Back To Top

 ವಿದ್ಯಾರ್ಥಿ ಜೀವನದಲ್ಲಿ ಅವಕಾಶಗಳಿಗೆ ಕೊರತೆ ಇರದು | Brijesh Chowta

Mudbidri: ‘ವಿದ್ಯಾರ್ಥಿ ಜೀವನದಲ್ಲಿ ಅವಕಾಶಗಳಿಗೆ ಕೊರತೆ ಇರದು. ಆದರೆ ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ  ಉಪಯೋಗಿಸಿಕೊಳ್ಳುವ ಜಾಣ್ಮೆ ಪ್ರತಿಯೊಬ್ಬರಲ್ಲಿರಬೇಕು  ಎಂದು ದ.ಕ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ  ನುಡಿದರು.

ಅವರು ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ  ಹಮ್ಮಿಕೊಂಡ ಆಳ್ವಾಸ್ ಪದವಿ (ಸ್ವಾಯತ್ತ) ಕಾಲೇಜಿನ ವಿವಿಧ ವಿದ್ಯಾರ್ಥಿ ಘಟಕಗಳ ವಾರ್ಷಿಕ ದಿನಾಚರಣೆ ‘ಇನಾಮು – 2025’ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಯುವಜನತೆ ತಮ್ಮ ಇಚ್ಛಾಶಕ್ತಿಯ ಸಾಮರ್ಥ್ಯವನ್ನು ಅರಿತು, ತಮ್ಮ ಗುರಿಯನ್ನು ತಲುಪುವಲ್ಲಿ ಕಾರ್ಯಪ್ರವೃತ್ತರಾಗಬೇಕು. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬಹಳ ಎತ್ತರಕ್ಕೆ ಬೆಳೆದು, ಎಲ್ಲರಿಗೂ ಮಾದರಿಯಾಗಿ ದೇಶಕ್ಕೆ ಹೆಮ್ಮೆ ತರುವ ಕಾರ್ಯ ನೆರವೇರಲಿ ಎಂದು ಆಶಿಸಿದರು.

ವ್ಯಕ್ತಿತ್ವ ವಿಕಸನದಲ್ಲಿ ತರಗತಿ ಶಿಕ್ಷಣ ಒಂದು ಭಾಗವಷ್ಟೇ. ಅದನ್ನು ಹೊರತುಪಡಿಸಿ ಪಠ್ಯೇತರ ಚಟುವಟಿಕೆಗಳು ಸಾಕಷ್ಟಿವೆ.  ಇಂತಹ ವಿಪುಲ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಆಳ್ವಾಸ್ ಕಲ್ಪಿಸುತ್ತಿರುವುದು ಶ್ಲಾಘನೀಯ.  ಹಳೆ ವಿದ್ಯಾರ್ಥಿಗಳ ಪುನರ್ಮಿಲನದಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಸ್ಥೆ ಮತ್ತು ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯ ಬೆಸೆಯುವ ವೇದಿಕೆ ಕಲ್ಪಿಸಿಬೇಕು ಎಂದು ಸಲಹೆಯಿತ್ತರು.

ತುಳು ಮತ್ತು ಕನ್ನಡ ಚಲನಚಿತ್ರ ನಟ  ಅರವಿಂದ್ ಬೋಳಾರ್ ಮಾತನಾಡಿ, ಪ್ರತಿಭೆಗೆ ಎಂದು ಬಡವ, ಶ್ರೀಮಂತ ಎಂಬ ಭೇಧಭಾವವಿಲ್ಲ. ಪ್ರತಿಭೆಗೆ ತಕ್ಕ ವೇದಿಕೆ ಸಿಗುವುದು ಬಹಳ ಮುಖ್ಯ. ಕಲಾವಿದರಿಗೆ  ಸಭಿಕರ ಚಪ್ಪಾಳೆಯೆ ಆರ್ಶೀವಾದ ಎಂದರು.

ವಿದ್ಯೆಯೊಂದಿಗೆ ಪ್ರತಿಭೆಯನ್ನು ಒಗ್ಗೂಡಿಸಿ ಕಂಡ ಕನಸನ್ನು ನನಸಾಗಿಸುವ ಜವಾಬ್ದಾರಿ ಪ್ರತಿ ವಿದ್ಯಾರ್ಥಿಗಿರುತ್ತದೆ. ಪ್ರತಿಭೆ ಇದ್ದವನಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ದೇವಾಲಯವಿದ್ದಂತೆ. ತನ್ನೊಂದಿಗೆ ತನ್ನವರನ್ನು ಬೆಳೆಸಿದ ಕೀರ್ತಿ ಡಾ ಮೋಹನ್ ಆಳ್ವರಿಗೆ ಸಲ್ಲುತ್ತದೆ. ಇನಾಮು ಎಂಬ ಹೆಸರಿನಡಿಯಲ್ಲಿ ಆರಂಭಗೊಂಡ ಈ ಕಾರ್ಯಕ್ರಮ ಹೆಚ್ಚೆಚ್ಚು ಪ್ರತಿಭಾ ಅನಾವರಣಕ್ಕೆ  ವೇದಿಕೆಯಾಗಲಿ ಎಂದು ಆಶಿಸಿದರು. ವಿದ್ಯಾರ್ಥಿ ಜೀವನ ಮುಗಿದ ನಂತರ  ಕಲಿತ ವಿದ್ಯಾಸಂಸ್ಥೆಯನ್ನು ಎಂದಿಗೂ  ಮರೆಯದಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳಿಂದ, ವಿದ್ಯಾರ್ಥಿಗಳಿಗಾಗಿ ನಡೆಯುವ ಅದ್ಭುತ ಕಾರ್ಯಕ್ರಮ ಇನಾಮು. ಕೇವಲ ತರಗತಿಯೊಳಗಿನ ಪಠ್ಯಕ್ಕೆ ಮಾತ್ರ ಸೀಮಿತವಾಗದೇ, ವಿದ್ಯಾರ್ಥಿಗಳು  ತಮ್ಮಲ್ಲಿ ಅಡಗಿರುವ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆ ಎಂದರು.

ಇನಾಮು ಉದ್ಘಾಟನಾ ಸಮಾರಂಭದಲ್ಲಿ ಚಲನಚಿತ್ರ ನಟ, ನಿರ್ದೇಶಕ ಅನೀಶ್ ಪೂಜಾರಿ ಮಾತನಾಡಿ, ಶ್ರದ್ಧೆ ಮತ್ತು ಮಾಡುವ ಒಳ್ಳೆಯ ಕೆಲಸಗಳ ಮೂಲಕ ಸಾಧನೆಯ ಸಾವಿರ ಹೆಜ್ಜೆಗಳ ಪಯಣ ಆರಂಭವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ವೃತ್ತಿ ಬದುಕಿಗೆ ಪೂರಕವಾಗಿ ಈ ರೀತಿಯ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಆಯೋಜನೆ ನಿಜಕ್ಕೂ ಶ್ಲಾಘನೀಯ ಎಂದು ನುಡಿದರು.

ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ ಜೀವನ್ ರಾಮ್ ಸುಳ್ಯ ಮಾತನಾಡಿ, ಇನಾಮು ಎನ್ನುವಂತದ್ದು ಬಹುಮಾನ, ಪ್ರಶಸ್ತಿ ಮತ್ತು ಸನ್ಮಾನವನ್ನು ಪ್ರತಿಬಿಂಬಿಸುವಂತದ್ದಾಗಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಅನಾವರಣಗೊಳಿಸಲು, ವಿವಿಧ ಫೋರಂಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಸ್ತುತ್ಯರ್ಹ ಎಂದರು .

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಇನಾಮು ಸಂಯೋಜಕ ಡಾ ಯೋಗೀಶ್ ಕೈರೋಡಿ ಮತ್ತು ಮನು ಡಿಎಲ್, ವಿವಿಧ ಫೋರಂ ವಿದ್ಯಾರ್ಥಿ ಸಂಯೋಜಕರು ಮತ್ತು ಪ್ರಾಧ್ಯಾಪಕರು ಇದ್ದರು.

ಇನಾಮು -2025ರ ಪ್ರಯುಕ್ತ ನಡೆದ ವಿವಿಧ  ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಗ್ರ ಪ್ರಶಸ್ತಿಯನ್ನು ಎನ್‌ಎಸ್‌ಎಸ್ ಫೋರಂ ಪಡೆದರೆ, ರನ್ನರ್ ಅಪ್ ಸ್ಥಾನವನ್ನು ತುಳು  ಫೋರಂ ಪ್ರಶಸ್ತಿ ಮುಡಿಗೇರಿಸಿಕೊಂಡರೆ, ಡ್ಯಾನ್ಸ ಫೋರಂ ತೃತೀಯ ಸ್ಥಾನ ಪಡೆದರು. ಎನ್‌ಸಿಸಿ ನೌಕ ದಳ ಫೋರಂಗೆ ಉತ್ತಮ ಕಾರ್ಯಕ್ರಮ ಆಯೋಜಕ ಪ್ರಶಸ್ತಿ ನೀಡಲಾಯಿತು.

ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಅಮೂಲ್ಯ ಜೈನ್ ನಿರೂಪಿಸಿ, ಸೌರಭ್  ಶೆಟ್ಟಿ ವಂದಿಸಿದರು. ನಂತರ ಇನಾಮು ಕಾರ್ಯಕ್ರಮದ ಪ್ರಯುಕ್ತ ನಡೆದ ಹಲವು ಸ್ಪರ್ಧೆಗಳ ವಿಜೇತರ ಪ್ರತಿಭಾ ಪ್ರದರ್ಶನ ನಡೆಯಿತು.

Prev Post

ಸ್ಟ್ರಾಟೆಜಿಕ್ ಮ್ಯಾನೇಜ್ಮೆಂಟ್ : ಪಠ್ಯ ಪುಸ್ತಕ ಅನಾವರಣ । Canara College

post-bars

Leave a Comment

Related post