ಪರಿಸರದ ಕತೆಯ ‘ಮಾರ’ನ ಹುಡುಕಿ ಅಜ್ಜಿಯ ಪಯಣ | ಶಿಲ್ಪ. ಬಿ
ಜೇನುಗೂಡಿನ ದಂಬಿಗಳಂತೆ ಝೇಂಕಾರಿಸುತ್ತಿದ್ದ ಬಸ್ಸಿನಲ್ಲಿ ಒಂದು ಕ್ಷಣ ಮೌನವು ಆವರಿಸಿತ್ತು. ಬಸ್ಸಿನಲ್ಲಿದ್ದ ಎಲ್ಲರ ಮುಖಗಳು ಆಶ್ಚರ್ಯದಲ್ಲಿ ಹಿಂದಿರುಗಿ ನೋಡುತ್ತಿದ್ದವು. ಏಕೆ ಎನ್ನುತ್ತೀರಾ..? ಯಾರೋ ಒಬ್ಬರು ಅಜ್ಜಿ ಪುಸ್ತಕವನ್ನು ಹಿಡಿದ ಜೋರಾಗಿ ಕಿಲ ಕಿಲವೆಂದು ನಗುತ್ತಿದ್ದರು.. ಹೂ..! ಅವರೇ ನಮ್ಮ ಅಜ್ಜಿ, ಕೆಂಪಮ್ಮ ಅಜ್ಜಿ. ಕೆಂಪಮ್ಮ ಅಜ್ಜಿಗೆ ಸರಿಸುಮಾರು 80ರ ಪ್ರಾಯ.
ಕೆಂಪಮ್ಮಜಿ ಎಂದರೆ ಬೆಳಗಾನೆ ಎದ್ದು ಶುಗರ್ ಮಾತ್ರೆ, ಬಿಪಿ ಮಾತ್ರೆಗಳನ್ನು ಕುಡಿದು, ಎಲೆ ಅಡಿಕೆ ಹಾಕಿಕೊಂಡು, ಉದ್ಯಾನವನದಲ್ಲಿ ಕೊಂಚ ಹೊತ್ತು ಹರಟೆ ಹೊಡೆದು, ಮರಳಿ ಮಧ್ಯಾಹ್ನ ಒಂದು ಮುದ್ದೆ ನಿದ್ದೆ ಹೊಡೆದು ಬದುಕುವ ಜೀವ ಎಂದುಕೊಂಡಿದ್ದೀರ….?
ನಮ್ಮ ಅಜ್ಜಿ ಈ ಕ್ರಿಯೆಗಳಿಗೆ ತದ್ವಿರುದ್ಧ. ಅಜ್ಜಿಗೆ ವಯಸ್ಸು 80 ಅಷ್ಟೇ. ಆದರೆ ಶಕ್ತಿ 25 ವಯಸ್ಸಿನ ಹುಡುಗಿಯಂತೆ. ಅಜ್ಜಿಯಲ್ಲಿ ಯೌವನ ಮಾಯವಾಗಿದ್ದದು ಸತ್ಯ. ಆದರೆ ಸ್ವಾಭಿಮಾನ ಕೊಂಚವು ಮರೆಯಾಗಿರಲಿಲ್ಲ. ಈಗಲು ದುಡಿದು ತಿನ್ನುವ ಹುಚ್ಚು. ನಮ್ಮ ಕೆಂಪಮ್ಮ ಅಜ್ಜಿಯಲ್ಲಿ.. ಗುಡಿಸಲಿನಲ್ಲಿ ಒಂಟಿಯಾಗಿದ್ದ ಅಜ್ಜಿ ಬೆಳಗಾನೆ ಎದ್ದು ಕಸ ಮುಸುರೆ ತೊಳೆದು, ರೊಟ್ಟಿ ತಟ್ಟಿ, ಚೆಂದದ ಒಂದು ಸೀರೆ ಉಟ್ಟುಕೊಂಡು, ತನ್ನ ಪ್ರೀತಿಯ ಬಿದುರು ಕೋಲನ್ನು ತೆಗೆದುಕೊಂಡ ಮನೆಯಿಂದ ಹೊರಟರೆ ಮರಳಿ ಹಿಂದಿರುಗುತ್ತಿದ್ದದ್ದು ರಾತ್ರಿ ಹತ್ತು ಗಂಟೆಗೆ. ಅಲ್ಲಿಯವರೆಗೂ ಏನು ಮಾಡುತ್ತಿದ್ದರು? ಮೆಜೆಸ್ಟಿಕಿನ ಒಂದು ಬಸ್ಸು ಹಿಡಿದು ಅಲ್ಲಿರುವ ಅಣ್ಣಮ್ಮ ದೇವಿಯ ದೇವಸ್ಥಾನವನ್ನು ಗುಡಿಸಿ ಸಾರಿಸಿ ಅವರು ಕೊಡುತ್ತಿದ್ದ ಹಣವನ್ನು ತೆಗೆದುಕೊಂಡ ಮಾರ್ಕೆಟಿನಲ್ಲಿ ಹೂ ಮಾರಿ ಜೀವನವನ್ನು ನಡೆಸುತ್ತಿದ್ದಳು.
ಎಂಟನೇ ಕ್ಲಾಸ್ನನ್ನು ಪಾಸ್ ಮಾಡಿದ್ದ ಅಜ್ಜಿ ಕನ್ನಡವನ್ನು ಬಹಳ ಸೊಗಸಾಗಿ ಓದುತ್ತಿದ್ದಳು. ಹಾ..! ಇಲ್ಲೊಂದು ಮುಖ್ಯ ವಿಷಯವುಂಟು. ಅಜ್ಜಿಗೆ ಪುಸ್ತಕಗಳನ್ನು ಓದುವ ಹುಚ್ಚು. ತಿಂಗಳೆಲ್ಲ ಸಂಪಾದಿಸುವ ಹಣವನ್ನು ಕೂಡಿಟ್ಟು ತಿಂಗಳಿಗೊಂದು ಪುಸ್ತಕವನ್ನು ಕೊಂಡುಕೊಳ್ಳುತ್ತಿದ್ದಳು. ಈ ಪುಸ್ತಕಗಳನ್ನು ಕೊಂಡು ತನ್ನ ಗುಡಿಸಲನ್ನು ಒಂದು ದೊಡ್ಡ ಗ್ರಂಥಾಲಯವನ್ನಾಗಿಯೆ ಬದಲಿಸಿ ಬಿಟ್ಟಿದ್ದಳು.
ಹೌದು… ಕೆಂಪಮ್ಮ ಅಜ್ಜಿ ಅಂದು ಓದುತ್ತಿದ್ದದ್ದು ತೇಜಸ್ವಿಯವರು ರಚಿಸಿರುವ ಪರಿಸರದ ಕಥೆ.. ನಮ್ಮೆಲ್ಲರ ಪ್ರೀತಿಯ ಮಾರನು ಹೇಳುತ್ತಿದ್ದ ಅತ್ಯದ್ಭುತ ಕಥೆಗಳನ್ನು ಓದಿ ಮನಸ್ಸಿನಲ್ಲಿ ನಸು ನಗುತ್ತಿದ್ದವಳು.. ಇದ್ದಕ್ಕಿದ್ದ ಹಾಗೆ ಜೋರಾಗಿ ನಕ್ಕು ಬಿಟ್ಟಳು… ಪುಸ್ತಕವನ್ನು ಹಾಗೆ ಓದುತ್ತಿದ್ದ ಅಜ್ಜಿಯಲ್ಲಿ ಒಂದು ಹುಚ್ಚು ಆವರಿಸಿತ್ತು..
ಅದೇನು ಅಂತಹ ವಿಭಿನ್ನ ಹುಚ್ಚೇನು ಅಲ್ಲ.. ಅಂಕುಡೊಂಕಾಗಿ ಅಕ್ಷರಗಳನ್ನು ಬರೆದು ಅದರ ಮೇಲೆ ಗೆರೆಗಳನ್ನು ಎಳೆದು ಚುಕ್ಕಿಗಳನ್ನು ಇಟ್ಟು ಮಾಡುವ ಆ ಒಂದು ಸಹಿಯ ಮೇಲೆ ನಮ್ಮೆಲ್ಲರಿಗೂ ಅದೇನೊ ಇನ್ನಿಲ್ಲದ ವ್ಯಾಮೋಹ… ಹುಚ್ಚು.. ಅಲ್ಲವಾ? ಅಜ್ಜಿಯಲ್ಲು ಅಂತಹದೇ ಆಸೆ. ಒಂದು ಆಟೋ ಗ್ರಾಫ್ ಪಡೆಯಬೇಕೆಂದು. ಅದು ಯಾರದ್ದು ಗೊತ್ತೆ..? ತೇಜಸ್ವಿಯವರಿಗೆ ಆಶ್ಚರ್ಯವಾಗುವಂತೆ ಕಥೆಗಳನ್ನು ಹೇಳುತ್ತಿದ್ದ ಮಾರನದ್ದು.. ನಮ್ಮ ಕೆಂಪಮ್ಮ ಅಜ್ಜಿಯ ಮನಸ್ಸಿನಲ್ಲಿ ಒಮ್ಮೆ ಯಾವದಾದರೂ ಒಂದು ಗುರಿ ಹುಟ್ಟಿದ್ದರೆ ಸಾಕು ಅದನ್ನು ಸಾದಿಸುವ ತನಕ ಬಿಡುವುದಿಲ್ಲ ಅವಳು.
ಮರುದಿನವೇ ಒಂದು ಕಾಗದ ಹಾಗೂ ನೀಲಿ ಬಣ್ಣದ ಪೆನ್ನನ್ನು ತೆಗೆದುಕೊಂಡು ಟ್ರೈನಿನಲ್ಲಿ ಚಿಕ್ಕಮಗಳೂರಿನ ದಾರಿ ಹಿಡಿದಳ.. ಟ್ರೈನಿನಲ್ಲಿ ಪರಿಸರದ ಕಥೆ ಓದುತ್ತಿದ್ದವಳು ಇನ್ನೇನು ಚಿಕ್ಕಮಗಳೂರನು ತಲುಪುವಾಗ ಮೂಲಿಕೆ ಬಳ್ಳಿಯ ಸುತ್ತ ಕಥೆಯನ್ನು ಓದಲು ಪ್ರಾರಂಭಿಸಿದಳು.. ಆ ಎಸ್ಟೇಟ್ನನು ತಲುಪುವ ಸಮಯ ಹತ್ತಿರವಾಗುತ್ತಿದ್ದಂತೆ ಅಜ್ಜಿಯಲ್ಲಿ ಇನ್ನಿಲ್ಲದ ಕುತೂಹಲ ಸಂತೋಷ ಮನೆ ಮಾಡಿತ್ತು.
ಮಾರ ಹೇಗಿರಬಹುದು ಎಂಬ ಕುತೂಹಲ ಮತ್ತೊಂದೆಡೆ. ಕೆಂಪಮ್ಮಜ್ಜಿ ಕೊನೆಗೂ ಎಸ್ಟೇಟನ್ನು ತಲುಪಿದಳು. ಗಡಗಡವೆಂದು ನಡುಗೊತ್ತಿದ್ದ ಹೆಜ್ಜೆಯನ್ನು ಮುಂದೆ ಮುಂದೆ ಹಾಕುತ್ತಾ ಮಾತು ಬಾರದ ಅಜ್ಜಿ ನನ್ನ ಕೈಗಳ ಮೂಲಕ ಮಾರನ ಹೆಸರನ್ನು ತೋರಿಸಿ ಇವರು ಎಲ್ಲಿರುವರು..? ಎಂದು ಮೂಕ ಭಾಷೆಯಲ್ಲಿ ಕುತೂಹಲದಲ್ಲಿ ಕೇಳಿದಳು. ಎಲ್ಲರಲ್ಲೂ ಒಂದು ಕ್ಷಣ ಆಶ್ಚರ್ಯ..! ಮತ್ತೊಂದು ಕಡೆ ಈ ಅಜ್ಜಿಗೆ ಎಂತಹ ಹುಚ್ಚು ಎಂಬ ನಗು…
ಏಕೆಂದರೆ ತೇಜಸ್ವಿಯವರು ನಿಧನರಾಗಿಯೆ ಸರಿಸುಮಾರು ಎಂಟರಿಂದ ಹತ್ತು ತಿಂಗಳಾಗುತ್ತಿತ್ತು. ಅವರ ಪರಿಸರದ ಕಥೆ ಬರೆದಾಗಲೇ ಮಾರನು ಹಣ್ಣು ಮುದುಕನೆಂದರೆ ಅವನು ಇನ್ನು ಬದುಕಿರಲಿ ಸಾಧ್ಯವೇ.? ಆದರೆ ಈ ಆಲೋಚನೆ ಏಕೆ ಕೆಂಪಮ್ಮಜಿಯ ತಲೆಯಲ್ಲಿ ಹೊಳೆಯಲಿಲ್ಲ.? ನಮ್ಮ ಸಾಹಿತ್ಯಕ್ಕೆ ಇರುವ ಅನಂತ ಚೈತನ್ಯವೇ ಇದು ಅಲ್ಲವಾ? ಅಲ್ಲಿ ತೇಜಸ್ವಿಯವರ ಮಾರ, ಸಣ್ಣ ಯಾರು ಇಲ್ಲದಿದ್ದರೂ ಅವರ ಮನಸ್ಸುಗಳು ಮಾತ್ರ ಆ ಮಣ್ಣಿನ ಕಣದಲ್ಲು ಜೀವಂತವಾಗಿತ್ತು. ಅಜ್ಜಿ ಕೆಲವು ದಿನ ಅಲ್ಲೆ ಕಾಲ ಕಳೆದು ಹಿಂದಿರುಗಿದಳು. ಸರಿಸುಮಾರು ಒಂದ ವರ್ಷದ ನಂತರ 81 ವಯಸ್ಸಿನ ಅಜ್ಜಿ ನಡುಗುತ್ತಿರುವ ತನ್ನ ಕೈಗಳಿಂದ ತನ್ನ ಅಭಿಮಾನಿಗಳಿಗಾಗಿ ಆಟೋಗ್ರಾಫ್ನನ್ನು ಹಾಕುತ್ತಿರುವ ದೃಶ್ಯವನ್ನು ನೋಡುವುದೇ ಒಂದು ದೊಡ್ಡ ವೈಭವವಾಗಿತ್ತು.
ಶಿಲ್ಪ. ಬಿ
ಪ್ರಥಮ ಪಿ.ಯು.ಸಿ.
ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜು