
Ujire: ಧೀಮಂತ್ ಹಾಗೂ ಧೀಮಹಿ ವಿದ್ಯಾರ್ಥಿ ನಿಲಯದಲ್ಲಿ ‘ಧೀಮ್ ಬೀಟ್ಸ್ – 2025’ ರ ಸಂಭ್ರಮ
ಉಜಿರೆ: ಜ್ಞಾನವೆಷ್ಟು ಮುಖ್ಯವೋ ಕಲೆಯು ಅಷ್ಟೇ ಮುಖ್ಯ. ಅದು ನಮ್ಮ ಜೀವನದ ಸಮತೋಲನವನ್ನು ತೋರುತ್ತದೆ. ಕಲೆಯು ಒಬ್ಬ ವ್ಯಕ್ತಿಯನ್ನು ಪರಿಪೂರ್ಣವಾಗಿ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಶ್ರೀಮತಿ ಹೇಮಾವತಿ ಹೆಗ್ಗಡೆ ಯವರು ಅಭಿಪ್ರಾಯಪಟ್ಟರು.
ಉಜಿರೆಯ ಎಸ್‌ಡಿಎಂ ಕಾಲೇಜಿನ ಧೀಮಹಿ ಮತ್ತು ಧೀಮಂತ್ ವಿದ್ಯಾರ್ಥಿ ನಿಲಯಗಳ ಸಹಯೋಗದಲ್ಲಿ ವಿದ್ಯಾರ್ಥಿನಿಲಯದ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಹಾಸ್ಟೆಲ್ ಡೇ ‘ಧೀಮ್ ಬೀಟ್ಸ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಕೇಂದ್ರದಲ್ಲೂ ಜ್ಞಾನಕ್ಕಿಂತ ಮನೋಧರ್ಮ ಹೆಚ್ಚಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಅವಕಾಶಗಳು ಯಾವಾಗಲೂ ನಮಗಾಗಿ ಬಾಗಿಲುಗಳನ್ನು ತೆರೆದಿರುತ್ತದೆ. ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮನೋಧರ್ಮ ನಮ್ಮಲ್ಲಿರಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ. ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತನಾಡಿದರು. “ಕರ್ನಾಟಕದ ಎಲ್ಲಾ ಬೇರೆ ಬೇರೆ ಜಿಲ್ಲೆಗಳಿಂದ ವಿದ್ಯಾರ್ಥಿ ವೃಂದ ಆಗಮಿಸುತ್ತಿರುವ ಕಾರಣ ವಿದ್ಯಾರ್ಥಿಗಳ ನಿಲಯ ಆರಂಭಿಸಲಾಯಿತು. ಒಳ್ಳೆಯ ಶಿಕ್ಷಣ ದೊರೆಯಬೇಕೆಂದರೆ, ಒಳ್ಳೆಯ ವಸತಿ ದೊರೆಯ ಬೇಕು, ಮತ್ತು ರುಚಿಕರವಾದ ಊಟ ಹಾಗೂ ಜೀವನ ಪಾಠ ದೊರಕಿದರೆ ಮಾತ್ರ ಜೀವನ ಸುಖಕರವಾಗಿರುತ್ತದೆ. ಜೀವನದಲ್ಲಿ ಸ್ವಯಂ ಪ್ರೇರಿತ ಶಿಸ್ತು ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಕಟ್ಟುನಿಟ್ಟಾದ ನಿಯಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಧೀಮ್ ಬೀಟ್ಸ್ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸೋನಿಯಾ ಯಶೋವರ್ಮಾ, ಎಸ್‌ಡಿಎಂ ವಿದ್ಯಾರ್ಥಿ ನಿಲಯಗಳ ಸಿಇಓ ಪೂರನ್ ವರ್ಮಾ, ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಯುವರಾಜ ಪೂವಣಿ, ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ನಂದಕುಮಾರಿ, ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ, ಪ್ರಾಧ್ಯಾಪಕರಾದ ಡಾ. ನವೀನ್ ಕುಮಾರ್ ಜೈನ್ ಹಾಗೂ ಶ್ರೇಯಸ್ ಜೈನ್, ಧೀಮಂತ್ ಹಾಗೂ ಧೀಮಹಿ ವಸತಿ ನಿಲಯದ ನಿಲಯ ಪಾಲಕರಾದ ಪ್ರತೀಕ್ ಜೈನ್, ಪ್ರೀತಾ ಹಾಗೂ ವಿದ್ಯಾರ್ಥಿ ಸಂಯೋಜಕರಾದ ನಿಭಾ ಜೈನ್, ವಿನಯ್ ಮುಂಗ್ರಾಣಿ, ರಿತೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಮಾನಸ ಅಗ್ನಿಹೋತ್ರಿ ಮತ್ತು ಸಿಂಚನಾ ಕಲ್ಲೂರಾಯ ನಿರೂಪಿಸಿದರು. ವಿದ್ಯಾರ್ಥಿ ಪ್ರತಿನಿಧಿ ಕಲಾನ್ವಿತ ಜೈನ್ ವಂದಿಸಿದರು.