ಮೌನ ಕವಿಯ ಸ್ವಗತದಲಿ ಅಭಿಸಾರಿಕೆಯ ನೆನಪು | ಹಣಮಂತ ಎಂ ಕೆ
ದೊಡ್ಡೊರೊಬ್ಬರು ಹೇಳಿದ್ರು ಪ್ರೀತಿ ಆರೋಗ್ಯವಂತರ ಖಾಯಿಲೆಯಂತೆ. ಬುದ್ಧಿ ಬಂದಾಗಿನಿಂದಲೂ ಬೆನ್ನಿಗೆ ಜೋತು ಬಿದ್ದ ಜವಾಬ್ದಾರಿಗಳಲೇ ಸೊರಗಿದ ನಾನು ಆ ಆರೋಗ್ಯವಂತನ ಪಟ್ಟದಿಂದ ಬಹುಕಾಲ ದೂರವೇ ಉಳಿದಿದ್ದೆ. ಆದರೆ ಯಾಕೋ ಗೊತ್ತಿಲ್ಲಾ ಮೊದಲ ಸಲ ನನ್ನ ಮನಸ್ಸು ಜಾರಿತ್ತು ಅವಳಿಗಾಗಿ, ಅವಳೊಬ್ಬಳಿಗಾಗಿ.
ಹೇಳಬೇಕೆಂದರೆ ಅತಿಲೋಕ ಸುಂದರಿಯೇನಲ್ಲ, ಸರ್ವಗುಣ ಸಂಪನ್ನೇ ಅಂತಲೂ ಬಣ್ಣಿಸಲ್ಲ, ಯಾಕೆಂದರೇ ಅವಳ ವರ್ಣಿಸಲು ನಾನೆಷ್ಟು ಅರ್ಹನೋ ಅರಿಯೇ. ಆದರೂ ತಿಳಿಸುವೆ ನಿಮಗೆ ಆ ಸಾಧಾರಣ ಮುದ್ದು ಪೆದ್ದು ಮನಸ್ಸಿನ ಬಗ್ಗೆ. ಯಾರಿಗೂ ಸೋಲದ ಮನಸು ಅವಳತ್ತ ಏಕೆ ವಾಲಿತು ಎಂದರೆ, ನನ್ನ ಬಳಿ ಉತ್ತರವಿಲ್ಲ. ಬಾಲ್ಯದಿಂದಲೂ ಕುಟುಂಬದಿಂದ ದೂರವಿದ್ದ ಈ ಏಕಾಂತದ ಊರಿನ ನಾಯಕನಿಗೆ ಅವಳ ಪ್ರೀತಿ, ಕಾಳಜಿ ನಾ ಬಾಲ್ಯದಲ್ಲೇ ಕಳೆದುಕೊಂಡ ಅಮ್ಮನ ಪ್ರೀತಿಯ ನೆನಪಿಸಿತ್ತೇನೋ ಅದಕ್ಕೆ ಅನ್ಸುತ್ತೆ ನಾ ಪ್ರೀತಿ ಪ್ರಪಾತಕ್ಕೆ ಬಿದ್ದದ್ದು.
ಮೊದಲಿನಿಂದಲೂ ಸಾಕಷ್ಟು ಗೌರವ, ಅಭಿಮಾನ ನನಗೆ ಹೆಣ್ಣು ಮತ್ತು ಪ್ರೀತಿ ಎರಡರ ಮೇಲೆಯೂ. ಸಾಕಷ್ಟು ವಿಚಾರಗಳಲ್ಲಿ ಸ್ತ್ರೀವಾದದ ಪರ ನಿಂತಿದ್ದೇನೆ. ನನ್ನ ಓದು, ನಮ್ಮನೆಯ ಸಂಸ್ಕಾರ ಕೂಡ ನನಗೆ ಕಲಿಸಿದ್ದು ಅದನ್ನೇ. ಮಾನ, ಮರ್ಯಾದೆಗೆ ಅಂಜುವ ಮನೆತನದ ಮಗನಾಗಿ ನನ್ನ ಮೇಲಿನ ಕೆಲ ನಿರೀಕ್ಷೆಗಳ ಹುಸಿಗೊಳಿಸುವ ಹಠ ನನಗೂ ಇರದ ಕಾರಣ ಸಾಕಷ್ಟು ಬಾರಿ ನನ್ನ ಭಾವನೆಗಳಿಗೆ ಬೇಲಿ ಹಾಕಿ ಎಲ್ಲರಿಂದ ದೂರ ಉಳಿಯುತ್ತಿದ್ದೆ.
ಅದು ಒಂದು ರೀತಿಯಲ್ಲಿ ಒಳ್ಳೆಯದೇ ಏಕೆಂದರೆ, ಪುಸ್ತಕಗಳ ಪರಿಶುದ್ಧ ಪ್ರೇಮ ನನಗೆ ಸಿಗುವಂತೆ ಮಾಡಿತಲ್ಲ. ಅದಕ್ಕಾಗಿ ನನ್ನ ಜವಾಬ್ದಾರಿಗಳಿಗೆ, ನನ್ನ ಸಮಸ್ಯೆಗಳಿಗೆ, ನನ್ನ ಒಂಟಿ ತನಕೆ ನಾ ಸದಾ ಧನ್ಯವಾದ ತಿಳಿಸುತಲೇ ಇರುವೇ. ಹೊತ್ತಿಗೊಮ್ಮೆ ಬದಲಾಗುವವರ ನಡುವೆ ಹೊತ್ತಿಗೆಯಂತಹ ಆಪ್ತಮಿತ್ರನ ನೀಡಿದ್ದಕ್ಕೆ.
ಅಭಿಸಾರಿಕೆ…. ನನ್ನ ಮನದ ಮೌನಕೇ ನಾ ಇಟ್ಟ ಹೆಸರು. ನನ್ನ ಕಲ್ಪನಾ ಲೋಕದ ಬರಹಗಳಿಗೆ ಉಸಿರು. ಅಷ್ಟಕ್ಕೂ, ಅಷ್ಟೊಂದು ಪರಿಶುದ್ಧ ಪ್ರೇಮ ಅವಳ ಮೇಲೆಕೆ..? ಈ ಹೆಸರು ಅವಳಿಗೆ ಏಕೆ..? ನನ್ನ ಕವಿ ಪ್ರೀತಿಗೆ ಅವಳು ಅರ್ಹಳಾ.? ಎಂಬ ಸಾಕಷ್ಟು ಪ್ರಶ್ನೆಗಳು ನನ್ನ ತಲೆಯನ್ನು ತುಂಬಾ ಸಲಾ ಕೊರೆದರೂ ಸಹ ಉತ್ತರ ಇನ್ನೂ ಸಿಗದೇ ಪರದಾಡುತ್ತಿರುವ ಪಾಪದವನು ನಾನು.
ಹಳೆಕಾಲದ ಚಲನಚಿತ್ರಗಳು ಮತ್ತು ಈ ಹಾಳಾದ ಕವಿಗಳ ಸಾಹಿತ್ಯ ನನ್ನ ಮನದಲ್ಲಿ ಪ್ರೀತಿಯ ಬಗ್ಗೆ ತೀರಾ ಗೌರವಪೂರ್ವಕ, ನಿಷ್ಕಲ್ಮಶ ಭಾವವೊಂದನ್ನೂ ಭಿತ್ತಿ, ಪ್ರೀತಿ ಎಂಬ ಮಾಯೆಯ ಅಸ್ತಿತ್ವದ ಬಗ್ಗೆ ನನ್ನಲ್ಲಿ ದೃಢವಾಗಿ ತುಂಬಿತ್ತು. ಮಿರ್ಜಾ ಗಾಲಿಬ್, ಖಲೀಲ್ ಗಿಬ್ರಾನ್, ಜಲಾಲುದ್ದೀನ್ ರೂಮಿ, ಗುಲ್ಜಾರ್ ಇವರೆಲ್ಲರ ಪ್ರಭಾವಕ್ಕೊಳಪಟ್ಟು ನಾನು ಪ್ರೀತಿ ಎಂದರೆ ಎರಡು ಮನಸ್ಸಿನ ನಿಸ್ವಾರ್ಥ ಮಿಲನ, ಕಣ್ಣಲ್ಲೇ ಹುಟ್ಟಿ ಕಣ್ಣಲ್ಲೇ ಮುಂದುವರೆಯುವ ಮಧುರ ಬಾಂಧವ್ಯ, ಹೀಗೆ ಪ್ರೀತಿಯ ಬಗ್ಗೆ ಪವಿತ್ರ ಭಾವ ಬೆಳೆಸಿಕೊಂಡಿದ್ದೆ.
ಪ್ರೀತಿಯ ಬಗೆಗಿನ ನನ್ನ ಪವಿತ್ರ ಭಾವನೆಗಳೇ ನನಗೆ ಮುಳ್ಳಾದವೇನೋ.., ಎದೆಯಾಳಕ್ಕಿಳಿಸಿಕೊಂಡಿದ್ದ ನನ್ನ ಮೊದಲ ಪ್ರೀತಿಯೇ ನನಗೆ ಪ್ರೀತಿಯ ಅಸ್ತಿತ್ವವೇ ಸುಳ್ಳು ಎಂದು ಸಾಬೀತು ಪಡಿಸಿತು. ನಾನು ಪ್ರೀತಿಯನ್ನೇ ಬದುಕು ಅನ್ಕೊಂಡಿದ್ದೆ, ಅವಳು ಪ್ರೀತಿಗೂ ಬದುಕಿಗೂ ಇರುವ ವ್ಯತ್ಯಾಸ ತಿಳಿಸಿ ನಡೆದಳು. ಅವಳಿಗೆ ನನ್ನ ಮೇಲಿರುವ ಭಾವನೆಗಳಿಗೆ ಅವಳಲ್ಲಿಯೇ ಸರಿಯಾದ ಉತ್ತರವಿರಲಿಲ್ಲ. ನನಗವಳೂ ಸರ್ವಸ್ವವೂ ಎಂದುಕೊಂಡಿದ್ದೆ, ಆದರೆ ಪ್ರೀತಿಲೀ ನಾನು ಸರ್ವನಾಶವಾಗುತ್ತಿರುವುದು ನನ್ನ ಪ್ರೇಮಾಂಧತನದಲ್ಲಿ ಅರಿವಿಗೆ ಬರಲಿಲ್ಲ.
ಅವಳಲ್ಲಿ ಆಳವಾದ ಭಾವನೆಗಳಿರಲಿಲ್ಲ, ನಾನೋ ಅತಿದೊಡ್ಡ ಹುಚ್ಚ ನೋಡಿ ಭಾವಸಾಗರವನ್ನೇ ಹರಿಸಿಬಿಟ್ಟಿದ್ದೆ ಆಕೆಯ ಕಡೆಗೆ. ಅವಳ ಬದುಕಿಗೆ ಬೆಳಕಾಗಬೇಕೆಂದುಕೊಂಡಿದ್ದೆ, ನನ್ನ ಬಾಳೇ ಅಂಧಕಾರಕ್ಕಿಳಿಯಿತು. ಅವಳ ನಲಿವಿಗೆ ಕಾರಣ, ನೋವಿಗೆ ಸಾಂತ್ವನ ನಾನಾಗಲು ಬಯಸಿದ್ದೆ, ಆದರೆ ಅವಳು ಪ್ರೀತಿ ಎಂಬ ಅಸ್ತ್ರದೀ ಎದೆಗೆ ಇರಿದು ನಡೆದಳು.
ಹಾಗಂತ ಬರೀ ದೂರುಗಳನ್ನೇ ಸಲ್ಲಿಸಲೇ ಅವಳ ಕುರಿತು..? ಅಷ್ಟಕ್ಕೂ ನನ್ನ ಪ್ರೀತಿ , ನನ್ನ ಮೊದಲ ಪ್ರೀತಿ ಅಲ್ಲವೇ… ಅವಳು ಒಮ್ಮೊಮ್ಮೆ ನಾನೇ ಎಲ್ಲಾನೂ ಆಕೆಗೆ ಅನ್ನೋ ರೀತಿ ಇದ್ದರೆ, ಇನ್ನೊಮ್ಮೆ ನಾನೇನೋ ಅವಳ ಪರಮವೈರಿ ಅನ್ನೋ ರೀತಿ ವರ್ತಿಸುವವಳು. ಅವಳು ಕೊಟ್ಟ ನೋವಿನ ಉಡುಗೊರೆಗಳ ನೆನೆದಾಗಲೊಮ್ಮೆ ಎದೆ ನಡುಗುವುದು, ಗೊತ್ತಿಲ್ಲದೇ ಕಣ್ಣ ಹನಿ ಜಾರುವುದು ಈಗಲೂ. ಆದರೆ ನನಗೆ ಹೆಮ್ಮೆಯಿದೆ ಆಕೆ ನನ್ನನ್ನೂ ಬೇರೆ ಯಾವ ರೀತಿಯೂ ಉಪಯೋಗಿಸಿಕೊಂಡಿಲ್ಲ. ಬದಲಾಗಿ ಹಲವು ಸಿಹಿ ನೆನಪು ಸಹ ನೀಡಿದ್ದಾಳೆ. ಜನ್ಮದಿನ ಆಚರಣೆ, ಉಡುಗೊರೆ, ಹೀಗೆ ಕೆಲವು ನೆನಪುಗಳನ್ನು ನೀಡಿದ್ದಾಳೆ ಸಖಿ.
ಅವಳಿಗೂ ನನ್ನ ಮೇಲೆ ಪ್ರೀತಿಯಂತೆ ತೀರಾ… ಏನೂ ಹೇಳಲೀ ನಾನೀಗ..? ನಾನೋ ಮೊದಲೇ ಮೂಕ. ಪ್ರೀತಿಯ ಅಭಿಸಾರಿಕೆ… ನೀನೆಷ್ಟೇ ನೋವು ಕೊಟ್ಟರೂ, ನಾನು ಪ್ರೀತಿಸಿದ್ದೆ, ಪ್ರೀತಿಸುತ್ತಿರುವೆ, ಸದಾ ಪ್ರೀತಿಸುತ್ತಿರುತ್ತೇನೆ ಅದಂತೂ ಬದಲಾಗದ ಸತ್ಯ. ನಿನ್ನ ನೋವು ನಲಿವಿನಲಿ ನಾ ಜೊತೆಗಿದ್ದಿದ್ದಕ್ಕೆ ನನ್ನ ಈಗ ಒಂಟಿ ಮಾಡಿರುವೆಯಲ್ಲ ಧನ್ಯವಾದ ಸಾವ್ಕಾರ್ತಿ. ನಾವಿಬ್ಬರೂ ಒಂದಾಗಲೂ ಸಾಧ್ಯವಿಲ್ಲ ಎಂಬುದು ನಿನ್ನ ಮಾತು, ಆದರೆ ಪ್ರಯತ್ನ ಬಿಡೇನೂ ಎಂಬುದು ನಾ ನಿನಗೆ ಹೇಳುವ ಕೊನೆಯ ಮಾತು. ಅಷ್ಟು ಇಷ್ಟು ಪ್ರೀತಿಸ್ತೀನಿ ಅಂತ ನನ್ನ ಪ್ರೀತಿಗೆ ಹೋಲಿಸಬೇಡ ನಿನ್ನಯ ಪ್ರೀತಿಯ ನನ್ನ ಪ್ರೇಮದ ಆಳ ಅನಂತ ನೆನಪಿರಲಿ ಒಡತಿ.
ಎಲ್ಲ ಹುಡುಗರೂ ಬಯಸುವಂತೆ ನಾನೂ ಹೇಳಬೇಕಲ್ಲ ಈಗ, ಎಲ್ಲಾದರೂ ಇರು ಒಟ್ಟಿನಲ್ಲಿ ಚೆನ್ನಾಗಿರು. ನಿನ್ನ ಖುಷಿ ನನಗಿಷ್ಟ. ಮನದ ಹೊಸ್ತಿಲ ದಾಟಿದ ಮೊದಲಿಗಳು ನೀನು. ನೀನಗಷ್ಟೇ ಆ ಜಾಗ ಶಾಶ್ವತ. ನೀ ಹೋಗುವುದಾದರೆ ಪೂರ್ತಿ ಮನದ ಕದ ಹಾಕಿಕೊಂಡೇ ಹೋಗು ಕನಸಲೂ ಸುಳಿಯದಿರಲೀ ಅನ್ಯರ್ಯಾರೂ ಅತ್ತ. ಸಾವಿರ ಸಲ ನಿನಗೆ ಹೇಳಿದ ಆ ಮಾತನ್ನೂ ಮತ್ತೆ ಮರುಕಳಿಸುವ ಆಸೆ. ಹೌದು ನನ್ನ ಬದುಕಿನ ಮೊದಲ ಪ್ರೇಮ ಮತ್ತು ಕೊನೆಯ ಪ್ರೇಮ ಎರಡು ನೀನೇ…. ನೀನೆಷ್ಟೇ. ನಿನ್ನಿಂದ ಪ್ರೀತಿ ಹೊರತು ಬೇರೇನೂ ಬಯಸಿಲ್ಲ. ನನ್ನದು ಕವಿ ಪ್ರೀತಿ ನೆನಪಿರಲಿ, ಆ ಪರಿಶುದ್ಧ ಪ್ರೇಮದ ರಕ್ತ ನಿನ್ನ ಕೈಗಂಟದಿರಲೀ… ಇಂತಿ ನಿನ್ನ ಪ್ರೀತಿಗೆ ಬಲಿಯಾದವ.
ಹಣಮಂತ ಎಂ. ಕೆ.
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ತುಮಕೂರು