Back To Top

 ದೇಶಕ್ಕೆ ಸಂವಿಧಾನದ ಅನುಷ್ಠಾನವೇ ‘ಧನ್ವಂತರಿ ಚಿಕಿತ್ಸೆ’ | ಮಾನಸ ಜಿ.

ದೇಶಕ್ಕೆ ಸಂವಿಧಾನದ ಅನುಷ್ಠಾನವೇ ‘ಧನ್ವಂತರಿ ಚಿಕಿತ್ಸೆ’ | ಮಾನಸ ಜಿ.

ಮೂಲ ಕಥನ: ಕುವೆಂಪು
ರಂಗರೂಪ ಮತ್ತು ನಿರ್ದೇಶನ: ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ
ಅಭಿನಯ: ರಂಗಾಂತರಂಗ ತಂಡ, ಕನ್ನಡ ವಿಭಾಗ, ಕ್ರಿಸ್ತು ಜಯಂತಿ ಕಾಲೇಜು ಸ್ವಾಯತ್ತ, ಬೆಂಗಳೂರು

ನಮ್ಮ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಏಪ್ರಿಲ್ 8 ರಂದು ಕನ್ನಡ ವಿಭಾಗದ ಕನ್ನಡ ಸಾಹಿತ್ಯ ವೇದಿಕೆಯ ಮೂಲಕ ರಂಗಾಂತರಂಗ ಎಂಬ ರಂಗಭೂಮಿ ಅಭಿರುಚಿ ಹೊಂದಿರುವ ವಿದ್ಯಾರ್ಥಿ ಕಲಾವಿದರ ತಂಡದಿಂದ ‘ಧನ್ವಂತರಿ ಚಿಕಿತ್ಸೆ’ ಎಂಬ ನಾಟಕವು ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿತು. ಕುವೆಂಪು ವಿರಚಿತ ಕಥೆಯಾದ ‘ಧನ್ವಂತರಿ ಚಿಕಿತ್ಸೆ’ಯನ್ನು ಆಧರಿಸಿ ಮೂಲಕಥೆಯ ಆಶಯಕ್ಕೆ ಯಾವುದೇ ಧಕ್ಕೆಯಾಗದಂತೆ ರಂಗರೂಪವನ್ನು ರಚಿಸಿ, ನಿರ್ದೇಶನ ಮಾಡಿದವರು ನಮ್ಮ ಪ್ರೀತಿಯ ಕನ್ನಡ ಪ್ರಾಧ್ಯಾಪಕರಾದ ಡಾ. ಕುಪ್ಪನಹಳ್ಳಿ ಎಂ. ಭೈರಪ್ಪ ಅವರು. ಮಹಾಕವಿ ಕುವೆಂಪು ಅವರು ಬರೆದಿರುವ ಕಥೆಗಳಲ್ಲಿ ಆಯ್ದ ಕಥೆ ಹಾಗೂ ಕಥನ ಗೀತೆಗಳನ್ನು ಆಧರಿಸಿ ಈಗಾಗಲೇ ‘ಯಾರು ಅರಿಯದವರು’ ಎಂಬ ಕಿರುನಾಟಕವನ್ನು ರಚಿಸಿದ್ದಾರೆ. ಇದರಲ್ಲಿ ಒಂದು ದೃಶ್ಯ ಮಾತ್ರವಾಗಿದ್ದ ‘ಧನ್ವಂತರಿ ಚಿಕಿತ್ಸೆ’ಯನ್ನು ಈ ಕಾಲಕ್ಕೆ ತಕ್ಕಂತೆ ವಿಸ್ತರಿಸಿ ವಿಶಿಷ್ಟ ರಂಗಪ್ರಯೋಗವಾಗಿಸಿದ್ದಾರೆ.   

2024ರ ಈ ವರ್ಷದ ರಂಗಾಂತರಂಗ ತರಬೇತಿಗೆ ಕರೆಕೊಟ್ಟ ಕೂಡಲೇ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹಿಗಳಾಗಿ ತರಬೇತಿಗೆ ಹಾಜರಾದರು. ತಮ್ಮ ಅಭಿನಯಾಭಿರುಚಿಯನ್ನು ಸಂದರ್ಶಿಸಿ ಅವರ ಆಸಕ್ತಿಗೆ ಪೂರಕವಾಗುವಂತೆ ಪಾತ್ರಗಳನ್ನು ನೀಡಲಾಯಿತು. ತರಬೇತಿಗೆ ಆಸಕ್ತಿಯಿಂದ ಬಂದ ಎಲ್ಲಾ ವಿದ್ಯಾರ್ಥಿಗಳಿಗೂ ಸೂಕ್ತ ಜವಾಬ್ದಾರಿಗಳನ್ನು ಹಂಚಲಾಯಿತು. ರಂಗಾಂತರಂಗ ತಂಡದ ಎಲ್ಲಾ ಕಲಾವಿದರ ಮನದಲ್ಲಿ ಜೀವನಪೂರ್ತಿ ಕಾಡುವುದು ತರಬೇತಿಗೆ ಎಂದೇ ಮೀಸಲಿಟ್ಟ ಸುದಿನಗಳು ಹಾಗೂ ತರಬೇತಿಯ ಸುಂದರ ಕ್ಷಣಗಳು.

‘ಆಧುನಿಕ ಕನ್ನಡ ನಾಟಕಗಳಲ್ಲಿ ಸಾಂಸ್ಕೃತಿಕ ಸಂಘರ್ಷ’ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಪಿ.ಎಚ್.ಡಿ ಪದವಿಯನ್ನು ಪಡೆದಿರುವ ಡಾ.ಭೈರಪ್ಪ ಅವರು ಪ್ರದರ್ಶನಪೂರ್ವದ ದಿನಗಳಲ್ಲಿ ಸಹಜಾಭಿವ್ಯಕ್ತಿಯ ಕೆಲವು ರಂಗ ಚಟುವಟಿಕೆಗಳ ಮೂಲಕ ಅತ್ಯಂತ ಅಚ್ಚುಕಟ್ಟಾಗಿ ಆರಂಭಿಸಿದರು. ಈ ಚಟುವಟಿಕೆಗಳು ಎಲ್ಲಾ ವಿದ್ಯಾರ್ಥಿಗಳ ಉತ್ಸಾಹ ಪಾಲ್ಗೊಳ್ಳುವಿಕೆಗೆ ಕಾರಣವಾಗುವುದಲ್ಲದೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲೆಯನ್ನು ಹಾಗೂ ಅವರ ಪ್ರತಿಭೆಗಳನ್ನು ಹೊರ ತರಲು ಒಂದು ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಟ್ಟಿತ್ತು. ರಂಗ ಚಟುವಟಿಕೆಗಳ ಭಾಗವಾಗಿ ಸಣ್ಣಪುಟ್ಟ ಸವಾಲುಗಳನ್ನು ನೀಡಿದ್ದು, ವಿದ್ಯಾರ್ಥಿಗಳು ಅದನ್ನು ಯಶಸ್ವಿಯಾಗಿ ಪೂರೈಸಿ ಸಂಭ್ರಮಿಸುತಿದ್ದರು. ಈ ತರಬೇತಿಯ ದಿನಗಳು ನಿರಂತರ ಕಲಿಕೆಗೆ ದಾರಿಯಾಗಿತ್ತು. ಸಾಕಷ್ಟು ಹೊಸ ವಿಚಾರಗಳನ್ನು ಕಲಿತು ರಂಗಪ್ರಯೋಗಕ್ಕೆ ಹಾಗೂ ತಮ್ಮ ಜೀವನಕ್ಕೂ ಅಳವಡಿಸಿಕೊಂಡಿದ್ದನ್ನು ಕಾಣಬಹುದಾಗಿತ್ತು. ಈ ರಂಗಪ್ರಯೋಗದ ತರಬೇತಿ ಎಲ್ಲರಿಗೂ ಹೊಸ ಹುರುಪನ್ನು ತಂದುಕೊಟ್ಟಿದೆಯೆಂದರೆ ಅತಿಶಯೋಕ್ತಿಯೇನಲ್ಲ.

ಆರಂಭಿಕ ರಂಗತರಬೇತಿಯ ಚಟುವಟಿಕೆಗಳ ನಿರ್ವಹಣೆಯನ್ನು ನಾಟಕ ನಿರ್ದೇಶಕರಾದ ಡಾ.ಭೈರಪ್ಪ ಅವರು ಯಶಸ್ವಿಯಾಗಿ ನಡೆಸಿ ಮುಂದಿನ ತರಬೇತಿಯ ಭಾಗವಾಗಿ ಕುವೆಂಪು ವಿರಚಿತ ‘ಧನ್ವಂತರಿ ಚಿಕಿತ್ಸೆ’ ಕಥೆಯನ್ನು ಓದು-ಸಂವಾದದ ಮೂಲಕ ಕಥೆಯನ್ನು ವಿದ್ಯಾರ್ಥಿಗಳಿಗೆ ಅರ್ಥಮಾಡಿಸಿದರು. ನಂತರ ಎಲ್ಲಾ ವಿದ್ಯಾರ್ಥಿಗಳಿಗೂ ಕಥೆಯ ಆಶಯ ಸ್ಪಷ್ಟವಾಗಿದ್ದನ್ನು ಕಂಡು ಅಭಿನಯ ತರಬೇತಿಗೆ ಸಜ್ಜಾದರು. ರಂಗಚಟುವಟಿಕೆಗಳ ಸಮಯದಲ್ಲಿ ಎಲ್ಲರನ್ನೂ ಸೂಕ್ಷ್ಮವಾಗಿ ಗಮನಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಪಾತ್ರವನ್ನು ವಹಿಸಿದರು. ನೃತ್ಯ ಹಾಗೂ ಸಂಗೀತದಲ್ಲಿ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಅವುಗಳ ಜವಾಬ್ದಾರಿಯನ್ನು ನೀಡಲಾಯಿತು. ರಂಗಾಂತರಂಗ ತಂಡ ಅನುಭವಿ ಮತ್ತು ಅನಾನುಭವಿಗಳನ್ನು ಸಹ ಒಳಗೊಂಡಿತ್ತು.

‘ಧನ್ವಂತರಿ ಚಕಿತ್ಸೆ’ಯು ಆಕರ್ಷಕವಾದ ರಂಗರೂಪವಾಗಿದೆ. ಭಾರತದಲ್ಲಿ ಇಂದಿಗೂ ಜೀವಂತವಾಗಿರುವ ಸಾಮ್ರಾಜ್ಯಶಾಹಿತ್ವದ ಪಳಿಯುಳಿಕೆಗಳು, ರೂಪಾಂತರಿತ ಶೋಷಣೆ, ಮೌಢ್ಯ ಹೇರಿಕೆ, ಸಾಮಾಜಿಕ ದೌರ್ಜನ್ಯ, ರೈತವಿರೋಧಿ ನಡಾವಳಿ ಹಾಗೂ ದುರಾಸೆಯ ಜಾಗತೀಕರಣ ಮೊದಲಾದ ದುರಂತಗಳು ಕುವೆಂಪು ಕಥನದಲ್ಲಿ ಅನಾವರಣಗೊಳ್ಳುವ ಬಗೆಯನ್ನು ಈ ರಂಗಪ್ರಯೋಗದಲ್ಲಿ ದರ್ಶಿಸಲಾಗಿದೆ. ನಾಟಕದ ಶುರುವಿನಲ್ಲಿ ‘ಭೂತಾಯಿ ಮಾತಾಯಿ ಜ್ಯೋತೆಮ್ಮ ತಾಯಿ’ ಎಂಬ ರಂಗಗೀತೆಯ ಮೂಲಕ ಜ್ಯೋತೆಮ್ಮನವರು ಪ್ರವೇಶಿಸುತ್ತಾರೆ.

ಮಾನವ ಜೀವಗಳ ಅಂತಃಸಾಕ್ಷಿ ಪ್ರತಿನಿಧಿಗಳಾಗಿ ಪ್ರತಿಧ್ವನಿಗಳಾಗಿ ಕಾಣಿಸಿಕೊಳ್ಳುವ ಜ್ಯೋತೆಮ್ಮನವರು ಕುವೆಂಪು ವ್ಯಕ್ತಿತ್ವ ಹಾಗೂ ಸಾಹಿತ್ಯದ ಆಂತರ್ಯವನ್ನು ರಂಗದಲ್ಲಿ ಅರ್ಥಪೂರ್ಣವಾಗಿ ನಿರೂಪಿಸುತ್ತಾರೆ. ಆರು ಜನ ಜ್ಯೋತೆಮ್ಮನವರು ಸಂಕ್ಷಿಪ್ತವಾಗಿ ತಮ್ಮ-ತಮ್ಮಲ್ಲೆ ಕುವೆಂಪು ಅವರನ್ನು ವಿವರಿಸಿಕೊಳ್ಳುತ್ತಾರೆ. ಕಾಲ-ಕಾಲದ, ದೇಶ-ದೇಶದ, ಜೀವ-ಜೀವದ ವ್ಯಥೆಗಳ ಕಥೆ ಕಟ್ಟಿದ ಕುವೆಂಪುರವರನ್ನು ತಮ್ಮ ನಾಲಿಗೆ ಮೇಲೆ ನಡೆದಾಡಲು ವಿನಂತಿಸಿಕೊಳ್ಳುತ್ತಾರೆ. ಹೀಗೆ ಶುರುವಾಗುವ ನಾಟಕವು ಮುಂದಿನ ದೇವಲೋಕ, ನಗರದ ಥಳುಕು-ಬಳುಕಿನ ಬದುಕು, ಅಧಿಕಾರಮುಖಿ ರಾಜಕಾರಣ, ಹಳ್ಳಿಯ ರೈತದರ್ಶನ, ಧನ್ವಂತರಿ ಚಿಕಿತ್ಸೆಯುಳ್ಳ ದೃಶ್ಯಗಳಿಂದ ವಿಶಿಷ್ಟವಾಗಿ ಮೂಡಿಬಂದಿದೆ.

ಅಪ್ಸರೆಯರ ಸುಂದರ ನೃತ್ಯದಿಂದ ಹಾಗೂ ಪಾನಲೀಲೆಯಲ್ಲಿ ಮೈಮರೆತ್ತಿರುವ ಸಭೆಯಲ್ಲಿ ವಿಶ್ವಾಮಿತ್ರ, ನಕ್ಷತ್ರಿಕ, ವಸಿಷ್ಠರು ಇರುತ್ತಾರೆ. ಎಲ್ಲರೂ ಆನಂದಿಸುತ್ತಿರಬೇಕಾದರೆ ವಿಶ್ವಾಮಿತ್ರ ಎಲ್ಲಿಂದಲೋ ಭೀಕರವಾದ ಶಬ್ದ ಕೇಳಿ ಬರುತ್ತಿರುವುದಾಗಿ, ಅದನ್ನು ವಸಿಷ್ಠರ ಬಳಿ ಚರ್ಚಿಸಿದಾಗ ಬೇರೆ ಯಾರಿಗೂ ಈ ಶಬ್ದ ಕೇಳಿಸುತ್ತಿಲ್ಲ ಎಂದು ವಸಿಷ್ಠ ಹಾಗೂ ಇಂದ್ರ ಇದು ವಿಶ್ವಾಮಿತ್ರನ ಮನೋಭ್ರಾಂತಿ ಇರಬೇಕೆಂದು ವಿಶ್ವಾಮಿತ್ರನನ್ನು ಟೀಕಿಸಿ ಅವನ ಕೋಪಕ್ಕೆ ಕಾರಣರಾಗುತ್ತಾರೆ. ಲೋಕಸಂಚಾರಿಯಾದ ನಾರದನು ಭೀಕರ ನರಳು ದ್ವನಿ ಭೂಲೋಕದಿಂದಲೇ ಬರುತ್ತಿರುವುದಾಗಿ ಸಾಬೀತುಪಡಿಸುತ್ತಾನೆ.

ನಾರದರಿಗೆ ವಂದಿಸುತ್ತಾ ನಕ್ಷತ್ರಿಕನನ್ನು ಜೊತೆಗೂಡಿ ಭೂಲೋಕಕ್ಕೆ ಹೊರಡಲು ವಿಶ್ವಾಮಿತ್ರ ಸಜ್ಜಾಗುತ್ತಾನೆ. ಈ ಮಧ್ಯೆ ನಕ್ಷತ್ರಿಕ ಅಪ್ಸರೆಯರ ಜೊತೆ ತಲ್ಲೀನನಾಗಿದ್ದ ದೃಶ್ಯ ಹಾಸ್ಯರೂಪದ ಮನರಂಜನೆಯಾಗಿ ಎಲ್ಲರ ಗಮನವನ್ನು ಸೆಳೆಯುತ್ತದೆ. ಇದಲ್ಲದೆ ಭೂಲೋಕಕ್ಕೆ ಹೊರಡಲು ಸಾಮಾನ್ಯ ವಸ್ತ್ರಗಳಿದ್ದರೆ ಉತ್ತಮ ಎಂದು ಸಲಹೆ ನೀಡುವ ನಕ್ಷತ್ರಿಕನ ಚಾತುರ್ಯತೆ ತನ್ನ ಗುರುವನ್ನು ಮೆಚ್ಚಿಸುತ್ತದೆ. ಈ ದೃಶ್ಯದಲ್ಲಿ ಬೇರಾರಿಗೂ ಇರದ ಕಳಕಳಿ ವಿಶ್ವಾಮಿತ್ರನಲ್ಲಿ ಕಂಡುಬರುವುದು ಗಮನಾರ್ಹ.

ಸಾಮಾಜಿಕ ಕಳಕಳಿ ಉಳ್ಳಂತಹ ವ್ಯಕ್ತಿಗಳನ್ನು ವಿಶ್ವಾಮಿತ್ರ ಪ್ರತಿಬಿಂಬಿಸುತ್ತಿರುವುದನ್ನು ಕಾಣಬಹುದು. ಶ್ರೀಸಾಮಾನ್ಯರ ವೇಷದಲ್ಲಿ ಭೂಲೋಕಕ್ಕೆ ಬಂದು ಇಳಿದಾಗ ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ದೌರ್ಜನ್ಯಗಳನ್ನು, ವಿಲಾಸಿ ಜೀವನಕ್ಕೆ ಶರಣಾಗಿರುವ ಯುವ ಪೀಳಿಗೆಯನ್ನು, ಪ್ರತಿ ಹಂತದಲ್ಲೂ ಮೆರೆಯುವ ಭ್ರಷ್ಟಾಚಾರ, ತಮ್ಮ ತಮ್ಮ ಸ್ವಾರ್ಥಕ್ಕೆ ಮುಗ್ಧರನ್ನು ಬಳಸಿಕೊಳ್ಳುವ ಕೊಳಕು ರಾಜಕೀಯ ತಂತ್ರಗಳು ಮುಂತಾದ ವಾಸ್ತವಿಕ ಸಂಗತಿಗಳನ್ನು ಈ ದೃಶ್ಯದಲ್ಲಿ ತೋರಿಸಲು ಪ್ರಯತ್ನಿಸಲಾಗಿದೆ. ಮೂಲಕಥೆಯಲ್ಲಿ ವಾಚ್ಯವಾಗಿ ಇರದ ಅಥವಾ ಧ್ವನ್ಯಾತ್ಮಕವಾಗಿ ಇರಬಹುದಾದ ಸೂಕ್ಷ್ಮ ಸಂಗತಿಗಳನ್ನು ಪ್ರಸ್ತುತ ಕಾಲಘಟ್ಟಕ್ಕೆ ಸರಿಹೊಂದುವಂತೆ ಸನ್ನಿವೇಶಗಳನ್ನು ಸೃಷ್ಟಿಸಿ ಪ್ರಯೋಗಿಸಿರುವ ನಾವೀನ್ಯತೆಯು ಎಲ್ಲರ ಮನಸ್ಸಿಗೆ ಹತ್ತಿರವಾಗುತ್ತದೆ. ಇವುಗಳೆಲ್ಲವನ್ನು ಗಮನಿಸಿದ ವಿಶ್ವಾಮಿತ್ರ ಭೂಲೋಕವನ್ನು ಆವರಿಸಿಕೊಂಡಿರುವ ದುಃಸ್ಥಿತಿಯನ್ನು ನೆನೆದು ಕೋಪಗೊಳ್ಳುವುದನ್ನು ನೋಡಬಹುದು.

ಮುಂದೆ ನರಳುದನಿಯ ಹುಡುಕಾಟದಲ್ಲಿ ನಕ್ಷತ್ರಿಕ ಹಾಗೂ ವಿಶ್ವಾಮಿತ್ರ ಕಾಡುಗಳನ್ನು ಅಲೆದು ನರಳುಧ್ವನಿ ಬರುತ್ತಿರುವ ಪ್ರದೇಶವನ್ನು ಕಂಡುಹಿಡಿಯುತ್ತಾರೆ. ಕಾಡಿನಲ್ಲಿ ಅಲೆಯುತ್ತಿರುವಾಗ ಹಿನ್ನೆಲೆಯಲ್ಲಿ ಮೂಡಿಬಂದ ‘ಎಲ್ಲಿ ಹೋದವು ಕಣ್ಣಿಗೆ ಕಾಣದಾದವು’ ಹಾಡು ಅತ್ಯಂತ ಭಾವುಕತೆಯಲ್ಲಿ ಮನದುಂಬಿಕೊಂಡಿತು. ಕಾಡಿಗೇ ಕೈಚಾಚಿಕೊಂಡಂತಿದ್ದ ಹಳ್ಳಿಯ ಒಂದು ಮೂಲೆ ಪ್ರದೇಶದಲ್ಲಿ ಗುಡಿಸಲು ಕಂಡು ಅಲ್ಲಿಂದಲೇ ನರಳುಧ್ವನಿ ಬರುವುದಾಗಿ ತಿಳಿಯುತ್ತದೆ. ಗುಡಿಸಿಲಿನೊಳಗೆ ರೈತನ ಹೆಂಡತಿಯ ರೋದನೆ, ರೈತನ ವಿಪರೀತದ ನರಳು ಧ್ವನಿ, ಮಗಳ ಅಸಹಾಯಕತೆ, ಕಣ್ಣು ಕಾಣದ ರೈತನ ಅಮ್ಮನ ಸಂಕಟಗಳು ಎಲ್ಲರನ್ನೂ ಶೋಕಿಸುವಂತೆ ಮಾಡುತ್ತವೆ.

ವಿಶ್ವಾಮಿತ್ರನನ್ನು ಹಾಗೂ ನಕ್ಷತ್ರಿಕರನ್ನು ಕಂಡು ರೈತನ ಹೆಂಡತಿ ಅವರನ್ನು ಕಂದಾಯ ವಸೂಲಿ ಮಾಡುವವರೆಂದು ಭಾವಿಸಿ ತಮ್ಮ ಅಸಹಾಯಕತೆಯನ್ನು, ಆರ್ಥಿಕ ದುಸ್ಥಿತಿಯನ್ನು ಬಿಚ್ಚಿಟ್ಟು ರೋಧಿಸುತ್ತಾಳೆ. ಶ್ರೀಸಾಮಾನ್ಯರ ವೇಷದಲ್ಲಿದ್ದ ವಿಶ್ವಾಮಿತ್ರ ಹಾಗೂ ನಕ್ಷತ್ರಿಕ ರೈತನ ರೋಗವನ್ನು ನಿವಾರಿಸಲು ಬಂದಿದ್ದೇವೆ ಎಂದು ಹೇಳಿದಾಗ ಆಕೆಯ ಗಂಡನ ಪರಿಸ್ಥಿತಿಯನ್ನು ವಿವರಿಸುತ್ತಾಳೆ. ಈ ಕುರಿತು ವಿಶ್ವಾಮಿತ್ರ ಚಿಂತಿಸಿ ನಕ್ಷತ್ರಿಕನಿಗೆ ವೈದ್ಯರನ್ನು ಹಾಗೂ ಜೋಯಿಸರನ್ನು ಕರೆ ತರಲು ಹೇಳುತ್ತಾನೆ. ತೀರ ಗಂಭೀರವಾದ ಕಾಯಿಲೆ ಏನು ಇಲ್ಲವೆಂದು ನೆಪ ಒಡ್ಡಿ ನಕ್ಷತ್ರಿಕದಿಂದ ಹಣ ಪಡೆದು ಔಷಧಿಯ ಚೀಟಿಯನ್ನು ನೀಡಿ ಹೋಗುವ ವೈದ್ಯರನ್ನು ಹಾಗೂ ಹುಸಿ ಮಂತ್ರವನ್ನು ಪಠಿಸಿ ರೈತನೊಳಗೆ ಹೊಕ್ಕಿದ್ದ ಭೂತವನ್ನು ಸೆರೆಹಿಡಿಯಲಾಗಿದೆ ಎಂದು ಹೇಳುವ ಮಂತ್ರವಾದಿಯನ್ನು ಸೂಕ್ಷ್ಮವಾಗಿ ಹಾಗೂ ವಿನೋದ ರೂಪದಲ್ಲಿ ತೋರಿಸುವ ಪ್ರಯತ್ನ ಪ್ರಸ್ತುತ ಸಮಾಜದಲ್ಲಿ ಆಚರಿಸುತ್ತಿರುವ ಮೌಢ್ಯಗಳನ್ನು ತಮ್ಮ ತಮ್ಮ ಸ್ವಾರ್ಥಕ್ಕಾಗಿ ಜನರ ಮನಸ್ಸಿನಲ್ಲಿ ಭಯದ ಮೂಲಕ ಬಿತ್ತಿ ನೆಮ್ಮದಿಯನ್ನು ಹಾಳು ಮಾಡುವ ರೀತಿಯನ್ನು ಬಿಂಬಿಸುತ್ತದೆ.

ತದನಂತರದಲ್ಲಿ ವಿಶ್ವಾಮಿತ್ರ ಗಾಢವಾಗಿ ಯೋಚಿಸಿ ಈ ಕಾಯಿಲೆಗೆ ಸೂಕ್ತ ಪರಿಹಾರ ನೀಡುವುದು ವಿಶ್ವವೈದ್ಯ ಧನ್ವಂತರಿ ಒಬ್ಬನೇ ಎಂದು ನಿರ್ಣಯಿಸಿ ನಕ್ಷತ್ರಿಕನಿಗೆ ಕರೆದುಕೊಂಡು ಬರಲು ಹೇಳುತ್ತಾನೆ. ಧನ್ವಂತರಿ ಆಗಮಿಸುವಾಗ ಹಿನ್ನೆಲೆಯಲ್ಲಿ ‘ಬಾ ಇಲ್ಲಿ ಸಂಭವಿಸು, ಇಂದೆನ್ನ ಹೃದಯದಲಿ ನಿತ್ಯವೂ ಅವತರಿಪ ಸತ್ಯಾವತಾರ..’ ಹಾಡು ಪ್ರಸ್ತುತವಾಗುತ್ತಿದ್ದಂತೆ ರಂಗದ ವಿವಿಧ ಮೂಲೆಗಳಿಂದ ಜ್ಯೋತೆಮ್ಮನವರು ಕುಣಿಯುತ್ತಾ ಧನ್ವಂತರಿಯನ್ನು ಸ್ವಾಗತಿಸುತ್ತಾರೆ. ಅಚ್ಚರಿಯೆಂದರೆ, ಧನ್ವಂತರಿಯಂತೆ ಕಾಣಿಸಿಕೊಳ್ಳುವವರು ಕುವೆಂಪುವಿನಂತೆ ಕಾಣುವುದು ವಿಶೇಷವಾಗಿತ್ತು. ‘ಕುವೆಂಪು ಅವರ ಸಮಸ್ತ ಸಾಹಿತ್ಯವೂ ಈ ಲೋಕದ ಸಂಕಟಗಳಿಗೆ ಧನ್ವಂತರಿ ಚಿಕಿತ್ಸೆಯಾಗಿದೆ’ ಎಂಬ ಧ್ವನಿಯನ್ನು ರಂಗರೂಪದಲ್ಲಿ ಡಾ.ಭೈರಪ್ಪ ಅವರು ತಂದಿರುವುದು ಅರ್ಥಪೂರ್ಣವಾಗಿದೆ. ‘ಧನ್ವಂತರಿಯ ರೂಪದಲ್ಲಿರುವ ಕುವೆಂಪು’ ಪ್ರವೇಶ ಪಡೆಯುವುದೇ ಒಂದು ರೋಚಕ ಅನುಭವ.

ಇವುಗಳ ನಡುವೆ ಕಣ್ಣು ಕಾಣದ ಅಮ್ಮನಿಗೆ ತನ್ನ ಮಗನನ್ನು ಯಾರೇನು ಮಾಡುತ್ತಿದ್ದಾರೆ, ಯಾರು ನೋಡುತ್ತಿದ್ದಾರೆ ಎಂಬ ಕಾಳಜಿಯ ಕುತೂಹಲ ಎಲ್ಲಾ ತಾಯಂದಿರ ಮಮತೆ ಹೃದಯವನ್ನು ಬಿಂಬಿಸುತ್ತದೆ. ರೋಮಾಂಚನಗೊಳಿಸುವ ಹಾಡು ಹಾಗೂ ಕುವೆಂಪು ಪ್ರವೇಶ ಎಲ್ಲರನ್ನೂ ಸ್ತಬ್ದಗೊಳಿಸಿತ್ತು. ನರಳುತ್ತಿದ್ದ ರೈತನನ್ನು ಧನ್ವಂತರಿ ಪರೀಕ್ಷಿಸಿ ರೈತನ ರೋಗವನ್ನು ಬರೆದು ವಿಶ್ವಾಮಿತ್ರನಿಗೆ ಹಾಗೂ ನಕ್ಷತ್ರಿಕನಿಗೆ ಕೊಡುತ್ತಾನೆ. ರೈತನ ಬೆಂಬಿಡದ ಕಾಯಿಲೆಗೆ ‘ಭ್ರಷ್ಟಾಚಾರ’, ‘ಜಾತಿಯತೆ’, ‘ಮತೀಯತೆ’, ‘ಅಧಿಕಾರದ ಮದ’, ‘ಅತಿಸ್ವಾರ್ಥ’, ‘ವಿಶ್ವಾಸದ್ರೋಹ’ ಮೊದಲಾದವು ಕಾರಣವೆಂದು ತಿಳಿದುಬರುತ್ತದೆ. ವಿಶ್ವಾಮಿತ್ರ ಇದು ದೈಹಿಕ ರೋಗವಲ್ಲ ಎಂದು ಹೇಳಿದಾಗ ನಕ್ಷತ್ರಿಕ ಆತ್ಮದ ಕಾಯಿಲೆಯೇ? ಎಂದು ಪ್ರಶ್ನಿಸುತ್ತಾನೆ. ಇವು ಯಾವುದು ಅಲ್ಲ ಎಂದು ಹೇಳಿ, ‘ರೈತರ ಎದೆಯ ಮೇಲೆ ಸಮಸ್ತ ಚಕ್ರಾಧಿಪತ್ಯವೂ ನಿಂತಿದೆಯಲ್ಲ’ ಹಾಗೂ ಅವರು ನೋಡಿದ ನಗರ ಜೀವನವೇ ರೈತನ ಮೇಲೆ ನರ್ತಿಸುತ್ತಿರುವುದಾಗಿ ಬೇಸರಗೊಂಡು ರೈತನ ಎದೆಯ ಮೇಲಿರುವ ಈ ಭಾರವನ್ನು ತೆಗೆದು ಹಾಕಿದರೆ ಅವನ ಕಾಯಿಲೆ ಸಂಪೂರ್ಣವಾಗಿ ವಾಸಿಯಾಗುವುದೆಂದು ಹೇಳುತ್ತಾನೆ.

ಹೀಗೆ ಮಾಡುವ ಮೂಲಕ ಸಮಾಜದಲ್ಲಿ ಅವ್ಯವಸ್ಥೆ ಮೂಡಬಹುದು ಎಂಬುದಾಗಿ ನಕ್ಷತ್ರಿಕ ಆತಂಕವನ್ನು ವ್ಯಕ್ತಪಡಿಸುತ್ತಾನೆ. ಆಗ, ‘ರೈತನ ರೋಗ ನಿವಾರಣೆಯಾದರೆ, ಆತನೇ ದೃಢಕಾಯನಾಗಿ ರಾಜ್ಯದ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತು ಕಾಪಾಡುತ್ತಾನೆ’ ಎಂದು ವಿಶ್ವಾಮಿತ್ರ ಸಮರ್ಥಿಸಿಕೊಳ್ಳುತ್ತಾನೆ. ‘ಭಾ ಇಲ್ಲಿ ಸಂಭವಿಸು…..’ ಹಾಡು ಮುಂದುವರೆಯುತ್ತಾ ಜ್ಯೋತೆಮ್ಮಗಳು ರುದ್ರನರ್ತನ ಮಾಡುತ್ತಾ ರೈತನ ಎದೆಯ ಭಾರವನ್ನು ಎತ್ತಿಬಿಸಾಕುತ್ತಾರೆ. ಇದಾದ ಕೂಡಲೇ ರೈತನು ಚೇತರಿಸಿಕೊಂಡಾಗ, ಧನ್ವಂತರಿಯೇ ಕೈಹಿಡಿದು ಎತ್ತಿನಿಲ್ಲಿಸುತ್ತಾನೆ. ತನ್ನನ್ನು ಬದುಕಿಸಿದ ಬೆಳಕಿನ ಕಿರಣಗಳಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತಾ ಎತ್ತುಗಳನ್ನು ಕರೆದು ಕೃಷಿಕಾರ್ಯಕ್ಕೆ ಸಜ್ಜಾಗುತ್ತಾನೆ. ಹಿನ್ನೆಲೆಯಲ್ಲಿ “ನೇಗಿಲಯೋಗಿ” ಹಾಡು ಮೂಡಿಬಂದು ಈ ದೃಶ್ಯಕ್ಕೆ ಹೆಚ್ಚು ಶೋಭೆ ತರುವುದಲ್ಲದೆ ರೈತನ ಮಹತ್ವವನ್ನು ಹೇಳುವ ಮೂಲಕ ರೈತದರ್ಶನವನ್ನು ಸಾರ್ಥಕವಾಗಿ ಒಡಮೂಡಿಸಿತು.

ಕುವೆಂಪು ರೂಪದಲ್ಲಿದ್ದ ಧನ್ವಂತರಿ ಅಥವಾ ಧನ್ವಂತರಿ ರೂಪದಲ್ಲಿದ್ದ ಕುವೆಂಪು ತಮ್ಮ ಕೈಯಲ್ಲಿ ಹಿಡಿದಿದ್ದ ವಿಶ್ವಚಿಕಿತ್ಸಕ ಪುಸ್ತಕವು ರೈತನ ಮಗಳ ಕೈಗೆ ನೀಡುವಾಗ ಅದು ‘ಭಾರತ ಸಂವಿಧಾನ’ವಾಗಿ ಕಾಣುತ್ತದೆ. ಅರ್ಥಾತ್ ಲೋಕಮುಖಿ ಚಿಂತಕರಿಂದ ಮಹೋನ್ನತ ಗ್ರಂಥವೊಂದು ಬೆಳಕಿನ ದೀಪದಂತೆ ರೈತನ ಮಗಳ ಕೈಗೆ ಬರುತ್ತದೆ. ಆ ಮಹಾಪುಸ್ತಕವನ್ನು ಓದುತ್ತಿರುವ ರೈತನ ಮಗಳನ್ನು ಕಂಡು ರೈತ ಹಾಗೂ ಆತನ ಕುಟುಂಬದವರು ಖುಷಿಪಡುತ್ತಾರೆ. ಭಾರತ ಸಂವಿಧಾನ ಪುಸ್ತಕವನ್ನು ಓದುತ್ತಾ ರೈತರ ಮಗಳು ತನ್ನ ಗೆಳೆಯರನ್ನು ಕರೆದು ತಾನು ತಿಳದ ಜ್ಞಾನವನ್ನು ಹಂಚುತ್ತಾಳೆ. ಕೊನೆಯದಾಗಿ, ಭಾರತದ ಸಂವಿಧಾನದ ಪೀಠಿಕೆಯನ್ನು ಎಲ್ಲರಿಗೂ ತಿಳಿಸುವಂತೆ ಓದತೊಡಗುತ್ತಾಳೆ. ಸರ್ವಜನ ಸಮತೆ ಹಾಗೂ ಸುರಕ್ಷತೆಯ ಆಶಯ ಹೊಂದಿರುವ ಭಾರತ ಸಂವಿಧಾನದ ಪೀಠಿಕೆಯನ್ನು ಎಲ್ಲರೂ ಪುನರುಚ್ಚಾರ ಮಾಡುತ್ತಿದಂತೆ, ಹಿನ್ನೆಲೆಯಲ್ಲಿ ಸಂವಿಧಾನ ಪೀಠಿಕೆಯ ಗೀತೆಯನ್ನು ಪ್ರಸ್ತುತಪಡಿಸಲಾಗುತ್ತದೆ. ವೇದಿಕೆ ಮೇಲಿದ್ದ ಎಲ್ಲರೂ ಕೈಹಿಡಿದು ಹೆಮ್ಮೆಯಿಂದ ಕೈಯೆತ್ತಿ ಭಾರತೀಯರಾದ ತಾವೆಲ್ಲರೂ ಒಂದೇ ಎಂದು ಸಾರುತ್ತಾರೆ. ಈ ಸಂದರ್ಭದಲ್ಲಿ ಪುಟ್ಟ ಹೆಣ್ಣುಮಕ್ಕಳು “ಸಂವಿಧಾನ ರಕ್ಷತೀ ರಕ್ಷಿತಃ” ಮತ್ತು “ರೈತ ರಕ್ಷತೀ ರಕ್ಷಿತಃ” ಎಂಬ ಪ್ಲೆಕಾರ್ಡುಗಳನ್ನು ಕೈಯಲ್ಲಿ ಹಿಡಿದುಕೊಂಡು ಕಾಣಿಸಿಕೊಳ್ಳುವ ರೀತಿ ಎಲ್ಲರ ಗಮನವನ್ನು ಸೆಳೆಯುವುದಲ್ಲದೆ ಎಲ್ಲರೂ ಸಂಶಯವಿಲ್ಲದೆ ಒಪ್ಪುವಂತೆ ಮಾಡಿತು.

ಜೊತೆಗೆ, ಹೆಂಗರುಳ ತಾಯ್ತನವನ್ನು ತಮ್ಮ ಬರಹಗಳಲ್ಲಿ ಒಡಮೂಡಿಸಿದ ಮಹಾಕವಿ ಕುವೆಂಪು ಹಾಗೂ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಕ್ಕೆ ಹಿಡಿದ ಅರ್ಥಪೂರ್ಣ ಕನ್ನಡಿಯಾಗಿತ್ತು. ಈ ಕೊನೆಯ ದೃಶ್ಯದಿಂದ ಕಂಡುಬರುವ ಸಂಗತಿ ಎಂದರೆ ಆಧುನಿಕ ನಗರೀಕರಣದ ಅಮಲು ದೇಶದ ಬೆನ್ನೆಲುಬಾದ ರೈತಾಪಿ ಜನರ ಜೀವನವನ್ನು ನಯವಂಚಕತನದಿಂದ ಭೀಕರವಾಗಿ ಹಿಂಸಿಸುತ್ತಿದೆ. ಇಂಥ ದುರಂತಗಳನ್ನು ಕುವೆಂಪು ದರ್ಶನಿಸಿದ ಆಶಯದಲ್ಲೇ ರಂಗರೂಪವು ನಿರೂಪಗೊಂಡಿದೆ. ಹಸಿರು ಓದಿನ ಚಿಂತಕರಾದ ಡಾ.ಚಂದ್ರಶೇಖರ ನಂಗಲಿ ಅವರು ಹೇಳಿದಂತೆ, “ಕುವೆಂಪು ಅವರ ‘ಧನ್ವಂತರಿಯ ಚಿಕಿತ್ಸೆʼ ನಮ್ಮ ದೇಶದ ಸಂವಿಧಾನ ಮಂಡನೆಗೂ ಮುಂಚೆಯೇ ಬಂದ ಸಣ್ಣಕತೆ. ಕುವೆಂಪು ಅವರ ಸಮಗ್ರ ಸಾಹಿತ್ಯಕ್ಕೂ ಭಾರತದೇಶದ ಸಂವಿಧಾನಕ್ಕೂ ತಾಯಿ-ಮಗು ಸಂಬಂಧವಿದೆ. ರೂಪಕ ಭಾಷೆಯಲ್ಲಿ ಹೇಳುವುದಾದರೆ ಸಣ್ಣಕತೆ ಎಂಬ ಕಂಬಳಿ ಹುಳು ರಂಗರೂಪಕ್ಕೆ ಬಂದು ಬಣ್ಣದ ಚಿಟ್ಟೆಯಾಗಿದೆ ಎನ್ನಬಹುದು. ಪ್ರಸ್ತುತ ರಂಗರೂಪವು ಅನ್ನದಾತ ರೈತರ ರೋಗವನ್ನು ಹೋಗಲಾಡಿಸಲು ಡಾ.ಬಿ.ಆರ್.ಅಂಬೇಡ್ಕರ್ ಅವರು ರೂಪಿಸಿರುವ ಸಂವಿಧಾನದ ಅನುಷ್ಠಾನವೇ ಸೂಕ್ತ ಮಾರ್ಗ ಹಾಗೂ ಇದೇ ಧನ್ವಂತರಿ ಚಿಕಿತ್ಸೆ ಎಂದು ಸೂಚಿಸುತ್ತದೆ.

ಭಾರತದಲ್ಲಿ ಬಹುಧರ್ಮಗಳ ಪ್ರತಿಪಾದನೆಗಾಗಿ ರಚಿಸಲಾಗಿರುವ ಬಹುಗ್ರಂಥಗಳಿವೆ. ಆದರೆ, ಅವು ಅವರವರಿಗೆ ಮಾತ್ರ ಸೀಮಿತವಾಗಿವೆ; ಪೂಜ್ಯವಾಗಿದೆ. ಆದರೆ ಸರ್ವಜನಮಾನ್ಯವಾದ ಗ್ರಂಥ ಯಾವುದಾದರೂ ಇದೆಯೇ? ಹೀಗಾಗಿಯೇ ಕುವೆಂಪು ಅವರು, “ಯಾವ ಗ್ರಂಥವೂ ಏಕೈಕ ಪರಮಪೂಜ್ಯ ಧರ್ಮಗ್ರಂಥ ಆಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾಗುವ ಎಲ್ಲವುಗಳನ್ನು ಓದಿ ತಿಳಿದು ತನ್ನ ದರ್ಶನವನ್ನು ತಾನೇ ನಿರ್ಣಯಿಸಿಕೊಳ್ಳಬೇಕು” ಎಂದು ಹೇಳಿದ್ದು. ಈ ಮಾತು ನಮ್ಮ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳಿಗೂ ನಾವು ಬದುಕುತ್ತಿರುವ ಜಗತ್ತಿನಲ್ಲಿ ಪರಿಹಾರ ಇದೆ ಎಂದು ಹೇಳುತ್ತದೆ. ಅದರ ಪೂರಕವಾಗಿ ನಾವು ಜ್ಞಾನವನ್ನು ಪಡೆದುಕೊಳ್ಳಬೇಕು. ಕೇವಲ ನಮ್ಮ ನಮ್ಮ ಧರ್ಮಗಳಿಗೆ ಆಚಾರ ವಿಚಾರಗಳಿಗೆ ಸೀಮಿತವಾಗದೆ ಎಲ್ಲದರಲ್ಲೂ ಒಳಿತನ್ನು ಪರಿಗಣಿಸುವ ಮನಸ್ಥಿತಿ ನಮ್ಮದಾದರೆ ಲೋಕಕಲ್ಯಾಣ ಸಾಧ್ಯವಾದೀತು ಎಂದು ನಾನು ಭಾವಿಸುತ್ತೇನೆ. ಮತೀಯ ಮತ್ತು ಸಾಮಾಜಿಕ ಅಂಧಶ್ರದ್ಧೆ ಮತ್ತು ಕಂದಾಚಾರಗಳಿಂದ ನಾವು ಪಾರಾಗದಿದ್ದರೆ ನಮಗೆ ಉದ್ಧಾರವಿಲ್ಲ ಎಂದು ಕುವೆಂಪುರವರು ಹೇಳುತ್ತಾರೆ.

ಸ್ವಾತಂತ್ರ‍್ಯಪೂರ್ವದಲ್ಲಿ ರಚಿತವಾದ ಈ ‘ಧನ್ವಂತರಿ ಚಿಕಿತ್ಸೆ’ ಕಥೆ ಸ್ವಾತಂತ್ರ‍್ಯ ದೊರೆತ ಏಳು ದಶಕಗಳ ನಂತರವೂ ಪ್ರಸ್ತುತ ಸ್ಥಿತಿಗತಿಗಳನ್ನು ವರ್ಣಿಸುತ್ತದೆ. ಮೂಲಕತೆಯಲ್ಲಿ ಜಾತಿಯ ಅವಹೇಳನ ಮಾತುಗಳಿದ್ದು ರಂಗರೂಪದಲ್ಲಿ ಅದನ್ನು ತರದೇ ಇರುವುದು ಕುವೆಂಪುರವರ ಹಾಗೂ ಅಂಬೇಡ್ಕರ್ ಅವರ ಆಶಯದಂತೆ ಒಂದು ಶ್ರೇಷ್ಠ ನಿಲುವು. ಸ್ವಾತಂತ್ರೋತ್ತರ ಭಾರತ ವರ್ಣ, ಮತ, ಜಾತಿ ಭೇದಗಳಿಲ್ಲದೆ ಸರ್ವರೂ ಸಮಾನರು ಎಂದು ಘೋಷಿಸಿ ಸರ್ವರ ಏಳಿಗೆಗೂ ಸಾಧನವಾಗುವ ಸರ್ವೋದಯ ತತ್ವಕ್ಕೆ ಒಂದು ಅಧಿಕಾರ ಮುದ್ರೆ ಬಿದ್ದಂತಾಯಿತು ಎಂದು ಕುವೆಂಪುರವರು ಭಾರತ ಸಂವಿಧಾನ ಜಾರಿಯಾದಾಗ ದೊರೆತಾಗ ಸಂತಸ ವ್ಯಕ್ತಪಡಿಸುತ್ತಾರೆ. ‘ಶ್ರೀ ಸಾಮಾನ್ಯನಿಗೆ ದೀಕ್ಷಾ ಗೀತೆ’ ಎಂಬ ಕವಿತೆಯಲ್ಲಿ ಕುವೆಂಪು ಕಣ್ಣಲ್ಲಿ ಕಂಡ ಭಾರತ ಸಂವಿಧಾನದ ಆಶಯವು ಧ್ವನಿಪೂರ್ಣವಾಗಿ ಮೂಡಿಬಂದಿದೆ.

ಕೊನೆಗೊಂಡಿತು
ಓರೋರ್ವರ ಗರ್ವದ ಕಾಲ
ಇದು ಸರ್ವರ ಕಾಲ
ಸರ್ವರಿಗೂ ಸಮಪಾಲು; ಸರ್ವರಿಗೂ ಸಮಬಾಳು
ಶ್ರೀಸಾಮಾನ್ಯವೇ ಭಗವನ್ ಮಾನ್ಯಂ;
ಶ್ರೀಸಾಮಾನ್ಯನೆ ಭಗವದ್ ಧನ್ಯಂ!
ಸಾಮಾನ್ಯತೆ ಭಗವಂತನ ರೀತಿ;
ಸಾಮಾನ್ಯವೆ ದಿಟ ಭಗವತ್ ಪ್ರೀತಿ!
ಸಾಮಾನ್ಯರೋ ನಾವು:
ಸಾಮಾನ್ಯದ ಪೂಜೆಗೆ ದೀಕ್ಷೆಯ ಕೊಳ್ಳಿಂ ನೀವೂ!
ಸರ್ವರಿಗಾಗಿಯೆ ಸರ್ವವ ತನ್ನಿಂ;
“ಸರ್ವರಿನೆನಗೆ! ಸರ್ವರಿಗೆಂ!
ಸರ್ವರಿಗಾಗಿಯೆ ಸರ್ವಂ! ಎನ್ನಿಂ.
ಓ ಬನ್ನಿಂ, ಓ ಬನ್ನಿಂ…….

ಪ್ರಸ್ತುತ ‘ಧನ್ವಂತರಿ ಚಿಕಿತ್ಸೆ’ ರಂಗಪ್ರಯೋಗದಲ್ಲಿ ದೈವೀಪುರುಷರಾದ ವಿಶ್ವಾಮಿತ್ರರು, ವಿಶ್ವವೈದ್ಯ ಧನ್ವಂತ್ರಿಯು ಶ್ರೀಸಾಮಾನ್ಯರ ಅವತಾರವಾಗಿ ಕಾಣುತ್ತಾರೆ. ‘ಬಾ ಇಲ್ಲಿ ಸಂಭವಿಸು’ ಗೀತೆಯಲ್ಲಿ ಹೇಳುವಂತೆ ಇವರು ಸತ್ಯಾವತಾರಿಗಳಾಗಿ, ನರರೂಪ ಚೇತನಗಳಾಗಿ ಬಂದು ನಾರಾಯಣತ್ವಕ್ಕೆ ದಾರಿ ತೋರಿಸಿದವರು. ಮಹಾಗುರುಗಳಾಗಿ ಬಂದು ಶ್ರೀಸಾಮಾನ್ಯನಾದ ರೈತನ ಕಾಯಿಲೆಯನ್ನು ನಿವಾರಿಸಿದರು. ಆದ್ದರಿಂದ ಸರ್ವರೊಳಗೊಂದಾಗಿ ಎಲ್ಲರನ್ನೂ ಶ್ರೀಸಾಮಾನ್ಯರನ್ನಾಗಿ ಕಾಣುವುದನ್ನು ನಾರಾಯಣತ್ವ ಎಂದು ಕರೆಯಬಹುದಲ್ಲವೇ? ಎಲ್ಲರನ್ನೂ ಸಾಮಾನ್ಯರಂತೆ ಕಾಣುವ ಆಶಯವನ್ನು ಸಾರುವ ಸಂವಿಧಾನವು ಅಂತಹ ಸಮಾನತಾ ನಾರಾಯಣತ್ವಕ್ಕೆ ದಾರಿಯಾಗಿದೆ ಎಂದು ಭಾವಿಸಬಹುದಲ್ಲವೇ? ಎಂಬಂತ ಭಾವೋದ್ದೀಪನಗೊಳಿಸಿದ ರಂಗರೂಪವು ಮನೋಜ್ಞವಾಗಿ ಮೂಡಿಬಂದಿತು.

ಧನ್ವಂತರಿ ಚಿಕಿತ್ಸೆ ತಂಡ
ಪಾತ್ರ            :           ಹೆಸರು
ಜ್ಯೋತೆಮ್ಮ-೧ : ತನುಶ್ರೀ ಜಿ
ಜ್ಯೋತೆಮ್ಮ-೨ : ಅನ್ನಪೂರ್ಣ ಎನ್
ಜ್ಯೋತೆಮ್ಮ-೩ : ಮೈತ್ರಿ ಎಲ್
ಜ್ಯೋತೆಮ್ಮ-೪ : ಪ್ರಿಯಾಂಕ ಬಿ ಎನ್
ಜ್ಯೋತೆಮ್ಮ-೫ : ಅನು ಕೆ ರಫೆಲ್
ಜ್ಯೋತೆಮ್ಮ-೬ : ಪವಿತ್ರ ವಿ
ಡಾಕ್ಟರ್ : ನವ್ಯಶ್ರೀ
ವಿಶ್ವಾಮಿತ್ರ : ಮಧು ಪಿ
ನಕ್ಷತ್ರಿಕ : ಆದಿತ್ಯ
ರೈತ : ರಂಗನಾಥ್ ವೈ
ರೈತನ ಹೆಂಡತಿ : ಹರ್ಷಿತ ಕೆ
ರೈತನ ಮಗಳು : ಭವ್ಯ
ಧನ್ವಂತರಿ : ಹರ್ಷ ವಿ
ಮದ್ಯವ್ಯಸನಿ, ಕಾಲಭೈರವ : ಹೇಮಂತ್ ಗೌಡ
ಮದ್ಯವ್ಯಸನಿ, ಎತ್ತು-೧ : ಹರ್ಷ ಎಂ
ಪೇಟೆ ಹುಡುಗಿ-೧ : ದಿಶಾ
ಪೇಟೆ ಹುಡುಗಿ-೨ : ನಾಗಜ್ಯೋತಿ
ಪೇಟೆ ಹುಡುಗಿ-೩ : ಭಾವನ
ಪೇಟೆ ಹುಡುಗಿ-೪ : ಕೀರ್ತನ ತ್ರಿಗುಣಶ್ರೀ
ಅಪ್ಸರೆ-೧(ನೃತ್ಯ) : ರುಕ್ಮಿಣಿ
ಅಪ್ಸರೆ-೨(ನೃತ್ಯ) : ಧೃತಿ
ಅಪ್ಸರೆ-೩(ನೃತ್ಯ) : ರಕ್ಷಾ ಎಸ್ ಸಾಯಿ
ಅಪ್ಸರೆ-೪(ನೃತ್ಯ) : ಧನ್ಯ ಎಂ ಅಡಿಗ
ವಸಿಷ್ಠ, ಎತ್ತು-೨, ಅಂಗರಕ್ಷಕ-೧ : ಪ್ರಜ್ವಲ್ ವಿ ಸಿ
ಇಂದ್ರ, ಅಂಗರಕ್ಷಕ-೨ : ನಿತಿನ್ ಗೌಡ
ನಾರದ : ಭೂಮಿಕ ಗೌಡ
ಭಿಕ್ಷುಕ : ಭಗವತ್ ಶ್ರೀ
ಪೊಲೀಸ್ : ಭುವನ್ ವಿ
ಆಪ್ತ ಸಹಾಯಕಿ : ಯಶಸ್ವಿನಿ
ಅಪ್ಸರೆ-೫ : ಏಂಜಲ್ ರಾಣಿ
ಅಪ್ಸರೆ-೬ : ಅನನ್ಯ ಕುಲಕರ್ಣಿ
ಅಜ್ಜಿ, ಚುನಾವಣೆ ಅಭ್ಯರ್ಥಿ : ಅಂಕಿತ ಎಸ್ ಶೆಟ್ಟಿ
ಮಂತ್ರವಾದಿ : ಅಭಿಷೇಕ್
ತಾಂತ್ರಿಕ ನಿರ್ವಹಣೆ : ಮಾನಸ ಜಿ
ಸಂಗೀತ ನಿರ್ದೇಶನ : ಪ್ರವೀಣ್
ಹಿನ್ನೆಲೆ ಗಾಯಕ : ಸ್ಟಾಲನ್
ಹಿನ್ನೆಲೆ ಗಾಯಕಿ-೧ : ಅಕ್ಷಯ
ಹಿನ್ನೆಲೆ ಗಾಯಕಿ-೨ : ವರ್ಷಿಣಿ
ಹಿನ್ನೆಲೆ ಗಾಯಕಿ-೩ : ನಿತ್ಯ
ಹಿನ್ನೆಲೆ ಗಾಯಕಿ-೪ : ಈಸ್ತರ್ ಜ್ಯೋತ್ಸ್ನಾ
ಕೀ ಬೋರ್ಡ್ : ಪ್ರಜ್ವಲ್ ವಿಜಯ್
ರಂಗಪರಿಕರ ಸಹಕಾರ: ಅರುಣ್, ಕಲ್ಪಶ್ರೀ, ಹರ್ಷಿತ ಎಲ್

ಮಾನಸ ಜಿ
ಕ್ರಿಸ್ತು ಜಯಂತಿ ಕಾಲೇಜು, ಬೆಂಗಳೂರು

Prev Post

ಜೀವಕೇಂದ್ರಿತವಾಗಿ ಯೋಚಿಸಲು ಕುವೆಂಪು ಅವರ ಸಾಹಿತ್ಯ ಪ್ರೇರಣೆ : ಡಾ. ಭಾರತೀದೇವಿ ಪಿ.

Next Post

‘ಪರೀಕ್ಷಾ ಸಾಹಿತ್ಯ’ ಬೇರೆಲ್ಲ ಸಾಹಿತ್ಯಕ್ಕಿಂತ ವಿಭಿನ್ನ | ಸಂತೋಷ್ ಇರಕಸಂದ್ರ

post-bars

Leave a Comment

Related post