“ಅಂದಿನ ಸಮಯದ ನೈಜ ಸಂಗತಿಗಳಿಗೆ ತನ್ನ ಕಲ್ಪನೆಯನ್ನು ಬೆರೆಸಿ ಬರೆದ ಕಾರಣ ಓದುಗರನ್ನು ಯೋಚಿಸುವಂತೆ ಮಾಡುವ ಶಕ್ತಿ ಇಲ್ಲಿನ ಕಥೆಗಳಿಗಿದೆ” ಎನ್ನುತ್ತಾರೆ ವಿಮರ್ಶಕಿ ರಶ್ಮಿ ಉಳಿಯಾರು. ಅವರು ಲೇಖಕ ನಿರಂಜನ ಅವರ ‘ನಿರಂಜನ ಕೆಲವು ಸಣ್ಣ ಕತೆಗಳು’ ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ…
ನಿರಂಜನ ಎಂದು ಪ್ರಸಿದ್ಧರಾಗಿ ಕನ್ನಡ ಸಾಹಿತ್ಯಲೋಕವನ್ನು ಬೆಳಗಿದವರು ದಕ್ಷಿಣ ಕನ್ನಡ ಮೂಲದ ಕುಳಕುಂದ ಶಿವರಾಯರು. ಇವರ ಪತ್ನಿ ಲೇಖಕಿ ಅನುಪಮಾ ನಿರಂಜನ. ನಿರಂಜನ ಅವರು ಒಟ್ಟು 156 ಸಣ್ಣಕಥೆಗಳನ್ನು ಬರೆದಿದ್ದಾರೆ. ಈ ಎಲ್ಲ ಕಥೆಗಳು 'ಧ್ವನಿ' ಎನ್ನುವ ಎರಡು ಜೋಡಿ ಸಂಪುಟಗಳಲ್ಲಿ 1987 ರಲ್ಲಿ ಹೊರ ಬಂದಿವೆ. ಅದರಲ್ಲಿ ಸುಮಾರು ಹತ್ತು ಕಥೆಗಳನ್ನು ಸಂಕಲಿಸಿ 'ಕೆಲವು ಸಣ್ಣ ಕಥೆಗಳು' ಎಂಬ ಪುಸ್ತಕವನ್ನು ಪ್ರಕಟಿಸಲಾಗಿದೆ. ಈ ಪುಸ್ತಕವು ಮಂಗಳೂರು ವಿಶ್ವವಿದ್ಯಾನಿಲಯದ 1986-87ರ ಪ್ರಥಮ ಪರೀಕ್ಷೆಗೆ ಅವಿಸ್ತರ ಪಠ್ಯವಾಗಿ ಸ್ವೀಕೃತವಾಗಿತ್ತು. ಹಾಗೆಯೇ ಮುಂದೆ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ. ಪದವಿ ಪ್ರಥಮ ಭಾಗಕ್ಕೋಸ್ಕರ ಉಪ ಪಠ್ಯವೆಂದು ಆಯ್ಕೆಯಾಗಿತ್ತು. ಶ್ರೀಯುತರ 'ಚಿರಸ್ಮರಣೆ' ಅತ್ಯಂತ ಜನಪ್ರಿಯ ಕಾದಂಬರಿಯಾಗಿದ್ದು ಅದೂ ಸೇರಿದಂತೆ ಹಲವು ಪುಸ್ತಕಗಳು ಭಾರತೀಯ ಭಾಷೆಗಳಲ್ಲದೇ, ಇಂಗ್ಲಿಷ್, ಪೋಲಿಷ್ ಹಾಗೂ ರಷ್ಯನ್ ಭಾಷೆಗಳಿಗೂ ಅನುವಾದಗೊಂಡಿದೆ. ಸುಮಾರು ಐವತ್ತು ವರ್ಷಗಳ ಕಾಲ (ಸುಮಾರು ಹದಿನೈದು ಸಾವಿರ ಪುಟಗಳಿಗೂ ಹೆಚ್ಚು) ನಿರಂಜನರು ಸಮೃದ್ಧ ಸಾಹಿತ್ಯ ಕೃಷಿ ನಡೆಸಿದ್ದಾರೆ.
ಪ್ರಸ್ತುತ 'ಕೆಲವು ಸಣ್ಣ ಕತೆಗಳು' ಪುಸ್ತಕದಲ್ಲಿನ ಕಥೆಗಳನ್ನು 1941ರಿಂದ 1965 ರ ಅವಧಿಯಲ್ಲಿ ಅಂದರೆ ಒಟ್ಟು ಇಪ್ಪತ್ತೈದು ವರ್ಷಗಳ ಘಟಕದಲ್ಲಿ ನಿರಂಜನರು ಬರೆದಿದ್ದಾರೆ. ಒಂದು ವ್ಯವಸ್ಥಿತವಾದ ಸಂಯೋಜನೆಯಿಂದ ಈ ಕಥೆಗಳು ಅಂದಿನ ಕಾಲ ಘಟ್ಟವನ್ನು ವಿಶಿಷ್ಟವಾಗಿ ಬಿಂಬಿಸುತ್ತವೆ. ಅಂದಿನ ಸಾಮಾಜಿಕ, ರಾಜಕೀಯ, ಕೌಟುಂಬಿಕ ಪರಿಸರ ಹಾಗೂ ಮನುಷ್ಯರ ಮನಸ್ಥಿತಿಗೆ ಕನ್ನಡಿ ಹಿಡಿಯುತ್ತವೆ. ಈ ಎಲ್ಲಾ ಕಥೆಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಂದಿನ ಸಮಯದ ನೈಜ ಸಂಗತಿಗಳಿಗೆ ತನ್ನ ಕಲ್ಪನೆಯನ್ನು ಬೆರೆಸಿ ಬರೆದ ಕಾರಣ ಓದುಗರನ್ನು ಯೋಚಿಸುವಂತೆ ಮಾಡುವ ಶಕ್ತಿ ಇಲ್ಲಿನ ಕಥೆಗಳಿಗಿದೆ. ಈ ಸಂಕಲನಕ್ಕೆ ಹಂಪನಾ ಅವರ ಮುನ್ನುಡಿ ಇದೆ. ಕಥೆಗಳ ಸೊಗಸಾದ ಪರಿಚಯ ಅಥವಾ ವಿಮರ್ಶೆಯಾಗಿರುವ ಈ ಮುನ್ನುಡಿಯನ್ನು ಓದುಗರು ಕಥೆಗಳನ್ನು ಓದಿದ ಮೇಲೇ ಓದುವುದು ಒಳಿತೆನ್ನುವುದು ನನ್ನ ಭಾವನೆ. ಮುನ್ನುಡಿ ಓದಿದ ಮೇಲೆ ಪುಸ್ತಕ ಇನ್ನಷ್ಟು ಹೆಚ್ಚು ಮನ ಮುಟ್ಟಿತು.
ವೈಯಕ್ತಿಕವಾಗಿ ಸಣ್ಣ ಕಥೆಗಳ ಸಂಕಲನಗಳು ನನ್ನ ಪ್ರಾಥಮಿಕ ಆಯ್ಕೆಯಲ್ಲ. ಹೆಚ್ಚಾಗಿ ಕಾದಂಬರಿಗಳೇ ನನಗಿಷ್ಟ. ಕಥಾ ಸಂಕಲನದ ಓದಿನಲ್ಲಿ ದೀರ್ಘ ರಸ ಆಸ್ವಾದನೆ ಸಾಧ್ಯವಿಲ್ಲ ಎನ್ನುವ ಅನಿಸಿಕೆ ನನ್ನದು. ಅಲ್ಲದೇ ಬೇಗನೇ ಓದು ಮುಗಿದು ಹೋಗುತ್ತದೆ ಎನ್ನುವ ತುಸು ಬೇಸರ. ಒಂದು ಕಥೆಗೂ ಮತ್ತೊಂದು ಕಥೆಗೂ ಭಿನ್ನತೆ ಇರುವುದರಿಂದ ಓಘ ಎಲ್ಲೋ ಕಡಿದು ಹೋದಂತಾಗಿ, ಪಾತ್ರಗಳು, ಸನ್ನಿವೇಶಗಳು ಕಲಸು ಮೇಲೋಗರ ಆದಂತೆ ಅನ್ನಿಸುತ್ತದೆ. ಒಟ್ಟು ವಿಶ್ಲೇಷಣೆ ಅಸಾಧ್ಯವಾಗಿ ಬಿಡಿ ಬಿಡಿಯಾಗಿ ಅವಲೋಕನ ಮಾಡಬೇಕಿರುತ್ತದೆ. ಆದರೆ ಈ ಬಾರಿ ಓದಿನ ವಿಷಯದಲ್ಲಿ ನನ್ನ ಈ ಮಿತಿಯನ್ನು ಮೀರಬೇಕು ಹಾಗೂ ನಿರಂಜನರ ಮುಖ್ಯ ಭೂಮಿಕೆಯಿಂದ ಕೊಂಚ ಹೊರತಾದ ಪುಸ್ತಕವೊಂದನ್ನು ಓದಬೇಕು ಎಂದು ಈ ಪುಸ್ತಕವನ್ನು ಖರೀದಿಸಿದೆ. ಇದು ನಿರಂಜನರ ಪುಸ್ತಕದ ಮೊದಲ ಓದು ನನ್ನದು.
'ಬಾಪೂಜಿ!.. ಬಾಪೂ!..'
ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಅನ್ನುವ ಗೀತೆಯಂತೆ ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ, ಮರು ವರ್ಷವೇ ಬಾಪೂಜಿ ಮರಣಕ್ಕೀಡಾಗಿದ್ದು, ತದನಂತರ ಯೋಚಿಸಿದಂತೆ, ಯೋಜಿಸಿದಂತೆ ಎಲ್ಲವೂ ನಡೆಯದೇ ದೇಶದ ಚುಕ್ಕಾಣಿ ಹಿಡಿದವರಿಂದಲೇ ವಿಫಲವಾಗಿದ್ದು ತಿಳಿದಿರುವ ವಿಷಯ. ಆದರೆ ಇದೆಲ್ಲ ನಡೆಯುವ ಮೊದಲೇ ಅದರಲ್ಲೂ ಗಾಂಧೀಜಿ ಬದುಕಿರುವಾಗಲೇ ಕಥೆಗಾರ ನಿರಂಜನ ಅವರು ಈ ಕಥೆಯಲ್ಲಿ ಅವರು ಮರಣ ಹೊಂದಿದಂತೆ ಕಲ್ಪಿಸಿಕೊಂಡು ಬರೆದಿದ್ದಾರೆ. ಅದು ವಿಶಿಷ್ಟ ಹಾಗೂ ಒಂದು ರೀತಿಯಲ್ಲಿ ದಿಟ್ಟ ಕಥಾ ವಸ್ತು. ಮಹಾತ್ಮಾ ಗಾಂಧಿಯವರೆಂದರೆ ಜನಮಾನಸದಲ್ಲಿ ಸರ್ವೋಚ್ಚ ಸ್ಥಾನ ಪಡೆದ, ಎಲ್ಲರಲ್ಲಿಯೂ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತುರಿಯುತ್ತಿದ್ದ ಸಮಯದಲ್ಲಿ ಈ ಕಥೆ ನಿರಂಜನರು ಭವಿಷ್ಯ ಏನಾಗಬಹುದೆಂಬ ಸುಳಿವನ್ನು ಅದಾಗಲೇ ಮನಗಂಡು ಬರೆದ ರೀತಿ ಆಶ್ಚರ್ಯ ತರುವಂತಿದೆ. ರಾಷ್ಟ್ರ ಪಿತನಿಲ್ಲದ ದೇಶದಲ್ಲಿ ಬಂಡವಾಳಶಾಹಿ, ಯುದ್ಧದಾಹಿ ಮುಂದಾಳುಗಳೆಲ್ಲ ಸೇರಿಕೊಂಡು ಬಾಪೂಜಿಯ ಆದರ್ಶಗಳಾದ ಸತ್ಯ, ಧರ್ಮ, ಅಹಿಂಸೆ, ರಾಮ ರಾಜ್ಯ, ಗ್ರಾಮೀಣ ಬಡ ಜನರ ಉದ್ಧಾರ, ಸ್ವಾವಲಂಬನೆ, ರಾಷ್ಟ್ರವಾದ, ಅಸ್ಪೃಶ್ಯತೆಯ ನಿವಾರಣೆ... ಎಲ್ಲವನ್ನೂ ಗಾಳಿಗೆ ತೂರಿ ಗಾಂಧಿ ಟೋಪಿಯ ಸೋಗಿನಲ್ಲಿ ಹಣ, ಅಧಿಕಾರದ ಲಾಲಸೆಯೇ ಪ್ರಧಾನವಾಗಿ ಬದುಕುತ್ತಿದ್ದಾರೆ. ಬಾಪೂಜಿಯು ಈ ಜನ ಪ್ರತಿನಿಧಿಗಳ ಎದುರು ಕನಸಲ್ಲೋ ಎಂಬಂತೆ ತೋರಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸುತ್ತಾರೆ. ಎಚ್ಚರಿಸುತ್ತಾರೆ. ತಾನು ಹೋಗುತ್ತೇನೆ. ಮತ್ತೆ ಬರುವುದಿಲ್ಲ ಎನ್ನುತ್ತಾರೆ. ನನ್ನನ್ನು ವ್ಯಕ್ತಿಯಾಗಿ ಅಲ್ಲ, ನನ್ನ ಆದರ್ಶಗಳನ್ನು ಪಾಲಿಸಿ ಎಂದು ಸೂಚ್ಯವಾಗಿ ಹೇಳುತ್ತಾರೆ. ಕಥೆ ಓದುರನ್ನು ಹಿಡಿದಿಡುತ್ತದೆ. ನಿಜವಾಗಿಯೂ ಹೀಗೇ ಮುಂದೆ ನಡೆದಿರಬಹುದೇ ಎಂಬ ವಿಸ್ಮಯ ಹುಟ್ಟುತ್ತದೆ. ಈ ಕಥೆ ಕಾಲಕ್ಕೂ ಈ ಕಾಲಕ್ಕೂ ಅದೆಷ್ಟು ಪ್ರಸ್ತುತವಿದೆ ಅಲ್ಲವೇ!
'ಎಣ್ಣೆ! ಚಿಮಿಣಿ ಎಣ್ಣೆ!'
ಮೊದಲ ಮಹಾಯುದ್ಧದ ಸಮಯದಲ್ಲಿ ಬಡಜನರಿಗೆ ಜೀವನಾವಶ್ಯಕ ವಸ್ತುಗಳಿಗೂ ತತ್ವಾರವಾಗಿದ್ದುದ್ದನ್ನು ಈ ಕಥೆ ಮನಮಿಡಿಯುವಂತೆ ಚಿತ್ರಿಸಿದೆ. ಸುಲಿಗೆ ಮಾಡುವವರಿಗೆ ಹಬ್ಬ. ಈ ಯುದ್ಧದ ಬಿಸಿಯಲ್ಲಿ ಬೆಂದು ಹೋಗುವುದು ಮಾತ್ರ ಅಂದಂದೇ ದುಡಿದು ತಿನ್ನಬೇಕಾದ ಬಡ ಬೋರೇಗೌಡನಷ್ಟೇ. ಯುದ್ಧದ ಬಗ್ಗೆ ತಿಳಿಯದ, ಅರ್ಥವಾಗದ ಮುಗ್ಧ ಬೀಡಿ ವ್ಯಾಪಾರಿ ಸೋಮನಿಗೆ ವಾರಕ್ಕೊಮ್ಮೆ ಬಾಟಲಿ ಚಿಮಿಣಿ ಎಣ್ಣೆ ಬೇಕು, ಅವನ ಅಂಗಡಿಗೂ, ಮನೆಗೂ... ಪುಟ್ಟ ಮಗಳಿಗೆ ಜ್ವರ ಬಂದ ಸಮಯದಲ್ಲಿ ಅರ್ಧ ಸೇರು ಅಕ್ಕಿ ಹಾಗೂ ಚಿಮಿಣಿ ಎಣ್ಣೆ ಕೊಳ್ಳುದಕ್ಕೂ ಕಾಸಿಲ್ಲದೇ ಹೋದಾಗ, ಅಲ್ಲಿಯವರೆಗೆ ಗೌರವದಿಂದ ಮಾತಾಡುತ್ತಿದ್ದ ದಿನಸಿ ಮಾಲೀಕರು ಹೇಗೇಗೋ ಮಾತನಾಡಿ ನೊಂದುಕೊಳ್ಳುತ್ತಾನೆ. ಕೃತಕ ಅಭಾವ ತಪ್ಪಿಸಲು ಮಾರಿದ ವಸ್ತುಗಳಿಗೆ ವೋಚರ್ ಕೇಳಬೇಕೆಂದು ಗೊತ್ತಾಗಿ ಬೇರೆ ಅಂಗಡಿಗೆ ಹೋಗಿ ಕೇಳಿದಾಗ ಅವನನ್ನು ಆಳುಗಳಿಂದ ಹೊರ ದಬ್ಬಿಸುತ್ತಾರೆ. ಹಸಿವಲ್ಲಿ ಬೆಂದು, ಕೊನೆಗೆ ಪೋಲಿಸ್ ಸೂಪರಿಂಟೆಂಡೆಂಟರ ಬಳಿ ಹೋಗಿ, ಎಣ್ಣೆ ಕೇಳುತ್ತಾ, ದಬ್ಬಿಸಿಕೊಂಡು, ಜನರಿಂದ ಬಿಸಿ ನೀರು ಎರಚಿಸಿಕೊಂಡು, ಎಣ್ಣೆ ಎಣ್ಣೆ ಎಂದು ಅರಚಿ ಹುಚ್ಚನ ಪಟ್ಟ ಕಟ್ಟಿಸಿಕೊಳ್ಳುತ್ತಾನೆ. ಕೊನೆಗೆ ಕಾರಿಂದ ಢಿಕ್ಕಿ ಹೊಡೆಸಿಕೊಂಡು ಬೀದಿಯ ಚರಂಡಿ ಪಾಲಾಗುತ್ತಾನೆ. ಈ ವ್ಯವಸ್ಥೆಯಲ್ಲಿ ಒಂದು ಬಡ ಜೀವದ ಬೆಲೆಯೆಷ್ಟರದು ಎಂಬುದು ಅರಿವಾದಾಗ ಓದುಗ ಶೂನ್ಯ ಮನಸ್ಕನಾಗುತ್ತಾನೆ.
'ಮೈಖೇಲ್ ಮಾಸ್ ಪಿಕ್ನಿಕ್'
ಕ್ರಿಶ್ಚಿಯನ್ನರ ಬದುಕು ನಿರಂಜನರ ಕುತೂಹಲಕರ ವಿಷಯವಾಗಿ ಹುಟ್ಟಿಕೊಂಡ ಕತೆಯಿದು. ಮೇಲ್ವರ್ಗದ ಸೊಗಸುಗಾರ್ತಿ, ಆತ್ಮರತಿಯ ಲಿಲ್ಲಿ ಹಾಗೂ ಬಡ ವರ್ಗದ ಅವಳ ಗೆಳತಿ ಮೇರಿಯ ಪುಟ್ಟ ಕಥೆಯಿದು. ಸುಂದರವಾಗಿದ್ದೆಲ್ಲ ಶ್ರೇಷ್ಠ, ಕೊಳಕಾಗಿದ್ದೆಲ್ಲ ಕನಿಷ್ಠ ಎಂಬ ಅಹಂಕಾರದ ಮನಸ್ಥಿತಿಯ ಲಿಲ್ಲಿ ಹಾಗೂ ಆಕೆಯ ಹೆತ್ತವರು. ಎರಡು ಭಿನ್ನ ಧ್ರುವಗಳ ಅಂಚಲ್ಲಿ ಈ ಇಬ್ಬರು ಗೆಳತಿಯರು. ಲಿಲ್ಲಿಗೆ ತನ್ನ ಗೆಳತಿಯಾದರೂ ಮೇರಿಯ ಬಗ್ಗೆ ಅಂತಃಕರಣ ಇಲ್ಲ. ಕೊನೆಗೆ ವಿನಾಕಾರಣ ಅಸಹನೆ, ಸಿಡುಕು ತೋರುವ ಆಕೆ ಮೇರಿಯ ಸೈನ್ಯದಿಂದ ಮರಳಿದ ಅಣ್ಣ ಕಳಿಸಿದ ಹಣ್ಣಿನ ಬುಟ್ಟಿಯನ್ನೂ ಹೀನೈಸುತ್ತಾಳೆ. ಸ್ವಾತಂತ್ರ್ಯ ಪೂರ್ವದ ಆಂಗ್ಲ ಹಿನ್ನೆಲೆಯ ಶ್ರೀಮಂತರು ಮತ್ತವರ ಆಂತರ್ಯದ ಬಡತನವನ್ನು ಚೆನ್ನಾಗಿ ವಿಡಂಬನೆ ಮಾಡಿದ್ದಾರೆ.
'ರಕ್ತ ಸರೋವರ'
ಕಾಶ್ಮೀರದಲ್ಲಿ ೧೯೪೬ರಲ್ಲಿ ಡೋಗ್ರಾ ಅರಸೊತ್ತಿಗೆಯ ವಿರುದ್ಧ ದಂಗೆ ಎದ್ದ ಜನರ ಸುದ್ದಿ ದೇಶದಲ್ಲಿ ರೋಮಾಂಚನ ಉಂಟು ಮಾಡಿದಾಗ ಕಥೆಗಾರ ನಿರಂಜನರ ಕಣ್ಣಿಗೆ ದಾಲ್ ಸರೋವರ ಕೆಂಪಾಗಿ ಕಾಣತೊಡಗಿತ್ತು. ಆಗ ಈ ಕಥೆಯ ಜನನವಾಯಿತು. ಸುಂದರ ದಾಲ್ ತಟಾಕದಲ್ಲಿ ವಿಹರಿಸುವ ಆಸೆ ಬಡ ಜೈನಬಿಗೆ. ಆದರೆ ಪತಿ ಶೇಕ ಅದು ರಾಜರ ಸರೋವರ. ನಾವೆಲ್ಲ ಹೋಗಬಾರದು ಎನ್ನುತ್ತಾನೆ. ಮೂರು ವರ್ಷಗಳ ಬಳಿಕ ಅವರ ಹೊಲವನ್ನು ರಾಜ ಮನೆತನ ಕಿತ್ತುಕೊಂಡಾಗ ಉಳಿದದ್ದು ಬಡತನ ಮತ್ತು ಅಸಾಧ್ಯ ರೋಷ. ಪುಟ್ಟ ಮಗು, ಹೆಂಡತಿ, ಮುದುಕ ತಂದೆಯನ್ನು ಬಿಟ್ಟು ಮತ ಧರ್ಮಗಳ ಬೇಧಗಳಿಲ್ಲದೇ ಎಪ್ಪತ್ತಾರು ವೀರರೊಡನೆ ಶೇಕನೂ ಅರಸೊತ್ತಿಗೆಯ ವಿರುದ್ಧ ದಂಗೆ ಏಳಲು ದಾಲ್ ಸರೋವರದ ಮೇಲೆ ದೋಣಿಗಳಲ್ಲಿ ಹೊರಡುತ್ತಾರೆ. ಕೊನೆ ಮುಟ್ಟುವ ಮೊದಲೇ ಅರಮನೆಯಲ್ಲಿ, ಸಂಚಲನ ಹುಟ್ಟಿ,ಸೈನಿಕರ ಗುಂಡೇಟು ತಿಂದು ಹಲವು ಯುವಕರು ಸತ್ತರೆ, ಮತ್ತುಳಿದವರು ದಿಕ್ಕಾಪಾಲಾಗಿ ಓಡುತ್ತಾರೆ. ಇಪ್ಪತ್ತಾರು ಜನರೊಂದಿಗೆ ಶೇಕನೂ ಸಾಯುತ್ತಾನೆ. ಕ್ರಾಂತಿಯ ಕನಸು ರಕ್ತ ತರ್ಪಣವಾಗಿ ದಾಲ್ ಸರೋವರದಲ್ಲಿ ಉಸಿರು ಬಿಡುತ್ತದೆ. ಓದಿದಾಗ ಮನಸ್ಸು ಭಾರವಾಯಿತು.
'ಕೊನೆಯ ಗಿರಾಕಿ'
ಈ ಸಂಕಲನದ ಅತ್ಯಂತ ವಿಹ್ವಲಗೊಳಿಸಿದ ಕಥೆಯಿದು. ತಮಿಳುನಾಡಿನಿಂದ ಹದಿನಾರು ವರ್ಷದ ಮೂಕಿ 'ಕಾಣಿ' ಎಂಬಾಕೆ ತಿರುಪೆಯೆತ್ತುವ ಅಂಗವಿಕಲ ಬಡವನ ಜೊತೆ ಓಡಿ ಬಂದಿದ್ದಳು. ಕೆಲವು ದಿನಗಳಲ್ಲಿ ಆತ ಕಾಣೆಯಾದಾಗ ಹೊಟ್ಟೆಯ ಕೂಗು ತಾಳಲಾಗದೇ ಮೈ ಮಾರಿಕೊಳ್ಳುವ ದಂಧೆಗೆ ಇಳಿದಳು. ಆಕೆಗೆ ದುಡ್ಡಿನ ಲೆಕ್ಕಾಚಾರ ಕೂಡ ಗೊತ್ತಿಲ್ಲ. ಕೊನೆಗೊಮ್ಮೆ ದೇಹ ಬಡವಾಗಿ, ರೋಗಿಷ್ಟಳಾಗಿ, ಶಕ್ತಹೀನವಾಗಿ, ತಿನ್ನಲು ಏನೂ ಸಿಗದೇ ಹೋದಾಗ ಸಿಕ್ಕವನೇ ಒಬ್ಬ ಪೋಲಿ. ಕೆಲಸ ಮುಗಿಸಿ ಅವಳ ಮೇಲೆ ಉಗುಳಿ ಹಣ ನೀಡದೇ ಹೋದವನನ್ನು ಮೂಕ ಭಾಷೆಯಲ್ಲೇ ತೆವಳಿ, ತಡೆದು ಮೊರೆಯಿಡುತ್ತಾಳೆ. ಜನರು ಯಾರಾದರೂ ಗಮನಿಸಿ ತನ್ನನ್ನು ಬೆನ್ನಟ್ಟಬಹುದು ಎಂದು ಅವಮಾನಿತನಾದ ಆ ಆಸಾಮಿ ಆಕೆಯ ಗಂಟಲಿಗೆ ಕೈ ಹಾಕಿ ಹಿಸುಕಿ, ಕಿಬ್ಬೊಟ್ಟೆಗೆ ಬೂಟುಗಾಲಿನಿಂದ ಒದ್ದ ರಭಸಕ್ಕೆ ಕಾಣಿಯ ಪ್ರಾಣ ಹಾರಿ ಹೋಗುತ್ತದೆ. ಮೃತ ದೇಹದ ಸುತ್ತ ಮೇಲಿಂದ ಗಿಡುಗವೊಂದು ಸುತ್ತು ಬರುತ್ತದೆ. ಕೊನೆಯ ಗಿರಾಕಿ ಕಾಣಿಯನ್ನು ಕೈಲಾಸ ಮುಟ್ಟಿಸಿದರೂ ಅವಳ ದೇಹಕ್ಕೊಂದು ಗೌರವದ ಸಾವು ಒದಗಲೇ ಇಲ್ಲ. ಕಥೆ ಹುಟ್ಟಿಸಿದ ಕಲಸಿ ಹೋದ ಭಾವಗಳನ್ನು ನಾ ಅಕ್ಷರಗಳಲ್ಲಿ ಹಿಡಿದಿಡಲಾರೆ!
'ತಿರುಕಣ್ಣನ ಮತದಾನ'
ಈ ಕಥೆಯಲ್ಲಿ ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆ ಎಂಬ ಬೃಹನ್ನಾಟಕದಲ್ಲಿ ಜನಸಾಮಾನ್ಯನಿಗೆ ಸಿಗುವ ಸೋಗಿನ ಗೌರವ, ಓಲೈಕೆ, ಜನಪ್ರತಿನಿಧಿಗಳ ನಯ ವಿನಯ, ಪೊಳ್ಳು ಆಶ್ವಾಸನೆಗಳು, ಆಮಿಷಗಳು... ಇವೆಲ್ಲವೂ ವ್ಯಂಗ್ಯವಾಗಿ ಚಿತ್ರಿಸಲ್ಪಟ್ಟಿವೆ. ತಿರುಕಣ್ಣನೆಂಬ ಅತೀ ಸಾಮಾನ್ಯನಿಗೆ ಇದೆಲ್ಲವೂ ದೊಡ್ಡ ಪ್ರಹಸನದಂತೆ ಕಂಡು, ಪ್ರಚಾರದ ಕಾವು ಹೆಚ್ಚುತ್ತಾ ಹೋದಂತೆ ಹಲವು ಪಕ್ಷದವರು ಅವನನ್ನು ಓಲೈಸಲು ಯತ್ನಿಸಿದರೂ, ಅದರ ಹಿಂದಿನ ಸ್ವಹಿತಾಸಕ್ತಿ ಹಾಗೂ ಅಪ್ರಾಮಾಣಿಕತೆಯನ್ನು ಗಮನಿಸಿ ಅವನು ಆ ವೃತ್ತದಿಂದ ಹೊರಗುಳಿಯುತ್ತಾನೆ. ಚುನಾವಣೆಯು ಪ್ರಜಾಪ್ರಭುತ್ವದಲ್ಲಿ ಸತ್ವಯುತ ಮುಖ್ಯ ಪಾತ್ರವಹಿಸದೇ ದೊಂಬರಾಟವಾಗಿದ್ದು ಹಾಗೂ ತಳಮಟ್ಟದ ಜನರ ಅಭಿವೃದ್ಧಿಯು ಮರೀಚಿಕೆಯಾಗಿದ್ದು ಕಥೆಯುದ್ದಕ್ಕೂ ಪರೋಕ್ಷವಾಗಿ ಉಲ್ಲೇಖಿತವಾಗಿದೆ. ಹೆಂಡತಿ ಸತ್ತಳು ಎಂದಾಗ ಅಯ್ಯೋ ಒಂದು ವೋಟು ಕಡಿಮೆಯಾಯಿತಲ್ಲಾ ಎಂಬ ರಾಜಕೀಯದವರ ಹಳಹಳಿಕೆ! ಕೊನೆಗೆ ತಿರುಕಣ್ಣ ಮತದಾನ ಮಾಡದೇ ತನ್ನ ವೋಟು ವ್ಯರ್ಥ ಮಾಡಲಿಲ್ಲ ಎಂಬಲ್ಲಿಗೆ ಈ ಭ್ರಷ್ಟ ವ್ಯವಸ್ಥೆಯ ಭಾಗವಾಗದೇ ಆತ ಯಾವ ರೀತಿಯಲ್ಲಿ ತನ್ನ ಮೌನ ಪ್ರತಿಭಟನೆ ದಾಖಲಿಸಿದ ಎಂಬುದು ವೇದ್ಯವಾಗುತ್ತದೆ. ಈಗಿನ ಕಾಲವಾದರೆ ಚುನಾವಣೆಯಲ್ಲಿ ನೋಟಾ ಆಯ್ಕೆ ಇತ್ತು ಎಂದು ಅನ್ನಿಸಿತು.
'ಒಂದೇ ನಾಣ್ಯದ ಎರಡು ಮೈ'
ನಿರಂಜನ ಅವರು ಮೊದಲ ಸಲ ಸ್ವಾತಂತ್ರ್ಯ ಹೋರಾಟಗಾರನಾಗಿ ಬಂಧಿತರಾಗಿ ಕಾರವಾರದಲ್ಲಿ ಜೈಲು ಸೇರಿದ್ದರು. ಮುಂದೆ ಎರಡನೇ ಸಲದ ಪ್ರಯಾಣದಲ್ಲಿ ಮೊದಲಿನ ಘಟನೆಗಳು ಅವರ ನೆನಪಿನ ಸುರುಳಿ ಬಿಚ್ಚುತ್ತಾ ಸಾಗುತ್ತವೆ. ಅಂದು ತನ್ನಂತೆಯೇ ಬಂಧಿತರಾದವರನ್ನು ಬಿಡಿಸಲು ಬಂದಿದ್ದ ಬಲಿಷ್ಠ ಕಳ್ಳ ಸಾಗಾಣಿಕೆದಾರ ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಷ್ಟು ದೊಡ್ಡ ಕಮಾಂಡರ್ ಆಗುತ್ತಾನೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಪೋಲೀಸರು ಕಳ್ಳರು ಎಲ್ಲವೂ ಒಂದಾಗುವ ದುರ್ದೈವ. ಕಥೆಯಲ್ಲಿ ಕಡಲ ತೀರ, ಅಂಕೋಲ, ಗೋವಾ, ಕಾರವಾರ ಎಲ್ಲ ಪ್ರಾಕೃತಿಕ ವರ್ಣನೆ ಚೆನ್ನಾಗಿ ಮೂಡಿ ಬಂದಿದೆ. ಗೋವಾವಿನ್ನೂ ಭಾರತಕ್ಕೆ ಸೇರಿರದ ಸಮಯದ ಕಥೆಯಿದು. ಕಾಲ ಸರಿದಂತೆ ಕೆಟ್ಟತನದ ಎರಡು ವಿಭಿನ್ನ ನಕಾರಾತ್ಮಕ ಮುಖಗಳೂ ಸೇರಿ ಒಂದೇ ಆಗುತ್ತವೆ. ಈ ಕಥೆ ನನಗೆ ಅರಿಯಲು ಒಂದಿಷ್ಟು ಕ್ಲಿಷ್ಟ ಅನ್ನಿಸಿತು.
'ಒಂಟಿ ನಕ್ಷತ್ರ ನಕ್ಕಿತು'
ನಿರಂಜನರ ಇದೇ ಶೀರ್ಷಿಕೆಯ ಇನ್ನೊಂದು ಕಥಾ ಸಂಕಲನವೂ ಇದೆ ಎಂದು ತಿಳಿಯಿತು. ತುಂಗಭದ್ರಾ ಜಲಾಶಯ ಕಟ್ಟಿದ ಹಿನ್ನೆಲೆಯಲ್ಲಿ ಈ ಕಥೆ ರೂಪುಗೊಂಡಿದೆ. ಭಾಷೆ ಗ್ರಾಮ್ಯ ಕನ್ನಡ. ಮುಳುಗಡೆಯಾಗುವ ಹನ್ನೆರಡು ಹಳ್ಳಿಗಳ ಜನರಿಗೆ ಕಳೆದುಕೊಳ್ಳುವ ಜಾಗಕ್ಕೆ ಜಾಗ ಅಥವಾ ದುಡ್ಡು ನೀಡಿ ಖಾಲಿ ಮಾಡಿದಾಗ ಹಾಗೆ ಸಂಕಟದಿಂದ ಅನಿವಾರ್ಯವಾಗಿ ಹೋದವರಲ್ಲಿ ಹಿರಿಯ, ಹೆಂಡತಿ, ಮಗ ರಾಮ, ಅವನ ಹೆಂಡತಿ ತುಂಬು ಬಸುರಿ ಲಚ್ಚಿಯೂ ಸೇರಿದ್ದರು. ಹಳ್ಳಿಯ ಹನುಮನ ಗುಡಿಯನ್ನು ಈ ಮನುಷ್ಯರ ಅಣೆಕಟ್ಟು ಮುಳುಗಿಸಲಾಗದು ಎಂಬ ಮುಗ್ಧ ನಂಬಿಕೆ ಕುಸಿದು ಬಿದ್ದಾಗ ಕಾಯಿಲೆ ಮಲಗಿದ್ದ ಹಿರಿಯ. ಕೊಟ್ಟ ಭೂಮಿ ಬಂಜರಾಗಿ ಬಡತನ ತಾಂಡವವಾಡಿತ್ತು. ಗರ್ಭಿಣಿ ಬಲಿಯಾಗಬೇಕು ಎಂದು ಸುದ್ದಿ ಹಬ್ಬಿದಾಗ ಎಲ್ಲ ಬಸುರಿಯರೂ ಮನೆಯೊಳಗೆ ಅಡಗಿ ಕೂತರು. ಆದರೂ ಅಣೆಕಟ್ಟು ಕಟ್ಟಿ ಮುಗಿಯುವುದರೊಳಗೆ ಎರಡು ಜನ ಕೆಲಸಗಾರರು ಪ್ರಾಣ ಕಳೆದುಕೊಂಡರು. ಮುಂದೆ ಅಣೆಕಟ್ಟು ಕಟ್ಟಿ ಅವನ ಜಮೀನಿನವರೆಗೂ ನೀರು ಧೋ ಎಂದು ಹರಿಯುವುದನ್ನು ಕಂಡು ಅಚ್ಚರಿಗೊಂಡು ಅದರ ಹಿಂದೆಯೇ ಮನೆಗೆ ಓಡಿದ ಅವನಿಗೆ ಸೊಸೆ ಗಂಡು ಮಗುವನ್ನು ಹಡೆದ ಸುದ್ದಿ ಸಿಕ್ಕಿ ಕಣ್ತುಂಬುತ್ತದೆ. ಆಕಾಶದಲ್ಲಿನ ಒಂಟಿ ನಕ್ಷತ್ರ ನಕ್ಕು ಬದುಕಿನ ಭರವಸೆಯ ದೀಪ ಹೊತ್ತಿಕೊಂಡಂತೆ ಹಿರಿಯನಿಗೆ ಅನ್ನಿಸುತ್ತದೆ. ವಿಭಿನ್ನ ಕಥೆ.
'ಹಮಾಲ ಇಮಾಮ್ ಸಾಬಿ'
ಸಂಕಲನದ ಕರುಣಾರಸಭರಿತ ಕಥೆಯಿದು. ಇಮಾಮ್ ಗೆ ರೈಲ್ವೆಯಲ್ಲಿ ಮಾಡುವ ಹಮಾಲಿ ಕೆಲಸವೇ ಬದುಕು. ಐದು ಗಂಡು ಮಕ್ಕಳಿದ್ದರೂ ಎಲ್ಲ ಅವರವರ ದಾರಿ ನೋಡಿಕೊಂಡು ಉಳಿದಿದ್ದು ಕೊನೆಯ ಮಗ. ಅವನ ಹೆಂಡತಿ ತುಂಬು ಗರ್ಭಿಣಿ. ಮೊದಲ ಹೆಂಡತಿ ಚೊಚ್ಚಲ ಹೆರಿಗೆಯಲ್ಲಿ ಮಗುವಿನೊಂದಿಗೆ ಅಸುನೀಗಿದ್ದು ಅವನಿಗೊಂದು ಮರೆಯಲಾಗದ ಆರದ ಗಾಯ. ಈಗ ತನ್ನ ವಂಶದ ಕುಡಿ ಹೊತ್ತಿರುವ ಸೊಸೆಯ ಬಗ್ಗೆಯೂ ಅವ್ಯಕ್ತ ಆತಂಕ ಅವನಿಗೆ. ಅಮಾಯಕ ಸಾಬಿಗೆ ದಿನವಿಡೀ ದುಡಿದ ಪುಡಿಗಾಸನ್ನು ಎರಡನೇ ಬೀಬಿಗೆ ಕೊಡುವುದಷ್ಟೇ ಗೊತ್ತು. ಮತ್ತೆಲ್ಲವೂ ಅವಳದೇ ಜವಾಬ್ದಾರಿ. ಅರವತ್ತು ವರ್ಷದ ಇಮಾಮ್ ಇನ್ನೂ ಸುಕ್ಕುಗಟ್ಟಿಲ್ಲ. ಆದರೆ ಬದುಕಿನ ಬವಣೆಯಡಿ ನೊಂದಿದ್ದಾನೆ. ಓದಿ ರೈಲ್ವೆ ಅಧಿಕಾರಿ ಆಗಬೇಕೆಂದು ಅಂದುಕೊಂಡರೂ ವಿದ್ಯೆ ತಲೆಗೆ ಹತ್ತದ ಮಗ ಕರೀಂ ಕೂಡ ಹಮಾಲಿ ವೃತ್ತಿ ಮಾಡುತ್ತಾನೆ. ಈ ಮಧ್ಯೆ ಹಿಂದೊಮ್ಮೆ ನಡೆದ ಭೀಕರ ರೈಲು ಅಪಘಾತ, ಅದರಲ್ಲಿ ತಾನು ಉಳಿಸಿದ ಜೀವಗಳು... ಅವನನ್ನು ಕನಸಾಗಿ ಬಂದು ಬಿಡದೇ ಕಾಡಿಸುತ್ತದೆ. ಅಲ್ಲಿನ ಸಹಾಯಕ್ಕೆ ಪ್ರತಿಯಾಗಿ ಹಣವನ್ನು ಅವನು ಪಡೆದಿರುವುದಿಲ್ಲ. ಅಷ್ಟು ವರ್ಷಗಳಲ್ಲಿ ರೈಲ್ವೆ ನಿಲ್ದಾಣದಲ್ಲಿ ಎಲ್ಲವೂ ಬದಲಾಗಿದ್ದರೂ ಸಾಬಿ ಇನ್ನೂ ಹಳೆಯ ಕಾಲದಲ್ಲೇ ಇದ್ದ. ಅಂದು ಕಣ್ಣೇಕೋ ಮಂಜಾಗಿ, ಮನಸ್ಸು ಭಾರವಾಗಿ ಕುಳಿತ ಸಮಯದಲ್ಲಿ ಪ್ರಯಾಣಿಕನೊಬ್ಬ ಮುದುಕನಾದೆ ನೀನು. ಹೋಗು ಎಂದು ಬಿಡುತ್ತಾನೆ. ಅದೇ ಯೋಚನೆಯಲ್ಲಿ ಮನೆಯತ್ತ ಹೊರಟು ಗಂಡು ಮಗು ಹುಟ್ಟಿದ ವಿಷಯ ತಿಳಿದು ಮನೆಯೊಳಗೆ ಮುಟ್ಟುವ ಮೊದಲೇ ನಿತ್ರಾಣನಾಗಿ ಉಸಿರು ಚೆಲ್ಲುತ್ತಾನೆ ಸಾಬಿ. ಹೊಸ ಜೀವ ಭೂಮಿಗೆ ಬಂದಾಗ ಹಳೆಯ ಜೀವ ಜಾಗ ಖಾಲಿ ಮಾಡಿಕೊಟ್ಟ ಹಾಗಾಯಿತು. ಕಥೆ ಕಣ್ಣಲ್ಲಿ ನೀರು ತಂದಿತು.
'ಹರಕೆಯ ಖಡ್ಗ'
ಸಂಕಲನದ ಕಡೆಯ ಈ ಕಥೆ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಚನ್ನಗಿರಿಯ ಧೊಂಡಿಯಾ ವಾಘ್ ಮೇಲೆ ರೂಪಿತವಾಗಿದೆ. ಈ ಐತಿಹಾಸಿಕ ಕಥೆಯಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಅರವತ್ತು ವರ್ಷ ಮೊದಲು ಪರಕೀಯರ ವಿರುದ್ಧ ನಡೆದ ಪ್ರತಿಭಟನೆಗಳನ್ನು ಅವಲೋಕಿಸಿದಾಗ ಕಥೆಗಾರ ನಿರಂಜನರ ಕಣ್ಣಿಗೆ ಬಿದ್ದ ವೀರ ಈ ಧೊಂಡಿಯಾ. ಕಣ್ಣಿಗೆ ಮಣ್ಣೆರಚಿ ಶತ್ರು ಪಾಳಯದ ನರಿಗಳನ್ನು ಕೈ ವಶ ಮಾಡಿಕೊಂಡು ಭಾರತದ ವೀರರಿಗೆ ಮಣ್ಣು ಮುಕ್ಕಿಸುವ ಕುತಂತ್ರಿ ಬ್ರಿಟಿಷರಿಗೆ ಯುದ್ಧದಲ್ಲಿ ಸೋತು, ತನ್ನ ಉಸಿರು ಹೋಗುವ ಕೊನೆಯ ಕ್ಷಣದಲ್ಲೂ ತನ್ನ ಅಸ್ಮಿತೆಯನ್ನು ಬಿಟ್ಟು ಕೊಡದ ಧೊಂಡಿಯಾನ ಮನದ ತಾಕಲಾಟ ಹೃದಯ ಕಲಕುವಂತೆ ಚಿತ್ರಿಸಲಾಗಿದೆ. ನಾಲ್ಕು ವರ್ಷಗಳ ಯುವರಾಜ ಮೋನ್ಯಾನ ಚರ್ಯೆ ಓದಿದಾಗ ವೀರತನ ಅನ್ನುವುದು ರಕ್ತದಲ್ಲೇ ಮೂಡಿ ಬರುತ್ತದೆ ಎಂದು ಅರಿವಾಗುತ್ತದೆ. ಸಾಯುವ ಮೊದಲು ಹನಿ ನೀರಿಗಾಗಿ ಹಪಹಪಿಸಿ ಕೊನೆಯ ತನ್ನವನೊಬ್ಬ ನೀರು ಕುಡಿಸಿದಾಗ ತನ್ನ ಮಣಭಾರದ ಖಡ್ಗವನ್ನು ಅವನಿಗೆ ಒಪ್ಪಿಸಿ ಶಿಕಾರಿಪುರದಲ್ಲಿನ ದೇವಾಲಯಕ್ಕೆ ಬಂಗಾರದ ಕಲಶವಿಡಿಸುವ ತನ್ನ ಹರಕೆಯನ್ನು, ಶತ್ರು ವಿನಾಶದ ಸಂಕಲ್ಪವನ್ನು ತನ್ನ ಮಗ ಈಡೇರಿಸುವರೆಗೂ ಅದನ್ನು ದೇವಾಲಯದಲ್ಲಿ ಇಡಬೇಕೆಂದು ಕಡೆಯಾಸೆ ತಿಳಿಸಿ ವೀರ ಮರಣವನ್ನು ಅಪ್ಪುತ್ತಾನೆ ಧೊಂಡಿಯಾ. ನನ್ನ ಮನಸ್ಸು ಅಲ್ಲೇ ಒಂದು ಕ್ಷಣ ಕಳೆದು ಹೋಗಿತ್ತು.
ಒಟ್ಟಿನಲ್ಲಿ ಈ ಕಥಾ ಸಂಕಲನದ ಹಲವು ಕಥೆಗಳು ಈಗ್ಗೆ ಐವತ್ತು ಅರವತ್ತು ವರ್ಷಗಳ ಹಿಂದೆ ಬರೆದವುಗಳಾದರೂ ಇನ್ನೂ ಅವುಗಳ ಪ್ರಸ್ತುತತೆಯಿಂದ ಓದುಗರ ಗಮನ ಸೆಳೆಯುತ್ತವೆ. ಕರುಣಾ ರಸಭರಿತವಾಗಿದ್ದು ಜನರ ಸಂಕಟ, ದುಃಖ, ಆಕ್ರೋಶ, ತುಮುಲ... ಎಲ್ಲವನ್ನೂ ಸಮರ್ಥವಾಗಿ ಬಿಂಬಿಸುತ್ತವೆ. ಅಂತ್ಯವು ಹೆಚ್ಚಿನ ಕಥೆಗಳಲ್ಲಿ ವಿಷಾದ ಹಾಗೂ ನೋವಿಗೀಡು ಮಾಡಿದರೂ ಅಲ್ಲೊಂದು ಭರವಸೆ ಇದೆ. ಹೊಸ ಜೀವದ ಹುಟ್ಟು ಇದೆ. ಮುಂದುವರಿಕೆ ಇದೆ. ಒಟ್ಟಾರೆ ಓದು ಖುಷಿ ಕೊಟ್ಟಿತು. ಅಭಿಯಾನದ ದೆಸೆಯಿಂದ ಒಂದು ಸುಂದರ ಪುಸ್ತಕ ಓದಿಸಿದ್ದಕ್ಕೆ ಬಳಗಕ್ಕೆ ವಂದನೆಗಳು.
- ರಶ್ಮಿ ಉಳಿಯಾರು
ರಶ್ಮಿ ಉಳಿಯಾರು ಅವರ ಲೇಖಕ ಪರಿಚಯಕ್ಕಾಗಿ
"ಎರಡನೆಯವರು ಅನ್ವಯಿಕ ಮನೋವಿಜ್ಞಾನದ ಪ್ರವರ್ತಕರು. ಇವೆರಡು ಮನೋವಿಜ್ಞಾನದ ಎರಡು ಕಣ್ಣುಗಳಿದ್ದಂತೆ. ಪ್ರಸ್ತುತ ಗ್ರ...
“ಈ ರೀತಿಯ ಪ್ರಯೋಗ ಕನ್ನಡ ಸಾಹಿತ್ಯದಲ್ಲಿ ಅತೀ ವಿರಳವಾಗಿರುವಾಗ ಈ ಪ್ರಯೋಗಕ್ಕೆ ಒಂದು ಚಪ್ಪಾಳೆ ಕೊಡಲೇಬೇಕು,&rdq...
“ಪ್ರಣೀತ್, ಪ್ರತೀಕ್ಷಾ ದಕ್ಷ ಆಡಳಿತ ಸೇವೆ, ಜಯ ಚಂದ್ರ ಸಾಗರ್ ಕುಟುಂಬ ಪರಿಚಯ, ರಾಜಕೀಯ ಹಿನ್ನಲೆ, ಮುಂತಾದ ವಿಷಯಗ...
©2025 Book Brahma Private Limited.