ಹಾಯ್ ಸುಚಿ ಇಂತಿ ನಿನ್ನವ ರುಜು | ರುಜುವಾನ್ ಕೆ
ಹಾಯ್.. ಸುಚಿ,
ಹೇಗಿದ್ದೀಯ ಎಂದು ಕೇಳಲು ನೀನು ದೂರದವಳಲ್ಲ. ಮನೆಯಂಗಳದಿ ಕುಂಟೇಬಿಲ್ಲೆ ಆಡುವಂದಿನಿಂದ ಹಿದಿಡಿದು; ಕಂಪ್ಯೂಟರ್ ಕೀಲಿಮಣಿ ಒತ್ತುತ್ತಾ ಕೆಲಸ ಮಾಡುತ್ತಿರುವ ಇಂದಿನವರೆಗೂ ದಿನಂಪ್ರತಿ ಜೊತೆಯಲ್ಲಿಯೇ ಇರುವವಳು. ಬಾಲ್ಯದಿಂದಲೂ ಆಡಿ-ಪಾಡಿ ಜೊತೆಯಲ್ಲೇ ಬೆಳೆದ ಸ್ನೇಹಿತರಾದರೂ, ಒಮ್ಮೊಮ್ಮೆ ನಿನ್ನ ಮೇಲೆ ಪ್ರೇಮದ ಒರತೆಯು ಜಿನುಗಿದ್ದುಂಟು.
ಹೇಳಲು ಧೈರ್ಯವಿರಲಿಲ್ಲವೋ, ಬಾಲ್ಯದಿಂದಲೂ ಜೊತೆಗಿರುವ ಅಮೂಲ್ಯ ಸ್ನೇಹವೆಂತಲೋ, ಒರೆತದ್ದು ಹೆಚ್ಚು ಹೊತ್ತು ಇರದೆ ಇಂಗಿ ಹೋಗುತ್ತಿತ್ತು. ದೃಢವಾಗಿ ನಿಲ್ಲುತ್ತಿರುವುದು ಈಗೀಗ ಮಾತ್ರ. ನೀ ಮೊಗೆದಷ್ಟು ಪ್ರೇಮವ ಜಿನುಗಿಸಿ ಮತ್ತೆ ಮತ್ತೆ ಉಣಿಸಬೇಕೆನ್ನಿಸುತ್ತಿದೆ. ಆದರೆ ಹೇಳುವ ಧೈರ್ಯ ಸಾಲುತ್ತಿಲ್ಲ. ನೆನಪಿದೆಯೇ ನಿನಗೆ., ಹದಿನಾರು ದಾಟಿದ ಹುಚ್ಚುಕೋಡಿ ಮನಸ್ಸು ಇಷ್ಟಪಟ್ಟ ಸುಂದರಿಯರದೆಷ್ಟೋ.
ಅಡಿಯಿಂದ ಮುಡಿಯವರೆಗೂ ಅವರನ್ನು ಅಳೆದು ತೂಗಿ, ‘ನಿಂಗೆ ಸೆಟ್ ಆಗೊಲ್ಲ ಬಿಡು ರುಜು ಎಂದವಳು ನೀನೆ’. ಮದುವೆಗೆ ಹೆಣ್ಣು ನೋಡಲು ನಾಲ್ಕಾರು ಕಡೆ ಹೋದಾಗಲೂ ಬೆಂಬಿಡದೆ ಹಿಂದೆ ಬಂದು, ‘ನಮ್ ರುಜುಗೆ ಒಳ್ಳೆ ಜೋಡಿ ಅಲ್ಲ ಎಂದು ರಿಜೆಕ್ಟ್ ಮಾಡುತ್ತಿದ್ದವಳೂ ನೀನೆ’. ನೋಡಿದ ಹುಡುಗಿಯರ ಅಂಕುಡೊಂಕುಗಳನ್ನ ಹರಿಹಾಯ್ದು ನುಡಿಯುತ್ತಿರುವಾಗ ಬ್ರೋಕರ್ ಸಾಹೇಬರಿಗೆ ತಲೆ ಬಿಸಿಯಾಗಿ, ‘ಇಷ್ಟೊಂದು ಹೇಳೋಳ್ ನೀನೆ ಆಗ್ಬಿಡಮ್ಮಾ ಅತ್ಲಗೆ’ ಅಂದಾಗ ನೀವೆಲ್ಲಾ ನಗುತ್ತಿದ್ದರೆ, ನಾನು ಮಾತ್ರ ಒಳಗೊಳಗೆ ಪುಳಕಿತನಾಗಿದ್ದುಂಟು. ಅರೆಕ್ಷಣ ಮೌನಕ್ಕಿಳಿದು ಯೋಚಿಸಿದರೆ, ಅವರು ಹೇಳಿದ್ದು ಸರಿಯಲ್ಲವೆ ಅನ್ನಿಸಿ ಬಿಡುತ್ತಿತ್ತು.
ನನ್ನೆಲ್ಲಾ ಗುಣ-ಸ್ವಭಾವ ಸರ್ವಸ್ವವೆಲ್ಲವೆನ್ನೂ ಅರಿತಿರುವ ನೀನು, ಬೇರೊಂದು ಹೆಣ್ಣಿನಲ್ಲಿ ನಿನ್ನಂಥವಳನ್ನೇ ನನಗಾಗಿ ಬಯಸುತ್ತೀದ್ದೀಯ. ಹುಚ್ಚಿ! ನಿನ್ನಲ್ಲೂ ನನ್ನ ಮೇಲೆ ಒಲವಿದೆ. ಅದು ಪ್ರೀತಿಯೆಂಬ ಮಾನಸ ಸರೋವರದಲ್ಲಿ ಕಲ್ಲು ಕಟ್ಟಿ ಇಳಿಬಿಟ್ಟಂತಿದೆ. ಈ ಸಮಸ್ಯೆ ನನ್ನಲ್ಲೂ ಕಾಡುತ್ತಿದೆ. ತಳದಲ್ಲಿ ಹುದುಗಿರುವ ಒಲವು ತೇಲಿ ಬಂದು, ಎದೆ ತುಂಬಿ ಹರಿದು ನಮ್ಮಿಬ್ಬರ ತನು-ಮನಗಳ ಸೂರೆಗೊಳಿಸಬೇಕೆಂದರೆ ಯಾರಾದರೊಬ್ಬರು ಬಾಯ್ಬಿಡಬೇಕಷ್ಟೆ.
ನನಗಂತೂ ಉಕ್ಕಿ ಹರಿಯುತ್ತಿರುವ ಪ್ರೇಮತೊರೆಯ ಬಚ್ಚಿಡಲಾಗುತ್ತಿಲ್ಲ. ಇದು ಈಗಿನದ್ದೂ ಅಲ್ಲ. ಮೊದಲ ಸಲ ಹೈಸ್ಕೂಲಿನಲ್ಲಿ ಖೋ-ಖೋ ಆಡುತ್ತಿರುವಾಗ ನಿನ್ನ ಬೆನ್ನು ಮುಟ್ಟಿ ಖೋ ಕೊಡುವಾಗ ಪಡೆದ ಮೊದಲ ಸ್ಪರ್ಶ, ಇಂದಿಗೂ ಪ್ರೇಮ ಸ್ಪರ್ಶವಾಗಿಯೇ ಕಾಡುತ್ತಿದೆ. ಆ ಸ್ಪರ್ಶ ಖೋ ಎಂಬ ಧ್ವನಿಯನ್ನು ಹೊರ ಹಾಕಿಸದೆ ತಲೆಕೆಳಗಾಗಿ, ಮೂಖಸ್ತಬ್ಧನನ್ನಾಗಿ ಕೂರಿಸಿದ್ದನ್ನು ಎಂದಿಗೂ ಮರೆಯಲಾರೆ.
ಹದಿನೈದು ವರುಷಗಳಿಂದಲೂ ಇಂತಹ ಪ್ರಸಂಗಗಳು ಎಣಿಕೆಗೆ ನಿಲುಕದಷ್ಟು. ಪ್ರತಿಸಲವು ಗಂಟಲು ಒಣಗಿ, ಪ್ರೀತಿಸಲೇ ಇವಳನ್ನು ಎನ್ನುವ ಭಾವಸೆಳೆತದ ಪಿಸುಧ್ವನಿ, ಪೀಕಲಾಟಕ್ಕೆ ಸಿಕ್ಕು ಸಾಯುತ್ತಿತ್ತು. ಭಾವಾಂತರಾಳದ ಬೆಲ್ಲದ ಮಾತುಗಳೆಲ್ಲ ಅತೀವೇಗದಿ ತರಂಗಗಳಾಗಿ ಹೊರಡುವುದು ಸ್ತ್ರೀಯರಲ್ಲೇ ಹೆಚ್ಚು ಅನ್ನುವುದು ನನ್ನ ಚಿಕ್ಕ ತಿಳುವಳಿಕೆ; ಆದರೆ ನೀನು ಬಲು ಮೊಂಡಿ, ಗಟ್ಟಿಗಿತ್ತಿ. ನನ್ನ ಬಾಯಿಂದಲೇ ಪ್ರೇಮೋದಕದ ಸ್ವಾದವ ಸವಿಯಬೇಕೆಂದು ಬಯಸುವ ನಿನ್ನ ಹಠವನ್ನು ನಾನು ಬಲ್ಲೆ. ಇನ್ನೂ ಕಾಲ ಮಿಂಚಿಲ್ಲ, ತಡಮಾಡಿದರೆ ಬದುಕಿನಾಗಸದಲ್ಲಿ ಮಿಂಚು-ಗುಡುಗುಗಳಂತೆ ನಾವಿಬ್ಬರೂ ಹಿಂದೆ ಮುಂದೆ ಸಾಗಬೇಕಾಗುತ್ತದೆಯಷ್ಟೆ.
ಜೊತೆಯಾಗಿ ಸೇರಿ ಸಾಗುವ ಆಸೆ ಮನದ ಮುಗಿಲ ಮುಟ್ಟುತ್ತಿದೆ. ಅದಕ್ಕಾಗಿ ನಾನೇ ಮುನ್ನುಡಿಯುತ್ತಿರುವೆ, ಹಳೇ ಸ್ನೇಹದ ಬೇರಿನಲಿ ಹೊಸ ಪ್ರೇಮದ ಕುಡಿಯೊಡೆಸುವ ಆಸೆಯಿಂದ. ನಿನ್ನನ್ನು ತುಂಬಾ ಪ್ರೀತಿಸುತ್ತಿರುವೆ ಸುಚಿ. ಎಳೆಯ ಕರು, ಮರಿ ಹಕ್ಕಿಪಿಕ್ಕಿಗಳು ತಮ್ಮ ತಾಯಿಯ ಒಡಲಾಸರೆಯ ಬಯಸುವಂತೆ ನಾ ನಿನ್ನ ಅನುಕ್ಷಣವೂ ಬಯಸುತ್ತಿರುವೆ. ಅಧೈರ್ಯವೋ, ಸಂಕೋಚವೋ, ನಿನ್ನನ್ನು ಕಳೆದುಕೊಳ್ಳುವೆನೆನೋ ಎಂಬ ಆತಂಕಗಳಿಂದ ನೇರವಾಗಿ ಹೇಳಲಾಗುತ್ತಿಲ್ಲವಷ್ಟೆ ಅದಕ್ಕಾಗಿ ಈ ಒಲವಿನ ಪತ್ರ ಬರೆಯುತ್ತಿರುವೆ.
ಇದನ್ನು ಓದಿದ ನಂತರ ನಿನಗೆರೆಡು ದಾರಿಗಳಿವೆ ಅದನ್ನೂ ನಾನೇ ತಿಳಿಸುವೆ. ಮೊದಲನೆಯದು ನನ್ನ ಮನಸ್ಸಿನ ತೊಳಲಾಟಗಳೆಲ್ಲವೂ ನಿನಗೆ ಬರಿಯ ಲೊಳಲೊಟ್ಟೆಯೆನಿಸಿದರೆ ಮತ್ತದೇ ಆಫೀಸಿನಲ್ಲಿ ಎದುರು ಬದುರಾಗಿ ಕುಳಿತು, ನನ್ನ ಪ್ರೇಮ ನಿವೇದನೆಯ ಲಜ್ಜೆತನಕ್ಕೆ, ಮಂದಸ್ಮಿತ ಮೊಗ ತೋರಿ ನಕ್ಕು ಸುಮ್ಮನಾಗಿ ಬಿಡು. ಇಲ್ಲಾ.. ರಜೆ ಹಾಕಿ ಮತ್ತದೇ ಹೈಸ್ಕೂಲಿನ ಮೈದಾನದಲ್ಲಿರುವ ಖೋ-ಖೋ ಅಂಕಣಕ್ಕೆ ಬಂದು ಸೇರಿಕೋ, ಕಂಬವನ್ನಿಡಿದು ತುದಿಗಾಲ ಮೇಲೆ ನಿಂತಿರುವ ನಾನು, ಮತ್ತೊಮ್ಮೆ ಓಡೋಡಿ ಬಂದು, ನಿನ್ನನು ಬಿಗಿಪದಪ್ಪಿ ಹೇಳುವೆ, ಸುಚಿ.. ನಾ ನಿನ್ನ ತುಂಬಾ ತುಂಬಾ ಪ್ರೀತಿಸುತ್ತಿರುವೆ, ಸದಾಕಾಲ ನನ್ನೊಡನೆಯೇ ಇರು. ನೀನೊಪ್ಪಿ ಜೊತೆಗಿದ್ದರೆ ದಾಂಪತ್ಯದ ಆಟವನ್ನು ಕೊನೆಯುಸಿರು ನಿಲ್ಲುವವರೆಗೂ ಆಡೋಣ.
ನೀ ನನ್ನ ಪ್ರೀತಿ ಕಡಲ ಸೇರುವೆ ಎಂಬ
ಭರವಸೆಯ ಭಾವಪರವಶತೆಯಲ್ಲಿ,
ಒಂಟಿಯಾಗಿಯೇ ಕಾಯುತ್ತಿರುವೆ…
ಇಂತಿ ನಿನ್ನವನೆ
ರುಜು.
ರುಜುವಾನ್ ಕೆ.
ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ