ಕನ್ನಡ ಸಾಹಿತ್ಯ ಪರಿಷತ್ತು ಹಳ್ಳಿ ಹಳ್ಳಿಯಲ್ಲಿ ಸಾಹಿತ್ಯದ ಪ್ರಸಾರದ ಕೆಲಸ ಮಾಡುತ್ತಿದೆ: ಡಾ. ಎಂ. ಪಿ. ಶ್ರೀನಾಥ್
ಸುರತ್ಕಲ್ : ಸಾಹಿತ್ಯ ಪ್ರಸರಣಕ್ಕೆ ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಗ್ರಾಮ, ಹೋಬಳಿ ಮಟ್ಟದಲ್ಲಿ ಕನ್ನಡ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಹಳ್ಳಿ ಹಳ್ಳಿಯಲ್ಲಿ ಸಾಹಿತ್ಯದ ಪ್ರಸಾರ ಹಾಗೂ ಸಾಹಿತ್ಯ ಪ್ರತಿಭೆಗಳನ್ನು ಗುರುತಿಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದು ಜಿಲ್ಲಾಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಹೇಳಿದರು.
ಅವರು ಗೋವಿಂದ ದಾಸ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ಘಟಕದ ವತಿಯಿಂದ ಆಯೋಜಿಸಿದ್ದ ಸುರತ್ಕಲ್ ಹೋಬಳಿ ಘಟಕದ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಕುಂತಲಾ ರಮಾನಂದ ಭಟ್, ಸಾಹಿತ್ಯ ಕಾರ್ಯಕ್ರಮಗಳ ಮೂಲಕ ಯುವ ಸಾಹಿತಿಗಳನ್ನು ಬೆಳೆಸಬೇಕು ಎಂದರು. ಇನ್ನು ಹಿರಿಯ ಸಾಹಿತಿ ಶಕುಂತಲಾ ಭಟ್ ಹಳೆಯಂಗಡಿ ಮುಖ್ಯ ಅತಿಥಿಯಾಗಿ ಮಾತನಾಡಿ ಸಾಹಿತ್ಯಾಭಿರುಚಿ ಮೂಡಿಸುವ ಮೂಲಕ ಸಾಹಿತಿಗಳಿಗೆ ಹೆಚ್ಚಿನ ಪ್ರೋತ್ಸಾಹ ಲಭ್ಯವಾಗಬೇಕೆಂದರು.
ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರಿನ ಕೇಂದ್ರಿಯ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಮಾಧವ ಎಂ., ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಪಿ., ಕಾಟಿಪಳ್ಳ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಕೆ. ದಯಾಕರ್ ಶುಭ ಹಾರೈಸಿದರು.
ಗುಣವತಿ ರಮೇಶ್ ಸುರತ್ಕಲ್ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿ, ಹೋಬಳಿ ಹಂತದಲ್ಲಿ ವಿವಿಧ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಹಾಗೂ ಯುವ ಸಮುದಾಯದಲ್ಲಿ ಸಾಹಿತ್ಯಾಸಕ್ತಿ ಮೂಡಿಸಲಾಗುವುದು ಎಂದರು.
ಸುರತ್ಕಲ್ ಹೋಬಳಿ ಘಟಕದ ಗೌರವ ಕಾರ್ಯದರ್ಶಿಯಾಗಿ ಅಕ್ಷತಾ ಸಿ.ಆರ್., ಗೌರವ ಕೋಶಾಧಿಕಾರಿಯಾಗಿ ಅನುರಾಧ ರಾಜೀವ್, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಜಿ. ರಾಮಚಂದ್ರ ರಾವ್, ಸದಸ್ಯರಾಗಿ ವೀಣಾ ಶೆಟ್ಟಿ, ಧನ್ಯ ಕುಮಾರ್, ಡಾ. ಭಾಗ್ಯಲಕ್ಷ್ಮಿ, ವಿನೋದ್ ಕುಮಾರ್, ಮೊಹಮ್ಮದ್ ಇಸ್ಮಾಯಿಲ್, ಶಿಕ್ಷಣ ಇಲಾಖೆಯ ಪ್ರತಿನಿಧಿಯಾಗಿ ಡಾ. ಜ್ಯೋತಿ ಚೇಳಾರು ಅಧಿಕಾರ ಸ್ವೀಕರಿಸಿದರು.
ಮಂಗಳೂರು ತಾಲೂಕು ಕ.ಸಾ.ಪದ ಅಧ್ಯಕ್ಷ ಮಂಜುನಾಥ ಎಸ್. ರೇವಣ್‌ಕರ್ ಸ್ವಾಗತಿಸಿದರು. ಅಕ್ಷತಾ ಸಿ.ಆರ್ ವಂದಿಸಿ, ವೀಣಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.