ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಕವಿಗೋಷ್ಠಿ ಕಾರ್ಯಕ್ರಮ
ಉಡುಪಿ: ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಹಾಗೂ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಉಡುಪಿ ತಾಲೂಕು ಘಟಕದ ಸಹಭಾಗಿತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿ ಕಾರ್ಯಕ್ರಮ ಇಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಚಾರ್ಯೆ ಆಶಾ ಕುಮಾರಿ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತ, ಕಾವ್ಯ, ನಾಟಕ ಇವುಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದರಿಂದ ಓದಿನಲ್ಲಿ ಏಕಾಗ್ರತೆ ಮತ್ತು ಶ್ರದ್ಧೆ ಮೂಡುತ್ತದೆ ಎಂದು ತಿಳಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಉಡುಪಿ ತಾಲ್ಲೂಕಿನ ಕಸಾಪ ಅಧ್ಯಕ್ಷ ರವಿರಾಜ್ ಎಚ್.ಪಿ. ಮಾತನಾಡಿ, ವಿದ್ಯಾರ್ಥಿಗಳು ಕಾಲೇಜು ಜೀವನದಲ್ಲಿ ಕಥೆ, ಕವನಗಳನ್ನು ರಚಿಸಲು ಒಲವು ತೋರಿದ್ದಲ್ಲಿ ಮುಂದೆ ಸಾಮಾಜಿಕ ವೇದಿಕೆಯಲ್ಲಿ ಉತ್ತಮ ಕವಿ ಮತ್ತು ಲೇಖಕರಾಗಿ ಮೂಡಿಬರಲು ಸಾಧ್ಯ ಎಂದು ಹೇಳಿದರು.
ಹಿರಿಯಡ್ಕದ ಕವಯಿತ್ರಿ ಪೂರ್ಣಿಮಾ ಸುರೇಶ್ ಕವಿಗೋಷ್ಠಿಯ ಆಶಯ ಭಾಷಣದಲ್ಲಿ, ಕವಿತೆಯ ಮೂಲಕ ಭಾವನೆಗಳನ್ನು ಪ್ರಕಟ ಮಾಡುವವರು ಕವಿಗಳು. ಬಾಲ್ಯದಿಂದ ಮುಪ್ಪಿನವರೆಗೆ ಅನುಭವಿಸುವ ಅನುಭವಗಳನ್ನು ಕಾವ್ಯದಲ್ಲಿ ಬಿತ್ತರಿಸುತ್ತದೆ. ಒಳನೋಟ ಕಾಣಲು ನಮ್ಮಲ್ಲಿ ಭಾವನೆಗಳು ಬೇಕು ಎಂದು ತಿಳಿಸಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕವಿ ಹಾಗೂ ರಂಗನಟ ರಾಜೇಶ್ ಭಟ್ ಪಣಿಯಾಡಿ ಮಾತನಾಡಿ, ಕವಿತೆ ಹುಟ್ಟಲು ಜಾಗ, ಪ್ರಕೃತಿ, ಏಕಾಂತ, ನೋವು, ರೋಷ, ಭಾವಾ ಬೇಕಾಗುತ್ತದೆ, ಭಾವನೆಗಳನ್ನು ಬಿತ್ತರಿಸಲು ಕವಿತೆ ಸಾಧನಾ ಎಂದು ತಿಳಿಸಿದರು.
ಕ.ಸಾ.ಪ ಉಡುಪಿ ಜಿಲ್ಲೆಯ ಕೋಶಾಧ್ಯಕ್ಷ ಮನೋಹರ್ ಶುಭ ಹಾರೈಸಿದರು. ಸಾಹಿತಿ ನಾರಾಯಣ ಮಡಿ ಉಪಸ್ಥಿತರಿ ದ್ದರು. ವಿದ್ಯಾರ್ಥಿಗಳಾದ ಪ್ರೇಮ ಸಾಯಿ, ಕಾವ್ಯ ಶೆಟ್ಟಿ, ರಕ್ಷಿತಾ, ಆಶಿಕಾ, ಸ್ನೇಹಾ, ಸಿಂಚನಾ, ಅದೀಶಾ, ಕೃತಿಕಾ, ನಂದೀಶ್ ಸ್ವರಚಿತ ಕವನಗಳನ್ನು ವಾಚಿಸಿದರು.
ಕನ್ನಡ ಉಪನ್ಯಾಸಕ ಶಶಿಕಾಂತ್ ಶೆಟ್ಟಿ ಸ್ವಾಗತಿಸಿದರು. ಕವಿಗೋಷ್ಠಿಯ ಸಂಚಾಲಕ ರಾಘವೇಂದ್ರ ಜಿ.ಜಿ. ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಕಸಾಪ ಉಡುಪಿ ತಾಲ್ಲೂಕಿನ ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಕವಿಗೋಷ್ಠಿಯನ್ನು ನಿರ್ವಹಿಸಿದರು.