“ಹಂತಕಿ ಐ ಲವ್ ಯೂ” ಸೈಕೋಪಾಥ್ ಒಬ್ಬಳ ಪ್ರೇಮಕಥೆ | ಹಣಮಂತ ಎಂ.ಕೆ.
ಪುಸ್ತಕದ ಮುನ್ನುಡಿಯಲ್ಲಿ ಸ್ವತಃ ರವಿ ಬೆಳಗೆರೆಯವರೇ ಬರೆದುಕೊಂಡಿರುವಂತೆ ಇದು ಸಿನಿಮಾವೊಂದರ ಸ್ಕ್ರೀನ್ ಪ್ಲೇ ಆಧರಿಸಿ ಬರೆದ ಪುಟ್ಟ ಕಾದಂಬರಿ. ಶರೋನ್ ಸ್ಟೋನ್ ಮತ್ತು ಮೈಕಲ್ ಡೌಗ್ಲಾಸ್ ನಟನೆಯ ‘ಬೇಸಿಕ್ ಇನ್ ಸ್ಟಿಂಕ್ಟ್’ ಚಿತ್ರವನ್ನು ಆಧರಿಸಿದ ಕಥೆಯಾದರು ಸಹ ಹಂಗೇರಿ ದೇಶದ ಕಥೆಗಾರ ಜೋ ಎಸ್ತೆರಾಸ್‌ನ ಕಥೆಯನ್ನು ಭಾರತೀಯ ಪರಿಸರಕ್ಕೆ ಒಗ್ಗಿಸಿಕೊಂಡು ಬರೆದು ಅದ್ಭುತ ಮರ್ಡರ್ ಮಿಸ್ಟ್ರೀ ದಾಟಿಯ ಕಾದಂಬರಿಯನ್ನು ನಮಗೆ ನೀಡಿದ್ದು ಅಕ್ಷರ ಮಾಂತ್ರಿಕ ರವಿ ಬೆಳಗೆರೆ.
ಕೊಲೆ, ತನಿಖೆ, ಪೊಲೀಸ್ ವ್ಯವಸ್ಥೆ, ಭ್ರಷ್ಟಾಚಾರ, ಸೈಕಿಯಾಟ್ರಿ ಜೊತೆಗೆ ತುಸು ಕಾಮ, ಪೋಲಿತನ ಒಳಗೊಂಡ ರೋಚಕ ಮರ್ಡರ್ ಮಿಸ್ಟ್ರೀ ಕಥೆ ಇದಾಗಿದೆ. ಕಥೆಯ ಆರಂಭ ಒಂದು ಕೊಲೆಯಿಂದ ಪ್ರಾರಂಭವಾಗಿ ನಂತರ ತನಿಖೆ ಆರಂಭವಾದಂತೆ ಒಬ್ಬರಾದ ಮೇಲೆ ಒಬ್ಬರ ಮೇಲೆ ಅಪರಾಧಿ ಭಾವನೆ ನಮಗೆ ಹುಟ್ಟುತ್ತದೆ. ಕೊಲೆಗೂ ಕಾದಂಬರಿಗೂ ಏನ್ ಸಂಬಂಧ?, ಬರಹಗಾರ್ತಿಯೇ ಕೊಲೆಗಾರ್ತಿಯೇ?, ಹೀಗೆ ನಾನಾ ಗೊಂದಲಗಳು ಕಾದಂಬರಿ ಓದುತ್ತಾ ಸಾಗಿದಂತೆ ಎಡೆಬಿಡದೆ ಕಾಡುತ್ತದೆ.
ತನಿಖೆ ನಡೆಸಲು ಬರುವ ಖಡಕ್ ಪೊಲೀಸ್ ಅಧಿಕಾರಿ ಎನ್ಕೌಂಟರ್ ಸ್ಪೆಶಲಿಸ್ಟ್ ಪಾಲಿಯ ಚಾಣಾಕ್ಷತೆ, ಕೋಪ ಮತ್ತು ಆತನ ಸಹಾಯಕ ದೇವಧರನ್ ಕರ್ತವ್ಯ ನಿಷ್ಠೆ, ನಿಮ್ಮ ಹೃದಯ ಕದಿಯಬಹುದಾದ ಶರತ್ ಯಾಮಿನಿ ಎಂಬ ಬ್ಯೂಟಿ ವಿಥ್ ಬ್ರೇನ್ ಕಾಂಬಿನೇಷನ್ ಬರಹಗಾರ್ತಿ, ಗೊಂದಲಗಳ ಗೂಡು ಜೇನು, ಭ್ರಷ್ಟ ಅಧಿಕಾರಿ ಕಾಂಬಳೆ, ಕೋಪಿಷ್ಠನ ಪ್ರೀತಿಸುವ ಜೀಯಾ, ನೀನಾ ಎಮಿಲಿ ಎಂಬ ಸೈಕೊ ಕಿಲ್ಲರ್, ಹೀಗೆ ಪ್ರತಿಯೊಂದು ಪಾತ್ರವೂ ತನ್ನದೇ ಆದ ವಿಶೇಷತೆಯಿಂದ ಕೂಡಿವೆ.
ಕಥೆಯ ಪ್ರಮುಖ ಅಂಶ ಎಂದರೆ ಅಕ್ಷರ ಮಾಂತ್ರಿಕ ರವಿ ಬೆಳಗೆರೆಯವರ ವಿಷಯ ಪ್ರಸ್ತುತ ಪಡಿಸುವ ರೀತಿ ಮತ್ತು ಅವರ ಪದಬಳಕೆ. ಒಂದು ಕಥೆಯನ್ನು ಎಷ್ಟು ರೋಚಕತೆಯಿಂದ, ಸ್ವಾರಸ್ಯಕರವಾಗಿ ಕಟ್ಟಿಕೊಡಲು ಸಾಧ್ಯವೋ ಅದಷ್ಟೂ ಇಲ್ಲಿ ಸಾಧ್ಯವಾಗಿಸಿದ್ದಾರೆ. ಕೊಲೆಯೊಂದರ ತನಿಖೆಯಲ್ಲಿನ ಹಲವಾರು ತಿರುವುಗಳು, ಹಸಿ ಕಾಮ, ತುಸು ಪೋಲಿತನದ ಮಿಶ್ರಣ, ಕೊನೆಗೆ ನಿಮ್ಮ ಊಹೆಗಳನ್ನೆಲ್ಲ ತಪ್ಪು ಮಾಡುವ ಅಂತ್ಯ ಹೊಂದಿರುವ ಕತೆಯೇ ಹಂತಕಿ ಐ ಲವ್ ಯೂ.
ಹಣಮಂತ ಎಂ.ಕೆ.
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು