Back To Top

 ಭುವಿಯತ್ತ ಮೊದಲ ಹೆಜ್ಜೆ, ಆಕೆಯ ಕಾಣುವ ಕಾತರ | ಪ್ರಸಾದಿನಿ.ಕೆ ತಿಂಗಳಾಡಿ

ಭುವಿಯತ್ತ ಮೊದಲ ಹೆಜ್ಜೆ, ಆಕೆಯ ಕಾಣುವ ಕಾತರ | ಪ್ರಸಾದಿನಿ.ಕೆ ತಿಂಗಳಾಡಿ

ಅದೊಂದು ಕತ್ತಲ ಕೋಣೆಯ ಪುಟ್ಟ ಜಗತ್ತು. ಎತ್ತ ನೋಡಿದರೂ ಏನು ಕಾಣದಂತಹ ಲೋಕ. ಆದರೂ ಸುರಕ್ಷತೆಯ ಭಾವ. ಏನೋ ಒಂದು ರೀತಿಯ ಬೆಚ್ಚನೆಯ ಭಾವದಂತೆ ಭಾಸವಾಗುತ್ತಿತ್ತು.

ಇನ್ನು ಅದೆಷ್ಟು ದಿನಗಳ ಕಾಲ ತಾನು ಕಾಯಬೇಕು ತನ್ನ ಹೊತ್ತಿರುವ ಒಡಲ ಕಾಣಲು. ಮಮತೆಯ ಭಾವ ಬಂಧನದೊಳು ಕರಗಿ ಹೋಗಲು ಎಂದೆಲ್ಲಾ ಯೋಚಿಸಿ ಅತ್ತಿತ್ತ ತಿರುಗಿದರೆ ಸಾಕು ಆ ನೋವಿನಲ್ಲೂ ಅತೀವ ಸಂತೋಷಪಟ್ಟು ತನ್ನೊಡಲನ್ನೊಮ್ಮೆ ಪ್ರೀತಿಯಿಂದ ಸವರಿ ಖುಷಿಯ ಅನುಭವಿಸತೊಡಗುವ ಆಕೆಯ ಪಿಸು ನುಡಿಯ ಆಲಿಸಿದಾಗಲೆಲ್ಲ ಬಹುಬೇಗನೆ ಆ ಸ್ಪರ್ಶ ಸುಖದಿ ಕರಗಿ ಹೋಗುವ ಬಯಕೆ. ಆದರೆ ಏನು ಮಾಡುವುದು, ತಾನಿನ್ನೂ ಬೆಳವಣಿಗೆ ಹೊಂದಲು ಇನ್ನೂ ಸಮಯವಿದೆ. ತಾನಿಷ್ಟು ಜೋಪಾನವಾಗಿ ಇದ್ದರೂ ಕೂಡ ಹೊತ್ತ ಒಡಲಿಗೆ ಪ್ರತಿಕ್ಷಣವೂ ನನ್ನ ಕುರಿತೇ ಚಿಂತೆ. ಅಷ್ಟೇ ಅಲ್ಲ ತನ್ನ ಸೃಷ್ಟಿಗೆ ಕಾರಣನಾದ ತನ್ನ ಹೊತ್ತ ಒಡಲ ಜೊತೆಗಾರನಿಗೆ ಪ್ರತಿ ಕ್ಷಣವೂ ನನ್ನ ಕುರಿತಾದ ಕನಸು ಕೂಡಿಸುವ ಕೆಲಸ. ಇಬ್ಬರು ಸೇರಿ ನನ್ನ ಮೇಲಿನ ಅತಿಯಾದ ಕಾಳಜಿಯಿಂದ ನನ್ನ ಬೆಳವಣಿಗೆಗೆ ಪೂರಕವಾದ ಆಹಾರ ಹಾಲುಗಳನ್ನು ಕೊಟ್ಟು ನನ್ನನ್ನು ಸುಸ್ತುಗೊಳಿಸುತ್ತಿದ್ದದಂತು ಸತ್ಯ. ಆದರೆ ಏನು ಮಾಡುವುದು ಒಮ್ಮೊಮ್ಮೆ ನನಗೆ ಹಿಡಿಸದಾದಾಗ ಬೇಡ ಎಂದು ತಿರಸ್ಕರಿಸಿಬಿಡುತ್ತಿದ್ದೆ.

ಆ ಸಂದರ್ಭದಲ್ಲಿ ಹೊರಗಿನಿಂದ ನವಿರಾದ ಸ್ಪರ್ಶದೊಂದಿಗೆ ಅಯ್ಯೋ ನನಗ್ಯಾಕೋ ಇಷ್ಟವಾಗಲಿಲ್ಲ ಎಂದೆನಿಸುತ್ತದೆ. ನಾನು ಆರೋಗ್ಯ ಪೂರ್ಣವಾಗಿರುವುದು ದಿಟವಲ್ಲವೇ ಎಂದೆಲ್ಲ ನನ್ನ ಕುರಿತಾದ ಮಾತುಗಳನ್ನು ಕೇಳಿದಾಗ ಅಯ್ಯೋ ನಾನಿಷ್ಟು ನೋವ ಕೊಟ್ಟರು ನನ್ನ ಮೇಲೆ ಇವರಿಗ್ಯಾಕೆ ಇಷ್ಟು ಪ್ರೀತಿ, ಇವರ ಮಮತೆಗೆ ಸಾಟಿ ಬೇರಾವುದು ಇಲ್ಲವೇನೋ ಎಂದನಿಸುತ್ತಿತ್ತು. ದಿನಗಳೆದಂತೆ ನನ್ನಲ್ಲೂ ಬದಲಾವಣೆಗಳು ಕಾಣತೊಡಗಿದವು. ನನ್ನ ಕಾತರದ ಕಾಯುವಿಕೆಗೆ ಕ್ಷಣಗಣನೆ ಮಾಡತೊಡಗಿದೆ. ಅಂತೂ ಇಂತೂ ಅದೊಂದು ದಿನ ನಾನಿನ್ನು ಅಂದುಕೊಂಡ ಹಾಗೆ ಆ ಸ್ಪರ್ಶದ ಸವಿಯನ್ನು ಅನುಭವಿಸಲು ತೆರಳಬಹುದು ಎಂದೆಲ್ಲಾ ಯೋಚಿಸಿ ಮೆಲ್ಲನೆ ನನ್ನ ಪುಟ್ಟ ಕೈಕಾಲು ಬಡಿದು ಮೆಲ್ಲನೆ ಹೊರಳಾಡಿ ಪ್ರಯತ್ನಿಸತೊಡಗಿದೆ.

ಆದರೆ ಅದಾಗಲೇ ಹೊರಗಿನಿಂದ ಅಳುವ ಧ್ವನಿ ಕೇಳಿಸಿದಂತಾಯಿತು. ತುಸು ಸುಮ್ಮನಿದ್ದೆ. ಆಗಲೇ ಅಸ್ಪಷ್ಟ ಮಾತುಗಳು ಕೇಳಿ ಬಂದವು ಹೊರಗಿನಿಂದ. ನಮ್ಮ ಕನಸು ನನಸಾಗುವ ಸಮಯ ಬಂದಿತು ಇಷ್ಟು ದಿನದ ಕಾಯುವಿಕೆಗೆ ಕೊನೆಗೂ ಫಲ ದೊರಕಿತು ಎಂದೆಲ್ಲಾ ನನ್ನ ಬರುವಿಕೆಯ ಕುರಿತಾಗಿ ಮಾತನಾಡುತ್ತಿದ್ದರು. ನನಗೂ ಅವರನ್ನು ಕಾಣಬೇಕೆಂಬ ಹಂಬಲ ಮತ್ತಷ್ಟು ಹೆಚ್ಚಾಗಿ ಪುನಃ ನನ್ನ ಪುಟ್ಟ ಕೈಕಾಲುಗಳನ್ನು ಬಡಿಯಲಾರಂಭಿಸಿದೆ.

ಹೊರಗಿನಿಂದ ಅಮ್ಮಾ ನೋವು… ಅಯ್ಯೋ… ಎಂಬ ಧ್ವನಿ ಕೇಳುತ್ತಿತ್ತು. ಆದರೆ ಸ್ವಲ್ಪ ಸಮಯದ ನಂತರ ಯಾರೋ ನನ್ನನ್ನು ಎಳೆದಾಡಿ ಎಲ್ಲಿಗೋ ಹೊಯ್ದಂತೆ ಭಾಸವಾಯಿತು. ಅಯ್ಯೋ..! ಇದೇನಾಗಿ ಹೋಯಿತು ನಾನು ಎಲ್ಲಿರುವೆ? ಏನಾಯಿತು ಎಂದಲ್ಲ ಯೋಚಿಸಿ ಜೋರಾಗಿ ಚೀರಿ ಅಳತೊಡಗಿದೆ. ಆದರೆ ನನ್ನ ಪ್ರತಿಭಟವಿಸುವಿಕೆಯ ನಡುವೆಯೇ ನನ್ನ ಮೇಲೆ ಏನೋ ಸೋಕಿದ ಅನುಭವವಾಯಿತು. ಆ ಕ್ಷಣದಲ್ಲಿ ಅದು ನೀರು ಎಂದು ನನಗೆ ಗೊತ್ತಿರಲಿಲ್ಲ. ತದನಂತರ ನನ್ನ ಪೂರ್ತಿಯಾಗಿ ಸುತ್ತಿ ಅದ್ಯಾರದೋ ಬಳಿಗೆ ಕರೆದುಕೊಂಡು ಹೋಗಿ ಮಲಗಿಸಿದರು. ಏನೆಂದು ಗೊತ್ತಾಗದೆ ಪುನಃ ಅಳತೊಡಗಿದೆ. ನನ್ನ ಅಳು ಕೇಳಿ ಸಂತೋಷ ಮಿಶ್ರಿತ ಗಾಬರಿಯಲ್ಲಿ ನನ್ನ ಅಪ್ಪಿಕೊಂಡಾಗ ಆ ಸ್ಪರ್ಶ ಚಿರಪರಿಚಿತವಾದಂತೆನಿಸಿತು.

ಆಗಲೇ ನನಗೆ ಅರಿವಾಗಿದ್ದು ಇಷ್ಟು ದಿನ ನಾನು ಯಾರನ್ನು ಕಾಣಲು ಕಾತರತೆಯಿಂದ ಕಾಯುತಲಿದ್ದೆನೋ ಅದೇ ಸುಖವನ್ನು ಈಗ ಅನುಭವಿಸಲಿರುವೆನೆಂದು. ನನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ ಅದ ಹೇಗೆ ತೋರ್ಪಡಿಸುವುದೆಂದು ತಿಳಿಯದೆ ಪುನಃ ಅಳತೊಡಗಿದೆ. ನನ್ನ ಅಳುವ ಕಂಡು ಗಾಬರಿಯಿಂದ ಅಯ್ಯೋ ನನ್ನ ಕಂದ ಏನಾಯ್ತು ಎಂದು ಹಣೆಯ ಚುಂಬಿಸಿ ಭದ್ರವಾಗಿ ಎದೆಯೊಳಗಪ್ಪಿಕೊಂಡಾಗ ಇದಕ್ಕಿಂತ ಮಿಗಿಲಾದದ್ದು ಬೇರೆ ಇನ್ಯಾವುದಿಲ್ಲವೆನಿಸಿತು ಅವಳ ಬಿಸಿ ಅಪ್ಪುಗೆಯೊಳು ಬೆಚ್ಚನೆ ಕಣ್ಮುಚ್ಚಿದೆ.

ಪ್ರಸಾದಿನಿ.ಕೆ ತಿಂಗಳಾಡಿ
ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು

Prev Post

ಹೆಣ್ಣೇ ನೀ ಹೆಣ್ಣಾಗು | ಸೌಮ್ಯ ನೇತ್ರೆಕರ್

Next Post

ಅವಳಿಗೊಂದು ದೂರು..! | ತೇಜಸ್.ಹೆಚ್. ವೈ

post-bars

Leave a Comment

Related post