ಕನಕದಾಸರ ಕೀರ್ತನೆಯಲ್ಲಿ ಭಕ್ತಿಯ ವೈವಿಧ್ಯತೆ | ದೀಪ್ತಿ ಅಡ್ಡಂತ್ತಡ್ಕ
‘ದೀನ ನಾನು, ಸಮಸ್ತ ಲೋಕಕ್ಕೆ ದಾನಿ ನೀನು, ವಿಚಾರಿಸಲು ಮತಿಹೀನ ನಾನು‘ ಹೀಗೆ ದೀನರಲ್ಲಿ ದೀನರಾಗಿ ಒಬ್ಬ ಭಕ್ತ ತಾನು ಭಗವಂತನಲ್ಲಿ ಭಕ್ತಿಯ ಮೂಲಕ ಸಂಪೂರ್ಣವಾಗಿ ಲೀನಗೊಂಡಾಗ ಮಾತ್ರ ಇಂತಹ ಮಾತುಗಳು ಬರಲು ಸಾಧ್ಯ.
ಕನಕದಾಸರು ತಮ್ಮ ಜೀವನ ಮತ್ತು ಸಾಹಿತ್ಯಸಿದ್ಧಿಯಿಂದ ಕರುನಾಡಿಗೆ ಬೆಳಕನ್ನು ಪಸರಿಸಿದವರು. ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯದ ನಂತರ ದಾಸ ಸಾಹಿತ್ಯವೇ ಪ್ರಮುಖವಾಗಿದೆ. ದಾಸರ ಕೀರ್ತನೆಗಳಲ್ಲಂತೂ ಅವರು ಭಗವಂತನಲ್ಲಿ ತೋರುವ ಪ್ರೀತಿ ನಿಷ್ಕಲ್ಮಶದಿಂದ ಕೂಡಿದ್ದು. ‘ಭಕ್ತಿಯಿಂದಲೇ ಮುಕ್ತಿ ಪಡೆಯುವುದಕ್ಕೆ ಸಾಧ್ಯ’ ಎಂದು ಪ್ರತಿಪಾದಿಸಿ, ಭಗವಂತನ ಆಶೀರ್ವಾದವಿಲ್ಲದೆ ಏನು ಆಗದು ಎಂದವರು ಕನಕರು. ತಾನು ಭಕ್ತನಾಗುವುದಕ್ಕೆ ಭಗವಂತನೇ ಕಾರಣ ಎನ್ನುತ್ತಾರೆ. ಇದನ್ನು ನಾವೆಲ್ಲ ಅರಿತುಕೊಳ್ಳುವುದಕ್ಕೆ ಅವರ ಭಕ್ತಿ-ಭಾವ ತುಂಬಿದ ಕೀರ್ತನೆಗಳೇ ಸಾಕ್ಷಿ. ಹೀಗೆ ಜೀವನ ಮತ್ತು ಸಾಹಿತ್ಯ ಸಿದ್ಧಿಯಿಂದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಕ್ಷತ್ರದಂತೆ ಪ್ರಜ್ವಲಿತರಾದವರು ಕನಕದಾಸರು. ನಮ್ಮ ದೇಹದಲ್ಲಿರುವ ಪಂಚೇಂದ್ರಿಯಗಳೆಲ್ಲವೂ ಅನುಭವಿಸುವ ಸುಖ ಭಗವಂತನದ್ದೇ. ಈ ದೇಹ, ಈ ಜೀವನ ಎಲ್ಲಾ ರೀತಿಯ ಭಾವನೆಗಳೆಲ್ಲ ಪರಮಾತ್ಮನದ್ದೇ ಎನ್ನುತ್ತಾರೆ ಕನಕರು. ಭಗವಂತನನ್ನು ಮೆಚ್ಚಿಸುವುದಕ್ಕೆ ನೇಮ ,ಹೋಮ, ಹವನಗಳ ಅಗತ್ಯವಿಲ್ಲ. ಮಾನವ ತನ್ನಷ್ಟಕ್ಕೆ ತಾನೇ ಜನಿಸಿದವನಲ್ಲ; ಭಗವಂತನ ಪ್ರೇರಣೆಯೂ ಪ್ರಮುಖ ಕಾರಣ ಪಡೆದಿದೆ ಎಂದರು. ಪರಮಾತ್ಮನನ್ನು ಒಡೆಯನೆಂದು ಆರಾಧಿಸುವುದೇ ದಾಸ್ಯ ಭಾವ ಎಂದು “ದಾಸದಾಸರನೆಯ ದಾಸಾನುದಾಸ ನಾನು ಶ್ರೀಪತಿ ರಂಗನೇ, ನಾನು ನಿನ್ನ ಮನೆಯದಾಸ. ಎಂದು ಮಂಕುದಾಸ, ಮರಳುದಾಸ ಬಡದಾಸಾಳಿನ ಆಳಿನ ದಾಸ ಅಡಿದಾಸ” ಎಂದು ತಮ್ಮನ್ನು ತಾವು ಗುರುತಿಸಿಕೊಂಡವರು.
ಅಂತರಂಗ ಬಹಿರಂಗಗಳಲ್ಲಿ ಡಾಂಭಿಕತೆಯನ್ನು ತುಂಬಿರುವ ಭಕ್ತಿ ಅದು ಭಕ್ತಿಯೇ ಅಲ್ಲ ಎಂಬುದನ್ನು ಕೀರ್ತನೆಗಳ ಮೂಲಕ ತಿಳಿಸಿದವರು. ಕಾಗಿನೆಲೆ ಆದಿ ಕೇಶವನನ್ನು ಸದಾ ಸ್ಮರಿಸುತ್ತಿದ್ದವರು. “ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ” ಇಂತಹ ಹಲವಾರು ಕೀರ್ತನೆಗಳು ನಮ್ಮೆಲ್ಲರನ್ನು ಭಾವ ಪರವಶರನ್ನಾಗುವಂತೆ ಮಾಡುವ ಜೊತೆಗೆ ಮಾನವೀಯತೆಯ ನೆಲೆಯನ್ನು ಕಟ್ಟಿಕೊಡುತ್ತದೆ.
ಕನಕದಾಸರಿಗೆ ಭಗವಂತನಲ್ಲಿ ಅದ್ಯಾವ ರೀತಿಯ ಭಕ್ತಿ ಇದೆ ಎಂಬುದಕ್ಕೆ ಒಂದು ಉದಾಹರಣೆ ಎಂದರೆ ಒಮ್ಮೆ ಕನಕದಾಸರಿಗೆ ಉಡುಪಿ ಶ್ರೀ ಕೃಷ್ಣ ದೇವಾಲಯದಲ್ಲಿ ಪ್ರವೇಶ ದೊರೆಯದೆ ದೇವಾಲಯದ ಹಿಂಬದಿಯಲ್ಲಿ ನಿಂತು ಭಕ್ತಿಯಿಂದ ತನ್ನ ನೇತ್ರಗಳನ್ನು ಮುಚ್ಚಿ ಇನ್ನೇನು ಶ್ರೀ ಕೃಷ್ಣ ಒಲಿದು ಈ ಭಕ್ತನಿಗೆ ದರ್ಶನ ನೀಡಿಯೇ ನೀಡುವನು ಎಂಬಂತೆ “ಬಾಗಿಲನ್ನು ತೆರೆದು ಸೇವೆಯನ್ನು ಕೊಡುಹರಿಗೆ” ಎಂದಾಗ ನಿಷ್ಕಲ್ಮಶ ಪ್ರೀತಿ ತುಂಬಿದ ಭಕ್ತಿಯನ್ನು ಕಂಡ ಶ್ರೀ ಕೃಷ್ಣ ತನ್ನ ದಿಕ್ಕನ್ನೇ ಬದಲಿಸಿದ ಎಂಬ ಕತೆ ಪುರಾಣ, ಇತಿಹಾಸ ಪುಟಗಳಲ್ಲಿ ಉಲ್ಲೇಖವಿದೆ. ನಾವೆಲ್ಲರೂ ಭಗವಂತನನ್ನು ಭಕ್ತಿಯಿಂದ ನೆನೆದರೆ ಯಾವ ಪ್ರಕಾರದಲ್ಲಾದರೂ ಆತ ನಮ್ಮ ಭಕ್ತಿಗೆ ಒಲಿಯುತ್ತಾನೆ ಎಂಬುದಕ್ಕೆ ಕನಕದಾಸರ ಭಕ್ತಿಯೇ.
ಉದಾಹರಣೆ. ಕನಕದಾಸರ ಅದೆಷ್ಟೋ ಕೀರ್ತನೆಗಳನ್ನು ಓದಿದ್ದೇನೆ. ಆದರೆ ನನ್ನ ಮನಸ್ಸಿಗೆ ಬಹಳ ಹಿಡಿಸಿದಂತಹ ಕೀರ್ತನೆಯ ಸಾಲುಗಳೆಂದರೆ
ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ನೀ ದೇಹದೊಳಗೋ ನಿನ್ನೊಳು ದೇಹವೋ
ಬಯಲು ಆಲಯದೊಳಗೋ
ಆಲಯವು ಬಯಲೊಳಗೋ
ಬಯಲು ಆಲಯವೆರಡು
ನಯನದೊಳಗೋ
ನಯನ ಬುದ್ಧಿ ಯೊಳಗೋ
ಬುದ್ಧಿ ನಯನದೊಳಗೋ
ಬುದ್ಧಿ ನಯನಗಳೆರಡು ನಿನ್ನೊಳಗೊ ಹರಿಯೇ
ಅಂದರೆ ಮಾಯೆಯ ಪ್ರಭಾವದಿಂದ ಪ್ರಕ್ಷುಬ್ಧ ತೆಗೆ ಜಾರಿದ ಈ ಸಮಾಜಕ್ಕೆ ಸಾಂತ್ವನ ನೀಡುವ ಸಾಹಿತ್ಯ ಕನಕದಾಸರ ಅಮೂಲ್ಯ ಕೊಡುಗೆ.
ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ದಾಸ ಶ್ರೇಷ್ಠ ಇವರು. ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯ ಎಂಬ ನಿಲುವು ತೋರಿದ ಧೀಮಂತ ಇಂದಿಗೂ ಪೂಜನೀಯ. ಅವರ ಸಾಹಿತ್ಯ ಅಧ್ಯಯನದಿಂದ ಸಮಾಜದ ಪರಿವರ್ತನೆಗೆ ಒಂದು ಮಾರ್ಗ. ಕನ್ನಡ ನಾಡಿನಲ್ಲಿ ಕನಕದಾಸರ ಭಕ್ತಿ ,ಕಾವ್ಯ, ತ್ಯಾಗ, ಜಾತ್ಯಾತೀತ ಭಾವ ಸದಾ ಅಜರಾಮರ.
ದೀಪ್ತಿ ಅಡ್ಡಂತ್ತಡ್ಕ
ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು