
Gulbarga University: ಗಮನ ಸೆಳೆಯುವ ಗುಲ್ಬರ್ಗಾ ವಿಶ್ವವಿದ್ಯಾಲಯದ, ಕನ್ನಡ ವಿಭಾಗದ ಬರಹಗಾರರ ಫೋಟೋ ಗ್ಯಾಲರಿ
ಗುಲ್ಬರ್ಗಾ: ಈ ಕ್ಯಾಂಪಸ್‌ನಲ್ಲಿ ನೂರಾರು ಮರಗಳಿವೆ. ಆದರೆ, ಅವು ಯಾವುವೂ ಈ ನಾಲ್ಕು ಪುಟ್ಟ ಮರಗಳಷ್ಟು ಥಟ್ಟನೆ ಗಮನ ಸೆಳೆಯುವುದಿಲ್ಲ. ಏಕೆಂದರೆ, ಈ ಮರಗಳ ಎಲೆಗಳು ಮಾಮೂಲಿಗಿಂತ ಹೆಚ್ಚು ದೊಡ್ಡದಾಗಿವೆ. ಅವುಗಳ ಮೇಲೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಸಮಾಜ ಸುಧಾರಕರು, ರಾಷ್ಟ್ರಕವಿಗಳ ಚಿತ್ರಗಳು ಜೀವತಳೆದಿವೆ.
ಹೌದು, ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಆವರಣದಲ್ಲಿ ಕಲಾತ್ಮಕವಾಗಿ ನಿರ್ಮಾಣಗೊಂಡಿರುವ ನಾಲ್ಕು ಕಟ್ಟೆಗಳಲ್ಲಿರುವ ಮರಗಳು ಸಾಹಿತ್ಯಾಸಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ.
ಮರದ ಒಂದು ಎಲೆ ಮೇಲೆ ಬುದ್ಧ, ಮತ್ತೊಂದರ ಮೇಲೆ ಬಸವಣ್ಣ, ಮಗದೊಂದರ ಮೇಲೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕಂಗೊಳಿಸುತ್ತಿದ್ದಾರೆ. ಇನ್ನೊಂದು ಕಟ್ಟೆಯಲ್ಲಿರುವ ಮರದ ಮೇಲೆ ಮೂರು ಎಲೆಗಳಿದ್ದು, ರಾಷ್ಟ್ರಕವಿಗಳಾದ ಎಂ.ಗೋವಿಂದ ಪೈ, ಕುವೆಂಪು, ಜಿ.ಎಸ್.ಶಿವರುದ್ರಪ್ಪ ಅವರ ಚಿತ್ರಗಳಿವೆ. ಮೂರನೇ ಕಟ್ಟೆಯ ಮರದಲ್ಲಿ ಎಂಟು ಎಲೆಗಳಿವೆ. ಅಲ್ಲಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಕುವೆಂಪು, ದ.ರಾ.ಬೇಂದ್ರೆ, ಕೆ.ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ.ಗೋಕಾಕ್, ಯು.ಆರ್.ಅನಂತಮೂರ್ತಿ, ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ ಅರಳಿದ್ದಾರೆ. ನಾಲ್ಕನೇ ಕಟ್ಟೆಯ ಮರದಲ್ಲಿ ಬುದ್ಧ, ಕನಕದಾಸ, ಸಮಾಜ ಸುಧಾರಕ ನಾರಾಯಣ ಗುರು, ವಚನಕಾರ್ತಿ ಅಕ್ಕ ಮಹಾದೇವಿ, ಸಂತ ಶಿಶುನಾಳ ಷರೀಫ, ಕಲಬುರಗಿಯ ತತ್ವ ಪದಕಾರ ಕಡಕೋಳ ಮಡಿವಾಳಪ್ಪ, ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ ಮಹಾರಾಷ್ಟ್ರದ ಜ್ಯೋತಿಬಾ ಫುಲೆ, ದ್ರಾವಿಡ ಚಳವಳಿಯ ನೇತಾರ ರಾಮಸ್ವಾಮಿ ಪೆರಿಯಾರ್ ಹಾಗೂ ಸರ್ವಜ್ಞರು ಮೈದಳೆದಿದ್ದಾರೆ.
ದೃಶ್ಯ ಬೆಳಕು ಸಂಸ್ಥೆಯ ಕೈಚಳಕ
ಸಾಹಿತಿಗಳು, ಸಮಾಜ ಸುಧಾರಕರನ್ನು ನೆನಪಿಸುವ ಈ ಕಟ್ಟೆಗಳನ್ನು ಕಲಬುರಗಿಯ ದೃಶ್ಯ ಬೆಳಕು ಸಂಸ್ಥೆಯ ಕಲಾವಿದರು ಸಾಕಾರಗೊಳಿಸಿದ್ದಾರೆ. ಸ್ಟೀಲ್, ಸಿಮೆಂಟ್, ಫೈಬರ್, ಪೋಮ್‌ಶೀಟ್, ಡಿಜಿಟಲ್ ಪ್ರಿಂಟ್‌ಗಳನ್ನು ಬಳಸಿಕೊಂಡು ಮಿಶ್ರಮಾಧ್ಯಮದಲ್ಲಿ ಕಲಾಕೃತಿಗಳನ್ನು ರೂಪಿಸಲಾಗಿದೆ. ಕಲಾವಿದರಾದ ಬಾಬುರಾವ್ ಎಚ್., ಪರಶುರಾಮ್ ಪಿ. ಹಾಗೂ ಸಹ ಕಲಾವಿದರು ಇವುಗಳನ್ನು ತಯಾರಿಸಿದ್ದಾರೆ. ಬಿಸಿಲಿನ ಪ್ರದೇಶವಾದ ಕಲಬುರಗಿಯಲ್ಲಿ ಈ ಚಿತ್ರಗಳು ಕೆಲಕಾಲದ ಬಳಿಕ ಮಸುಕಾಗುವ ಸಾಧ್ಯತೆಯಿದೆ. ಬಿಸಿಲಿನಿಂದ ರಕ್ಷಿಸುವ ಚಿಂತನೆ ನಡೆದಿದೆ.
ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಈ ಕಟ್ಟೆಗಳ ನಿರ್ಮಾಣ ಯೋಜನೆ ಕಾರ್ಯಗತಗೊಳಿಸಲು ಶ್ರಮಿಸಿದ್ದಾರೆ. ಇದರ ನಿರ್ವಹಣೆಯನ್ನು ಅಧ್ಯಯನ ಸಂಸ್ಥೆಯ ಸಿಬ್ಬಂದಿ ವಹಿಸಿಕೊಂಡಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಈಚನಾಳ ಖಾಜಾವಲಿ, ‘ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಸಿಗಲಿ ಎಂಬ ಉದ್ದೇಶದಿಂದ ಇಂತಹ ವಿಶಿಷ್ಟ ಕಟ್ಟೆಗಳ ನಿರ್ಮಾಣಕ್ಕೆ ಕೈಜೋಡಿಸಿದೆವು. ಇದಕ್ಕಾಗಿ ₹3 ಲಕ್ಷ ಸಂಗ್ರಹಿಸಿ ಕೊಟ್ಟಿದ್ದೇವೆ’ ಎನ್ನುತ್ತಾರೆ.
ಕಲ್ಯಾಣ ಕರ್ನಾಟಕ ಸಾಹಿತಿಗಳ ಗ್ಯಾಲರಿ
ಕನ್ನಡ ಅಧ್ಯಯನ ಸಂಸ್ಥೆಯು ನಾಲ್ಕು ಕಟ್ಟೆಗಳನ್ನು ನಿರ್ಮಿಸುವುದಕ್ಕೂ ಮುನ್ನ ಕಲ್ಯಾಣ ಕರ್ನಾಟಕ ಭಾಗದ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ವಿಭಾಗವನ್ನೇ ಸಂಸ್ಥೆಯಲ್ಲಿ ತೆರೆದಿದೆ. ಈ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಗೀತಾ ನಾಗಭೂಷಣ, ಕುಂ.ವೀರಭದ್ರಪ್ಪ, ಮಕ್ಕಳ ವಿಭಾಗದ ಪ್ರಶಸ್ತಿ ಪಡೆದ ಚಂದ್ರಕಾಂತ ಕರದಳ್ಳಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪಡೆದ ಕವಿ ಆರಿಫ್ ರಾಜಾ, ಮಂಜುನಾಯಕ ಚೆಳ್ಳೂರ, ದಾದಾಪೀರ್ ಜೈಮನ್ ಅವರ ಭಾವಚಿತ್ರಗಳು ಹಾಗೂ ಪ್ರಶಸ್ತಿಗೆ ಆಯ್ಕೆಯಾದ ಅವರ ಕೃತಿಗಳನ್ನು ಇರಿಸಲಾಗಿದೆ.
ಅಲ್ಲದೇ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ, ಪುರಸ್ಕೃತರು, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಸರ್ಕಾರದ ವಿವಿಧ ಅಕಾಡೆಮಿಗಳ ಮಹತ್ವದ ಪ್ರಶಸ್ತಿಗಳನ್ನು ಪಡೆದ ಲೇಖಕರು ಭಾವಚಿತ್ರಗಳು, ಅವರ ವಿವರ ಹಾಗೂ ಕೃತಿಗಳನ್ನು ಇರಿಸಲಾಗಿದೆ.‘ಐರ್ಲೆಂಡ್‌ನ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಾಗ ಅಲ್ಲಿನ ಸಾಹಿತಿಗಳ ಮನೆಗೆ ಹೋಗಿದ್ದೆ. ಅಲ್ಲಿದ್ದ ಗ್ಯಾಲರಿಗಳಲ್ಲಿ ಸಾಹಿತಿಗಳು ಬರೆದ ಪುಸ್ತಕಗಳು, ಜೀವನ ಸಾಧನೆಯನ್ನು ವಿವರಿಸಲಾಗಿತ್ತು. ಅದರಿಂದ ಸ್ಫೂರ್ತಿಗೊಂಡು ನಮ್ಮ ಸಂಸ್ಥೆಯಲ್ಲಿ ಕನ್ನಡದ ಮೇರು ಸಾಹಿತಿಗಳ ಬಗೆಗಿನ ಮಾಹಿತಿಯನ್ನು ವಿದ್ಯಾರ್ಥಿಗಳ ಮಸ್ತಕಕ್ಕಿಳಿಸುವ ಯೋಜನೆಯನ್ನು ಕೈಗೆತ್ತಿಕೊಂಡೆ’ ಎನ್ನುತ್ತಾರೆ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ.
ಕಲ್ಯಾಣ ಸಾಹಿತಿಗಳ ಪರಿಚಯಕ್ಕೆ ವೆಬ್‌ಸೈಟ್
ಕಲ್ಯಾಣ ಕರ್ನಾಟಕದ ಸಾಹಿತಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯೇ ವೆಬ್‌ಸೈಟ್ ರೂಪಿಸಲು ಮುಂದಾಗಿದೆ. ಇದಕ್ಕಾಗಿ ಸಂಸ್ಥೆಯ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದು, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಸಾಹಿತಿಗಳ ಮಾಹಿತಿಯನ್ನು ಕಿರುಪ್ರಬಂಧ ರೂಪದಲ್ಲಿ ನೀಡುವಂತೆ ಸೂಚಿಸಲಾಗಿತ್ತು. ಈಗಾಗಲೇ 300ಕ್ಕೂ ಅಧಿಕ ಸಾಹಿತಿಗಳ ಮಾಹಿತಿ ಲಭ್ಯವಾಗಿದ್ದು, ಶೀಘ್ರವೇ ಸಾಹಿತಿಗಳ ಭಾವಚಿತ್ರ, ಅವರ ವಿವರ ಹಾಗೂ ಅವರು ರಚಿಸಿದ ಸಾಹಿತ್ಯವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.ವಿಶ್ವವಿದ್ಯಾಲಯದ ಈ ಕಾರ್ಯ ಮೆಚ್ಚುವಂತದ್ದು.