Back To Top

 ಶರಣರ ಕ್ರಾಂತಿಯೂ ಕನ್ನಡದ ಕ್ರಾಂತಿಯೇ : ಅರವಿಂದ ಜತ್ತಿ

ಶರಣರ ಕ್ರಾಂತಿಯೂ ಕನ್ನಡದ ಕ್ರಾಂತಿಯೇ : ಅರವಿಂದ ಜತ್ತಿ

ಬೆಂಗಳೂರು: 12ನೇ ಶತಮಾನದ ಶರಣರ ವಚನಗಳು ನಿರ್ಭಿಡೆಯ ಸೂಳ್ನುಡಿಗಳು. ಕನ್ನಡ ನೆಲದ ಸತ್ವವನ್ನು ಸಾರುವಂಥ ವಚನಗಳಲ್ಲಿ ಲೋಕಾನುಭವವಿದೆ. ಶರಣರು ಮಾಡಿದ ಕ್ರಾಂತಿಯೂ ಕನ್ನಡದ ಕ್ರಾಂತಿಯೇ ಆಗಿದೆ ಎಂದು ಬೆಂಗಳೂರಿನ ಬಸವ ಸಮಿತಿಯ ಅಧ್ಯಕ್ಷರಾದ ಅರವಿಂದ ಜತ್ತಿ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಕೆ. ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗ ಹಾಗೂ ಬಸವ ಸಮಿತಿಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ವಚನ ಚಿಂತನ : ವಿಶ್ವ ದರ್ಶನ’ ಎಂಬ ಶಿರೋನಾಮೆಯ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವಾದಿ ಶರಣರ ತತ್ವದರ್ಶನವು ವೈಶ್ವಿಕವಾದುದು. ನಮ್ಮನ್ನು ಮನುಷ್ಯ ಮಾತ್ರವಲ್ಲದೆ ಮನುಷ್ಯ ಸ್ಥಿತಿ-ಗತಿಯನ್ನು ಮೀರಿದ ಪಾರಮಾರ್ಥಿಕವಾದ ಚಿಂತನೆಯ ಮೂಲಕ ನಮ್ಮನ್ನು ನಾವು ಅರಿಯಬೇಕಾದ ಬಗೆಯನ್ನು ಪ್ರೇರೇಪಿಸುವಂಥದ್ದು. ಜಗತ್ತಿನ ಯಾವ ಮೂಲೆಯಲ್ಲಿ ನಿಂತು ವಚನಗಳನ್ನು ಹಾಡಿದರೂ ಸರ್ವರನ್ನೂ ರೋಮಾಂಚನಗೊಳಿಸತ್ತದೆ. ಇದಕ್ಕೆ ಕಾರಣ ವಚನಗಳಲ್ಲಿನ ತಾತ್ವಿಕ ಹಾಗೂ ಮಾಧುರ್ಯದ ಸತ್ವ ಎಂದಿಂದ್ದಾರೆ.

‘ಕನ್ನಡ ಸಾಹಿತ್ಯ ಆರಂಭವಾದದ್ದೇ ಅವೈದಿಕ ಚಿಂತನೆಯಿಂದ. ಇದಕ್ಕೆ ಮತ್ತಷ್ಟು ಪುಷ್ಠಿಯನ್ನು ನೀಡಿದ್ದು ವಚನ ಚಳವಳಿ. ಕನ್ನಡ ಜನತೆಯ ಆಲೋಚನೆಯ ಸಾರವೇ ವಚನಸಾಹಿತ್ಯ. ಜನಸಮೂಹದ ಬಿನ್ನಹಕ್ಕೆ ಬಾಯಿಯಿಲ್ಲದಾಗ ಬಾಯಿ ಕೊಟ್ಟಿದ್ದು ವಚನ ಚಳವಳಿ. ಸಾಮೂಹಿಕ ತಲ್ಲಣಗಳು ಕುದಿದು ವಚನ ಚಳವಳಿಯ ಹುಟ್ಟಿಗೆ ಕಾರಣವಾಯಿತು. ವಚನ ಸಾಹಿತ್ಯವು ಕಾಲಕಾಲಕ್ಕೂ ಚೈತನ್ಯಶೀಲವಾದುದು. ವಚನಗಳಂತೆ ಯಾವುದು ಸಮಾನತೆಯನ್ನು ಉಸಿರಾಡುತ್ತದೆಯೋ ಅದು ಸಾರ್ವಕಾಲಿಕ ಹಾಗೂ ವಿಶ್ವಾತ್ಮಕವಾಗಿರುತ್ತದೆ. ಅಸಮಾನತೆ ಹಾಗೂ ಅನಾಚಾರದ ತಾಣಗಳಾದ ದೇವಸ್ಥಾನಗಳನ್ನು ಶರಣರು ತಿರಸ್ಕರಿಸಿದಂತೆ ನಾವೂ ತಿರಸ್ಕರಿಸಬೇಕಾಗಿದೆ ಎಂದು ಹಿರಿಯ ವಿದ್ವಾಂಸರೂ ವಚನ ಚಿಂತಕರೂ ಆದ ಡಾ. ಪಿ.ವಿ.ನಾರಾಯಣ ತಿಳಿಸಿದರು.

ವಿದ್ವಾಂಸರಾದ ಪ್ರೊ. ಮೊರಬದ ಮಲ್ಲಿಕಾರ್ಜುನ ಅವರು ‘ವಚನ ಸಾಹಿತ್ಯ ವಿಶ್ವಾತ್ಮಕ ಸ್ವರೂಪ’ ಕುರಿತು ಉಪನ್ಯಾಸ ನೀಡಿದರು. 12ನೇ ಶತಮಾನದಲ್ಲಿ ಶರಣರು ಹೇಳಿದ ವಿವೇಕವನ್ನು 21ನೇ ಶತಮಾನದಲ್ಲಿ ಮರುಸ್ಥಾಪಿಸಲು ಸಾಧ್ಯವೇ ಎಂಬುದನ್ನು ಕುರಿತು ನಾವೆಲ್ಲರೂ ಚಿಂತನ-ಮಂಥನ ನಡೆಸಬೇಕಾಗಿದೆ. ಯಾಕೆಂದರೆ ಶರಣರು ಯಾವುದನ್ನು ಹೇಳಿದ್ದರೋ ಅದನ್ನು ಸಮಾಧಿ ಮಾಡಿ ಮಾಡಬಾರದ್ದನ್ನು ಮಾಡುತ್ತಿದ್ದೇವೆ. ನಾವಿಂದು ದೇವಾಲಯಗಳನ್ನು ಹಾಗೂ ಮಠಗಳನ್ನು ವಿಜೃಂಭಿಸುತ್ತಿದ್ದೇವೆ, ಆದರೆ ಶರಣರು ಆಲಯದ ಪರವಾಗಿರಲಿಲ್ಲ; ಬಯಲಿಗಾಗಿ ಹಂಬಲಿಸಿದರು, ಬಯಲು ತತ್ವವನ್ನು ಬಿತ್ತಿದರು. ಬಯಲು ವಿಶ್ವಾತ್ಮಕವಾದುದು. ವಚನಕಾರರು ಮನುಷ್ಯನನ್ನು ಮನುಷ್ಯನನ್ನಾಗಿಯೇ ನೋಡಿದರು. ಸಮೃದ್ಧ ಸಮಾಜದ ನಿರ್ಮಾಣದ ಆಶಯದಲ್ಲಿ ಸರ್ವ ವೃತ್ತಿಬಾಂಧವರು ಒಂದಾಗಿ ಅನುಭಾವಗೋಷ್ಠಿ ನಡೆಸಿದ್ದು ಜಗತ್ತಿನಲ್ಲಿಯೇ ಅಪರೂಪವಾದದ್ದು ಎಂದು ಅಭಿಪ್ರಾಯಪಟ್ಟರು.

ಕ್ರಿಸ್ತು ಜಯಂತಿ ಕಾಲೇಜಿನ ಮಾನವ ಸಂಪನ್ಮೂಲ ಕೇಂದ್ರದ ನಿರ್ದೇಶಕರಾದ ರೆ.ಫಾ.ಜೋಶಿ ಮಾಥ್ಯು ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾನವಿಕ ವಿಭಾಗದ ಡೀನರಾದ ಡಾ.ಗೋಪಕುಮಾರ ಎ.ವಿ ಅವರು, ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್. ಅವರು ನಿರೂಪಿಸಿದರು. ವಿಚಾರ ಸಂಕಿರಣದ ಸಂಚಾಲಕರಾದ ಡಾ.ರವಿಶಂಕರ್ ಎ.ಕೆ., ಡಾ.ಸೈಯದ್ ಮುಯಿನ್ ಹಾಗೂ ಸಹಸಂಚಾಲಕರಾದ ಡಾ. ಎಂ. ಭೈರಪ್ಪ ಹಾಗೂ ಡಾ. ಪ್ರೇಮ್‌ಕುಮಾರ್  ಉಪಸ್ಥಿತರಿದ್ದರು.

Prev Post

ರೀಸ್ಟಾರ್ಟ್ ಎಂಬ ಸ್ಫೂರ್ತಿ ಮಂತ್ರ ನೀಡುವ ಸಿನಿಮಾ ’12th ಫೈಲ್’ | ನೈದಿಲೆ

Next Post

ಚಾಣಾಕ್ಷ ನರಭಕ್ಷಕನ ಬೆನ್ನು ಹತ್ತಿದ ರುದ್ರ ಪ್ರಯಾಗದ ಕಥೆ | ನಮಿತಾ ಸಾಲಿಯಾನ್

post-bars

Leave a Comment

Related post