ಯುವ ಚಿತ್ತ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಸಂಶೋಧಿಸುವತ್ತ ಹರಿಯಬೇಕು : ಪರಮಶಿವಮೂರ್ತಿ
ಹಾವೇರಿ: ಆಧುನಿಕತೆಯ ಭರಾಟೆಯತ್ತ ಯುವ ಸಮೂಹ ಮುಳುಗಿರುವುದು ವಿಷಾದನೀಯ. ಭಾರತದ ಚರಿತ್ರೆ, ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸದ ಬಗ್ಗೆ ಅರಿವು ಮೂಡಿಸುವುದು ಇಂದಿನ ಅನಿವಾರ್ಯವಾಗಿದೆ ಎಂದು ಹಂಪಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ ಹೇಳಿದರು.
ಇಲ್ಲಿನ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗ ಹಾಗೂ ಕಾಲೇಜಿನ ಐಕ್ಯೂಎಸಿ ಮತ್ತು ಇತಿಹಾಸ ವಿಭಾಗಗಳು ಜಂಟಿಯಾಗಿ ಇತ್ತೀಚೆಗೆ ಆಯೋಜಿಸಿದ್ದ ‘ಸ್ಥಳೀಯ ಚರಿತ್ರೆಯ ಸಂಶೋಧನಾ ಸಾಧ್ಯತೆಗಳು’ ವಿಷಯದ ಕುರಿತ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಚಾರಿತ್ರಿಕ ಇತಿಹಾಸದಲ್ಲಿ ಹುದುಗಿರುವ ಸನಾತನ ಸಂಸ್ಕೃತಿ ಮತ್ತು ಪರಂಪರೆಯನ್ನು ಹೆಚ್ಚು ಸಂಶೋಧನೆ ಮಾಡುವತ್ತ ಯುವಕರು ಚಿತ್ತ ಹರಿಸಬೇಕಿದೆ. ಸ್ಥಳೀಯವಾಗಿ ಇತಿಹಾಸ ಸಂಶೋಧನೆ ಮಾಡುವುದರ ಬಗೆಗೆ ಹೆಚ್ಚಿನ ಗಮನ ಹರಿಸಬೇಕಿದೆ. ನಾಗಾಲೋಟದಲ್ಲಿ ಸಾಗುತ್ತಿರುವ ಸಮೂಹವಿಂದು ತಾಳ್ಮೆ, ಸಹನೆಯನ್ನು ಕಳೆದುಕೊಂಡಿದೆ. ಏನೆಲ್ಲವನ್ನೂ ಕೊಡುಗೆಯಾಗಿ ನೀಡಿದ ಈ ದೇಶದ ಪರಿಪೂರ್ಣ ಇತಿಹಾಸದ ಅರಿವು ಮತ್ತು ತಿಳಿವು ಒಡಮೂಡಿದಾಗ ಪೂರ್ಣತೆ ಸಾಧ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ.ಎಸ್.ಎಲ್.ಬಾಲೇಹೊಸೂರು ಮಾತನಾಡಿ, ಭಾರತದ ಇತಿಹಾಸ ಪ್ರಾಚೀನವಾದುದು. ಇಲ್ಲಿರುವಷ್ಟು ದಾಖಲೆಗಳು ಬೇರೆಲ್ಲಿಯೂ ಸಿಗಲಾರವು. ಜನಸಾಮಾನ್ಯರ ನಿತ್ಯದ ಜೀವನದೊಟ್ಟಿಗೆ ಸಂಸ್ಕೃತಿ ಬೆಸೆದುಕೊಂಡಿದೆ. ಸಂಶೋಧನಾತ್ಮಕವಾಗಿ ವ್ಯವಸ್ಥೆಗಳು ನಿರ್ಮಾಣಗೊಂಡಾಗ ಅರಿವುಂಟಾಗುತ್ತದೆ. ರಾಜಮಹಾರಾಜರು ದೇವಸ್ಥಾನ, ಕೆರೆ, ಕಟ್ಟೆಗಳನ್ನು ನಿರ್ಮಿಸಿದ್ದಲ್ಲದೇ ಕುಶಲ ಶಿಲ್ಪಕಲಾಕೃತಿಗಳನ್ನು ಕೊಡುಗೆಯಾಗಿಸಿದ್ದಾರೆ. ಅವುಗಳ ಪರಿಪೂರ್ಣ ಶೋಧನೆಯಾಗಬೇಕಿದೆ ಎಂದರು.
ಕಾರ್ಯಾಗಾರದಲ್ಲಿ ವಿವಿಧ ಕಾಲೇಜುಗಳಿಂದ 196 ಪ್ರಾಧ್ಯಾಪಕರು, ಸಂಶೋಧಕರು, ಇತಿಹಾಸಕಾರರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿ ಸದಸ್ಯ ಜೆ.ಎಸ್.ಅರಣಿ, ಹಂಪಿ ಕನ್ನಡ ವಿವಿಯ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಅಮರೇಶ ಯತಗಲ್, ಸಮಾಜ ವಿಜ್ಞಾನಗಳ ನಿಕಾಯದ ಡೀನ್ ಪ್ರೊ. ಚಲುವರಾಜು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಎಸ್.ವೈ. ಸೋಮಶೇಖರ, ಇತರರು ಉಪಸ್ಥಿತರಿದ್ದರು.