಹ ಕಳವಳಗಳನ್ನ ತಮ್ಮ ಮುಂದಿನ ಕವನಗಳಲ್ಲಿ ದಾಖಲಿಸಲಿ, ಹಾಗೆ ಕಟ್ಟಿಕೊಡುವಾಗ ಪ್ರತಿಮೆ ರೂಪಗಳ ಮುಖೇನ ನಿರೂಪಿಸಲೆಂದು ಹಾರೈಸುವೆ.
- ಅಬ್ದುಲ್ ಹೈ ತೋರಣಗಲ್ಲು
ಅಬ್ದುಲ್ ಹೈ ತೋರಣಗಲ್ಲು ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..
"ಒಂದು ಭಾಷಿಕ ಲೋಕದಲ್ಲಿ ಈಗಾಗಲೇ ಪ್ರಚಲಿತವಾಗಿರುವ, ಆಚರಣೆಯಲ್ಲಿರುವ ಸೂಕ್ಷ್ಮತೆ, ಸಂವೇದನೆ, ವಸ್ತುವಿಷಯ, ದೃಷ್ಟಿ...
“ಕಂಬಾರರ ಈ ಹೊಸ ಹಾಗೂ ಪರ್ಯಾಯ ಆಲೋಚನೆಗಳನ್ನು ಕನ್ನಡ ಸಾಹಿತ್ಯ ವಿಮರ್ಶೆ ಗುರುತಿಸಬೇಕಾದಷ್ಟು ಗುರುತಿಸಿಲ್ಲ. ಕಂಬ...
“ಹಗಲಿನಲ್ಲಿ ಇರುಳಿನಲ್ಲಿ ಕನಸಿನಲ್ಲಿ ಕನವರಿಕೆಯಲ್ಲಿ ಹೊತ್ತೂ ಗೊತ್ತೂ ಇಲ್ಲದ ಹೊತ್ತಿನಲ್ಲೂ ದುಸ್ವಪ್ನವಾಗಿ ಕಾಡಿ...
©2024 Book Brahma Private Limited.